Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಕಾರ್ಮಿಕರ ಪ್ರಾಣ ಇಷ್ಟೊಂದು ಅಗ್ಗವೇ?

ಕಾರ್ಮಿಕರ ಪ್ರಾಣ ಇಷ್ಟೊಂದು ಅಗ್ಗವೇ?

ವಾರ್ತಾಭಾರತಿವಾರ್ತಾಭಾರತಿ14 July 2025 7:28 AM IST
share
ಕಾರ್ಮಿಕರ ಪ್ರಾಣ ಇಷ್ಟೊಂದು ಅಗ್ಗವೇ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಮಂಗಳೂರಿನ ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (ಎಂಆರ್ ಪಿಎಲ್) ಮತ್ತೆ ಸುದ್ದಿಯಲ್ಲಿದೆ. ಇಲ್ಲಿನ ಘಟಕದಲ್ಲಿ ಅಪಾಯಕಾರಿ ಗ್ಯಾಸ್ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ. ಎಂಆರ್ ಪಿಎಲ್‌ನ ಆಯಿಲ್ ಮೂವ್‌ಮೆಂಟ್ ಏರಿಯಾದ ಟ್ಯಾಂಕ್‌ನಲ್ಲಿ ತೊಂದರೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪರಿಶೀಲಿಸುವ ಸಲುವಾಗಿ ಕಾರ್ಮಿಕರು ಟ್ಯಾಂಕ್‌ಗೆ ಹತ್ತಿದ್ದಾರೆ. ಆ ಸಂದರ್ಭ ಅಲ್ಲಿ ಸೂಕ್ತ ಆಮ್ಲಜನಕದ ಕೊರತೆಯಿಂದಾಗಿ ಉಸಿರು ಕಟ್ಟಿ ಮೃತಪಟ್ಟಿದ್ದಾರೆ. ಕಾರ್ಮಿಕರು ಅಗತ್ಯ ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಳ್ಳದ ಕಾರಣ ಈ ಅವಘಡ ಸಂಭವಿಸಿದೆ ಎಂದು ಎಂಆರ್‌ಪಿಎಲ್ ಅಧಿಕಾರಿಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಅಗತ್ಯ ಸುರಕ್ಷತಾ ಸಾಧನಗಳನ್ನು ಅಳವಡಿಸಿಕೊಳ್ಳದ ಕಾರಣ ಎನ್ನುವುದಕ್ಕಿಂತ, ಸಂಸ್ಥೆ ಕಾರ್ಮಿಕರಿಗೆ ಸಾಧನಗಳನ್ನು ಒದಗಿಸದ ಕಾರಣ ಎನ್ನುವುದು ಹೆಚ್ಚು ಸೂಕ್ತ. ಯಾವುದೇ ಸುರಕ್ಷತಾ ಸಾಧನಗಳು ಇಲ್ಲದೆಯೇ ಅವರನ್ನು ಅಂತಹ ಕೆಲಸಕ್ಕೆ ಇಳಿಸಿರುವುದು ತಪ್ಪಲ್ಲವೆ? ಯಾಕೆಂದರೆ ಎಂಆರ್‌ಪಿಎಲ್‌ ನಲ್ಲಿ ಇಂತಹ ದುರಂತಗಳು ನಡೆಯುತ್ತಿರುವುದು ಇದೇ ಮೊದಲೇನು ಅಲ್ಲ. ಈ ಹಿಂದೆ ಇದೇ ಎಂಆ‌ರ್ ಪಿಎಲ್‌ ನಲ್ಲಿ ಚಿಮಿಣಿಯೊಳಗೆ ಇಳಿದ ಕಾರ್ಮಿಕ ಉಸಿರುಗಟ್ಟಿ ಮೃತಪಟ್ಟಿದ್ದ. ಇಲ್ಲಿಯೂ ಸುರಕ್ಷತಾ ಸಾಧನಗಳ ಬಳಕೆಯ ನಿರ್ಲಕ್ಷ್ಯ ಎದ್ದು ಕಂಡಿತ್ತು. ಅಂದು ಮೃತಪಟ್ಟ ಕಾರ್ಮಿಕ ಮಧ್ಯ ಪ್ರದೇಶದವನಾಗಿದ್ದರೆ, ಈ ಬಾರಿ ಮೃತಪಟ್ಟವರು ಉತ್ತರ ಪ್ರದೇಶಕ್ಕೆ ಸೇರಿದ ವಲಸೆ ಕಾರ್ಮಿಕರು. ಅತ್ಯಂತ ಕನಿಷ್ಠ ವೇತನ ಮತ್ತು ಸೌಲಭ್ಯಗಳ ಜೊತೆಗೆ ದುಡಿಯುತ್ತಿರುವ ಈ ಕಾರ್ಮಿಕರು ಎಂಆರ್‌ಪಿಎಲ್‌ ನ ಅಧಿಕಾರಿಗಳ ಬೇಜವಾಬ್ದಾರಿಗೆ ಬಲಿಯಾಗಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

2022ರಲ್ಲಿ ಮಂಗಳೂರಿನ ಮೀನು ಸಂಸ್ಕರಣಾ ಘಟಕವೊಂದರ ಬೃಹತ್ ಟ್ಯಾಂಕ್ ಒಂದನ್ನು ಶುಚಿಗೊಳಿಸಲು ಇಳಿದ ಐವರು ಕಾರ್ಮಿಕರು ಉಸಿರು ಗಟ್ಟಿ ಮೃತಪಟ್ಟಿರುವುದು ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಮೃತಪಟ್ಟ ಐವರು ವಲಸೆ ಕಾರ್ಮಿಕರು ಪಶ್ಚಿಮಬಂಗಾಳಕ್ಕೆ ಸೇರಿದವರು. ತನಿಖೆಯ ಹೆಸರಿನಲ್ಲಿ ಮೇಲ್ವಿಚಾರಕರನ್ನು ಬಂಧಿಸುವ ಪ್ರಹಸನ ನಡೆಯಿತು. ಆದರೆ ಕಾರ್ಮಿಕರಿಗೆ ಅರ್ಹ ಪರಿಹಾರ ಸಿಗಲೇ ಇಲ್ಲ. ಕಳೆದ ವರ್ಷ ಬೀದ‌ರ್ ಹುಮನಾಬಾದ್‌ ಶ್ರೀ ಪ್ರಸನ್ನಾ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾಗಿ ಇಬ್ಬರು ಮೃತಪಟ್ಟರು. ಹಾಗೆಯೇ ಎಂಟು ಮಂದಿ ಗಂಭೀರವಾಗಿ ಅಸ್ವಸ್ಥಗೊಂಡರು. ಮೃತಪಟ್ಟ ಕಾರ್ಮಿಕರಲ್ಲಿ ಒಬ್ಬ ಮಧ್ಯ ಪ್ರದೇಶದ ವಲಸೆ ಕಾರ್ಮಿಕನಾಗಿದ್ದ ಕಾರ್ಖಾನೆಯ ಮಾಲಕರು, ಅಧಿಕಾರಿಗಳ ಬೇಜವಾಬ್ದಾರಿಗೆ ಬಲಿಯಾಗುವ ಈ ಕಾರ್ಮಿಕರೆಲ್ಲ ಉತ್ತರ ಭಾರತದ ವಲಸೆ ಕಾರ್ಮಿಕರಾಗಿರುವುದು ಆಕಸ್ಮಿಕವಲ್ಲ. ಈ ಸಂಸ್ಥೆಗಳಲ್ಲಿ ಯಾವುದೇ ಸುರಕ್ಷತೆಯ ಕ್ರಮವನ್ನು ತೆಗೆದುಕೊಳ್ಳದೆ, ಅತ್ಯಂತ ಅಪಾಯಕಾರಿಯಾದ ಕೆಲಸಕ್ಕೆ ಈ ಉತ್ತರ ಭಾರತದ ಬಡ ವಲಸೆ ಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವುದು ಗುಟ್ಟಿನ ವಿಷಯವೇನೂ ಅಲ್ಲ. ಸ್ಥಳೀಯರು ಕಡಿಮೆ ವೇತನಕ್ಕೆ ಇಂತಹ ಅಪಾಯಕಾರಿ ಕೆಲಸಗಳನ್ನು ಮಾಡಲು ಸಿದ್ಧವಿಲ್ಲದಿರುವುದರಿಂದಲೇ, ಉತ್ತರ ಭಾರತದ ಕಾರ್ಮಿಕರನ್ನು ಬಳಸಿಕೊಳ್ಳುತ್ತಾರೆ. ಪರವೂರಿನವರಾಗಿರುವುದರಿಂದ ಇವರು ತಮ್ಮ ಮೇಲೆ ನಡೆಯುವ ಶೋಷಣೆಗಳನ್ನು ಪ್ರತಿಭಟಿಸುವಷ್ಟು ಸಂಘಟಿತರಾಗಿರುವುದಿಲ್ಲ. ಮಾತ್ರವಲ್ಲ ಮಂಗಳೂರಿನಂತಹ ನಗರಗಳಲ್ಲಿ ಇವರು ಜನಾಂಗೀಯ ತಾರತಮ್ಯಗಳನ್ನು ಎದುರಿಸುತ್ತಲೇ ಬದುಕಬೇಕಾಗುತ್ತದೆ. ಕೆಲವೊಮ್ಮೆ ಇಂತಹ ಕಾರ್ಖಾನೆಗಳಲ್ಲಿ ಅವಘಡಗಳಿಗೆ ಕಾರ್ಮಿಕರು ಬಲಿಯಾದಾಗ ಅದನ್ನು ಮುಚ್ಚಿ ಹಾಕುವ ಪ್ರಯತ್ನವೂ ನಡೆಯುತ್ತವೆ. ಮೇಲ್ವಿಚಾರಕರ ಬೇಜವಾಬ್ದಾರಿಯಿಂದ ಸಂಭವಿಸಿದ ಸಾವುಗಳಿಗೆ ಅಪಘಾತವೆಂದು ಹಣೆಪಟ್ಟಿ ಕಟ್ಟಲಾಗುತ್ತದೆ. ಇದೀಗ ಎಂಆರ್‌ಪಿಎಲ್‌ ನಲ್ಲಿ ಸಂಭವಿಸಿದ ಸೋರಿಕೆಯಲ್ಲಿ ಸಂಸ್ಥೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.

ಈ ಪ್ರಕರಣ ಇದೀಗ ಇನ್ನೊಂದು ತಿರುವು ಪಡೆದುಕೊಂಡಿದೆ. ಮೃತರಲ್ಲಿ ಉತ್ತರ ಪ್ರದೇಶದ ವಲಸೆ ಕಾರ್ಮಿಕನೊಬ್ಬನಿದ್ದ. ಆತನ ಮೃತದೇಹವನ್ನು ಉತ್ತರ ಪ್ರದೇಶದಲ್ಲಿರುವ ನಿವಾಸಗಳಿಗೆ ತಲುಪಿಸಿದ ಎಂಆರ್‌ಪಿಎಲ್‌ನ ಆರು ಮಂದಿ ಸಿಬ್ಬಂದಿಯನ್ನು ಅಲ್ಲಿನ ಗ್ರಾಮಸ್ಥರು ದಿಗ್ಧಂಧನದಲ್ಲಿರಿಸಿದ್ದಾರೆ. ಅವರನ್ನು ಬಿಡುಗಡೆಗೊಳಿಸಬೇಕಾದರೆ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಮೃತ ಕಾರ್ಮಿಕರ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ದಿಗ್ಧಂಧನದಲ್ಲಿಟ್ಟುಕೊಂಡಿರುವ ಗ್ರಾಮಸ್ಥರು, ಮೃತ ಕಾರ್ಮಿಕನನ್ನು ಬದುಕಿಸಿ ಕೊಡಿ ಎಂದೇನೂ ಸಂಸ್ಥೆಯ ಬಳಿ ಕೇಳಿಲ್ಲ. ನ್ಯಾಯಯುತವಾದ ಕೆಲವು ಬೇಡಿಕೆಗಳನ್ನು ಅವರು ಮುಂದಿಟ್ಟಿದ್ದಾರೆ. ಕುಟುಂಬಕ್ಕೆ ಹೆಚ್ಚಿನ ಪರಿಹಾರವನ್ನು ನೀಡಬೇಕು ಮತ್ತು ಕುಟುಂಬದ ಒಬ್ಬ ಸದಸ್ಯನಿಗೆ ಉದ್ಯೋಗ ನೀಡಬೇಕು ಎನ್ನುವುದು ಅವರ ಬೇಡಿಕೆಯಾಗಿದೆ. ಕಾರ್ಮಿಕರು ಸಂಸ್ಥೆಯ ಬೇಜವಾಬ್ದಾರಿಗೆ ಪ್ರಾಣವನ್ನೇ ತೆತ್ತಿರುವಾಗ, ಸದಸ್ಯನನ್ನು ಕಳೆದುಕೊಂಡ ಕುಟುಂಬ ಇಷ್ಟನ್ನು ಅಪೇಕ್ಷಿಸುವುದು ತಪ್ಪಾಗುತ್ತದೆಯೆ? ಮೃತದೇಹವನ್ನು ಸಂಸ್ಥೆಯ ತಳಸ್ತರದ ಸಿಬ್ಬಂದಿಯ ಮೂಲಕ ಕಳುಹಿಸಿಕೊಟ್ಟಿರುವುದು ಇನ್ನೊಂದು ಬೇಜವಾಬ್ದಾರಿಯಾಗಿದೆ. ಪರಿಣಾಮವಾಗಿ ಆ ಸಿಬ್ಬಂದಿ ಉತ್ತರ ಪ್ರದೇಶದ ಗ್ರಾಮಸ್ಥರ ಒತ್ತೆಯಾಳಾಗಬೇಕಾಯಿತು. ಕೆಲಸ ಅಥವಾ ಪರಿಹಾರ ನೀಡುವ ಭರವಸೆ ನೀಡುವ ಯಾವ ಅಧಿಕಾರವೂ ತಮಗಿಲ್ಲ ಎಂದರೂ ಗ್ರಾಮಸ್ಥರು ಅವರನ್ನು ಬಿಟ್ಟಿಲ್ಲ. ಯಾಕೆಂದರೆ, ಅವರನ್ನು ಬಿಟ್ಟರೆ, ಬಳಿಕ ಸಂಸ್ಥೆಯ ಮಾಲಕರನ್ನು ಸಂಪರ್ಕಿಸುವುದಕ್ಕೆ ಸಾಧ್ಯವೂ ಇಲ್ಲ. ತಕ್ಷಣ ಸ್ಥಳಕ್ಕೆ ತೆರಳಿ ಗ್ರಾಮಸ್ಥರಿಗೆ ಭರವಸೆಯನ್ನು ನೀಡಿ, ಪರಿಹಾರವನ್ನು ವಿತರಿಸಿ ಸಿಬ್ಬಂದಿಯ ಬಿಡುಗಡೆಗೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕಾಗಿದೆ. ಮೃತ ಕಾರ್ಮಿಕರ ಕುಟುಂಬದ ನೋವು ಸಂಕಟಗಳನ್ನು ಸಂಸ್ಥೆ ಅರ್ಥ ಮಾಡಿಕೊಳ್ಳಬೇಕಾಗಿದೆ.

ಎಂಆರ್‌ಪಿಎಲ್ ಸ್ಥಳೀಯ ಪರಿಸರ ಮತ್ತು ಜನರ ಬದುಕಿಗೆ ಸಾಕಷ್ಟು ಹಾನಿಯನ್ನುಂಟು ಮಾಡಿರುವುದು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಲೇ ಬಂದಿದೆ. ಇಲ್ಲಿನ ನದಿ, ಕೆರೆ, ಗಾಳಿ, ರಾಸಾಯನಿಕದಿಂದ ಮಲಿನಗೊಂಡಿರುವುದರ ವಿರುದ್ದ ಸ್ಥಳೀಯರು ಸದಾ ಧ್ವನಿಯೆತ್ತುತ್ತಾ ಬಂದಿದ್ದಾರೆ. ಎಂಆರ್‌ಪಿಎಲ್‌ ನಲ್ಲಿ ಸ್ಥಳೀಯರಿಗೆ ಎಷ್ಟು ಉದ್ಯೋಗ ದೊರಕಿದೆ ಎನ್ನುವುದು ಇನ್ನೂ ಉತ್ತರವಿಲ್ಲದ ಪ್ರಶ್ನೆಯಾಗಿಯೇ ಉಳಿದಿದೆ. ಇದೇ ಸಂದರ್ಭದಲ್ಲಿ ವಲಸೆ ಕಾರ್ಮಿಕರ ಜೀವದ ಜೊತೆಗೂ ಸಂಸ್ಥೆಯ ಮೇಲ್ವಿಚಾರಕರು ಚೆಲ್ಲಾಟವಾಡುತ್ತಿರುವುದು ಕಳವಳಕಾರಿ ವಿಷಯವಾಗಿದೆ.

ಕೆಲ ದಿನಗಳ ಹಿಂದೆ ತೆಲಂಗಾಣದ ಔಷಧ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ ಸುಮಾರು 40 ಜನ ಕಾರ್ಮಿಕರು ಮೃತಪಟ್ಟರು. ಇವರಲ್ಲಿ ಬಹುತೇಕರು ತಳಸ್ತರದ ಸಮುದಾಯದ ಬಡವರು. ಪಟಾಕಿ ಕಾರ್ಖಾನೆಗಳಲ್ಲಿ ಸ್ಪೋಟಗಳು ಸಂಭವಿಸುತ್ತಲೇ ಇರುತ್ತವೆ. ಇದರ ಬಲಿಪಶುಗಳೂ ಬಡ ಕಾರ್ಮಿಕರೇ ಆಗಿದ್ದಾರೆ. ಉನ್ನತ ಸ್ಥಾನದಲ್ಲಿರುವ ಸಿಬ್ಬಂದಿ ಸುರಕ್ಷತಾ ಕ್ರಮದಲ್ಲಿ ಅನುಸರಿಸುವ ಬೇಜವಾಬ್ದಾರಿಗಳೇ ಈ ದುರಂತಗಳಿಗೆ ಕಾರಣ ಎನ್ನುವುದು ಬಹುತೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ಬಡ ಕಾರ್ಮಿಕರ ಬದುಕಿನ ಕುರಿತಂತೆ ಇವರಿಗಿರುವ ತಿರಸ್ಕಾರವೇ ಈ ಬೇಜವಾಬ್ದಾರಿತನಕ್ಕೆ ಕಾರಣವಾಗಿದೆ. ಆದುದರಿಂದ, ಸಂತ್ರಸ್ತರ ಕುಟುಂಬಕ್ಕೆ ಯೋಗ್ಯ ಪರಿಹಾರ ನೀಡುವುದು ಮಾತ್ರವಲ್ಲ, ಇಂತಹ ದುರಂತಕ್ಕೆ ಕಾರಣವಾಗುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಸುರಕ್ಷತಾ ಕ್ರಮದ ಬಗ್ಗೆ ನಿರ್ಲಕ್ಷ್ಯ ವಹಿಸಿ ದುರಂತಗಳಿಗೆ ಕಾರಣವಾಗುವ ಸಂಸ್ಥೆಗಳಿಗೆ ಬೀಗಜಡಿಯುವ ಕೆಲಸವಾಗಬೇಕು. ಆಗ ಮಾತ್ರ, ಇಂತಹ ಕಾರ್ಖಾನೆಗಳಲ್ಲಿ ಕಾರ್ಮಿಕರ ಜೀವ ಬೆಲೆ ಪಡೆದುಕೊಳ್ಳಬಹುದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X