ಮಾಹಿತಿ ಹಕ್ಕು ಕಾಯ್ದೆ ಸಮಾಧಿಗೆ ಮಸಲತ್ತು

ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ(ಎನ್‌ಡಿಎ) ಸರಕಾರ ದೇಶದ ಬಡವರ ಮೇಲೆ ಅಘೋಷಿತ ಸಮರವನ್ನು ಸಾರಿದೆ. ದುಡಿಯುವ ಬಡವರ ಅನುಕೂಲಕ್ಕಾಗಿ ರೂಪುಗೊಂಡ ಕಾನೂನುಗಳನ್ನು ಒಂದೊಂದಾಗಿ ಕಗ್ಗೊಲೆ ಮಾಡಿ ಸಮಾಧಿ ಮಾಡಲು ಮುಂದಾಗಿದೆ. ಅದರ ತೀರದ ದಾಹಕ್ಕೆ ಇತ್ತೀಚೆಗೆ ಬಲಿಯಾಗಿದ್ದು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ(ಮನರೇಗಾ). ಇದು ಕೇವಲ ಒಂದು ಕಲ್ಯಾಣ ಕಾರ್ಯಕ್ರಮ ಮಾತ್ರವಾಗಿರಲಿಲ್ಲ. ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ನ್ಯಾಯದ ಸಂಕೇತವಾಗಿ ಗಮನ ಸೆಳೆದಿತ್ತು.
ಮಹಾತ್ಮಾ ಗಾಂಧಿಯವರ ಹೆಸರನ್ನು ಇಟ್ಟಿರುವುದರಿಂದ ನೈತಿಕ ಮೌಲ್ಯದ ಆಯಾಮವೂ ಇದಕ್ಕೆ ದೊರಕಿತ್ತು. ಮನರೇಗಾ ಹೆಸರನ್ನು ಬದಲಿಸುವ ಮೂಲಕ ಅದರ ನಿಜವಾದ ಆಶಯಗಳನ್ನು ಮಣ್ಣುಗೂಡಿಸಲಾಯಿತು. ಈಗ ಇವರ ಹದ್ದಿನ ಕಣ್ಣು ಮಾಹಿತಿ ಹಕ್ಕು ಕಾಯ್ದೆಯ ಮೇಲೆ ಬಿದ್ದಿದೆ.
ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಇಪ್ಪತ್ತು ವರ್ಷಗಳಾದವು. ಈ ಕಾಯ್ದೆಯನ್ನು ಮರು ಪರಿಶೀಲನೆಗೆ ಒಳಪಡಿಸಬೇಕೆಂದು ಸಂಸತ್ತಿನಲ್ಲಿ ಗುರುವಾರ ಮಂಡಿಸಲಾಗಿರುವ ಆರ್ಥಿಕ ಸಮೀಕ್ಷೆ ಶಿಫಾರಸು ಮಾಡಿರುವುದರ ಹಿಂದಿನ ಉದ್ದೇಶವೇನು? ಗೌಪ್ಯ ವರದಿಗಳು ಹಾಗೂ ಕರಡು ಅಭಿಪ್ರಾಯಗಳನ್ನು ಬಹಿರಂಗಪಡಿಸಬಾರದು ಎಂದು ಸಮೀಕ್ಷೆಯಲ್ಲಿ ಯಾಕೆ ಹೇಳಲಾಗಿದೆ? ಎಂದು ತಿಳಿಯುವ ಹಕ್ಕು ಜನರಿಗೆ ಇದೆ. ಜನರು ಬಯಸುವ ಮಾಹಿತಿಯನ್ನು ನಿರಾಕರಿಸುವುದೇ ಇದರ ಉದ್ದೇಶವಾಗಿದೆಯೇ?
ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಕೈಗೊಂಡ ಉದಾರೀಕರಣದ ಪರವಾಗಿರುವ ಆರ್ಥಿಕ ಸುಧಾರಣಾ ಕಾರ್ಯಗಳ ಜೊತೆಗೇ ಜಾರಿಗೆ ತಂದ ಮನರೇಗಾ ಮತ್ತು ಮಾಹಿತಿ ಹಕ್ಕುಗಳ ಕಾಯ್ದೆಗಳು ದೇಶವ್ಯಾಪಿ ಜನರ ಮೆಚ್ಚುಗೆ ಗಳಿಸಿದ್ದವು. ಅದರಲ್ಲೂ ವಿಶೇಷವಾಗಿ ಜನರಿಗೆ ತಾವು ನೀಡಿದ ತೆರಿಗೆ ಹಣದಿಂದ ಕಾರ್ಯ ನಿರ್ವಹಿಸುವ ಸರಕಾರದ ಲೋಪ ದೋಷಗಳು ಹಾಗೂ ಆಡಳಿತಾಂಗದಲ್ಲಿನ ಭ್ರಷ್ಟಾಚಾರದ ಹಗರಣಗಳ ಬಗ್ಗೆ ತಿಳಿಯುವ ಹಕ್ಕನ್ನು ಈ ಕಾಯ್ದೆ ಖಾತರಿ ಪಡಿಸಿತ್ತು. ಇದರಿಂದಾಗಿಯೇ ಹಲವಾರು ಇಲಾಖೆಗಳ ಭ್ರಷ್ಟಾಚಾರದ ಹಗರಣಗಳು ಬಯಲಿಗೆ ಬರತೊಡಗಿದವು. ಅಭಿವೃದ್ಧಿಯ ಹೆಸರಿನಲ್ಲಿ ಸರಕಾರಗಳು ಕೈಗೊಳ್ಳುವ ಯೋಜನೆಗಳಲ್ಲಿನ ಅಕ್ರಮಗಳು ಬಹಿರಂಗವಾಗತೊಡಗಿದವು. ಇದು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿತ್ತು. ಹಾಗಾಗಿಯೇ ಈ ಕಾಯ್ದೆಯನ್ನು ದುರ್ಬಲಗೊಳಿಸುವ ಹುನ್ನಾರ ನಡೆಯಲಾರಂಭಿಸಿತು. 2014ರ ನಂತರ ಅದರಲ್ಲೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಈ ಕಾಯ್ದೆಯ ವಿರುದ್ಧ ಮಸಲತ್ತು ನಡೆಯುತ್ತಲೇ ಬಂತು. 2023ರಲ್ಲಿ ತಂದ ದತ್ತಾಂಶ ರಕ್ಷಣಾ ಮಸೂದೆ ಖಾಸಗಿತನ ರಕ್ಷಣೆಯ ಹೆಸರಿನಲ್ಲಿ ಇದನ್ನು ನಾಶ ಮಾಡುವ ಉದ್ದೇಶವನ್ನೇ ಹೊಂದಿತ್ತು.
ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಹೇಳಿದಂತೆ ಭ್ರಷ್ಟಾಚಾರ ಬಯಲಿಗೆಳೆಯಲು ಹಾಗೂ ಸತ್ಯಾನ್ವೇಷಣೆಗೆ ಹೊರಟವರನ್ನು ದಂಡನೆಗೆ ಗುರಿಪಡಿಸುವಂಥ ಭಯಾನಕ ವಾತಾವರಣವನ್ನು ಸಷ್ಟಿಸಲಾಗುತ್ತಿದೆ. ಕಳೆದ ಹನ್ನೊಂದು ವರ್ಷಗಳಿಂದ ಈ ವರೆಗೆ 100ಕ್ಕೂ ಹೆಚ್ಚು ಆರ್‌ಟಿಐ ಕಾರ್ಯಕರ್ತರ ಹತ್ಯೆಯಾಗಿದೆ. ದೇಶವ್ಯಾಪಿ ಸಾವಿರಾರು ಆರ್‌ಟಿಐ ಪ್ರಕರಣಗಳು ಬಾಕಿ ಉಳಿದಿವೆ. ಇಂಥ ಸನ್ನಿವೇಶದಲ್ಲಿ ಮಾಹಿತಿ ಹಕ್ಕು ಆಯುಕ್ತರ ಅಧಿಕಾರಾವಧಿ ಹಾಗೂ ವೇತನದ ಮೇಲೆ ನಿಯಂತ್ರಣವನ್ನು ಸಾಧಿಸಿ ತನಗೆ ವಿಧೇಯವಾಗಿರುವಂತೆ ಕೇಂದ್ರ ಸರಕಾರ ಕುತಂತ್ರ ನಡೆಸಿದೆಯೆಂದರೆ ತಪ್ಪಿಲ್ಲ.
ಕೇಂದ್ರ ಸರಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಮರು ಪರಿಶೀಲಿಸಲು ಹೊರಟಿರುವುದರ ಉದ್ದೇಶವೇನು? ಕಳೆದ ಕೆಲ ತಿಂಗಳಿಂದ ಮಾಹಿತಿ ಹಕ್ಕು ಆಯೋಗ ಮಾಹಿತಿ ಅಯುಕ್ತರಿಲ್ಲದೆ ಕಾರ್ಯ ನಿರ್ವಹಿಸುತ್ತಿರುವುದು ಏಕೆ? ಉದ್ದೇಶ ಪೂರ್ವಕವಾಗಿಯೇ ಈ ಹುದ್ದೆಯನ್ನು ಖಾಲಿ ಇಡಲಾಗಿದೆಯೇ? ಮಾಹಿತಿ ನೀಡುವುದನ್ನು ತಡೆ ಹಿಡಿಯಲು ಸಚಿವಾಲಯಕ್ಕೆ ವಿಶೇಷ ಅಧಿಕಾರವನ್ನು ನೀಡಬೇಕೆಂದು ಸಮೀಕ್ಷೆ ಸೂಚಿಸಿರುವ ಉದ್ದೇಶವೇನು? ಇದೆಲ್ಲಾ ಜನರಿಗೆ ಗೊತ್ತಾಗಬೇಕಾಗಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಯಾವುದನ್ನೂ ಮುಚ್ಚಿಡಬಾರದು. ಎಲ್ಲವೂ ಪಾರದರ್ಶಕವಾಗಿರಬೇಕು. ಹಾಗಾಗಿ ಜನರು ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಮಾಹಿತಿ ಕೇಳಿದರೆ ವ್ಯಕ್ತಿಯ ಖಾಸಗಿತನಕ್ಕೆ ಚ್ಯುತಿ ಎಂಬ ನೆಪವನ್ನು ಮುಂದೆ ಮಾಡಿಕೊಂಡು ಮಾಹಿತಿಯನ್ನು ನೀಡಲು ಸರಕಾರ ನಿರಾಕರಿಸುವುದು ಸರಿಯಲ್ಲ.
ಈಗ ಎಂಥ ಭ್ರಷ್ಟ ರಾಜಕಾರಣಿಯಾಗಲಿ, ಅಧಿಕಾರಿಯಾಗಲಿ ಈ ಮಾಹಿತಿ ಹಕ್ಕು ಕಾಯ್ದೆಗೆ ಹೆದರಿ ತೆಪ್ಪಗಿರುತ್ತಾರೆ. ಇದಿಲ್ಲವಾದರೆ ಭ್ರಷ್ಟರು ಅಟ್ಟಹಾಸದಿಂದ ಮೆರೆಯುತ್ತಾರೆ. ಸರಕಾರದ ಲೋಪ ದೋಷಗಳನ್ನು ಪ್ರಶ್ನೆ ಮಾಡುವವರನ್ನೆಲ್ಲ ನಗರ ನಕ್ಸಲರು ಎಂದು ದಮನ ಮಾಡಲು ಈಗಾಗಲೇ ಯತ್ನಿಸಲಾಗುತ್ತಿದೆ. ಇಂಥ ಸಂದರ್ಭದಲ್ಲಿ ಸರಕಾರದಲ್ಲಿರುವ ಲೋಪ ದೋಷಗಳ ಬಗ್ಗೆ ತಿಳಿದುಕೊಳ್ಳುವ ಜನರ ಬಳಿ ಇರುವ ಏಕೈಕ ಅಸ್ತ್ರವನ್ನು ಕಿತ್ತುಕೊಂಡರೆ ಹೇಗೆ?
ಮಾಹಿತಿ ಹಕ್ಕು ಕಾರ್ಯಕರ್ತರು ಈ ಕಾಯ್ದೆಯನ್ನು ದುರುಪಯೋಗ ಮಾಡುತ್ತಾರೆ, ಬ್ಲ್ಯಾಕ್ ಮೇಲ್ ಮಾಡುತ್ತಾರೆ ಎಂಬ ಆರೋಪಗಳು ಇಲ್ಲವೆಂದಲ್ಲ.ಅಂಥವರನ್ನು ಗುರುತಿಸಿ ಕಾನೂನು ಕ್ರಮ ಕೈಗೊಳ್ಳಲು ಯಾರ ಆಕ್ಷೇಪವೂ ಇಲ್ಲ. ವಾಸ್ತವವಾಗಿ ಇದು ಜಾರಿಗೆ ಬಂದ ಕಳೆದ ಇಪ್ಪತ್ತು ವರ್ಷಗಳಲ್ಲಿ ಇದರಿಂದಾಗಿ ಯಾವುದೇ ವೈಯಕ್ತಿಕ ಇಲ್ಲವೇ ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ಉಂಟಾದ ಉದಾಹರಣೆಗಳಿಲ್ಲ. ಈ ಕಾಯ್ದೆಯನ್ನು ಉಪಯೋಗಿಸಿಕೊಂಡು ಯಾರೂ ಸರಕಾರದ ಆಂತರಿಕ ಭದ್ರತೆಗಾಗಲಿ ಇಲ್ಲವೇ ಯಾರದೇ ವೈಯಕ್ತಿಕ ಹಿತಾಸಕ್ತಿಗಾಗಲಿ ಹಾನಿ ಮಾಡಿದ ದೂರುಗಳಿಲ್ಲ. ಹೀಗಿರುವಾಗ ಸರಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ಹೊಸಕಿ ಹಾಕಲು ಹೊರಟಿರುವ ಉದ್ದೇಶವೇನು?
ಸಾಂವಿಧಾನಿಕ ಸಂಸ್ಥೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಲು ಹೊರಟಿರುವ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರಕಾರ ಈಗಾಗಲೇ ಚುನಾವಣಾ ಆಯೋಗವನ್ನು ಬಹುತೇಕ ಕೈಗೊಂಬೆಯನ್ನಾಗಿ ಮಾಡಿಕೊಂಡಿದೆ.ಸಂಸತ್ತಿನಲ್ಲಿ ಚರ್ಚೆಗಳಿಲ್ಲದೆ ವಿಧೇಯಕಗಳು ಅಂಗೀಕಾರವಾಗುತ್ತಿವೆ. ರಾಜಕೀಯ ಮತ್ತು ಸೈದ್ಧಾಂತಿಕ ವಿರೋಧಿಗಳನ್ನು ಹತ್ತಿಕ್ಕಲು ಕೇಂದ್ರೀಯ ತನಿಖಾ ಸಂಸ್ಥೆಗಳು ಸರಕಾರದ ಅಸ್ತ್ರಗಳಾಗುತ್ತಿವೆ. ನ್ಯಾಯಾಲಯಗಳಿಂದಲೂ ವಿಚಿತ್ರ ತೀರ್ಪುಗಳು ಬರುತ್ತಿವೆ. ಇಂಥ ಸನ್ನಿವೇಶದಲ್ಲಿ ಮಾಹಿತಿ ಹಕ್ಕು ಕಾಯ್ದೆಯಂಥ ಸಾರ್ವಜನಿಕರ ಅಸ್ತ್ರವನ್ನು ಪ್ರಭುತ್ವ ಇಷ್ಟಪಡುವುದಿಲ್ಲ. ಸಂಸತ್ತಿನಲ್ಲಿ ತನಗಿರುವ ಬಹುಮತವನ್ನು ಬಳಸಿಕೊಂಡು ಇದನ್ನೂ ಮುಗಿಸಿದರೆ ಅಚ್ಚರಿ ಪಡಬೇಕಾಗಿಲ್ಲ. ಪ್ರತಿರೋಧ ಒಡ್ಡುವುದೊಂದೇ ಜನಸಾಮಾನ್ಯರಿಗೆ ಈಗ ಉಳಿದಿರುವ ಏಕೈಕ ದಾರಿಯಾಗಿದೆ.







