ಅನಿರೀಕ್ಷಿತ ಫಲಿತಾಂಶದ ಹಿನ್ನೆಲೆ

Photo: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಅನಿರೀಕ್ಷಿತ ಮತ್ತು ಅಚ್ಚರಿದಾಯಕವಾಗಿದೆ. ದಕ್ಷಿಣದ ಕೇರಳದಲ್ಲಿ ಎಡರಂಗ ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗ(ಯುಡಿಎಫ್) ನಡುವೆ ನೇರಸ್ಪರ್ಧೆ ಇತ್ತು. ಯುಡಿಎಫ್ ಗೆಲುವು ಸಾಧಿಸಿದೆ. ಎಡರಂಗ ಪರಾಭವಗೊಂಡಿದೆ. ಬಿಜೆಪಿ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ತಮಿಳುನಾಡಿನಲ್ಲಿ ಅನಿರೀಕ್ಷಿತವಾಗಿ ಟಿವಿಕೆ ಜಯಶಾಲಿಯಾಗಿದೆ. ಪುದುಚೇರಿಯಲ್ಲಿ ಬಿಜೆಪಿ ಗೆದ್ದಿದೆ. ಈಶಾನ್ಯ ಭಾರತದಲ್ಲಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಬಿಜೆಪಿ ಕೈಗೆ ಹೋಗಿವೆ.
ಪಶ್ಚಿಮ ಬಂಗಾಳದಲ್ಲಿ 1977ರಿಂದ ಮೂವತ್ತು ವರ್ಷಗಳ ಕಾಲ ಕಮ್ಯುನಿಸ್ಟರ ಆಡಳಿತವಿತ್ತು. ಅವರನ್ನು ಸೋಲಿಸಿ ಮಮತಾ ಬ್ಯಾನರ್ಜಿಯವರ ತೃಣಮೂಲ ಕಾಂಗ್ರೆಸ್ ಅಧಿಕಾರಕ್ಕೆ ಬಂತು. ಈ ಸಲ ಮಮತಾ ಬ್ಯಾನರ್ಜಿಯವರನ್ನು ಸೋಲಿಸಿ ಬಿಜೆಪಿ ರಾಜ್ಯದ ಅಧಿಕಾರ ಸೂತ್ರ ಹಿಡಿಯಲು ಸಜ್ಜಾಗಿದೆ. ಸಹಬಾಳ್ವೆಗೆ ಹೆಸರಾದ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯಂಥ ಕೋಮುವಾದಿ ಪಕ್ಷಕ್ಕೆ ಈವರೆಗೆ ಅವಕಾಶ ಇರಲಿಲ್ಲ. ಆದರೆ ಕಮ್ಯುನಿಸ್ಟರ ನೇತೃತ್ವದ ಎಡಪಂಥೀಯ ರಂಗವನ್ನು ಹಿಮ್ಮೆಟ್ಟಿಸಲು 90ರ ದಶಕದಲ್ಲಿ ಬಿಜೆಪಿಯ ಜೊತೆಗೆ ರಾಜಿ ಮಾಡಿಕೊಂಡ ಮಮತಾ ಬ್ಯಾನರ್ಜಿಯವರು ಬಂಗಾಳದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರ ನೆಲೆಯೂರಲು ಅವಕಾಶ ಮಾಡಿಕೊಟ್ಟರು. ಕೇಂದ್ರದ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರದಲ್ಲಿ ರೈಲ್ವೆ ಮಂತ್ರಿಯಾದರು. ಈಗ ಅವರ ತಪ್ಪು ಅವರಿಗೆ ತಿರುಗುಬಾಣವಾಗಿದೆ. ಒಂದು ಕಾಲದಲ್ಲಿ ಕಮ್ಯುನಿಸ್ಟರ ಕೋಟೆ ಯಾಗಿದ್ದ ಪಶ್ಚಿಮ ಬಂಗಾಳ ಕೋಮುವಾದಿಗಳ ಕೈಗೆ ಹೋಗಲು ಮಮತಾ ಬ್ಯಾನರ್ಜಿಯವರು ಕಾರಣರೆಂದರೆ ತಪ್ಪಿಲ್ಲ. ಇದಿಷ್ಟೇ ಅಲ್ಲ, ಕಮ್ಯುನಿಸ್ಟರ ಸಂಘಟನಾ ದೌರ್ಬಲ್ಯವೂ ಕಾರಣವಾಗಿದೆಯೆಂದರೆ ಅತಿಶಯೋಕ್ತಿಯಲ್ಲ.
ಪಶ್ಚಿಮ ಬಂಗಾಳ ಸೇರಿದಂತೆ ಐದು ರಾಜ್ಯಗಳ ವಿಧಾನ ಸಭಾ ಫಲಿತಾಂಶ ಅನಿರೀಕ್ಷಿತ ಮತ್ತು ಅಚ್ಚರಿದಾಯಕವಾಗಿದೆ. ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ದ್ರಾವಿಡ ಮುನ್ನೇತ್ರ ಕಳಗಂ ಪರಾಭವ ಮತ್ತು ಚಿತ್ರನಟ ವಿಜಯ್ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಗೆಲುವು ಎರಡೂ ಅನಿರೀಕ್ಷಿತ. ತಮಿಳುನಾಡಿನ ರಾಜಕಾರಣದಲ್ಲಿ ಚಲನಚಿತ್ರ ರಂಗದ ಪ್ರಭಾವಕ್ಕೆ ಏಳು ದಶಕಗಳ ಇತಿಹಾಸವಿದೆ. ಎಂ.ಜಿ.ರಾಮಚಂದ್ರನ್, ಕರುಣಾನಿಧಿ ಮತ್ತು ಜಯಲಲಿತಾ ಅವರು ಕೂಡ ಚಿತ್ರರಂಗದ ಹಿನ್ನೆಲೆಯಿಂದಲೇ ಬಂದವರು.ಈಗ ಇದೇ ದಾರಿಯಲ್ಲಿ ನಟ ವಿಜಯ್ ಕೂಡ ಗೆಲುವು ಸಾಧಿಸಿದ್ದಾರೆ.ವಿಜಯ್ ಅವರ ಗೆಲುವಿಗೆ ಅವರ ಸಿನೆಮಾಗಳಲ್ಲಿನ ಸಾಮಾಜಿಕ ಹೋರಾಟದ ಪಾತ್ರಗಳು ಮತ್ತು ಯುವ ಮತದಾರರ ಒಲವು ಮುಖ್ಯ ಕಾರಣವಾಗಿದೆ. ಯುವ ಮತದಾರರು ಹೊಸ ನಾಯಕತ್ವವನ್ನು ಬಯಸಿದಂತೆ ಕಾಣುತ್ತದೆ. ಹೇಗಾದರೂ ಮಾಡಿ ತಮಿಳುನಾಡಿನಲ್ಲಿ ನೆಲೆಯೂರಬೇಕೆಂಬ ಬಿಜೆಪಿ ಬಯಕೆ ಈಡೇರಿಲ್ಲ. ಸ್ವತಃ ಪ್ರಧಾನಿ ನರೇಂದ್ರ ಮೋದಿಯವರು ತಮಿಳುನಾಡಿನ ಚುನಾವಣಾ ಪ್ರಚಾರಕ್ಕೆ ಹಲವಾರು ಸಲ ಬಂದು ಹೋದರು. ತಮಿಳು ಭಾಷೆಯಲ್ಲಿ ನಮಸ್ಕಾರ ಹೇಳಿ ಭಾಷಣ ಮಾಡಿದರು. ತಮಿಳುನಾಡಿನ ಅಸ್ಮಿತೆಯ ವಾರಸುದಾರರಾಗಲು ಯತ್ನಿಸಿದರು. ಆದರೂ ಕೇರಳದಂತೆ ತಮಿಳುನಾಡಿನ ಮತದಾರರು ಬಿಜೆಪಿಯನ್ನು ತಿರಸ್ಕರಿಸಿದರು.
ಕೇರಳದ ವಿಧಾನಸಭಾ ಚುನಾವಣಾ ಫಲಿತಾಂಶದ ಬಗ್ಗೆ ಅಚ್ಚರಿಪಡಬೇಕಾದುದೇನೂ ಇಲ್ಲ. ಅಲ್ಲಿ ಪ್ರತೀ ಐದು ವರ್ಷಕ್ಕೆ ಮತದಾರರು ಸರಕಾರವನ್ನು ಬದಲಿಸುತ್ತಾರೆ. ಒಂದು ಸಲ ಕಮ್ಯುನಿಸ್ಟರ ನೇತೃತ್ವದ ಎಡರಂಗ (ಎಲ್ಡಿಎಫ್) ಅಧಿಕಾರಕ್ಕೆ ಬಂದರೆ ಇನ್ನೊಂದು ಬಾರಿ ಕಾಂಗ್ರೆಸ್ ನೇತೃತ್ವದ ಸಂಯುಕ್ತ ರಂಗ (ಯುಡಿಎಫ್) ಅಧಿಕಾರಕ್ಕೆ ಬರುತ್ತದೆ. ಆದರೆ ಕಳೆದ ಹತ್ತು ವರ್ಷಗಳಿಂದ ಕೇರಳದಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗವೇ ಅಧಿಕಾರದಲ್ಲಿ ಇತ್ತು. ಕೇರಳದಲ್ಲಿ ನೆಲೆಯೂರಬೇಕೆಂದು ಸಂಘ ಪರಿವಾರ ಕಳೆದ ಎಂಟು ದಶಕಗಳಿಂದ ಯತ್ನಿಸುತ್ತಲೇ ಇದೆ. ಅನೇಕ ಕಡೆ ಆರೆಸ್ಸೆಸ್ ಶಾಖೆಗಳು ಇವೆ. ಆದರೆ ಚುನಾವಣೆಯಲ್ಲಿ ಗೆಲುವು ಸಾಧಿಸಲು ಅದಕ್ಕೆ ಸಾಧ್ಯವಾಗುತ್ತಿಲ್ಲ. ಕಾರಣ ಕೇರಳದ ಜನ ಸುಶಿಕ್ಷಿತರು ಎಂಬುದು ಗಮನಾರ್ಹ ಅಂಶವಾಗಿದೆ.
ಅಸ್ಸಾಮಿನಲ್ಲಿ ಈ ಬಾರಿ ಕಾಂಗ್ರೆಸ್ ಜಯಶಾಲಿಯಾಗುವುದೆಂದು ಆ ಪಕ್ಷದ ನಾಯಕರು ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಅಲ್ಲಿ ಮತ್ತೆ ಬಿಜೆಪಿ ಗೆಲುವು ಸಾಧಿಸಿದೆ. ಅಲ್ಲಿ ಗಡಿಯಾಚೆಯಿಂದ ವಲಸೆ ಬರುವವರ ಸಮಸ್ಯೆಯನ್ನು ಬಳಸಿಕೊಂಡ ಬಿಜೆಪಿ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಜನಾಂಗ ದ್ವೇಷದ ವಿಷ ಬೀಜವನ್ನು ಬಿತ್ತುತ್ತಲೇ ಬಂತು. ಅಲ್ಲಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರಚೋದನಕಾರಿ ಮಾತುಗಳಿಗೆ ಕುಖ್ಯಾತಿಗಳಿಸಿದವರು. ಕೋಮು ಧ್ರುವೀಕರಣದಿಂದ ಬಿಜೆಪಿ ಅಲ್ಲಿ ಮತ್ತೆ ಅಧಿಕಾರಕ್ಕೆ ಬಂದಿದೆ.
ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ಚುನಾವಣಾ ಆಯೋಗ ಪರೋಕ್ಷವಾಗಿ ನೆರವಾಗಿದೆ ಎಂಬ ಆರೋಪವನ್ನು ಅಲ್ಲಗಳೆಯಲಾಗುವುದಿಲ್ಲ. ಮತದಾರರ ಪಟ್ಟಿಯ ಪರಿಷ್ಕರಣೆಯ (ಎಸ್ಐಆರ್) ಹೆಸರಿನಲ್ಲಿ ಆ ಪಟ್ಟಿಯಿಂದ ಬಹುದೊಡ್ಡ ಸಂಖ್ಯೆಯ ನಿಜವಾದ ಮತದಾರರನ್ನು ತೆಗೆದು ಹಾಕಲಾಯಿತು. ಇದರಿಂದಾಗಿ ಅಲ್ಲಿನ ಚುನಾವಣಾ ಪ್ರಕ್ರಿಯೆಯ ಮೇಲೆ ಸಂಶಯದ ಛಾಯೆ ಬಿದ್ದಿರುವುದನ್ನು ಕಡೆಗಣಿಸಲಾಗುವುದಿಲ್ಲ. ಪಶ್ಚಿಮ ಬಂಗಾಳ ಶೇ. 15ಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗಿದೆ.
ಇದಷ್ಟೇ ಅಲ್ಲ ಪಶ್ಚಿಮ ಬಂಗಾಳದ ಇಡೀ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾ ಆಯೋಗ ತನ್ನ ವಶಕ್ಕೆ ತೆಗೆದುಕೊಂಡಿತ್ತು. ತನಗೆ ಬೇಕಾದಂತೆ ಅಧಿಕಾರಿಗಳ ಬದಲಾವಣೆ ಮಾಡಿತು. ಪ್ರಧಾನಿ ನರೇಂದ್ರ ಮೋದಿಯವರು ಸೇರಿದಂತೆ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವ ಪಕ್ಷದ ನಾಯಕರ ವಿರುದ್ಧದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ಬಂದ ದೂರುಗಳನ್ನು ನಿರ್ಲಕ್ಷಿಸಿತು. ಪಶ್ಚಿಮ ಬಂಗಾಳ ಚುನಾವಣೆಗೆ ಸಂಬಂಧಿಸಿದಂತೆ ಸಾಂವಿಧಾನಿಕ ಸಂಸ್ಥೆಗಳು ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ವಿಫಲಗೊಂಡವು. ಇವೆಲ್ಲ ಚುನಾವಣೆಯ ಮೇಲೆ ಪ್ರಭಾವ ಬೀರಿದವು ಎಂಬ ಟೀಕೆಯಲ್ಲಿ ಹುರುಳಿಲ್ಲದಿಲ್ಲ.
ಇನ್ನು ಕರ್ನಾಟಕದ ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ನಿರೀಕ್ಷೆಯಂತೆ ಬಂದಿದೆ. ಎರಡೂ ಕಡೆ ಬಿಜೆಪಿ ಪರಾಭವಗೊಂಡಿದೆ. ಕಾಂಗ್ರೆಸ್ ಗೆಲುವು ಸಾಧಿಸಿದೆ.






