ವ್ಯಾಪಾರಿಗಳಿಗೆ ನಿಜಕ್ಕೂ ನಷ್ಟವಾಗಿರುವುದು ಯಾರಿಂದ?

ಸಾಂದರ್ಭಿಕ ಚಿತ್ರ (AI)
ವಿವಿಧ ವ್ಯಾಪಾರಿ ಸಂಘಟನೆಗಳ ಆಕ್ಷೇಪಗಳನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್, ನವೆಂಬರ್ 18ರಂದು ವಿವಿಧ ರಾಜಕೀಯ ಪಕ್ಷಗಳಿಗೆ ನೋಟಿಸ್ ನೀಡಿದೆ. ಪ್ರತಿಭಟನೆಗಳಿಗಳಿಂದ ತಮ್ಮ ವ್ಯಾಪಾರಕ್ಕೆ ಅಡ್ಡಿಯಾಗುತ್ತಿದೆ. ತಮಗೆ ಕೋಟ್ಯಂತರ ನಷ್ಟವಾಗುತ್ತದೆ ಎನ್ನುವುದು ವ್ಯಾಪಾರಿಗಳ ಆಕ್ಷೇಪ. ದಿಲ್ಲಿಯ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ಮೈತ್ರಿಕೂಟದ ನೇತೃತ್ವದಲ್ಲಿ ಕೇಂದ್ರ ಚುನಾವಣಾ ಆಯೋಗದ ಮತದಾರರ ವಿಶೇಷ ಸಮಗ್ರ (ಎಸ್ಐಆರ್) ಪರಿಷ್ಕರಣೆಯ ವಿರುದ್ಧ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಿಂದಾಗಿ ಅಲ್ಲಿನ ವ್ಯಾಪಾರಸ್ಥರಿಗೆ ಮುಂಬರುವ ಹಬ್ಬಗಳ ಹಿನ್ನೆಲೆಯಲ್ಲಿ ಆಗಬಹುದಾದ ವ್ಯವಹಾರಕ್ಕೆ ಅಡ್ಡಿಯುಂಟಾಗಲಿದೆ; ಇದರಿಂದಾಗಿ ಸುಮಾರು 10,000ದಿಂದ 12,000 ಕೋಟಿ ರೂಪಾಯಿಗಳ ನಷ್ಟವಾಗಲಿದೆ ಎಂಬ ಕಾರಣ ನೀಡಿ ವ್ಯಾಪಾರಿಗಳ ಸಂಘಗಳು ಸಮಾವೇಶವನ್ನು ಹಬ್ಬಗಳ ಬಳಿಕ ಮಾಡಬೇಕೆಂದು ವಿರೋಧಪಕ್ಷಗಳ ನಾಯಕರಿಗೆ ಕೂಡ ಮನವಿ ಸಲ್ಲಿಸಿದ್ದವು.
ಅಭಿಪ್ರಾಯ ಸ್ವಾತಂತ್ರ್ಯವು ಪ್ರಜಾತಂತ್ರದ ಅವಿಭಾಜ್ಯ ಅಂಗ, ಅದರ ಸ್ವರೂಪ ವಿಭಿನ್ನವಾಗಿರಬಹುದು. ಚುನಾಯಿತ ಸಂಸತ್ತಿನಲ್ಲಿ ಆಗುವ ಚರ್ಚೆಗಳು, ಕೇಳುವ ಪ್ರಶ್ನೆಗಳು, ವಿರೋಧ ಪಕ್ಷದ ಸದಸ್ಯರು ಗಮನ ಸೆಳೆಯುವ ಸೂಚನೆಯ ಮೂಲಕ ಪ್ರಮುಖ ಬೆಳವಣಿಗೆಗಳ ಬಗ್ಗೆ ಸರಕಾರದ ಪ್ರತಿಕ್ರಿಯೆಗೆ ಮಾಡುವ ಒತ್ತಾಯ-ಮುಂತಾದವುಗಳು ಒಂದು ಪ್ರಮುಖ ಮಾರ್ಗ. ಆ ಮೂಲಕ ಜನರ ಸಮಸ್ಯೆಗಳನ್ನು ಮತ್ತು ಆಳುವವರ ವೈಫಲ್ಯಗಳನ್ನು ದೇಶದ ಗಮನಕ್ಕೆ ತಂದು ಸರಕಾರವನ್ನು ಉತ್ತರದಾಯಿಯನ್ನಾಗಿ ಮಾಡಲು ಸಾಧ್ಯವಿದೆ. ಈ ಪ್ರಕ್ರಿಯೆಯು ಪ್ರಜಾಸತ್ತೆಯನ್ನು ಮತ್ತಷ್ಟು ಭದ್ರಗೊಳಿಸುತ್ತದೆ.
ಸಂಸತ್ತಿನಲ್ಲಿ ಚರ್ಚೆಗೆ ಅವಕಾಶವಿಲ್ಲದಾಗ ಬೀದಿಗೆ ಇಳಿದು ಪ್ರತಿಭಟನೆಯನ್ನು ನಡೆಸಿ ಸರಕಾರದ ಗಮನವನ್ನು ಸಮಸ್ಯೆಗಳತ್ತ ಸೆಳೆಯಬೇಕಾಗುತ್ತದೆ. ರಸ್ತೆಗಳಲ್ಲಿ ಮೆರವಣಿಗೆಗಳು, ಮೈದಾನಗಳಲ್ಲಿ ಸಮಾವೇಶಗಳು, ಉಪವಾಸ ಸತ್ಯಾಗ್ರಹಗಳು-ಇವುಗಳೆಲ್ಲ ಜನಾಭಿಪ್ರಾಯವನ್ನು ರೂಪಿಸುವ ಮತ್ತು ಹೊರತರುವ ಪರ್ಯಾಯವಾದ ದಾರಿಗಳು. ಈ ತರದ ಪ್ರತಿಭಟನೆಗಳು ಕಾನೂನು ಮತ್ತು ಶಿಸ್ತು ರಕ್ಷಣೆಯ ದೃಷ್ಟಿಯಿಂದ ಕೆಲವು ನಿರ್ಬಂಧಗಳಿಗೆ ಅನುಸಾರವಾಗಿ ನಡೆಯಬೇಕೆಂಬುದರ ಬಗ್ಗೆ ಎರಡಭಿಪ್ರಾಯವಿಲ್ಲ. ಆದರೆ ಅವುಗಳು ಆಗಲೇ ಬಾರದು ಅಥವಾ ಬೇರೆ ದಿನ ಮಾಡಿ ಎಂದು ಒತ್ತಾಯಿಸುವುದು ಅಭಿಪ್ರಾಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸುವ ಒಂದು ಪ್ರಯತ್ನ ಎನ್ನಬೇಕಾಗುತ್ತದೆ.
ರಾಮಲೀಲಾ ಮೈದಾನದ ಪ್ರತಿಭಟನೆಯ ಬಗ್ಗೆ ವ್ಯಾಪಾರಿ ಸಂಘಗಳು ಪ್ರಕಟಿಸಿದ ಆತಂಕಗಳು ಸ್ವಾಭಾವಿಕವಿರಬಹುದು. ಆದರೆ ಅವರ ಧೋರಣೆಯಲ್ಲಿ ದ್ವಂದ್ವ ನಿಲುವು ಎದ್ದು ಕಾಣುತ್ತದೆ. ಸಮಾವೇಶಕ್ಕೆ ಲಕ್ಷಾಂತರ ನಾಗರಿಕರು ಪ್ರಯಾಣಿಸುವಾಗ ಆಸುಪಾಸಿನಲ್ಲಿರುವ ಅಂಗಡಿಗಳ ಬಾಗಿಲು ಮುಚ್ಚಬೇಕಾಗುತ್ತದೆ; ವಾಹನ ಸಂಚಾರವು ಅಸ್ತವ್ಯಸ್ತಗೊಂಡು ಗ್ರಾಹಕರಿಗೆ ವ್ಯಾಪಾರಕ್ಕೆ ಬರಲು ಅಡಚಣೆಯಾಗುತ್ತದೆ, ಹಬ್ಬಗಳ ಸಂದರ್ಭದಲ್ಲಿ ಸಾಮಾನ್ಯವಾಗಿ ವ್ಯವಹಾರಗಳು ಮೇಲ್ಮುಖವಾಗಿ ತಮ್ಮ ಸಂಪಾದನೆಯೂ ಹೆಚ್ಚುತ್ತದೆ; ಆದರೆ ಪ್ರತಿಭಟನೆಯಿಂದಾಗಿ ಇದಕ್ಕೂ ಧಕ್ಕೆಯುಂಟಾಗುತ್ತದೆ ಎಂದು ಸಂಘಗಳ ವಾದ.
2018ರಲ್ಲಿ ದಿಲ್ಲಿಯಲ್ಲಿ ಭಾರತೀಯ ವ್ಯಾಪಾರಿಗಳ ಮಹಾಸಂಘ ಮತ್ತು ವ್ಯಾಪಾರ ಮತ್ತು ಕೈಗಾರಿಕೆಗಳ ಚೇಂಬರ್ಗಳು 72 ಗಂಟೆಗಳ ಬಂದ್ಗೆ ಕರೆ ನೀಡಿದ್ದವು. ಅಲ್ಲಿನ ಸುಮಾರು 500 ಮಾರುಕಟ್ಟೆಗಳಲ್ಲಿ ಸಾವಿರಾರು ಸಗಟು ಮತ್ತು ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ಮುಚ್ಚಲಾಗಿತ್ತು. ಸುಪ್ರೀಂ ಕೋರ್ಟಿನ ಆಜ್ಞೆಯಂತೆ ದಿಲ್ಲಿಯ ಸಮಗ್ರ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆಗೆ ನೇಮಿಸಿದ್ದ ಸಮಿತಿಯ ನಿರ್ದೇಶನದಂತೆ ಅಕ್ರಮ ಕಟ್ಟಡಗಳ ಮೇಲೆ ಬೀಗಜಡಿಯುವುದರ ವಿರುದ್ಧ ಸಂಘಗಳು ಪ್ರತಿರೋಧ ವ್ಯಕ್ತಪಡಿಸಿದ್ದವು.
2020-21ರ ಅವಧಿಯಲ್ಲಿ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲೆಂದು ಪ್ರಧಾನ ಮಂತ್ರಿ ಮೋದಿಯವರು ಕೇವಲ ನಾಲ್ಕು ಗಂಟೆ ಅವಧಿ ನೀಡಿ ರಾಷ್ಟ್ರದಾದ್ಯಂತ ‘ಲಾಕ್ಡೌನ್’ ಅನ್ನು ಘೋಷಿಸಿದ್ದರು. ಲಕ್ಷಾಂತರ ಸಣ್ಣ ಉದ್ದಿಮೆಗಳು ಮತ್ತು ಅಂಗಡಿಗಳು ಬಾಗಿಲು ಮುಚ್ಚಿದವು. ಸರಕಾರವೇ ವಿವೇಚನೆ ಇಲ್ಲದ ಬಂದ್ ಘೋಷಿಸಿ ಆದ ನಷ್ಟದ ಬಗ್ಗೆ ಯಾವುದೇ ವ್ಯಾಪಾರಿಗಳ ಮತ್ತು ಉತ್ಪಾದಕರ ಸಂಘಟನೆಗಳು ಸರಕಾರದ ನಿರ್ಧಾರವನ್ನು ಪ್ರಶ್ನಿಸುವ ಸಾಹಸಕ್ಕೆ ಹೋಗಲಿಲ್ಲ. ಸರಕಾರದ ನೀತಿಗಳಿಂದಾಗಿ ದೇಶದ ಉದ್ಯಮಗಳು ನಷ್ಟದ ಅಂಚಿನಲ್ಲಿವೆ. ಜಿಎಸ್ಟಿಯಿಂದ ವ್ಯಾಪಾರಿ ವರ್ಗಕ್ಕೆ ಲಾಭಕ್ಕಿಂತ ನಷ್ಟವಾದದ್ದೇ ಅಧಿಕ. ಸರಕಾರದ ತರಾತುರಿಯ ನೋಟು ನಿಷೇಧ, ಲಾಕ್ಡೌನ್ನಿಂದಾಗಿ ಆರ್ಥಿಕ ವ್ಯವಸ್ಥೆ ಕುಸಿದು ಕೂತಾಗ ಈ ವ್ಯಾಪಾರಿ ವರ್ಗ ತಣ್ಣಗೆ ಮಲಗಿತ್ತು. ಸರಕಾರದ ಆರ್ಥಿಕ ನೀತಿಗಳ ವಿರುದ್ಧ ಧ್ವನಿಯೆತ್ತುವ ಧೈರ್ಯವನ್ನು ಇವರು ತೋರಿಸಿಲ್ಲ. ಇತ್ತೀಚೆಗಿನ ವರ್ಷಗಳಲ್ಲಿ ಧಾರ್ಮಿಕ ಮತ್ತು ರಾಜಕೀಯ ಕಾರ್ಯಕ್ರಮಗಳ ಹೆಸರಿನಲ್ಲಿಯೂ ಬೃಹತ್ ಮೆರವಣಿಗೆಗಳು, ರಸ್ತೆತಡೆಗಳು, ಸಂಚಾರದ ಅವ್ಯವಸ್ಥೆಗಳು ಆಗುತ್ತಲೇ ಇವೆ. ಧಾರ್ಮಿಕ ಹಿನ್ನೆಲೆಯಿದ್ದಾಗ ರಸ್ತೆಯ ಪಕ್ಕದಲ್ಲಿರುವ ಮಾಂಸದ ಅಂಗಡಿಗಳ ಮೇಲೆ, ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಊಟ ತಿಂಡಿ ತಯಾರಿಸಿ ಪೂರೈಸುವ ತಳ್ಳು ಗಾಡಿಗಳ ಮತ್ತು ರಸ್ತೆ ಬದಿಯ ಕ್ಯಾಂಟೀನ್ಗಳ ಮೇಲೆ ಬಲಪ್ರಯೋಗ ಮಾಡಿ ಮುಚ್ಚಿಸಿದ ಅನೇಕ ಘಟನೆಗಳು ವರದಿಯಾಗಿವೆ. ಶ್ರಾವಣ ಮಾಸದಲ್ಲಿ ಉತ್ತರ ಭಾರತದ ರಾಜ್ಯಗಳಲ್ಲಿ ಗಂಗಾಜಲವನ್ನು ಮಡಿಕೆಗಳಲ್ಲಿ ತುಂಬಿಸಿ ಭುಜದ ಮೇಲೆ ಕಾವಡಿಗಳಲ್ಲಿ ಹೊತ್ತು ದೂರದ ಶಿವದೇವಸ್ಥಾನಗಳಿಗೆ ಒಯ್ಯುವ ಸಂದರ್ಭದಲ್ಲಿ ‘ಕಾವಾಡಿ’ (ಕಂವರಿಯ)ಗಳ ವರ್ತನೆಗಳು ಇದಕ್ಕೆ ಒಂದು ಜ್ವಲಂತ ಉದಾಹರಣೆ. ಈ ಬಗ್ಗೆ ಸ್ಥಳೀಯ ವರ್ತಕ ಸಂಘಗಳು ದಿವ್ಯ ಮೌನವನ್ನು ಧರಿಸಿದ್ದವು. ಇದೀಗ ಈ ದೇಶದ ಪ್ರಜಾಸತ್ತೆಯನ್ನು ಉಳಿಸುವ ದೃಷ್ಟಿಯಿಂದ ವಿರೋಧ ಪಕ್ಷಗಳು ಬೀದಿಗಿಳಿಯಲು ಮುಂದಾದ ಹೊತ್ತಿನಲ್ಲಿ ವ್ಯಾಪಾರಿಗಳಿಗೆ ತಮ್ಮ ನಷ್ಟ ನೆನಪಾಗಿದೆ.
ಹಕ್ಕು ಮತ್ತು ಜವಾಬ್ದಾರಿ ಒಂದೇ ನಾಣ್ಯದ ಎರಡು ಮುಖಗಳು. ಇವುಗಳೆರಡರಲ್ಲಿ ಸಮತೋಲನವಿದ್ದಾಗ ಪ್ರಜಾಸತ್ತೆಯು ಪ್ರಬಲವಾಗುತ್ತದೆ. ನಾಗರಿಕರಿಗೆ ಎಷ್ಟು ಜವಾಬ್ದಾರಿ ಇದೆಯೋ ಅದಕ್ಕಿಂತ ಗಂಭೀರವಾದ ಜವಾಬ್ದಾರಿ ಆಡಳಿತ ವರ್ಗಕ್ಕಿದೆ. ಆ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ಸರಕಾರವು ವಿಫಲವಾದಾಗ ಪ್ರತಿಭಟನೆಯ ಹಕ್ಕು ಸಾಕಾರಗೊಂಡು ವಿವಿಧ ದಾರಿಗಳನ್ನು ತಾನೇ ಕಂಡುಕೊಳ್ಳುತ್ತದೆ. ಆ ಮೂಲಕ ಆಂತರಿಕ ಒತ್ತಡ ಹೊರ ಹರಿದು ಪರ್ಯಾಯ ದಾರಿಗಳನ್ನು ಹುಡುಕುವಂತೆ ಆಡಳಿತಕ್ಕೆ ಎಚ್ಚರ ಕೊಡುವ ಉದ್ದೇಶ ಪ್ರತಿಭಟನೆಗಳದ್ದು. ವರ್ತಕ ಸಂಘಗಳೂ ಅಧಿಕಾರದಲ್ಲಿರುವವರೂ ಇದನ್ನು ಅರಿತುಕೊಳ್ಳಬೇಕಾಗುತ್ತದೆ.






