ಭೈರಪ್ಪರ ವಿರುದ್ಧ ಭೈರಪ್ಪ!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಒಬ್ಬ ಬರಹಗಾರ ಹೇಗಿರಬೇಕು ಮತ್ತು ಹೇಗಿರಬಾರದು? ಎರಡಕ್ಕೂ ಮಾದರಿಯಾಗಿ ಬದುಕಿ ಬರೆದು ನಮ್ಮ ನಡುವಿನಿಂದ ವಿದಾಯ ಹೇಳಿದ್ದಾರೆ ಹಿರಿಯ ಕಾದಂಬರಿಕಾರ ಎಸ್. ಎಲ್. ಭೈರಪ್ಪ. ಕನ್ನಡ ಕಾದಂಬರಿ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆ ಬಹುದೊಡ್ದದು. ತಮ್ಮೆಲ್ಲ ಕಾದಂಬರಿಗಳಲ್ಲೂ ಭಾರತೀಯ ಸಮಾಜವನ್ನು ವೈದಿಕ ತಾತ್ವಿಕತೆಯ ಕನ್ನಡಿಯ ಮೂಲಕ ನೋಡಿ, ಮರು ವಿಶ್ಲೇಷಣೆಗೆ ಒಡ್ಡಿದರು. ಕನ್ನಡದ ಬಹುತೇಕ ಸಾಹಿತಿಗಳು ಕತೆಗಳು, ಕವಿತೆಗಳನ್ನು ಬರೆಯುತ್ತಾ ಅದರ ಜೊತೆ ಜೊತೆಗೇ ಕಾದಂಬರಿಯನ್ನು ಅಪರೂಪಕ್ಕೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಭೈರಪ್ಪ ತಮ್ಮನ್ನು ತಾವು ಪೂರ್ಣ ಪ್ರಮಾಣದಲ್ಲಿ ಕಾದಂಬರಿ ಪ್ರಕಾರಕ್ಕೆ ತೆತ್ತುಕೊಂಡರು. ‘ಸತ್ಯ ಮತ್ತು ಸೌಂದರ್ಯ’ ಹಾಗೂ ‘ಭಿತ್ತಿ’ಯನ್ನು ಹೊರತು ಪಡಿಸಿದರೆ ತನ್ನೆಲ್ಲ ಸೃಜನಶೀಲತೆಯನ್ನು ಕಾದಂಬರಿ ಬರಹಗಳಿಗಾಗಿಯೇ ಧಾರೆಯೆರೆದರು. ಪೂರ್ಣ ಪ್ರಮಾಣದಲ್ಲಿ ಕಾದಂಬರಿ ಪ್ರಕಾರದಲ್ಲಿ ತೊಡಗಿಕೊಂಡ ಬರಹಗಾರರ ಸರಪಣಿಯ ಕೊನೆಯ ಕೊಂಡಿಯಾಗಿದ್ದಾರೆ ಭೈರಪ್ಪ. ಆ ಕಾರಣಕ್ಕಾಗಿಯೇ ಅವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಮುಖ್ಯರಾಗುತ್ತಾರೆ. ಕಾದಂಬರಿ ಬರೆಯುವ ಸಂದರ್ಭದಲ್ಲಿ ಒಬ್ಬ ಬರಹಗಾರ ಮಾಡಬೇಕಾದ ಅಪಾರ ಅಧ್ಯಯನ, ಓದು ಹೇಗಿರಬೇಕು, ಎಷ್ಟಿರಬೇಕು ಎನ್ನುವುದಕ್ಕೂ ಭೈರಪ್ಪ ಹೊಸ ತಲೆಮಾರಿನ ಬರಹಗಾರರಿಗೆ ಮಾದರಿ. ತಬ್ಬಲಿಯು ನೀನಾದೆ ಮಗನೆ, ಗೃಹ ಭಂಗ, ಸಾರ್ಥ, ಮಂದ್ರ, ದಾಟು, ಪರ್ವ ಮೊದಲಾದ ಕೃತಿಗಳು ಅವರ ಪ್ರತಿಭೆ ಮತ್ತು ಅಪಾರ ಸಾಧನೆಯ ಫಲಗಳಾಗಿವೆ. ಪರ್ವ ಕಾದಂಬರಿಯನ್ನು ಬರೆಯುವುದಕ್ಕಾಗಿ ಅವರು ಉತ್ತರ ಭಾರತದ ಹಲವು ಊರುಗಳನ್ನು ಸಂದರ್ಶಿಸಿದ್ದರು ಎನ್ನುವುದನ್ನು ಹೇಳಿಕೊಳ್ಳುತ್ತಾರೆ. ಬರೆಯುವ ಮುನ್ನ ಬರಹಗಾರ ಮಾಡಿಕೊಳ್ಳಬೇಕಾದ ಪೂರ್ವ ಸಿದ್ಧತೆ ಹೇಗಿರಬೇಕು ಎನ್ನುವುದಕ್ಕೆ ಭೈರಪ್ಪರಿಂದ ಹೊಸ ತಲೆಮಾರು ಕಲಿಯುವುದು ಬಹಳಷ್ಟಿದೆ.
ವೈದಿಕ ತತ್ವಶಾಸ್ತ್ರದ ಆಳಅಗಲಗಳನ್ನು ಭೈರಪ್ಪ ಅಧ್ಯಯನ ಮಾಡಿದ್ದರು. ಸಂಗೀತ ಕ್ಷೇತ್ರದ ಬಗ್ಗೆಯೂ ಅಪಾರ ತಿಳುವಳಿಕೆಯನ್ನು ಹೊಂದಿದ್ದರು. ಮಂದ್ರ, ಸಾರ್ಥ, ದಾಟು, ವಂಶವೃಕ್ಷ ಮೊದಲಾದವುಗಳನ್ನು ಭಾರತೀಯ ತತ್ವಶಾಸ್ತ್ರದ ಹಿನ್ನೆಲೆಯಲ್ಲಿ ಅವರು ಬರೆದಿದ್ದಾರೆ. ಪರ್ವ ಕಾದಂಬರಿಯಂತೂ ಕನ್ನಡ ಕಾದಂಬರಿ ಪ್ರಕಾರಕ್ಕೆ ಹೊಸ ತಿರುವನ್ನು ನೀಡಿತು. ‘ಪುರಾಣ’ವನ್ನು ಅವರು ಇತಿಹಾಸದ ವಿದ್ಯಾರ್ಥಿಯಾಗಿ ವಾಸ್ತವ ಲೋಕಕ್ಕೆ ಇಳಿಸಿದರು. ಪಾತ್ರಗಳನ್ನು ಮನಶ್ಶಾಸ್ತ್ರೀಯ ನೆಲೆಯಲ್ಲಿ ಅಧ್ಯಯನ ಮಾಡಿ ಪಾತ್ರಗಳನ್ನು ಹೊಸದಾಗಿ ಕಟ್ಟಿಕೊಟ್ಟರು. ಅವರು ಪರ್ವವನ್ನು ಈ ಕಾಲಘಟ್ಟದಲ್ಲಿ ಬರೆದಿದ್ದರೆ, ಸಂಘಪರಿವಾರ ಅದನ್ನು ಸಾರ್ವಜನಿಕವಾಗಿ ಸುಟ್ಟು ಹಾಕಿ ಬಿಡುತ್ತಿತ್ತೇನೋ. ಯಾಕೆಂದರೆ, ಆ ಕೃತಿಯಲ್ಲಿ ಮಹಾಭಾರತದಲ್ಲಿ ದೈವತ್ವಕ್ಕೇರಿದ್ದ ಎಲ್ಲ ಪಾತ್ರಗಳನ್ನು ಅವರು ಸಾಮಾನ್ಯೀಕರಿಸಿ ಬಿಟ್ಟಿದ್ದರು. ಭಾರತದ ಅಂದಿನ ಸಾಮಾಜಿಕ ಸ್ಥಿತಿಗತಿಗಳನ್ನು ಯಾವ ಭಯವೂ ಇಲ್ಲದೆ ತೆರೆದಿಟ್ಟಿದ್ದರು. ಗೋಮಾಂಸಾಹಾರ ಅಂದಿನ ಜನರ ಬದುಕಿನಲ್ಲಿ ಶ್ರೇಷ್ಠ ಆಹಾರವಾಗಿತ್ತು ಎನ್ನುವುದನ್ನು ಹೇಳುವುದಕ್ಕೂ ಅವರು ಹಿಂಜರಿದಿರಲಿಲ್ಲ. ‘ಭಿತ್ತಿ’ ಅವರ ಆತ್ಮಕತೆ. ತನ್ನ ಬಾಲ್ಯದ ಬಡತನವನ್ನು ಅವರು ಅಲ್ಲಿ ಹೃದಯವಿದ್ರಾವಕವಾಗಿ ತೆರೆದಿಟ್ಟಿದ್ದಾರೆ. ವಾರಾನ್ನದ ಮೂಲಕ ಕಲಿಯುವ ಸಂದರ್ಭದಲ್ಲಿ ಹೇಗೆ ಅವಮಾನಗಳನ್ನು ಎದುರಿಸಿದೆ ಎನ್ನುವುದನ್ನು ಅದರಲ್ಲಿ ಹಂಚಿಕೊಂಡಿದ್ದಾರೆ. ಆದರೆ ಅದೇ ಭೈರಪ್ಪ ಶಾಲೆಗಳಲ್ಲಿ ಮಕ್ಕಳಿಗೆ ನೀಡುವ ‘ಬಿಸಿಯೂಟ’ಕ್ಕೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದರು. ಬಡವರಿಗೆ ಉಚಿತವಾಗಿ ನೀಡುವ ಅಕ್ಕಿಯನ್ನು ಅವರು ಪ್ರಶ್ನಿಸಿದರು. ಬಾಲ್ಯದಲ್ಲಿ ಹಸಿವಿನ ಅವಮಾನವನ್ನು ಅನುಭವಿಸಿಯೂ ಭೈರಪ್ಪ ಅವರು ಇಂತಹದೊಂದು ನಿಲುವನ್ನು ತಳೆಯಲು ಹೇಗೆ ಸಾಧ್ಯವಾಯಿತು ಎನ್ನುವ ಪ್ರಶ್ನೆಗೆ ಅವರು ಕೊನೆಗೂ ಉತ್ತರಿಸದೆಯೇ ನಮ್ಮಿಂದ ವಿದಾಯ ಹೇಳಿದ್ದಾರೆ.
ಭೈರಪ್ಪರ ಕಾದಂಬರಿಗಳು ನಿಧಾನಕ್ಕೆ ವೈದಿಕ ತತ್ವಶಾಸ್ತ್ರದಿಂದ ಆರೆಸೆಸ್ಸ್‌ನ ಮನುವಾದಿ ಸಿದ್ಧಾಂತವನ್ನು ಸಮರ್ಥಿಸುವ ಕರಪತ್ರವಾಗಿ ಬದಲಾಗಿದ್ದು ಇನ್ನೊಂದು ದುರಂತವಾಗಿದೆ. ಗೃಹ ಭಂಗ, ಪರ್ವ, ಮತದಾನ, ವಂಶವೃಕ್ಷ, ದಾಟುವಿನಂತಹ ಕೃತಿಗಳನ್ನು ಕೊಟ್ಟ ಅದೇ ಭೈರಪ್ಪ ನಿಧಾನಕ್ಕೆ ಧರ್ಮಶ್ರೀ, ತಬ್ಬಲಿಯು ನೀನಾದೆ ಮಗನೆ ಮೊದಲಾದ ಕಾದಂಬರಿಗಳಲ್ಲಿ ಮೃದುವಾಗಿ ಹಿಂದುತ್ವವಾದವನ್ನು ಪ್ರತಿಪಾದಿಸುತ್ತಾ ಹೋದರು. ಆವರಣ ಮತ್ತು ಕವಲು ಕಾದಂಬರಿಗಳಲ್ಲಿ ಅದು ಉಲ್ಬಣಗೊಂಡು ಇನ್ನಷ್ಟು ವಿಕಾರ ರೂಪವನ್ನು ಪಡೆಯಿತು. 2014ರಲ್ಲಿ ಮೋದಿ ನೇತೃತ್ವದ ಸರಕಾರ ರಚನೆಯಾದ ಬಳಿಕ ಅವರು ಪೂರ್ಣರೂಪದಲ್ಲಿ ರಾಜಕೀಯ ವ್ಯಕ್ತಿಯಾಗಿ ಬದಲಾದರು. ನರೇಂದ್ರ ಮೋದಿಯ ಜನವಿರೋಧಿ ನೀತಿಗಳನ್ನು ಯಾವುದೇ ‘ಭಕ್ತ’ ಅಭಿಮಾನಿಗಳಿಗಿಂತ ಅತಿರೇಕವಾಗಿ ಬೆಂಬಲಿಸತೊಡಗಿದರು. ಒಬ್ಬ ಸೃಜನಶೀಲ ಲೇಖಕನ ಹೊಣೆಗಾರಿಕೆಗಳನ್ನು ಮರೆತು ರಾಜಕೀಯ ಮಾತುಗಳನ್ನಾಡತೊಡಗಿದರು ಮಾತ್ರವಲ್ಲ, ಅವರ ಕಾದಂಬರಿಗಳೂ ‘ರಾಜಕೀಯ ಭಾಷಣ’ಗಳಾಗ ತೊಡಗಿದವು. ಅವರೇ ಬರೆದ ‘ಸತ್ಯ ಮತ್ತು ಸೌಂದರ್ಯ’ ಕೃತಿಯನ್ನು ಅಣಕಿಸುವಂತೆ ‘ಅವರಣ’ ಕಾದಂಬರಿಯನ್ನು ರಚಿಸಿದರು. ಸಾರ್ವಜನಿಕ ವೇದಿಕೆಗಳಲ್ಲಿ ಹಸಿ ಹಸಿ ಸುಳ್ಳುಗಳನ್ನು ಹೇಳುತ್ತಾ ರಾಜಕೀಯ ನಾಯಕರನ್ನು ಸಂತುಷ್ಟಿಗೊಳಿಸತೊಡಗಿದರು. ಭೈರಪ್ಪರ ಕಾದಂಬರಿಗಳನ್ನು ನಿರ್ದೇಶಿಸಿ ನಾನು ತಪ್ಪು ಮಾಡಿದೆ ಎಂದು ಬಳಿಕ ಗಿರೀಶ್ ಕಾರ್ನಾಡ್ ಸಾರ್ವಜನಿಕವಾಗಿ ಹೇಳಿಕೊಳ್ಳಬೇಕಾಯಿತು. ಕೇಂದ್ರ ಸರಕಾರದ ಕುರಿತಂತೆ ಭೈರಪ್ಪ ಹೊಗಳಿಕೆ ಯಾವ ಮಟ್ಟದಲ್ಲಿತ್ತೆಂದರೆ, ರಾಷ್ಟ್ರೀಯ ಪಕ್ಷಿಯನ್ನು ಘೋಷಿಸಿದಂತೆ ಕೇಂದ್ರ ಸರಕಾರವೂ ಎಸ್. ಎಲ್. ಭೈರಪ್ಪರನ್ನು ‘ರಾಷ್ಟ್ರೀಯ ಪ್ರೊಫೆಸರ್’ ಎಂದು ಘೋಷಿಸಿ ಮಾಸಿಕ ಒಂದು ಲಕ್ಷ ರೂಪಾಯಿಯ ಗೌರವ ಧನ ನೀಡತೊಡಗಿತು. ಹೀಗೆ ಕೇಂದ್ರ ಸರಕಾರವನ್ನು ಹೊಗಳುವುದಕ್ಕಾಗಿಯೇ ಒಬ್ಬ ರಾಷ್ಟ್ರೀಯ ಪ್ರೊಫೆಸರ್‌ನ್ನು ಘೋಷಿಸಿದ್ದು ಅದೇ ಮೊದಲು. ನೋಟು ನಿಷೇಧ, ಲಾಕ್‌ಡೌನ್ ಸಂದರ್ಭಗಳಲ್ಲಿ ಜನರು ಹಾಹಾಕಾರ ಪಡುತ್ತಿರುವ ಹೊತ್ತಿನಲ್ಲಿ ಭೈರಪ್ಪರು ಜನರ ಧ್ವನಿಯಾಗದೆ ಸರಕಾರದ ಧ್ವನಿಯಾಗಿ ಮಾತನಾಡಿದರು. ಇದು ಒಬ್ಬ ಸೃಜನಶೀಲ ಲೇಖಕನ ಪಾಲಿಗೆ ಗೌರವದ ವಿಷಯ ಖಂಡಿತ ಆಗಿರಲಿಲ್ಲ.
ತನಗೆ ಸಿಕ್ಕಿದ ಎಲ್ಲ ಗೌರವಗಳಿಗೆ ಮೋದಿಯವರೇ ಕಾರಣ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಇಷ್ಟೆಲ್ಲ ಮಾಡುತ್ತಾ ‘ತನ್ನದು ಶುದ್ಧ ಸಾಹಿತ್ಯ’ ಎಂದು ಹೇಳಲು ಅವರು ಹಿಂಜರಿಯಲಿಲ್ಲ. ಪರ್ವ ಕಾದಂಬರಿಯಲ್ಲಿ ‘ಕೌರವ ಪಾಂಡವರು ಗೋಮಾಂಸ ಸೇವಿಸುವುದನ್ನು’ ಧಾರಾಳವಾಗಿ ಬರೆದ ಭೈರಪ್ಪರು, ಸಾರ್ವಜನಿಕ ವೇದಿಕೆಯಲ್ಲಿ ‘‘ಮಾಂಸಾಹಾರ ಭಾರತೀಯ ಸಂಸ್ಕೃತಿಯಲ್ಲ. ಅದು ವಿದೇಶದಿಂದ ಬಂದಿರುವುದು’ ಎಂದು ಹೇಳಿ ಬಿಟ್ಟರು. ಅವರು ಮಾಧ್ಯಮಗಳಲ್ಲಿ ಇತರ ಧರ್ಮೀಯರ ಕುರಿತಂತೆ ನೀಡುತ್ತಿದ್ದ ಹೇಳಿಕೆಗಳು ಯಾವುದೇ ರಾಜಕೀಯ ನಾಯಕರ ದ್ವೇಷ ಭಾಷಣಕ್ಕಿಂತ ಕಡಿಮೆಯಿರಲಿಲ್ಲ, ಲೇಖಕ ಭೈರಪ್ಪರಿಗೆ ಯಾರಾದರೂ ಅನ್ಯಾಯ ಮಾಡಿದ್ದಿದ್ದರೆ ಅದು ಸ್ವತಃ ಭೈರಪ್ಪರೇ ಆಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ದೈತ್ಯ ಪ್ರತಿಭೆಯ ಕಾದಂಬರಿಕಾರ ಭೈರಪ್ಪರಿಗೆ ಯಾರಾದರೂ ವಿರೋಧಿಗಳಿದ್ದರೆ ಅದು ಸ್ವತಃ ಭೈರಪ್ಪರೇ ಆಗಿದ್ದಾರೆ.







