ವಿಜ್ಞಾನಿಗಳ ಪ್ರತಿಭಾ ಪಲಾಯನ: ಸರಕಾರದ ನೀತಿಗಳೆಷ್ಟು ಕಾರಣ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇಸ್ರೋ ಬಾಹ್ಯಾಕಾಶ ಸಾಧನೆಗಳಿಗಾಗಿ ಮಾತ್ರವಲ್ಲ, ಹಲವು ಋಣಾತ್ಮಕ ಕಾರಣಗಳಿಗೂ ಆಗಾಗ ಸುದ್ದಿಯಾಗುತ್ತಿರುತ್ತದೆ. ದೇಶದ ಹೆಮ್ಮೆಯ ಸಂಸ್ಥೆಯಾಗಿರುವ ಇಸ್ರೋದಿಂದ ವಿಜ್ಞಾನಿಗಳು ಒಬ್ಬೊಬ್ಬರಾಗಿ ರಾಜೀನಾಮೆ ನೀಡಿ ಹೊರ ನಡೆಯುತ್ತಿರುವುದು ಇದೀಗ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಇಸ್ರೋದ ವಿವಿಧ ಕೇಂದ್ರಗಳ ಸುಮಾರು 120 ಮಂದಿ ವಿಜ್ಞಾನಿಗಳು ರಾಜೀನಾಮೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸ್ವಯಂ ನಿವೃತ್ತಿಗೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸಲು ಕೇಂದ್ರ ಸರಕಾರ ಮುಂದಾಗಿದೆ. ಒಂದೆಡೆ ಭಾರತ ಎಐ ಕ್ರಾಂತಿಯ ಬಗ್ಗೆ ಮಾತನಾಡುತ್ತಿದೆ. 10,300 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ಎಐ ಮಿಶನ್ ಜಾರಿಯಲ್ಲಿದೆ. ವಿದೇಶಿ ಕಂಪೆನಿಗಳು ಈ ದೇಶದ ನೆಲ, ಜಲವನ್ನು ಬಳಸಿಕೊಂಡು ಝಂಡಾ ಹೂಡುವುದಕ್ಕೆ ಸಿದ್ಧತೆ ನಡೆಸುತ್ತಿವೆ. ವಿಪರ್ಯಾಸವೆಂದರೆ ಈ ಎಐ ಭಾರತೀಯರ ಸಹಸ್ರಾರು ಉದ್ಯೋಗಗಳನ್ನು ಕಸಿದುಕೊಳ್ಳುತ್ತಿವೆ. ಬೃಹತ್ ಕಂಪೆನಿಗಳು ಎಐಯನ್ನು ನೆಪ ಮಾಡಿಕೊಂಡು ರಾತ್ರೋರಾತ್ರಿ ಸಾವಿರಾರು ಸಿಬ್ಬಂದಿಯನ್ನು ಯಾವ ಕಾರಣವೂ ನೀಡದೆ ಕಿತ್ತು ಹಾಕುತ್ತಿವೆ. ಕರ್ನಾಟಕದಲ್ಲೂ ಎಐ ಹಬ್ ಸದ್ದು ಮಾಡುತ್ತಿದೆ. ರಾಜ್ಯವನ್ನು ಎಐ ರಾಜಧಾನಿಯಾಗಿ ಮಾಡಲು ಹೊರಟಿರುವ ಸರಕಾರ ಈಗಾಗಲೇ ಎಐ ವಿಶ್ವವಿದ್ಯಾನಿಲಯವನ್ನೂ ಘೋಷಿಸಿದೆ. ಇದೇ ಹೊತ್ತಿಗೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ಇಸ್ರೋ ಸಂಸ್ಥೆ ಬೇರೆ ಬೇರೆ ಕಾರಣಗಳಿಂದ ಪತನದ ಅಂಚಿಗೆ ಜಾರುತ್ತಿದೆ. ಇಲ್ಲಿರುವ ವಿಜ್ಞಾನಿಗಳು ಸ್ವಯಂ ರಾಜೀನಾಮೆ ಕೊಟ್ಟು ಬೇರೆ ಖಾಸಗಿ ಸಂಸ್ಥೆಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಇದರಿಂದ ವಿಜ್ಞಾನ, ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದ ಮೇಲೆ ಭವಿಷ್ಯದಲ್ಲಿ ಬೀರಬಹುದಾದ ಪರಿಣಾಮಗಳ ಬಗ್ಗೆ ಯಾವುದೇ ರಾಜಕಾರಣಿಗಳಿಗೆ ಕಳವಳ ಇದ್ದಂತಿಲ್ಲ.
ಬಾಹ್ಯಾಕಾಶ ಇಲಾಖೆಯ ಜಂಟಿ ಕಾರ್ಯದರ್ಶಿ ಎಸ್. ಆರ್. ರಾಜಶೇಖರ್ ಅವರು ಜು. 14ರಂದು ಹೊರಡಿಸಿದ ಜ್ಞಾಪನಾ ಪತ್ರದಲ್ಲಿ ವಿಜ್ಞಾನಿಗಳ ರಾಜೀನಾಮೆಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ‘‘ಇತ್ತೀಚಿನ ದಿನಗಳಲ್ಲಿ ಪ್ರತಿಷ್ಠಿತ ಗಗನಯಾನ ಹಾಗೂ ಇತರ ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯಿಂದ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮನವಿಗಳು ಬರುತ್ತಿವೆ. ಇದು ರಾಷ್ಟ್ರೀಯ ಮಹತ್ವದ ಯೋಜನೆಗಳ ಅನುಷ್ಠಾನದ ಮೇಲೆ ತೀವ್ರ ಪರಿಣಾಮಗಳನ್ನು ಬೀರುತ್ತಿವೆ’’ ಎಂದು ಅವರು ಹೇಳಿದ್ದಾರೆ. ಈ ಕಾರಣದಿಂದಲೇ, ಗಗನಯಾನ ಅಥವಾ ಇತರ ಪ್ರಮುಖ ಯೋಜನೆಗಳು ಪೂರ್ಣಗೊಳ್ಳುವವರೆಗೂ ಅವುಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ರಾಜೀನಾಮೆ ಮನವಿಗಳನ್ನು ಸ್ವೀಕರಿಸದಂತೆ ಇಸ್ರೋ ಕೇಂದ್ರಗಳ ನಿರ್ದೇಶಕರು ಮತ್ತು ಘಟಕಗಳ ಮುಖ್ಯಸ್ಥರಿಗೆ ಸೂಚನೆ ನೀಡಲಾಗಿದೆ.ವರದಿಯ ಪ್ರಕಾರ ಬೆಂಗಳೂರಿನ ಯು.ಆರ್.ರಾವ್ ಉಪಗ್ರಹ ಕೇಂದ್ರದ ಸುಮಾರು 80 ವಿಜ್ಞಾನಿಗಳು ಈಗಾಗಲೇ ರಾಜೀನಾಮೆ ನೀಡಿದ್ದಾರೆ. ತಿರುವನಂತಪುರದ ವಿಕ್ರಮ್ ಸಾರಾಭಾಯಿ ಬಾಹ್ಯಾಕಾಶ ಕೇಂದ್ರದಿಂದ ಸುಮಾರು 20 ವಿಜ್ಞಾನಿಗಳು ಹೊರ ಹೋಗಿದ್ದಾರೆ. ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಈ ರಾಜೀನಾಮೆಗಳು ಭಾರತ ಕಟ್ಟಿ ನಿಲ್ಲಿಸಿದ ಸ್ವದೇಶಿ ವಿಜ್ಞಾನ, ತಂತ್ರಜ್ಞಾನದ ಸಾಧನೆಗಳ ಮೇಲೆ ಭಾರೀ ಆಘಾತಗಳನ್ನು ನೀಡಬಲ್ಲದು. ಪ್ರಧಾನಿ ಮೋದಿಯ ಇಂದಿನ ಭಾರತದಲ್ಲಿ ಇಸ್ರೋ, ಹಿಂದೂಸ್ತಾನ್ ಏರೋನಾಟಿಕ್ಸ್‌ನಂತಹ ಸಂಸ್ಥೆಗಳು ಯಾಕೆ ಹಿನ್ನಡೆಯನ್ನು ಅನುಭವಿಸುತ್ತಿವೆ ಎನ್ನುವುದನ್ನು ಚರ್ಚಿಸುವುದಕ್ಕೆ ಇದು ಸರಿಯಾದ ಸಂದರ್ಭವಾಗಿದೆ.
ಬಾಹ್ಯಾಕಾಶ ಕ್ಷೇತ್ರ ಖಾಸಗೀಕರಣಕ್ಕೆ ತೆರೆದುಕೊಂಡಿರುವುದು ಈ ರಾಜೀನಾಮೆಗೆ ಮುಖ್ಯ ಕಾರಣ ಎಂದು ಊಹಿಸಲಾಗುತ್ತಿದೆ. 2020ರಲ್ಲಿ ಕೇಂದ್ರ ಸರಕಾರ ಖಾಸಗಿ ಸ್ಟಾರ್ಟ್‌ಅಪ್‌ಗಳಿಗೆ ನೀಡಿದ ಅವಕಾಶ ಇಸ್ರೋದ ಮೇಲೆಯೂ ಪರಿಣಾಮಗಳನ್ನು ಬೀರಿದೆ. 2023ರ ಬಾಹ್ಯಾಕಾಶ ನೀತಿಯನ್ನು ಬಳಸಿಕೊಂಡು ಖಾಸಗಿ ಸ್ಟಾರ್ಟ್‌ಅಪ್‌ಗಳು ಲಾಭವನ್ನು ಮಾಡಿಕೊಂಡವು. ಒಂದೆಡೆ ಖಾಸಗಿ ಸ್ಟಾರ್ಟ್‌ಅಪ್‌ಗಳು ಸರಕಾರದ ಸವಲತ್ತುಗಳನ್ನು ಬಳಸಿ ಬೆಳೆಯುತ್ತಿರುವಾಗ ಇತ್ತ ಇಸ್ರೋದಂತಹ ಸಂಸ್ಥೆಗಳಲ್ಲಿರುವ ವಿಜ್ಞಾನಿಗಳು ಮತ್ತು ತಳಸ್ತರದ ಸಿಬ್ಬಂದಿ ತಮ್ಮ ವೇತನಗಳಿಗಾಗಿ ಸರಕಾರದ ಮುಂದೆ ಪ್ರತಿಭಟನೆ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಬಾಹ್ಯಾಕಾಶ ಕ್ಷೇತ್ರಕ್ಕೆ ಸರಕಾರ ತನ್ನ ಬಜೆಟ್‌ನ್ನು ಹಂತಹಂತವಾಗಿ ಕಡಿತಗೊಳಿಸುತ್ತಾ ಬಂದಿರುವುದು ಹತ್ತು ಹಲವು ಆರ್ಥಿಕ ಒತ್ತಡಗಳಿಗೆ ಕಾರಣವಾಯಿತು. ಪರಿಣಾಮವಾಗಿ ಇತ್ತೀಚಿನ ದಿನಗಳಲ್ಲಿ ಇಸ್ರೋ ಹಲವು ಕಾರ್ಯಾಚರಣೆಗಳಲ್ಲಿ ವೈಫಲ್ಯವನ್ನು ಅನುಭವಿಸುತ್ತಾ ಬಂದಿದೆ. ಇಸ್ರೋದ ಮುಂದೆ ಹಲವು ಮಹತ್ವಾಕಾಂಕ್ಷಿ ಯೋಜನೆಗಳು ಇವೆಯಾದರೂ ಅವುಗಳು ಗುರಿ ಮುಟ್ಟಬೇಕಾದರೆ ಸರಕಾರದ ಪೂರ್ಣ ಪ್ರಮಾಣದ ಬೆಂಬಲ ಮಾತ್ರವಲ್ಲ, ಅನುಭವೀ ವಿಜ್ಞಾನಿಗಳ ಅಗತ್ಯವೂ ಇದೆ. ಆದರೆ ವಿಜ್ಞಾನಿಗಳ ಸಾಲು ಸಾಲು ರಾಜೀನಾಮೆಗಳು ಭವಿಷ್ಯದಲ್ಲಿ ಈ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು.
ಖಾಸಗಿ ಕಂಪೆನಿಗಳು ತಮ್ಮ ಹಿತಾಸಕ್ತಿಯನ್ನು ಸಾಧಿಸಬೇಕಾದರೆ ಇಸ್ರೋದಂತಹ ಕಂಪೆನಿಗಳು ಹಿನ್ನಡೆ ಅನುಭವಿಸುವುದು ಅನಿವಾರ್ಯ. ಇದಕ್ಕಾಗಿ ಎಲ್ಲ ತಂತ್ರಗಳನ್ನು ಮಾಡುತ್ತವೆ. ಅಗತ್ಯ ಬಿದ್ದರೆ ಅವು ಸರಕಾರವನ್ನೂ ಬಳಸಿಕೊಳ್ಳುತ್ತವೆ. ದೂರವಾಣಿ ಕ್ಷೇತ್ರದಲ್ಲಿ ಜಿಯೋದಂತಹ ಕಂಪೆನಿಗಳು ತಮ್ಮ ಜಾಲವನ್ನು ವಿಸ್ತರಿಸಿಕೊಳ್ಳಲು ಬಿಎಸ್‌ಎನ್‌ಎಲ್‌ನ್ನು ಹೇಗೆ ಹಂತಹಂತವಾಗಿ ನಾಶ ಪಡಿಸಿತು, ಸರಕಾರ ಕೂಡ ಅದಕ್ಕೆ ಹೇಗೆ ಸಹಕರಿಸಿತು ಎನ್ನುವುದನ್ನು ನೋಡಿದ್ದೇವೆ. ಖಾಸಗಿ ಸಂಸ್ಥೆಗಳು ಪ್ರತಿಭಾವಂತ ವಿಜ್ಞಾನಿಗಳಿಗೆ ಅರ್ಹ ವೇತನಗಳನ್ನು ನೀಡಿ ಅವರನ್ನು ಕೊಂಡುಕೊಳ್ಳುತ್ತವೆ. ಇಸ್ರೋ ವಿಜ್ಞಾನಿಗಳು ಅಭಿವೃದ್ಧಿ ಹೊಂದಿದ ಬೇರೆ ದೇಶಗಳ ವಿಜ್ಞಾನಿಗಳ ಐದನೇ ಒಂದು ಭಾಗದಷ್ಟು ಮಾತ್ರ ವೇತನ ಪಡೆಯುತ್ತಾರೆ ಎನ್ನುವ ಅಂಶವನ್ನು ಎರಡು ವರ್ಷಗಳ ಹಿಂದೆ ಇಸ್ರೋ ಮಾಜಿ ಅಧ್ಯಕ್ಷ ಜಿ. ಮಾಧವನ್ ನಾಯರ್ ಅವರು ಬಹಿರಂಗಪಡಿಸಿದ್ದರು. ಇಸ್ರೋ ಸಿಬ್ಬಂದಿಯ ವೇತನ ಬಾಕಿಯ ಬಗ್ಗೆಯೂ ಈ ಹಿಂದೆ ಆಕ್ರೋಶ ವ್ಯಕ್ತವಾಗಿತ್ತು. ಇತ್ತ ಇಸ್ರೋ ಸಂಸ್ಥೆಯನ್ನು ಸರಕಾರ ತನ್ನ ರಾಜಕೀಯಕ್ಕಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕೂಡ ಮಾಧ್ಯಮಗಳಲ್ಲಿ ಚರ್ಚೆಯಾಗಿದೆ.
ಒಂದೆಡೆ ರಾಜಕೀಯ ಶಕ್ತಿಗಳು ಇಸ್ರೋ ಸಾಧನೆಯನ್ನು ಹೈಜಾಕ್ ಮಾಡಲು ಮುಂದಾದರೆ ಮತ್ತೊಂದೆಡೆ ವೈದಿಕ ಶಕ್ತಿಗಳೂ ಇಸ್ರೋದೊಳಗೆ ಮೂಗು ತೂರಿಸಿವೆ. ಉಪಗ್ರಹಗಳ ಪ್ರತಿಕೃತಿಗೆ ತಿರುಪತಿ, ಧರ್ಮಸ್ಥಳದಲ್ಲಿ ಪೂಜೆ, ಉಪಗ್ರಹ ಉಡಾವಣೆಗೆ ಒಳ್ಳೆಯ ಗಳಿಗೆ ನೋಡುವಂತಹ ಜ್ಯೋತಿಷಿಗಳು ಇಸ್ರೋವನ್ನು ನಿಯಂತ್ರಿಸುವುದರ ವಿರುದ್ಧ ಹಲವು ವಿಚಾರವಾದಿಗಳು ಧ್ವನಿಯೆತ್ತಿದ್ದರು. ಇಸ್ರೋವನ್ನು ಪುರೋಹಿತ ವರ್ಗ ನಿಯಂತ್ರಿಸುತ್ತಿರುವುದು ಪ್ರತಿಭಾವಂತ ವಿಜ್ಞಾನಿಗಳಿಗೆ ತೀವ್ರ ಇರಿಸು ಮುರಿಸು ಉಂಟಾಗುತ್ತಿತ್ತು. ಇದೇ ಸಂದರ್ಭದಲ್ಲಿ ಅರ್ಹ ವಿಜ್ಞಾನಿಗಳ ಸಾಧನೆಗಳನ್ನು ಗುರುತಿಸಿ ಅವರಿಗೆ ಯೋಗ್ಯ ವೇತನ, ಭಡ್ತಿ ಇತ್ಯಾದಿಗಳನ್ನು ನೀಡುವ ಕೆಲಸ ನಡೆಯದಿರುವುದು ವಿಜ್ಞಾನಿಗಳಲ್ಲಿ ಭ್ರಮನಿರಸನವನ್ನು ಸೃಷ್ಟಿಸಿದೆ. ಇವೆಲ್ಲವೂ ಅಂತಿಮವಾಗಿ ರಾಜೀನಾಮೆ ರೂಪದಲ್ಲಿ ಹೊರ ಬಿದ್ದಿದೆ. ಒಟ್ಟಿನಲ್ಲಿ ನೆಹರೂ ಕಟ್ಟಿನಿಲ್ಲಿಸಿದ, ಸ್ವದೇಶಿ ತಂತ್ರಜ್ಞಾನದ ಕಿರೀಟಗಳೆಂದು ಗುರುತಿಸಲ್ಪಟ್ಟ ವಿಜ್ಞಾನ, ತಂತ್ರಜ್ಞಾನ ಸಂಸ್ಥೆಗಳನ್ನು ಹಂತಹಂತವಾಗಿ ದುರ್ಬಲಗೊಳಿಸುತ್ತಿರುವ ಹೆಗ್ಗಳಿಕೆ ಮೋದಿ ಸರಕಾರಕ್ಕೆ ಸೇರಬೇಕು. ಇಸ್ರೋದ ಇಂದಿನ ಸ್ಥಿತಿಯ ನೈತಿಕ ಹೊಣೆಯನ್ನು ಪ್ರಧಾನಿ ಮೋದಿಯೇ ಹೊರಬೇಕಾಗಿದೆ.






