ಒಗ್ಗಟ್ಟಿನ ಸೋಗು, ವೈರುಧ್ಯಗಳ ನಡುವೆ ಏನೂ ಸಾಧಿಸದ ಬ್ರಿಕ್ಸ್ 2026!

Photo: x.com/narendramodi
ಬ್ರಿಕ್ಸ್ ಶೃಂಗಸಭೆಯಲ್ಲಿನ ‘ದಿಲ್ಲಿ ಘೋಷಣೆ’ಗೆ ಸರ್ವಾನುಮತದ ಅಂಗೀಕಾರ ದೊರೆತಿರುವುದನ್ನೇ ಭಾರತದ ರಾಜತಾಂತ್ರಿಕ ಗೆಲುವೆಂದು ಬಿಂಬಿಸುವುದು ನಡೆಯುತ್ತಿರುವಾಗ, ವಿದೇಶಿ ಗಣ್ಯರ ಮುಂದೆ ಮತ್ತೊಮ್ಮೆ ಕೊಳೆಗೇರಿಯನ್ನು ಮರೆಮಾಚಿದ ಶೋಕಿ ಮನಸ್ಥಿತಿಯೇ ಎದ್ದುಕಾಣಿಸುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಚೀನಿ ಆಕ್ರಮಣದ ಬಗ್ಗೆ ಸತತ ವರದಿಗಳಿರುವ ಹೊತ್ತಲ್ಲೇ, ಶೃಂಗಸಭೆ ವೇದಿಕೆಯಲ್ಲಿ ಅದರ ಬಗ್ಗೆ ಪ್ರಶ್ನೆಯೇ ಇಲ್ಲದೆ ಕ್ಯಾಮರಾಗಳ ಮುಂದೆ ಮೋದಿಯವರು ಕ್ಸಿ ಜಿನ್ಪಿಂಗ್ ಕೈಕುಲುಕುತ್ತ ಮಿಂಚುತ್ತಾರೆ. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ನೆರವು ನೀಡಿದ್ದಾಗಿ ಸ್ವತಃ ಒಪ್ಪಿಕೊಂಡ ಚೀನಾ ಇರುವ ವೇದಿಕೆಯಲ್ಲೇ, ಪಹಲ್ಗಾಮ್ ದಾಳಿಗೆ ಮತ್ತು ಭಯೋತ್ಪಾದನೆಗೆ ಖಂಡನೆ ವ್ಯಕ್ತವಾಗುತ್ತದೆ ಮತ್ತದನ್ನು ಒಮ್ಮತದ ಖಂಡನೆ ಎನ್ನಲಾಗುತ್ತದೆ. ಮಧ್ಯಪ್ರಾಚ್ಯ ಸಂಘರ್ಷವನ್ನು ಉಲ್ಲೇಖಿಸುತ್ತ, ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರದ ಮೇಲೆ ನಡೆಸುವ ಆಕ್ರಮಣವನ್ನು ಖಂಡಿಸುವಾಗ, ಇರಾನ್ ಮೇಲಿನ ದಾಳಿಗಾಗಿ ಅಮೆರಿಕದ ಹೆಸರೆತ್ತುವ ಧೈರ್ಯವನ್ನೂ ತೋರಿಸಲಿಲ್ಲ. ಇರಾನ್ ಮೇಲಿನ ದಾಳಿಯ ಕೆಲವೇ ದಿನಗಳ ಮೊದಲು ಮತ್ತು ಆನಂತರವೂ ಇಸ್ರೇಲ್ ಜೊತೆ ನಿಂತವರು, ದಾಳಿಯ ಬಗ್ಗೆ ಚಕಾರ ಎತ್ತದೇ ಉಳಿದವರು ಈಗ ಶಾಂತಿಯ ಬಗ್ಗೆ, ರಾಷ್ಟ್ರವೊಂದರ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುವುದರ ಬಗ್ಗೆ ಪಾಠ ಒಪ್ಪಿಸಿದ್ದಾರೆ. ವಿರೋಧಾಭಾಸ ಇಷ್ಟಕ್ಕೇ ನಿಲ್ಲದೆ, ವೆಸ್ಟ್ ಬ್ಯಾಂಕ್ನಿಂದ ಫೆಲೆಸ್ತೀನಿಯರ ಬಲವಂತದ ಸ್ಥಳಾಂತರದ ಬಗ್ಗೆ ಈವರೆಗೂ ಬಾಯಿಬಿಡದೇ ಇದ್ದವರು, ಗಾಝಾ ವಿನಾಶದ ಬಗ್ಗೆ ಮೌನವಹಿಸಿದ್ದವರು ಈಗ ಖಂಡಿಸುವಂತೆ ತೋರಿಸಿಕೊಳ್ಳುವಾಗಲೂ ಮುಂದುವರಿಯುತ್ತದೆ. ಲೆಬನಾನ್ನಲ್ಲಿ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಕದನವಿರಾಮವನ್ನು ಸ್ವಾಗತಿಸುವಾಗಲೂ, ಇಸ್ರೇಲ್ನ ಕ್ರೂರ ಆಟ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಹಿಜ್ಬುಲ್ಲಾ ವಿರುದ್ಧ ನಡೆದಿರುವ ಮಸಲತ್ತಿನ ಬಗ್ಗೆ ಸ್ಪಷ್ಟ ನಿಲುವಿಲ್ಲ.
ಬ್ರಿಕ್ಸ್ ಶೃಂಗಸಭೆಯಲ್ಲಿ ಗಮನಾರ್ಹವಾದದ್ದೇನಾದರೂ ಆಯಿತು ಎನ್ನುವುದಕ್ಕಿಂತ, ಆಗದೇ ಇದ್ದುದೇ ಹೆಚ್ಚು. ಬ್ರಿಕ್ಸ್ ತನ್ನದೇ ಸಾಮಾನ್ಯ ಕರೆನ್ಸಿ ಅಥವಾ ಹಣಕಾಸು ವ್ಯವಸ್ಥೆಯನ್ನು ಘೋಷಿಸಲಿಲ್ಲ. ಡಾಲರ್ ವಿರುದ್ಧ ಯುದ್ಧವನ್ನೂ ಸಾರಲಿಲ್ಲ. ಅಥವಾ ತನ್ನನ್ನು ತಾನು ಸ್ಪಷ್ಟವಾಗಿ ಪಾಶ್ಚಿಮಾತ್ಯ ವಿರೋಧಿ ಮೈತ್ರಿಕೂಟವೆಂದು ಕೂಡ ತೋರಿಸಿಕೊಳ್ಳಲಿಲ್ಲ. 11 ರಾಷ್ಟ್ರಗಳ ಈ ಕೂಟದಲ್ಲಿನ ವೈರುದ್ಧ್ಯಗಳೇ ಹೆಚ್ಚು ಕಂಡವು ಮತ್ತು ಯುದ್ಧ, ಕಾರ್ಯತಂತ್ರದ ಪೈಪೋಟಿ, ಪರಸ್ಪರ ಸಂಘರ್ಷದ ಆರ್ಥಿಕ ಹಿತಾಸಕ್ತಿಗಳಿಂದ ವಿಭಜಿತವಾಗಿರುವ ದೇಶಗಳ ನಡುವೆ ಅಸಾಮಾನ್ಯ ಒಮ್ಮತವಿದೆ ಎಂಬಂಥ ಪ್ರದರ್ಶನ ನಡೆಯಿತು.
ದಿಲ್ಲಿ ವೇದಿಕೆಯಲ್ಲಿ ನಿಂತಾಗ ರಶ್ಯದ ನಿಲುವು ಕೂಡ ಬಹಳ ಎಚ್ಚರಿಕೆಯಿಂದ ಕೂಡಿತ್ತು. ನಾವು ಯಾರದೇ ವಿರೋಧಿಗಳಲ್ಲ, ಎಲ್ಲರನ್ನೂ ಜೊತೆಗೆ ಒಯ್ಯಬಯಸುತ್ತೇವೆ ಎಂದು ಮೋದಿ ಹೇಳಿದ ರೀತಿಯಲ್ಲೇ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ನಾವು ಯಾರ ವಿರುದ್ಧವೂ ಇಲ್ಲ ಎಂದು ಹೇಳಿದರು. ರಶ್ಯ ತನ್ನ ಹಳೆಯ ಮತ್ತು ಹೊಸ ಪಾಲುದಾರರೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಹೇಳುವುದನ್ನೂ ಅವರು ಮರೆಯಲಿಲ್ಲ. ಅದೇ ಹೊತ್ತಲ್ಲಿ, ಬ್ರಿಕ್ಸ್ಗೆ ಹೆಚ್ಚಿನ ರಾಜತಾಂತ್ರಿಕ ಪಾತ್ರಕ್ಕಾಗಿ ಒತ್ತಾಯಿಸಲು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಈ ಶೃಂಗಸಭೆಯನ್ನು ಬಳಸಿಕೊಂಡರು. 2027ರ ಬ್ರಿಕ್ಸ್ ಅಧ್ಯಕ್ಷತೆಯನ್ನು ಚೀನಾ ವಹಿಸಿಕೊಳ್ಳುವುದರ ಮೇಲೆ ಅವರ ನದರಿತ್ತು.
ಭಾರತ ಮತ್ತು ಚೀನಾ ನಡುವೆ ಮಾತುಕತೆ ಸುಧಾರಿಸುತ್ತಿದೆ ಎನ್ನಲಾಗುತ್ತಿದ್ದರೂ, ಅವುಗಳ ನಡುವೆ ವ್ಯೆಹಾತ್ಮಕ ಪೈಪೋಟಿ ಇರುವುದನ್ನು ಅಲ್ಲಗಳೆಯಲಾಗದು. ಇರಾನ್ ಪಾಶ್ಚಿಮಾತ್ಯ ನಿರ್ಬಂಧಗಳನ್ನು ಎದುರಿಸುತ್ತಿದೆ ಮತ್ತು ಪಶ್ಚಿಮ ಏಶ್ಯದ ಸಂಘರ್ಷದಲ್ಲಿ ಸ್ವತಃ ಭಾಗಿಯಾಗಿದೆ. ಯುಎಇ ಭಿನ್ನವಾದ ಭದ್ರತಾ ಮತ್ತು ವಾಣಿಜ್ಯ ಸಂಬಂಧಗಳನ್ನು ಹೊಂದಿದೆ. ಇನ್ನು, ಭಾರತ ರಶ್ಯದೊಂದಿಗಿನ ತನ್ನ ದೀರ್ಘಕಾಲದ ಸಂಬಂಧವನ್ನು ಕಾಯ್ದುಕೊಳ್ಳುತ್ತಲೇ, ಅಮೆರಿಕ ಮತ್ತು ಯುರೋಪ್ನೊಂದಿಗಿನ ಪಾಲುದಾರಿಕೆಯನ್ನೂ ಬಯಸುತ್ತದೆ. ಎಲ್ಲರಿಗೂ ಅವರವರದೇ ಪ್ರಾರ್ಥನೆಗಳಿವೆ, ಆದ್ಯತೆಗಳಿವೆ ಮತ್ತು ಈ ದೇಶಗಳೆಲ್ಲವೂ ಸೇರಿ ಅಮೆರಿಕಕ್ಕೆ ಕಡೇಪಕ್ಷ ತಾತ್ವಿಕ ಸವಾಲನ್ನಾದರೂ ಒಡ್ಡುತ್ತವೆ ಎಂದು ನಿರೀಕ್ಷಿಸುವ ಪರಿಸ್ಥಿತಿಯಿಲ್ಲ. ಆರ್ಥಿಕತೆಯ ವಿಷಯ ಬಂದಾಗ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ವರ್ಷಗಳಿಂದ, ಬ್ರಿಕ್ಸ್ ಕುರಿತಾದ ಚರ್ಚೆಗಳು ಹೆಚ್ಚಾಗಿ ‘ಡಿ-ಡಾಲರೈಸೇಶನ್’ ಸುತ್ತಲೇ ಇದ್ದವು. ಆದರೆ, ಡಾಲರ್ ಅನ್ನು ಬದಲಾಯಿಸುವುದು ಮಾತನಾಡುವಷ್ಟು ಸುಲಭದ್ದಲ್ಲ ಎಂಬುದನ್ನು ಬ್ರಿಕ್ಸ್ ಒಪ್ಪಿಕೊಂಡಂತೆ ಕಂಡಿತು. ಸಾಮಾನ್ಯ ಕರೆನ್ಸಿಯನ್ನು ಸೃಷ್ಟಿಸದೆ, ಅಂದರೆ ಡಾಲರ್ ಅನ್ನು ಕೈಬಿಡದೆ, ರಾಷ್ಟ್ರೀಯ ಕರೆನ್ಸಿಗಳಲ್ಲಿ ಪರಸ್ಪರ ಪಾವತಿ ವ್ಯವಸ್ಥೆಗಳ ಕಡೆ ನೋಡಬಹುದು ಎಂಬ ನಿಲುವಿಗೆ ಬರಲಾಯಿತು.
ಶೃಂಗಸಭೆಯ ಭಾಷೆ ಉದ್ದೇಶಪೂರ್ವಕವಾದ ಎಚ್ಚರಿಕೆಯಿಂದ ಕೂಡಿತ್ತು ಎಂದು ವಿಶ್ಲೇಷಣೆಗಳು ಹೇಳುತ್ತಿವೆ. ಸರ್ವಾನುಮತಕ್ಕಾಗಿ ಬಹುಶಃ ಅಂಥ ರಾಜತಾಂತ್ರಿಕ ಅಸ್ಪಷ್ಟತೆಯನ್ನು ಒಪ್ಪುವ ಅನಿವಾರ್ಯತೆಯಿತ್ತು ಎನ್ನಲಾಗುತ್ತಿದೆ. ಹಾಗಾಗಿಯೇ ಇರಾನ್, ಗಾಝಾ, ಲೆಬನಾನ್ ಮೇಲಿನ ಯುದ್ಧದಂಥ ವಿಧ್ವಂಸಕತೆಗೆ ಹೊಣೆಗಾರಿಕೆಯನ್ನು ನಿರ್ದಿಷ್ಟವಾಗಿ ಗುರುತಿಸಲಾರದ ದುರ್ಬಲತೆ ಸ್ಪಷ್ಟವಾಗಿದೆ. ಅಮೆರಿಕ, ಇಸ್ರೇಲ್ ಮತ್ತು ಇರಾನ್ನೊಂದಿಗೆ ತೀರಾ ಭಿನ್ನವಾದ ಸಂಬಂಧಗಳನ್ನು ಹೊಂದಿರುವ ದೇಶಗಳು ಜಂಟಿ ಘೋಷಣೆಗೆ ಸಹಮತ ವ್ಯಕ್ತಪಡಿಸಿದವು ಎಂಬುದು, ಆ ಘೋಷಣೆಯ ಭವಿಷ್ಯದ ಬಗ್ಗೆಯೂ ಅನುಮಾನಗಳನ್ನು ಉಳಿಸಿದೆ. ಯುದ್ಧಗಳು ಅಮೆರಿಕ ಮತ್ತು ರಶ್ಯದಂಥ ದೇಶಗಳಿಗೆ ಲಾಭ ತರುವ ವಿಷಯವಾಗಿರುವಾಗ, ಯುದ್ಧ ನಿಲ್ಲುವುದು ಯಾರಿಗಾದರೂ ಬೇಕಾಗಿದೆ ಎಂದು ಭಾವಿಸುವುದೇ ಮೂರ್ಖತನ. ಹೀಗಿರುವಾಗ, ಇದೇ ಬ್ರಿಕ್ಸ್ನ ಭಾಗವಾಗಿರುವ ಇರಾನ್ ಮೇಲಿನ ದೊಡ್ಡವರ ದಬ್ಬಾಳಿಕೆಗಳ ಬಗ್ಗೆ ಕಳವಳಗಳು ಅಗೋಚರವಾಗಿವೆ. ಶಾಂತಿಯ ಪ್ರತಿಪಾದನೆ ನಾಟಕ ಮಾತ್ರವಾಗುವ ವಿಪರ್ಯಾಸವನ್ನು ನೋಡಬೇಕಾಗಿದೆ.
ಬಿಜೆಪಿಗರು ಆಗಲೇ ಮೋದಿ ನಾಯಕತ್ವದಲ್ಲಿ ಭಾರತ ಗ್ಲೋಬಲ್ ಸೌತ್ನ ಗುರುವಾಗಿದೆ ಎಂದು ಸಾರತೊಡಗಿದ್ದಾರೆ. ಕೊಳೆಗೇರಿ ಕಾಣದಂತೆ ಪರದೆ ಹಾಕಿದ್ದನ್ನು ಪ್ರೊಟೋಕಾಲ್ನ ಅನುಸರಣೆ ಎನ್ನಲಾಗುತ್ತಿದೆ. ಬಹಳ ವರ್ಷಗಳಿಂದ ಪತ್ರಿಕೋದ್ಯಮವನ್ನು ಮರೆತ ಮಾಧ್ಯಮಗಳು ಬ್ರಿಕ್ಸ್ ಅನ್ನು ಒಂದು ಜಾತ್ರೆಯಾಗಿ ಬಿಂಬಿಸಲಷ್ಟೇ ಸೀಮಿತವಾಗಿವೆ ಮತ್ತು ಸ್ವತಃ ಮೈಮರೆತಿವೆ. ಈ ಥಳುಕಿನ ಜಾತ್ರೆಯ ನಂತರ ದಿಲ್ಲಿಯ ವಸಂತ್ ವಿಹಾರ್ನ ಕೂಲಿ ಕ್ಯಾಂಪ್ ಕೊಳೆಗೇರಿ ಮತ್ತೆ ಜಗತ್ತಿಗೆ ಕಾಣಿಸುತ್ತದೆ. ಸತ್ಯವನ್ನು ಎಷ್ಟು ದಿನ ಮುಚ್ಚಿಡಲು ಸಾಧ್ಯ?






