ತಾನೇ ತೋಡಿದ ಖೆಡ್ಡಾದೊಳಗೆ ಬಿದ್ದು ಘೀಳಿಡುತ್ತಿರುವ ಆನೆ

ಮಾಯಾವತಿ | PTI
ಬಹುಜನ ಸಮಾಜ ಪಕ್ಷದ ಗತ ವೈಭವ ಮರಳಿ ಬರುವುದಿಲ್ಲ ಎನ್ನುವುದನ್ನು ಕೊನೆಗೂ ಮಾಯಾವತಿ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ‘‘ಇವಿಎಂ ಬದಲು ಮತ ಪತ್ರಗಳ ಮೂಲಕ ಚುನಾವಣೆ ನಡೆದರೆ ಪಕ್ಷದ ಗತ ವೈಭವ ಮರುಕಳಿಸಲಿದೆ’’ ಎಂದು ಅಭಿಪ್ರಾಯಪಟ್ಟಿದ್ದಾರೆ. ‘‘ಬಿಎಸ್ಪಿ ಅಭ್ಯರ್ಥಿಗಳು ಜಯಗಳಿಸುವುದನ್ನು ತಡೆಯಲು ಇವಿಎಂಗಳನ್ನು ತಿರುಚಲಾಗುತ್ತಿದೆ. ಪರಿಣಾಮವಾಗಿ ಬಿಎಸ್ಪಿ ಕನಿಷ್ಠಮಟ್ಟದಲ್ಲಿ ಉಳಿದಿದೆ. ಇದು ಬಿಎಸ್ಪಿಯಲ್ಲಿರುವ ದಲಿತರು ಮತ್ತು ಅಂಚಿನಲ್ಲಿರುವ ಇತರ ಮತದಾರರ ನಂಬಿಕೆಯನ್ನು ಮುರಿಯುವ ಪ್ರಯತ್ನವಾಗಿದೆ’’ ಎಂದೂ ಅವರು ಕಳವಳ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶವೂ ಸೇರಿದಂತೆ ದೇಶದಲ್ಲಿ ಬಿಎಸ್ಪಿಯ ಸ್ಥಿತಿ ಚಿಂತಾಜನಕವಾಗಿದೆ. ಈ ದೇಶದ ಬಹುಜನರ ನೋವುನಲಿವುಗಳ ಜೊತೆಗಿನ ಕೊಂಡಿಯನ್ನು ಕಳೆದುಕೊಂಡಂತಿರುವ ಬಿಎಸ್ಪಿಯು ಇಂದು ಮಾಯಾವತಿ ಮತ್ತು ಅವರ ಸೋದರಳಿಯ ಆಕಾಶ್ ಆನಂದ್ ಅವರಿಗೆ ಸೀಮಿತವಾಗಿದೆ. ಕಾನ್ಶೀರಾಂ ಬಹುಜನ ಚಳವಳಿಯನ್ನು ರಾಜಕೀಯ ಶಕ್ತಿಯಾಗಿಸಿ ಅಂಬೇಡ್ಕರ್ ಅವರ ಕನಸನ್ನು ಅಕ್ಷರಶಃ ನನಸು ಮಾಡುವ ಪ್ರಯತ್ನದಲ್ಲಿದ್ದರು. ಪರಿಣಾಮವಾಗಿ ಮಾಯಾವತಿಯವರು ಮೂರು ಬಾರಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಒಂದು ಹಂತದಲ್ಲಿ ಭವಿಷ್ಯದ ಭಾರತದ ಪ್ರಧಾನಿ ಅಭ್ಯರ್ಥಿಯಾಗಿಯೂ ಮಾಧ್ಯಮಗಳಲ್ಲಿ ಗುರುತಿಸಲ್ಪಟ್ಟರು. ಆದರೆ ಇಂದು ಅವರಿಂದಲೇ ಬಿಎಸ್ಪಿ ಹೀನಾಯ ಸ್ಥಿತಿ ತಲುಪಿದೆ. ಇದು ಈ ದೇಶದ ಬಹುಜನರ ಬಹುದೊಡ್ಡ ಸೋಲು ಎನ್ನುವುದರಲ್ಲಿ ಎರಡು ಮಾತಿಲ್ಲ.
ಕಾನ್ಶೀರಾಂ ಅವರು ಕಟ್ಟಿ ಬೆಳೆಸಿದ ಬಹುಜನ ಪಕ್ಷವನ್ನು ಸರ್ವಜನ ಪಕ್ಷವನ್ನಾಗಿಸುವ ಅವರ ಪ್ರಯತ್ನ ಆರಂಭದಲ್ಲಿ ಭಾರೀ ಯಶಸ್ತು ಕಂಡಿತಾದರೂ, ಮುಂದೆ ಅದುವೇ ಅವರಿಗೆ ತಿರುಗು ಬಾಣವಾಯಿತು. ಬಹುಜನ ಪಕ್ಷವನ್ನು ನಿಧಾನಕ್ಕೆ ಮೇಲ್ಜಾತಿಯ ಜನರು ನಿಯಂತ್ರಿಸತೊಡಗಿದಂತೆಯೇ ಬಿಎಸ್ಪಿ ಸ್ವತಃ ಉತ್ತರ ಪ್ರದೇಶದಲ್ಲೇ ಹಿನ್ನಡೆಯನ್ನು ಅನುಭವಿಸತೊಡಗಿತು. ಜಾತ್ಯತೀತ ಪಕ್ಷಗಳೊಂದಿಗೆ ಮೈತ್ರಿಗೆ ನಿರಾಕರಿಸುತ್ತಾ ಬಿಜೆಪಿಗೆ ಹೆಚ್ಚು ಹೆಚ್ಚು ಹತ್ತಿರವಾಗತೊಡಗಿತು.
ಪ್ರಧಾನಿ ಮೋದಿಯ ಜನವಿರೋಧಿ ನೀತಿಗಳ ವಿರುದ್ಧ, ದಲಿತ ವಿರೋಧಿ ನಿಲುವುಗಳ ವಿರುದ್ಧ ಮೌನ ತಾಳುತ್ತಾ, ಜಾತ್ಯತೀತ ಪಕ್ಷಗಳ ಮೇಲೆ ತಮ್ಮ ದಾಳಿಗಳನ್ನು ತೀವ್ರಗೊಳಿಸಿ ಪಕ್ಷದ ಅಸ್ತಿತ್ವವನ್ನು ಉಳಿಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದರು. ಕಳೆದ ಒಂದು ದಶಕದಲ್ಲಿ ಮಾಯಾವತಿಯ ನಿಲುವುಗಳಿಂದಾಗಿ ಬಿಎಸ್ಪಿ ಸಂಪೂರ್ಣ ಬದಿಗೆ ತಳ್ಳಲ್ಪಟ್ಟಿತು. ಬಿಎಸ್ಪಿಯನ್ನು ಬಿಜೆಪಿ ನಿಯಂತ್ರಿಸುತ್ತಿದೆ ಎನ್ನುವ ಆರೋಪ ವ್ಯಾಪಕವಾಗಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ ತನ್ನನ್ನು ತಾನು ವಿಸ್ತರಿಸಿಕೊಳ್ಳಲು ಬಿಎಸ್ಪಿಯನ್ನು ಪರೋಕ್ಷವಾಗಿ ಬಳಸಿಕೊಳ್ಳುತ್ತಿದೆ ಎನ್ನುವುದು ವಾಸ್ತವವಾಗಿದೆ. ಬಿಎಸ್ಪಿಯೊಳಗಿದ್ದ ಮಾಜಿ ನಾಯಕರೇ ಇದನ್ನು ಒಪ್ಪಿಕೊಂಡಿದ್ದಾರೆ.
ಇವಿಎಂ ತಿರುಚಲಾಗುತ್ತಿದೆ, ಇವಿಎಂ ಮೂಲಕ ಬಿಜೆಪಿ ಗೆಲ್ಲುತ್ತಿದೆ ಎನ್ನುವ ಆರೋಪಗಳನ್ನು ಎಲ್ಲ ಪಕ್ಷಗಳೂ ಮಾಡಿಕೊಂಡು ಬಂದಿವೆ. ವಿರೋಧ ಪಕ್ಷಗಳು ಒಂದಾಗಿ ಇವಿಎಂ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿವೆ. ನ್ಯಾಯಾಲಯದ ಮೆಟ್ಟಿಲನ್ನೂ ಏರಿವೆ. ಇವಿಎಂ ಹೊರತು ಪಡಿಸಿದ ಚುನಾವಣೆಯನ್ನು ಸುಪ್ರೀಂಕೋರ್ಟ್ ಕೂಡ ಬೆಂಬಲಿಸಿಲ್ಲ. ಚುನಾವಣಾ ಆಯೋಗವಂತೂ ಇವಿಎಂ ಪರವಾಗಿ ಬಲವಾಗಿದೆ ನಿಂತಿದೆ. ಇವಿಎಂ ತಿರುಚುವುದು ಸಾಧ್ಯವೇ ಇಲ್ಲ ಎನ್ನುವ ಹೇಳಿಕೆಗೆ ಅದು ಬದ್ಧವಾಗಿದೆ. ಇವಿಎಂ ವಿರುದ್ಧ ಮಾತನಾಡಿದ ವಿರೋಧ ಪಕ್ಷಗಳನ್ನೇ ಆರೋಪಿ ಸ್ಥಾನದಲ್ಲಿ ನಿಲ್ಲಿಸಿದೆ. ಇವಿಎಂನ್ನು ಬದಲಾಯಿಸಬೇಕು ಎನ್ನುವ ಒತ್ತಾಯದ ಬದಲಿಗೆ ಇದೀಗ ಇವಿಎಂನಲ್ಲಿ ಸುಧಾರಣೆಗಳನ್ನು ತರುವ ಕುರಿತಂತೆ ವಿರೋಧ ಪಕ್ಷಗಳು ಒತ್ತಡಗಳನ್ನು ಹೇರುತ್ತಿವೆ. ಇವುಗಳ ನಡುವೆಯೂ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ಮೋದಿ ನೇತೃತ್ವದ ಸರಕಾರದ ವಿರುದ್ಧ ಆಂದೋಲನಗಳನ್ನು ರೂಪಿಸುತ್ತಲೇ ಬಂದಿದೆೆ. ಸಂವಿಧಾನದ ಪರವಾಗಿ ದೇಶಾದ್ಯಂತ ರ್ಯಾಲಿಗಳನ್ನು ಹಮ್ಮಿಕೊಂಡಿದೆೆ. ಆರೆಸ್ಸೆಸ್ ಸಿದ್ಧಾಂತಗಳ ಬಗ್ಗೆ, ದಲಿತ ವಿರೋಧಿ ದೌರ್ಜನ್ಯಗಳ ಬಗ್ಗೆ ರಾಹುಲ್ ಮಾತನಾಡಿದ್ದಾರೆ ಮಾತ್ರವಲ್ಲ, ದೇಶದ ಹಲವೆಡೆ ರಾಹುಲ್ಗಾಂಧಿಯ ವಿರುದ್ಧ ಬಿಜೆಪಿ ದೂರುಗಳನ್ನು ದಾಖಲಿಸಿದೆ. ಸಮಾಜವಾದಿ ಪಕ್ಷಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ನ್ನು ಎದುರಿಸಲು ತನ್ನದೇ ಮಿತಿಯಲ್ಲಿ ಹೋರಾಡುತ್ತಾ ಬರುತ್ತಿದೆ. ಇಂತಹ ಹೊತ್ತಿನಲ್ಲಿ ಮಾಯಾವತಿಯ ನೇತೃತ್ವದಲ್ಲಿ ಬಿಎಸ್ಪಿಯು ಕಳೆದ ಒಂದು ದಶಕದಲ್ಲಿ ಯಾವುದೇ ಚಳವಳಿಯನ್ನು ರೂಪಿಸಿದ ಉದಾಹರಣೆಯಿಲ್ಲ. ಬದಲಿಗೆ, ಉತ್ತರ ಪ್ರದೇಶದಲ್ಲಿ ಬಿಎಸ್ಪಿಗೆ ಪರ್ಯಾಯವಾಗಿ ದಲಿತ ಸಮುದಾಯದಿಂದ ಹೊರ ಹೊಮ್ಮಿದ ಚಂದ್ರಶೇಖರ ಆಝಾದ್ರಂತಹ ನಾಯಕರ ದಮನಕ್ಕೆ ಆದ್ಯತೆ ನೀಡಿತು. ದಲಿತರ ಮೇಲೆ ಪದೇ ಪದೇ ನಡೆಯುತ್ತಿರುವ ದೌರ್ಜನ್ಯಗಳು, ವೇಮುಲಾ ಆತ್ಮಹತ್ಯೆ, ಮೇಲ್ಜಾತಿಯ ಬಡವರಿಗೆ ಮೀಸಲಾತಿ, ದಲಿತ ದೌರ್ಜನ್ಯ ಕಾಯ್ದೆಗಳ ದುರ್ಬಲಗೊಳಿಸುವಿಕೆ ಇತ್ಯಾದಿಗಳ ವಿರುದ್ಧ ಬಿಎಸ್ಪಿ ಯಾವ ಆಂದೋಲನವನ್ನೂ ಸಂಘಟಿಸಿಲ್ಲ. ಮಾಯಾವತಿಯವರು ಜಾತ್ಯತೀತ ಪಕ್ಷಗಳನ್ನೇ ತನ್ನ ಮೊದಲ ವೈರಿ ಎಂಬಂತೆ ನಡೆಸಿಕೊಂಡು ಬಂದರು. ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲೂ ಸ್ವತಂತ್ರವಾಗಿ ಸ್ಪರ್ಧಿಸುವ ಮೂಲಕ ಬಿಜೆಪಿಗೆ ಅನುಕೂಲ ಮಾಡಿಕೊಟ್ಟರು.
ಇವಿಎಂನಿಂದಾಗಿ ತನ್ನ ಪಕ್ಷಕ್ಕೆ ಹಿನ್ನಡೆಯಾಗುತ್ತಿದೆ ಎನ್ನುವುದನ್ನು ಪದೇ ಪದೇ ಹೇಳುತ್ತಾ ತನ್ನ ನಾಯಕತ್ವದ ವೈಫಲ್ಯಗಳನ್ನು ಮುಚ್ಚಿಕೊಳ್ಳುತ್ತಿರುವ ಮಾಯಾವತಿಯವರು ಈ ಇವಿಎಂ ವಿರುದ್ಧವಾದರೂ ಹೋರಾಟಗಳನ್ನು ರೂಪಿಸಿದ್ದಾರೆಯೇ ಎಂದರೆ ಅದೂ ಇಲ್ಲ. ಇವಿಎಂ ವಿರುದ್ಧ ವಿರೋಧ ಪಕ್ಷಗಳು ಹೋರಾಟಗಳನ್ನು ರೂಪಿಸುತ್ತಿರುವಾಗ ಅವರ ಜೊತೆಗೆ ಕೈಜೋಡಿಸಲು ಮಾಯಾವತಿ ಸಿದ್ಧರಿರಲಿಲ್ಲ. ನಿಜಕ್ಕೂ ಇವಿಎಂನಿಂದಾಗಿ ಬಹುಜನ ಪಕ್ಷಕ್ಕೆ ಹಿನ್ನಡೆಯಾಗಿದ್ದರೆ ಅದರ ವಿರುದ್ಧ ಬಹುಜನರನ್ನು ದೇಶಾದ್ಯಂತ ಸಂಘಟಿಸಿ ಚುನಾವಣಾ ಆಯೋಗದ ಮೇಲೆ ಒತ್ತಡಗಳನ್ನು ಹೇರಬೇಕಾಗಿತ್ತು. ಬರೇ ಪತ್ರಿಕಾ ಹೇಳಿಕೆಯನ್ನು ನೀಡುವುದರಿಂದ ಇವಿಎಂನ್ನು ರದ್ದುಗೊಳಿಸಲು ಸಾಧ್ಯವಿಲ್ಲ ಎನ್ನುವುದು ಮಾಯಾವತಿಯವರಿಗೆ ಗೊತ್ತಿಲ್ಲವೆ? ಸದ್ಯಕ್ಕಂತೂ ಇವಿಎಂ ರದ್ದಾಗುವುದಿಲ್ಲ. ಅಂದರೆ ಬಿಎಸ್ಪಿ ಭವಿಷ್ಯದಲ್ಲಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎನ್ನುವುದನ್ನು ಮಾಯಾವತಿಯೇ ಘೋಷಿಸಿದಂತಾಗಿದೆ. ಕನಿಷ್ಠ ಚಳವಳಿಯ ರೂಪದಲ್ಲಾದರೂ ಬಿಎಸ್ಪಿಯನ್ನು ಎಷ್ಟರಮಟ್ಟಿಗೆ ದೇಶದಲ್ಲಿ ಅವರು ಉಳಿಸಿಕೊಂಡಿದ್ದಾರೆ? ಎಂದರೆ ಅಲ್ಲೂ ನಿರಾಶೆಯೇ ಎದುರಾಗುತ್ತದೆ. ಸದ್ಯಕ್ಕೆ ಪಕ್ಷದ ನೇತೃತ್ವದ ಬಗ್ಗೆಯೇ ಗೊಂದಲಗಳಿವೆ. ತನ್ನ ಸೋದರಳಿಯನನ್ನು ಬಿಎಸ್ಪಿಯ ಉತ್ತರಾಧಿಕಾರಿಯಾಗಿ ಮಾಡಿದ ಮಾಯಾವತಿ ಬಳಿಕ, ಅವರನ್ನು ಪಕ್ಷದಿಂದಲೇ ಹೊರಹಾಕಿದರು. ಕಾಂಗ್ರೆಸ್-ಎಸ್ಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವ ಒತ್ತಡ ಹೇರಿದ ಕಾರಣಕ್ಕಾಗಿಯೇ ಅವರನ್ನು ಪಕ್ಷದಿಂದ ಹೊರ ಹಾಕಲಾಯಿತು ಎನ್ನುವ ಆರೋಪಗಳಿವೆ. ಇದರ ಹಿಂದೆ ಬಿಜೆಪಿಯ ಕೈವಾಡವಿದೆ ಎಂದು ದಲಿತ ನಾಯಕ ಉದಿತ್ ರಾಜ್ ಆರೋಪಿಸಿದ್ದರು. ಇದೀಗ ಮತ್ತೆ ಮಾಯಾವತಿಯವರು ತನ್ನ ಸೋದರಳಿಯನನ್ನು ಪಕ್ಷದ ರಾಷ್ಟ್ರೀಯ ಸಂಯೋಜಕರಾಗಿ ನೇಮಕ ಮಾಡಿದ್ದಾರೆ.
ಬಿಎಸ್ಪಿ ತನ್ನ ಗತವೈಭವವನ್ನು ಮರಳಿ ಪಡೆಯಬೇಕಾದರೆ ಅದು ಕಾನ್ಶೀರಾಂ ಚಿಂತನೆಗಳನ್ನು ಮತ್ತೆ ತನ್ನದಾಗಿಸಿಕೊಳ್ಳಬೇಕು. ಸರ್ವಜನರ ಭ್ರಮೆಯಿಂದ ಹೊರಬಂದು ಮತ್ತೆ ಬಹುಜನರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಬೇಕು. ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ್ಗದ ಜನರ ನೋವು ಸಂಕಟಗಳಿಗೆ ತಳಸ್ತರದಿಂದ ಆಂದೋಲನಗಳನ್ನು ರೂಪಿಸಬೇಕು. ಜಾತ್ಯತೀತ ಪಕ್ಷಗಳೇ ತನ್ನ ಪ್ರಥಮ ಶತ್ರು ಎನ್ನುವ ನಿಲುವಿನಿಂದ ಹಿಂದೆ ಸರಿದು, ಬಿಜೆಪಿಯನ್ನು ಮತ್ತು ಆರೆಸ್ಸೆಸ್ನ್ನು ಎದುರಿಸಲು ಜಾತ್ಯತೀತ ಶಕ್ತಿಗಳ ಜೊತೆಗೆ ಹೊಂದಾಣಿಕೆ ನಡೆಸಲು ಹಿಂಜರಿಯಬಾರದು. ನಿಜಕ್ಕೂ ಹ್ಯಾಕ್ ಆಗಿರುವುದು ಇವಿಎಂ ಅಲ್ಲ, ಬಿಎಸ್ಪಿಯ ಸಿದ್ಧಾಂತ ಎನ್ನುವುದನ್ನು ಅರ್ಥ ಮಾಡಿಕೊಂಡು ತನ್ನನ್ನು ತಾನು ತಿದ್ದಿಕೊಂಡರೆ ಬಿಎಸ್ಪಿ ಗತವೈಭವಕ್ಕೆ ಮರಳುವುದು ಕಷ್ಟವೇನಿಲ್ಲ. ತಾನೇ ತೋಡಿದ ಖೆಡ್ಡಾದೊಳಗೆ ಬಿಎಸ್ಪಿಯ ಆನೆ ಬಿದ್ದು ಬಿಟ್ಟಿದೆ. ಆ ಖೆಡ್ಡಾದಿಂದ ಹೊರ ಬರಬೇಕೋ ಬೇಡವೋ ಎನ್ನುವುದನ್ನು ನಿರ್ಧರಿಸಬೇಕಾದವರು ಸ್ವತಃ ಮಾಯಾವತಿಯೇ ಆಗಿದ್ದಾರೆ.