Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಜಾತಿ ಗಣತಿಯ ಬುಟ್ಟಿಯೊಳಗಿರುವುದು...

ಜಾತಿ ಗಣತಿಯ ಬುಟ್ಟಿಯೊಳಗಿರುವುದು ನಾಗರಹಾವೋ? ಕೇರೆಹಾವೋ?

ವಾರ್ತಾಭಾರತಿವಾರ್ತಾಭಾರತಿ20 Feb 2025 8:15 AM IST
share
ಜಾತಿ ಗಣತಿಯ ಬುಟ್ಟಿಯೊಳಗಿರುವುದು ನಾಗರಹಾವೋ? ಕೇರೆಹಾವೋ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಪಟ್ಟಣಗಳ ಬಸ್‌ನಿಲ್ದಾಣಗಳಲ್ಲಿ ಹೊಟ್ಟೆ ಪಾಡಿಗಾಗಿ ಹಾವು ಆಡಿಸುವವರನ್ನು ನಾವು ಕಾಣಬಹುದು. ಅವರು ಡೋಲು ಬಡಿಯುತ್ತಾ ನಮ್ಮ ಮುಂದೆ ಹಾವಿನ ಬುಟ್ಟಿಯನ್ನು ಮುಂದಿಡುತ್ತಾರೆ. ‘ಅದರೊಳಗೆ ಭಾರೀ ಗಾತ್ರದ ಹಾವಿದೆ, ಅದನ್ನು ಈಗ ಹೊರಗೆ ಬಿಡುತ್ತೇನೆ’ ಎಂದೂ ಡೋಲು ಬಡಿಯುತ್ತಾ ಉದ್ದಕ್ಕೂ ಪಟಪಟನೆ ಮಾತನಾಡುತ್ತಿರುತ್ತಾರೆ. ಸೇರಿದ ಜನರೆಲ್ಲ, ಹಾವನ್ನು ಈಗ ಬಿಡುತ್ತಾನೆ ಎಂದು ಕಾಯುತ್ತಾ ಮಾತುಗಳನ್ನು ಆಲಿಸುತ್ತಿರುತ್ತಾರೆ. ‘‘ಹಾವನ್ನು ಈಗ ಬಿಟ್ಟೆ, ಇನ್ನೇನು ಬಿಟ್ಟೆ... ಇಕೋಬಿಟ್ಟೆ...’’ ಎಂಬ ಹಾವಾಡಿಗನ ಮಾತನ್ನು ನಂಬಿ ನೆರೆದ ಜನರು ಕಾದದ್ದೇ ಬಂತು. ಕೊನೆಗೂ ಹಾವಾಡಿಗ ಬುಟ್ಟಿ ತೆರೆಯುವುದೂ ಇಲ್ಲ. ಹಾವು ಹೊರ ಬರುವುದೂ ಇಲ್ಲ. ಆಟ ಮುಗಿದು ಹೋಗಿರುತ್ತದೆ.

ಹಿಂದುಳಿದ ವರ್ಗಗಳ ಆಯೋಗದ ಬುಟ್ಟಿಯೊಳಗಿಂದ ‘ಜಾತಿ ಗಣತಿ ವರದಿ’ಯನ್ನು ಈಗ ಹೊರ ಬಿಡುತ್ತೇನೆ, ನಾಳೆ ಹೊರ ಬಿಡುತ್ತೇನೆ ಎಂದು ಮುಖ್ಯಮಂತ್ರಿ ಭರವಸೆ ನೀಡುತ್ತಲೇ ಇದ್ದಾರೆ. ಆದರೆ ಬುಟ್ಟಿಯಿಂದ ಹಾವು ಹೊರ ಬರುತ್ತಿರುವ ಸೂಚನೆಗಳು ಕಾಣುತ್ತಿಲ್ಲ. ಕನಿಷ್ಟ ಅದರೊಳಗಿರುವುದು ಕೇರೇ ಹಾವೋ, ನಾಗರಹಾವೋ ಎನ್ನುವುದನ್ನು ನೋಡುವ ಭಾಗ್ಯವೂ ಜನರಿಗೆ ಸಿಗುವ ಸೂಚನೆಗಳಿಲ್ಲ. ‘‘ಜಾತಿ ಗಣತಿ ವರದಿಯು ವೈಜ್ಞಾನಿಕವಾಗಿ ನಡೆದಿದ್ದು ಅದನ್ನು ನಮ್ಮ ಸರಕಾರ ಖಂಡಿತವಾಗಿಯೂ ಜಾರಿಗೊಳಿಸುತ್ತದೆ. ಇದರಲ್ಲಿ ಯಾವುದೇ ಸಂಶಯ ಬೇಡ’’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಹಿಂದುಳಿದ ವರ್ಗಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಈ ಭರವಸೆಯನ್ನು ನೀಡಿದ್ದಾರಾದರೂ, ಯಾವಾಗ ವರದಿ ಬಹಿರಂಗವಾಗುತ್ತದೆ, ಸದನದಲ್ಲಿ ಯಾವಾಗ ಚರ್ಚೆಯಾಗುತ್ತದೆ ಎನ್ನುವುದನ್ನು ತಿಳಿಸಿಲ್ಲ. ಜಾತಿ ಗಣತಿ ಪೂರ್ತಿಯಾಗಿ ದಶಕಗಳು ಉರುಳಿವೆ. ಸಿದ್ದರಾಮಯ್ಯ ನೇತೃತ್ವದ ಅಂದಿನ ಸರಕಾರವೇ ಈ ಗಣತಿಗೆ ಆದೇಶ ನೀಡಿತ್ತು. ದೇಶದಲ್ಲೇ ಮೊದಲಬಾರಿಗೆ ನಡೆಯುವ ಮಾದರಿ ಗಣತಿ ಎನ್ನುವ ಹೆಗ್ಗಳಿಕೆಗೂ ಇದು ಪಾತ್ರವಾಗಿತ್ತು. ಆದರೆ ಗಣತಿಗೆ ಆದೇಶ ನೀಡಿದಾಗ ಇದ್ದ ಉತ್ಸಾಹ ಅದನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಕಾಣುತ್ತಿಲ್ಲ. ಬಿಜೆಪಿ ಸರಕಾರ ಜಾತಿ ಗಣತಿಯನ್ನು ವಿರೋಧಿಸುತ್ತಲೇ ಬಂದಿರುವುದರಿಂದ, ಅದರ ಅವಧಿಯಲ್ಲಿ ಗಣತಿ ಜಾರಿಗೊಳ್ಳುವುದು ದೂರದ ಮಾತು. ಇದಾದ ಬಳಿಕ ಜೆಡಿಎಸ್ ಜೊತೆಗೆ ಕಾಂಗ್ರೆಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಾಗಲೂ ಅದು ಜಾರಿಯಾಗುವುದಕ್ಕೆ ಕೆಲವು ಅಡೆತಡೆಗಳಿದ್ದವು. ಒಕ್ಕಲಿಗರ ಅಧಿಕೃತ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದ ಎಚ್. ಡಿ. ಕುಮಾರಸ್ವಾಮಿಯವರು ಜಾತಿ ಗಣತಿಯ ಬಗ್ಗೆ ಒಳಗಿಂದೊಳಗೆ ಅತೃಪ್ತಿಯನ್ನು ಹೊಂದಿದ್ದರು. ಆದರೆ ಇದೀಗ ಮತ್ತೆ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಬಹುಮತದಿಂದ ಸರಕಾರ ರಚನೆ ಮಾಡಿದೆ. ಅಧಿಕಾರ ಹಿಡಿದ ಬೆನ್ನಿಗೇ ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಿ ದೇಶದಲ್ಲೇ ಮೊದಲ ಜಾತಿ ಗಣತಿ ವರದಿಯನ್ನು ಜಾರಿಗೊಳಿಸಿದ ಹೆಗ್ಗಳಿಕೆಯನ್ನು ಕರ್ನಾಟಕ ತನ್ನದಾಗಿಸಿಕೊಳ್ಳಬಹುದಿತ್ತು. ಆದರೆ ಕರ್ನಾಟಕದ ಬಳಿಕ ಈ ಕಾರ್ಯಕ್ಕೆ ಇಳಿದ ಬಿಹಾರ, ದೇಶದಲ್ಲಿ ಮೊದಲ ಬಾರಿಗೆ ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸಿದ ರಾಜ್ಯವಾಗಿ ಗುರುತಿಸಲ್ಪಟ್ಟಿತು. ಅದಾದ ಬಳಿಕವಾದರೂ ಸಿದ್ದರಾಮಯ್ಯ ಅವರು ಜಾತಿ ಗಣತಿ ವರದಿಯನ್ನು ಬಿಡುಗಡೆಗೊಳಿಸುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಆ ಬಳಿಕವೂ ಸರಕಾರ ವರದಿಯನ್ನು ಜಾರಿಗೊಳಿಸುವ ಧೈರ್ಯವನ್ನು ಪ್ರದರ್ಶಿಸಲಿಲ್ಲ. ಎಲ್ಲವೂ ಸರಿಯಾಗಿದ್ದಿದ್ದರೆ ಕಳೆದ ಅಧಿವೇಶನದಲ್ಲಿ ಈ ಜಾತಿ ಗಣತಿ ಚರ್ಚೆಗೆ ಬರಬೇಕಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸರಕಾರ ಮುಂದೂಡಿತು.

ಬಿಹಾರದ ಬಳಿಕ ತೆಲಂಗಾಣವೂ ಜಾತಿಗಣತಿ ವರದಿಯನ್ನು ಬಹಿರಂಗ ಪಡಿಸಿದೆ. ಜಾರ್ಖಂಡ್ ಕೂಡ ಜಾತಿ ಗಣತಿಯನ್ನು ನಡೆಸುವ ಇಂಗಿತವನ್ನು ಹೊಂದಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ನೇತೃತ್ವದ ಹಲವು ರಾಜ್ಯಗಳು ಜಾತಿಗಣತಿಯ ಬಗ್ಗೆ ಮೃದು ನಿಲುವನ್ನು ತಳೆದಿರುವ ಕಾರಣದಿಂದಾಗಿ ಆರೆಸ್ಸೆಸ್ ಮತ್ತು ಕೇಂದ್ರ ಸರಕಾರ ನೇರವಾಗಿ ಜಾತಿಗಣತಿಯ ವಿರುದ್ಧ ಹೇಳಿಕೆಯನ್ನು ನೀಡುವುದನ್ನು ನಿಲ್ಲಿಸಿದೆ. ಕರ್ನಾಟಕದಲ್ಲೂ ಬಿಜೆಪಿ ನಾಯಕರು ಹಿಂದಿನಂತೆ ಈಗ ಜಾತಿ ಗಣತಿಯನ್ನು ಬಹಿರಂಗವಾಗಿ ವಿರೋಧಿಸುತ್ತಿಲ್ಲ. ಬದಲಿಗೆ ರಾಜ್ಯದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ ಬಲಿಷ್ಠ ಜಾತಿಗಳನ್ನು ತನ್ನ ಖೆಡ್ಡಾಕ್ಕೆ ಕೆಡವಿ ಆ ಜಾತಿಗಳ ಮುಖಂಡರ ಮೂಲಕ ತನ್ನ ಮಾತುಗಳನ್ನು ಹೇಳಿಸುತ್ತಿವೆೆ. ಕಾಂಗ್ರೆಸ್‌ನೊಳಗಿರುವ ಲಿಂಗಾಯತ ಮತ್ತು ಒಕ್ಕಲಿಗ ನಾಯಕರಿಂದಲೇ ವರದಿಯನ್ನು ವಿರೋಧಿಸುವಂತೆ ಮಾಡಿ ತಾನು ದೂರದಲ್ಲಿ ನಿಂತು ಆಟ ನೋಡುತ್ತಿದೆ. ಬುಟ್ಟಿಯಿಂದ ಹಾವನ್ನು ಹೊರಬಿಟ್ಟರೆ ಎಲ್ಲಿ ಹಾವು ತನ್ನನ್ನೇ ಕಚ್ಚೀತೋ ಎನ್ನುವ ಭಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಾಡುತ್ತಿರುವಂತಿದೆ. ಯಾಕೆಂದರೆ, ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನ, ಉಪಮುಖ್ಯಮಂತ್ರಿ ಹೆಸರಿನಲ್ಲಿ ಕಾಂಗ್ರೆಸ್‌ನೊಳಗೆ ದಲಿತ-ಲಿಂಗಾಯತ-ಒಕ್ಕಲಿಗ ಎಂದು ಸಣ್ಣದಾಗಿ ಬಿರುಕು ಕಾಣಿಸಿಕೊಂಡಿದೆ. ಕಾಂಗ್ರೆಸ್‌ನೊಳಗಿರುವ ಒಕ್ಕಲಿಗ ಮತ್ತು ಲಿಂಗಾಯತ ಮುಖಂಡರು ಜಾತಿ ಗಣತಿ ವರದಿಯನ್ನು ವಿರೋಧಿಸುತ್ತಿರುವುದರಿಂದ, ವರದಿಯನ್ನು ಬಹಿರಂಗಗೊಳಿಸಿದರೆ ಕಾಂಗ್ರೆಸ್‌ನೊಳಗಿರುವ ಬಿಕ್ಕಟ್ಟು ಇನ್ನಷ್ಟು ಹೆಚ್ಚಬಹುದು ಎನ್ನುವ ಭೀತಿ ಅವರಿಗಿದೆ. ಆದುದರಿಂದಲೇ, ತಾನೇ ಆದೇಶ ನೀಡಿ ನಡೆಸಿದ ಜಾತಿಗಣತಿ ಸಮೀಕ್ಷೆಯ ವರದಿಗೆ ಇದೀಗ ತಾನೇ ಹೆದರಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

ಜಾತಿ ಗಣತಿಯ ಬಗ್ಗೆ ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್‌ಗಾಂಧಿಯವರು ತಮ್ಮ ಸ್ಪಷ್ಟ ಅಭಿಪ್ರಾಯವನ್ನು ತಿಳಿಸಿದ್ದಾರೆ ಮಾತ್ರವಲ್ಲ, ಯಾವೆಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆಯೋ ಅಲ್ಲೆಲ್ಲಾ ಜಾತಿ ಗಣತಿಗಳನ್ನು ನಡೆಸಿ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಜಾತಿಗಣತಿಯ ಬಗ್ಗೆ ರಾಹುಲ್‌ಗಾಂಧಿಗೆ ಇರುವ ಬದ್ಧತೆ ರಾಜ್ಯದಲ್ಲಿ ಕೆಲವು ಕಾಂಗ್ರೆಸ್ ನಾಯಕರಿಗೆ ಇಲ್ಲ ಎನ್ನುವುದು ಸ್ಪಷ್ಟವಾಗಿದೆ ಮತ್ತು ಅವರೇ ಇಂದು ಜಾತಿ ಗಣತಿ ವರದಿ ಜಾರಿಯಾಗುವುದಕ್ಕೆ ದೊಡ್ಡ ಅಡ್ಡಿಯಾಗಿದ್ದಾರೆ. ಹಿಂದುಳಿದ ವರ್ಗಗಳ ಮುಖಂಡರು ಮತ್ತು ಸಂಘಸಂಸ್ಥೆಗಳ ಮುಖ್ಯಸ್ಥರೊಂದಿಗೆ ನಡೆಸಿದ ಸಭೆಯಲ್ಲಿ ಜಾತಿಗಣತಿಯ ಅಗತ್ಯವನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ತಮ್ಮದೇ ಪಕ್ಷದ ಹಿರಿಯ ಲಿಂಗಾಯತ ಮತ್ತು ಒಕ್ಕಲಿಗ ನಾಯಕರಿಗೆ ಜಾತಿಗಣತಿಯ ಅಗತ್ಯವನ್ನು, ಅನಿವಾರ್ಯತೆಯನ್ನು ಮುಖ್ಯಮಂತ್ರಿ ವಿವರಿಸಬೇಕಾಗಿದೆ. ಮೊದಲು ಅವರನ್ನು ಈ ವಿಷಯದಲ್ಲಿ ಸಾಕ್ಷರಗೊಳಿಸುವ ಅಗತ್ಯವಿದೆ. ತನ್ನದೇ ಪಕ್ಷದ ಹಿರಿಯ ನಾಯಕರು ಜಾತಿಗಣತಿ ವಿಷಯದಲ್ಲಿ ಆರೆಸ್ಸೆಸ್ ಮಾತುಗಳನ್ನು ನಂಬಲು ಸಿದ್ಧರಿದ್ದಾರೆ, ಆದರೆ ಮುಖ್ಯಮಂತ್ರಿಯ ಮಾತುಗಳನ್ನು ನಂಬಲು ಸಿದ್ಧವಿಲ್ಲ ಎಂದಾದರೆ ನಾಯಕತ್ವಕ್ಕೆ ಏನು ಅರ್ಥ ಉಳಿಯಿತು? ದುರ್ಬಲರ ಪರವಾಗಿ ಕಾಂಗ್ರೆಸ್ ಸರಕಾರ ನಿಲ್ಲುತ್ತದೆ ಎನ್ನುವ ಮಾತಿಗೆ ಅರ್ಥ ಬರಬೇಕಾದರೆ, ಮೊದಲು ಜಾತಿಗಣತಿ ವರದಿ ಚರ್ಚೆಗೆ ಬರಬೇಕು. ಜಾತಿ ಗಣತಿಯ ಬುಟ್ಟಿಯಲ್ಲಿರುವುದು ಕೇರೆ ಹಾವೋ, ನಾಗರಹಾವೋ ಎನ್ನುವುದು ಮೊದಲು ಜನತೆಗೆ ಗೊತ್ತಾಗಬೇಕು. ಈ ನಿಟ್ಟಿನಲ್ಲಿ, ಜಾತಿಗಣತಿ ವರದಿಯ ಬಗ್ಗೆ ಡೋಲು ಬಾರಿಸುವುದನ್ನು ನಿಲ್ಲಿಸಿ, ಮುಂದಿನ ಅಧಿವೇಶನದಲ್ಲಿ ಚರ್ಚೆಗೆ ಇಡಲು ಸಿದ್ದರಾಮಯ್ಯ ಅವರು ಕ್ರಮ ತೆಗೆದುಕೊಳ್ಳಬೇಕಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X