ಜಾತಿ ಗಣತಿ: ವಿರೋಧಿಗಳ ಮುಖವಾಡ ಬಯಲು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎನ್ನುವ ಗಾದೆ ರಾಜ್ಯದಲ್ಲಿ ನಡೆಸುವ ಜಾತಿಗಣತಿ ವರದಿಯ ಹಿನ್ನೆಲೆಯಲ್ಲೇ ಸೃಷ್ಟಿಯಾಗಿರಬೇಕು. ದೇಶದಲ್ಲೇ ಮೊದಲ ಬಾರಿಗೆ ರಾಜ್ಯವು ಮಾದರಿ ಜಾತಿಗಣತಿಯ ಯೋಜನೆಯನ್ನು ಹಮ್ಮಿಕೊಂಡಿತು. ಎಲ್ಲವೂ ಸರಿಯಾಗಿದ್ದರೆ ಈ ಗಣತಿಯ ವರದಿ ಇಂದು ಜಾರಿಗೊಂಡು, ಸಾಮಾಜಿಕ ನ್ಯಾಯದ ಪ್ರಕ್ರಿಯೆಯಲ್ಲಿ ಇಡೀ ದೇಶಕ್ಕೆ ದಿಕ್ಸೂಚಿಯಾಗಿ ಬಿಡುತ್ತಿತ್ತು. ಆದರೆ ರಾಜ್ಯದ ಜಾತಿ ಗಣತಿ ವರದಿ ಮಂಡನೆಯಾಗುವುದಕ್ಕೆ ಸಾವಿರ ವಿಘ್ನಗಳು ಎದುರಾದವು. ಸುಮಾರು ಹತ್ತು ವರ್ಷಗಳಾದರೂ ವರದಿಯ ಮಂಡನೆ ಸಾಧ್ಯವಾಗಲಿಲ್ಲ. ಕರ್ನಾಟಕದ ಬಳಿಕ ಜಾತಿ ಗಣತಿಯನ್ನು ಆರಂಭಿಸಿದ ಬಿಹಾರ ಜಾತಿ ಗಣತಿ ವರದಿಯನ್ನು ಮಂಡಿಸಿದ ಪ್ರಥಮ ರಾಜ್ಯವಾಗಿ ಗುರುತಿಸಿಕೊಂಡಿತು. ಬಿಹಾರ ಮಂಡನೆ ಮಾಡಿದ ಬಳಿಕವೂ ಕರ್ನಾಟಕಕ್ಕೆ ಗಣತಿಯ ವರದಿಯನ್ನು ಜನರ ಮುಂದಿಡಲು ಸಾಧ್ಯವಾಗಲಿಲ್ಲ. ಮಂಡನೆಗೆ ಮುನ್ನವೇ ಈ ವರದಿ ಮಾಧ್ಯಮಗಳಲ್ಲಿ ಸೋರಿಕೆಯಾಯಿತು. ಅಷ್ಟೇ ಅಲ್ಲ, ಕೆಲವು ಬಲಾಢ್ಯ ಜಾತಿಗಳು ಗಣತಿಯಲ್ಲಿ ಲೋಪದೋಷಗಳಿವೆ ಎಂದು ಆರೋಪ ಮಾಡತೊಡಗಿದವು. ಆರಂಭದಲ್ಲಿ ಬಿಜೆಪಿ ಜಾತಿ ಗಣತಿಯ ಬಗ್ಗೆಯೇ ಆಕ್ಷೇಪಗಳನ್ನು ವ್ಯಕ್ತಪಡಿಸಿತ್ತು. ಹಿಂದೂಧರ್ಮವನ್ನು ಒಡೆಯುವ ಸಂಚು ಇದು ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದರು. ಆದರೆ ಯಾವಾಗ ಕೇಂದ್ರ ಸರಕಾರ ಜಾತಿಗಣತಿಯ ಬಗ್ಗೆ ಮೃದು ನಿಲುವನ್ನು ಹೊಂದಿತೋ ಅಲ್ಲಿಂದ ಜಾತಿಗಣತಿಯನ್ನು ವಿರೋಧಿಸಲು ಬೇರೆ ತಂತ್ರವನ್ನು ಅನುಸರಿಸಿದರು. ಲಿಂಗಾಯತ, ಒಕ್ಕಲಿಗ ಸಂಘಟನೆಗಳ ಮುಖಂಡರಿಗೆ ಜಾತಿಗಣತಿಯ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡುತ್ತಾ, ಅವರನ್ನು ಮುಂದಿಟ್ಟುಕೊಂಡು ಜಾತಿಗಣತಿಯನ್ನು ವಿರೋಧಿಸತೊಡಗಿದರು. ಗಣತಿಯಲ್ಲಿ ದೋಷಗಳಿವೆ, ಇದರಿಂದ ತಮ್ಮ ಸಮುದಾಯಕ್ಕೆ ಹಿನ್ನಡೆಯಾಗುತ್ತದೆ ಎನ್ನುವ ತಕರಾರುಗಳನ್ನು ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಮುಖಂಡರು ಎತ್ತಿದರು. ವಿಪರ್ಯಾಸವೆಂದರೆ, ಸರಿಯಾದ ಮಾಹಿತಿಗಳನ್ನು ನೀಡಿ ಅವರನ್ನು ಸರಿದಾರಿಗೆ ತರಬೇಕಾಗಿದ್ದ ಕಾಂಗ್ರೆಸ್‌ನೊಳಗಿರುವ ಒಕ್ಕಲಿಗ ಮತ್ತು ಲಿಂಗಾಯತ ಮುಖಂಡರೂ ಆರೆಸ್ಸೆಸ್ ತೋಡಿದ ಹಳ್ಳಕ್ಕೆ ಬಿದ್ದರು. ಜಾತಿಗಣತಿಯ ಕುರಿತಂತೆ ತನ್ನದೇ ಪಕ್ಷದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಕಾಂಗ್ರೆಸ್ ಮುಖಂಡರು ವಿಫಲರಾದರು. ಇನ್ನು ಉಳಿದ ಪಕ್ಷದ ನಾಯಕರನ್ನು ದೂರಿ ಪ್ರಯೋಜನವೇನಿದೆ?
ತನ್ನದೇ ಪಕ್ಷದ ಒಳಗಿನ ವಿರೋಧಗಳನ್ನು ಎದುರಿಸಲಾಗದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನಿವಾರ್ಯವಾಗಿ ಈ ಹಿಂದಿನ ವರದಿಯನ್ನು ಕಸದಬುಟ್ಟಿಗೆ ಹಾಕಿದರು. ‘‘ಈಗಾಗಲೇ ನಡೆಸಿರುವ ಗಣತಿಯು ಹತ್ತು ವರ್ಷ ಹಳೆಯದಾದ ಕಾರಣ ಮರು ಸರ್ವೇ ನಡೆಸುತ್ತಿದ್ದೇವೆ. ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಂಡಿದ್ದೇವೆ. ಮರುಸರ್ವೇ ಮಾಡಿ ತಪ್ಪುಗಳನ್ನು ತಿದ್ದಿಕೊಳ್ಳುತ್ತೇವೆ. ಕೈಬಿಟ್ಟ ಜಾತಿಗಳ ಹೆಸರುಗಳನ್ನು ಸೇರಿಸುತ್ತೇವೆ’’ ಎಂದು ಕಳೆದ ಜೂನ್‌ನಲ್ಲಿ ಸಮಜಾಯಿಷಿ ನೀಡಿದರು. ಅದರಂತೆ, ಸೆ. 22ರಿಂದ ಜಾತಿಗಣತಿ ಆರಂಭವಾಗುತ್ತದೆ ಎಂದು ಸರಕಾರ ಇದೀಗ ಹೇಳಿಕೊಂಡಿದೆ. ಹತ್ತು ವರ್ಷಗಳ ಹಿಂದಿನ ಗಣತಿಗೆ 140 ಕೋಟಿ ರೂಪಾಯಿ ವೆಚ್ಚವಾಗಿದ್ದರೆ, ಇದೀಗ ಸುಮಾರು 425 ಕೋಟಿ ರೂ. ವೆಚ್ಚದಲ್ಲಿ ಮರು ಸರ್ವೇ ನಡೆಸಲು ಸರಕಾರ ನಿರ್ಧರಿಸಿದೆ. ಈ ಸಮೀಕ್ಷೆಯ ಅಂತಿಮ ಉದ್ದೇಶ ಈ ನಾಡಿನ ಏಳು ಕೋಟಿ ಜನರ ಜಾತಿಗಳ ಗಣತಿ ಮಾಡುವುದು ಮಾತ್ರವಲ್ಲ, ಅವರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳನ್ನು ತಿಳಿದುಕೊಳ್ಳುವುದಾಗಿದೆ. ಅಲ್ಲಿ ಸಿಕ್ಕಿದ ಮಾಹಿತಿಯ ಆಧಾರದಲ್ಲಿ ಸಾಮಾಜಿಕ ಅಭಿವೃದ್ಧಿಯ ಕಾರ್ಯಕ್ರಮಗಳನ್ನು ಮರು ರೂಪಿಸುವುದು. ಆದರೆ ಸರಕಾರ ಜಾತಿಗಣತಿಯ ಮರು ಸರ್ವೇಗೆ ಆದೇಶ ನೀಡಿದ ಬೆನ್ನಿಗೇ ಮತ್ತೆ ಆಕ್ಷೇಪಗಳು ವ್ಯಕ್ತವಾಗುತ್ತಿವೆ. ಈ ಹಿಂದೆ ನಡೆಸಿದ ಸಮೀಕ್ಷೆಯೇ ಸರಿಯಿಲ್ಲ ಎಂದವರು, ಇದೀಗ ಸಮೀಕ್ಷೆಗೆ ಮುನ್ನವೇ ತಮ್ಮ ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಅಂದರೆ ಇವರ ನಿಜವಾದ ಉದ್ದೇಶವೇನು? ಯಾವ ರೀತಿಯಲ್ಲಿ ಜಾತಿಗಣತಿಯನ್ನು ನಡೆಸಬೇಕು ಎಂದು ಇವರು ಬಯಸುತ್ತಿದ್ದಾರೆ?
ಬಲಾಢ್ಯ ಜಾತಿಗಳ ಮುಖಂಡರ ಕೆಲವು ಅಭಿಪ್ರಾಯಗಳಂತೆ 331 ಜಾತಿಗಳು ಹೆಚ್ಚುವರಿಯಾಗಿ ಸೇರ್ಪಡೆಯಾಗಿರುವುದರಿಂದ ಸಮುದಾಯಗಳಲ್ಲಿ ಗೊಂದಲ ಉಂಟಾಗಿದೆಯಂತೆ. ಹಾಗೆಯೇ ಲಿಂಗಾಯತ ಸಮುದಾಯಗಳಲ್ಲಿಯೂ ಹಲವು ರೀತಿಯ ಅಸಮಾಧಾನಗಳಿವೆ. ಮುಖ್ಯವಾಗಿ ವೀರಶೈವ ಮತ್ತು ಲಿಂಗಾಯತರ ನಡುವೆ ಭಿನ್ನಾಭಿಪ್ರಾಯಗಳಿವೆ. ಕೆಲವರು ವೀರಶೈವ-ಲಿಂಗಾಯತ ಒಂದೇ ಧರ್ಮವಲ್ಲ ಎಂದು ವಾದಿಸುತ್ತಿದ್ದರೆ, ಹಿಂದುತ್ವವಾದಿ ಶಕ್ತಿಗಳು ಲಿಂಗಾಯತವು ಹಿಂದೂ ಧರ್ಮದ ಒಂದು ಭಾಗ ಎಂದು ವಾದಿಸುತ್ತಿವೆೆ. ಇದೇ ಸಂದರ್ಭದಲ್ಲಿ ಲಿಂಗಾಯತ ಸಂಘಟನೆಗಳು, ‘ಲಿಂಗಾಯತ ಎನ್ನುವುದು ಸ್ವತಂತ್ರ ಧರ್ಮ. ಅದು ಹಿಂದೂ ಧರ್ಮದ ಭಾಗವಲ್ಲ’ ಎಂದು ಸ್ಪಷ್ಟವಾಗಿ ಘೋಷಿಸಿಕೊಂಡಿವೆ. ಇವೆಲ್ಲದರ ನಡುವೆ ಬಲಾಢ್ಯ ಜಾತಿಗಳಿಗೆ ತಮ್ಮ ತಮ್ಮ ಜಾತಿಗಳ ಅಂಕಿಸಂಕಿಗಳ ಬಂಡವಾಳ ಬಯಲಾಗುತ್ತದೆ ಎನ್ನುವ ಭಯವೂ ಇದೆ. ಆದುದರಿಂದ, ಜಾತಿಗಣತಿಯನ್ನು ಮುಂದೂಡಬೇಕು ಎಂದು ಅವುಗಳು ಒತ್ತಡ ಹಾಕುತ್ತಿವೆ. ಇವರ ಆಕ್ಷೇಪಗಳನ್ನು ಯಾವ ರೀತಿಯಲ್ಲಿ ಸರಕಾರ ಪರಿಹರಿಸಲು ಸಾಧ್ಯ? ಕೇವಲ ಬಲಾಢ್ಯ ಜಾತಿಗಳ ಮೂಗಿನ ನೇರಕ್ಕೆ ಗಣತಿ ಮಾಡುವುದೇ ಆಗಿದ್ದರೆ ಜಾತಿಗಣತಿಯ ಅಗತ್ಯವಾದರೂ ಏನಿದೆ? ಎನ್ನುವ ಪ್ರಶ್ನೆ ಇದೀಗ ಎದ್ದಿದೆ.
ದುರ್ಬಲಜಾತಿಗಳ ಸ್ಥಿತಿಗತಿಗಳ ಮಾಹಿತಿಗಳು ಸರಿಯಾಗಿಲ್ಲದೇ ಇರುವುದರಿಂದ ಸರಕಾರದ ಸವಲತ್ತು ಕೆಲವೇ ಬಲಾಢ್ಯ ಸಮುದಾಯಗಳು ತಮ್ಮದಾಗಿಸಿಕೊಳ್ಳುತ್ತಿವೆ ಎನ್ನುವ ಆರೋಪ ಸ್ವಾತಂತ್ರ್ಯೋತ್ತರ ದಿನಗಳಿಂದ ಕೇಳಿ ಬರುತ್ತಿದೆ. ಸಾಮಾಜಿಕ ನ್ಯಾಯದ ಹಂಚಿಕೆಯಾಗಬೇಕಾದರೆ ಎಲ್ಲ ಜಾತಿಗಳ ಅದರಲ್ಲೂ ದುರ್ಬಲ ಜಾತಿಗಳ ಅಂಕಿಅಂಶಗಳು ಬಯಲಾಗಬೇಕು. ಯಾರೋ ಕೆಲವು ಜಾತಿ ಮುಖಂಡರ ಮೂಗಿನ ನೇರಕ್ಕೆ ಗಣತಿ ನಡೆದರೆ ಅದು ತನ್ನ ಉದ್ದೇಶವನ್ನು ಸಾಧಿಸಿಕೊಳ್ಳುವುದಿಲ್ಲ. ಈಗ ಇರುವ 331 ಜಾತಿಗಳನ್ನು ಸರಕಾರ ಹೆಚ್ಚುವರಿಯಾಗಿ ಸೇರ್ಪಡೆ ಮಾಡಿಲ್ಲ. ಅವುಗಳನ್ನು ಈವರೆಗೆ ನಿರ್ಲಕ್ಷಿಸಲಾಗಿತ್ತು ಎನ್ನುವುದನ್ನು ಗಮನಿಸಬೇಕು. ಜಾತಿಗಳನ್ನು ಸೃಷ್ಟಿಸಿರುವುದು ಸರಕಾರವಲ್ಲ. ಈ ಸಾಮಾಜಿಕ ವ್ಯವಸ್ಥೆ ಕೆಲವು ಸಮುದಾಯಗಳನ್ನು ತುಳಿಯುವುದಕ್ಕಾಗಿ ಈ ಜಾತಿ ಉಪಜಾತಿಗಳನ್ನು ಸೃಷ್ಟಿಸಿದೆ. ಯಾರನ್ನಾದರೂ ದೂರುವುದಿದ್ದರೆ ಈ ಜಾತಿ ಅಸಮಾನತೆಯನ್ನು ಸೃಷ್ಟಿಸಿದ ಪುರೋಹಿತಶಾಹಿ ವ್ಯವಸ್ಥೆಯನ್ನು ದೂರಬೇಕು. ಆ ವ್ಯವಸ್ಥೆಯನ್ನು ಬೆಂಬಲಿಸುವ ಬಿಜೆಪಿ ಮತ್ತು ಆರೆಸ್ಸೆಸ್‌ನ್ನು ದೂರಬೇಕು. ಸಂವಿಧಾನವು ತುಳಿತಕ್ಕೊಳಗಾದ ಸಮುದಾಯಕ್ಕೆ ನ್ಯಾಯವನ್ನು ನೀಡಲು ನಿರ್ದೇಶನ ನೀಡಿದೆ. ಆ ನಿರ್ದೇಶನಕ್ಕೆ ತಲೆಬಾಗಿ ಕಾರ್ಯನಿರ್ವಹಿಸುವುದು ಸರಕಾರದ ಹೊಣೆಗಾರಿಕೆಯಾಗಿದೆ. ಅದನ್ನು ತಡೆಯಲು ಮುಂದಾಗುವವರು ಸಂವಿಧಾನ ವಿರೋಧಿಗಳು, ಸಾಮಾಜಿಕ ನ್ಯಾಯದ ವಿರೋಧಿಗಳು. ಅವರನ್ನು ಬದಿಗೆ ತಳ್ಳಿ ಸರಕಾರ ಮರು ಸಮೀಕ್ಷೆಗೆ ಮುಂದಾಗಬೇಕು.
ನಿಜ ಹೇಳುವುದಾದರೆ ಜಾತಿಗಣತಿಯ ವರದಿಯ ಬಗ್ಗೆ ವಿರೋಧ ಮಾಡುತ್ತಿರುವ ಜನರ ಅಸಲಿ ಮುಖವಾಡ ಇದೀಗ ಬಯಲಾಗಿದೆ. ಈ ಹಿಂದಿನ ಜಾತಿಗಣತಿ ಸರಿಯಾಗಿಲ್ಲ ಎಂದು ಹೇಳುತ್ತಿದ್ದ ಬಿಜೆಪಿ, ಇದೀಗ ‘ಜಾತಿಗಣತಿ ನಡೆಸುವುದೇ ಸರಿಯಲ್ಲ’ ಎನ್ನುವ ಮಟ್ಟಕ್ಕೆ ಬಂದಿದೆ. ಬಿಜೆಪಿಯ ಮುಖಂಡ ಬಸವರಾಜ ಹೊರಟ್ಟಿ ಹೇಳಿಕೆಯೊಂದರಲ್ಲಿ ‘‘ಜಾತಿಗಣತಿ ಸಮೀಕ್ಷೆ ನಡೆಸುವುದೇ ದೊಡ್ಡ ಅನಾಹುತ’’ ಎಂದಿದ್ದಾರೆ. ಆಳದಲ್ಲಿ ಇವರು ಜಾತಿಗಣತಿಯನ್ನೇ ವಿರೋಧಿಸುತ್ತಿದ್ದಾರೆ. ಹಿಂದುತ್ವದ ಹೆಸರಿನಲ್ಲಿ ಜಾತೀಯತೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ. ಆ ಮೂಲಕ ಸಾಮಾಜಿಕ ನ್ಯಾಯವನ್ನು ಅಲ್ಲಗಳೆಯುತ್ತಿದ್ದಾರೆ. ಅದನ್ನು ನೇರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಬೇರೆ ಬೇರೆ ನೆಪಗಳನ್ನು ಮುಂದಿಟ್ಟು ಜಾತಿಗಣತಿಯನ್ನು ವಿರೋಧಿಸುತ್ತಿದ್ದಾರೆ.







