ಜಾತಿ ಗಣತಿ: ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು

ಸಾಂದರ್ಭಿಕ ಚಿತ್ರ
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕಾಂತರಾಜು ನೇತೃತ್ವದಲ್ಲಿ ನಡೆಸಿದ ಜಾತಿಗಣತಿ ವರದಿಗೆ ಸಂಬಂಧಿಸಿ ಮರು ಸರ್ವೇ ನಡೆಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜಾತಿಗಣತಿ ಬಗ್ಗೆ ಹಿಂದುಳಿದ ವರ್ಗಗಳ ಆಯೋಗವು ಕೊಟ್ಟಿರುವ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಂಡು, ಕಾಲಮಿತಿಯಲ್ಲಿ ಜಾತಿ ಗಣತಿಯ ಮರು ಸರ್ವೇ ಮಾಡಲಾಗುವುದು. ಶೀಘ್ರದಲ್ಲಿ ದಿನಾಂಕವನ್ನು ಘೋಷಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ‘‘ಜಾತಿ ಗಣತಿ ವಿಚಾರವಾಗಿ ಎದ್ದಿರುವ ಅಪಸ್ವರ, ಸಮುದಾಯಗಳ ಅಂಕಿ ಅಂಶಗಳ ಬಗ್ಗೆ ಇರುವ ಗೊಂದಲ ನಿವಾರಣೆಗೆ ತೀರ್ಮಾನಿಸಲಾಗಿದೆ. ಮನೆ ಮನೆ ಸಮೀಕ್ಷೆ ಹಾಗೂ ಆನ್ಲೈನ್ ಮೂಲಕ ಎಲ್ಲರೂ ತಮ್ಮ ಮಾಹಿತಿಯನ್ನು ಮತ್ತೊಮ್ಮೆ ಸಲ್ಲಿಸಲು ಅವಕಾಶ ನೀಡಲಾಗುವುದು. ಈ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲಾಗುವುದು’’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಹೇಳಿದ್ದಾರೆ. ಕೊನೆಗೂ ಜಾತಿ ಗಣತಿ ವಿರೋಧಿಗಳ ಒತ್ತಡಕ್ಕೆ ರಾಜ್ಯ ಸರಕಾರ ಮಣಿದಿದ್ದು, ಸುಮಾರು 140 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿದ್ದ ಈ ಹಿಂದಿನ ಸಮೀಕ್ಷೆ ಕಸದ ಬುಟ್ಟಿ ಸೇರಲಿದೆ.
ರಾಜ್ಯ ಸರಕಾರ ಯಾಕೆ ಮರು ಸಮೀಕ್ಷೆಗೆ ಮುಂದಾಗಿದೆ ಎನ್ನುವ ಪ್ರಶ್ನೆಗೆ ಸರಿಯಾದ ಸ್ಪಷ್ಟನೆಯನ್ನು ಮುಖ್ಯಮಂತ್ರಿ ನೀಡಿಲ್ಲ. ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳಲಾಗಿದ್ದು, ಸಮೀಕ್ಷೆಯನ್ನು ಹೊಸದಾಗಿ ಮಾಡಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಹಿಂದಿನ ವರದಿಯಲ್ಲಿ ಗೊಂದಲಗಳು ಇವೆ ಎನ್ನುವ ಆರೋಪಗಳ ಕಾರಣದಿಂದ ಈ ಮರು ಸಮೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎನ್ನುವುದಾಗಿದ್ದರೆ, ಈ ಗೊಂದಲಗಳಿರುವ ಸಮೀಕ್ಷೆಯ ಆಧಾರದಲ್ಲಿ ನೀಡಿರುವ ವರದಿಯನ್ನು ತಾತ್ವಿಕವಾಗಿ ಒಪ್ಪಿಕೊಂಡದ್ದು ಎಷ್ಟರಮಟ್ಟಿಗೆ ಸರಿ? ಎನ್ನುವ ಪ್ರಶ್ನೆ ಏಳುತ್ತದೆ. ಎರಡನೆಯದಾಗಿ, ವರದಿಯನ್ನು ಈವರೆಗೆ ಮಂಡಿಸಿಲ್ಲ. ಹೀಗಿರುವಾಗ, ಸಮೀಕ್ಷೆಯಲ್ಲಿ ಗೊಂದಲಗಳಿವೆ, ಅಂಕಿಅಂಶಗಳು ಸರಿಯಿಲ್ಲ ಎನ್ನುವ ಆರೋಪವನ್ನು ಸರಕಾರವೇಕೆ ಗಂಭೀರವಾಗಿ ತೆಗೆದುಕೊಂಡಿದೆ? ಅಂದರೆ ವರದಿ ಸೋರಿಕೆಯಾಗಿರುವುದನ್ನು ಸರಕಾರ ಒಪ್ಪಿಕೊಂಡಂತಾಗಲಿಲ್ಲವೆ? ಜಾತಿಗಣತಿಯ ಬಗ್ಗೆ ಚರ್ಚೆ ನಡೆದು, ಅದರಲ್ಲಿರುವ ಮಾಹಿತಿಗಳಲ್ಲಿ ತಪ್ಪುಗಳಿವೆ ಎನ್ನುವುದು ಮನವರಿಕೆಯಾದ ಬಳಿಕ ಮರು ಸಮೀಕ್ಷೆಗೆ ಆದೇಶ ನೀಡಿದರೆ ಅದಕ್ಕೆ ಅರ್ಥವಿದೆ. ಜಾತಿಗಣತಿ ವರದಿಯಲ್ಲಿ ಏನಿದೆ, ಯಾವ ಯಾವ ಜಾತಿಗಳ ಜನರ ಸ್ಥಿತಿಗತಿ ಹೇಗಿವೆ ಎನ್ನುವ ಬಗ್ಗೆ ಮಾಧ್ಯಮಗಳು ಊಹಾಪೋಹಗಳ ಆಧಾರದಲ್ಲಿ ವರದಿ ಮಾಡುತ್ತಿವೆಯೇ ಹೊರತು, ಇನ್ನೂ ಸ್ಪಷ್ಟವಾದ, ಅಧಿಕೃತವಾದ ಮಾಹಿತಿಗಳು ಸರಕಾರದಿಂದ ಹೊರ ಬಿದ್ದಿಲ್ಲ. ಹೀಗಿರುವಾಗ ಏಕಾಏಕಿ ಸರಕಾರವೇ ತಾನು ಸಂಗ್ರಹಿಸಿದ ಅಂಕಿಅಂಶಗಳ ಬಗ್ಗೆ ನಂಬಿಕೆ ಕಳೆದುಕೊಂಡದ್ದು ಹೇಗೆ? ಆರೋಪಗಳು ಕೇಳಿ ಬಂದಿವೆ ಎನ್ನುವ ಒಂದೇ ಕಾರಣಕ್ಕಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಡೆಸಿದ ಸಮೀಕ್ಷೆಯನ್ನು ಕಸದ ಬುಟ್ಟಿಗೆ ಹಾಕುವುದು ಎಷ್ಟು ಸರಿ? ಈ ಆರೋಪಗಳ ಹಿನ್ನೆಲೆಯಲ್ಲಿ ಸರಕಾರ ಮರು ಸಮೀಕ್ಷೆ ನಡೆಸುತ್ತದೆ ಎಂದಾದರೆ ಈ ಆರೋಪಗಳಲ್ಲಿ ಹುರುಳಿದೆ ಎನ್ನುವುದನ್ನು ಸರಕಾರವೇ ಒಪ್ಪಿಕೊಂಡಂತಾಗುತ್ತದೆ. ಆಗ, ಅಂತಹ ತಪ್ಪುಗಳು ಎಲ್ಲಿ, ಯಾಕೆ ಸಂಭವಿಸಿತು? ಮತ್ತು ಅದರ ಹೊಣೆಗಾರ ಯಾರು? ಎನ್ನುವ ಪ್ರಶ್ನೆ ಏಳುತ್ತದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮಾಡಿರುವ ಸಮೀಕ್ಷೆ ವ್ಯರ್ಥವಾಗಿದೆ ಮಾತ್ರವಲ್ಲ, ಹೊಸ ಸಮೀಕ್ಷೆಗೆ ಸರಕಾರ ಇನ್ನಷ್ಟು ಹಣ ವ್ಯಯ ಮಾಡಬೇಕಾಗುತ್ತದೆ. ಪೋಲಾಗಿರುವ ಈ ಹಣ ಮತ್ತು ಸಮಯವನ್ನು ಸರಕಾರ ಯಾರ ತಲೆಗೆ ಕಟ್ಟಲಿದೆ ಎನ್ನುವುದು ಕೂಡ ಮುಖ್ಯವಾಗುತ್ತದೆ.
ವರದಿ ಮಂಡನೆಗೆ ಮುನ್ನವೇ ‘ವರದಿಯಲ್ಲಿ ತಪ್ಪುಗಳಿವೆ. ಈ ವರದಿಯನ್ನು ತಿರಸ್ಕರಿಸಿ’ ಎಂದು ಒತ್ತಾಯಿಸುತ್ತಿರುವವರು ನಿಜಕ್ಕೂ ವಿರೋಧಿಸುತ್ತಿರುವುದು ಕಾಂತರಾಜು ವರದಿಯನ್ನಲ್ಲ, ಬದಲಿಗೆ ಅವರು ಜಾತಿಗಣತಿಯನ್ನೇ ವಿರೋಧಿಸುತ್ತಿದ್ದಾರೆ ಎನ್ನುವ ಸತ್ಯ ಸರಕಾರಕ್ಕೆ ತಿಳಿಯದ್ದೇನೂ ಅಲ್ಲ. ವರದಿ ಸಿದ್ಧ್ದಗೊಂಡಿದ್ದರೂ ಅದನ್ನು ಸ್ವೀಕರಿಸಲು ಸರಕಾರಕ್ಕೆ ಸುಮಾರು 10 ವರ್ಷಗಳ ಕಾಲ ಹಿಡಿಯಿತು. ವರದಿ ಸ್ವೀಕರಿಸಲು ಇಷ್ಟು ತಡ ಯಾಕಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವುದೇ ಆಗಿದೆ. ಈ ನಾಡಿನ ಪ್ರಬಲ ಜಾತಿಗಳು ಈ ವರದಿಯನ್ನು ಸ್ವೀಕರಿಸುವುದಕ್ಕೆ ಅಡ್ಡಗಾಲು ಹಾಕುತ್ತಾ ಬಂದಿತ್ತು. ಬಿಜೆಪಿಯ ನಾಯಕರಂತೂ ಜಾತಿ ಗಣತಿಯನ್ನು ಬಹಿರಂಗವಾಗಿಯೇ ವಿರೋಧಿಸಿದ್ದರು. ‘ಹಿಂದೂ ಧರ್ಮವನ್ನು ಒಡೆಯುವುದಕ್ಕಾಗಿ ಜಾತಿ ಗಣತಿಯನ್ನು ಮಾಡಲಾಗಿದೆ’ ಎನ್ನುವುದು ಅವರ ವಾದವಾಗಿತ್ತು. ಆದರೆ ಇದೀಗ ಕೇಂದ್ರ ಸರಕಾರವೇ ಜಾತಿಗಣತಿಯ ಕುರಿತು ಒಲವು ತೋರಿಸುತ್ತಿರುವುದರಿಂದ ರಾಜ್ಯದ ನಾಯಕರು ಅನಿವಾರ್ಯವಾಗಿ ಜಾತಿಗಣತಿಯನ್ನು ಬೆಂಬಲಿಸಿದಂತೆ ನಟಿಸುತ್ತಾ ಒಕ್ಕಲಿಗ, ಲಿಂಗಾಯತ ಮುಖಂಡರನ್ನು ವರದಿಯ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ‘ಒಲ್ಲದ ಗಂಡನಿಗೆ ಮೊಸರಲ್ಲಿ ಕಲ್ಲು’ ಎನ್ನುವ ಗಾದೆಯಂತೆ ಜಾತಿಗಣತಿ ವರದಿಯನ್ನು ವಿರೋಧಿಸುವುದಕ್ಕೆ ಸಾಧ್ಯವಿಲ್ಲ ಎನ್ನುವ ಕಾರಣದಿಂದ, ಸಮೀಕ್ಷೆಯಲ್ಲಿ ತಪ್ಪುಗಳಿವೆೆ ಎಂದು ಆಕ್ಷೇಪಗಳನ್ನು ತೆಗೆದಿದ್ದಾರೆ. ಅಂದರೆ ಮಂಡನೆಯಾಗುವ ವರದಿಗೆ ತಾತ್ಕಾಲಿಕವಾಗಿ ತಡೆಯನ್ನು ಒಡ್ಡುವುದು ಅವರ ಉದ್ದೇಶವಾಗಿದೆ.
ಸರಕಾರ ಹೊಸದಾಗಿ ಸಮೀಕ್ಷೆ ನಡೆಸಲು ಮುಂದಾಗಿದೆ. ಈ ಸಮೀಕ್ಷೆಯಲ್ಲಿ ಒಕ್ಕಲಿಗ, ಲಿಂಗಾಯತರಂತಹ ಪ್ರಬಲ ಸಮುದಾಯಗಳಿಗೆ ಅನುಕೂಲವಾಗುವಂತೆ ಅಂಕಿಅಂಶಗಳನ್ನು ದಾಖಲಿಸುವುದಕ್ಕೆ ಸಾಧ್ಯವಿಲ್ಲ. ವಾಸ್ತವವನ್ನು ಮುಚ್ಚಿಡುವುದಕ್ಕೆ ಸಾಧ್ಯವಿಲ್ಲ. ಆಗಲೂ ಕೆಲವು ಸಮುದಾಯಗಳು ವರದಿ ತಮಗೆ ಪೂರಕವಾಗಿಲ್ಲ ಎನ್ನುವ ಕಾರಣಕ್ಕೆ, ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ಆರೋಪಿಸುವ ಸಾಧ್ಯತೆಗಳಿರುತ್ತವೆ. ಆಗ ಸರಕಾರ ಹೊಸದಾಗಿ ಮತ್ತೆ ಸರ್ವೇ ನಡೆಸಲು ಆದೇಶ ನೀಡುತ್ತದೆಯೆ? ಹೀಗೆ ಜಾತಿಗಣತಿಯನ್ನು ಸರಕಾರ ಎಲ್ಲಿಯವರೆಗೆ ಮುಂದೆ ಹಾಕುತ್ತಾ ಹೋಗುತ್ತದೆ?
ಸರಕಾರ ಮೊತ್ತ ಮೊದಲಾಗಿ, ನಿಜಕ್ಕೂ ಈ ಹಿಂದಿನ ಸಮೀಕ್ಷೆಯಲ್ಲಿ ತಪ್ಪುಗಳಿವೆಯೆ? ಇದ್ದರೆ ಏನೇನು ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಬೇಕು. ಆ ಬಳಿಕ ಯಾಕೆ ಸಂಭವಿಸಿತು ಎನ್ನುವುದರ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದಿಂದ ಸ್ಪಷ್ಟನೆಯನ್ನು ಕೇಳಬೇಕು. ತಪ್ಪುಗಳ ಹಿಂದೆ ಇರುವ ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಆ ಬಳಿಕವಷ್ಟೇ ಹೊಸ ಸಮೀಕ್ಷೆಗೆ ಆದೇಶ ನೀಡಬೇಕು. ಇಲ್ಲದೇ ಇದ್ದರೆ ಸರಕಾರ ಸರ್ವೇ ನಡೆಸುವುದು ಮತ್ತು ಪ್ರಬಲ ಜಾತಿಗಳು ಅದರಲ್ಲಿ ತಪ್ಪು ಹುಡುಕುವುದು ಮುಂದುವರಿಯುತ್ತಲೇ ಇರುತ್ತದೆ.