ಕಾವೇರಿ ಬಿಕ್ಕಟ್ಟು: ಒಗ್ಗಟ್ಟಿನ ಹೆಜ್ಜೆಗೆ ಯಶಸ್ಸು ಸಿಗಲಿ

Photo: tripthentic.com
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕರ್ನಾಟಕವನ್ನು ಸಂಕಷ್ಟಕ್ಕೆ ತಳ್ಳಿದ್ದ ಕಾವೇರಿ ಬಿಕ್ಕಟ್ಟಿಗೆ ಸದ್ಯ ಪ್ರಕೃತಿಯೇ ಪರಿಹಾರ ತಂದಿರುವುದರ ನಿರಾಳತೆಯ ನಡುವೆಯೇ, ಮುಂದಿನ ಸಂಕಷ್ಟದ ದಿನಗಳನ್ನು ಎದುರಿಸುವ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಗಂಭೀರ ಚಿಂತನೆಗೆ ಮುಂದಾಗಿರುವುದು ಒಳ್ಳೆಯ ಸೂಚನೆ. ಕಾವೇರಿ ನೀರು ಹಂಚಿಕೆಯ ಸಂಬಂಧ ಜುಲೈ 2ರಂದು ಕರೆಯಲಾಗಿದ್ದ ಸರ್ವಪಕ್ಷ ಸಭೆಯಲ್ಲಿ ಒಗ್ಗಟ್ಟು ವ್ಯಕ್ತವಾಗಿದೆ. ರೈತರ ಹಿತ ಮತ್ತು ಕುಡಿಯುವ ನೀರಿನ ಅಗತ್ಯಗಳಿಗೆ ಮೊದಲ ಆದ್ಯತೆ ನೀಡಲು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟಿರುವುದು ಮಹತ್ವದ ಬೆಳವಣಿಗೆ.
ಬಿಳಿಗುಂಡ್ಲು ಗಡಿ ಮಾಪನ ಕೇಂದ್ರದಲ್ಲಿ 15 ದಿನಗಳ ಕಾಲ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಯುವಂತೆ ನೋಡಿಕೊಳ್ಳಲು ಜುಲೈ 28ರಂದು ಕಾವೇರಿ ನೀರು ನಿಯಂತ್ರಣ ಸಮಿತಿ ಕರ್ನಾಟಕಕ್ಕೆ ಸೂಚಿಸಿತ್ತು. ಈ ಆದೇಶವನ್ನು 15 ದಿನಗಳ ಕಾಲ ಮುಂದೂಡಲು ಹಾಗೂ ಜಲ ವೈಜ್ಞಾನಿಕ ಪರಿಸ್ಥಿತಿಯನ್ನು ಮರುಪರಿಶೀಲಿಸಲು ರಾಜ್ಯ ಸರಕಾರ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಿತ್ತಾದರೂ, ಜುಲೈ 30ರಂದು ಪ್ರಾಧಿಕಾರ ಕೂಡ ಸಿಡಬ್ಲ್ಯುಆರ್ಸಿ ಆದೇಶವನ್ನೇ ಎತ್ತಿಹಿಡಿದಿತ್ತು. ಇದರಿಂದ ಒಟ್ಟು ಸುಮಾರು 4 ಟಿಎಂಸಿ ನೀರನ್ನು ಹರಿಸಬೇಕಾದ ಪರಿಸ್ಥಿತಿ ಎದುರಾಗಿತ್ತು. ಈ ನಿರ್ದೇಶನ ಪಾಲಿಸುವುದು ಸರಕಾರಕ್ಕೆ ಕಷ್ಟಕರವಾಗಿತ್ತು. ರೈತರು ಹಾಗೂ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವಲ್ಲದೆ, ಆಗಸ್ಟ್ 13ರಂದು ಕರ್ನಾಟಕ ಬಂದ್ಗೂ ಕರೆ ನೀಡಿದ್ದವು. ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸರಕಾರ ವಿಫಲವಾಗಿದೆ ಎಂದು ಬಿಜೆಪಿ ತಗಾದೆ ತೆಗೆದಿತ್ತು. ಇಂಥ ಸ್ಥಿತಿಯಿದ್ದಾಗಲೇ ಇದ್ದಕ್ಕಿದ್ದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿನ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯ ಭರ್ತಿಯಾಗಿ, ತಮಿಳುನಾಡಿಗೆ ತಾನಾಗಿಯೇ ಹೆಚ್ಚಿನ ನೀರು ಹರಿಯುತ್ತಿರುವುದು ಕರ್ನಾಟಕವನ್ನು ಇಕ್ಕಟ್ಟಿನಿಂದ ಪಾರುಮಾಡಿದೆ.
ಸರ್ವಪಕ್ಷ ಸಭೆಯ ನಂತರ ಮಾತನಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾನೂನು ಚೌಕಟ್ಟಿನೊಳಗೆ ಕರ್ನಾಟಕದ ಹಿತಾಸಕ್ತಿಯನ್ನು ರಕ್ಷಿಸಲು ಸರಕಾರ ಬದ್ಧವಾಗಿದೆ ಎಂದಿದ್ದಾರೆ. ಕುಡಿಯುವ ನೀರಿನ ಅಗತ್ಯಗಳಿಗೆ ಗಮನ ನೀಡಿಯೇ ಮುಂದಿನ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಮತ್ತು ಬದಲಾಗುತ್ತಿರುವ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತ, ಕಾನೂನು ಮತ್ತು ಕೃಷಿ ತಜ್ಞರ ಸಲಹೆ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಅಲ್ಲದೆ, ಪ್ರಸ್ತಾವಿತ ಆಗಸ್ಟ್ 13ರ ಬಂದ್ ಹಿಂಪಡೆಯುವಂತೆಯೂ ಅವರು ಮನವಿ ಮಾಡಿದ್ದಾರೆ. ಸರ್ವಪಕ್ಷ ಸಭೆಗೂ ಮೊದಲು ನೀಡಿದ್ದ ಹೇಳಿಕೆಗಳಲ್ಲೂ ಸಿಎಂ ವಿವೇಚನೆಯ ನಿಲುವು ತೋರಿದ್ದರೆಂಬುದು ಗಮನಾರ್ಹ. ನದಿಯ ನೀರು ಯಾರ ಸ್ವತ್ತೂ ಅಲ್ಲ ಎನ್ನುವ ಮೂಲಕ ಅವರು ಪ್ರಕೃತಿಯನ್ನು ಮೀರಿ ನಡೆದುಕೊಳ್ಳಲಾಗದೆಂದು ಪ್ರತಿಪಾದಿಸಿದ್ದರು. ಅಲ್ಲದೆ, ನೀರು ಹರಿಸುವುದಿಲ್ಲ ಎಂದು ಕೂತರೆ, ಜಲಾಶಯಗಳು ತುಂಬಿದ ಹೊತ್ತಿನಲ್ಲಿ ನೀರು ಕಟ್ಟಿಡಲು ಆಗುವುದಿಲ್ಲ ಎಂಬುದರ ಬಗ್ಗೆಯೂ ಮನವರಿಕೆ ಮಾಡಿಕೊಟ್ಟಿದ್ದರು.
ಕಾವೇರಿ ನೀರು ಹಂಚಿಕೆಯ ವಿಷಯವು ರಾಜಕೀಯವನ್ನೂ ಮೀರಿ ಮಳೆಯ ಸ್ಥಿತಿಯನ್ನು ಅವಲಂಬಿಸಿದ್ದಾಗಿದೆ. ನಾಲ್ಕು ರಾಜ್ಯಗಳ ನಡುವೆ ಕಾವೇರಿ ನೀರು ಹಂಚಿಕೆಯಾಗುತ್ತಿದ್ದರೂ, ಮುಖ್ಯ ಬಿಕ್ಕಟ್ಟು ತಲೆದೋರುವುದು ಕರ್ನಾಟಕ ಮತ್ತು ತಮಿಳುನಾಡುಗಳ ನಡುವೆ. ಬ್ರಿಟಿಷರು ಹೋದರೂ, ಅವರಿಟ್ಟ ಜಗಳದ ಬತ್ತಿ ಮತ್ತೆ ಮತ್ತೆ ಹೊತ್ತಿಕೊಳ್ಳುತ್ತ, ಸ್ಫೋಟಿಸುತ್ತಲೇ ಇರುತ್ತದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಬೀಳಬೇಕಾದ ಮಳೆ ಬೀಳದಿದ್ದಾಗಲೆಲ್ಲ ಈ ಎರಡೂ ರಾಜ್ಯಗಳ ನಡುವೆ ಕಾವೇರಿ ವಿವಾದ ಭುಗಿಲೇಳುತ್ತದೆ. ಸಾಮಾನ್ಯ ಜಲವರ್ಷದಲ್ಲಿ ಯಾವ ರಾಜ್ಯಗಳಿಗೆ ಎಷ್ಟು ನೀರು ಹಂಚಿಕೆಯಾಗಬೇಕು ಎಂಬುದೇನೋ ತೀರ್ಮಾನವಾಗಿದೆ. ಆದರೆ ಸಮಸ್ಯೆ ತಲೆದೋರುವುದೇ ವಾಡಿಕೆಯ ಮಳೆಯಾಗದೆ ನೀರಿನ ಕೊರತೆಯಾದಾಗ. ಇಂಥ ಸ್ಥಿತಿಯಲ್ಲಿ ಏನು ಮಾಡಬೇಕು ಎಂಬ ಸಂಕಷ್ಟ ಸೂತ್ರವೇ ಇಲ್ಲದಿರುವುದು ವಿವಾದ ಭುಗಿಲೇಳುವುದಕ್ಕೆ ಕಾರಣ. ಮಳೆಯಿಲ್ಲದೆ ನೀರಿನ ಕೊರತೆ ಎದುರಾದಾಗ ಕರ್ನಾಟಕ ಎಷ್ಟು ನೀರನ್ನು ಉಳಿಸಿಕೊಳ್ಳಬೇಕು, ತಮಿಳುನಾಡಿಗೆ ಎಷ್ಟು ನೀರನ್ನು ಬಿಡಬೇಕು ಎಂಬುದು ಬಗೆಹರಿಯದ ಪ್ರಶ್ನೆಯಾಗಿದೆ. ಇದನ್ನು ನಿರ್ಧರಿಸುವ ಯಾವುದೇ ಮಾನದಂಡವಿಲ್ಲವಾಗಿದೆ. ಹೀಗಿರುವಾಗ, ಕಾವೇರಿ ನೀರಿನ ವಿಚಾರದಲ್ಲಿ ತಮಿಳುನಾಡು ವಿಚಿತ್ರ ರಾಜಕೀಯ ಮಾಡುತ್ತಲೇ ಬಂದಿದೆಯೆಂಬ ಆರೋಪಗಳಿವೆ. ಮಳೆಯಾಗದೆ ನೀರಿನ ಕೊರತೆಯಾದಾಗಲೇ ನೀರು ಹರಿಸಲು ಕರ್ನಾಟಕ ತಕರಾರೆತ್ತುತ್ತದೆ ಎಂಬ ವಾಸ್ತವ ತಮಿಳುನಾಡಿಗೂ ಗೊತ್ತು. ಆದರೆ ಅದು ಈ ವಾಸ್ತವಕ್ಕೆ ಕಿವಿಗೊಟ್ಟದ್ದೇ ಇಲ್ಲ. ತನ್ನ ಪಾಲಿನ ನೀರನ್ನು ಲೆಕ್ಕಾಚಾರ ಹಾಕಿ ಪಟ್ಟು ಹಿಡಿದು ಕೇಳುತ್ತದೆ. ತನ್ನ ರೈತರ ಕಷ್ಟ ಹೇಳುವ ಅದು ಕರ್ನಾಟಕದ ರೈತರಿಗೂ ಕಷ್ಟವಿದೆ ಎನ್ನುವುದನ್ನು ಬೇಕೆಂದೇ ಅಲಕ್ಷಿಸುತ್ತದೆ. ನೀರು ಹಂಚಿಕೆ ಮತ್ತು ನೀರು ಬಿಡುವುದರ ಮೇಲ್ವಿಚಾರಣೆ ಮಾಡುವ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರ ಕೂಡ ತಮಿಳುನಾಡಿನ ಪರವಾಗಿಯೇ ನಿಲ್ಲುವುದಿದೆ ಎಂಬ ಆರೋಪಗಳೂ ಇವೆ. ಮೊನ್ನೆ ತಮಿಳುನಾಡು ಸರಕಾರಕ್ಕಿಂತಲೂ ಪ್ರತಿಪಕ್ಷ ಡಿಎಂಕೆ ತಾನೇ ಮುಂದಾಗಿ, ತಕ್ಷಣ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ಸೂಚಿಸಲು ಕೋರಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿತು. ಇದು ರಾಜಕೀಯ ಸೇಡು ತೀರಿಸಿಕೊಳ್ಳಲು ರೈತರ ನೆಪ ಮುಂದಿಡುವ, ಕಾವೇರಿ ವಿವಾದವನ್ನು ಬಳಸಿಕೊಳ್ಳುವ ಆಟದಂತೆಯೂ ಕಂಡಿತು. ಕರ್ನಾಟಕ ನೀರು ಬಿಡಲೇಬೇಕೆಂದು ಪಟ್ಟು ಹಿಡಿಯುವ ತಮಿಳುನಾಡು, ತನ್ನಲ್ಲಿ ಪೋಲಾಗುತ್ತಿರುವ ನೀರನ್ನು ಉಳಿಸಿಕೊಳ್ಳುವ ಜವಾಬ್ದಾರಿಯನ್ನೂ ಮರೆಯಬಾರದು. ಎರಡೂ ರಾಜ್ಯಗಳ ರೈತರ ಕಷ್ಟವೂ ಒಂದೇ ಎಂಬುದನ್ನು ಮನಗಾಣಲು ರಾಜಕೀಯದ ಆಚೆ ನಿಂತು ನೋಡಬೇಕಾಗುತ್ತದೆ. ಕಾವೇರಿ ವಿವಾದ ಎರಡು ರಾಜ್ಯಗಳ ಸಂಘರ್ಷಕ್ಕೆ ಅಥವಾ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗದಂತೆ ನೋಡಿಕೊಳ್ಳಬೇಕಾಗಿದೆ. ಇಂಥ ಹೊಣೆಯನ್ನು ನಿಭಾಯಿಸುವ ಮತ್ತು ತಮಿಳುನಾಡಿಗೂ ಇದನ್ನೇ ಹೇಳುವ ನಿಟ್ಟಿನಲ್ಲಿ ಈಗ ಕರ್ನಾಟಕ ಸರಕಾರ ನಿಂತಿರುವುದು ಮತ್ತು ರಾಜ್ಯದ ಸರ್ವಪಕ್ಷಗಳು ಒಗ್ಗಟ್ಟಾಗಿರುವುದು ಸಂಕಷ್ಟ ಸೂತ್ರವನ್ನು ಕಂಡುಕೊಳ್ಳುವ ಹಾದಿಯಲ್ಲಿನ ಹೆಜ್ಜೆಯಾದೀತೆಂದು ಆಶಿಸಬಹುದು.






