ಬಣ್ಣ ಬದಲಿಸುವುದೇ ಅಭಿವೃದ್ಧಿಯಲ್ಲ

Photo: x.com/TheHockeyIndia
ಹಾಕಿ ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲಿರುವ ಭಾರತದ ಪುರುಷರ ಮತ್ತು ಮಹಿಳಾ ತಂಡಗಳ ಆಟಗಾರರ ಜರ್ಸಿಯ ನೀಲ ಬಣ್ಣ ಏಕಾಏಕಿ ಬದಲಾಗಿ ಕೇಸರಿ ಬಂದಿದೆ. ಬಣ್ಣ ಮತ್ತು ಹೆಸರುಗಳನ್ನು ಬದಲಿಸುವುದೂ ಅಭಿವೃದ್ಧಿ ಕಾರ್ಯ ಎಂದುಕೊಂಡಂತಿರುವ ಕೇಂದ್ರ ಸರಕಾರ ಮತ್ತು ಬಿಜೆಪಿ ಆಡಳಿತ ಇರುವ ರಾಜ್ಯ ಸರಕಾರಗಳ ನಡೆಗಳನ್ನು ಗಮನಿಸಿದವರಿಗೆ ಇದು ಅಚ್ಚರಿ ಎನಿಸದು. ಹಾಕಿಯಲ್ಲಿ ಭಾರತದ ಪರಂಪರೆ ಅನನ್ಯ. 1928 ರಿಂದ 1956ರ ವರೆಗೆ ಸತತ ಚಿನ್ನವೂ ಸೇರಿದಂತೆ ಭಾರತ ಒಟ್ಟು ಎಂಟು ಸಲ ಪ್ರಶಸ್ತಿ ಗೆದ್ದಿದೆ. ವಿಶ್ವಕಪ್ ಅಲ್ಲದೆ ಏಶ್ಯದ ಬಹುತೇಕ ಪ್ರತಿಷ್ಠಿತ ಟ್ರೋಫಿಗಳನ್ನು ಗೆದ್ದಿದೆ. ಶತಮಾನದ ಶ್ರೇಷ್ಠತೆಯ ಈ ಭಾರತೀಯ ಆಟಗಾರರು ಹಿಂದೆ ಎಂದೂ ಕೇಸರಿ ಜರ್ಸಿ ಧರಿಸಿರಲಿಲ್ಲವಲ್ಲ. ಆದರೆ ಎರಡು ದಿನಗಳ ಹಿಂದೆ ಹಾಕಿ ಇಂಡಿಯಾ ತನ್ನ ಪ್ರಕಟಣೆಯಲ್ಲಿ ಭಾರತದ ಹೆಮ್ಮೆಯನ್ನು ಎತ್ತಿ ಹಿಡಿಯಲು ಜರ್ಸಿಯ ಬಣ್ಣವನ್ನು ಕೇಸರಿಗೆ ಬದಲಿಸಲಾಗಿದೆ ಎಂದಿದೆ. ಹಾಗಿದ್ದರೆ ಹಿಂದಿನ ಸಾಲು ಸಾಲು ಸಾಧನೆಗಳು ಭಾರತದ ಹೆಮ್ಮೆಯನ್ನು ಎತ್ತಿ ಹಿಡಿಯಲಿಲ್ಲವೇ? ನೀಲ ಜರ್ಸಿ ಮತ್ತು ಎದೆಯ ಮೇಲಣ ಅಶೋಕ ಚಕ್ರ ದಶಕಗಳಿಂದ ಭಾರತ ತಂಡದ ಅಸ್ಮಿತೆಯಾಗಿದೆ. ನೂರಾರು ಅಂತರ್ರಾಷ್ಟ್ರೀಯ ಪಂದ್ಯಗಳ ಗೆಲುವು ಸೋಲು ಸಂತಸ ಸಂಭ್ರಮ ಅಳು ದುಃಖಗಳೆಲ್ಲದರ ಜತೆಗೆ ಹೆಮ್ಮೆಯ ನೀಲ ಜರ್ಸಿ ಮಿಂದೆದ್ದಿದೆ. ಬ್ರೆಝಿಲ್ ಫುಟ್ಬಾಲ್ ತಂಡ ಅದು ಹೇಗೆ ಹಳದಿ ರಂಗಿನ ಒಳಗೆ ಬೆರೆತು ಹೋಗಿದೆಯೋ, ಅದೇ ರೀತಿ ಭಾರತ ಹಾಕಿ ತಂಡವೆಂದರೆ ನಮ್ಮ ಸ್ಮೃತಿಪಟಲದಲ್ಲಿ ಮೂಡುವುದೇ ನೀಲ ವರ್ಣದ ಜೀವಕಳೆ. ಈ ಬಣ್ಣದ ಬದಲಾವಣೆ ಎಂದರೆ ಅದು ದಶಕಗಳ ರೋಚಕ ನೆನಪುಗಳ ಭಾವ ಪ್ರಪಂಚದ ಕನ್ನಡಿ ಒಡೆದಂತೆ.
‘ಹಾಕಿ ಇಂಡಿಯಾ’ದ ಈ ಬಣ್ಣದಾಟದ ಹಿಂದಿರುವ ಕಾಣದ ಕೈ ಕೇಂದ್ರ ಸರಕಾರವೇ ಹೌದು. ಆದರೆ ಇಂತಹ ಬಣ್ಣ ಬದಲಾವಣೆಗಳಿಂದ ಹಾಕಿಯ ಅಭಿವೃದ್ಧಿಯಂತೂ ಸಾಧ್ಯವಿಲ್ಲ. ಇಂತಹ ಚಟುವಟಿಕೆಗಳ ಬದಲು ‘ಒಡಿಶಾ ಮಾದರಿ’ಯನ್ನು ಕೇಂದ್ರ ಸರಕಾರ ಅನುಸರಿಸಿದ್ದರೆ ಎಲ್ಲರ ಮೆಚ್ಚುಗೆಗೆ ಪಾತ್ರ ವಾಗುತ್ತಿತ್ತು. ರಾಷ್ಟ್ರೀಯ ತಂಡ ಕಾರ್ಪೊರೇಟ್ ಪ್ರಾಯೋಜಕತ್ವ ಇಲ್ಲದೆ ನಿತ್ರಾಣ ಸ್ಥಿತಿಯಲ್ಲಿದ್ದಾಗ ಒಡಿಶಾ ಸರಕಾರ ಈ ತಂಡಕ್ಕೆ ಪ್ರಾಯೋಜಕತ್ವ ನೀಡಿತು. ಜಾಗತಿಕ ದರ್ಜೆಯ ತರಬೇತಿ, ಸಲಕರಣೆ, ಪ್ರಯಾಣ ವೆಚ್ಚಗಳನ್ನು ನೀಡಲಾಯಿತು. ಇದರ ಭಾಗವಾಗಿಯೇ ರೂರ್ಕೆಲಾ ಮತ್ತು ಭುವನೇಶ್ವರಗಳಲ್ಲಿ ಉತ್ಕೃಷ್ಟ ಮಟ್ಟದ ಎರಡು ದೊಡ್ಡ ಹಾಕಿ ಕ್ರೀಡಾಂಗಣಗಳ ನಿರ್ಮಾಣವಾದವು. ಎರಡು ಸಲ ವಿಶ್ವಕಪ್ ಹಾಕಿ ಕೂಟಗಳಿಗೆ ಆತಿಥ್ಯ ವಹಿಸಲಾಯಿತು. ಜತೆಗೆ ಸುಂದರಗಡ ಜಿಲ್ಲೆಯೂ ಸೇರಿದಂತೆ ಆ ರಾಜ್ಯದ ಅನೇಕ ಕಡೆ ವಿಶೇಷ ತರಬೇತಿ ಶಿಬಿರಗಳನ್ನು ನಿರಂತರವಾಗಿ ನಡೆಸಲಾಯಿತು. ನೂರಾರು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಯಿತು. ಇವತ್ತು ಆ ರಾಜ್ಯದ ಸಾವಿರಾರು ಆಟಗಾರರು ಭಾರತದ ಅನೇಕ ಪ್ರತಿಷ್ಠಿತ ತಂಡಗಳಲ್ಲಿದ್ದಾರೆ, ಉದ್ಯೋಗ ಗಿಟ್ಟಿಸಿದ್ದಾರೆ. ಒಡಿಶಾ ಎಂದರೆ ಹಾಕಿ ಎನ್ನುವಷ್ಟರ ಮಟ್ಟಿಗೆ ಜಾಗತಿಕ ವಲಯದಲ್ಲಿ ಆ ರಾಜ್ಯ ಜನಜನಿತವಾಗಿದೆ. ಈ ಏರುಗತಿಯ ಹಿಂದೆ ಒಡಿಶಾ ಮುಖ್ಯಮಂತ್ರಿಯಾಗಿದ್ದ ನವೀನ್ ಪಟ್ನಾಯಕ್ ಅವರ ದಟ್ಟ ಹಾಕಿ ಪ್ರೀತಿಯೇ ಕಾರಣ. ಇವತ್ತು ಆ ರಾಜ್ಯದ ಎಲ್ಲೆಡೆಯೂ ಹಾಕಿ ಸಂಸ್ಕೃತಿ ಎದ್ದು ಕಾಣುತ್ತಿದೆ. ಈ ಕ್ರೀಡೆಗೆ ಬೇಕಾದ ಮೂಲಸೌಕರ್ಯ ಗಟ್ಟಿಯಾಗಿದೆ. ಶಾಲೆ ಕಾಲೇಜುಗಳಲ್ಲಿ ಹಾಕಿ ಅಪಾರ ಜನಪ್ರಿಯತೆ ಪಡೆದಿದೆ. ಹಳ್ಳಿಗಳಲ್ಲಿ ಜಾತಿಗಳನ್ನು ಮರೆತು ಎಲ್ಲರೂ ಒಗ್ಗೂಡುವ ಸಾಮಾಜಿಕ ಪರಿವರ್ತನೆ ಯತ್ತ ಈ ಹಾಕಿ ಕ್ರಾಂತಿ ಹೆಜ್ಜೆಗಳನ್ನಿಟ್ಟಿದೆ. ಜತೆಗೆ ಈ ಎಲ್ಲದರ ದ್ಯೋತಕವಾಗಿ ನಾಲ್ಕು ದಶಕಗಳ ನಂತರ ಭಾರತಕ್ಕೆ ಒಂದು ಒಲಿಂಪಿಕ್ ಪದಕವೂ ಬಂದಿತು. ದೇಶದಾದ್ಯಂತ ಒಡಿಶಾ ಮಾದರಿಯ ಚಟುವಟಿಕೆ ಸಾಧ್ಯವಾಗಿಸಿದರೆ, ಹಾಕಿಗೆ ಇದಕ್ಕಿಂತಲೂ ದೊಡ್ಡ ಕೊಡುಗೆ ಇನ್ನೇನಿದೆ. ಆದರೆ ಈ ಮಾದರಿ ಕೇಂದ್ರ ಸರಕಾರಕ್ಕೆ ಬೇಕಿರುವಂತೆನಿಸುತ್ತಿಲ್ಲ. ಪ್ರಸಕ್ತ ಒಡಿಶಾದಾದ್ಯಂತ ನೀಲವರ್ಣದ ಚಿತ್ತಾರ, ಸ್ಟಿಕ್ ಹಿಡಿದ ಆಟಗಾರ, ಅಶೋಕ ಚಕ್ರಗಳೇ ಹಾಸು ಹೊಕ್ಕಾಗಿವೆ. ಅಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ ಮೇಲೆ ‘ನೀಲ ಹಾಕಿ ಫಲಕ’ಗಳನ್ನು ಅಳಿಸುತ್ತಾ ಬಂದರೂ, ಜನಮನದಲ್ಲಿ ಹಾಕಿ ಸಾಧನೆಗಳ ಚಿತ್ರಣವನ್ನು ಅಳಿಸಲಾಗುತ್ತಿಲ್ಲ. ಹೀಗಾಗಿ ನವೀನ್ ಪಟ್ನಾಯಕ್ ಅವರೇ ಹೇಳುವಂತೆ ಬಿಜೆಪಿ ಆಡಳಿತ ಶುರುವಾದ ನಂತರ ಹಾಕಿಯ ಅಭಿವೃದ್ಧಿ ಯನ್ನು ಮುಂದುವರಿಸುವ ಬದಲು, ಹಾಕಿಗೆ ಹಿಂದೆ ನಾವು ಮಾಡಿದ್ದ ಕೆಲಸಗಳ ನೆನಪುಗಳನ್ನು ಜನರ ಮನಸ್ಸುಗಳಿಂದ ಅಳಿಸುತ್ತಾ ಬರತೊಡಗಿತು. ನಮ್ಮ ಆಡಳಿತವಿದ್ದಾಗ ಕಟ್ಟಿದ ಕಟ್ಟಡ, ಸೇತುವೆಗಳದ್ದಷ್ಟೇ ಅಲ್ಲ, ಬಸ್ಸುಗಳ ಬಣ್ಣವನ್ನೂ ಕಳೆದ ಎರಡು ವರ್ಷಗಳಲ್ಲಿ ಬದಲಿಸಿದರು. ಅದರ ಮುಂದುವರಿದ ಭಾಗವಾಗಿ ಇದೀಗ ರಾಷ್ಟ್ರೀಯ ತಂಡದ ಆಟಗಾರರ ಜರ್ಸಿಯ ಬಣ್ಣವನ್ನೂ ಬದಲಿಸಿದ್ದಾರೆ. ಇದು ಕೆಟ್ಟ ರಾಜಕಾರಣಕ್ಕೆ ಜೀವಂತ ನಿದರ್ಶನ ಎಂದಿದ್ದಾರೆ. ದಿಲೀಪ್ ತಿರ್ಕಿ ಅದೇ ರಾಜ್ಯದವರು. ಭಾರತ ಹಾಕಿ ತಂಡದ ನಾಯಕರಾಗಿದ್ದವರು. ನವೀನ್ ಪಟ್ನಾಯಕ್ ಅವರೇ ತಿರ್ಕಿ ಅವರನ್ನು ರಾಜ್ಯಸಭೆಗೆ ಕಳಿಸಿದ್ದಾರೆ. ಈಗ ತಿರ್ಕಿಯವರೇ ಹಾಕಿ ಇಂಡಿಯಾದ ಅಧ್ಯಕ್ಷರು. ಗಾಳಿ ಬೀಸಿದತ್ತ ಅವರೂ ವಾಲಿದ್ದಾರೆ. ಕೇಸರಿ ಜರ್ಸಿ ಬಳಸಲು ತಾಂತ್ರಿಕ ಸಮಿತಿಯ ಸಲಹೆ ಪಡೆಯಲಾಗಿದೆ ಮತ್ತು ಬಳಸಿದರೆ ತಪ್ಪೇನು ಎಂಬ ಧಾಟಿಯಲ್ಲಿ ಮಾತಾಡಿದ್ದಾರೆ. ನೀಲಬಣ್ಣದ ಸಿಂಥೆಟಿಕ್ ಟರ್ಫ್ ಮತ್ತು ಜರ್ಸಿಯ ಬಣ್ಣಗಳೆರಡೂ ಒಂದೇ ಆದಾಗ ದೃಷ್ಟಿಸಾಮ್ಯತೆಯ ತೊಡಕು ಉಂಟಾಗಿ ಆಟಗಾರರ ಗೋಚರತೆಯ ನಿಖರತೆಗೆ ಅಡ್ಡಿಯಾಗಬಹುದು ಎಂಬುದು ಹಾಕಿ ಇಂಡಿಯಾ ವಾದ. ಆದರೆ ಆಟಗಾರರು ಬಿಳಿಯ ಚಡ್ಡಿ ಧರಿಸಿರುವುದರಿಂದ ದೃಷ್ಟಿಸಾಮ್ಯತೆ ಉಂಟಾಗದಲ್ಲ ಎಂಬ ಮಾತೂ ಇದೆ. ತಂಡದ ತಾಂತ್ರಿಕ ಸಮಿತಿ, ನೆರವು ಸಮಿತಿ, ಆಟಗಾರರ ಅಭಿಪ್ರಾಯ ಗಳನ್ನು ಪಡೆದು ಆಡಳಿತಗಾರರು ಈ ತೀರ್ಮಾನಕ್ಕೆ ಬಂದಿದ್ದಾರಂತೆ. ಆದರೆ ಕಾರ್ಯಕಾರಿ ಸಮಿತಿಯಲ್ಲಿ ಈ ಬಗ್ಗೆ ಏಕೆ ಚರ್ಚಿಸಲಾಗಿಲ್ಲ ಎಂಬ ಪ್ರಶ್ನೆ ಎದ್ದಿದೆ. ತಂಡ ಹೊರಡಲು ಹತ್ತು ದಿನ ಇದೆ ಎನ್ನುವಾಗ ಈ ನಿರ್ಧಾರ ಹೊರ ಬಂದಿದೆ. ಈಗ ಚರ್ಚೆಗೂ ಕಾಲಾವಕಾಶ ಇಲ್ಲ. ಕುತೂಹಲದ ಸಂಗತಿ ಎಂದರೆ ವಿಶ್ವ ಅಗ್ರ ಕ್ರಮಾಂಕದ ಅರ್ಜೆಂಟೀನಾ ತಂಡದ ಆಟಗಾರರು ಬಳಸುವುದು ತಿಳಿ ನೀಲ ಬಣ್ಣದ ಜರ್ಸಿಗಳನ್ನೇ. ಅವರಿಗೆ ಇರದ ಕಣ್ಣಿನ ದೋಷ ನಮ್ಮ ಆಟಗಾರರಿಗೆ ಇದೆಯೇ ?
ಹಾಕಿ ಇಂಡಿಯಾ ಇಂತಹದ್ದೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ಹಿರಿಯ ಆಟಗಾರರ ಜತೆ ಸಮಾಲೋಚನೆ ನಡೆಸಬಹುದಿತ್ತು. ಮಾಸ್ಕೊ ಒಲಿಂಪಿಕ್ಸ್ ಚಿನ್ನ ಗೆದ್ದ ತಂಡದ ನಾಯಕ ಭಾಸ್ಕರನ್ ನಾನೂ ಇಂತಹದೇ ಟರ್ಫ್ ನಲ್ಲೂ ಆಡಿದವನೇ. ನನಗೆ ಯಾವುದೇ ಸಮಸ್ಯೆ ಉಂಟಾಗಿಲ್ಲವಲ್ಲ ಎಂದಿದ್ದಾರೆ. ಮೊದಲ ವಿಶ್ವಕಪ್ ಗೆದ್ದ ತಂಡದ ನಾಯಕ ಅಜಿತ್ ಪಾಲ್ ಸಿಂಗ್, ಇನ್ನೊಬ್ಬ ನಾಯಕ ಪರ್ಗತ್ ಸಿಂಗ್, ವೀರೇನ್ ರಸ್ಕಿನಾ ಕೂಡಾ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಸರಕಾರಗಳು ಕ್ರೀಡಾ ನಿಯಮಗಳನ್ನು ತಮ್ಮ ಪಕ್ಷಗಳ ಕಾರ್ಯಸೂಚಿಗೆ ಅನುಕೂಲವಾಗುವಂತೆ ಪರೋಕ್ಷವಾಗಿ ಬದಲಾಯಿಸಿ, ಕಾರ್ಯರೂಪಕ್ಕೆ ತರುತ್ತಿರುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಇಂತಹ ರಾಜಕೀಯ ಪ್ರೇರಿತ ಹಸ್ತಕ್ಷೇಪಗಳು ಕ್ರೀಡಾಸ್ಫೂರ್ತಿಗೆ ಧಕ್ಕೆ ತರುವಂತಹದ್ದು ಎಂಬುದನ್ನು ಅಧಿಕಾರಸ್ಥರು ಮನಗಾಣಬೇಕಿದೆ.






