ಬಾಲಕಾರ್ಮಿಕ ಪದ್ಧತಿ: ಪುನರ್ವಸತಿಯೇ ಸವಾಲು

ಸಾಂದರ್ಭಿಕ ಚಿತ್ರ Photo: x.com/TweetzBallari
ಮಕ್ಕಳ ಅಮೂಲ್ಯವಾದ ಬಾಲ್ಯ ಕಸಿದುಕೊಳ್ಳುವಂಥ ಯಾವುದೇ ಬಗೆಯ ಪ್ರಯತ್ನಗಳು ದಂಡನಾರ್ಹ. ಆಡುತ್ತಾ, ನಲಿದಾಡುತ್ತಾ ಕಲಿಯಬೇಕಾದ ವಯಸ್ಸಿನಲ್ಲಿ ಅವರನ್ನು ದುಡಿಮೆಗೆ ದೂಡುವುದು ಅಕ್ಷಮ್ಯ. ಬಾಲ ಕಾರ್ಮಿಕ ಪದ್ಧತಿ ನಿಷೇಧಕ್ಕೆ ಒಳಗಾಗಿದ್ದರೂ ವಾಸ್ತವದಲ್ಲಿ ಇನ್ನೂ ಆಚರಣೆಯಲ್ಲಿರುವ ಅನಿಷ್ಟ. ಅತಿಹೆಚ್ಚು ಬಾಲ ಕಾರ್ಮಿಕರನ್ನು ಹೊಂದಿರುವ ದೇಶಗಳಲ್ಲಿ ಭಾರತ ಇನ್ನೂ ಮುಂಚೂಣಿಯಲ್ಲಿ ಇರುವುದು ನಮಗೆ ಶೋಭೆ ತರುವಂತಹದಲ್ಲ. ಕಾನೂನಿನ ಪರಿಣಾಮಕಾರಿ ಅನುಷ್ಠಾನದಲ್ಲಿ ಆಗಿರುವ ಲೋಪಗಳಿಂದಲೇ ಈ ಅನಿಷ್ಟ ಪದ್ಧತಿ ಈಗಲೂ ಜೀವಂತವಾಗಿ ಉಳಿದಿದೆ. ಮತ್ತಷ್ಟು ದೃಢ ಸಂಕಲ್ಪದೊಂದಿಗೆ ಈ ಪಿಡುಗನ್ನು ಮೂಲೋತ್ಪಾಟನೆ ಮಾಡಿ, ಆ ಮೂಲಕ ಮಕ್ಕಳ ಹಕ್ಕುಗಳನ್ನು ಎತ್ತಿಹಿಡಿಯುವುದು ಯಾವುದೇ ನಾಗರಿಕ ಸಮಾಜದ ಆದ್ಯ ಕರ್ತವ್ಯ. ಈ ಸಂದೇಶವನ್ನು ಸಂಬಂಧಿಸಿದ ಎಲ್ಲ ಇಲಾಖೆಗಳಿಗೂ ಮತ್ತೆ ಮತ್ತೆ ಮನದಟ್ಟು ಮಾಡಿಕೊಡಬೇಕಾದ ಅಗತ್ಯವನ್ನು ಇತ್ತೀಚಿನ ಕಾರ್ಯಾಚರಣೆಯೊಂದು ನಮಗೆ ನೆನಪಿಸಿದೆ.
ಮಕ್ಕಳನ್ನು ದುಡಿಮೆಗೆ ದೂಡಿರುವುದನ್ನು ಪತ್ತೆಹಚ್ಚುವ ಸಲುವಾಗಿ ಇತ್ತೀಚೆಗೆ ಪೊಲೀಸರು ಮತ್ತು ಕಾರ್ಮಿಕ ಇಲಾಖೆಯ ಅಧಿಕಾರಿಗಳು ಬೆಂಗಳೂರು ನಗರ ಸೇರಿದಂತೆ ರಾಜ್ಯದ ವಿವಿಧೆಡೆ ವಿಶೇಷ ಕಾರ್ಯಾಚರಣೆ ನಡೆಸಿದಾಗ 800 ಬಾಲಕಾರ್ಮಿಕರು ಪತ್ತೆಯಾಗಿರುವುದಾಗಿ ವರದಿಯಾಗಿದೆ. ಹೋಟೆಲ್, ಮಾರುಕಟ್ಟೆ, ವಸತಿಗೃಹ, ಶೋರೂಂ, ಗ್ಯಾರೇಜ್, ಪೆಟ್ರೋಲ್ ಬಂಕ್, ಮಾಲ್, ಇ-ಕಾಮರ್ಸ್ ದಾಸ್ತಾನು ಮಳಿಗೆಗಳು ಒಳಗೊಂಡಂತೆ ರಾಜ್ಯದ 16,951 ಸ್ಥಳಗಳಿಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಪರಿಶೀಲಿಸಿದಾಗ ಶಾಲೆಗೆ ಹೋಗಿ ಅಕ್ಷರ ಕಲಿಯಬೇಕಾಗಿದ್ದ ಮಕ್ಕಳು ದುಡಿಮೆಗೆ ಹೆಗಲು ಕೊಟ್ಟಿರುವುದು ಕಂಡುಬಂದಿದೆ. ಈ ಮಕ್ಕಳಲ್ಲಿ ಕರ್ನಾಟಕದವರೂ ಇದ್ದಾರೆ. ಬಿಹಾರ, ರಾಜಸ್ಥಾನ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಅಸ್ಸಾಂ ಮೊದಲಾದ ಹೊರರಾಜ್ಯಗಳಿಗೆ ಸೇರಿದ ಮಕ್ಕಳೂ ಇದ್ದಾರೆ. ಇವರೊಂದಿಗೆ ನೆರೆರಾಷ್ಟ್ರ ನೇಪಾಳದ ಮಕ್ಕಳು ಕೂಡ ಇರುವುದು ಪತ್ತೆಯಾಗಿದೆ.
ಬೆಂಗಳೂರು ನಗರದಲ್ಲಿ 5,897 ಕಡೆ ತಪಾಸಣೆ ನಡೆಸಿದಾಗ, 503 ಮಂದಿ ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಅಂದರೆ ಈ ಕಾರ್ಯಾಚರಣೆಯಲ್ಲಿ ಪತ್ತೆಯಾದ ಬಾಲ ಕಾರ್ಮಿಕರಲ್ಲಿ ಶೇ. 63ರಷ್ಟು ಮಂದಿ ರಾಜಧಾನಿಯಲ್ಲೇ ರಾಜಾರೋಷವಾಗಿ ಕೆಲಸಕ್ಕೆ ಬಳಕೆಯಾಗುತ್ತಿದ್ದವರು. ಎರಡನೆಯ ಸ್ಥಾನದಲ್ಲಿ ವಿಜಯಪುರ ಜಿಲ್ಲೆ ಇದೆ. ಅಲ್ಲಿ 72 ಮಂದಿ ಬಾಲಕಾರ್ಮಿಕರು ಪತ್ತೆಯಾಗಿದ್ದಾರೆ. ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಕೆಲಸ ಎಂದು ವರ್ಗೀಕರಣ ಮಾಡಿ ಕಾರ್ಯಾಚರಣೆ ನಡೆಸಲಾಗಿದೆ. ಅಪಾಯಕಾರಿ ಕೆಲಸದಲ್ಲಿ ಮಕ್ಕಳನ್ನು ಬಳಸಿಕೊಂಡಿರುವ ಸಂಸ್ಥೆ, ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಪಾಯಕಾರಿಯಲ್ಲದ ಕೆಲಸದಲ್ಲಿ ಬಾಲ ಕಾರ್ಮಿಕರನ್ನು ತೊಡಗಿಸಿಕೊಂಡಿದ್ದ ಸಂಸ್ಥೆ ಹಾಗೂ ವ್ಯಕ್ತಿಗಳಿಗೆ ನೋಟಿಸ್ ನೀಡಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇರಲಿ, ಕಾರ್ಯಾಚರಣೆ ನಡೆಸಿ, ಬಾಲ ಕಾರ್ಮಿಕರನ್ನು ಪತ್ತೆಹಚ್ಚಿರುವುದು ಮೆಚ್ಚುಗೆಗೆ ಅರ್ಹವಾದ ಕೆಲಸ. ಆದರೆ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಸೂಚನೆ ಮೇರೆಗೆ ವಿಶೇಷ ಕಾರ್ಯಾಚರಣೆ ನಡೆಸಲಾಯಿತು ಎಂಬ ಅಂಶ ಮಾತ್ರ ಅಧಿಕಾರಿಗಳ ಬದ್ಧತೆಯನ್ನು ಪ್ರಶ್ನಿಸುವಂತಿದೆ. ಬದ್ಧತೆಯಲ್ಲಿನ ಕೊರತೆಯೇ ಬಾಲಕಾರ್ಮಿಕ ಪದ್ಧತಿ ಇನ್ನೂ ಜೀವಂತವಾಗಿ ಉಳಿಯಲು ಕಾರಣ ಎಂದು ವಿಶ್ಲೇಷಿಸಲು ಈ ಅಂಶ ಪುಷ್ಟಿ ನೀಡುತ್ತದೆ.
ಬೆಂಗಳೂರಿನ ಯಶವಂತಪುರ ಎಪಿಎಂಸಿ ಆವರಣಕ್ಕೆ ಇತ್ತೀಚೆಗೆ ಮುಖ್ಯಮಂತ್ರಿ ದಿಢೀರ್ ಭೇಟಿ ನೀಡಿದಾಗ ಅಲ್ಲಿ ಬಾಲಕಾರ್ಮಿಕರು ಕೆಲಸದಲ್ಲಿ ತೊಡಗಿರುವುದು ಅವರ ಗಮನಕ್ಕೆ ಬಂದಿದೆ. ಆ ಸಂದರ್ಭದಲ್ಲಿ ಅವರು ಪೊಲೀಸರಿಗೆ ನೀಡಿದ ಸೂಚನೆ ಅನ್ವಯ ಈ ವಿಶೇಷ ಕಾರ್ಯಾಚರಣೆ ಜರುಗಿದೆ. ಅಂದರೆ ರಾಜ್ಯದ ಸಮಸ್ತ ಆಗುಹೋಗುಗಳು ಮತ್ತು ರಾಜಕೀಯ ತಂಟೆ-ತಕರಾರುಗಳನ್ನು ತಲೆಗೆ ತುಂಬಿಕೊಂಡಿರುವ ಮುಖ್ಯಮಂತ್ರಿಯವರು ಎಪಿಎಂಸಿ ಆವರಣಕ್ಕೆ ಭೇಟಿ ನೀಡಿದಾಗ ಅವರ ಕಣ್ಣಿಗೆ ಕಂಡ ಬಾಲಕಾರ್ಮಿಕರು, ನಮ್ಮ ಅಧಿಕಾರಿಗಳ ಕಣ್ಣಿಗೆ ಏಕೆ ಬೀಳುವುದಿಲ್ಲ? ಅವರ ಗಮನಕ್ಕೆ ಇಂತಹ ಜ್ವಲಂತ ಸಮಸ್ಯೆಗಳು ಏಕೆ ಬರುವುದಿಲ್ಲ? ಸಂಬಂಧಿಸಿದ ಇಲಾಖೆಗಳ ಉಡಾಫೆ ಧೋರಣೆಯ ಕಾರಣದಿಂದಲೋ ಅಥವಾ ಅಧಿಕಾರಿಗಳ ಜಾಣಕುರುಡಿನಿಂದಲೋ ಮಕ್ಕಳ ಬಾಲ್ಯವು ದುಡಿಮೆ ಎಂಬ ಕುಲುಮೆಯಲ್ಲಿ ಕರಗಿಹೋಗುತ್ತಿದೆ. ಮುಖ್ಯಮಂತ್ರಿ ಸೂಚಿಸುವವರೆಗೂ ಇತ್ತ ಗಮನಹರಿಸದ ಅಧಿಕಾರಿಗಳ ವಿರುದ್ಧ ಮೊದಲು ದಂಡ ಝಳಪಿಸಬೇಕು. ಕಾನೂನು ರೂಪಿಸಿದ ಮಾತ್ರಕ್ಕೆ ಎಲ್ಲ ಲೋಪಗಳೂ ಸರಿಹೋಗುವುದಿಲ್ಲ. ಅದನ್ನು ಅನುಷ್ಠಾನ ಮಾಡುವ ಕೈಗಳಿಗೆ ದೃಢ ಸಂಕಲ್ಪ ಬಂದಾಗ ಮಾತ್ರ ಕಾನೂನಿನ ಪುಸ್ತಕಗಳಲ್ಲಿ ಅಡಗಿರುವ ಅಕ್ಷರಗಳು ಕ್ರಿಯಾರೂಪ ತಳೆಯುತ್ತವೆ.
ಮನೆಯ ಮಕ್ಕಳು ಕೂಡ ನಾಲ್ಕು ಕಾಸು ಸಂಪಾದಿಸಲಿ ಎಂಬ ಮನಸ್ಥಿತಿಯ ಹಿಂದೆ ಮುಖ್ಯವಾಗಿ ಆರ್ಥಿಕ ಆಯಾಮ ಕೆಲಸ ಮಾಡುತ್ತದೆಯಾದರೂ ಅದೊಂದೇ ಕಾರಣ ಎಂದು ಹೇಳಲಾಗದು. ಬಡತನದ ಜೊತೆಗೆ ಅರಿವಿನ ಕೊರತೆ, ಕುಟುಂಬದ ಹಿನ್ನೆಲೆ, ಪರಿಸರ... ಎಲ್ಲವೂ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತವೆ. ಕಡಿಮೆ ಕೂಲಿಗೆ ಹೇಳಿದಷ್ಟು ಕೆಲಸ ಮಾಡುತ್ತಾರೆ ಎಂಬ ಲಾಭಕೋರ, ಶೋಷಕ ಧೋರಣೆಯು ಮಕ್ಕಳನ್ನು ಕೆಲಸಕ್ಕೆ ಇರಿಸಿಕೊಳ್ಳಲು ಪ್ರೇರೇಪಿಸುತ್ತದೆ. ಬಾಲ ಕಾರ್ಮಿಕರನ್ನು ಪತ್ತೆಹಚ್ಚಿದ ಮಾತ್ರಕ್ಕೆ, ಇಲ್ಲವೇ ಅವರ ದುಡಿಮೆ ಬಳಸಿಕೊಳ್ಳುತ್ತಿರುವ ವ್ಯಕ್ತಿಗಳಿಗೆ ನೋಟಿಸ್ ನೀಡಿದ ಮಾತ್ರಕ್ಕೆ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ. ಪೋಷಕರು ಇದ್ದಲ್ಲಿ ಅವರಿಗೆ ಒಪ್ಪಿಸಿ ಕೈತೊಳೆದುಕೊಂಡರೆ ಸಾಲದು. ಹಳೆಯ ಚಾಳಿ ಪುನರಾವರ್ತನೆಯಾಗುವ ಸಾಧ್ಯತೆಯೇ ಹೆಚ್ಚು. ಪೋಷಕರಿಲ್ಲದ ಮಕ್ಕಳ ಪಾಡು ಮತ್ತೂ ದುರಂತಮಯ. ಹೀಗಾಗಿ ಪುನರ್ವಸತಿ ಕಲ್ಪಿಸುವುದು ಸವಾಲಿನ ಕೆಲಸ ಮತ್ತು ಅದಕ್ಕೆ ಹೆಚ್ಚು ಒತ್ತು ಸಿಗಬೇಕು. ನಿರಂತರ ನಿಗಾ ವ್ಯವಸ್ಥೆ, ಪೋಷಕರಲ್ಲಿ ಅರಿವು ಮೂಡಿಸುವಂಥ ಕಾರ್ಯಕ್ರಮಗಳು, ವಲಸೆ ಕಾರ್ಮಿಕರ ಮಕ್ಕಳಿಗೆ ಕಲಿಕೆಗೆ ಹೆಚ್ಚು ಅವಕಾಶ, ವೃತ್ತಿ ತರಬೇತಿ ಸೇರಿದಂತೆ ಹೊಸ ಮಾರ್ಗೋಪಾಯಗಳನ್ನು ಶೋಧಿಸಬೇಕು ಮತ್ತು ಅವು ವ್ಯವಸ್ಥಿತವಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಆಗೊಮ್ಮೆ ಈಗೊಮ್ಮೆ ನಡೆಯುವ ಪತ್ತೆ ಕಾರ್ಯಾಚರಣೆಗಳು ಕಾಟಾಚಾರದ ಕಸರತ್ತು ಎನಿಸಿಕೊಳ್ಳುತ್ತವೆ.






