ನ್ಯಾಯ ವ್ಯವಸ್ಥೆಯಲ್ಲಿ ‘ಜಿರಳೆ’

ನ್ಯಾಯಮೂರ್ತಿ ಸೂರ್ಯಕಾಂತ್ Photo : PTI
‘‘ನಿರುದ್ಯೋಗಿಗಳು ಜಿರಳೆಗಳ ಹಾಗೆ. ಮಾಧ್ಯಮ, ಆರ್ಟಿಐ ಕಾರ್ಯಕರ್ತರಾಗಿ ವ್ಯವಸ್ಥೆಯ ಮೇಲೆ ದಾಳಿ ಮಾಡುತ್ತಾರೆ’’ ಹೀಗೊಂದು ಹೇಳಿಕೆಯನ್ನು ಯಾವನೋ ಭ್ರಷ್ಟ ರಾಜಕಾರಣಿಯೊಬ್ಬ ನೀಡಿದ್ದಿದ್ದರೆ, ಆತ ಆ ಹೇಳಿಕೆಯ ಹಿಂದಿರುವ ಮನಸ್ಥಿತಿಯನ್ನು ಊಹಿಸಬಹುದಾಗಿತ್ತು. ಆದರೆ ಮೇಲಿನ ಹೇಳಿಕೆಯನ್ನು ನೀಡಿರುವುದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್. ‘‘ವೃತ್ತಿಯಲ್ಲಿ ಯಾವ ಸ್ಥಾನಮಾನವೂ ಇಲ್ಲದ, ಯಾವ ಉದ್ಯೋಗವೂ ಇಲ್ಲದ ಜಿರಳೆಗಳಂತಹ ಯುವಕರು ಸಮಾಜದಲ್ಲಿದ್ದಾರೆ. ಅವರಲ್ಲಿ ಕೆಲವರು ಮಾಧ್ಯಮ, ಸಾಮಾಜಿಕ ಜಾಲತಾಣ ಹಾಗೂ ಆರ್ಟಿಐ ಕಾರ್ಯಕರ್ತರಾಗುತ್ತಾರೆ. ಆನಂತರ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’’ ಎಂದು ನ್ಯಾಯಾಲಯದ ಪೀಠದಲ್ಲಿ ಕುಳಿತು ಅವರು ಅಲವತ್ತುಕೊಂಡಿದ್ದಾರೆ. ಅರ್ಜಿದಾರರೊಬ್ಬರು ‘ಹಿರಿಯ ವಕೀಲ’ ಸ್ಥಾನಮಾನಕ್ಕೆ ಸಂಬಂಧಿಸಿ ಸಲ್ಲಿಸಿದ ಅರ್ಜಿಯನ್ನು ಟೀಕಿಸುತ್ತಾ ಅವರು ಈ ಹೇಳಿಕೆಯನ್ನು ನೀಡಿದ್ದಾರೆ. ಇದೊಂದು ರೀತಿ ಎತ್ತಿಗೆ ಜ್ವರ, ಎಮ್ಮೆಗೆ ಬರೆ ಎಂಬಂತಾಗಿದೆ. ವಿಚಾರಣೆಯ ಸಂದರ್ಭದಲ್ಲಿ ಅನಗತ್ಯವಾಗಿ ಆರ್ಟಿಐ ಕಾರ್ಯಕರ್ತರು ಮತ್ತು ಪತ್ರಕರ್ತರನ್ನು ಎಳೆದು ತಂದ ನ್ಯಾಯಾಧೀಶರು ಅವರ ಮೇಲಿನ ತನ್ನ ಸಿಟ್ಟನ್ನು ಈ ಮೂಲಕ ಕಾರಿಕೊಂಡಿದ್ದಾರೆ. ಈ ಹೇಳಿಕೆ ಟೀಕೆಗಳಿಗೆ ಒಳಗಾಗುತ್ತಿದ್ದಂತೆಯೇ ನಾನು ಈ ದೇಶದ ಯುವಕರನ್ನು ಉದ್ದೇಶಿಸಿ ನೀಡಿದ ಹೇಳಿಕೆ ಇದಲ್ಲ ಎಂದು ಅವರು ಸ್ಪಷ್ಟೀಕರಣವನ್ನೂ ನೀಡಿದ್ದಾರೆ.
ಸೂರ್ಯಕಾಂತರ ಹೇಳಿಕೆಯ ಮೂಲಕ ಈ ದೇಶದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತಿರುವ ಆರ್ಟಿಐ ಕಾರ್ಯಕರ್ತರು ಮತ್ತು ಪತ್ರಕರ್ತರನ್ನು ಉದ್ಯೋಗವಿಲ್ಲದ ಯುವಕರು ಎಂದು ವ್ಯಂಗ್ಯವಾಡಿದ್ದಾರೆ. ಅದೇ ರೀತಿಯಲ್ಲಿ, ವ್ಯವಸ್ಥೆಯ ಮೇಲೆ ದಾಳಿ ನಡೆಸುವ ಈ ಹೋರಾಟಗಾರರನ್ನು, ಜೀವದ ಒತ್ತೆಯಿಟ್ಟು ವೃತ್ತಿ ನಿರ್ವಹಿಸುತ್ತಿರುವ ಪತ್ರಕರ್ತರನ್ನು ಜಿರಳೆಗಳು ಎಂದು ಪರೋಕ್ಷವಾಗಿ ನಿಂದಿಸಿರುವುದು ಮಾತ್ರವಲ್ಲದೆ ಇವರೆಲ್ಲರೂ ಮಾರುವೇಷದಲ್ಲಿರುವ ನಿರುದ್ಯೋಗಿಗಳು ಎಂಬರ್ಥದ ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಆರ್ಟಿಐ ಕಾರ್ಯಕರ್ತರು ಮತ್ತು ಪತ್ರಕರ್ತರ ವಿಶ್ವಾಸಾರ್ಹತೆಯನ್ನು ಅವರು ಪ್ರಶ್ನಿಸಿದ್ದಾರೆ. ಹಾಗೆಂದು ನಕಲಿ ಆರ್ಟಿಐ ಕಾರ್ಯಕರ್ತರು, ಪತ್ರಕರ್ತರ ಸೋಗಿನಲ್ಲಿರುವ ಬ್ಲ್ಯಾಕ್ಮೇಲರ್ಗಳು ಇಲ್ಲವೆಂದಲ್ಲ. ಆದರೆ ಸೂರ್ಯಕಾಂತ್ ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ಟೀಕಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ನ್ಯಾಯವ್ಯವಸ್ಥೆಯೊಳಗೆ ನುಸುಳಿಕೊಂಡಿರುವ ಭ್ರಷ್ಟಾಚಾರ, ಅಕ್ರಮಗಳು ಹಾಗೆಯೇ ರಾಜಕಾರಣಿಗಳ ಜೊತೆಗೆ ನ್ಯಾಯಾಧೀಶರ ಅಕ್ರಮ ಸಂಬಂಧಗಳನ್ನು ಪತ್ರಕರ್ತರು ಬಯಲಿಗೆಳೆಯುತ್ತಿದ್ದಾರೆ. ಈ ಅಸಮಾಧಾನ ನ್ಯಾಯಮೂರ್ತಿಯಿಂದ ಇಂತಹದೊಂದು ಹೇಳಿಕೆಯನ್ನು ನೀಡುವಂತೆ ಮಾಡಿತೇ ಎಂದು ಜನರು ಅನುಮಾನಿಸುವಂತಾಗಿದೆ.
ಇಂದು ಭಾರತದಲ್ಲಿ ಆರ್ಟಿಐ ಕಾರ್ಯಕರ್ತರು ಜೀವಭಯದ ಜೊತೆಗೆ ತಮ್ಮ ಕಾರ್ಯನಿರ್ವಹಿಸಬೇಕಾದಂತಹ ವಾತಾವರಣವಿದೆ. 2005ರಲ್ಲಿ ಐತಿಹಾಸಿಕ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಾಗಿನಿಂದ 100ಕ್ಕೂ ಹೆಚ್ಚು ಆರ್ಟಿಐ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ ಎನ್ನುವ ಮಾಹಿತಿ ನ್ಯಾಯಮೂರ್ತಿಗೆ ಇಲ್ಲದಿರುವುದು ವಿಷಾದನೀಯ. ಈ ದೇಶದ ಹತ್ತು ಹಲವು ಬೃಹತ್ ಹಗರಣಗಳನ್ನು ಬಯಲಿಗೆಳೆದು, ಅಕ್ರಮಗಳಲ್ಲಿ ಭಾಗವಹಿಸಿದವರು ಜೈಲು ಸೇರುವಂತೆ ಮಾಡುವಲ್ಲಿ ಈ ಕಾರ್ಯಕರ್ತರ ಪಾತ್ರವಿದೆ. ಭ್ರಷ್ಟಾಚಾರ, ಅಕ್ರಮಗಳನ್ನು ಬಯಲಿಗೆಳೆಯಲು ಮುಂದಾದ ಕಾರ್ಯಕರ್ತರು, ವಿಸಲ್ ಬ್ಲೋವರ್ಗಳನ್ನು ಪ್ರಭಾವಿಶಕ್ತಿಗಳು ತಮ್ಮ ಗೂಂಡಾಗಳನ್ನು ಬಳಸಿ ಹಲ್ಲೆಗಳನ್ನು ಮಾಡುತ್ತಿರುವುದು, ಬೇರೆ ಬೇರೆ ರೀತಿಯಲ್ಲಿ ಕಿರುಕುಳಗಳನ್ನು ನೀಡುತ್ತಿರುವುದು ನ್ಯಾಯಮೂರ್ತಿಯ ಗಮನಕ್ಕೆ ಬಂದಿಲ್ಲವೆ? ಅಷ್ಟೇ ಯಾಕೆ, ಪೊಲೀಸ್ ಇಲಾಖೆಯೇ ಈ ಆರ್ಟಿಐ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಿ ಜೈಲಿಗೆ ತಳ್ಳುತ್ತಿರುವ ಆರೋಪಗಳಿವೆ. ಇತ್ತೀಚಿನ ವರದಿಯ ಪ್ರಕಾರ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಗಮನಾರ್ಹ ಕುಸಿತವನ್ನು ಕಂಡಿದೆ. ಪತ್ರಕರ್ತರಿಗೆ ಭಾರತವು ಅತ್ಯಂತ ಅಪಾಯಕಾರಿ ದೇಶವಾಗಿ ಪರಿಣಮಿಸಿದೆ ಎಂದು ಆರ್ಎಸ್ಎಫ್ ವರದಿ ಹೇಳುತ್ತಿದೆ. ಕಳೆದ ಒಂದು ದಶಕದಲ್ಲಿ ಭಾರತದಲ್ಲಿ ಸುಮಾರು 40ಕ್ಕೂ ಹೆಚ್ಚು ಪತ್ರಕರ್ತರು ತಮ್ಮ ವೃತ್ತಿಯ ಕಾರಣಕ್ಕಾಗಿ ಹತ್ಯೆಗೀಡಾಗಿದ್ದಾರೆ. ನ್ಯಾಯಮೂರ್ತಿ ಸೂರ್ಯಕಾಂತ್ ಅವರ ‘ಜಿರಳೆ’ ಹೇಳಿಕೆಯು ತಮ್ಮ ವೃತ್ತಿಗಾಗಿ ಪ್ರಾಣಾರ್ಪಣೆ ಮಾಡಿದ ಪತ್ರಕರ್ತರ ತ್ಯಾಗ ಬಲಿದಾನಗಳಿಗೆ ಮಾಡಿದ ಅವಮಾನವಾಗಿದೆ. ಆರ್ಟಿಐ ಕಾರ್ಯಕರ್ತರನ್ನು , ಪತ್ರಕರ್ತರನ್ನು ನ್ಯಾಯಮೂರ್ತಿಯೇ ‘ಉದ್ಯೋಗವಿಲ್ಲದ ಜಿರಳೆಗಳು’ ಎಂದು ಕರೆಯುವುದು, ಪರೋಕ್ಷವಾಗಿ ಪತ್ರಕರ್ತರು ಮತ್ತು ಆರ್ಟಿಐ ಕಾರ್ಯಕರ್ತರ ಮೇಲೆ ಭ್ರಷ್ಟ ವ್ಯವಸ್ಥೆ ದಾಳಿ ನಡೆಸುವುದಕ್ಕೆ ಸಮ್ಮತಿ ನೀಡಿದಂತಲ್ಲವೆ? ವ್ಯವಸ್ಥೆಯಿಂದ ಪತ್ರಕರ್ತರು ಮತ್ತು ಆರ್ಟಿಐ ಕಾರ್ಯಕತರು ಎದುರಿಸುತ್ತಿರುವ ದಾಳಿಯ ಬಗ್ಗೆ ಮಾತನಾಡಬೇಕಾಗಿದ್ದ ನ್ಯಾಯಮೂರ್ತಿ, ವ್ಯವಸ್ಥೆಯ ಮೇಲೆ ಪತ್ರಕರ್ತರು ಮತ್ತು ಆರ್ಟಿಐ ನಡೆಸುವ ದಾಳಿಯ ಬಗ್ಗೆ ಕಳವಳ ವ್ಯಕ್ತಪಡಿಸುತ್ತಿರುವುದು ಏನನ್ನು ಸೂಚಿಸುತ್ತದೆ? ಈ ದೇಶದ ವ್ಯವಸ್ಥೆಗೆ ಅಮಾಯಕ ಮತ್ತು ಪ್ರಾಮಾಣಿಕ ಎಂಬ ಮುದ್ರೆಯೊತ್ತಿ ಅದನ್ನು ಪ್ರಶ್ನಿಸುವವರನ್ನೇ ಕಟಕಟೆಯಲ್ಲಿ ನಿಲ್ಲಿಸಿದಂತಾಗಲಿಲ್ಲವೆ?
ಇತ್ತೀಚೆಗೆ ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿನ ‘ನ್ಯಾಯಾಂಗದಲ್ಲಿನ ಭ್ರಷ್ಟಾಚಾರ’ ಅಧ್ಯಾಯಕ್ಕಾಗಿ ಸುಪ್ರೀಂಕೋರ್ಟ್ ಆಕಾಶ ಭೂಮಿ ಒಂದು ಮಾಡಿತು. ಈ ಪುಸ್ತಕವನ್ನು ನಿಷೇಧಿಸಿದ್ದು ಮಾತ್ರವಲ್ಲ, ವಿವರಣೆಯನ್ನು ಕೋರಿ ಎನ್ಸಿಇಆರ್ಟಿ ನಿರ್ದೇಶಕರಿಗೆ ನೋಟಿಸನ್ನೂ ನೀಡಿತು. ಹಲವು ಸಿಬ್ಬಂದಿಯ ತಲೆದಂಡವೂ ಆಯಿತು. ಇತಿಹಾಸ ಸೇರಿದಂತೆ ಹಲವು ಪಠ್ಯಪುಸ್ತಕಗಳಲ್ಲಿ ನಡೆಯುತ್ತಿರುವ ಹಸ್ತಕ್ಷೇಪದ ಬಗ್ಗೆ ಮೌನವಾಗಿದ್ದ ನ್ಯಾಯಾಲಯ ತನ್ನ ಬುಡಕ್ಕೆ ಬಂದಾಗ ಮಾತ್ರ ಒಮ್ಮೆಲೆ ಎದ್ದು ನಿಂತಿತು. ಹಾಗೆಂದು ನ್ಯಾಯವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಇಲ್ಲ ಎಂದು ಸುಪ್ರೀಂಕೋರ್ಟ್ ಹೇಳುತ್ತದೆಯೆ? ನಿವೃತ್ತರಾದ ಬಳಿಕ ನ್ಯಾಯಮೂರ್ತಿಗಳು ಸರಕಾರದಿಂದ ಅತ್ಯುನ್ನತ ಹುದ್ದೆಗಳನ್ನು ಪಡೆದುಕೊಳ್ಳುವುದು, ನ್ಯಾಯಾಧೀಶರ ನಿವಾಸದಲ್ಲಿ ಹಣ ಪತ್ತೆಯಾಗುವುದು, ನ್ಯಾಯಾಧೀಶರೇ ತೀರ್ಪು ನೀಡುವಾಗ ಮನುಸ್ಮೃತಿಯ ಉಲ್ಲೇಖಗಳನ್ನು ಮಾಡುವುದು, ಸಂವಿಧಾನ ವಿರೋಧಿ ತೀರ್ಪುಗಳು ಹೊರ ಬೀಳುವುದು ಇವೆಲ್ಲವೂ ನ್ಯಾಯವ್ಯವಸ್ಥೆಯ ದೈನೇಸಿಸ್ಥಿತಿಯನ್ನು ಹೇಳುತ್ತದೆ. ಹಾಗೆಂದು, ನ್ಯಾಯವ್ಯವಸ್ಥೆಯನ್ನು ಜಿರಳೆಗಳು ಆಕ್ರಮಿಸಿಕೊಂಡಿವೆ ಎಂದು ಯಾರಾದರೂ ಹೇಳಿಕೆ ನೀಡಿದರೆ ಅದನ್ನು ನ್ಯಾಯಮೂರ್ತಿ ಸೂರ್ಯಕಾಂತ್ ಒಪ್ಪಿಕೊಳ್ಳಲು ಸಿದ್ಧರಿದ್ದಾರೆಯೆ? ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗದ ಕಾವಲು ಕಾಯುತ್ತಿರುವ ಪತ್ರಕರ್ತರು ಮತ್ತು ಆರ್ಟಿಐ ಹೋರಾಟಗಾರರ ಕುರಿತಂತೆ ನೀಡಿರುವ ಬೀಸು ಹೇಳಿಕೆಗಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ಕ್ಷಮೆಯಾಚಿಸಬೇಕಾಗಿದೆ. ತಾವು ಧರಿಸಿದ ಕಪ್ಪು ಕೋಟಿನೊಳಗೆ ತಾವಾಗಿಯೇ ಬಿಟ್ಟುಕೊಂಡ ಜಿರಳೆಗಳನ್ನು ನ್ಯಾಯಮೂರ್ತಿಯೇ ಓಡಿಸಬೇಕಾಗಿದೆ.






