ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯ

PC: PTI
ಕೇಂದ್ರದ ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಕಳೆದ ಹನ್ನೊಂದು ವರ್ಷಗಳಿಂದ ಕರ್ನಾಟಕಕ್ಕೆ ನಿರಂತರವಾಗಿ ಅನ್ಯಾಯ ಮಾಡುತ್ತಲೇ ಬಂದಿದೆ. ರಾಜ್ಯದ ಪಾಲಿನ ತೆರಿಗೆ ಹಂಚಿಕೆ, ನೆರೆ ಪರಿಹಾರ ಅನುದಾನ ಹೀಗೆ ಕರ್ನಾಟಕಕ್ಕೆ ನ್ಯಾಯ ಸಮ್ಮತವಾದ ಪಾಲು ಸಿಗುತ್ತಲೇ ಇಲ್ಲ. ರಾಜ್ಯದ ಅಭಿವೃದ್ಧಿ ಯೋಜನೆಗಳಿಗೆ ಅನುದಾನವನ್ನು ನೀಡುವ ವಿಷಯದಲ್ಲೂ ಈ ಪಕ್ಷಪಾತ ಧೋರಣೆ ಮುಂದುವರಿದಿದೆ. ಅನುದಾನ ಹಂಚಿಕೆಯಲ್ಲಿ ಎಲ್ಲಾ ರಾಜ್ಯಗಳನ್ನು ಕೇಂದ್ರ ಸರಕಾರ ಸಮಾನವಾಗಿ ನೋಡಬೇಕು. ಆದರೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ತನ್ನ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಿಗೆ ಅನುದಾನದ ಹೊಳೆಯನ್ನೇ ಹರಿಸುತ್ತಿದೆ. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವ ಕರ್ನಾಟಕಕ್ಕೆ ಸಿಗಬೇಕಾದ ನ್ಯಾಯಸಮ್ಮತವಾದ ಪಾಲು ನೀಡಲು ನಿರಾಕರಿಸುತ್ತಿದೆ. ಈ ಮಲತಾಯಿ ನೀತಿ ಒಕ್ಕೂಟ ತತ್ವಕ್ಕೆ ಮಾಡುತ್ತಿರುವ ಅಪಚಾರವಾಗಿದೆ.
ಕರ್ನಾಟಕದ ಬಗ್ಗೆ ಕೇಂದ್ರ ಸರಕಾರದ ನಕಾರಾತ್ಮಕ ಧೋರಣೆಯಿಂದ ರಾಜ್ಯದ ಅಭಿವೃದ್ಧಿ ಯೋಜನೆಗಳನ್ನು ತ್ವರಿತ ಗತಿಯಲ್ಲಿ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಕರ್ನಾಟಕದ 24 ಇಲಾಖೆಗಳ ಪ್ರಸ್ತಾವಗಳು ಅನುಮೋದನೆ ಹಾಗೂ ಅನುದಾನಕ್ಕಾಗಿ ವರ್ಷಗಳಿಂದ ಕೇಂದ್ರ ಸರಕಾರದ ವಿವಿಧ ಸಚಿವಾಲಯಗಳಲ್ಲಿ ಧೂಳು ತಿನ್ನುತ್ತ ಬಿದ್ದಿವೆ. ಅವುಗಳಲ್ಲಿ ಒಂದೇ ಒಂದು ಪ್ರಸ್ತಾವಕ್ಕೂ ಅನುಮೋದನೆ ಸಿಕ್ಕಿಲ್ಲ. ಕಳೆದ 17 ತಿಂಗಳ ಕಾಲಾವಧಿಯಲ್ಲಿ ರಾಜ್ಯದ ಕೇವಲ ಎರಡು ಯೋಜನೆಗಳಿಗಷ್ಟೇ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. 3,432 ಕೋಟಿ ರೂ. ಮೊತ್ತದ ಬಳ್ಳಾರಿ-ಚಿಕ್ಕ ಜಾಜೂರು ರೈಲು ಮಾರ್ಗ ಹಾಗೂ ಬೆಂಗಳೂರಿನ ‘ನಮ್ಮ ಮೆಟ್ರೊ’ ಮೂರನೇ ಹಂತದ ಯೋಜನೆಗೆ ಕೇಂದ್ರದಿಂದ ಅನುಮೋದನೆ ದೊರಕಿದೆ. ರಾಜ್ಯ ಸರಕಾರ ಪ್ರಸ್ತಾವ ಸಲ್ಲಿಸಿದ 19 ತಿಂಗಳ ನಂತರ ವಿಳಂಬ ಮಾಡಿ ಅನುಮತಿ ನೀಡಲಾಗಿದೆ. ಆದರೆ ಮಿತ್ರ ಪಕ್ಷಗಳು ಅಧಿಕಾರದಲ್ಲಿರುವ ಬಿಹಾರ ಮತ್ತು ಆಂಧ್ರಪ್ರದೇಶಗಳ ಅಭಿವೃದ್ಧಿ ಯೋಜನೆಗಳಿಗೆ ತಲಾ 1 ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಣ ಕೇಂದ್ರದಿಂದ ಲಭಿಸಿದೆ. 2024ರ ಜೂನ್ ತಿಂಗಳಿಂದ ಇಲ್ಲಿಯವರೆಗೆ ಆಂಧ್ರಪ್ರದೇಶಕ್ಕೆ 3 ಲಕ್ಷ ಕೋಟಿ ರೂ. ಆರ್ಥಿಕ ನೆರವನ್ನು ಕೇಂದ್ರ ಸರಕಾರ ನೀಡಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇತ್ತೀಚೆಗೆ ಹೇಳಿದ್ದಾರೆ.
15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶಿಫಾರಸು ಮಾಡಿರುವ ಆರೋಗ್ಯ ಅನುದಾನವನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎರಡು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಜಲ ಜೀವನ ಮಿಶನ್ ಯೋಜನೆಯಲ್ಲೂ ಕೇಂದ್ರದ ಪಾಲು 4,574 ಕೋಟಿ ರೂ.ಇನ್ನೂ ಬಂದಿಲ್ಲ. ವಿಪತ್ತು ಪರಿಹಾರ ಅನುದಾನ, 9 ಕೇಂದ್ರ ಪ್ರಾಯೋಜಿತ ಯೋಜನೆಗಳ ಪಾಲು, ಮೂಲ ಸೌಕರ್ಯಗಳ ಯೋಜನೆಗೆ ಒದಗಿಸಬೇಕಾದ ನೆರವಿಗೆ ಸಂಬಂಧಿಸಿದಂತೆಯೂ ಕರ್ನಾಟಕದ ಬಗ್ಗೆ ನಿರ್ಲಕ್ಷ್ಯ ಧೋರಣೆಯನ್ನು ತಾಳಲಾಗಿದೆ. ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ಕೇಂದ್ರ ಸರಕಾರದ ನಕಾರಾತ್ಮಕ ನೀತಿಗೆ ಆ ಸರಕಾರದ ಪಕ್ಷಪಾತದ ಧೋರಣೆ ಕಾರಣವಲ್ಲದೇ ಬೇರೇನೂ ಅಲ್ಲ.
ಕೇಂದ್ರದ ಮೋದಿ ಸರಕಾರದ ಈ ನಕಾರಾತ್ಮಕ ನೀತಿಗೆ ಇನ್ನೊಂದು ಮುಖ್ಯ ಕಾರಣವೆಂದರೆ ನಮ್ಮ ರಾಜ್ಯದ ಜನ ಪ್ರತಿನಿಧಿಗಳ ಬೇಜವಾಬ್ದಾರಿತನವೆಂದರೆ ತಪ್ಪಿಲ್ಲ. ಅನೂಚಾನವಾಗಿ ನಡೆದು ಬಂದಂತೆ ನಮ್ಮ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಇಲಾಖೆಯ ಮಂತ್ರಿಗಳು ದಿಲ್ಲಿಗೆ ಬಂದು ಮನವಿಯನ್ನು ಸಲ್ಲಿಸಿ ಹೋಗುತ್ತಾರೆ. ಕೇವಲ ಮನವಿ ಸಲ್ಲಿಸಿದರೆ ಮಾತ್ರ ಕೆಲಸ ಆಗುವುದಿಲ್ಲ. ನಮ್ಮ ರಾಜ್ಯದ ಸಂಸತ್ ಸದಸ್ಯರು, ಕೇಂದ್ರ ಸರಕಾರದ ಬೆನ್ನು ಹತ್ತಿ ಸದರಿ ಮನವಿಗಳು ಹಾಗೂ ಪ್ರಸ್ತಾವಗಳಿಗೆ ಅನುಮೋದನೆ ದೊರೆಯುವಂತೆ ನೋಡಿಕೊಳ್ಳಬೇಕಾಗುತ್ತದೆ. ಸಂಸದರು ಮಾತ್ರವಲ್ಲ ಕೇಂದ್ರ ಸಂಪುಟದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ಕೂಡ ಆಸಕ್ತಿ ವಹಿಸಬೇಕು, ಅದರಲ್ಲೂ ಕರ್ನಾಟಕದಿಂದ ಚುನಾಯಿತರಾದ ಬಿಜೆಪಿ ಸಂಸದರ ಪಾತ್ರ ಮುಖ್ಯವಾಗಿದೆ. ತಮ್ಮದೇ ಪಕ್ಷದ ಸರಕಾರ ಕೇಂದ್ರದಲ್ಲಿ ಇದ್ದರೂ ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಅವರು ವಿಫಲಗೊಂಡಿದ್ದಾರೆ ಅಂದರೆ ಅತಿಶಯೋಕ್ತಿಯಲ್ಲ.
ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕಿನ ಕಾರ್ಖಾನೆಯ ದುರವಸ್ಥೆ ಈ ನಿರ್ಲಕ್ಷ್ಯಕ್ಕೆ ಇನ್ನೊಂದು ಉದಾಹರಣೆ. ಈ ಕಾರ್ಖಾನೆಯ ಪುನಶ್ಚೇತನಕ್ಕಾಗಿ 4,000 ಕೋಟಿ ರೂ. ವಿಸ್ತೃತ ಯೋಜನಾ ವರದಿಯನ್ನು ಕೇಂದ್ರ ಸಂಪುಟ ದರ್ಜೆಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸ್ವತಃ ಆಸಕ್ತಿ ವಹಿಸಿ ಸಿದ್ಧಪಡಿಸಿ ಪ್ರಯತ್ನಿಸಿ ದರೂ ಕೂಡ ಯಶಸ್ವಿಯಾಗಲಿಲ್ಲ. ಆದರೆ ಆಂಧ್ರಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆಯ ಪುನಶ್ಚೇತನಕ್ಕೆ ಕೇಂದ್ರ ಸರಕಾರ ಕಳೆದ ವರ್ಷ ದೊಡ್ಡ ಪ್ಯಾಕೇಜ್ ಪ್ರಕಟಿಸಿದೆ. ಕೇಂದ್ರದ ಎನ್ಡಿಎ ಮೈತ್ರಿ ಕೂಟದ ಸರಕಾರದಲ್ಲಿ ಪಾಲುದಾರ ಪಕ್ಷವಾದ ಜೆಡಿಎಸ್ನ ಕುಮಾರಸ್ವಾಮಿ ಅವರ ಪ್ರಸ್ತಾವಕ್ಕೂ ಬೆಲೆ ಇಲ್ಲದಂತಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ರಾಜಧಾನಿ ದಿಲ್ಲಿಯಲ್ಲಿ ಕೇಂದ್ರ ಸರಕಾರದ ಮೇಲೆ ಒತ್ತಡ ತರುವ ಪ್ರಭಾವಿ ಲಾಬಿ ಇಲ್ಲದಂತಾಗಿದೆ. ಲೋಕಸಭೆಗೆ ಬಿಜೆಪಿ ಸದಸ್ಯರೇ ಹೆಚ್ಚಿನ ಸಂಖ್ಯೆಯಲ್ಲಿ ಆರಿಸಿ ಬಂದಿದ್ದರೂ ಪ್ರಧಾನಿ ನರೇಂದ್ರ ಮೋದಿಯವರ ಎದುರಿಗೆ ನಿಂತು ಗಟ್ಟಿ ಧ್ವನಿಯಲ್ಲಿ ಮಾತಾಡುವ ಸ್ಥಿತಿಯಲ್ಲಿ ಅವರಾರೂ ಇಲ್ಲ.
ಕೇಂದ್ರ ಸರಕಾರದ ಬಳಿ ಕರ್ನಾಟಕ ಭಿಕ್ಷೆಯನ್ನು ಕೇಳುತ್ತಿಲ್ಲ. ತನಗೆ ಬರಬೇಕಾದ ನ್ಯಾಯ ಸಮ್ಮತ ಪಾಲನ್ನು ಕೇಳುತ್ತಿದೆ. ಜಿಎಸ್ಟಿ ಸಂಗ್ರಹದಲ್ಲಿ ಕರ್ನಾಟಕ ಉಳಿದ ರಾಜ್ಯಗಳಿಗಿಂತ ಹೆಚ್ಚಿನ ಪಾಲನ್ನು ನೀಡುತ್ತಿದೆ. ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಉತ್ಪಾದನಾ ವಲಯಗಳ ಮೂಲಕ ಕರ್ನಾಟಕದಿಂದ ಅತ್ಯಂತ ಹೆಚ್ಚು ಪ್ರಮಾಣದ ವರಮಾನ ಕೇಂದ್ರ ಸರಕಾರಕ್ಕೆ ಹೋಗುತ್ತಿದೆ.ಆದರೆ ಅದಕ್ಕೆ ಬದಲಿಯಾಗಿ ರಾಜ್ಯದ ಮೂಲ ಸೌಕರ್ಯ, ನೀರಾವರಿ, ಶಿಕ್ಷಣ ಹಾಗೂ ಆರೋಗ್ಯ ಮತ್ತು ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ನೆರವು ನೀಡಲು ಕೇಂದ್ರ ಸರಕಾರ ಹಿಂದೇಟು ಹಾಕುತ್ತಿದೆ. ತೆರಿಗೆಯ ರೂಪದಲ್ಲಿ ಕೇಂದ್ರ ಸರಕಾರಕ್ಕೆ ಕರ್ನಾಟಕದಿಂದ ಹೋಗುತ್ತಿರುವ ಪ್ರತೀ ಒಂದು ರೂಪಾಯಿಯಲ್ಲಿ 13 ಪೈಸೆಯಷ್ಟೇ ರಾಜ್ಯಕ್ಕೆ ವಾಪಸು ಬರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವುದರಲ್ಲಿ ಅತಿಶಯೋಕ್ತಿಯಾದುದು ಏನೂ ಇಲ್ಲ.
ಕರ್ನಾಟಕದ ಜನರು ಬಿಜೆಪಿಯನ್ನು ಚುನಾಯಿಸಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಸಂವಿಧಾನ ಬದ್ಧವಾಗಿ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೊಡದೇ ಇರುವುದು ಅನ್ಯಾಯದ ಅತಿರೇಕವಾಗಿದೆ. ಅನುದಾನ ಹಂಚಿಕೆಯಲ್ಲಿ ಕರ್ನಾಟಕದ ಪಾಲನ್ನು ನಿರಾಕರಿಸುವುದು ರಾಜ್ಯವನ್ನು ಆರ್ಥಿಕ ಬಿಕ್ಕಟ್ಟಿಗೆ ದೂಡುವ ಸೇಡಿನ ರಾಜಕೀಯವಾಗಿದೆ. ಕೇಂದ್ರ ಸರಕಾರದ ಇಂಥ ಮಲತಾಯಿ ಧೋರಣೆಯಿಂದಾಗಿ ಒಕ್ಕೂಟ ವ್ಯವಸ್ಥೆ ದುರ್ಬಲವಾಗುತ್ತದೆ. ರಾಜ್ಯ ಮತ್ತು ಕೇಂದ್ರಗಳ ಸಂಬಂಧ ಸೌಹಾರ್ದಯುತವಾಗಿರಬೇಕು. ಪರಸ್ಪರ ಅಪನಂಬಿಕೆಗೆ ಆಸ್ಪದ ನೀಡಬಾರದು. ಹಾಗಾಗಿ ಇನ್ನಾದರೂ ಕೇಂದ್ರ ಸರಕಾರ ಈ ಸೇಡಿನ ನೀತಿಯನ್ನು ಕೈ ಬಿಡಬೇಕು.







