ಕೊರೋನಾ ಮುಗಿದಿದೆ, ವೈರಸ್ ಮುಗಿದಿಲ್ಲ!

ಗುಜರಾತ್ನಲ್ಲಿ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ PC: x.com/narendramodi
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಈದೇಶವನ್ನು ಕಾಡುತ್ತಿರುವ ಕೋಮು ವೈರಸ್ ‘ಕೊರೋನ ವೈರಸ್’ ಗಳಿಗಿಂತ ಅಪಾಯಕಾರಿ ಎನ್ನುವ ಪರೋಕ್ಷ ಎಚ್ಚರಿಕೆಯೊಂದು ಹೈಕೋರ್ಟ್ನಿಂದ ಹೊರಬಿದ್ದಿದೆ. ಕೊರೋನ ವೈರಸ್ ಕೆಲ ಕಾಲ ನಮ್ಮ ದೇಹದೊಳಗಿದ್ದು ಇಲ್ಲವಾಗಿ ಬಿಡುತ್ತದೆ. ಆದರೆ ಕೋಮುವೈರಸ್ ಅಷ್ಟು ಸುಲಭವಾಗಿ ನಮ್ಮ ಮನೆ, ಮನವನ್ನು ಬಿಟ್ಟು ತೊಲಗಲಾರದು. ಜಗತ್ತು ಕೊರೋನ ವೈರಸ್ ವಿರುದ್ಧ ಜಾಗೃತಿಯನ್ನು ಬಿತ್ತುತ್ತಿರುವ ಹೊತ್ತಿನಲ್ಲೇ ಭಾರತದಲ್ಲಿ ಕೊರೋನ ವೈರಸ್ನೊಳಗೆ ಧರ್ಮವನ್ನು ಸಂಶೋಧಿಸಲಾಯಿತು. ಕೊರೋನ ವೈರಸ್ನ್ನು ಹಿಂದೂ-ಮುಸ್ಲಿಮ್ ಎಂದು ವಿಭಜಿಸಲಾಯಿತು. ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಸರಕಾರದ ನೇತೃತ್ವದಲ್ಲೇ ಕೊರೋನವನ್ನು ಒಂದು ನಿರ್ದಿಷ್ಟ ಧರ್ಮದ ತಲೆಗೆ ಕಟ್ಟುವ ಗರಿಷ್ಠ ಪ್ರಯತ್ನ ನಡೆಯಿತು. ಆ ಸಂಚಿಗೆ ಬಲಿಯಾಗಿ ಕಳೆದ ಐದು ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಸುಮಾರು 70 ಮಂದಿಯ ಮೇಲೆ ದಾಖಲಾಗಿದ್ದ 16 ಎಫ್ಐಆರ್ಗಳನ್ನು ಹೈಕೋರ್ಟ್ ಇದೀಗ ರದ್ದುಗೊಳಿಸಿದೆ.
ಕೊರೋನ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್ಡೌನ್ ವಿಧಿಸುವ ಹೊತ್ತಿಗೆ ದಿಲ್ಲಿಯಲ್ಲಿ ತಬ್ಲೀಗ್ ಜಮಾಅತ್ನ ಸಮಾವೇಶವೊಂದು ನಡೆಯುತ್ತಿತ್ತು. ಸರಕಾರದ ಅನುಮತಿಯೊಂದಿಗೇ ಈ ಸಮಾವೇಶ ಹಮ್ಮಿಕೊಳ್ಳಲಾಗಿತ್ತು ಮಾತ್ರವಲ್ಲ, ಎಲ್ಲ ದಾಖಲೆಗಳ ಜೊತೆಗೇ ದೇಶ ವಿದೇಶಗಳಿಂದ ತಬ್ಲೀಗಿಗಳು ಸಮಾವೇಶಕ್ಕೆ ಆಗಮಿಸಿದ್ದರು. ಅದಾಗಲೇ ಜಗತ್ತು ಕೊರೋನ ವೈರಸ್ ಬಗ್ಗೆ ಜಾಗೃತಿಯನ್ನು ಹರಡುತ್ತಿದ್ದುದರಿಂದ, ಸಮಾವೇಶಕ್ಕೆ ಸರಕಾರ ಅನುಮತಿ ನೀಡದೇ ಇರಬಹುದಿತ್ತು ಅಥವಾ ಸಮಾವೇಶವನ್ನು ನಿಲ್ಲಿಸಲು ಆದೇಶ ನೀಡಿ, ದೇಶ ವಿದೇಶಗಳಿಂದ ಆಗಮಿಸಿದ್ದ ತಬ್ಲೀಗಿಗಳನ್ನು ಅವರ ಊರಿಗೆ ತಲುಪಿಸುವ ಕೆಲಸ ಮಾಡಿದ್ದಿದ್ದರೆ ಸಮಸ್ಯೆ ಮುಗಿದು ಬಿಡುತ್ತಿತ್ತು. ಸ್ವತಃ ಸರಕಾರವೇ ಸಮಾವೇಶಕ್ಕೆ ಅನುಮತಿ ನೀಡಿ, ದೇಶದಲ್ಲಿ ಕೊರೋನ ವೈರಸ್ ವ್ಯಾಪಿಸುತ್ತಿದ್ದ ಹಾಗೆಯೇ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಈ ತಬ್ಲೀಗಿಗಳನ್ನು ಬಲಿ ಪಶು ಮಾಡಿತು. ತಬ್ಲೀಗಿ ಸಮಾವೇಶಕ್ಕೆ ಸಂಬಂಧಿಸಿ ಹಲವು ವಿದೇಶಿಯರ ಮೇಲಿದ್ದ ಪ್ರಕರಣಗಳನ್ನು ನ್ಯಾಯಾಲಯ ಈಗಾಗಲೇ ವಜಾಗೊಳಿಸಿದೆ. ಅವರಿಗೆ ಆಶ್ರಯ ನೀಡಿದ ಆರೋಪ ಎದುರಿಸುತ್ತಿದ್ದ ಸುಮಾರು 70 ಮಂದಿಯ ಮೇಲಿನ ಆರೋಪಗಳನ್ನು ಇದೀಗ ಹೈಕೋರ್ಟ್ ರದ್ದುಗೊಳಿದ್ದು, ಈ ಮೂಲಕ ಕೊರೋನಾಕ್ಕೆ ನೀಡಿದ್ದ ಧರ್ಮದ ಬಣ್ಣವನ್ನು ಸಂಪೂರ್ಣ ತೆಗೆದುಹಾಕಿದಂತಾಗಿದೆ.
ನಿಜಕ್ಕೂ ಈ ದೇಶಕ್ಕೆ ಕೊರೋನ ವೈರಸ್ನ್ನು ಹರಡಿದ್ದು ಪ್ರಧಾನಿ ಮೋದಿ ನೇತೃತ್ವದಲ್ಲಿ ಗುಜರಾತ್ನಲ್ಲಿ ನಡೆದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮ. ಅದಾಗಲೇ ಜಗತ್ತಿನ ಹಲವು ದೇಶಗಳು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ನಿರ್ಬಂಧಗಳನ್ನು ಹೇರಿತ್ತಾದರೂ, ಭಾರತ ಮಾತ್ರ ನಮಸ್ತೆ ಟ್ರಂಪ್ ಕಾರ್ಯಕ್ರಮ ಮುಗಿಯುವವರೆಗೂ ಈ ನಿರ್ಬಂಧವನ್ನು ತಡೆ ಹಿಡಿಯಿತು. ನಮಸ್ತೆ ಕಾರ್ಯಕ್ರಮಕ್ಕಾಗಿ ದೇಶ ವಿದೇಶಗಳಿಂದ ಯಾವುದೇ ಅಡೆತಡೆಗಳಿಲ್ಲದೆ ಗಣ್ಯರು ಆಗಮಿಸಿದರು. ಈ ಗಣ್ಯರ ಜೊತೆ ಜೊತೆಗೇ ಕೊರೋನವೂ ಭಾರತಕ್ಕೆ ಕಾಲಿಟ್ಟು ದೇಶವನ್ನು ವ್ಯಾಪಿಸತೊಡಗಿತ್ತು. ಇನ್ನೊಂದು ದುರಂತವೆಂದರೆ, ಕೊರೋನ ವೈರಸನ್ನು ತಡೆಯಲು ದೇಶಾದ್ಯಂತ ಕ್ರಮ ತೆಗೆದುಕೊಳ್ಳಬೇಕಾದ ಸರಕಾರ ದಿಲ್ಲಿ ಗಲಭೆಯನ್ನು ಪ್ರಾಯೋಜಿಸಿ ಆ ಮೂಲಕ ಸಿಎಎ ಹೋರಾಟವನ್ನು ದಮನಿಸುವ ಪ್ರಯತ್ನ ನಡೆಸುತ್ತಿತ್ತು. ಕೊರೋನ ವೈರಸ್ನಲ್ಲಿ ಹಿಂದೂ-ಮುಸ್ಲಿಮ್ ಎಂದು ವೈರಸ್ಗಳನ್ನು ಸಂಶೋಧಿಸಿ ಅದನ್ನು ತನ್ನ ರಾಜಕೀಯಕ್ಕೆ ಬಳಸಿಕೊಂಡ ಏಕೈಕ ದೇಶ ಭಾರತವಾಗಿತ್ತು. ಬಿಜೆಪಿ ಮತ್ತು ಸಂಘಪರಿವಾರ ಇದಕ್ಕಾಗಿ ಹಗಲು ರಾತ್ರಿ ದುಡಿಯಿತು. ಆದರೆ ಕೊರೋನ ಮಾತ್ರ ಧರ್ಮಾತೀತವಾಗಿ ತನ್ನ ಕೆಲಸ ನಿರ್ವಹಿಸಿತ್ತು. ಅದು ಕುಂಭಮೇಳದಲ್ಲೂ ತನ್ನ ಪ್ರತಾಪವನ್ನು ಪ್ರದರ್ಶಿಸಿತ್ತು. ಈ ಮೇಳ ನಡೆದ ಬೆನ್ನಿಗೇ ಗಂಗಾನದಿಯಲ್ಲಿ ನೂರಾರು ಹೆಣಗಳು ತೇಲಿದವು. ತಟದಲ್ಲಿ ಅರೆಬರೆ ಸಮಾಧಿ ಮಾಡಿದ ಹೆಣಗಳನ್ನು ನರಿ, ನಾಯಿಗಳು ಎಳೆದು ತಿನ್ನುತ್ತಿರುವುದು ಅಂತರ್ರಾಷ್ಟ್ರೀಯ ಮಟ್ಟದ ಮಾಧ್ಯಮಗಳ ಮುಖಪುಟ ಸುದ್ದಿಯಾದವು.
ಕೊರೋನ ಹಿನ್ನೆಲೆಯಲ್ಲಿ ತಬ್ಲೀಗಿ ಜಮಾಅತ್ನ ಮೇಲೆ ಎಫ್ಐಆರ್ ದಾಖಲಿಸಿಕೊಂಡ ಅದೇ ಸರಕಾರ, ಬಳಿಕ ಪಶ್ಚಿಮಬಂಗಾಳದಲ್ಲಿ ಬೃಹತ್ ಚುನಾವಣಾ ಸಮಾವೇಶವನ್ನು ಹಮ್ಮಿಕೊಂಡಿತ್ತು. ಆಗ ಕೊರೋನ ವೈರಸ್ನ ಬಗ್ಗೆ ಯಾರಿಗೂ ಕಳವಳ ಇದ್ದಿರಲಿಲ್ಲ. ಬಳಿಕ ಕುಂಭಮೇಳಕ್ಕೂ ಅವಕಾಶವನ್ನು ನೀಡಿತು. ಅಮಿತ್ ಶಾ ನೇತೃತ್ವದಲ್ಲಿ ಹೈದರಾಬಾದ್ನಲ್ಲೂ ರ್ಯಾಲಿ ನಡೆಯಿತು. ಜನಸಾಮಾನ್ಯರು ಬೀದಿಗಿಳಿದಾಗ ಅವರನ್ನು ಲಾಠಿ ಹಿಡಿದು ಅಟ್ಟಾಡಿಸಿಕೊಂಡು ಓಡಿಸುತ್ತಿದ್ದ ಪೊಲೀಸರೇ ಸರಕಾರದ ನೇತೃತ್ವದಲ್ಲಿ ಹಮ್ಮಿಕೊಂಡ ಸಮಾವೇಶಗಳಿಗೆ ಕಾವಲು ನಿಂತರು. ಲಾಕ್ಡೌನ್ಗಳು ಮೋದಿ ನೇತೃತ್ವದ ಯಾವುದೇ ಸಮಾವೇಶಗಳಿಗೆ, ರ್ಯಾಲಿಗಳಿಗೆ ಅನ್ವಯವಾಗಲಿಲ್ಲ. ನಿಜಕ್ಕೂ ಈ ದೇಶದಲ್ಲಿ ಕೊರೋನ ಹರಡಿದ್ದು ಈ ರ್ಯಾಲಿ, ಸಮಾವೇಶಗಳು. ಆದರೆ ರಾಜಕಾರಣಿಗಳು ಒಂದು ನಿರ್ದಿಷ್ಟ ಧರ್ಮದ ಅಮಾಯಕರನ್ನು ಹೊಣೆ ಮಾಡಲು ಗರಿಷ್ಠ ಪ್ರಯತ್ನ ನಡೆಸಿದರು. ಸಂಸದ ತೇಜಸ್ವಿ ಸೂರ್ಯನಂತಹ ರಾಜಕೀಯ ನಾಯಕರು, ಆಸ್ಪತ್ರೆಗಳ ಬೆಡ್ಗಳಿಗೂ ಧರ್ಮಗಳ ಬಣ್ಣ ಹಚ್ಚಿದರು. ಆದರೆ ಈ ರಾಜಕೀಯ ನಾಯಕರ ಪ್ರಯತ್ನವನ್ನು ಕೊರೋನ ವೈರಸ್ ಸ್ವತಃ ವಿಫಲಗೊಳಿಸಿತು. ಸಾಲು ಸಾಲು ಹೆಣಗಳು ಬೀಳತೊಡಗಿದಾಗ ಸಂತ್ರಸ್ತರ ನೆರವಿಗೆ ಸರ್ವ ಧರ್ಮೀಯರು ಕೈಗೆ ಕೈ ಜೋಡಿಸಿದರು. ಹಲವು ಕೊರೋನ ಸಂತ್ರಸ್ತರ ಮುಸ್ಲಿಮೇತರರ ಮೃತದೇಹಗಳನ್ನು ವಿವಿಧ ಮುಸ್ಲಿಮ್ ಸಂಘಟನೆಗಳ ಮುಂದಾಳುಗಳು ಅಂತ್ಯ ಸಂಸ್ಕಾರ ನಡೆಸಿ ಮಾದರಿಯಾದರು. ಜಾತಿ ಧರ್ಮಗಳನ್ನು ಮೀರಿ ದೇಶದ ಜನರು ಪರಸ್ಪರ ನೆರವಾದರು. ಕೊರೋನಕ್ಕೆ ಧರ್ಮದ ಬಣ್ಣ ಹಚ್ಚಲು ಹೊರಟ ರಾಜಕೀಯ ನಾಯಕರಿಗೆ ತೀವ್ರ ಮುಖಭಂಗವಾಯಿತು. ಇದೀಗ ತಬ್ಲೀಗಿ ಜಮಾಅತ್ನ ಮೇಲಿರುವ ಎಫ್ಐಆರ್ ರದ್ದುಗೊಳಿಸುವ ಮೂಲಕ, ಈ ದೇಶಕ್ಕೆ ಕೊರೋನ ವೈರಸ್ಗಿಂತಲೂ ಅಪಾಯಕಾರಿ ವೈರಸ್ ಯಾವುದು ಎನ್ನುವುದನ್ನು ಹೈಕೋರ್ಟ್ ಸೂಚ್ಯವಾಗಿ ತಿಳಿಸಿದಂತಾಗಿದೆ. ನಾವಿಂದು ಕೊರೋನಕ್ಕೆ ಹೆದರಬೇಕಾಗಿಲ್ಲ. ಆದರೆ ಕೋಮುವೈರಸ್ಗಳನ್ನು ಹರಡುವ ವ್ಯಕ್ತಿಗಳಿಂದ ಇನ್ನಾದರೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕಾಗಿದೆ.







