ನಂಬಿಕೆಯ ಹೆಸರಿನಲ್ಲಿ ನದಿಗಳಿಗೆ ಕುತ್ತು

Photo : X
ಇತ್ತೀಚೆಗೆ ಮಧ್ಯಪ್ರದೇಶದ ಸಿಹೋರ್ ಜಿಲ್ಲೆಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ನರ್ಮದಾ ನದಿಗೆ 11, 000 ಲೀಟರ್ ಹಾಲು ಮತ್ತು 210 ಸೀರೆಗಳನ್ನು ಅರ್ಪಿಸಲಾಯಿತು. ಇಂದು ದೇಶದ ಹಲವೆಡೆ ನದಿಗಳನ್ನು ಪೂಜಿಸುವ ಭಾಗವಾಗಿ ಲೀಟರ್ಗಟ್ಟಲೆೆ ಹಾಲುಗಳನ್ನು ಸುರಿಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಇದರಿಂದಾಗಿ ಜಲಮೂಲ ಗಂಭೀರ ರೂಪದಲ್ಲಿ ಕಲುಷಿತಗೊಳ್ಳುತ್ತಿದೆ ಎಂದು ಆರೋಪಿಸಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ)ಗೆ ದೂರು ನೀಡಲಾಗಿದೆ. ಮಂಡಳಿಯು ಇದಕ್ಕೆ ಸಂಬಂಧಿಸಿ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ಪ್ರತಿಕ್ರಿಯೆಯನ್ನು ಕೋರಿದೆ. ವಿಪರ್ಯಾಸವೆಂದರೆ ಧಾರ್ಮಿಕ ಆಚರಣೆಯ ನೆಪದಲ್ಲಿ ಸರಕಾರದ ನೇತೃತ್ವದಲ್ಲೇ ನದಿಗಳಿಗೆ ಹಾಲು, ಸೀರೆ ಅರ್ಪಿಸುವ ಕೆಲಸಗಳು ನಡೆಯುತ್ತಿರುವುದು ಮತ್ತು ಇದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಎನ್ಜಿಟಿಯು ಹಿಂದೇಟು ಹಾಕುತ್ತಿರುವುದು. ಇಂತಹ ಕಾರ್ಯಕ್ರಮಗಳು ರಾಜಕಾರಣಿಗಳ ಸಹಭಾಗಿತ್ವದಿಂದ ನಡೆಯುವುದರಿಂದ ಮಂಡಳಿಗೆೆ ಪ್ರಶ್ನಿಸುವುದು ಕಷ್ಟವಾಗುತ್ತದೆ. ಇದೇ ಸಂದರ್ಭದಲ್ಲಿ ಎಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪವನ್ನು ಎದುರಿಸಬೇಕಾಗುತ್ತದೋ ಎನ್ನುವ ಭಯವೂ ಮಂಡಳಿಯನ್ನು ಕಾಡುತ್ತದೆ.
ಅತಿ ಹೆಚ್ಚು ನದಿಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ಭಾರತ ಹೊಂದಿದೆ. ಅದರ ಜೊತೆ ಜೊತೆಗೇ ಭಾರತದ ಬಹುತೇಕ ನದಿಗಳ ನೀರು ಕುಡಿಯುವುದಕ್ಕೆ ಅರ್ಹವಲ್ಲ ಎನ್ನುವ ಪ್ರಮಾಣ ಪತ್ರವನ್ನು ಪಡೆದುಕೊಂಡಿದೆ. ಭಾರತೀಯರ ಪಾಲಿಗೆ ಪರಮಪವಿತ್ರವಾಗಿರುವ ಗಂಗಾನದಿಯು ಜಗತ್ತಿನ ಅತ್ಯಂತ ಕಲುಷಿತ ನದಿಗಳಲ್ಲಿ ಒಂದು ಎಂದು ಕುಖ್ಯಾತಿಯನ್ನು ಪಡೆದಿದೆ. ಗಂಗಾನದಿಯ ಒಟ್ಟು ಮಾಲಿನ್ಯಕ್ಕೆ ಶೇ. 70ರಿಂದ 80ರಷ್ಟು ಕಾರಣ ನಗರಗಳ ಕೊಳಚೆ ಮತ್ತು ಸಾಬೂನು ಮಿಶ್ರಿತ ತ್ಯಾಜ್ಯವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನಗಳ ಪ್ರಕಾರ ಗಂಗಾ ನದಿಯ ತೀರದಲ್ಲಿರುವ ಪ್ರಮುಖ ನಗರಗಳಿಂದ ಪ್ರತಿದಿನ ಸುಮಾರು 6,000 ಮಿಲಿಯನ್ ಲೀಟರ್ಗಳಿಗಿಂತಲೂ ಹೆಚ್ಚು ಸಂಸ್ಕರಿಸದ ಅಥವಾ ಭಾಗಶಃ ಸಂಸ್ಕರಿಸಿದ ಕೊಳಚೆ ನೀರು ನೇರವಾಗಿ ನದಿಯನ್ನು ಸೇರುತ್ತದೆ. ಸುಮಾರು 3,000 ಮಿಲಿಯನ್ ಲೀಟರ್ ಕಲುಷಿತ ನೀರು ಪ್ರತಿದಿನ ಯಾವುದೇ ಸಂಸ್ಕರಣೆಯಿಲ್ಲದೆ ನೇರವಾಗಿ ಗಂಗೆಯ ಒಡಲು ಸೇರುತ್ತಿದೆ. ಗಂಗಾ ನದಿ ಪಾತ್ರದಲ್ಲಿರುವ ಸುಮಾರು 1,100ಕ್ಕೂ ಹೆಚ್ಚು ಕೈಗಾರಿಕೆಗಳಿಂದ ಸುಮಾರು 500 ಮಿಲಿಯನ್ ಲೀಟರ್ ರಾಸಾಯನಿಕ ಮಿಶ್ರಿತ ವಿಷ ತ್ಯಾಜ್ಯ ನದಿಗೆ ಹರಿಯುತ್ತದೆ. ಉತ್ತರ ಪ್ರದೇಶದ ಕಾನ್ಪುರದ ಚರ್ಮದ ಕಾರ್ಖಾನೆಗಳು ಬಣ್ಣದ ಕಾರ್ಖಾನೆಗಳು ಕಾಗದದ ಗಿರಣಿಗಳು, ಸಕ್ಕರೆ ಕಾರ್ಖಾನೆಗಳು ಮತ್ತು ರಾಸಾಯನಿಕ ಉದ್ಯಮಗಳು ಕ್ರೋಮಿಯಂ, ಸೀಸ, ಪಾದರಸ, ಆರ್ಸೆನಿಕ್ನಂತಹ ಭೀಕರ ರಾಸಾನಿಯಕಗಳನ್ನು ನದಿಗೆ ಬಿಡುತ್ತಿವೆ. ಜಗತ್ತಿನಲ್ಲೇ ಕಡಲಿಗೆ ಅತಿ ಹೆಚ್ಚು ಪ್ಲಾಸ್ಟಿಕ್ ಕಸವನ್ನು ಹೊತ್ತೊಯ್ಯುವ ಮೊದಲ 10 ನದಿಗಳಲ್ಲಿ ಗಂಗಾ ನದಿಯೂ ಒಂದಾಗಿದೆ. ಯಮುನಾ ನದಿಯಲ್ಲಿ ಆಮ್ಲಜನಕದ ಪ್ರಮಾಣ ಶೂನ್ಯಕ್ಕೆ ತಲುಪುತ್ತಿದೆ. ಈ ನದಿಯ ಮೇಲೆ ವಿಷಕಾರಿ ಬಿಳಿನೊರೆ ತೇಲುತ್ತಿರುವುದು ಜಗತ್ತಿನಾದ್ಯಂತ ಈಗಾಗಲೇ ಸುದ್ದಿಯಾಗಿದೆ.
ಸಾಧಾರಣವಾಗಿ ಧಾರ್ಮಿಕ ಕಾರಣಗಳಿಗಾಗಿ ನದಿಯನ್ನು ಕಲುಷಿತಗೊಳಿಸುವ ಜನರು ಕಾರ್ಖಾನೆಗಳಿಂದ ನದಿಗಳಿಗೆ ಹರಿಯುವ ತ್ಯಾಜ್ಯಗಳನ್ನು ತೋರಿಸಿ ತಮ್ಮ ಕಾರ್ಯವನ್ನು ಸಮರ್ಥಿಸಿಕೊಳ್ಳುತ್ತಾರೆ. ನದಿಗಳಿಗೆ ಹಾಲು, ಸೀರೆ ಅರ್ಪಿಸುವುದರಿಂದ ನದಿ ಕಲುಷಿತವಾಗುತ್ತದೆ ಎಂದು ಹೇಳಿದರೆ, ಸಾವಿರಾರು ಕಾರ್ಖಾನೆಗಳಿಂದ ಹರಿಯುವ ತ್ಯಾಜ್ಯಗಳನ್ನು ಮೊದಲು ನಿಲ್ಲಿಸಿ ಎಂದು ತರಾಟೆಗೆ ತೆಗೆದುಕೊಳ್ಳುತ್ತಾರೆ. ಆದರೆ, ನದಿಗಳ ವಿಷಯದಲ್ಲಿ ಧಾರ್ಮಿಕ ವ್ಯಕ್ತಿಗಳಿಗೆ ಹೆಚ್ಚು ಹೊಣೆಗಾರಿಕೆಗಳಿವೆ ಎನ್ನುವುದನ್ನು ಈ ಸಂದರ್ಭದಲ್ಲಿ ಮರೆಯುತ್ತಾರೆ. ಕಾರ್ಖಾನೆಗಳ ಹಿಂದಿರುವವರಿಗೆ ತಮ್ಮ ಸ್ವಾರ್ಥ, ಲಾಭಗಳನ್ನು ಹೊರತು ಪಡಿಸಿದರೆ ನದಿಗಳ ಕುರಿತಂತೆ ಯಾವುದೇ ಕಾಳಜಿಗಳಿಲ್ಲ. ಆದರೆ ಧಾರ್ಮಿಕ ವ್ಯಕ್ತಿಗಳಿಗೆ ನದಿಗಳ ಜೊತೆಗೆ ಭಾವನಾತ್ಮಕ ಸಂಬಂಧವಿದೆ. ನದಿಯಲ್ಲಿ ತಾಯಿಯನ್ನು ಕಾಣುವ, ದೇವತೆಗಳನ್ನು ಕಾಣುವ ದೇಶ ನಮ್ಮದು. ಭಾರತದ ಬಹುತೇಕ ನಾಗರಿಕತೆಗಳು ಅರಳಿದ್ದು ನದೀ ಪಾತ್ರಗಳಲ್ಲಿ. ನದಿಗಳ ಮಹತ್ವವನ್ನು ಅರಿತ ಕಾರಣದಿಂದಲೇ ನಮ್ಮ ಹಿರಿಯರು ನದಿಗಳಲ್ಲಿ ದೇವತೆಗಳನ್ನು ಕಂಡರು. ಅವುಗಳನ್ನು ಪವಿತ್ರವಾಗಿ ಉಳಿಸುವ ಸದುದ್ದೇಶ ಅದರ ಹಿಂದಿತ್ತು. ಆದರೆ ಇಂದು, ನದಿಗಳು ದೇವತಾಸ್ಥಾನಕ್ಕೇರಿರುವುದೇ ಅವುಗಳ ಪಾಲಿಗೆ ಮುಳುವಾಗಿದೆ. ಸ್ವರ್ಗ, ಮೋಕ್ಷದ ಉದ್ದೇಶದಿಂದ ನದಿ ಪಾತ್ರಗಳಲ್ಲಿ ಶವ ಸಂಸ್ಕಾರ ನಡೆಸಿ ನದಿಗಳಿಗೆ ತೇಲಿ ಬಿಡುವ ಪ್ರವೃತ್ತಿಗಳು ಇನ್ನೂ ನಿಂತಿಲ್ಲ. ಗಂಗಾ ನದಿಯನ್ನು ಅತ್ಯಂತ ಪವಿತ್ರವೆಂದು ಭಾವಿಸುವುದರಿಂದ ಅದರ ತೀರದಲ್ಲಿ ವರ್ಷಕ್ಕೆ ಸುಮಾರು 30,000ಕ್ಕೂ ಹೆಚ್ಚು ಶವಗಳ ದಹನಕ್ರಿಯೆಗಳು ನಡೆಯುತ್ತವೆೆ. ಭಾಗಶಃ ಸುಟ್ಟ ಶವಗಳು, ಚಿತಾಭಸ್ಮದ ಟನ್ಗಟ್ಟಲೆ ಬೂದಿ ಪ್ರತಿವರ್ಷ ನದಿ ನೀರನ್ನು ಸೇರುತ್ತವೆ. ನಮಾಮಿ ಗಂಗಾ ಯೋಜನೆಯನ್ನು ಹಮ್ಮಿಕೊಂಡು ಗಂಗೆಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಸಾವಿರಾರು ಅಸ್ಥಿಪಂಜರಗಳನ್ನು ಗಂಗೆಯ ಒಡಲಿಂದ ತೆಗೆದು ಹಾಕಲಾಯಿತು. ಇವೆಲ್ಲವನ್ನು ಎಸಗಿರುವುದು ನದಿಯ ಮೇಲಿನ ಗೌರವದಿಂದ ಎನ್ನುವುದು ವಿಪರ್ಯಾಸವಾಗಿದೆ. ಭಕ್ತಿಯ ಹೆಸರಿನಲ್ಲಿ ನಾವು ಪವಿತ್ರವೆಂದು ಪೂಜಿಸುವ ನದಿಗಳನ್ನು ಅಪವಿತ್ರಗೊಳಿಸುತ್ತಿದ್ದೇವೆ ಎನ್ನುವ ಪ್ರಜ್ಞೆಯನ್ನು ಭಕ್ತಾದಿಗಳಿಗೆ ಮೂಡಿಸುವ ಕೆಲಸ ಧಾರ್ಮಿಕ ಮುಖಂಡರಿಂದ ನಡೆಯಬೇಕಾಗಿದೆ. ಆದರೆ ಇಂದು ದುರದೃಷ್ಟವಶಾತ್, ಅವರೇ ಇದರ ನೇತೃತ್ವವನ್ನು ವಹಿಸಿದ್ದಾರೆ.
ಸಾವಿರಾರು ಲೀಟರ್ ಹಾಲನ್ನು ನದಿಗೆ ಸುರಿಯುವುದಕ್ಕಿಂತ ಅವುಗಳನ್ನು ಸಾಂಕೇತಿಕವಾಗಿ ನದಿಗೆ ಅರ್ಪಿಸಿ ಉಳಿದ ಹಾಲನ್ನು ಬಡವರ ಮಕ್ಕಳಿಗೆ ನೀಡಲು ಧಾರ್ಮಿಕ ಮುಖಂಡರು ಪ್ರೇರೇಪಿಸಬೇಕು. ಈ ಕೆಲಸವನ್ನು ಸರಕಾರವೋ, ಪರಿಸರ ಸಂಸ್ಥೆಗಳೋ ಮಾಡುವುದಕ್ಕಾಗುವುದಿಲ್ಲ. ಭಾರತ ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶವಾಗಿದ್ದರೂ, ಅಪೌಷ್ಟಿಕತೆ ಪ್ರಮಾಣ ಕಳವಳಕಾರಿ ಮಟ್ಟದಲ್ಲಿದೆ. ಅಪೌಷ್ಟಿಕತೆಯ ಕಾರಣದಿಂದ ಭಾರತದಲ್ಲಿ 5 ವರ್ಷದೊಳಗಿನ ಸುಮಾರು ಶೇ. 2.5ರಷ್ಟು ಮಕ್ಕಳು ವಯಸ್ಸಿಗೆ ತಕ್ಕ ಎತ್ತರವಿಲ್ಲದೆ ಬಳಲುತ್ತಿದ್ದಾರೆ. ದೇಶದ ಶೇ. 50ಕ್ಕಿಂತ ಹೆಚ್ಚು ಗರ್ಭಿಣಿಯರು ಮತ್ತು ಮಹಿಳೆಯರು ಹಾಗೆಯೇ ಮಕ್ಕಳು ತೀವ್ರ ರಕ್ತಹೀನತೆಯಿಂದ ನರಳುತ್ತಿದ್ದಾರೆ. ಭಾರತದಲ್ಲಿ ಸದ್ಯಕ್ಕೆ ಒಬ್ಬ ವ್ಯಕ್ತಿಗೆ ದಿನಕ್ಕೆ ಸರಾಸರಿ 450 ಗ್ರಾಂಗಿಂತ ಹೆಚ್ಚು ಹಾಲು ಲಭ್ಯವಿದೆ. ಆದರೆ ಬಡತನ ರೇಖೆಗಿಂತ ಕೆಳಗಿರುವ ಕೋಟ್ಯಂತರ ಮಕ್ಕಳಿಗೆ ಹಾಲನ್ನು ಕೊಂಡು ಕುಡಿಯುವ ಶಕ್ತಿಯಿಲ್ಲ. ಒಂದೆಡೆ ಹಾಲನ್ನು ನದಿಗೆ ಸುರಿದು ನದಿಯನ್ನು ಕಲುಷಿತಗೊಳಿಸಲಾಗುತ್ತದೆಯಾದರೆ, ಮತ್ತೊಂದೆಡೆ ಹಸಿದ ಮಕ್ಕಳು ಕುಡಿಯಬೇಕಾಗಿದ್ದ ಹಾಲನ್ನು ವ್ಯರ್ಥ ಮಾಡಲಾಗುತ್ತಿದೆ. ಇವೆರಡನ್ನೂ ಯಾವುದೇ ಧರ್ಮ ಒಪ್ಪುವುದಕ್ಕೆ ಸಾಧ್ಯವಿಲ್ಲ. ಮೊದಲು ಈ ದೇಶದಲ್ಲಿ ಧರ್ಮದ ಹೆಸರಿನಲ್ಲಿ ನದಿಗಳನ್ನು ಕಲುಷಿತಗೊಳಿಸುವ ಮತ್ತು ತಿನ್ನುವ ಆಹಾರವನ್ನು ವ್ಯರ್ಥಗೊಳಿಸುವ ಕೃತ್ಯಗಳಿಗೆ ಕಡಿವಾಣ ಹಾಕಬೇಕಾಗಿದೆ. ಆದರೆ ಇದು ನಂಬಿಕೆಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಸರಕಾರ ಹಸ್ತಕ್ಷೇಪ ಮಾಡುವುದಕ್ಕಿಂತ ಆಯಾ ಧಾರ್ಮಿಕ ಮುಖಂಡರೇ ಜನರಲ್ಲಿ ಜಾಗೃತಿ ಮೂಡಿಸುವುದಕ್ಕೆ ಮುಂದಾಗಬೇಕಾಗಿದೆ. ಇದು ಕೇವಲ ಪರಿಸರ ಮತ್ತು ಆಹಾರಕ್ಕೆ ಸಂಬಂಧಿಸಿದ ಜಾಗೃತಿ ಮಾತ್ರವಲ್ಲ, ಪರೋಕ್ಷವಾಗಿ ಧಾರ್ಮಿಕ, ಆಧ್ಯಾತ್ಮಿಕ ಜಾಗೃತಿಯೂ ಹೌದು.






