ಪರಿಷ್ಕರಣೆಯ ಹೆಸರಿನಲ್ಲಿ ಮತದಾನದ ಹಕ್ಕಿನ ನಿರಾಕರಣೆ

ಸಾಂದರ್ಭಿಕ ಚಿತ್ರ | Photo credit : PTI
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಭಾರತದ ಚುನಾವಣಾ ಆಯೋಗದ ‘ವಿಶೇಷ ಸಮಗ್ರ ಪರಿಷ್ಕರಣೆ’(ಎಸ್ಐಆರ್) ಬಗ್ಗೆ ಮೊದಲಿನಿಂದಲೂ ಆಕ್ಷೇಪಗಳು ವ್ಯಕ್ತವಾಗುತ್ತಲೇ ಇವೆ. ಚುನಾವಣಾ ಆಯೋಗ ಆಗಾಗ ಪರಿಷ್ಕರಣೆ ನಡೆಸುವುದು ಹೊಸತಲ್ಲ. ಹಿಂದೆಲ್ಲಾ ಪರಿಷ್ಕರಣೆ ನಡೆಸಿದಾಗ ಈಗಿನಂತೆ ಟೀಕೆ, ಆಕ್ಷೇಪಗಳು ವ್ಯಕ್ತವಾಗಿರಲಿಲ್ಲ. ಆದರೆ ಈ ಬಾರಿ ಆಯೋಗದ ಉದ್ದೇಶದ ಪ್ರಾಮಾಣಿಕತೆ ಬಗ್ಗೆ ಸಹಜವಾಗಿ ಸಂದೇಹ ಮತ್ತು ಕಟು ಟೀಕೆಗಳು ಬಂದಿವೆ. ಇದಕ್ಕೆ ಪರಿಷ್ಕರಣೆಯ ಹೆಸರಿನಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ಮತದಾರರನ್ನು ಕೈ ಬಿಡಲಾಗಿದೆ ಎಂಬುದೇ ಮುಖ್ಯ ಕಾರಣವಾಗಿದೆ. ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ಮೂರನೆಯ ಹಂತದಲ್ಲಿ 16 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯಲ್ಲಿದ್ದ ಒಟ್ಟು 36 ಕೋಟಿ ಹೆಸರುಗಳಲ್ಲಿ 6 ಕೋಟಿಗೂ ಹೆಚ್ಚಿನ ಸಂಖ್ಯೆಯ ಹೆಸರುಗಳನ್ನು ಕೈ ಬಿಡಲಾಗಿದೆ. ದಿಲ್ಲಿಯೊಂದರಲ್ಲೇ ಸುಮಾರು 48 ಲಕ್ಷಕ್ಕೂ ಹೆಚ್ಚು ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಅಂದರೆ ಪ್ರತೀ ಮೂವರು ಮತದಾರರಲ್ಲಿ ಒಬ್ಬರ ಹೆಸರನ್ನು ತೆಗೆದು ಹಾಕಲಾಗಿದೆ. ಮಹಾರಾಷ್ಟ್ರದಲ್ಲಿ ಎರಡು ಕೋಟಿಗೂ ಹೆಚ್ಚು ಹೆಸರುಗಳನ್ನು ಹಾಗೂ ಕರ್ನಾಟಕದಲ್ಲಿ 1.07 ಕೋಟಿಗೂ ಹೆಚ್ಚು ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಲಾಗಿದೆ. ತೆಲಂಗಾಣದಲ್ಲಿ 73 ಲಕ್ಷ, ಆಂಧ್ರಪ್ರದೇಶದಲ್ಲಿ 44 ಲಕ್ಷ ಮತ್ತು ಜಾರ್ಖಂಡ್ನಲ್ಲಿ 43 ಲಕ್ಷ ಮತದಾರರ ಹೆಸರುಗಳನ್ನು ಕೈ ಬಿಡಲಾಗಿದೆ. ಇತರ ರಾಜ್ಯಗಳಲ್ಲೂ ಭಾರೀ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಈ ರೀತಿ ಏಕಾಏಕಿ ಮತದಾರರ ಪಟ್ಟಿಯಿಂದ ಮತದಾರರ ಹೆಸರುಗಳನ್ನು ತೆಗೆದು ಹಾಕುವ ಉದ್ದೇಶವೇನು ಎಂಬುದು ಬಯಲಿಗೆ ಬರಬೇಕಾಗಿದೆ.
ಪ್ರಜಾಪ್ರಭುತ್ವ ಆಡಳಿತ ಪದ್ಧತಿಯನ್ನು ಒಪ್ಪಿದ ಯಾವುದೇ ರಾಷ್ಟ್ರದಲ್ಲಿ ಮತದಾರರ ಪಟ್ಟಿಯಿಂದ ಬಹುದೊಡ್ಡ ಸಂಖ್ಯೆಯ ಮತದಾರರನ್ನು ಹೊರಗಿಡುವುದು ಮತ್ತು ಆ ಮೂಲಕ ಅವರ ಮತದಾನದ ಹಕ್ಕನ್ನು ನಿರಾಕರಿಸುವುದನ್ನು ಯಾರೂ ಒಪ್ಪಲು ಸಾಧ್ಯವಿಲ್ಲ. ಇದರ ಹಿಂದೆ ಬೇರೇನೋ ದುರುದ್ದೇಶವಿದೆ ಎಂಬ ಸಂದೇಹ ಸಹಜವಾಗಿ ಬರುತ್ತದೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ನಡೆಸಲಾದ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ 90 ಲಕ್ಷ ಮತದಾರರ ಹೆಸರುಗಳನ್ನು ಅಳಿಸಿ ಹಾಕಲಾಗಿತ್ತು. ಇದರಿಂದ ಸಿಡಿದೆದ್ದ ಅಲ್ಲಿನ ಜನರು ತಮ್ಮ ಸಂವಿಧಾನಾತ್ಮಕ ಹಕ್ಕಿಗಾಗಿ ಕಾನೂನು ಸಮರಕ್ಕೆ ಮುಂದಾದರು. ಇದಕ್ಕೆ ಸಂಬಂಧಿಸಿದಂತೆ 38 ಲಕ್ಷ ಜನರು ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ಪೈಕಿ ಶೇ. 91 ಜನರು ತಮ್ಮ ಮತದಾನದ ಹಕ್ಕನ್ನು ಈಗಾಗಲೇ ಮರಳಿ ಪಡೆದಿದ್ದಾರೆ ಅಂದರೆ ಅದರ ಅರ್ಥವೇನು? ಇದರಲ್ಲಿ ಚುನಾವಣಾ ಆಯೋಗದ ಲೋಪ ಎದ್ದು ಕಾಣುವುದಿಲ್ಲವೇ? ಅವರಿಗೆ ಚುನಾವಣಾ ಆಯೋಗ ಮತದಾನದ ಹಕ್ಕನ್ನು ನಿರಾಕರಿಸಿ ಪ್ರಮಾದ ಎಸಗಿರುವುದು ಸಾಬೀತಾಗಿದೆ ಎಂದಲ್ಲವೇ? ಆದರೆ ವಿಷಾದದ ಸಂಗತಿ ಅಂದರೆ ಸುಪ್ರೀಂ ಕೋರ್ಟ್ ಕೂಡ ಈ ವಿವಾದಾತ್ಮಕವಾದ ಪರಿಷ್ಕರಣೆ ಪ್ರಕ್ರಿಯೆಯನ್ನು ಅನುಮೋದಿಸಿತ್ತು ಮಾತ್ರವಲ್ಲ, ಮತ ಚಲಾಯಿಸದಂತೆ ಮತದಾರರನ್ನು ನಿರ್ಬಂಧಿಸಿತ್ತು. ನ್ಯಾಯ ಮಂಡಳಿ ಮಾತ್ರವಲ್ಲ ಕೋಲ್ಕತಾ ಹೈಕೋರ್ಟ್ ಕೂಡ ಈಗ ಪ್ರತಿದಿನ 40 ಪ್ರಕರಣಗಳ ವಿಚಾರಣೆಯನ್ನು ನಡೆಸುತ್ತಿದೆ. ಹೈದರಾಬಾದ್ನ 15 ವಿಧಾನಸಭಾ ಮತ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಿಂದ ಹೆಸರನ್ನು ಅಳಿಸಿ ಹಾಕಿರುವ ಪ್ರಮಾಣವು 2023ರ ವಿಧಾನಸಭಾ ಚುನಾವಣೆಯಲ್ಲಿ ಆ ಕ್ಷೇತ್ರಗಳಲ್ಲಿನ ಗೆಲುವಿನ ಅಂತರದ ಪ್ರಮಾಣಕ್ಕಿಂತ ಹೆಚ್ಚಾಗಿದೆ. ದಿಲ್ಲಿಯಲ್ಲಿ ಅಲ್ಪಸಂಖ್ಯಾತ ಮತ್ತು ಪರಿಶಿಷ್ಟ ಜಾತಿ ಸಮುದಾಯಗಳ ಕ್ಷೇತ್ರಗಳಲ್ಲಿ ಹೆಸರುಗಳನ್ನು ಅತ್ಯಧಿಕ ಪ್ರಮಾಣದಲ್ಲಿ ಕೈ ಬಿಡಲಾಗಿದೆ ಎಂದು ವರದಿಗಳಿಂದ ತಿಳಿದು ಬರುತ್ತದೆ. ಇದರಲ್ಲಿ ಕರ್ನಾಟಕವೂ ಹೊರತಾಗಿಲ್ಲ. ಇಲ್ಲಿಯೂ ಭಾರೀ ಸಂಖ್ಯೆಯಲ್ಲಿ ಮತದಾರರ ಹೆಸರುಗಳನ್ನು ಅಳಿಸಿ ಹಾಕಲಾಗಿದೆ. ಇದರ ವಿರುದ್ಧ ಕಳೆದ ವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಮಹಾರಾಷ್ಟ್ರದಲ್ಲಿ ಈಗ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈ ಬಿಟ್ಟಿರುವ ಪ್ರಮಾಣವನ್ನು ನೋಡಿದರೆ 2024ರ ವಿಧಾನ ಸಭಾ ಚುನಾವಣೆಗೆ ಮುನ್ನ ಮತ ಕಳ್ಳತನಕ್ಕಾಗಿ 40 ಲಕ್ಷ ಮತದಾರರನ್ನು ಅನುಮಾನಾಸ್ಪದವಾಗಿ ಮತದಾರರ ಪಟ್ಟಿಗೆ ಹೊಸದಾಗಿ ಸೇರಿಸಲಾಗಿದೆ ಎಂದು ತಾವು ಮಾಡಿರುವ ಆರೋಪವನ್ನು ಪುಷ್ಟೀಕರಿಸಿದಂತಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.
ಮತದಾರರ ಪಟ್ಟಿಯನ್ನು ಸರಿಪಡಿಸುವ ಅಧಿಕಾರ ಮತ್ತು ಹೊಣೆಗಾರಿಕೆ ತನಗಿದೆ ಎಂದು ಚುನಾವಣಾ ಆಯೋಗವು ತನ್ನ ಕ್ರಮವನ್ನು ಸಮರ್ಥಿಸಿಕೊಳ್ಳುತ್ತಿದೆ. ಆದರೆ ಅದು ತನಗಿರುವ ಅಧಿಕಾರವನ್ನು ಯಾರದೋ ಹಿತಾಸಕ್ತಿಯ ರಕ್ಷಣೆಗಾಗಿ ಮತದಾರರಿಗೆ ತೊಂದರೆ ನೀಡಲು ಹಾಗೂ ಅವರನ್ನು ಮತದಾರರ ಪಟ್ಟಿಯಿಂದ ಕೈ ಬಿಡಲು ಹಾಗೂ ಅವರ ಮತದಾನದ ಹಕ್ಕನ್ನು ನಿರಾಕರಿಸಲು ಬಳಸುತ್ತಿರುವುದು ಈಗಾಗಲೇ ಸ್ಪಷ್ಟವಾಗಿದೆ.
ವಾಸ್ತವವಾಗಿ ಈಗಿರುವ ಮತದಾರರ ಪಟ್ಟಿಯನ್ನು ಸ್ವತಃ ಚುನಾವಣಾ ಆಯೋಗವೇ ಸಿದ್ಧಪಡಿಸಿದೆ. ಹೀಗಿರುವಾಗ ಪಟ್ಟಿಯಲ್ಲಿ ತಮ್ಮ ಹೆಸರಿರುವುದನ್ನು ಮತದಾರರೇ ಸಮರ್ಥಿಸಿಕೊಳ್ಳಬೇಕೆಂದು ಒತ್ತಾಯಿಸುವ ಬದಲಿಗೆ ಒಬ್ಬ ಮತದಾರನನ್ನು ಪಟ್ಟಿಯಿಂದ ತೆಗೆದು ಹಾಕುವಾಗ ಅದಕ್ಕೆ ಸಮರ್ಥನೀಯವಾದ ಸೂಕ್ತ ಕಾರಣಗಳನ್ನು ನೀಡಬೇಕಾದುದು ಚುನಾವಣಾ ಆಯೋಗದ ಹೊಣೆಗಾರಿಕೆಯಾಗಿದೆ. ಮಹಾರಾಷ್ಟ್ರದಂತಹ ರಾಜ್ಯದ ಮತದಾರರ ಪಟ್ಟಿಯಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ‘ಸಂಶಯಾಸ್ಪದ’ ಮತದಾರರಿದ್ದಾಗ ಅದೇ ಮತದಾರರ ಪಟ್ಟಿಯನ್ನು ಆಧರಿಸಿ ನಡೆಸಲಾದ ಚುನಾವಣೆಯನ್ನು ಕಾನೂನು ಬದ್ಧವೆಂದು ಹೇಗೆ ಪರಿಗಣಿಸಲು ಸಾಧ್ಯ? ಒಟ್ಟಾರೆ ಚುನಾವಣಾ ಆಯೋಗದ ನಡೆ ಸಂದೇಹಾಸ್ಪದ ಮಾತ್ರವಲ್ಲ ಆಕ್ಷೇಪರ್ಹವಾಗಿದೆ. ಇದನ್ನು ತಡೆಯಲು ತಮ್ಮ ಜನತಾಂತ್ರಿಕ ಹಕ್ಕಿನ ರಕ್ಷಣೆಗಾಗಿ ಜನರು ಬೀದಿಗೆ ಇಳಿದು ಹೋರಾಟ ಮಾಡುವುದೊಂದೇ ಉಳಿದ ದಾರಿಯಾಗಿದೆ.






