ಅಭಿವೃದ್ಧಿ ತಮಾಷೆಯ ವಿಷಯವಾಗದಿರಲಿ!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಇತ್ತೀಚೆಗಷ್ಟೇ ಬಾದಾಮಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಗೃಹಸಚಿವ ಪರಮೇಶ್ವರ್ ಅವರು ‘‘ಸಿದ್ದರಾಮಯ್ಯ ಸರಕಾರದ ಬಳಿ ದುಡ್ಡಿಲ್ಲ’’ ಎನ್ನುವ ಮೂಲಕ ರಾಜ್ಯ ಸರಕಾರವನ್ನು ತೀವ್ರ ಮುಜುಗರಕ್ಕೆ ಸಿಲುಕಿಸಿದ್ದರು. ‘ಬಾದಾಮಿ ಅಭಿವೃದ್ಧಿಗಾಗಿ ಒಂದು ಸಾವಿರ ಕೋಟಿ ರೂಪಾಯಿಯ ಯೋಜನೆಯೊಂದನ್ನು ರೂಪಿಸಿ ಕೇಂದ್ರ ಸರಕಾರಕ್ಕೆ ಕೊಡಿ. ಯಾವ ಕಾರಣಕ್ಕೂ ರಾಜ್ಯ ಸರಕಾರಕ್ಕೆ ನೀಡಬೇಡಿ. ಯಾಕೆಂದರೆ, ಉಚಿತ ಅಕ್ಕಿ, ಬೇಳೆ, ಎಣ್ಣೆ ಕೊಟ್ಟು ಸರಕಾರದ ಬಳಿ ಹಣವಿಲ್ಲ. ನಾವು ಈಗಾಗಲೇ ಉಚಿತವಾಗಿ ಎಣ್ಣೆ ,ಬೇಳೆ ಮೊದಲಾದವುಗಳನ್ನು ನೀಡುತ್ತಿರುವುದರಿಂದ ನಮ್ಮ ಬಳಿ ಕೇಳ ಬೇಡಿ’ ಎಂಬ ಬೇಜವಾಬ್ದಾರಿ ಹೇಳಿಕೆಯನ್ನು ನೀಡಿದ್ದರು. ಈಗಾಗಲೇ ವಿರೋಧ ಪಕ್ಷದ ನಾಯಕರು, ಗ್ಯಾರಂಟಿ ಯೋಜನೆಗಳಿಂದಾಗಿ ಸರಕಾರದ ಖಜಾನೆಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಲು ದುಡ್ಡಿಲ್ಲ ಎಂದು ತಮಾಷೆ ಮಾಡುತ್ತಿದ್ದಾರೆ. ಇದೊಂದು ರೀತಿಯಲ್ಲಿ, ಹಸಿದು ಕೂತ ವಿರೋಧ ಪಕ್ಷಗಳ ನಾಯಕರಿಗೆ ಸ್ವತಃ ಗೃಹ ಸಚಿವರೇ ಉಚಿತ ಭೋಜನ ಬಡಿಸಿದಂತಾಗಿತ್ತು. ಸಚಿವರು ಆಡಿದ ಮಾತುಗಳನ್ನೇ ಮುಂದಿಟ್ಟುಕೊಂಡು ವಿರೋಧಿಗಳು ಸರಕಾರದ ಮೇಲೆ ದಾಳಿಮಾಡ ತೊಡಗಿದರು. ಆಗ ತಕ್ಷಣ ‘‘ನಾನು ಅದನ್ನು ತಮಾಷೆಯಾಗಿ ಹೇಳಿದ್ದು’’ ಎಂದು ಹೇಳಿಕೆಯಿಂದ ಪರಮೇಶ್ವರ್ ಜಾರಿಕೊಂಡರು. ಆದರೆ ಸ್ವತಃ ಗೃಹ ಸಚಿವರೇ ಆಡಿರುವ ಮಾತುಗಳಾಗಿದ್ದುದರಿಂದ ಸರಕಾರದ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನು ಬೀರಿ ಆಗಿತ್ತು.
ಇದೀಗ ಗೃಹ ಸಚಿವರ ಮಾತುಗಳಿಗೆ ಪುಷ್ಟಿ ನೀಡುವಂತೆ, ಇನ್ನೋರ್ವ ಶಾಸಕ ತನ್ನದೇ ಸರಕಾರದ ಅಭಿವೃದ್ಧಿ ವಿಷಯವನ್ನು ತಮಾಷೆ ಮಾಡಿದ್ದಾರೆ. ಮುಖ್ಯ ಮಂತ್ರಿಯ ಆರ್ಥಿಕ ಸಲಹೆಗಾರರೂ ಆಗಿರುವುದರಿಂದ ಇವರ ಮಾತನ್ನು ನಾಡು ಗಂಭೀರವಾಗಿ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡುತ್ತಿದ್ದ ಬಸವರಾಜ ರಾಯರೆಡ್ಡಿ, ‘‘ಗ್ಯಾರಂಟಿ ಯೋಜನೆಗಳು ಬೇಡ ಎಂದು ಹೇಳಿ. ನಾನು ನಿಮಗೆ ರಸ್ತೆ ಮಾಡಿಕೊಡುತ್ತೇನೆ’’ ಎಂದು ಅಲ್ಲಿನ ಸಾರ್ವಜನಿಕರಿಗೆ ತಮಾಷೆಯಾಗಿ ಹೇಳಿದ್ದಾರೆ. ‘ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆಗಳನ್ನು ನೀಡುತ್ತಿದ್ದೀರಿ. ನಮಗೆ ಹೊಲಗಳಿಗೆ ಹೋಗಲು ರಸ್ತೆ ಮಾಡಿ ಕೊಡಿ’’ ಎಂದು ಕೆಲವು ಪುರುಷರು ಸಮಾರಂಭದಲ್ಲಿ ರಾಯರೆಡ್ಡಿಯನ್ನು ಒತ್ತಾಯಿಸಿದ್ದಾರೆ. ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಅವರು, ‘‘ಉಚಿತ ಅಕ್ಕಿ ಬೇಡ, ಗ್ಯಾರಂಟಿ ಬೇಡ ಎಂದು ಹೇಳಿ. ಅದೇ ಹಣದಲ್ಲಿ ರಸ್ತೆ ಮಾಡಿಕೊಟ್ಟು ಬಿಡ್ತೀನಿ’’ ಎಂದರು. ಇದೀಗ ರಾಯರೆಡ್ಡಿಯವರ ಹೇಳಿಕೆಯನ್ನೇ ಮುಂದಿಟ್ಟುಕೊಂಡು ವಿರೋಧ ಪಕ್ಷಗಳ ನಾಯಕರು ಸರಕಾರದ ಮೇಲೆ ಬಿದ್ದಿದ್ದಾರೆ. ‘‘ರಸ್ತೆ ಬೇಕಾದರೆ ಗ್ಯಾರಂಟಿ ಬೇಡವೆಂದು ಬರೆದುಕೊಡಿ ಎನ್ನುವ ರಾಯರೆಡ್ಡಿ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಗ್ಯಾರಂಟಿಗಳನ್ನು ಕೊಡಿ ಎಂದು ಜನರೇನೂ ಕೇಳಿರಲಿಲ್ಲ. ಅವರಾಗಿಯೇ ಭರವಸೆ ಕೊಟ್ಟು ಅಧಿಕಾರಕ್ಕೆ ಬಂದಿದ್ದು, ಸರಕಾರದ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎನ್ನುವುದಕ್ಕೆ ಈ ಹೇಳಿಕೆಯೇ ಸಾಕ್ಷಿ’’ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿರೋಧ ಪಕ್ಷಗಳ ಟೀಕಾಬಾಣಗಳು ಹರಿದು ಬರುತ್ತಿದ್ದಂತೆಯೇ ಬಸವರಾಜರಾಯ ರೆಡ್ಡಿ ಕೂಡ ‘‘ನಾನು ತಮಾಷೆಗೆ ಹೇಳಿದ ಮಾತು’’ ಎಂದು ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. ಜನಸಾಮಾನ್ಯರ ಅಭಿವೃದ್ಧಿ ಕಾರ್ಯಗಳನ್ನು ಹೀಗೆ ತಮಾಷೆ ಮಾಡುವುದಾದರೂ ಎಷ್ಟು ಸರಿ? ಈ ಮೂಲಕ ಸರಕಾರವೇ ತಮಾಷೆಗೀಡಾದಂತಾಗಲಿಲ್ಲವೆ? ಎಂಬ ಪ್ರಾಥಮಿಕ ವಿವೇಕವೂ ಆರ್ಥಿಕ ಸಲಹೆಗಾರರಾಗಿರುವ ರಾಯರೆಡ್ಡಿಯವರಿಗೆ ಇದ್ದಂತಿಲ್ಲ. ಆರ್ಥಿಕ ಸಲಹೆಗಾರರಾಗಿ ರಾಯರೆಡ್ಡಿಯವರು, ಅಭಿವೃದ್ಧಿಯಲ್ಲಿ ಗ್ಯಾರಂಟಿ ಯೋಜನೆಗಳ ಪಾತ್ರವನ್ನು ಜನತೆಗೆ ತಲುಪಿಸುವ ಕೆಲಸವನ್ನು ಮಾಡಬೇಕು. ‘ಗ್ಯಾರಂಟಿ ಯೋಜನೆಗಳು’ ಜನರಿಗೆ ಸರಕಾರ ನೀಡುತ್ತಿರುವ ಭಿಕ್ಷೆಯಲ್ಲ. ಕೊರೋನ, ಲಾಕ್‌ಡೌನ್ ಸಂದರ್ಭದಲ್ಲಿ ಎದುರಾದ ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಕೂತಿರುವ ಜನರಿಗೆ ನೆರವಾಗುವ ಉದ್ದೇಶದಿಂದ ಈ ಯೋಜನೆಗಳನ್ನು ಘೋಷಿಸಲಾಗಿದೆ. ಈ ಯೋಜನೆಗಳಿಂದಾಗಿ ಗ್ರಾಮೀಣ ಪ್ರದೇಶದಲ್ಲಿ ಬಡತನ, ಅಪೌಷ್ಟಿಕತೆಗಳಲ್ಲಿ ಭಾರೀ ಇಳಿಕೆಯಾಗಿದೆ. ರಾಜ್ಯದಲ್ಲಿ ಆರ್ಥಿಕ ಚಟುವಟಿಕೆಗಳು ಕುದುರಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ರಸ್ತೆ, ಸೇತುವೆಯಂತಹ ಮೂಲ ಸೌಕರ್ಯಗಳನ್ನು ಒದಗಿಸುವುದು ಜನರಿಗೆ ಮಾಡುವ ಉಪಕಾರ ಖಂಡಿತ ಅಲ್ಲ. ಅದು ಸರಕಾರದ ಹೊಣೆಗಾರಿಕೆಯಾಗಿದೆ. ‘ಗ್ಯಾರಂಟಿ ಯೋಜನೆಗಳು ಬೇಕೋ-ರಸ್ತೆ ಬೇಕೋ’ ಎಂದು ಆರ್ಥಿಕ ಸಲಹೆಗಾರರು ತಮಾಷೆ ರೂಪದಲ್ಲೂ ಕೂಡ ಜನರನ್ನು ಕೇಳುವಂತಾಗಬಾರದು. ಹಾಗೆ ಕೇಳಿದ್ದೇ ಆದರೆ ಅದು ಗ್ಯಾರಂಟಿ ಯೋಜನೆಗಳ ಅಣಕವಾಗುತ್ತದೆ. ಗೃಹ ಸಚಿವ ಪರಮೇಶ್ವರ್ ಆಗಲಿ, ಆರ್ಥಿಕ ಸಲಹೆಗಾರ ರಾಯರೆಡ್ಡಿಯಾಗಲಿ ಅವರು ತಮಾಷೆ ಮಾಡಿದ್ದು ಗ್ಯಾರಂಟಿ ಯೋಜನೆಗಳನ್ನು ಮತ್ತು ಅದನ್ನು ಪಡೆಯುತ್ತಿರುವ ಜನರನ್ನು. ಈ ಗ್ಯಾರಂಟಿ ಯೋಜನೆಗಳಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಿವೆ. ಅದಕ್ಕೆ ನೀವೇ ಕಾರಣ ಎಂದು ನೇರವಾಗಿ ಅವರು ಜನರನ್ನು ಹೊಣೆ ಮಾಡಿದಂತಾಗಿದೆ. ಇವರಿಬ್ಬರ ‘ತಮಾಷೆ’ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಷ್ಟೀಕರಣ ನೀಡುವುದು ಅತ್ಯಗತ್ಯವಾಗಿದೆ.
ಗ್ಯಾರಂಟಿ ಯೋಜನೆಗಳ ಬಗ್ಗೆ ಸರಕಾರದೊಳಗಿರುವ ಜನರಿಗೇ ಸರಿಯಾದ ಅರಿವಿಲ್ಲ ಎನ್ನುವುದನ್ನು ಇದು ಹೇಳುತ್ತದೆ. ‘ಗ್ಯಾರಂಟಿ ಯೋಜನೆಗಳ ಬಗ್ಗೆ ಯಾರೂ ತುಟಿ ಬಿಚ್ಚಬಾರದು’ ಎಂದು ಈ ಹಿಂದೆ ಹೈಕಮಾಂಡ್ ಸರಕಾರದೊಳಗಿರುವ ಎಲ್ಲರಿಗೂ ಸ್ಪಷ್ಟಪಡಿಸಿತ್ತು. ‘ಐದು ವರ್ಷ ಈ ಯೋಜನೆಗಳು ಜಾರಿಯಲ್ಲಿರುತ್ತವೆ’ ಎಂದು ಮಾಧ್ಯಮಗಳಿಗೆ ತಿಳಿಸಿತ್ತು. ಇಷ್ಟಾದರೂ, ಪದೇ ಪದೇ ಈ ಯೋಜನೆಯ ವಿರುದ್ಧ ಸರಕಾರದೊಳಗಿರುವವರೇ ಅಪಸ್ವರಗಳನ್ನು ಎತ್ತುತ್ತಿರುವುದು ಆಕಸ್ಮಿಕ ಅಲ್ಲ. ವಿರೋಧ ಪಕ್ಷದ ನಾಯಕರು ನೇರವಾಗಿ ‘ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಿ’ ಎಂದು ಒತ್ತಾಯಿಸುವಂತೆ ಇಲ್ಲ. ಯಾಕೆಂದರೆ, ಈಗಾಗಲೇ ಈ ಯೋಜನೆಗಳು ರಾಜ್ಯಾದ್ಯಂತ ಜನಪ್ರಿಯವಾಗಿವೆ. ಒಂದು ವೇಳೆ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಒತ್ತಾಯಿಸಿದರೆ, ಅದರಿಂದ ಜನರ ವಿರೋಧವನ್ನು ಕಟ್ಟಿಕೊಂಡಂತಾಗುತ್ತದೆ. ಆದುದರಿಂದ ವಿರೋಧ ಪಕ್ಷದ ನಾಯಕರೇ ಕಾಂಗ್ರೆಸ್‌ನೊಳಗಿರುವ ನಾಯಕರಿಂದ ‘ಗ್ಯಾರಂಟಿ ಯೋಜನೆಗಳ’ ವಿರುದ್ಧ ಮಾತನಾಡಿಸುತ್ತಿದ್ದಾರೆಯೇ ಎನ್ನುವ ಅನುಮಾನ ಎದ್ದಿದೆ. ಸಿದ್ದರಾಮಯ್ಯ ಮೇಲಿರುವ ಅತೃಪ್ತಿಯನ್ನು, ಅಸಹನೆಯನ್ನು ಭಿನ್ನಮತೀಯರು ಇಂತಹ ಹೇಳಿಕೆಗಳ ಮೂಲಕ ಹೊರಹಾಕುತ್ತಿದ್ದಾರೆ ಎನ್ನುವ ಆರೋಪವೂ ಇದೆ. ಕಾಂಗ್ರೆಸ್ ವರಿಷ್ಠರು ಈ ‘ತಮಾಷೆ’ಗಳಿಗೆ ಲಗಾಮು ಹಾಕದೆ ಇದ್ದರೆ, ಸರಕಾರವೇ ತಮಾಷೆಯ ವಸ್ತುವಾಗುವುದಕ್ಕೆ ಹೆಚ್ಚು ದಿನ ಬೇಡ.
ಇದೇ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಅಭಿವೃದ್ಧಿಯನ್ನು ಟೀಕಿಸುವ ಬಿಜೆಪಿ ನಾಯಕರು ಒಂದನ್ನು ನೆನಪಿಡಬೇಕು. ಕಾಂಗ್ರೆಸ್‌ನ ಕೆಲವರು ಜನರಲ್ಲಿ ತಮಾಷೆಯಾಗಿ ‘ಗ್ಯಾರಂಟಿ ಯೋಜನೆ ಬೇಕೋ-ರಸ್ತೆ ಸೇತುವೆ ಬೇಕೋ?’ ಎಂದಷ್ಟೇ ಕೇಳಿದ್ದಾರೆ. ಆದರೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದ ಅವಧಿಯಲ್ಲಿ ನಳಿನ್ ಕುಮಾರ್ ಕಟೀಲು ಅವರು ‘‘ರಸ್ತೆ ಸೇತುವೆ ಕೇಳಬೇಡಿ-ಲವ್‌ಜಿಹಾದ್ ಬಗ್ಗೆ ಯೋಚನೆ ಮಾಡಿ’’ ಎಂದು ಹೇಳಿ ಸುದ್ದಿಯಾಗಿದ್ದರು. ಅವರೇನು ಬಳಿಕ ‘ತಮಾಷೆಯಾಗಿ ಹೇಳಿದ್ದು’ ಎಂದು ಸ್ಪಷ್ಟೀಕರಣ ನೀಡಿರಲಿಲ್ಲ. ‘ಅಭಿವೃದ್ಧಿ ಕೇಳಬೇಡಿ-ಕೋಮುಗಲಭೆಗಳನ್ನು ಕೇಳಿ’ ಎನ್ನುವ ಬಿಜೆಪಿ ನಾಯಕರಿಗಿಂತ ‘ಗ್ಯಾರಂಟಿ ಯೋಜನೆಗಳು ಬೇಕೋ-ರಸ್ತೆ ಬೇಕೋ’ ಎಂದು ಜನರನ್ನು ಕೇಳುವ ಈ ಕಾಂಗ್ರೆಸ್ ನಾಯಕರು ಎಷ್ಟೋ ವಾಸಿ. ಅಲ್ಲವೆ?







