ಧರ್ಮಸ್ಥಳ: ಸಮಾಧಿಗಳಿಂದ ಸತ್ಯದ ಅವಶೇಷಗಳು ಹೊರ ಬರುವುದೆಂದು?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಧರ್ಮಸ್ಥಳದಲ್ಲಿ ಸರಣಿ ಹತ್ಯೆಗಳು ನಡೆದಿದ್ದು, ಆ ಹೆಣಗಳನ್ನು ಹೂತು ಹಾಕಲು ತನ್ನನ್ನು ಬಳಸಿಕೊಂಡಿದ್ದರು ಎಂದು ಆರೋಪ ಮಾಡಿದ ದೂರುದಾರ ನ್ಯಾಯಾಲಯಕ್ಕೆ ಹಾಜರಾಗಿ ತನ್ನ ಹೇಳಿಕೆಗಳನ್ನು ದಾಖಲಿಸಿ ಒಂದು ವಾರ ಕಳೆದಿದೆ. ಇನ್ನಾದರೂ ಈ ಆರೋಪದ ತನಿಖೆ ತೀವ್ರಗತಿಯನ್ನು ಪಡೆದುಕೊಳ್ಳಬಹುದು, ಸತ್ಯಗಳು ಗೋರಿಗಳಿಂದ ಹೊರ ಬೀಳಬಹುದು ಎಂಬ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ತೀವ್ರ ನಿರಾಸೆಯಾಗಿದೆ. ಒಂದೆಡೆ ತನಿಖೆಗೆ ದೂರುದಾರ ಪೂರ್ಣ ಪ್ರಮಾಣದಲ್ಲಿ ಸಹಕರಿಸಲು ಸಿದ್ದನಿದ್ದಾಗಲೂ, ತನಿಖೆಯ ಪ್ರಕ್ರಿಯೆಯ ಹೆಸರಿನಲ್ಲೇ ಪೊಲೀಸ್ ಇಲಾಖೆ ಆಮೆಗತಿಯನ್ನು ಅನುಸರಿಸುತ್ತಿದೆ. ದೂರು ನೀಡಿದಾತ ತನ್ನ ವಕೀಲರ ಮೂಲಕ "ಪೊಲೀಸರು ಅಸ್ಥಿ ಪಂಜರ ಸಿಕ್ಕಿದ ಸ್ಥಳದ ಮಹಜರು ಯಾಕೆ ಮಾಡುತ್ತಿಲ್ಲ.?' ಎಂದು ಪ್ರಶ್ನಿಸಿದ್ದಾರೆ ಮಾತ್ರವಲ್ಲ, ಅಸ್ಥಿ ಪಂಜರವನ್ನು ಒಪ್ಪಿಸಿದ್ದರೂ ಈವರೆಗೆ ಪೊಲೀಸರು ಸರಿಯಾದ ರೀತಿಯಲ್ಲಿ ತನಿಖೆ ಮುಂದುವರಿಸುತ್ತಿಲ್ಲ. ಅಸ್ಥಿಪಂಜರ ದೊರಕಿದ ಸ್ಥಳ ತನಿಖೆಗೆ ಈವರೆಗೆ ಕ್ರಮ ತೆಗೆದುಕೊಂಡಿಲ್ಲ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ. ಇದೇ ಸಂದರ್ಭದಲ್ಲಿ ಪೊಲೀಸರು ತಮ್ಮ ನಿಧಾನಗತಿಯ ತನಿಖೆಗೆ ಕುಂಟು ನೆಪವನ್ನು ಮುಂದಿಟ್ಟಿದ್ದಾರೆ. 'ಧರ್ಮಸ್ಥಳದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆ ಆರಂಭಿಸಿದರೆ ಅದು ಮುಗಿಯುತ್ತಿದ್ದಂತೆಯೇ ಸಾಕ್ಷಿ ದೂರುದಾರ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ ಎಂದು ಸ್ಥಳೀಯ ವ್ಯಕ್ತಿಗಳಿಂದ ಗುಪ್ತ ಮಾಹಿತಿ ದೊರಕಿರುತ್ತದೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಎಸ್ಪಿ ಡಾ. ಅರುಣ್ ಕೆ. ಸಮರ್ಥನೆ ನೀಡಿದ್ದಾರೆ. ''ತನಿಖಾಧಿಕಾರಿ ತನಿಖೆಯ ಯಾವ ಹಂತದಲ್ಲಿ ಸಮಾಧಿ ಅಗೆಯುವ ಪ್ರಕ್ರಿಯೆ ಸೂಕ್ತವೆಂದು ನಿರ್ಧರಿಸುತ್ತಾರೆಯೋ ಆಗ ಸೂಕ್ತ ಕಾನೂನು ಪ್ರಕ್ರಿಯೆ ಅನುಸರಿಸಿಕೊಂಡು ಸಮಾಧಿ ಅಗೆಯಲಾಗುವುದು'' ಎಂದೂ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ದೂರುದಾರ ಸಮ್ಮತಿಸಿದಲ್ಲಿ ಆತನ ಬೈನ್ ಮ್ಯಾಪಿಂಗ್, ಫಿಂಗರ್ ಪ್ರಿಂಟ್, ನಾರ್ಕೋ ಅನಾಲಿಸಿಸ್ ಪರೀಕ್ಷೆಗಳನ್ನು ನಡೆಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಅಸ್ಥಿ ಪಂಜರಗಳ ಪರೀಕ್ಷೆಯ ಬಗ್ಗೆ ಮೌನವಹಿಸಿದ್ದಾರೆ.
ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತುಹಾಕಿರುವ ವಿಷಯ ಬಹಿರಂಗವಾದುದು ಪೊಲೀಸರ ತನಿಖೆಯಿಂದಲ್ಲ. ಸಾಕ್ಷಿದಾರ ಸ್ವಯಂ ಮುಂದೆ ಬಂದು ದೂರು ನೀಡಿರುವುದರಿಂದ, ಪ್ರಕರಣ ಬೆಳಕಿಗೆ ಬಂದಿದೆ. ಮಾತ್ರವಲ್ಲ, ಇದಕ್ಕೆ ಸಂಬಂಧಿಸಿದ ಒಂದು ಅಸ್ಥಿಪಂಜರವನ್ನು ಈಗಾಗಲೇ ಆತ ಪೊಲೀಸರಿಗೆ ಒಪ್ಪಿಸಿದ್ದಾನೆ. ಜೊತೆಗೆ ತನಿಖೆಯನ್ನು ನಡೆಸಿ ಎಂದು ಆಗ್ರಹಿಸುತ್ತಿದ್ದಾನೆ. ತಲೆಮರೆಸಿಕೊಳ್ಳುವ ಉದ್ದೇಶವಿದ್ದಿದ್ದರೆ ಆತ ತನ್ನ ಜೀವವನ್ನು ಒತ್ತೆಯಿಟ್ಟು ಸ್ವ ಇಚ್ಛೆಯಿಂದ ನ್ಯಾಯಾಲಯದ ಮುಂದೆ ಹಾಜರಾಗಿ, ವಿವರಗಳನ್ನು ಬಹಿರಂಗಪಡಿಸುವ ಅಗತ್ಯವೇ ಇರುತ್ತಿರಲಿಲ್ಲ. ಸಾಕ್ಷಿದಾರ ತಾನು ಹೂತುಹಾಕಿದ್ದೇನೆ ಎನ್ನುತ್ತಿರುವ ಅಸ್ಥಿಪಂಜರಗಳು ಅಲ್ಲಿಂದ ನಾಪತ್ತೆಯಾಗದೇ ಇರಲು ಪೊಲೀಸರು ಮೊದಲು ಕ್ರಮ ತೆಗೆದುಕೊಳ್ಳಬೇಕಾಗಿತ್ತು. ಈ ಅಸ್ಥಿಪಂಜರಗಳ ಹಿಂದಿರುವ ಪ್ರಮುಖ ಆರೋಪಿಗಳು ಯಾರು ಎನ್ನುವುದು ಈವರೆಗೆ ಬಹಿರಂಗವಾಗಿಲ್ಲ. ಆದರೆ ಅವರು ಸಮಾಜದಲ್ಲಿ ಪ್ರತಿಷ್ಠಿತ ಸ್ಥಾನದಲ್ಲಿರುವವರು ಎನ್ನುವ ವದಂತಿ ಈಗಾಗಲೇ ಹರಡಿವೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿಯೂ ಇದೆ. ದೂರುದಾರ ತಲೆಮರೆಸಿಕೊಳ್ಳಬಹುದು" ಎಂದು ಅನುಮಾನ ವ್ಯಕ್ತಪಡಿಸುತ್ತಿರುವ ಪೊಲೀಸ್ ಇಲಾಖೆಗೆ, ಆರೋಪಿಗಳು ಸಾಕ್ಷ್ಯಗಳನ್ನು ನಾಶಮಾಡಬಹುದು ಎನ್ನುವ ಆತಂಕ ಯಾಕೆ ಕಾಡುತ್ತಿಲ್ಲ? ಸಾಕ್ಷಿದಾರ ತಲೆಮರೆಸಿಕೊಳ್ಳಬಹುದು ಎಂದು ಅನುಮಾನ ಪಡುತ್ತಿರುವ ಪೊಲೀಸರಿಗೆ, ಸಾಕ್ಷಿದಾರನನ್ನು ಆರೋಪಿಗಳು ಇಲ್ಲವಾಗಿಸುವ ಬಗ್ಗೆ ಯಾಕೆ ಆತಂಕವಿಲ್ಲ ಎಂದು ಜನರು ಕೇಳುತ್ತಿದ್ದಾರೆ. 'ಸಾಕ್ಷಿದಾರನಿಗೆ ಜೀವ ಭಯವಿದೆ. ಸಾಕ್ಷಿಯನ್ನು ಇಲ್ಲವಾಗಿಸುವ ಸಂಚುಗಳು ನಡೆಯಬಹುದು' ಎನ್ನುವುದನ್ನೇ ಪೊಲೀಸರು 'ಸಾಕ್ಷಿದಾರ ತಲೆಮರೆಸಿಕೊಳ್ಳುವ ಸಾಧ್ಯತೆಯಿದೆ' ಎಂದು ಹೇಳುತ್ತಿದ್ದಾರೆಯೆ? ಎಂಬ ಪ್ರಶ್ನೆಯನ್ನು ತಿರುಗಿ ಪೊಲೀಸರಿಗೆ ಕೇಳುವಂತಾಗಿದೆ.
ನೂರಾರು ಮೃತದೇಹಗಳನ್ನು ಹೂತುಹಾಕಿದ್ದೇನೆ ಎಂದು ಸಾಕ್ಷಿಯೊಬ್ಬ ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದಂತೆಯೇ 22 ವರ್ಷಗಳ ಹಿಂದೆ ನಾಪತ್ತೆಯಾದ ವಿದ್ಯಾರ್ಥಿನಿಯ ತಾಯಿಯೊಬ್ಬರು ನ್ಯಾಯ ಕೇಳಿ ಮುಂದೆ ಬಂದಿದ್ದಾರೆ. ಅನನ್ಯಾ ಭಟ್ ಎಂಬ ಹೆಸರಿನ ವೈದ್ಯಕೀಯ ವಿದ್ಯಾರ್ಥಿನಿ 2003ರಲ್ಲಿ ಧರ್ಮಸ್ಥಳದಲ್ಲಿ ನಾಪತ್ತೆಯಾಗಿದ್ದು, ಈವರೆಗೆ ಆಕೆ ಏನಾದಳು ಎನ್ನುವುದರ ವಿವರಗಳಿಲ್ಲ. ಇದೀಗ ಅನಾಮಿಕನೊಬ್ಬ 'ತಾನು ನೂರಾರು ಮೃತದೇಹಗಳನ್ನು ಹೂತು ಹಾಕಿದ್ದೇನೆ' ಎಂದು ಸಾಕ್ಷ್ಯ ಹೇಳಲು ಮುಂದೆ ಬಂದಿರುವುದರಿಂದ ತನ್ನ ಮಗಳ ಮೃತದೇಹವೂ ಅದರಲ್ಲಿ ಇರಬಹುದು. ಆದುದರಿಂದ ತನಿಖೆ ನಡೆಸಿ ತನ್ನ ಮಗಳ ಅಸ್ಥಿಪಂಜರಗಳು ಪತ್ತೆಯಾದರೆ ಅದನ್ನು ನನಗೆ ನೀಡಬೇಕು ಎಂದು ಅನನ್ಯಾ ಭಟ್ ಅವರ ತಾಯಿ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ತನಿಖೆಯ ಬಗ್ಗೆ ಪೊಲೀಸರು ಆಸಕ್ತಿ ತೋರಿಸುತ್ತಿಲ್ಲ. ಆದುದರಿಂದ ವಿಶೇಷ ತನಿಖಾ ತಂಡದಿಂದ ತನಿಖೆಯಾಗಲಿ ಎಂದೂ ಆಗ್ರಹಿಸಿದ್ದಾರೆ. ತನಿಖೆಯಲ್ಲಿ ಪೊಲೀಸರ ನಿಧಾನಗತಿಯ ವಿರುದ್ದ ಬೇರೆ ಬೇರೆ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ವಿಶೇಷ ತನಿಖಾ ತಂಡದಿಂದಲೇ ತನಿಖೆಯಾಗಲಿ ಎನ್ನುವ ಒತ್ತಾಯ ದೊಡ್ಡ ಧ್ವನಿಯಲ್ಲಿ ಕೇಳಿ ಬರುತ್ತಿದೆ.
ಹಾಲಿ 'ರಾಜ್ಯ ಸರಕಾರವು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರ ಮಟ್ಟದ ಪೊಲೀಸ್ ಅಧಿಕಾರಿ, ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ಅಥವಾ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡವನ್ನು ರಚಿಸಬೇಕು' ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಅವರು ಕೂಡ ಒತ್ತಾಯಿಸಿದ್ದಾರೆ. ಅವರ ಆಗ್ರಹಕ್ಕೆ ನಾಡಿನ ಹಿರಿಯ ವಕೀಲರು, ಮಾನವ ಹಕ್ಕು ಸಂಘಟನೆಗಳು ಕೂಡ ಧ್ವನಿಗೂಡಿಸಿವೆ. ಧರ್ಮಸ್ಥಳದ ತಲೆಬುರುಡೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿ ಮಾಡುತ್ತಿವೆಯಾದರೂ, ಈ ಸುದ್ದಿ ಮುಖ್ಯಮಂತ್ರಿಯನ್ನಾಗಲಿ, ಗೃಹ ಸಚಿವರನ್ನಾಗಲಿ ಇನ್ನೂ ತಲುಪದೇ ಇರುವುದು ನಿಗೂಢವಾಗಿದೆ. ಪ್ರಕರಣ ದಕ್ಷಿಣ ಕನ್ನಡ ಮಾತ್ರವಲ್ಲ, ಇಡೀ ರಾಜ್ಯವನ್ನೇ ಉದ್ವಿಗ್ನತೆಗೆ ತಳ್ಳುತ್ತಿದೆಯಾದರೂ, ಗೃಹ ಸಚಿವರು ಈ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಪ್ರಕರಣ ತನಿಖೆಗೊಳಗಾದರೆ ಅದು ಉಂಟು ಮಾಡಬಹುದಾದ ಕಂಪನಗಳ ಬಗ್ಗೆ ಸರಕಾರಕ್ಕೂ ಆತಂಕವಿರುವಂತಿದೆ. ಆದುದರಿಂದ ಗೃಹ ಇಲಾಖೆಯೊಳಗಿರುವ ಉನ್ನತ ರಾಜಕೀಯ ಶಕ್ತಿಗಳೇ ಸರಿಯಾದ ದಾರಿಯಲ್ಲಿ ತನಿಖೆ ನಡೆಯದಂತೆ ಪೊಲೀಸರಿಗೆ ಒತ್ತಡಗಳನ್ನು ಹಾಕುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಧರ್ಮಸ್ಥಳದಲ್ಲಿ ಹೂತು ಹಾಕಲಾಗಿರುವ ಸತ್ಯದ ಅವಶೇಷಗಳು ಇನ್ನಾದರೂ ಹೊರ ಬರಲೇಬೇಕು. ಇಲ್ಲವಾದರೆ, ಆ ಅಸ್ಥಿಪಂಜರಗಳ ಕೂಗು ವಿಧಾನಸೌಧದ ಕಂಬಕಂಬಗಳಲ್ಲೂ ಪ್ರತಿಧ್ವನಿಸುವುದಕ್ಕೆ ಶುರುವಾಗಬಹುದು. ಅದಕ್ಕೆ ಮೊದಲು ಸರಕಾರ ಎಚ್ಚೆತ್ತು, ಆ ಅಸ್ಥಿಗಳಿಗೆ ನ್ಯಾಯ ನೀಡಿ ಮೋಕ್ಷವನ್ನು ಕರುಣಿಸಲು ಮುಂದಾಗಬೇಕಾಗಿದೆ.







