Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಬರದ ಬವಣೆ: ಬೇಕಿದೆ ತುರ್ತು ಸ್ಪಂದನ

ಬರದ ಬವಣೆ: ಬೇಕಿದೆ ತುರ್ತು ಸ್ಪಂದನ

ವಾರ್ತಾಭಾರತಿವಾರ್ತಾಭಾರತಿ9 Sept 2026 8:53 AM IST
share
ಬರದ ಬವಣೆ: ಬೇಕಿದೆ ತುರ್ತು ಸ್ಪಂದನ

ಮಳೆ ಕೈಕೊಟ್ಟ ಕಾರಣ ರಾಜ್ಯದಲ್ಲಿ ಬರ ಪರಿಸ್ಥಿತಿ ಉಲ್ಬಣಿಸಿದೆ. ಎರಡು-ಮೂರು ಜಿಲ್ಲೆ ಹೊರತುಪಡಿಸಿದರೆ ಉಳಿದ ಜಿಲ್ಲೆಗಳಲ್ಲಿ ಮಳೆ ಕೊರತೆ ತೀವ್ರ ಸ್ವರೂಪ ಪಡೆದಿದೆ. ರಾಜ್ಯದಲ್ಲಿ ಸಾಮಾನ್ಯವಾಗಿ ಬಿತ್ತನೆಗೆ ಒಳಗಾಗುವ ಪ್ರದೇಶ 84 ಲಕ್ಷ ಹೆಕ್ಟೇರ್. ಮುಂಗಾರು ಕೃಷಿ ಹಂಗಾಮು ಮುಕ್ತಾಯದ ಹಂತಕ್ಕೆ ಬಂದಿದ್ದರೂ ಅದರಲ್ಲಿ 20 ಲಕ್ಷ ಹೆಕ್ಟೇರ್ ಪ್ರದೇಶ ಇನ್ನೂ ಬಿತ್ತನೆಯ ಭಾಗ್ಯವನ್ನೇ ಕಂಡಿಲ್ಲ. ಅಲ್ಪಸ್ವಲ್ಪ ಮಳೆಗೆ ಬಿತ್ತನೆಯಾದ ಬೆಳೆಗಳೂ ಮಳೆಯಿಲ್ಲದೆ ಕಮರಿಹೋಗುವ ಸ್ಥಿತಿ ಎದುರಾಗಿದೆ. ಕುಂಠಿತ ಬೆಳವಣಿಗೆಯೊಂದಿಗೆ ಕೀಟಬಾಧೆ, ಬೇರೆ ಬೇರೆ ಬಗೆಯ ರೋಗಗಳು ಕೂಡ ಕಾಡಲಾರಂಭಿಸಿವೆ. ನೀರಾವರಿ ಸೌಲಭ್ಯವಿಲ್ಲದ, ಮಳೆಯನ್ನೇ ಆಶ್ರಯಿಸಿದ ರೈತರು ಕಂಗಾಲಾಗಿದ್ದಾರೆ. ಅವರ ಭವಿಷ್ಯ ಡೋಲಾಯಮಾನ ಆಗಿದೆ. ಸಾಲ-ಸೋಲ ಮಾಡಿ ಬಿತ್ತಿದ ಬೆಳೆ ಒಣಗುತ್ತಿರುವುದನ್ನು ಕಂಡು ದಿಕ್ಕು ತೋಚದ ಸ್ಥಿತಿ ತಲುಪಿದ್ದಾರೆ.

ಮಳೆಯ ಕೊರತೆ ನೀಗುವ ಭರವಸೆಯ ಬೆಳ್ಳಿರೇಖೆ ಯಾವ ರೂಪದಲ್ಲೂ ಕಾಣಸಿಗುತ್ತಿಲ್ಲ. ರಾಜ್ಯದ ಹಲವು ಪ್ರಮುಖ ನಗರಗಳೂ ಒಳಗೊಂಡಂತೆ ಅನೇಕ ಕಡೆ ಬೇಸಿಗೆಯನ್ನು ನೆನಪಿಸುವಂಥ ಬಿಸಿಲು ಆವರಿಸಿದೆ. ಮಳೆಗಾಲದಲ್ಲಿ ಬಿಸಿಲಿನಿಂದ ಚಡಪಡಿಸುವಂಥ ಸ್ಥಿತಿ ಉಂಟಾಗಿದೆ. ಈ ಅವಧಿಯಲ್ಲಿ ಸಾಮಾನ್ಯವಾಗಿ ದಾಖಲಾಗುವ ಉಷ್ಣಾಂಶಕ್ಕಿಂತ ನಾಲ್ಕೈದು ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚು ಉಷ್ಣಾಂಶ ಇತ್ತೀಚಿನ ಕೆಲವು ದಿನಗಳಲ್ಲಿ ಹಲವೆಡೆ ದಾಖಲಾಗಿದೆ. ಮುಂಗಾರಿನ ಕೊನೆಯ ಹಂತದಲ್ಲಾದರೂ ಮಳೆರಾಯ ಕರುಣೆ ತೋರದಿದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಕೃಷಿ ಇಲಾಖೆಗೆ 37 ಲಕ್ಷಕ್ಕೂ ಹೆಚ್ಚಿನ ಬೆಳೆ ವಿಮೆ ಅರ್ಜಿಗಳು ಸಲ್ಲಿಕೆಯಾಗಿರುವುದಾಗಿ ವರದಿಯಾಗಿದೆ. ಇಷ್ಟೊಂದು ಅರ್ಜಿಗಳು ವರ್ಷವೊಂದರಲ್ಲಿ ಸಲ್ಲಿಕೆಯಾಗಿರುವುದು ಇದೇ ಮೊದಲು. ರೈತರು ಎಷ್ಟರಮಟ್ಟಿಗೆ ಆತಂಕಕ್ಕೆ ಒಳಗಾಗಿದ್ದಾರೆ ಎಂಬುದನ್ನು ಸಂಕೇತಿಸುವಂತಿದೆ ಈ ಪ್ರಮಾಣ. ಅಸಹಾಯಕ ಸ್ಥಿತಿಯಿಂದ ಕೃಷಿಕರನ್ನು ಹೊರಗೆ ತರುವ ಪ್ರಯತ್ನಗಳು ಸಮರೋಪಾದಿಯಲ್ಲಿ ಆಗಬೇಕಾದ ತುರ್ತನ್ನೂ ಇದು ತೆರೆದಿಡುತ್ತದೆ.

ಮಳೆ ಕೊರತೆಯ ಜೊತೆ ಕುಡಿಯುವ ನೀರಿನ ಸಮಸ್ಯೆಯೂ ಸದಾ ಬೆಸೆದುಕೊಂಡಿರುತ್ತದೆ. ಬರದ ಸ್ಥಿತಿಯಿಂದಾಗಿ ರಾಜ್ಯದ 710 ಹಳ್ಳಿಗಳಲ್ಲಿ ಕುಡಿಯುವ ನೀರಿಗೂ ತತ್ವಾರ ಉಂಟಾಗಿದೆ. ಸದ್ಯಕ್ಕೆ 149 ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ ಮತ್ತು 561 ಹಳ್ಳಿಗಳಲ್ಲಿ ಖಾಸಗಿ ಕೊಳವೆಬಾವಿ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಮಳೆ ಇದೇ ರೀತಿ ಇನ್ನಷ್ಟು ದಿನ ಮುನಿಸಿಕೊಂಡರೆ ಕುಡಿಯುವ ನೀರಿಗೂ ಪರದಾಡಬೇಕಾದಂಥ ಸ್ಥಿತಿ ಒದಗುವ ಗ್ರಾಮಗಳ ಸಂಖ್ಯೆಯೂ ಏರುತ್ತಲೇ ಹೋಗುತ್ತದೆ ಎಂಬುದರಲ್ಲಿ ಸಂದೇಹ ಇಲ್ಲ. ಜನ-ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಮತ್ತಷ್ಟು ಮುತುವರ್ಜಿ ವಹಿಸುವುದು ಅಗತ್ಯ. ಜಿಲ್ಲಾ ಆಡಳಿತವು ಪರಿಸ್ಥಿತಿಯನ್ನು ನಿರಂತರವಾಗಿ ಮತ್ತು ಸೂಕ್ಷ್ಮವಾಗಿ ಅವಲೋಕಿಸಿ, ಅದಕ್ಕೆ ತಕ್ಕಂತೆ ತಕ್ಷಣ ಸ್ಪಂದಿಸಬೇಕು. ಹಣದ ಕೊರತೆ ಎದುರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ರಾಜ್ಯ ಸರಕಾರಕ್ಕೆ ಇದೆ. ಜಾನುವಾರುಗಳಿಗೆ ಮೇವಿನ ಕೊರತೆ ಆಗದಂತೆ ನೋಡಿಕೊಳ್ಳಬೇಕು.

ಬರ ಆಗಿಂದಾಗ್ಗೆ ರಾಜ್ಯವನ್ನು ಆವರಿಸುತ್ತಲೇ ಇರುವ ವಿದ್ಯಮಾನ. ಕಾವೇರಿ, ಕೃಷ್ಣೆಯಂತಹ ಪ್ರಮುಖ ನದಿಗಳನ್ನು ಹೊಂದಿದ್ದರೂ ರಾಜಸ್ಥಾನದ ನಂತರ ದೇಶದಲ್ಲಿ ಅತಿಹೆಚ್ಚು ಬರಪೀಡಿತ ಮತ್ತು ಶುಷ್ಕ ಪ್ರದೇಶವನ್ನು ಕರ್ನಾಟಕ ಹೊಂದಿದೆ. ಹಾಗಾಗಿ, ಬರ ಪರಿಸ್ಥಿತಿಯನ್ನು ಮತ್ತೆ ಮತ್ತೆ ಎದುರಿಸಬೇಕಾದಂಥ ಸ್ಥಿತಿ ಇದೆ. ಈ ಅಪಾಯವು ಹವಾಮಾನ ವೈಪರೀತ್ಯದಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇಂಥ ಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ಹಾಗೂ ಶಾಶ್ವತ ಪರಿಹಾರಕ್ಕಾಗಿ ದೀರ್ಘಕಾಲೀನ ಯೋಜನೆಗಳು ಅಗತ್ಯ. ಮಳೆನೀರು ಸಂಗ್ರಹ ಮತ್ತು ಕೆರೆ-ಕುಂಟೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯತ್ತ ಹೆಚ್ಚು ಗಮನಹರಿಸಬೇಕು. ಬೆಳೆ ಪದ್ಧತಿಯಲ್ಲೂ ಬದಲಾವಣೆ ಬೇಕು. ನೀರಿನ ಮಿತಬಳಕೆ ಕುರಿತು ಅರಿವು ಮೂಡಿಸುವ ಪ್ರಯತ್ನಗಳು ಆಗಬೇಕು. ಅದಕ್ಕೆ ಸರಕಾರದಿಂದ ಇನ್ನೂ ಹೆಚ್ಚಿನ ಬೆಂಬಲ ದೊರೆಯುವಂತಾಗಬೇಕು.

ರಾಜ್ಯ ಸರಕಾರವು 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಈಗಾಗಲೇ ಆದೇಶ ಹೊರಡಿಸಿದೆ. ಇದು ಮೊದಲನೆಯ ಹಂತ. ಇನ್ನೂ ಕೆಲವು ತಾಲೂಕುಗಳು ಈ ಪಟ್ಟಿಗೆ ಸೇರಿಕೊಳ್ಳುವ ಸಾಧ್ಯತೆ ಇದೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಕೇಂದ್ರ ಸರಕಾರವು ನೆರವಿಗೆ ಬರಬೇಕು. ಸಮೀಕ್ಷೆ ನಡೆಸುವುದು, ವರದಿ ರೂಪಿಸುವುದು, ಅದನ್ನು ಕೇಂದ್ರಕ್ಕೆ ಸಲ್ಲಿಸುವುದು, ಅಲ್ಲಿಂದ ತಂಡಗಳು ಬಂದು ಅವಲೋಕಿಸುವುದು, ಆ ತಂಡಗಳಿಂದ ಶಿಫಾರಸು, ಆ ಬಳಿಕ ನೆರವಿನ ಮೊತ್ತ ನಿರ್ಧಾರ... ಇಂಥ ಕಸರತ್ತುಗಳು ಬರ ಅಧ್ಯಯನ ಮತ್ತು ಪರಿಹಾರ ಕಾರ್ಯಗಳಲ್ಲಿ ಮಾಮೂಲು. ಸಮೀಕ್ಷೆ ಆಗಬೇಕು. ಆದರೆ ಈ ಬಗೆಯ ಕಸರತ್ತುಗಳು ಅನಗತ್ಯ ವಿಳಂಬಕ್ಕೆ ಕಾರಣವಾಗಬಾರದು. ನೊಂದ ರೈತರ ಸಹನೆಯನ್ನು ಪರೀಕ್ಷಿಸುವುದಕ್ಕೆ ಬಳಕೆಯಾಗಬಾರದು. ತಾಂತ್ರಿಕ ಅಂಶಗಳಿಗಿಂತ ಜನರ ಸಂಕಷ್ಟಕ್ಕೆ ಸ್ಪಂದಿಸುವುದು ಸರಕಾರಗಳಿಗೆ ಮುಖ್ಯವಾಗಬೇಕು. ಬಿಕ್ಕಟ್ಟಿನ ಸಂದರ್ಭಗಳಲ್ಲಿ ರಾಜಕೀಯ ಮೇಲಾಟಗಳಿಗೆ ಅವಕಾಶ ಇರಲೇಬಾರದು. ರಾಜ್ಯಗಳಲ್ಲಿ ಬೇರೆ ಪಕ್ಷಗಳ ನೇತೃತ್ವದ ಸರಕಾರಗಳಿದ್ದರೆ ಅನುದಾನ ಬಿಡುಗಡೆಗೆ ಕೇಂದ್ರ ಸರಕಾರ ಮೀನಮೇಷ ಎಣಿಸುವುದು ರೂಢಿಯಾಗಿಬಿಟ್ಟಿದೆ. ಇಂತಹ ಧೋರಣೆಯನ್ನು ಯಾವ ಪಕ್ಷದ ನೇತೃತ್ವದ ಸರಕಾರ ಅನುಸರಿಸಿದರೂ ಅದು ಖಂಡನಾರ್ಹ. ಅನುದಾನ ಹಂಚಿಕೆಯಲ್ಲೂ ತಾರತಮ್ಯ ನುಸುಳದಂತೆ ನೋಡಿಕೊಳ್ಳಬೇಕು. ಬರ ಪರಿಹಾರದಿಂದ ಬಾಧಿತ ಜನರ ಬವಣೆ ಪೂರ್ತಿ ನೀಗುವುದಿಲ್ಲ. ಇದು, ತಕ್ಷಣಕ್ಕೆ ಸಿಗುವಂಥ ಉಪಶಮನ. ಅದು ಕೂಡ ಸಕಾಲಕ್ಕೆ ಸಿಗದೇ ಹೋದರೆ ಪರಿಹಾರ ಎಂಬ ಪದಕ್ಕೆ ಅರ್ಥವೇ ಉಳಿಯುವುದಿಲ್ಲ. ಅಂತೆಯೇ, ನೊಂದ ರೈತರಿಗೆ ಬೆಳೆವಿಮೆ ತ್ವರಿತವಾಗಿ ಸಿಗುವಂತೆ ನೋಡಿಕೊಳ್ಳಬೇಕಾದುದು ಕೂಡ ಅಗತ್ಯ. ನಮ್ಮ ರಾಜಕೀಯ ಚರ್ಚೆಗಳು ಇನ್ನಾದರೂ ಈ ಬಗೆಯ ಗಂಭೀರ ಸಮಸ್ಯೆಗಳತ್ತ ಹೊರಳಿಕೊಳ್ಳಲಿ.

Tags

droughtEditorial
share
ವಾರ್ತಾಭಾರತಿ
ವಾರ್ತಾಭಾರತಿ
Next Story
X