ಜನರ ಆರೋಗ್ಯದ ಜೊತೆ ಔಷಧಿ ಕಂಪೆನಿಗಳ ಚೆಲ್ಲಾಟ

ಮೊದಲು ಆಹಾರ ಪದಾರ್ಥಗಳಿಗೆ ಸೀಮಿತವಾಗಿದ್ದ ಕಲಬೆರಕೆ ಹಾಗೂ ಕಳಪೆ ಉತ್ಪನ್ನಗಳ ಸಮಸ್ಯೆ ಈಗ ಔಷಧಿ ಉತ್ಪಾದನಾ ಕ್ಷೇತ್ರಕ್ಕೂ ವ್ಯಾಪಿಸಿದೆ. ಕಳೆದ ನವೆಂಬರ್‌ನಲ್ಲಿ ನಡೆದ ಗುಣಮಟ್ಟ ಪರೀಕ್ಷೆಯಲ್ಲಿ 111 ಔಷಧಿ ಮಾದರಿಗಳು ನಕಲಿ ಔಷಧಿಗಳು ಎಂದು ಕೇಂದ್ರೀಯ ಔಷಧಿ ಮಾನಕ ನಿಯಂತ್ರಣ ಸಂಸ್ಥೆ ಪ್ರಕಟಿಸಿದೆ. 111 ಔಷಧಿಗಳ ಪೈಕಿ 41 ಸ್ಯಾಂಪಲ್‌ಗಳನ್ನು ಕೇಂದ್ರೀಯ ಪ್ರಯೋಗಾಲಯ ಹಾಗೂ ಉಳಿದ 70 ಮಾದರಿಗಳನ್ನು ರಾಜ್ಯಗಳ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹಿಂದೆ 2024ರ ಸೆಪ್ಟಂಬರ್‌ನಲ್ಲಿ ಕೇಂದ್ರೀಯ ಔಷಧಿ ಮಾನಕ ನಿಯಂತ್ರಣ ಸಂಸ್ಥೆಯಲ್ಲಿ ಪರೀಕ್ಷಿಸಲಾಗಿತ್ತು ದೇಶದ ಪ್ರಮುಖ ಔಷಧಿ ತಯಾರಿಕಾ ಕಂಪೆನಿಗಳು ತಯಾರಿಸಿದ ಔಷಧಿಗಳು ಕಳಪೆ ಗುಣ ಮಟ್ಟದ್ದಾಗಿವೆ ಎಂಬುದು ಬಯಲಿಗೆ ಬಂತು. ಇದಕ್ಕೂ ಮೊದಲು ಆಗಸ್ಟ್ ತಿಂಗಳಲ್ಲಿ 156 ನಿರ್ದಿಷ್ಟ ಔಷಧಿಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲಗೊಂಡಿದ್ದವು. ಕೆಲವು ಔಷಧಿಗಳನ್ನು ಆಗ ನಿಷೇಧಿಸಲಾಗಿತ್ತು.
ಜಾಗತೀಕರಣ ಹಾಗೂ ಉದಾರೀಕರಣದ ಶಕೆ ಆರಂಭವಾದ ನಂತರ ಔಷಧಿ ಸೇರಿದಂತೆ ಯಾವುದೇ ವಸ್ತುವಿನ ಉತ್ಪಾದನೆಯ ಉದ್ದೇಶ ಹಾಗೂ ಮಾನದಂಡವು ಜನರ ಆರೋಗ್ಯ ರಕ್ಷಣೆಯನ್ನು ಬದಿಗಿಟ್ಟು ಹೆಚ್ಚಿನ ಲಾಭಗಳಿಸುವುದನ್ನೆ ಪ್ರಮುಖ ಅಂಶವಾಗಿಸಿವೆ. ಆದುದರಿಂದ ಔಷಧಿ ನಿಯಂತ್ರಣ ಮಂಡಳಿ ಹಲ್ಲು ಕಿತ್ತ ಹಾವಿನಂತಾಗಿದೆ. ಹಾಗಾಗಿ ಔಷಧಿಗಳ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರ ದುರುಪಯೋಗ ಮಾಡಿಕೊಂಡ ಉತ್ತರ ಭಾರತದ ಕೆಲವು ಔಷಧಿ ಕಂಪೆನಿಗಳು ಜನರಿಗೆ ತುರ್ತು ಅಗತ್ಯವಿರುವ ಔಷಧಿಗಳನ್ನು ತಯಾರಿಸುತ್ತವೆ. ಆದರೆ ಈ ಔಷಧಿಗಳು ಗುಣಮಟ್ಟವನ್ನು ಕಾಯ್ದುಕೊಂಡಿರುವುದಿಲ್ಲ. ನಕಲಿ ಔಷಧಿಗಳನ್ನು ಉತ್ಪಾದಿಸುವ ನೂರಾರು ಕಂಪೆನಿಗಳು ತಲೆ ಎತ್ತಿವೆ. ನಕಲಿ ಔಷಧಿ ತಯಾರಿಸುವುದು ದೇಶದಲ್ಲಿ ಬಹುದೊಡ್ಡ ವಂಚಕ ದಂಧೆಯಾಗಿದೆ.
ಜನರ ಆರೋಗ್ಯಕ್ಕಿಂತ ಕೇವಲ ಲಾಭಕ್ಕಾಗಿ ತಯಾರಾಗುವ ಇಂತಹ ನಕಲಿ ಔಷಧಿಗಳಿಂದ ಜನರ ಆರೋಗ್ಯ ಸುಧಾರಿಸುವ ಬದಲು ಹಾಳಾಗಿ ಹೋಗುತ್ತದೆ. ಅಷ್ಟೇ ಅಲ್ಲ, ಇಂತಹವರಿಂದ ಹಲವಾರು ವರ್ಷಗಳಿಂದ ಔಷಧಿ ತಯಾರು ಮಾಡುವ ಉದ್ಯಮದ ಬಗ್ಗೆ ಕೋಟ್ಯಂತರ ಭಾರತೀಯರು ಹೊಂದಿರುವ ನಂಬಿಕೆಗೂ ಧಕ್ಕೆಯಾಗುತ್ತದೆ. ಜನಸಾಮಾನ್ಯರ ಬದುಕಿನಲ್ಲಿ ಚೆಲ್ಲಾಟವಾಡುವ ಔಷಧಿ ಉತ್ಪಾದಕರು ಹಾಗೂ ಅವರೊಂದಿಗೆ ಶಾಮೀಲಾದ ಅಧಿಕಾರಿಗಳ ಮೇಲೆ ಸರಕಾರ ಕಠಿಣವಾದ ಕ್ರಮ ಕೈಗೊಳ್ಳಬೇಕು. ಕಳಪೆ ಹಾಗೂ ನಕಲಿ ಔಷಧಿಗಳ ಬಗ್ಗೆ ಕುರಿತು ಜಾಗೃತಿ ಉಂಟು ಮಾಡುವ ಅಭಿಯಾನ ನಡೆಯಬೇಕಾಗಿದೆ. ಕಳಪೆ ಹಾಗೂ ನಕಲಿ ಔಷಧಿಗಳ ಪಿಡುಗನ್ನು ಹತ್ತಿಕ್ಕಲು ಸರಕಾರ ಔಷಧಿ ನಿಯಂತ್ರಣ ಸಂಸ್ಥೆಯ ಮೂಲಕ ಕಾರ್ಯಾಚರಣೆ ನಡೆಸಬೇಕು.
ಯಾವುದೇ ಔಷಧಿ ಉತ್ಪಾದಕ ಕಂಪೆನಿಯಾಗಿರಲಿ ತಾವು ತಯಾರಿಸುವ ಔಷಧಿಗಳ ಗುಣಮಟ್ಟದ ಬಗ್ಗೆ ಉತ್ತರದಾಯಿಯಾಗಿರಬೇಕು. ಮಾರುಕಟ್ಟೆಯಿಂದ ನಕಲಿ ಔಷಧಿಗಳನ್ನು ಪತ್ತೆ ಹಚ್ಚಿ ವಾಪಸ್ ಪಡೆಯಬೇಕು. ಈ ಕುರಿತಂತೆ ಕಾರ್ಯಾಚರಣೆಗೆ ಔಷಧಿ ನಿಯಂತ್ರಣ ಸಂಸ್ಥೆಗಳ ಜೊತೆ ಸೇರಿ ಕೆಲಸ ಮಾಡಬೇಕು. ಆಗ ಮಾತ್ರ ಜನಸಾಮಾನ್ಯರಿಗೆ ಔಷಧಿ ಕಂಪೆನಿಗಳ ಬಗ್ಗೆ ಉಂಟಾಗಿರುವ ಅಪನಂಬಿಕೆಯನ್ನು ನಿವಾರಿಸಲು ಸಾಧ್ಯವಾಗುತ್ತದೆ.
ಎರಡನೆಯದಾಗಿ ನಕಲಿ ಔಷಧಿ ಕಂಪೆನಿಗಳ ಕಳಪೆ ಉತ್ಪನ್ನಗಳನ್ನು ನಿಯಂತ್ರಿಸಲು ಕರ್ನಾಟಕ ಮಾತ್ರವಲ್ಲದೆ ದೇಶದ ಎಲ್ಲೆಡೆ ಔಷಧಿ ಪರಿವೀಕ್ಷಕರ ತೀವ್ರ ಕೊರತೆ ಎದುರಾಗಿದೆ. ನಮ್ಮ ಕರ್ನಾಟಕ ರಾಜ್ಯವನ್ನೇ ಉದಾಹರಣೆಯಾಗಿ ತೆಗೆದುಕೊಂಡರೆ, 112 ಔಷಧಿ ಪರಿವೀಕ್ಷಕರು ಬೇಕು. ಆದರೆ ಕೇವಲ ಎಂಟು ಜನರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಮಾರುಕಟ್ಟೆಗೆ ನಕಲಿ ಔಷಧಿಗಳು ರಾಶಿ ರಾಶಿಯಾಗಿ ಬಂದರೂ ತಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯದ ಜನರಿಗೆ ಅಗತ್ಯವಿರುವ ಗುಣಮಟ್ಟದ ಔಷಧಿಗಳು ಪೂರೈಕೆಯಾಗುತ್ತಿಲ್ಲ.ಔಷಧಿ ತಯಾರಿಕಾ ಕಂಪೆನಿಗಳು ಗುಣಮಟ್ಟದ ವಿಚಾರದಲ್ಲಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮ ಕೈಗೊಳ್ಳುವುದರಲ್ಲಿ ಔಷಧಿ ಪರಿವೀಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಉತ್ಪಾದಿತ ಔಷಧಿ ಸಾಮಗ್ರಿಗಳ ಗುಣಮಟ್ಟವನ್ನು ಕಾಪಾಡಲು ಸರಕಾರ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು.
ಯಾವುದೇ ಕಳಪೆ ಗುಣಮಟ್ಟದ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಾಗದಂತೆ ಎಚ್ಚರ ವಹಿಸುವುದು, ಔಷಧಿಗಳ ಗುಣಮಟ್ಟದ ಬಗ್ಗೆ ಗ್ರಾಹಕರಿಂದ ಬರುವ ದೂರುಗಳಿಗೆ ಸ್ಪಂದಿಸುವುದು ಈ ಪರಿವೀಕ್ಷಕ ಅಧಿಕಾರಿಗಳ ಮುಖ್ಯ ಕರ್ತವ್ಯವಾಗಿದೆ. ರಾಜ್ಯದಲ್ಲಿ 37 ಸಾವಿರಕ್ಕೂ ಹೆಚ್ಚು ಔಷಧಿ ತಯಾರಿಕಾ ಘಟಕಗಳಿವೆ. ಇಷ್ಟು ದೊಡ್ಡ ಸಂಖ್ಯೆಯ ಔಷಧಿ ಉತ್ಪಾದನಾ ಘಟಕಗಳನ್ನು ವರ್ಷಕ್ಕೆ ಒಂದು ಸಲವಾದರೂ ತಪಾಸಣೆ ಮಾಡಬೇಕಾಗುತ್ತದೆ. ಕೇವಲ ಎಂಟು ಜನ ಪರಿವೀಕ್ಷಕರಿಂದ ಇದು ಸಾಧ್ಯವಾಗುವುದಿಲ್ಲ. ಇದು ನಕಲಿ ಔಷಧಿ ತಯಾರಕರಿಗೆ ಅವರ ದಂಧೆಯನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಂತಾಗಿದೆ. ಹೀಗಾಗಿ ಔಷಧಿ ಅಂಗಡಿಗಳಲ್ಲಿ ನಕಲಿ, ಕಳಪೆ ಔಷಧಿಗಳು ತುಂಬಿ ತುಳುಕುತ್ತಿವೆ.ಇದರಿಂದಾಗಿ ಕಾಯಿಲೆಯಿಂದ ನರಳುವವರಿಗೆ ಇಂಥ ನಕಲಿ ಔಷಧಿಗಳು ಮಾರಕವಾಗಿ ಪರಿಣಮಿಸಿವೆ. ಹೀಗಾಗಿ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಹದಗೆಟ್ಟಿದೆ.
ಔಷಧಿ ಪರಿವೀಕ್ಷಕರ ಕೊರತೆಯ ಸಮಸ್ಯೆ ನಿನ್ನೆಮೊನ್ನೆಯದಲ್ಲ. ಕಳೆದ ಹತ್ತು ವರ್ಷಗಳಿಂದ ಇದು ಹಾಗೆಯೇ ಉಳಿದಿದೆ. ಸರಕಾರವೇನೋ ನೇಮಕ ಮಾಡಿಕೊಳ್ಳಲು ಈ ಹಿಂದೆ ಪ್ರಯತ್ನಿಸಿತ್ತು. ಆದರೆ ಕಾನೂನಿನ ತೊಡಕುಗಳಿಂದಾಗಿ ಇದು ಸಾಧ್ಯವಾಗಲಿಲ್ಲ. ಈ ಪ್ರಕರಣ ಸುಪ್ರೀಂ ಕೋರ್ಟಿನಲ್ಲಿದೆ. ನ್ಯಾಯಾಲಯದಲ್ಲಿ ಇರುವ ಸದರಿ ಪ್ರಕರಣವನ್ನು ಬಗೆಹರಿಸಿಕೊಳ್ಳಲು ಸರಕಾರ ಮುಂದಾಗಬೇಕು. ಪರಿವೀಕ್ಷಕರನ್ನು ಹೆಚ್ಚಿನ ಸಂಖ್ಯೆಯಲ್ಲಿ, ಅಂದರೆ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ನೇಮಕ ಮಾಡಿಕೊಂಡರೆ ಅವರು ಸಾರ್ವಜನಿಕ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಸರಕಾರ ವಿಳಂಬ ಮಾಡದೆ ಪರಿವೀಕ್ಷಕರನ್ನು ಆದಷ್ಟು ಬೇಗ ನೇಮಕ ಮಾಡಿಕೊಳ್ಳಬೇಕು
ಔಷಧಿಗಳ ಗುಣಮಟ್ಟದ ನಿಯಂತ್ರಣದ ಬಗ್ಗೆ ಭಾರತದಲ್ಲಿ ಈಗಿರುವ ಕಾನೂನು ಬ್ರಿಟಿಷ್ ಕಾಲದಲ್ಲಿ ರಚಿಸಲಾದದ್ದು. ಸ್ವಾತಂತ್ರ್ಯಾನಂತರ ಇದಕ್ಕೆ ಹಲವಾರು ತಿದ್ದುಪಡಿಗಳನ್ನು ಮಾಡಿದರೂ ವಾಸ್ತವವಾಗಿ ಇದು ಬ್ರಿಟಿಷರ ವಸಾಹತುಶಾಹಿ ಅಂಶಗಳಿಂದ ಕೂಡಿದ ಕಾನೂನು ಆಗಿದೆ ಎಂದರೆ ಅತಿಶಯೋಕ್ತಿಯಲ್ಲ. ಆಗ ಇದು ವಿದೇಶಿ ವ್ಯಾಪಾರಿಗಳು ಹಾಗೂ ತಯಾರಕರ ಹಿತಾಸಕ್ತಿಗಳನ್ನು ರಕ್ಷಿಸಲು ಮಾಡಲಾದ ಕಾನೂನು. ಆದ್ದರಿಂದ ಸರಕಾರ ಕಾನೂನು ಪರಿಣಿತರ ಜೊತೆಗೆ ಸಮಾಲೋಚನೆ ಮಾಡಿ ಈ ನೆಲದ ಇಂದಿನ ಸಂದರ್ಭಕ್ಕೆ ಪೂರಕವಾದ ಔಷಧಿ ಕಾನೂನನ್ನು ರೂಪಿಸಬೇಕಾಗಿದೆ.