Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ನುಡಿದಂತೆ ನಡೆದಿದ್ದು ನಿಜವೆ?

ನುಡಿದಂತೆ ನಡೆದಿದ್ದು ನಿಜವೆ?

ವಾರ್ತಾಭಾರತಿವಾರ್ತಾಭಾರತಿ21 May 2025 9:26 AM IST
share
ನುಡಿದಂತೆ ನಡೆದಿದ್ದು ನಿಜವೆ?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಬಿಜೆಪಿಯ ಅಧಿಕಾರಾವಧಿಯಲ್ಲಿ ನಡೆದ ರಾಜಕೀಯ ಗೊಂದಲಗಳು, ಪದೇ ಪದೇ ಮುಖ್ಯಮಂತ್ರಿಗಳ ಬದಲಾವಣೆ, ಗುಂಪುಗಾರಿಕೆ, ರೆಸಾರ್ಟ್ ರಾಜಕೀಯ ಇತ್ಯಾದಿಗಳಿಗೆ ಹೋಲಿಸಿದರೆ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎರಡು ವರ್ಷವನ್ನು ಯಶಸ್ವಿಯಾಗಿಯೇ ಪೂರೈಸಿದೆ ಎಂದು ಹೇಳಬಹುದು. ಇದೊಂದು ರೀತಿಯಲ್ಲಿ ಪಾಕಿಸ್ತಾನವನ್ನು ಹೋಲಿಸಿಕೊಂಡು ಭಾರತ, ತನ್ನ ಸಾಧನೆಗಳನ್ನು, ಅಭಿವೃದ್ಧಿಯನ್ನು ಕೊಚ್ಚಿಕೊಂಡಂತೆ. ಗ್ಯಾರಂಟಿ ಯೋಜನೆಗಳು ಸರಕಾರಕ್ಕೆ ಮುಳುವಾಗಲಿದೆ ಎಂದು ವಿರೋಧ ಪಕ್ಷಗಳು ಕಾದದ್ದೇ ಬಂತು. ಅದೆಷ್ಟೇ ಆರ್ಥಿಕ ಅಡಚಣೆಗಳು,ಬಿಕ್ಕಟ್ಟುಗಳು ಎದುರಾದರೂ ಈ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರಕಾರ ಹಿಂದೆ ಸರಿಯಲಿಲ್ಲ. ‘ಖಜಾನೆ ಖಾಲಿಯಾಗಿದೆ, ಸರಕಾರದ ಬಳಿ ಹಣವಿಲ್ಲ’ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆಯಾದರೂ, ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಯಾವುದೇ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿಲ್ಲದೇ ಇದ್ದಾಗಲೂ ಖಜಾನೆ ತುಂಬಿ ತುಳುಕುತ್ತಿತ್ತೆ? ಎಂಬ ಜನರ ಪ್ರಶ್ನೆಗೆ ಉತ್ತರಿಸುವ ನೈತಿಕತೆಯನ್ನು ಬಿಜೆಪಿ ನಾಯಕರು ಉಳಿಸಿಕೊಂಡಿಲ್ಲ. ಇದೇ ಸಂದರ್ಭದಲ್ಲಿ, ಡಿಕೆಶಿ-ಸಿದ್ದರಾಮಯ್ಯ ನಡುವಿನ ಬಿರುಕು ಸರಕಾರವನ್ನು ದುರ್ಬಲಗೊಳಿಸುತ್ತದೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ. ಅಧಿಕಾರದಲ್ಲಿ ಇರದ ಬಿಜೆಪಿಯೊಳಗಿನ ಗುಂಪುಗಾರಿಕೆ, ಭಿನ್ನಮತಗಳಿಗೆ ಹೋಲಿಸಿದರೆ, ಕಾಂಗ್ರೆಸ್ ತನ್ನೊಳಗಿನ ಭಿನ್ನಮತಗಳನ್ನು ಯಶಸ್ವಿಯಾಗಿ ಸಂಭಾಳಿಸಿದೆ. ಇದರ ಸಂಪೂರ್ಣ ಹೆಗ್ಗಳಿಕೆ ಕಾಂಗ್ರೆಸ್ ವರಿಷ್ಠರಿಗೆ ಸಲ್ಲಬೇಕು. ಒಟ್ಟಿನಲ್ಲಿ ಇಂದು ಕಾಂಗ್ರೆಸ್ ಸರಕಾರ ಎರಡು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಜನರಿಗೆ ಅನ್ನಿಸಿದ್ದರೆ ಅದರ ಹೆಗ್ಗಳಿಕೆ ಈ ಹಿಂದೆ ರಾಜ್ಯಕ್ಕೆ ಅತ್ಯಂತ ಕಳಪೆ ಆಡಳಿತವನ್ನು ನೀಡಿದ ಬಿಜೆಪಿಗೆ ಸಲ್ಲಬೇಕು.

ಸಿದ್ದರಾಮಯ್ಯ ಈಗಲೂ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡಿದ್ದಾರೆ. ಮುಡಾ ಹಗರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಕಾಂಗ್ರೆಸನ್ನು ಸಿಲುಕಿಸುವ ಬಿಜೆಪಿಯ ಎಲ್ಲ ಪ್ರಯತ್ನಗಳನ್ನು ಅವರು ವಿಫಲಗೊಳಿಸಿದರು. ಸ್ವತಃ ಕಾಂಗ್ರೆಸ್ನೊಳಗೇ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರಗಳಿದ್ದರೂ, ಅದರ ಬಗ್ಗೆ ಕ್ಯಾರೇ ಅನ್ನದೆ ಮುಂದುವರಿದಿದ್ದಾರೆ. ಆದರೆ ಬರೇ ಗ್ಯಾರಂಟಿ ಯೋಜನೆಗಳನ್ನಷ್ಟೇ ಮುಂದಿಟ್ಟು ಸರಕಾರ ಯಶಸ್ಸು-ವೈಫಲ್ಯಗಳನ್ನು ನಿರ್ಣಯಿಸುವುದಕ್ಕಾಗುವುದಿಲ್ಲ.ಇತರ ಹೊಣೆಗಾರಿಕೆಗಳನ್ನು ಅದು ಎಷ್ಟರಮಟ್ಟಿಗೆ ನಿರ್ವಹಿಸಿದೆ ಎನ್ನುವುದು ಕೂಡ ಸರಕಾರದ ಸೋಲು ಗೆಲುವನ್ನು ಹೇಳುತ್ತದೆ. ನೂತನ ಸರಕಾರ ಅಲ್ಪಸಂಖ್ಯಾತರು, ದಲಿತರು ಮತ್ತು ಹಿಂದುಳಿದವರ್ಗದ ಭರ್ಜರಿ ಬೆಂಬಲದೊಂದಿಗೆ ಅಧಿಕಾರ ಹಿಡಿದಿದೆ. ಜನರು ಇಷ್ಟರಮಟ್ಟಿಗೆ ಬೆಂಬಲವನ್ನು ನೀಡಿರುವಾಗ, ಎರಡು ವರ್ಷಗಳನ್ನು ಪೂರೈಸುವುದು ದೊಡ್ಡ ಸಾಧನೆಯೇನೂ ಅಲ್ಲ. ‘ನುಡಿದಂತೆ ನಡೆದ ಸರಕಾರ’ ಎಂದು ಸಿದ್ದರಾಮಯ್ಯ ಎಲ್ಲ ವೇದಿಕೆಗಳಲ್ಲೂ ಘೋಷಿಸಿಕೊಂಡು ಬಂದಿದ್ದಾರೆ. ‘ಸಮರ್ಪಣೆ ಸಂಕಲ್ಪ’ ಸಮಾವೇಶದಲ್ಲೂ ಇದನ್ನು ಪುನರುಚ್ಚರಿಸಿದ್ದಾರೆ. ಆದರೆ ಸರಕಾರ ನುಡಿದಂತೆ ಎಷ್ಟರಮಟ್ಟಿಗೆ ನಡೆದಿದೆ ಎನ್ನುವುದರ ವಿಮರ್ಶೆಗೆ ಇದು ಸರಿಯಾದ ಸಮಯವಾಗಿದೆ.

ರಾಜ್ಯದಲ್ಲಿ ವಿಷಗಾಳಿಯಂತೆ ಹರಡುತ್ತಿರುವ ಕೋಮುದ್ವೇಷಗಳನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ತಡೆಯುತ್ತದೆ, ರಾಜ್ಯದಲ್ಲಿ ಕ್ರಿಮಿನಲ್ ಚಟುವಟಿಕೆಗಳು ಇಳಿಮುಖವಾಗುತ್ತದೆ ಎಂದು ಜನರು ನಿರೀಕ್ಷಿಸಿದ್ದರು. ಆದರೆ, ಗೃಹ ಇಲಾಖೆ ಅದರಲ್ಲಿ ಸಂಪೂರ್ಣ ವಿಫಲವಾಗಿದೆ. ಎರಡು ವರ್ಷಗಳಲ್ಲಿ 100ಕ್ಕೂ ಅಧಿಕ ಕೋಮು ಪ್ರಕರಣಗಳು ರಾಜ್ಯದಲ್ಲಿ ನಡೆದಿವೆ. ಆದರೆ ಅದಕ್ಕೆ ಲಗಾಮು ಹಾಕುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ. ಗೋಸಾಗಣೆಯ ಆರೋಪದಲ್ಲಿ ಗುಂಪೊಂದು ವ್ಯಕ್ತಿಯನ್ನು ಕೊಂದು ಹಾಕಿದ್ದರೂ, ಆ ಕೊಲೆಗಾರರ ಗುಂಪಿನ ನೇತೃತ್ವವನ್ನು ವಹಿಸಿದ್ದ ವ್ಯಕ್ತಿ ಸರಕಾರಕ್ಕೆ ಸವಾಲು ಹಾಕುವಂತೆ ಯಾವ ಭಯವೂ ಇಲ್ಲದೆ ಸಾರ್ವಜನಿಕವಾಗಿ ಓಡಾಡುತ್ತಿದ್ದಾನೆ ಮಾತ್ರವಲ್ಲ, ತನ್ನ ದ್ವೇಷ ಭಾಷಣವನ್ನು ಮುಂದುವರಿಸಿದ್ದಾನೆ. ಇತ್ತೀಚೆಗೆ ಮಂಗಳೂರಿನಲ್ಲಿ ಕೇರಳ ಮೂಲದ ವ್ಯಕ್ತಿಯನ್ನು ಗುಂಪೊಂದು ಕಾರಣವೇ ಇಲ್ಲದೆ ಬರ್ಬರವಾಗಿ ಥಳಿಸಿ ಕೊಂದು ಹಾಕಿತು. ಇದು ಗುಂಪಿನಿಂದ ನಡೆದ ಹತ್ಯೆ ಎಂದು ಒಪ್ಪಿಕೊಳ್ಳುವುದಕ್ಕೆ ಪೊಲೀಸ್ ಇಲಾಖೆಗೆ ಎರಡು ದಿನ ಹಿಡಿಯಿತು. ಮಾಧ್ಯಮಗಳು ಬೆನ್ನುಬಿದ್ದ ಬಳಿಕ ಒಲ್ಲದ ಮನಸ್ಸಿನಿಂದ ಗುಂಪು ಹತ್ಯೆ ಎನ್ನುವುದನ್ನು ಒಪ್ಪಿಕೊಂಡಿತು. ಪರ ರಾಜ್ಯದ ವ್ಯಕ್ತಿಯೊಬ್ಬನನ್ನು ಗುಂಪು ಆತನ ಭಾಷೆ, ಧರ್ಮದ ಕಾರಣಕ್ಕಾಗಿ ಹತ್ಯೆಗೈದಿದೆ. ಆದರೆ ಸರಕಾರ ಕನಿಷ್ಠ ಪರಿಹಾರವನ್ನೂ ಈವರೆಗೆ ಘೋಷಿಸಿಲ್ಲ. ಸ್ವತಃ ಗೃಹ ಸಚಿವರೇ ತನಿಖೆಯ ದಾರಿ ತಪ್ಪಿಸುವ ರೀತಿಯಲ್ಲಿ ಹೇಳಿಕೆ ನೀಡಿದರು. ಕರಾವಳಿಯಲ್ಲಿ ದ್ವೇಷ ಭಾಷಣಕ್ಕೆ, ಕೋಮು ಹಿಂಸೆಗಳಿಗೆ ಕಡಿವಾಣ ಹಾಕುವಲ್ಲೂ ಗೃಹ ಇಲಾಖೆ ವಿಫಲವಾಗಿದೆ. ಮತಾಂತರ ಕಾಯ್ದೆ, ಗೋಹತ್ಯಾ ನಿಷೇಧ ಕಾಯ್ದೆಗಳು ಒಂದು ನಿರ್ದಿಷ್ಟ ಧರ್ಮವನ್ನು ಗುರಿಯಾಗಿಸುವುದಕ್ಕಾಗಿ ತಂದ ಕಾನೂನುಗಳಾಗಿವೆ. ಇವುಗಳನ್ನು ಹಿಂದೆಗೆಯುವ ಧೈರ್ಯವನ್ನು ಸರಕಾರ ತೋರಿಸುತ್ತಿಲ್ಲ. ಗೋಹತ್ಯಾ ನಿಷೇಧ ಕಾಯ್ದೆಯಿಂದಾಗಿ ಗೋವುಗಳನ್ನು ಸಾಕುವ ರಾಜ್ಯದ ರೈತರು ತೀವ್ರ ನಷ್ಟವನ್ನು ಅನುಭವಿಸುತ್ತಿದ್ದಾರೆ. ತಾವೇ ಸಾಕಿದ ಅನುಪಯುಕ್ತ ಜಾನುವಾರುಗಳನ್ನು ಮಾರಾಟ ಮಾಡಬೇಕಾದರೆ ಬೀದಿ ಗೂಂಡಾಗಳ ಅನುಮತಿ ಪಡೆಯಬೇಕಾದ ಸ್ಥಿತಿಯಲ್ಲಿದ್ದಾರೆ. ಈ ಕಾಯ್ದೆಯನ್ನು ಹಿಂದೆಗೆಯುವುದು ಎಂದರೆ, ನಮ್ಮ ರೈತರನ್ನು ಬೀದಿಗೂಂಡಾಗಳು, ನಕಲಿ ಗೋರಕ್ಷಕರ ಹಿಡಿತದಿಂದ ಬಿಡುಗಡೆಗೊಳಿಸಿದಂತೆ. ಆದರೆ ಸರಕಾರ ಈ ಕಡೆಗೆ ತಿರುಗಿಯೂ ನೋಡುತ್ತಿಲ್ಲ. ಹಿಜಾಬ್ನ್ನು ಮುಂದಿಟ್ಟುಕೊಂಡು ಮುಸ್ಲಿಮ್ ವಿದ್ಯಾರ್ಥಿನಿಯರಿಗೆ ಶಾಲೆಗಳು ಹಾಕಿರುವ ಬಹಿಷ್ಕಾರವೂ ಇನ್ನೂ ತೆರವಾಗಿಲ್ಲ. ಹಿಂಸೆ ಮತ್ತು ಅಭಿವೃದ್ಧಿ ಜೊತೆಯಾಗಿ ಸಾಗಲಾರದು. ಕರ್ನಾಟಕ ಅಭಿವೃದ್ಧಿಯೆಡೆಗೆ ಸಾಗಬೇಕಾದರೆ, ಈ ಅಭಿವೃದ್ಧಿಗೆ ಬಹುದೊಡ್ಡ ತಡೆಯಾಗಿರುವ ಕೋಮು ದುಷ್ಕರ್ಮಿಗಳ ಹೆಡೆಮುರಿ ಕಟ್ಟುವುದು ಅತ್ಯಗತ್ಯವಾಗಿದೆ.

ಇದೇ ಸಂದರ್ಭದಲ್ಲಿ ಜಾತಿ ಗಣತಿ ವರದಿಯನ್ನು ಜಾರಿಗೊಳಿಸಲು ಸರಕಾರ ಮೀನಾ ಮೇಷ ಎಣಿಸುತ್ತಿದೆ. ಅತ್ತ ಕೇಂದ್ರ ಸರಕಾರ ಜಾತಿಗಣತಿಯ ಬಗ್ಗೆ ಒಲವು ತೋರಿಸಿದ ಬಳಿಕವೂ, ರಾಜ್ಯ ಸರಕಾರ ವರದಿಯನ್ನು ಬಹಿರಂಗಗೊಳಿಸುವ ಧೈರ್ಯ ಪ್ರದರ್ಶಿಸುತ್ತಿಲ್ಲ. ಒಳ ಮೀಸಲಾತಿಯ ವಿಷಯದಲ್ಲೂ ಅದು ನಿಧಾನಗತಿಯನ್ನು ಅನುಸರಿಸುತ್ತಿದೆ ಎನ್ನುವ ಆರೋಪವಿದೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡುತ್ತಿದೆ ಎನ್ನುವ ಆರೋಪಗಳಲ್ಲೂ ಹುರುಳಿಲ್ಲದೆ ಇಲ್ಲ. ರೈತರ ಹಿತಾಸಕ್ತಿಗೆ ಮುಳುವಾಗಿರುವ ಎಪಿಎಂಸಿ ಕಾಯ್ದೆಯನ್ನೂ ರಾಜ್ಯ ಸರಕಾರ ಹಿಂದಕ್ಕೆ ಪಡೆದುಕೊಂಡಿಲ್ಲ. ಇದೇ ಸಂದರ್ಭದಲ್ಲಿ ರಾಜ್ಯ ಸರಕಾರ ಅಭಿವೃದ್ಧಿ ಕಾರ್ಯಗಳಿಗೆ ಅಬಕಾರಿ ಹಣವನ್ನೇ ಅವಲಂಬಿಸಿದೆ ಎನ್ನುವ ಟೀಕೆಗಳು ಕೇಳಿ ಬರುತ್ತಿವೆ. ಮದ್ಯ ಮಾರಾಟವನ್ನು ಹುರಿದುಂಬಿಸುತ್ತಾ, ಬಲಗೈಯಲ್ಲಿ ಕೊಟ್ಟ ಗ್ಯಾರಂಟಿ ಯೋಜನೆಗಳನ್ನು ಎಡಗೈಯಲ್ಲಿ ಹಿಂದೆಗೆದುಕೊಳ್ಳುತ್ತಿದೆ ಎನ್ನುವ ಟೀಕೆಗಳನ್ನು ಅದು ಎದುರಿಸಬೇಕಾಗಿದೆ.

ಮುಂದಿನ ಮೂರು ವರ್ಷಗಳು ಕಾಂಗ್ರೆಸ್ ಪಾಲಿಗೆ ಅತ್ಯಂತ ನಿರ್ಣಾಯಕವಾಗಿದೆ. ಗ್ಯಾರಂಟಿ ಯೋಜನೆಗಳು ನಿಧಾನಕ್ಕಾದರೂ ಸರಕಾರದ ಕೊರಳಿಗೆ ಸುತ್ತಿಕೊಳ್ಳದೇ ಇರುವುದಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಎದುರಾದರೆ ಅದು ಸರಕಾರದ ಮೇಲೆ ಪರಿಣಾಮಗಳನ್ನು ಬೀರಬಹುದು. ಇದೇ ಸಂದರ್ಭದಲ್ಲಿ ಡಿಕೆಶಿ ಬಣ ಮತ್ತು ಡಿಕೆಶಿ ವಿರೋಧಿ ಬಣಗಳು ಮುಂದಿನ ದಿನಗಳಲ್ಲಿ ಇಡುವ ಹೆಜ್ಜೆಗಳೂ ಸರಕಾರದ ಏಳು ಬೀಳುಗಳಲ್ಲಿ ನಿರ್ಣಾಯಕ ಪಾತ್ರವಹಿಸಲಿವೆ. ಸಿನೆಮಾ ಮುಗಿದಿಲ್ಲ. ಮಧ್ಯಂತರದ ಬಳಿಕವೇ ಸಿನೆಮಾ ತಿರುವು ಪಡೆದುಕೊಳ್ಳುವುದು. ‘ಪಿಚ್ಚರ್ ಅಭೀ ಬಾಕಿ ಹೈ’ ಸಾಲನ್ನು ಸಿದ್ದರಾಮಯ್ಯ ಮರೆಯಬಾರದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X