ಕ್ರೀಡೆಗೆ ಬಳಿದ ಕಪ್ಪು!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಗತ್ತಿನ ಎರಡನೇ ಅತಿ ದೊಡ್ಡ ಮಾದಕ ಪಾನೀಯಗಳ ಉತ್ಪಾದಕ ಕಂಪೆನಿಯೆಂದು ಗುರುತಿಸಲ್ಪಟ್ಟಿರುವ ‘ಯುನೈಟೆಡ್ ಸ್ಪಿರಿಟ್ಸ್ ಬೆವರೇಜ್ ಕಂಪೆನಿ’ ಉತ್ಪಾದಿಸುವ ಅತ್ಯಧಿಕ ಅಮಲಿನ ಪಾನೀಯ ‘ಐಪಿಎಲ್ ಕ್ರಿಕೆಟ್’ ಎನ್ನುವುದು ಕೊನೆಗೂ ಸಾಬೀತಾಗಿದೆ. ‘ಈ ಸಲ ಕಪ್ಪು ನಮ್ಮದಾಯಿತು’ ಎಂದು ರಾತ್ರಿಯಿಡೀ ಅಮಲಿನಲ್ಲಿ ತೇಲಾಡಿದ ಸ್ವಯಂಘೋಷಿತ ಆರ್ಸಿಬಿ ಅಭಿಮಾನಿಗಳಿಗೆ ಕಪ್ ಯಾರದು ಎನ್ನುವುದು ಗೊತ್ತಾಗುವಷ್ಟರಲ್ಲಿ ತಡವಾಗಿದೆ. ಯುನೈಟೆಡ್ ಸ್ಪಿರಿಟ್ಸ್ ಬೇವರೇಜ್ ಕಂಪೆನಿಯ ‘ಐಪಿಎಲ್’ ಉತ್ಪನ್ನ ಯಾವುದೇ ಅಕ್ರಮ ಕಳ್ಳಭಟ್ಟಿ ಸೇವನೆಗಿಂತ ಕಡಿಮೆ ಕಡಿಮೆ ಅಪಾಯಕಾರಿಯಲ್ಲ ಎನ್ನುವುದು ಬುಧವಾರ ಸಂಜೆಯ ಹೊತ್ತಿಗೆ ಬಹಿರಂಗವಾಗಿದೆ. ಆರ್ಸಿಬಿಯ ಗೆಲುವಿನ ಉನ್ಮಾದಕ್ಕೆ ಸಿಕ್ಕಿ ಅದಾಗಲೇ 11 ಮಂದಿ ಅಮಾಯಕರು ಮೃತಪಟ್ಟಿದ್ದು, 30ಕ್ಕೂ ಅಧಿಕ ಮಂದಿ ಗಂಭೀರಗಾಯಗೊಂಡಿದ್ದಾರೆ. ಆರ್ಸಿಬಿ ಗೆಲುವಿನ ಸಂಭ್ರಮಾಚರಣೆಯ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಉಂಟಾದ ಕಾಲ್ತುಳಿತದಿಂದ ಈ ಸಾವುನೋವುಗಳು ಸಂಭವಿಸಿದ್ದು, ಕ್ರೀಡೆಯ ಪಾಲಿಗೆ ಅಂಟಿಕೊಂಡ ಅಳಿಸಲಾಗದ ಕಪ್ಪು ಕಳಂಕವಾಗಿ ಈ ಘಟನೆ ಉಳಿದು ಬಿಡಲಿದೆ. ಮೇಲ್ನೋಟಕ್ಕೆ ಇದು ಒಂದು ಅಪಘಾತದಂತೆ ಕಂಡಿದ್ದರೂ, ಇದು ಸಮೂಹ ಸನ್ನಿ ಮತ್ತು ಉನ್ಮಾದಕ್ಕೆ ಸಿಲುಕಿದ ಜನರು ಸ್ವಯಂ ಆಹ್ವಾನಿಸಿಕೊಂಡಿರುವ ಅಪಘಾತವಾಗಿದೆ. ವಿಪರ್ಯಾಸವೆಂದರೆ, ಈ ಉನ್ಮಾದದ ಸ್ಥಿತಿಗೆ ಸ್ವತಃ ಸರಕಾರವೂ ಕೂಡ ತನ್ನ ದೇಣಿಗೆೆಯನ್ನು ನೀಡಿದೆ. ಆರ್ಸಿಬಿ ಗೆಲುವನ್ನು ನಗದೀಕರಿಸಲು ಮುಂದಾದ ರಾಜ್ಯ ಸರಕಾರವು ನಡೆದ ದುರಂತದ ನೈತಿಕ ಹೊಣೆಯನ್ನು ಹೊತ್ತುಕೊಂಡು ನಾಡಿನ ಜನತೆಗೆ ಸ್ಪಷ್ಟೀಕರಣವನ್ನು ನೀಡಬೇಕಾಗಿದೆ.
ಐಪಿಎಲ್ ಪಂದ್ಯಗಳ ಬಗ್ಗೆ ಸ್ವತಃ ಕ್ರಿಕೆಟ್ ಆಟಗಾರರ ನಡುವೆಯೇ ಭಿನ್ನಾಭಿಪ್ರಾಯಗಳಿವೆ. ‘ಕ್ರಿಕೆಟ್ನ ಸ್ಫೂರ್ತಿಗೆ ಇದು ಧಕ್ಕೆ ತರುತ್ತಿದೆ’’ ಎನ್ನುವುದು ಕ್ರಿಕೆಟ್ನ ಪ್ರಮುಖ ಆಟಗಾರರ ಅಭಿಪ್ರಾಯವಾದರೆ, ‘‘ಐಪಿಎಲ್ ಬೆಟ್ಟಿಂಗ್ ಯುವ ಭಾರತದ ಪಾಲಿಗೆ ಹೊಸ ಮಾದಕ ಚಟವಾಗಿ ವಿಸ್ತರಿಸುತ್ತಿದೆ’’ ಎಂದು ವೈದ್ಯಕೀಯ ತಜ್ಞರು ಆತಂಕ ಪಡುತ್ತಿದ್ದಾರೆ. ಇತ್ತೀಚೆಗೆ ನ್ಯಾಯಾಲಯಗಳೂ ಇದರ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದವು. ಆರ್ಸಿಬಿಗೂ ಕರ್ನಾಟಕಕ್ಕೂ ಯಾವ ಸಂಬಂಧವೂ ಇಲ್ಲದೇ ಇದ್ದರೂ, ಆರ್ಸಿಬಿ ಗೆಲುವನ್ನು ಪ್ರಾದೇಶಿಕತೆಯ ಭಾಗವಾಗಿಸುವಲ್ಲಿ ಈ ಬೆಟ್ಟಿಂಗ್ ಮಾಫಿಯಾ ಯಶಸ್ವಿಯಾಗಿದೆ. ಆಟಗಾರರು ಕನ್ನಡಿಗರಲ್ಲ. ಆರ್ಸಿಬಿಯನ್ನು ಕೊಂಡುಕೊಂಡಿರುವ ‘ಯುನೈಟೆಡ್ ಸ್ಪಿರಿಟ್ಸ್ ಬೆವರೇಜ್ ಕಂಪೆನಿ’ ಒಂದು ಮದ್ಯ ತಯಾರಿಕಾ ಕಂಪೆನಿ. ಅದೂ ಲಂಡನ್ನ ಬಹುರಾಷ್ಟ್ರೀಯ ಕಂಪೆನಿಯ ಬೆಂಗಳೂರು ಘಟಕವಾಗಿದೆ. ಕ್ರಿಕೆಟ್ ಹೆಸರಿನಲ್ಲಿ ಅದು ಬಾಚುತ್ತಿರುವ ಹಣ ಒಂದೆಡೆಯಾದರೆ, ಆ ಮೂಲಕ ತನ್ನ ಮಾದಕ ಪಾನೀಯಗಳ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಿಕೊಂಡು ಬರುತ್ತಿದೆ. ಮದ್ಯ ಮಾರಾಟ ಹೆಚ್ಚಾಗುತ್ತಿದ್ದಂತೆಯೇ ಅದಕ್ಕೆ ಬೆಲೆತೆರಬೇಕಾದವರು ಮತ್ತೆ ಈ ನೆಲದ ಜನರೇ ಆಗಿದ್ದಾರೆ. ಭಾರತದ ಪ್ರಾದೇಶಿಕ ಅಸ್ಮಿತೆಗಳನ್ನು ಬಳಸಿಕೊಂಡು ಇವರು ಮಾರಾಟ ಮಾಡುತ್ತಿರುವುದು ಕ್ರಿಕೆಟನ್ನಲ್ಲ, ಮದ್ಯವನ್ನು ಎನ್ನುವ ವಾಸ್ತವ ಅರ್ಥ ಮಾಡಿಕೊಂಡಾಗ ಮಾತ್ರ ತಲೆಗೇರಿಸಿಕೊಂಡ ಆರ್ಸಿಬಿಯ ಗೆಲುವಿನ ಅಮಲು ಇಳಿಯಬಹುದಾಗಿದೆ. ಆರ್ಸಿಬಿ ಗೆಲುವಿನ ಬೆನ್ನಿಗೇ ದಾಖಲೆಯ ಬಿಯರ್ ಮಾರಾಟವಾಗಿರುವ ಬಗ್ಗೆ ವರದಿಯಾಗಿವೆ. ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ಒಂದೂವರೆ ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿತ್ತು ಎಂದು ಮೂಲಗಳು ಹೇಳುತ್ತಿವೆ. ಅಂದರೆ ನಿಜಕ್ಕೂ ಐಪಿಎಲ್ನಲ್ಲಿ ಗೆದ್ದವರು ಯಾರು? ಕಪ್ ತನ್ನದಾಗಿಸಿಕೊಂಡವರು ಯಾರು?
ಐಪಿಎಲ್ ಅನ್ನು ಆರಂಭಿಸಿದ ಲಲಿತ್ ಮೋದಿ ವಿದೇಶದಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಆರ್ಸಿಬಿಯ ಮಾಲಕನೆಂದು ಆರಂಭದಲ್ಲಿ ಗುರುತಿಸಿಕೊಂಡ ವಿಜಯ ಮಲ್ಯ ಕೂಡ ವಿದೇಶದಲ್ಲಿ ಅಡಗಿಕೊಂಡಿದ್ದಾರೆ. ಇವರು ದೇಶದ ಬ್ಯಾಂಕ್ಗಳಿಗೆ ಮಾಡಿರುವ ಹಾನಿ, ಮಾಡಿದ ವಂಚನೆಗಳ ಬಗ್ಗೆ ಮಾಧ್ಯಮಗಳು ಚರ್ಚೆ ಮಾಡುತ್ತಲೇ ಇವೆ. ಆದರೆ ಐಪಿಎಲ್ ಎನ್ನುವ ದಂಧೆ ಲಲಿತ್ ಮೋದಿಯು ಕ್ರಿಕೆಟ್ ಹೆಸರಿನಲ್ಲಿ ಈ ದೇಶಕ್ಕೆ ಮಾಡಿದ ಅತಿ ದೊಡ್ಡ ಮೋಸವಾಗಿದೆ. ಕ್ರಿಕೆಟ್ಗೆ ಅಧಿಕೃತವಾಗಿ ಜೂಜಿನ ರೂಪವನ್ನು ಕೊಟ್ಟು ಅದರ ಸ್ಫೂರ್ತಿಯನ್ನು ಕೆಡಿಸಿದ ಹೆಗ್ಗಳಿಕೆ ಅನ್ನುಗೆ ಸೇರಬೇಕು. ಕ್ರಿಕೆಟ್ ಆಟಗಾರರ ಹರಾಜು ಅಂತಿಮವಾಗಿ ಕ್ರಿಕೆಟ್ನ ಮಾನದ ಹರಾಜು ಎನ್ನುವ ಹಂತವನ್ನು ತಲುಪಿತು. ಕಾರ್ಪೊರೇಟ್ ಕುಳಗಳು, ಸಿನೆಮಾ ವಲಯ, ಜಾಹೀರಾತು ಸಂಸ್ಥೆಗಳು ಕ್ರಿಕೆಟ್ನ ನಿಯಂತ್ರಣವನ್ನು ಪೂರ್ಣಪ್ರಮಾಣದಲ್ಲಿ ತಮ್ಮ ಕೈಗೆ ತೆಗೆದುಕೊಂಡವರು. ಕ್ರಿಕೆಟ್ ಆಟಗಾರರು ಇವರ ಕೈಗೊಂಬೆಗಳಾದರು. ಐಪಿಎಲ್ ಬಳಿಕ ಆನ್ಲೈನ್ ಬೆಟ್ಟಿಂಗ್ ಹೊಸ ರೂಪವನ್ನು ಪಡೆಯಿತು. ಫ್ಯಾಂಟಸಿ ಗೇಮ್ನ ಹೆಸರಿನಲ್ಲಿ, ಕಾನೂನುನಿಂದಲೂ ವಿನಾಯಿತಿಯನ್ನು ಪಡೆದುಕೊಂಡು ಜನಸಾಮಾನ್ಯರ ಬದುಕನ್ನು ನುಚ್ಚು ನೂರು ಮಾಡಿತು. ಕಳೆದ ವರ್ಷ ಮಾರ್ಚ್
ನಲ್ಲಿ ಬೆಂಗಳೂರಿನಲ್ಲೇ ಐಟಿ ಉದ್ಯಮಿಯೊಬ್ಬರು ಈ ಬೆಟ್ಟಿಂಗ್ನಿಂದ ಸುಮಾರು ಒಂದೂವರೆ ಕೋಟಿ ರೂಪಾಯಿ ಕಳೆದುಕೊಂಡಿದ್ದರು. ಅದಕ್ಕಾಗಿ ಅವರು ದೊಡ್ಡ ರೀತಿಯಲ್ಲಿ ಸಾಲವನ್ನು ಮಾಡಿದ್ದರು. ಸಾಲ ನೀಡಿದವರು ವಸೂಲಿ ಮಾಡಲು ಕಿರುಕುಳ ನೀಡುತ್ತಿದ್ದ ಹಾಗೆಯೇ ತನ್ನ ಕುಟುಂಬದ ಜೊತೆಗೆ ಅವರು ಆತ್ಮಹತ್ಯೆ ಮಾಡಿಕೊಂಡರು. ದಿಲ್ಲಿ ಮೂಲದ ಮಾನಸಿಕ ತಜ್ಞರೊಬ್ಬರ ಪ್ರಕಾರ, ಪ್ರತೀ ತಿಂಗಳು ಕ್ರಿಕೆಟ್ ಬೆಟ್ಟಿಂಗ್ ವ್ಯಸನಿಯಾಗಿರುವ ಮೂರರಿಂದ ಐದು ರೋಗಿಗಳಿಗೆ ಅವರು ಚಿಕಿತ್ಸೆ ನೀಡುತ್ತಿದ್ದಾರೆ. ಗೂಗಲ್ ಟ್ರೆಂಡ್ಸ್ ಅಂಕಿಅಂಶಗಳ ಪ್ರಕಾರ, ಜೂಜಾಟದ ಸಮಸ್ಯೆಗಳಿಗೆ ಪರಿಹಾರದ ಹುಡುಕಾಟ ಹೆಚ್ಚುತ್ತಿವೆ. ಮುಖ್ಯವಾಗಿ ಆನ್ಲೈನ್ ಜೂಜಾಟಗಳಿಂದ ಮುಕ್ತವಾಗುವುದು ಹೇಗೆ ಎನ್ನುವ ಪ್ರಶ್ನೆಗಳಿಗೆ ಉತ್ತರವನ್ನು ಹುಡುಕುವವರ ಸಂಖ್ಯೆ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ‘ಆರ್ಸಿಬಿ ಕಪ್ ಗೆಲ್ಲುತ್ತಾ?’ ‘ಈ ಬಾರಿ ಕಪ್ ನಮ್ಮದೇ’ ‘ಆರ್ಸಿಬಿ ಫ್ಯಾನ್’ ಮೊದಲಾದ ತಲೆಬರಹಗಳ ಮೂಲಕ ಈ ಜೂಜಾಟದ ಹಂತವನ್ನು ತಾರಕಕ್ಕೆ ಒಯ್ಯಲಾಗಿತ್ತು. ಆರ್ಸಿಬಿ ಫೈನಲ್ಗೆ ಹೋಗುತ್ತಿದ್ದಂತೆಯೇ ಇದು ಉನ್ಮಾದ ಹಂತವನ್ನು ತಲುಪಿತ್ತು. ಆರ್ಸಿಬಿ ಗೆಲ್ಲುತ್ತಿದ್ದಂತೆಯೇ ಇದು ಸ್ಫೋಟಗೊಂಡಿತು.
ಬೆಂಗಳೂರಿನಲ್ಲಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಆದರೆ ನಿಜಕ್ಕೂ ನಾವು ಹೆದರಬೇಕಾಗಿರುವುದು ಮುಂದೆ ನಡೆಯಲಿರುವ ಸಾವುಗಳಿಗಾಗಿ. ಆರ್ಸಿಬಿ ಫೈನಲ್ಗೇರುತ್ತಿದ್ದಂತೆಯೇ ನಾಡಿನ ಸಾವಿರಾರು ಜನರು ಬೆಟ್ಟಿಂಗ್ನಲ್ಲಿ ಭಾಗವಹಿಸಿದ್ದಾರೆ. ಈ ಜೂಜಿನಲ್ಲಿ ಸಾವಿರಾರು ಕೋಟಿ ರೂಪಾಯಿ ಹೂಡಿಕೆಯಾಗಿದೆ. ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದವರಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸ್ಥಿತಿ ಏನಾಗಬೇಕು? ಸಾಲಗಾರರ ಕಿರುಕುಳ ಇವರನ್ನು ಯಾವ ಹಂತಕ್ಕೆ ತಲುಪಿಸಬಹುದು? ಈ ಬಗ್ಗೆ ಪ್ರಜ್ಞೆಯನ್ನು ಹೊಂದಿರಬೇಕಾದ ಸರಕಾರವೇ ಈ ಆರ್ಸಿಬಿ ಗೆಲುವಿನ ಜೂಜಿನಲ್ಲಿ ಭಾಗವಹಿಸಲು ಹೋಗಿ ಮೈಮೇಲೆ ಕಪ್ಪು ಬಳಿದುಕೊಂಡಿದೆ. ಈ ಕಪ್ಪನ್ನು ಸರಕಾರ ಅದು ಹೇಗೆ ತೊಡೆೆದು ಹಾಕುತ್ತದೆ ಎನ್ನುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಬೇಕು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುರಂತದಲ್ಲಿ ಸರಕಾರದ ನೇರ ಪಾತ್ರ ಇರದೇ ಇರಬಹುದು, ಆದರೆ ಜನರ ಉನ್ಮಾದಕ್ಕೆ ರಾಜಕೀಯ ನಾಯಕರೂ ಸಾಥ್ ನೀಡಿದ್ದು ಎಷ್ಟು ಸರಿ? ಈ ನಾಡಿನ ಎಲೆಮರೆಯ ಅತ್ಲೀಟ್ಗಳಿಗೆ ಬೆಂಬಲ ನೀಡುತ್ತಾ, ಅವರಿಗೆ ಸೂಕ್ತ ಅನುಕೂಲಗಳನ್ನು ಮಾಡುವುದು ಸರಕಾರದ ಹೊಣೆಗಾರಿಕೆ. ಇದಕ್ಕೆ ಬದಲು, ತಾನೂ ಆರ್ಸಿಬಿ ಫ್ಯಾನ್ ಆಗಲು ಹೋಗಿ ರಾಜ್ಯ ಸರಕಾರವು ಬೆಟ್ಟಿಂಗ್ ಮಾಫಿಯಾ ತೋಡಿದ ಹೊಂಡಕ್ಕೆ ಸ್ಪತಃ ಹೋಗಿ ಬಿದ್ದದ್ದು ವಿಷಾದನೀಯವಾಗಿದೆ.