ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ಅಗತ್ಯ

File Photo
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಜಾಗತೀಕರಣದ ಮಾರುಕಟ್ಟೆ ಆರ್ಥಿಕತೆಯ ಶಕೆ ಆರಂಭವಾದ ನಂತರ ಸಾಮಾಜಿಕ ಬದುಕಿನ ಇತರ ಕ್ಷೇತ್ರಗಳಂತೆ ಶಾಲಾ ಶಿಕ್ಷಣದಲ್ಲೂ ಮಹತ್ತರ ಬದಲಾವಣೆಯಾಗುತ್ತಿದೆ. ಮುಂಚೆ ಶಾಲಾ ವಿದ್ಯಾರ್ಥಿಗಳು ಪಠ್ಯಕ್ರಮದ ಜೊತೆ ಜೊತೆಗೆ ಚಿತ್ರಕಲೆ, ಸಂಗೀತ, ನಾಟಕ, ಕ್ರೀಡೆ ಹೀಗೆ ಹಲವಾರು ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಅವಕಾಶವಿತ್ತು. ಹೀಗಾಗಿ ವ್ಯಕ್ತಿತ್ವದ ಸಮಗ್ರ ಬೆಳವಣಿಗೆಗೆ ಅನುಕೂಲವಾಗುತ್ತಿತ್ತು. ಆದರೆ ಅಂಕಗಳಿಸುವುದು, ಹಣ ಸಂಪಾದಿಸಲು ಪೂರಕವಾಗುವ ಒಳ್ಳೆಯ ಕೆಲಸ ಹುಡುಕುವುದು ಇವೇ ಶಿಕ್ಷಣ ಎಂದಾದಾಗ ಅಕ್ಷರ ಕಲಿಯುವುದು ಜ್ಞಾನ ಪಡೆಯುವುದಕ್ಕಾಗಿ ಅಲ್ಲ ಎಂದಾಯಿತು. ಹೀಗಾಗಿ ಶಿಕ್ಷಣ ಕ್ಷೇತ್ರದಲ್ಲಿ ದುಡ್ಡಿರುವ ಕುಳಗಳು ನುಸುಳಿ ತಮ್ಮದೇ ಶಾಲೆ, ಕಾಲೇಜುಗಳನ್ನು ಆರಂಭಿಸತೊಡಗಿದರು. ಈ ಹೆಚ್ಚಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಕಡಿಮೆ ಎಂಬುದು ಎಲ್ಲರಿಗೂ ತಿಳಿದ ಸಂಗತಿ.
ಈ ವಿದ್ಯಮಾನಗಳ ಹಿನ್ನೆಲೆಯಲ್ಲಿ ಬೆಳೆಯುವ ಮಕ್ಕಳಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಮೂಡಿಸಲು ರಾಜ್ಯ ಸರಕಾರ ಚಿತ್ರಕಲೆ, ನಾಟಕ, ಸಂಗೀತ ಮುಂತಾದ ಸೃಜನಶೀಲ ವಿಷಯಗಳನ್ನು ಕಲಿಸಲು ‘ವಿಶೇಷ ಶಿಕ್ಷಕ’ರೆಂದು ಹೆಸರಿಸಿ ಕೆಲವು ಶಿಕ್ಷಕರನ್ನು ಸರಕಾರಿ ಶಾಲೆ, ಕಾಲೇಜುಗಳಲ್ಲಿ ನೇಮಕ ಮಾಡಿಕೊಂಡಿತು. ಇದು ಶ್ಲಾಘನೀಯ ಸಂಗತಿ. ಆದರೆ ಈಗ ಸರಕಾರಿ ಪ್ರೌಢ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಈ ವಿಶೇಷ ಶಿಕ್ಷಕರನ್ನು 240ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಶಾಲೆಗಳಿಗೆ ವರ್ಗಾವಣೆ ಮಾಡಲು ಸಂಬಂಧಿಸಿದ ಇಲಾಖೆ ತೀರ್ಮಾನಿಸಿದೆ. ಇದರ ದುಷ್ಪರಿಣಾಮ ಉಂಟಾಗುವುದು ಗ್ರಾಮೀಣ ಪ್ರದೇಶದ ಮಕ್ಕಳ ಮೇಲೆ.
ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ 240ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳು ಸಾಕಷ್ಟಿವೆ. ಅಲ್ಲಿ ಈ ವಿಶೇಷ ಶಿಕ್ಷಕರನ್ನು ‘ಹೆಚ್ಚುವರಿ’ ಎಂದು ಪರಿಗಣಿಸಿ ಅವರನ್ನು ನಗರ ಪ್ರದೇಶಗಳಿಗೆ ವರ್ಗಾವಣೆ ಮಾಡಲು ತೀರ್ಮಾನಿಸಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅವಶ್ಯಕ ಮೂಲ ಸೌಕರ್ಯಗಳ ಕೊರತೆ ಹಾಗೂ ವಿದ್ಯಾರ್ಥಿಗಳ ಕಡಿಮೆ ದಾಖಲಾತಿಯಿಂದ ವರ್ಷದಿಂದ ವರ್ಷಕ್ಕೆ ಸರಕಾರಿ ಶಾಲೆಗಳು ದುರ್ಬಲಗೊಳ್ಳುತ್ತಿವೆ. ಈಗ ಈ ವಿಶೇಷ ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆ ಮುಂದಾಗಿರುವುದು ಕಳವಳಕಾರಿ ಸಂಗತಿಯಾಗಿದೆ.
ಗ್ರಾಮೀಣ ಮತ್ತು ನಗರ ಪ್ರದೇಶಗಳ ವಿದ್ಯಾರ್ಥಿಗಳಲ್ಲಿ ಸರಕಾರ ತಾರತಮ್ಯ ಮಾಡುತ್ತಿದೆಯೇ ಎಂಬ ಭಾವನೆ ಸಹಜವಾಗಿ ಮೂಡುತ್ತದೆ. ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ಕಲೆ, ಸಂಗೀತ ನಾಟಕದಂಥ ವಿವಿಧ ಕಲಾ ಪ್ರಕಾರಗಳ ಕಲಿಕೆ ಅಗತ್ಯವಿಲ್ಲ ಎಂದು ಶಿಕ್ಷಣ ಇಲಾಖೆ ಹೇಗೆ ತೀರ್ಮಾನಿಸಿತು? ಈ ಪಕ್ಷಪಾತವೇಕೆ?
ನಗರ ಪ್ರದೇಶ ಮಾತ್ರವಲ್ಲ, ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲೂ ಚಿತ್ರಕಲೆ, ನಾಟಕ, ಸಂಗೀತ ಮೊದಲಾದ ಪಠ್ಯೇತರ ವಿಷಯಗಳ ಬಗ್ಗೆ ಆಸಕ್ತಿ ಇರುತ್ತದೆ. ಈ ಮಕ್ಕಳಲ್ಲಿ ಇರುವ ಪ್ರತಿಭೆ ಹಲವಾರು ಕಾರಣಗಳಿಂದ ಬೆಳಕಿಗೆ ಬಂದಿರುವುದಿಲ್ಲ. ಅದು ಬೆಳಕಿಗೆ ಬರಬೇಕೆಂದರೆ ಪ್ರೋತ್ಸಾಹದ ಅಗತ್ಯವಿದೆ. ಹಳ್ಳಿಗಾಡಿನ ಮಕ್ಕಳು ಕೀಳರಿಮೆಯಿಂದ ಹೊರಗೆ ಬಂದು ಸ್ವಯಂ ಪ್ರತಿಭೆಯನ್ನು ಸಾಕಾರಗೊಳಿಸಿಕೊಳ್ಳುವಲ್ಲಿ ವಿಶೇಷ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಉಲ್ಲೇಖಿಸಲಾಗಿದೆ. ಹಣ ಗಳಿಸುವ ಉದ್ದೇಶದಿಂದ ಗ್ರಾಮೀಣ ಪ್ರದೇಶಗಳಲ್ಲೂ ಖಾಸಗಿ ಶಿಕ್ಷಣ ಸಂಸ್ಥೆಗಳ ಶಾಲೆ, ಕಾಲೇಜುಗಳು ತಲೆ ಎತ್ತುತ್ತಿವೆ. ಈ ಖಾಸಗಿ ಶಾಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆಗಳಿಗೆ ಆದ್ಯತೆ ಇಲ್ಲ. ಬಹುತೇಕ ಪಾಲಕರೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮ ಮಕ್ಕಳು ಪಾಲ್ಗೊಳ್ಳುವುದನ್ನು ಇಷ್ಟಪಡುವುದಿಲ್ಲ. ಈ ಲೋಪವನ್ನು ಸರಿಪಡಿಸಿ ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಪಾಲ್ಗೊಳ್ಳುವುದನ್ನು ಪ್ರೋತ್ಸಾಹಿಸುವ ವಿಶೇಷ ಶಿಕ್ಷಕರನ್ನು ನಗರ ಪ್ರದೇಶಕ್ಕೆ ವರ್ಗಾವಣೆ ಮಾಡಲು ಶಿಕ್ಷಣ ಇಲಾಖೆ ಹೊರಟಿರುವುದು ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಅನ್ಯಾಯ ಮಾಡಿದಂತೆ ಎಂದು ಹೇಳಿದರೆ ತಪ್ಪಿಲ್ಲ.
ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಅರಳಿಸಿ ಬೆಳಕಿಗೆ ತರುವಲ್ಲಿ ವಿಶೇಷ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಈ ವಿಶೇಷ ಶಿಕ್ಷಕರು ಅನೇಕ ಅಡೆತಡೆಗಳ ನಡುವೆ ಕಾರ್ಯನಿರ್ವಹಿಸಬೇಕಾಗಿ ಬಂದಿದೆ. ಅವರು ಕೆಲಸ ಮಾಡುವ ಶಾಲೆಗಳಲ್ಲೂ ಅವರನ್ನು ಎರಡನೇ ದರ್ಜೆಯ ಶಿಕ್ಷಕರಂತೆ ನಡೆಸಿಕೊಳ್ಳಲಾಗುತ್ತಿದೆ ಎಂಬ ದೂರುಗಳಿವೆ. ಪಠ್ಯ ಪುಸ್ತಕಗಳನ್ನು ಬೋಧಿಸುವ ಶಿಕ್ಷಕರಿಗೆ ದೊರೆಯುವ ಪ್ರಾಮುಖ್ಯತೆ ಈ ವಿಶೇಷ ಶಿಕ್ಷಕರಿಗೆ ದೊರೆಯುವುದಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ. ಈ ಎಲ್ಲಾ ಅನನುಕೂಲತೆಗಳ ನಡುವೆ ಕೆಲವು ವಿಶೇಷ ಶಿಕ್ಷಕರು ತಮ್ಮ ಕ್ರಿಯಾಶೀಲತೆಯಿಂದ ತಾವು ಕಲಿಸುತ್ತಿರುವ ಶಾಲೆಗಳ ಪ್ರತಿಷ್ಠೆಯನ್ನು ಹೆಚ್ಚಿಸಿದ್ದಾರೆ. ಇವರ ಪ್ರೋತ್ಸಾಹ ದಿಂದಾಗಿ ಗ್ರಾಮೀಣ ಪ್ರದೇಶಗಳ ಮಕ್ಕಳು ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ನಗರ ಪ್ರದೇಶಗಳ ಮಕ್ಕಳ ಜೊತೆಗೆ ಸ್ಪರ್ಧಿಸಿ ಗೆಲುವಿನ ಬಾವುಟವನ್ನು ಹಾರಿಸಿದ್ದಾರೆ. ಇದರ ಶ್ರೇಯಸ್ಸು ವಿಶೇಷ ಶಿಕ್ಷಕರಿಗೆ ಸಲ್ಲುತ್ತದೆ.
ಗ್ರಾಮೀಣ ಪ್ರದೇಶಗಳ ಶಾಲಾ ಮಕ್ಕಳ ಅಭಿವ್ಯಕ್ತಿಗೆ ಪ್ರೋತ್ಸಾಹ ನೀಡಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿದ ಈ ವಿಶೇಷ ಶಿಕ್ಷಕರನ್ನು ‘ಹೆಚ್ಚುವರಿ’ ಎಂದು ಹಣೆಪಟ್ಟಿ ಹಚ್ಚಿ ನಗರ ಪ್ರದೇಶಗಳಿಗೆ ವರ್ಗಾವಣೆ ಮಾಡುವ ಉದ್ದೇಶವೇನು? ಇದು ಒಳ್ಳೆಯ ಕೆಲಸ ಮಾಡಿರುವುದಕ್ಕೆ ಪುರಸ್ಕಾರವೇ? ಹಳ್ಳಿಗಾಡಿನ ಶಾಲಾ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕಾರಣರಾದ ಈ ವಿಶೇಷ ಶಿಕ್ಷಕರನ್ನು ಏಕಾಏಕಿ ವರ್ಗಾವಣೆ ಮಾಡುವುದು ಅವೈಜ್ಞಾನಿಕ ಕ್ರಮವಾಗಿದೆ.
ಶಿಕ್ಷಣ ಇಲಾಖೆ ಈಗಲಾದರೂ ಮರು ಪರಿಶೀಲನೆ ಮಾಡುವುದು ಅತ್ಯಗತ್ಯವಾಗಿದೆ. ಅಲ್ಲದೆ ಇವರನ್ನು ‘ವಿಶೇಷ ಶಿಕ್ಷಕರು’ ಎಂದು ಹೆಸರಿಸುವುದೂ ಕೂಡ ನ್ಯಾಯ ಸಮ್ಮತವಲ್ಲ. ಪ್ರತಿಯೊಂದು ಶಾಲೆ, ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಈ ಶೈಕ್ಷಣಿಕ ಪರಿಣಿತಿಯನ್ನು ಪರಿಗಣಿಸಿ ಗಣಿತ, ವಿಜ್ಞಾನ, ಭಾಷಾಶಾಸ್ತ್ರ ಶಿಕ್ಷಕರಂತೆ ಇವರನ್ನೂ ಸಮಾನವಾಗಿ ಪರಿಗಣನೆ ಮಾಡಬೇಕು.
ಈಗ ರಾಜ್ಯದಲ್ಲಿ ಈ ವಿಶೇಷ ಎಂಬ ಹಣೆಪಟ್ಟಿಯನ್ನು ಹಚ್ಚಿಕೊಂಡು ಕಾರ್ಯ ನಿರ್ವಹಿಸುವ 2,400 ಶಿಕ್ಷಕರನ್ನು ಖಾಯಂ ಮಾಡಬೇಕು. ನಿಯಮಿತ ನೇಮಕಾತಿ ಪ್ರಕ್ರಿಯೆಗೆ ಅನುಗುಣವಾಗಿ ಎಲ್ಲಾ ಶಾಲೆ, ಕಾಲೇಜುಗಳಲ್ಲಿ ವಿವಿಧ ಕಲಾ ಪ್ರಕಾರಗಳ ಶಿಕ್ಷಕರು ಇರುವಂತೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು . ಗ್ರಾಮೀಣ ಪ್ರದೇಶಗಳ ಮಕ್ಕಳು ಕೂಡ ಕಲೆ, ಸಾಹಿತ್ಯ, ಸಂಗೀತ, ನಾಟಕಗಳಲ್ಲಿ ಆಸಕ್ತಿ ವಹಿಸುವಂತೆ ಮಾಡಬೇಕಾಗಿದೆ.







