ಒಳ ಮೀಸಲಾತಿ: ನೊಂದವರನ್ನು ನೊಂದವರೇ ಅರಿಯಲು ವಿಫಲರಾದರೆ?

PC | x.com/siddaramaiah
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
‘ನೊಂದವರ ನೋವ ನೋಯದವರೆತ್ತ ಬಲ್ಲರು?’ ಇದು ಅಕ್ಕಮಹಾದೇವಿಯ ವಚನದ ಸಾಲು. ನೊಂದವರ ನೋವನ್ನು ನೋವುಂಡವರಷ್ಟೇ ತಮ್ಮದಾಗಿಸಿಕೊಳ್ಳಲು ಸಾಧ್ಯ. ನೋವಿನ ಅರಿವಿಲ್ಲದವರಿಗೆ ಅದನ್ನು ಪೂರ್ಣವಾಗಿ ತಮ್ಮದಾಗಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಇದರ ತಾತ್ಪರ್ಯ. ದಲಿತರ, ಅಸ್ಪಶ್ಯರ ಕುರಿತಂತೆ ಗಾಂಧೀಜಿ ಮತ್ತು ಅಂಬೇಡ್ಕರ್ ನಡುವಿನ ನಿಲುವುಗಳನ್ನು ಈ ಹಿನ್ನೆಲೆಯನ್ನಿಟ್ಟುಕೊಂಡು ವಿಶ್ಲೇಷಿಸಲಾಗುತ್ತದೆ. ದಲಿತರ ನೋವು, ಸಂಕಟಗಳಿಗೆ ಅಂಬೇಡ್ಕರ್ ಸ್ಪಂದಿಸಿದಷ್ಟು ತೀವ್ರವಾಗಿ ಗಾಂಧೀಜಿಗೆ ಸ್ಪಂದಿಸಲು ಈ ಕಾರಣದಿಂದಲೇ ಸಾಧ್ಯವಾಗಲಿಲ್ಲ. ಯಾಕೆಂದರೆ, ಗಾಂಧೀಜಿ ನೊಂದ ಸಮುದಾಯದಿಂದ ಬಂದವರಲ್ಲ, ಆದರೆ ಅಂಬೇಡ್ಕರ್ ಸ್ವತಃ ಅಸ್ಪಶ್ಯ ಸಮಾಜದಿಂದ ಎದ್ದು ಬಂದವರು. ಆದರೆ ಎಸ್ಸಿಯೊಳಗೆ ಒಳಮೀಸಲಾತಿಯ ಕೂಗು ಎದ್ದ ದಿನದಿಂದ ‘ನೊಂದವರೂ ಕೆಲವೊಮ್ಮೆ ನೊಂದವರ ನೋವನ್ನು ಅರಿಯುವುದಕ್ಕೆ ವಿಫಲರಾಗುತ್ತಾರೆ’ ಎನ್ನುವ ಕಹಿ ಸತ್ಯ ಬಹಿರಂಗವಾಗುತ್ತಿದೆ. ಮೀಸಲಾತಿಯ ಅರ್ಥಪೂರ್ಣ ಜಾರಿಗಾಗಿ ದೇಶಾದ್ಯಂತ ಸಂಘಟಿತ ಹೋರಾಟ ನಡೆಸಬೇಕಾಗಿದ್ದ ದಲಿತ ಸಮುದಾಯ ಕರ್ನಾಟಕದಲ್ಲಿ ಒಳ ಮೀಸಲಾತಿಯ ಹೆಸರಿನಲ್ಲಿ ಪರಸ್ಪರ ಕೆಸರೆರಚಾಟ ನಡೆಸುತ್ತಿದೆ. ತಮ್ಮ ಇಂದಿನ ಸ್ಥಿತಿಗೆ ನಿಜವಾದ ಕಾರಣಕರ್ತರು ಯಾರು ಎನ್ನುವುದನ್ನು ಗುರುತಿಸಿ ಅವರ ವಿರುದ್ಧ ಸಂಘಟಿತವಾಗುವ ಬದಲು, ತಮ್ಮೊಳಗೇ ಶತ್ರುಗಳನ್ನು ಹುಡುಕುತ್ತಿದೆ. ಶೋಷಿತರೊಳಗೇ ಪರಸ್ಪರ ಅನುಮಾನ, ಆತಂಕಗಳು ನಿರ್ಮಾಣವಾಗಿವೆ. ದಲಿತ ಸಮುದಾಯವನ್ನು ‘ಮೀಸಲಾತಿ’ಯ ಹೆಸರಿನಲ್ಲೇ ಕಚ್ಚಾಡಿಸುವ ಮೂಲಕ ಮೇಲ್ವರ್ಗಗಳು ತಮ್ಮ ಉದ್ದೇಶವನ್ನು ಬಹುತೇಕ ಸಾಧಿಸಿವೆ. ಸಂಘಟಿತರಾಗಿ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಬೇಕಾಗಿದ್ದ ಸಮುದಾಯ ರಾಜ್ಯದಲ್ಲಿ ಸ್ಪಷ್ಟವಾಗಿ ದಾರಿ ತಪ್ಪಿದೆ.
ಯಾವ ಮೀಸಲಾತಿಗಾಗಿ ದಲಿತರು ಬಡಿದಾಡಿಕೊಳ್ಳುತ್ತಿದ್ದಾರೆಯೋ ಅದರ ಸ್ಥಿತಿ ಇಂದು ಏನಾಗಿದೆ ಎನ್ನುವುದನ್ನು ಅರಿತುಕೊಳ್ಳಬೇಕಾಗಿದೆ. ದೇಶಾದ್ಯಂತ ರಾಜಕೀಯವಾಗಿ, ಆರ್ಥಿಕವಾಗಿ ಪ್ರಾತಿನಿಧ್ಯವನ್ನು ಪಡೆದಿರುವ ಬಲಾಢ್ಯ ಜಾತಿಗಳು ಮೀಸಲಾತಿ ಹಕ್ಕುಗಳಿಗಾಗಿ ಬೀದಿಗಿಳಿದಿವೆ. ಇದೇ ಹೊತ್ತಿಗೆ ಯಾವುದೇ ಹೋರಾಟಗಳನ್ನು ಮಾಡದೆಯೇ ಸವರ್ಣೀಯ ಜಾತಿಗಳ ‘ಬಡವರು’ ಶೇ.೧೦ರಷ್ಟು ಮೀಸಲಾತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಮೀಸಲಾತಿ ತನ್ನ ಉದ್ದೇಶವನ್ನೇ ಕಳೆದುಕೊಂಡು ದುರ್ಬಲವಾಗಿದೆ. ಕುರಿಗಳಿಗೆ ಮೀಸಲಾತಿಯ ಕೊಂಬುಗಳಿವೆ ಎಂದು ತೋಳಗಳಿಗೆ ಈಗಾಗಲೇ ಇರುವ ಕೋರೆಹಲ್ಲುಗಳಿಗೆ ಇನ್ನೆರಡು ಹಲ್ಲುಗಳನ್ನು ಜೋಡಿಸಿದರೆ, ಕುರಿಗಳ ಸ್ಥಿತಿ ಏನಾಗಬಹುದೋ ಈ ದೇಶದ ದಲಿತರ ಸ್ಥಿತಿಯೂ ಅದೇ ಆಗಿದೆ. ಮೀಸಲಾತಿಯನ್ನು ನೇರವಾಗಿ ಇಲ್ಲವಾಗಿಸಲು ಸಾಧ್ಯವಿಲ್ಲ ಎನ್ನುವುದು ಮನವರಿಕೆ ಮಾಡಿಕೊಂಡ ಮೇಲ್ಜಾತಿಯ ನಾಯಕರು, ಇದೀಗ ಅಡ್ಡದಾರಿಯಲ್ಲಿ ಮೀಸಲಾತಿಯನ್ನು ದುರ್ಬಲಗೊಳಿಸುತ್ತಿದ್ದಾರೆ. ಪರಿಣಾಮವಾಗಿ ಹಂತ ಹಂತವಾಗಿ ಬಲಾಢ್ಯ ಜಾತಿಗಳೂ ಮೀಸಲಾತಿಯಲ್ಲಿ ಪಾಲುಗಳನ್ನು ಪಡೆಯುತ್ತಾ, ಅವಕಾಶಗಳ ಮೇಲೆ ಅವಕಾಶಗಳನ್ನು ಪಡೆಯುತ್ತಿವೆ. ಇತ್ತ ಮೀಸಲಾತಿಯಿದ್ದರೂ, ದಲಿತ ಸಮುದಾಯ ಬೇರೆ ಬೇರೆ ಕಾರಣಗಳಿಂದ ಅದನ್ನು ತನ್ನದಾಗಿಸಿಕೊಳ್ಳಲು ವಿಫಲವಾಗುತ್ತಿದೆ. ಇಂದಿಗೂ ನ್ಯಾಯಾಂಗ, ಕಾರ್ಯಾಂಗದಲ್ಲಿ ದಲಿತರ ಪಾಲು ಏನೇನೂ ಇಲ್ಲ. ಹೊಲೆಯರು ಅತಿ ಹೆಚ್ಚು ಮೀಸಲಾತಿಯ ಪಾಲನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ ಎನ್ನುವುದು ಮಾದಿಗ ಸಮುದಾಯದ ಅಳಲು. ಅದರಲ್ಲಿ ಸತ್ಯಾಂಶವಿಲ್ಲದಿಲ್ಲ. ಮಾದಿಗ ಸಮುದಾಯಕ್ಕೆ ಹೋಲಿಸಿದರೆ ಹೊಲೆಯ ಸಮುದಾಯ ಹೆಚ್ಚು ಪಾಲನ್ನು ಪಡೆದಿರಬಹುದು. ಆದರೆ ಒಟ್ಟು ಮೀಸಲಾತಿ ಹೊಲೆಯರ ಬದುಕನ್ನಾದರೂ ಎಷ್ಟರಮಟ್ಟಿಗೆ ಸುಧಾರಣೆಗೈದಿದೆ? ಇಂದು ಪದವೀಧರರು, ಸ್ನಾತಕೋತ್ತರ ಪದವೀಧರರಿಗೆ ಎಷ್ಟರಮಟ್ಟಿಗೆ ಉದ್ಯೋಗ ನೀಡುವಲ್ಲಿ ಈ ಮೀಸಲಾತಿ ಯಶಸ್ವಿಯಾಗಿದೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳ ಬೇಡವೆ?
ಮೇಲ್ಜಾತಿಗೆ ಶೇ. 10 ಮೀಸಲಾತಿಯನ್ನು ಘೋಷಿಸಿದಾಗ ಮಾದಿಗರು ಮತ್ತು ಹೊಲೆಯರು ಸಂಘಟಿತವಾಗಿ ಬೀದಿಗಿಳಿಯಬೇಕಾಗಿತ್ತು. ಆದರೆ ಅಂತಹ ಯಾವುದೇ ಹೋರಾಟಗಳು ನಡೆಯಲಿಲ್ಲ. ಸಣ್ಣ ಪುಟ್ಟ ಖಂಡನೆ, ಪ್ರತಿಭಟನೆಗಳಿಗೇ ಹೋರಾಟ ಸೀಮಿತವಾದವು. ಮೋದಿ ನೇತೃತ್ವದ ಸರಕಾರ ಖಾಸಗೀಕರಣಕ್ಕೆ ಆದ್ಯತೆಯನ್ನು ನೀಡುತ್ತಿದೆ. ಸರಕಾರಿ ಹುದ್ದೆಗಳು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತಿವೆೆ. ದಲಿತರಿಗೆ ನೀಡುವ ಮೀಸಲಾತಿ ಅರ್ಥ ಪಡೆಯಬೇಕಾದರೆ ಖಾಸಗಿ ವಲಯದಲ್ಲೂ ಮೀಸಲಾತಿ ಜಾರಿಗೊಳ್ಳಬೇಕು. ಅದಕ್ಕಾಗಿ ಹೋರಾಟಗಳು ನಡೆಯಬೇಕು. ಆದರೆ ಅದಕ್ಕಾಗಿ ಯಾವುದೇ ಬೀದಿ ಹೋರಾಟಗಳು ಈವರೆಗೆ ನಡೆದಿಲ್ಲ. ಒಳ ಮೀಸಲಾತಿಯನ್ನು ಘೋಷಿಸುವ ಸಂದರ್ಭದಲ್ಲೇ ಸುಪ್ರೀಂಕೋರ್ಟ್ ‘ಕೆನೆ ಪದರ’ವನ್ನು ಉಲ್ಲೇಖಿಸಿದೆ. ದಲಿತರ ಬಟ್ಟಲಿನ ಕೆನೆಗಳು ಮಾತ್ರ ಯಾಕೆ ನಮ್ಮ ನ್ಯಾಯ ವ್ಯವಸ್ಥೆಗೆ ಕಾಣಿಸುತ್ತಿದೆ? ತಮ್ಮ ಮೀಸಲಾತಿಯ ಪಾಲನ್ನು ಯಾರು ಕದಿಯಲು ಸಂಚು ನಡೆಸಿದ್ದಾರೆ ಎನ್ನುವುದು ಇಷ್ಟೊಂದು ಸ್ಪಷ್ಟವಾಗಿರುವಾಗಲೂ, ದಲಿತರು ಎಡ-ಬಲ ಎಂದು ಇಬ್ಭಾಗವಾಗಿ ಪರಸ್ಪರರಲ್ಲಿ ಶೋಷಕರನ್ನು ಹುಡುಕುತ್ತಿರುವುದು ಕಾಲದ ಅತಿ ದೊಡ್ಡ ವ್ಯಂಗ್ಯವಾಗಿದೆ. ಮಾದಿಗ ಸಮುದಾಯ ಹೊಲೆಯರನ್ನು, ಹೊಲೆಯ ಸಮುದಾಯ ಮಾದಿಗರನ್ನು ಶತ್ರುಗಳಾಗಿ ಕಲ್ಪಿಸಿಕೊಂಡು ಪರಸ್ಪರ ಟೀಕೆಗಳನ್ನು ಎಸೆಯುತ್ತಿವೆ. ಆದರೆ ನಿಜಕ್ಕೂ ದಲಿತರ ಮೀಸಲಾತಿಯನ್ನು ಕಸಿದುಕೊಂಡವರು ಯಾರು ಎನ್ನುವುದು ದಲಿತ ನಾಯಕರಿಗೆ ತಿಳಿದಿಲ್ಲವೆ? ಅಥವಾ ಮೇಲ್ಜಾತಿ ರಾಜಕೀಯ ನಾಯಕರ ಗಾಳದ ಎರೆಹುಳಗಳಾಗಿ ಇವರು ಬಳಕೆಯಾಗುತ್ತಿದ್ದಾರೆಯೆ?
ನ್ಯಾ.ನಾಗಮೋಹನ್ ದಾಸ್ ವರದಿ ಸಲ್ಲಿಕೆಯಾದ ಬೆನ್ನಿಗೆ, ನಮ್ಮ ಸಮುದಾಯಕ್ಕೆ ಎಲ್ಲಿ ಅನ್ಯಾಯವಾಗುತ್ತದೆಯೋ ಎನ್ನುವ ಆತಂಕದಲ್ಲಿದೆ ಹೊಲೆಯ ಸಮುದಾಯ. ಅವರ ಹೇಳಿಕೆಗಳು ಇತ್ತ ಮಾದಿಗ ಸಮುದಾಯದೊಳಗೂ ಆತಂಕ, ಅಭದ್ರತೆಯನ್ನು ಬಿತ್ತುತ್ತಿವೆ. ಉಭಯ ಸಮುದಾಯಗಳಿಗೆ ವಾಸ್ತವವನ್ನು ತಿಳಿಸಿಕೊಡಬೇಕಾದ ಬಹುತೇಕ ನಾಯಕರು ಮೇಲ್ಜಾತಿಯ ರಾಜಕೀಯದ ದಾಳಗಳಾಗಿ ಕೆಲಸ ಮಾಡುತ್ತಿದ್ದಾರೆ. ದಲಿತ ಸಮುದಾಯವನ್ನು ಎರಡಾಗಿ ಒಡೆದು, ಒಳ ಮೀಸಲಾತಿ ಜಾರಿಗೊಂಡರೆ ಅದರಿಂದ ದಲಿತರ ಸಾಮಾಜಿಕ, ಆರ್ಥಿಕ ಬದುಕಿನ ಮೇಲೆ ಯಾವ ಪರಿಣಾಮವೂ ಬೀರಲಾರದು. ಅದು ಅವರನ್ನು ಸಮಾಜದಲ್ಲಿ ಇನ್ನಷ್ಟು ಮೂಲೆಗುಂಪು ಮಾಡಲಿದೆ. ರಾಜಕೀಯವಾಗಿ ಅವರ ಪ್ರಾತಿನಿಧ್ಯ ಇನ್ನಷ್ಟು ಕುಗ್ಗುತ್ತದೆ. ಹಾಗಾದಲ್ಲಿ ಅದು ಅವರ ಸಾಮಾಜಿಕ ಮತ್ತು ಆರ್ಥಿಕ ಬದುಕಿನ ಮೇಲೆ ಇನ್ನಷ್ಟು ದುಷ್ಪರಿಣಾಮಗಳನ್ನು ಬೀರುತ್ತದೆ. ಈ ಹಿನ್ನೆಲೆಯಲ್ಲಿ, ಜಾತಿ ವ್ಯವಸ್ಥೆಯ ಒಳ ಸಂಚುಗಳನ್ನು ಅರಿತು ದಲಿತರು ತನ್ನ ತಳಸ್ತರದ ಬಂಧುಗಳನ್ನು ಜತೆಯಾಗಿಸಿಕೊಂಡು ಸಂಘಟಿತರಾಗಬೇಕು. ಮೂಗಿಗೆ ಒರೆಸಿದ ಬೆಣ್ಣೆಯ ಆಸೆಗೆ ಬಲಿ ಬಿದ್ದು, ತಟ್ಟೆಯಲ್ಲಿರುವ ಮುದ್ದೆಯನ್ನು ಕಳೆದುಕೊಳ್ಳುವ ಸ್ಥಿತಿ ಯಾವ ಕಾರಣಕ್ಕೂ ದಲಿತರದ್ದಾಗಬಾರದು.







