ಇದೆಂತಹ ಸಂಪುಟ ನಿರ್ಧಾರ!?

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಸರಕಾರಿ ಜಾಗಗಳಲ್ಲಿ ಆರೆಸ್ಸೆಸ್ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆಯವರು ಮುಖ್ಯಮಂತ್ರಿಗೆ ಪತ್ರ ಬರೆದಿರುವುದು ತೀವ್ರ ಚರ್ಚೆಗೊಳಗಾಗುತ್ತಿರುವ ಹೊತ್ತಿನಲ್ಲೇ, ಈ ಪತ್ರವನ್ನು ಅಣಕಿಸುವಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರವೊಂದನ್ನು ತೆಗೆದುಕೊಳ್ಳಲಾಗಿದೆ. ಅದರಂತೆ ‘ಸರಕಾರಿ ಜಾಗಗಳಲ್ಲಿ ಖಾಸಗಿ ಸಂಘಟನೆಗಳು, ಸಂಸ್ಥೆಗಳು ಯಾವುದೇ ಬಗೆಯ ಚಟುವಟಿಕೆಗಳನ್ನು ನಡೆಸಬೇಕಿದ್ದರೂ ಸಂಬಂಧಪಟ್ಟ ಪ್ರಾಧಿಕಾರಗಳಿಂದ ಪೂರ್ವಾನುಮತಿ ಪಡೆಯುವುದು ಕಡ್ಡಾಯ’ವಾಗಿದೆ. ಸಾರ್ವಜನಿಕ ಸ್ಥಳ ಹಾಗೂ ಸರಕಾರಿ ಜಾಗಗಳ ಬಳಕೆಗೆ ಸಂಬಂಧಿಸಿದಂತೆ ನಿಯಮಾವಳಿಗಳನ್ನು ರೂಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ವಿವರವಾದ ಸರಕಾರಿ ಆದೇಶವನ್ನು ಹೊರಡಿಸಲಾಗುವುದು. ಸರಕಾರದ, ಸರಕಾರಿ ಸ್ವಾಮ್ಯದ ಶಾಲಾ ಕಾಲೇಜುಗಳು, ಅನುದಾನಿತ ಶೈಕ್ಷಣಿಕ ಸಂಸ್ಥೆಗಳ ಆವರಣಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಉನ್ನತ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಇನ್ನು ಮುಂದೆ ಅನುಮತಿ ಪಡೆಯಬೇಕಾಗುತ್ತದೆ ಎಂದು ಸಚಿವ ಎಚ್. ಕೆ. ಪಾಟೀಲ್ ತಿಳಿಸಿದ್ದಾರೆ. ‘ಇದೊಂದು ಮಹತ್ತರ ನಿರ್ಧಾರ’ ಎಂಬಂತೆ ಸರಕಾರ ಪ್ರಕಟಿಸಿದೆಯಾದರೂ ಶಾಲಾ ಕಾಲೇಜುಗಳಲ್ಲಿ ಅನುಮತಿ ಪಡೆಯದೇ ಕಾರ್ಯಕ್ರಮಗಳನ್ನು ನಡೆಸಲು ಈ ಹಿಂದೆಯೂ ಸಾಧ್ಯವಿರುತ್ತಿರಲಿಲ್ಲ. ಎನ್ನುವುದನ್ನು ಸರಕಾರ ಈ ಸಂದರ್ಭದಲ್ಲಿ ಮರೆತಿದೆ. ಯಾರೂ ಬೇಕಾದರೂ ಸರಕಾರಿ ಸ್ಥಳಗಳಲ್ಲಿ, ಶಾಲಾ ಕಾಲೇಜುಗಳಲ್ಲಿ ಅಕ್ರಮವಾಗಿ ಪ್ರವೇಶಿಸಿ ಕಾರ್ಯಕ್ರಮ ನಡೆಸುವುದಕ್ಕೆ ಈ ಹಿಂದೆಯೂ ಅವಕಾಶವಿರಲಿಲ್ಲ. ಹೀಗಿರುವಾಗ ಸಂಪುಟದ ನಿರ್ಧಾರದಲ್ಲಿ ಹೊಸತೇನಿದೆ? ಎನ್ನುವ ಪ್ರಶ್ನೆಯೆದ್ದಿದೆ.
ಈ ಹಿಂದೆ ಬಿಜೆಪಿ ಸರಕಾರವೇ ‘ಶಾಲಾ ಆವರಣದಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಿರಾಕರಿಸಿ’ ಸುತ್ತೋಲೆಯೊಂದನ್ನು ಹೊರಡಿಸಿತ್ತು ಎನ್ನುವುದನ್ನು ಸಚಿವ ಪ್ರಿಯಾಂಕ್ ಖರ್ಗೆಯವರೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ‘‘ಶಾಲಾ ಆವರಣವು ಶಾಲೆಯಲ್ಲಿ ಮಕ್ಕಳಿಗೆ ದೈನಂದಿನ ಪಾಠ ಪ್ರವಚನಗಳೊಂದಿಗೆ ಪಠ್ಯೇತರ ಚಟುವಟಿಕೆಗಳು ಮತ್ತು ಆಟೋಟ ಕಾಯರ್ರ್ಕ್ರಮಗಳು, ಶಾರೀರಿಕ ಶಿಕ್ಷಣ ಹಾಗೂ ವ್ಯಾಯಾಮ ಮತ್ತಿತರ ಶೈಕ್ಷಣಿಕ ಚಟುವಟಿಕೆಗಲಿಗೆ ಮಾತ್ರ ಸದ್ವಿನಿಯೋಗವಾಗಬೇಕು. ಯಾವುದೇ ಸಂದರ್ಭದಲ್ಲಾಗಲಿ, ಯಾವುದೇ ಕಾರಣಕ್ಕಾಗಲಿ ಶೈಕ್ಷಣಿಕೇತರ ಚಟುವಟಿಕೆಗಳಿಗೆ, ಉದ್ದೇಶಗಳಿಗೆ ಬಳಸಬಾರದು’’ ಎಂದು ಬಿಜೆಪಿ ಸರಕಾರ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿತ್ತು. ಬಿಜೆಪಿಯ ಸುತ್ತೋಲೆಯನ್ನು ಗಮನಿಸಿದಾಗ ಕಾಂಗ್ರೆಸ್ ಸರಕಾರವೂ ಆ ಕಡ್ಡಾಯ ನಿಷೇಧ ನಿಯಮವನ್ನು ಸಡಿಲಿಸಿ, ಅನುಮತಿ ಪಡೆದುಕೊಂಡರೆ ಕಾರ್ಯಕ್ರಮ ನಡೆಸಬಹುದು ಎಂದು ಸೂಚನೆ ನೀಡಿದಂತಾಗಿದೆ. ಅಂದರೆ, ಶಿಕ್ಷಣ ಇಲಾಖೆಯೊಳಗೆ ಆರೆಸ್ಸೆಸ್ ಸಿದ್ಧಾಂತದೊಂದಿಗೆ ಸಹಮತಹೊಂದಿರುವ ಅಧಿಕಾರಿಗಳಿದ್ದರೆ ಅವರು ಕಾರ್ಯಕ್ರಮಕ್ಕೆ ಅನುಮತಿ ಕೊಡುವ ಸಾಧ್ಯತೆಗಳಿರುತ್ತವೆ. ಕೆಲವು ರಾಜಕೀಯ ನಾಯಕರ ಶಿಫಾರಸುಗಳೂ ಅನುಮತಿ ನೀಡಲು ಇಲಾಖೆ ಅಧಿಕಾರಿಗಳಿಗೆ ಒತ್ತಡವನ್ನು ಸೃಷ್ಟಿಸಬಹುದು. ಒಂದು ರೀತಿಯಲ್ಲಿ, ಅವಕಾಶ ಇಲ್ಲ್ಲ ಎನ್ನುವ ಬಿಜೆಪಿಯ ಸುತ್ತೋಲೆಯನ್ನು ಬದಲಿಸಿ, ಅನುಮತಿ ಕಡ್ಡಾಯ ಎಂದು ನಿಯಮದ ಬಿಗಿಯನ್ನು ಸಡಿಲಿಸಲಾಗಿದೆ. ಸಂಪುಟ ಸಭೆಯ ನಿರ್ಧಾರವು ಆರೆಸ್ಸೆಸ್ನಂತಹ ಸಂಘಟನೆಗಳಿಗೆ ಸರಕಾರಿ ಸ್ಥಳಗಳಲ್ಲಿ ಚಟುವಟಿಕೆಗಳನ್ನು ನಡೆಸಲು ಪರೋಕ್ಷವಾಗಿ ಅನುಕೂಲವನ್ನೇ ಮಾಡಿಕೊಟ್ಟಿದೆ. ಸಂಪುಟವು ಕನಿಷ್ಠ ಶಾಲಾ, ಕಾಲೇಜು ಆವರಣಗಳಲ್ಲಾದರೂ ಖಾಸಗಿ ಸಂಘಟನೆಗಳ ಕಾರ್ಯಕ್ರಮಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕಾಗಿತ್ತು.
ಸರಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಟನೆಗಳು ಚಟುವಟಿಕೆಗಳನ್ನು ನಡೆಸುವುದಕ್ಕೆ ನಿಯಮರೂಪಿಸುವ ಸಂದರ್ಭದಲ್ಲಿ, ಸರಕಾರಿ ಕಚೇರಿಗಳಲ್ಲಿ ಧಾರ್ಮಿಕ ಕಾರ್ಯಕ್ರಮ, ಪೂಜೆಗಳನ್ನು ನಡೆಸುವುದರ ಬಗ್ಗೆ ಸರಕಾರದ ನಿಲುವೇನು? ಎನ್ನುವ ಪ್ರಶ್ನೆಯನ್ನು ಜನಸಾಮಾನ್ಯರು ಎತ್ತುತ್ತಿದ್ದಾರೆ. ವಿಧಾನಸೌಧದ ಕಚೇರಿಗಳು ಜಾತ್ಯತೀತವಾಗಿರಬೇಕು. ರಾಜಕಾರಣಿಗಳು, ಸಚಿವರು, ಅಧಿಕಾರಿಗಳು ತಮ್ಮ ತಮ್ಮ ಧರ್ಮವನ್ನು ಮನೆಗೆ ಸೀಮಿತವಾಗಿಸಿಕೊಳ್ಳಬೇಕು. ಅದನ್ನು ಯಾವ ಕಾರಣಕ್ಕೂ ಕಚೇರಿಯೊಳಗೆ ತರಬಾರದು. ಆದರೆ ಇಂದು ಸರಕಾರಿ ಕಚೇರಿಗಳಲ್ಲಿ ನಡೆಯುತ್ತಿರುವುದಾದರೂ ಏನು? ಬಹುತೇಕ ಸರಕಾರಿ ಕಚೇರಿಗಳಲ್ಲಿ ವಿವಿಧ ದೇವರ ಫೋಟೊಗಳು ವಿಜೃಂಭಿಸುತ್ತಿವೆ. ಇದೇ ಸಂದರ್ಭದಲ್ಲಿ ರಾಜಕೀಯ ನಾಯಕರ ನೇತೃತ್ವದಲ್ಲೇ ಸರಕಾರಿ ಕಚೇರಿಗಳ ಒಳಗೆ ವೈದಿಕ ಕಾರ್ಯಕ್ರಮಗಳು ನಡೆಯುತ್ತವೆ. ಪೂಜೆ ಪುನಃಸ್ಕಾರಗಳೊಂದಿಗೆ ಸರಕಾರಿ ಕಚೇರಿಗಳು ಆರಂಭವಾಗುತ್ತವೆ. ಖಾಸಗಿಯಾಗಿರಬೇಕಾಗಿದ್ದ ಧಾರ್ಮಿಕ ನಂಬಿಕೆಗಳನ್ನು ಸರಕಾರಿ ಕಚೇರಿಗಳ ಒಳಗೆ ತರುವುದು ಎಷ್ಟು ಸರಿ? ಈ ಪ್ರಶ್ನೆಯೂ ಮುನ್ನೆಲೆಗೆ ಬರಬೇಕಾಗಿದೆ. ಸರಕಾರಿ ಜಾಗಗಳಲ್ಲಿ ಖಾಸಗಿ ಚಟುವಟಿಕೆಗಳಿಗೆ ಅವಕಾಶವಿಲ್ಲ ಎನ್ನುವುದಕ್ಕೆ ಸರಕಾರ ಬದ್ಧ ಎಂದಾದರೆ, ಅದರ ಜೊತೆ ಜೊತೆಗೇ ಸರಕಾರಿ ಕಚೇರಿಗಳಲ್ಲಿ ಇರುವ ಎಲ್ಲ ಧಾರ್ಮಿಕ ಸಂಕೇತಗಳನ್ನು ತೆಗೆದು ಹಾಕಿ ಅಲ್ಲಿ ಅಂಬೇಡ್ಕರ್, ಗಾಂಧಿಯ ಭಾವಚಿತ್ರಗಳನ್ನು ನೇತಾಡಿಸುವ ಕೆಲಸ ನಡೆಯಬೇಕು.
ಇದೇ ಸಂದರ್ಭದಲ್ಲಿ ಶಾಲೆ, ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ, ರಾಜಕೀಯ ಚಟುವಟಿಕೆಗಳು ನಡೆಯದಂತೆ ಕಡ್ಡಾಯ ನಿಯಮವನ್ನು ತರುವುದು ಹಿಂದೆಂದಿಗಿಂತಲೂ ಅಗತ್ಯವಿದೆ. ಹಿಂದೆಲ್ಲ, ಸರ್ವಧರ್ಮೀಯರು ಸೇರಿ ‘ಶಾರದ ಪೂಜೆ’ಯಂತಹ ವೈದಿಕ ಕಾರ್ಯಕ್ರಮಗಳನ್ನು ಸಂಭ್ರಮದಿಂದ ಹಮ್ಮಿಕೊಳ್ಳುತ್ತಿದ್ದರು. ಆದರೆ ಇಂದು ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ರಾಜಕೀಯದ ಜನರು ದುರುಪಯೋಗಗೊಳಿಸುತ್ತಿದ್ದಾರೆ. ಧಾರ್ಮಿಕ ವೇಷದಲ್ಲೇ ಆರೆಸ್ಸೆಸ್ನಂತಹ ಸಂಘಟನೆಗಳು ಶಾಲೆ, ಕಾಲೇಜುಗಳ ಒಳಗೆ ಮೂಗು ತೂರಿಸುತ್ತಿವೆ. ಶಾಲೆಗಳು ಸರ್ವಜನಾಂಗವನ್ನು ಬೆಸೆಯುವ ತೋಟವಾಗಿವೆೆ. ಅಲ್ಲಿನ ಪಠ್ಯಗಳು ವಿದ್ಯಾರ್ಥಿಗಳ ಮನಸ್ಸನ್ನು ಎಳೆವೆಯಲ್ಲೇ ಬೆಸೆಯಬೇಕು. ಆದರೆ ರಾಜಕೀಯ ಶಕ್ತಿಗಳು, ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳ ಮುಖವಾಡದಲ್ಲಿ ಶಾಲಾ ಕಾಲೇಜುಗಳನ್ನು ಪ್ರವೇಶಿಸಿ ವಿದ್ಯಾರ್ಥಿಗಳನ್ನು ಧರ್ಮದ, ಜಾತಿಯ ಹೆಸರಲ್ಲಿ ಒಡೆಯತೊಡಗಿವೆ. ಆದುದರಿಂದ ಸರಕಾರಿ ಶಾಲಾಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಆರೆಸ್ಸೆಸ್ ಸೇರಿದಂತೆ ಯಾವುದೇ ಖಾಸಗಿ ಸಂಘಟನೆಗಳಿಗೆ ಕಡ್ಡಾಯ ನಿಷೇಧ ಹೇರಬೇಕು. ಇದೇ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ವಿದ್ಯಾರ್ಥಿ ಘಟಕಗಳಾಗಿರುವ ಎನ್ಎಸ್ಯುಐ, ಎಬಿವಿಪಿ, ಎಸ್ಎಫ್ಐಯಂತಹ ಸಂಘಟನೆಗಳ ಕಾರ್ಯಕ್ರಮಗಳನ್ನು ಕೂಡ ಶಾಲಾ ಕಾಲೇಜುಗಳ ಆವರಣದಲ್ಲಿ ಕಡ್ಡಾಯವಾಗಿ ನಿಷೇಧಿಸಬೇಕಾದ ಸಂದರ್ಭ ಬಂದಿದೆ. ಯಾಕೆಂದರೆ, ಈ ಸಂಘಟನೆಗಳು ವಿದ್ಯಾರ್ಥಿಗಳನ್ನು ಎಳವೆಯಲ್ಲೇ ರಾಜಕೀಯವಾಗಿ ವಿಭಜಿಸತೊಡಗಿವೆ. ಇಂದು ಈ ಸಂಘಟನೆಗಳ ಕಾರಣಗಳಿಂದಲೇ, ಕಾಲೇಜುಗಳು ಹೊಡಿಬಡಿಯ ತಾಣವಾಗಿದೆ. ರಾಜಕಾರಣಿಗಳು ಈ ಸಂಘಟನೆಗಳನ್ನು ಬಳಸಿಕೊಂಡು ಕಾಲೇಜುಗಳ ವಿದ್ಯಾರ್ಥಿ ಚಟುವಟಿಕೆಗಳಲ್ಲಿ ನೇರವಾಗಿ ಹಸ್ತಕ್ಷೇಪ ನಡೆಸುತ್ತಿದ್ದಾರೆ. ವಿದ್ಯಾರ್ಥಿಗಳ ನಡುವೆ ಗುಂಪುಗಾರಿಕೆ, ದ್ವೇಷಗಳನ್ನು ಬಿತ್ತುತ್ತಿದ್ದಾರೆ. ಆದುದರಿಂದ ಕನಿಷ್ಠ ಶಾಲಾ ಕಾಲೇಜುಗಳ ಆವರಣಗಳನ್ನಾದರೂ ಎಲ್ಲಾ ಖಾಸಗಿ ಮತ್ತು ರಾಜಕೀಯ ಸಂಘಟನೆಗಳ ಕಾರ್ಯಚಟುವಟಿಕೆಗಳಿಂದ ಮುಕ್ತಗೊಳಿಸುವುದು ಇಂದಿನ ತುರ್ತು ಅಗತ್ಯವಾಗಿದೆ. ಈ ನಿಟ್ಟಿ ನಲ್ಲಿ ಸರಕಾರ, ರಾಜ್ಯ ಸಚಿವ ಸಂಪುಟವು ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕಾಗಿದೆ. ಈ ಕುರಿತಂತೆ ಒಂದು ಕಠಿಣ ಕಾನೂನನ್ನು ಜಾರಿಗೆ ತರುವುದು ಸ್ವಸ್ಥ ಸಮಾಜ ನಿರ್ಮಾಣದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.







