ತನ್ನ ಪುತ್ರನಿಗೆ ವಿದೇಶದಲ್ಲಿ ವ್ಯಾಸಂಗ; ಕಂಡವರ ಮಕ್ಕಳ ಕೈಗೆ ಲಾಠಿ, ತ್ರಿಶೂಲ!

‘ಕಂಡವರ ಮಕ್ಕಳನ್ನು ಬಾವಿಗಿಳಿಸಿ ಆಳ ನೋಡುವ’ ರಾಜಕಾರಣಿಗಳು, ತಮ್ಮ ಮಕ್ಕಳ ವಿಷಯ ಬಂದಾಗ ಹೇಗೆ ಜಾಗರೂಕರಾಗುತ್ತಾರೆ ಎನ್ನುವುದಕ್ಕೆ ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ್ ಹೆಗಡೆ ಅತ್ಯುತ್ತಮ ಉದಾಹರಣೆಯಾಗಿ ನಮ್ಮ ಮುಂದಿದ್ದಾರೆ. ಕೋಮು ದ್ವೇಷಗಳನ್ನು ಹರಡುವ ಭಾಷಣಗಳಿಗಾಗಿಯೇ ಕುಖ್ಯಾತರಾಗಿದ್ದ ಈ ಮಾಜಿ ಸಂಸದರು ತಮ್ಮ ಅವಧಿಯಲ್ಲಿ ಮಾಡಿದ ಅತಿ ದೊಡ್ಡ ಸಾಧನೆಯೆಂದರೆ, ಕೋಮುಗಲಭೆಗಳ ಕಿಡಿ ಹಚ್ಚಿ ನೂರಾರು ಅಮಾಯಕ ಹಿಂದೂ ಯುವಕರ ಬದುಕನ್ನು ಸರ್ವ ನಾಶ ಮಾಡಿರುವುದು. ಇವರ ಮಾತುಗಳಿಂದ ಪ್ರಚೋದಿತರಾಗಿ ಹಿಂದುತ್ವವನ್ನು ತಲೆಗೇರಿಸಿಕೊಂಡ ಹಲವು ಯುವಕರು ಬೀದಿಯಲ್ಲಿ ದೊಂಬಿ ನಡೆಸಿ ಮೈತುಂಬಾ ಕೇಸುಗಳನ್ನು ಜಡಿದುಕೊಂಡು ತಮ್ಮ ಭವಿಷ್ಯವನ್ನು ತಾವೇ ಕೊಂದು ಕೊಂಡಿದ್ದಾರೆ. ಹೀಗಿರುವ ಹೊತ್ತಿಗೆ ಇದೇ ಮಾಜಿ ಸಂಸದರು ಇತ್ತೀಚೆಗೆ ಹೈಕೋರ್ಟ್‌ಗೆ ಮನವಿಯೊಂದನ್ನು ಮಾಡಿದ್ದು, ‘‘ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ನನ್ನ ಪುತ್ರ ಅಶುತೋಷ್ ಹೆಗಡೆಯ ವಿರುದ್ಧ ಬೆಂಗಳೂರಿನ ದಾಬಸ್ ಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸಬೇಕು. ಇಲ್ಲದೇ ಇದ್ದರೆ ವಿದೇಶದಲ್ಲಿ ವ್ಯಾಸಂಗ ಮಾಡುತ್ತಿರುವ ಆತನ ಶೈಕ್ಷಣಿಕ ಭವಿಷ್ಯಕ್ಕೆ ಧಕ್ಕೆಯಾಗುತ್ತದೆ’’ ಎಂದು ಕೇಳಿಕೊಂಡಿದ್ದಾರೆ. ಅನಂತಕುಮಾರ್ ಹೆಗಡೆಯ ಪುತ್ರನ ಮೇಲೆ ‘ಹಿಂದುತ್ವಕ್ಕಾಗಿ ನಡೆಸಿದ ಹೋರಾಟ’ಕ್ಕಾಗಿ ದಾಖಲಾದ ಪ್ರಕರಣವಲ್ಲ. ವೇಗವಾಗಿ ಕಾರು ಚಲಾಯಿಸಿ ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದು, ಅದರ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ ಆರೋಪ ಆತನ ಮೇಲಿದೆ. ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದ ಮಾಜಿ ಸಂಸದ ಅನಂತಕುಮಾರ್ ಹೆಗಡೆಯ ಪುತ್ರ ಅಶುತೋಶ್ ಇತ್ತೀಚೆಗೆ ಊರಿಗೆ ಬಂದಿದ್ದು, ಯಲ್ಲಾಪುರಕ್ಕೆ ತೆರಳುತ್ತಿದ್ದಾಗ ಈತನ ಕಾರು ಇನ್ನೊಂದು ಕಾರಿಗೆ ಢಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಮಾಜಿ ಸಂಸದನ ಪುತ್ರ ಎನ್ನುವ ದುರಹಂಕಾರದಲ್ಲಿ ಅಶುತೋಶ್ ಇನ್ನೊಂದು ಕಾರಿನ ಚಾಲಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿದ್ದಾನೆ. ಈ ಸಂದರ್ಭದಲ್ಲಿ ಅನಂತಕುಮಾರ್ ಹೆಗಡೆ ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದರು ಎಂದು ವರದಿಗಳು ಹೇಳುತ್ತವೆ. ಅನಂತಕುಮಾರ್ ಹೆಗಡೆಯ ಭದ್ರತಾ ಸಿಬ್ಬಂದಿಯೂ ಈ ಹಲ್ಲೆ, ದಾಂಧಲೆಗಳಲ್ಲಿ ಜೊತೆಗೂಡಿದ್ದಾನೆ ಎಂದು ಆರೋಪಿಸಲಾಗಿದೆ. ಎರಡೂ ಕಡೆಯವರೂ ಪರಸ್ಪರ ದೂರು ದಾಖಲಿಸಿದ್ದಾರೆ. ‘ಅಶುತೋಷ್ ಮೇಲೆ ಪ್ರಕರಣ ದಾಖಲಾಗಿರುವುದರಿಂದಾಗಿ ವಿದೇಶಕ್ಕೆ ತೆರಳಲು ತೊಂದರೆಯಾಗಿದೆ. ಇದು ಆತನ ಶೈಕ್ಷಣಿಕ ಬದುಕಿನ ಮೇಲೆ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ, ಆತನನ್ನು ಪ್ರಕರಣದಿಂದ ಕೈ ಬಿಡಬೇಕು’ ಎಂದು ಈಗ ಅನಂತಕುಮಾರ್ ಹೆಗಡೆ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಮಾಜಿ ಸಂಸದ ಅನಂತಕುಮಾರ್ ಹೆಗಡೆಯ ಈ ನಡೆ ಉತ್ತರ ಕನ್ನಡ ಜಿಲ್ಲೆಯ ಯುವಕರಲ್ಲಿ ಸಾವಿರ ಪ್ರಶ್ನೆಗಳನ್ನು ಹುಟ್ಟಿಸಿದೆ. ಕಂಡವರ ಮಕ್ಕಳಿಗೆಲ್ಲ ಹಿಂದುತ್ವಕ್ಕಾಗಿ ಕತ್ತಿ ಹಿಡಿಯಿರಿ, ತ್ರಿಶೂಲ ಹಿಡಿಯಿರಿ ಎಂದು ಕರೆ ನೀಡಿದ್ದ ಅನಂತ ಕುಮಾರ್ ಹೆಗಡೆ, ತನ್ನ ಪುತ್ರನ ಕೈಗೆ ತ್ರಿಶೂಲ, ಕತ್ತಿಯನ್ನು ಯಾಕೆ ನೀಡಿಲ್ಲ? ತನ್ನ ಪುತ್ರನಿಗೆ ಹಿಂದುತ್ವ ರಕ್ಷಣೆಯ ಯಾವುದೇ ಹೊಣೆಗಾರಿಕೆಯನ್ನೂ ನೀಡದೆ ವಿದೇಶಕ್ಕೆ ಕಳುಹಿಸಿ ಉನ್ನತ ಶಿಕ್ಷಣವನ್ನು ಯಾಕೆ ಕೊಡಿಸುತ್ತಿದ್ದಾರೆ ಎನ್ನುವ ಪ್ರಶ್ನೆಯನ್ನು ಅವರು ಕೇಳುತ್ತಿದ್ದಾರೆ. ತಮ್ಮ ಭಾಷಣಗಳಲ್ಲೆಲ್ಲ ‘ಹಿಂದೂಸ್ಥಾನ’ ‘ಸ್ವದೇಶ’ ‘ವಿಶ್ವಗುರು’ ಎಂದು ಅಣಿಮುತ್ತುಗಳನ್ನು ಉದುರಿಸುವ ಇದೇ ಅನಂತಕುಮಾರ್ ಹೆಗಡೆಗೆ ತನ್ನ ಮಗನಿಗೆ ಉನ್ನತ ಶಿಕ್ಷಣವನ್ನು ಕೊಡಿಸಲು ಭಾರತದೊಳಗೆ ಒಂದೇ ಒಂದು ವಿಶ್ವವಿದ್ಯಾನಿಲಯ ಅಥವಾ ಕಾಲೇಜು ಯಾಕೆ ಕಾಣಿಸಲಿಲ್ಲ? ಈಗಾಗಲೇ ಆರೆಸ್ಸೆಸ್ ಸಂಘಟನೆಗಳು ಕಟ್ಟಿ ನಿಲ್ಲಿಸಿರುವ ನೂರಾರು ಗುರುಕುಲ ಶಿಕ್ಷಣ ಸಂಸ್ಥೆಗಳು ಭಾರತದಲ್ಲಿರುವಾಗಲೂ ಅನಂತಕುಮಾರ್ ಹೆಗಡೆಗೆ ಮಗ ವಿದೇಶದಲ್ಲೇ ವ್ಯಾಸಂಗ ಮಾಡಬೇಕು ಎನ್ನುವ ಇಚ್ಛೆ ಯಾಕೆ? ಎಂದು ಆರೆಸ್ಸೆಸ್‌ನ ಲಾಠಿಯನ್ನು ನಂಬಿ ಮೋಸ ಹೋದ ಉತ್ತರ ಕನ್ನಡದ ನೂರಾರು ಶೂದ್ರ ಹುಡುಗರು ಕೇಳುತ್ತಿದ್ದಾರೆ. ವೇಗವಾಗಿ ಕಾರು ಚಲಾಯಿಸಿ ಇನ್ನೊಂದು ವಾಹನಕ್ಕೆ ಗುದ್ದಿ, ಅಮಾಯಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಿಲುಕಿಕೊಂಡ ತನ್ನ ಮಗನ ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಅನಂತಕುಮಾರ್ ಹೆಗಡೆಯವರು, ತಮ್ಮ ಭಾಷಣದಿಂದ ಪ್ರಚೋದಿತರಾಗಿ ಲಾಠಿ, ತ್ರಿಶೂಲ ಹಿಡಿದು ಗಲಭೆ ನಡೆಸಿ ಪ್ರಕರಣ ದಾಖಲಿಸಿಕೊಂಡ ಯುವಕರ ಪರವಾಗಿ ನ್ಯಾಯಾಲಯದಲ್ಲಿ ಯಾಕೆ ಈವರೆಗೆ ಒಂದೇ ಒಂದು ಮನವಿಯನ್ನೂ ಸಲ್ಲಿಸಲಿಲ್ಲ? ಎನ್ನುವ ಪ್ರಶ್ನೆಗೂ ಅನಂದಕುಮಾರ್ ಹೆಗಡೆ ಉತ್ತರಿಸುವ ಸ್ಥಿತಿಯಲ್ಲಿಲ್ಲ.
ಇಂತಹ ಪ್ರಶ್ನೆಗಳು ಕೇವಲ ಅನಂತಕುಮಾರ್ ಹೆಗಡೆಯವರಿಗಷ್ಟೇ ಸಂಬಂಧಿಸಿ ದ್ದಲ್ಲ. 2024ರಿಂದ 2026 ಮಾರ್ಚ್ ತಿಂಗಳವರೆಗೆ ಒಟ್ಟು 70 ಕೋಮುಗಲಭೆ ಪ್ರಕರಣಗಳು ಕರ್ನಾಟಕದಲ್ಲಿ ಸಂಭವಿಸಿವೆ. ಮಂಡ್ಯ ಜಿಲ್ಲೆಯೊಂದರಲ್ಲೇ ಈ ಅವಧಿಯಲ್ಲಿ 34 ಪ್ರಕರಣಗಳು ನಡೆದಿವೆ ಎಂದು ಗೃಹ ಸಚಿವರು ವಿಧಾನಪರಿಷತ್‌ಗೆ ಮಾಹಿತಿ ನೀಡಿದ್ದರು. ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 2024ರಲ್ಲಿ ಸುಮಾರು 48-50 ಕೋಮು ಸಂಘರ್ಷಗಳು ವರದಿಯಾಗಿವೆ. ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ 2024ರಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ 123 ಮಂದಿಯ ಮೇಲೆ ಪ್ರಕರಣ ದಾಖಲಾಗಿದ್ದರೆ, ಮದ್ದೂರಿನಲ್ಲಿ 2025ರಲ್ಲಿ ನಡೆದ ಘಟನೆಗಳಿಗೆ ಸಂಭವಿಸಿದಂತೆ 88 ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿವೆ. ಯಾವುದೇ ಕೋಮುಗಲಭೆಗಳು ಸಂಭವಿಸಿದ ಕೆಲವೇ ದಿನಗಳಲ್ಲಿ ಮಾಧ್ಯಮಗಳು ಮರೆತು ಬಿಡುತ್ತವೆ. ನಾಶ, ನಷ್ಟ ಅನುಭವಿಸಿದವರು ಮತ್ತು ಗಲಭೆಗೆ ಸಂಬಂಧಿಸಿ ಪೊಲೀಸರಿಂದ ಬಂಧಿಸಲ್ಪಟ್ಟವರ ಬದುಕು ಚೇತರಿಸಿಕೊಳ್ಳಲು ಹಲವು ವರ್ಷಗಳೇ ಬೇಕಾಗುತ್ತವೆ. ಯಾವುದೋ ರಾಜಕಾರಣಿಯ ಭಾಷಣಗಳಿಗೆ ಬಲಿ ಬಿದ್ದು ಕೋಮುಗಲಭೆಗಳಲ್ಲಿ ಭಾಗಿಯಾಗಿ ಕೇಸುಗಳನ್ನು ಮೈಮೇಲೆ ಎಳೆದುಕೊಂಡ ನೂರಾರು ಯುವಕರು ಈಗಲೂ ಪೊಲೀಸ್ ಠಾಣೆ, ನ್ಯಾಯಾಲಯ ಎಂದು ಅಲೆದಾಡುತ್ತಿದ್ದಾರೆ. ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾದ ಕಾರಣ ಶಿಕ್ಷಣವನ್ನು ಅರ್ಧದಲ್ಲೇ ತೊರೆದ, ಸರಕಾರಿ ನೌಕರಿಗೆ ಸೇರಲು ಸಾಧ್ಯವೇ ಇಲ್ಲ ಎನ್ನುವಂತಹ ಸನ್ನಿವೇಶನವನ್ನು ಸೃಷ್ಟಿಸಿಕೊಂಡ ಯುವಕರಿದ್ದಾರೆ. ಕೆಲವರು ಶಾಶ್ವತ ‘ರೌಡಿಶೀಟರ್’ ಹಣೆಪಟ್ಟಿಯನ್ನು ಧರಿಸಿಕೊಂಡು ಕ್ರಿಮಿನಲ್‌ಗಳಾಗಿ ಓಡಾಡುತ್ತಿದ್ದಾರೆ. ಇವರನ್ನು ಇಂತಹ ಸ್ಥಿತಿಗೆ ತಳ್ಳಿದ ರಾಜಕಾರಣಿಗಳ ಮಕ್ಕಳು ವಿದೇಶಗಳಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ.
ಉನ್ನತ ವ್ಯಾಸಂಗಕ್ಕೆ ಅಡ್ಡಿಯಾಗುವುದರಿಂದ ತನ್ನ ಮಗನ ಮೇಲಿರುವ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿರುವ ಅನಂತಕುಮಾರ್ ಆತ್ಮವಿಮರ್ಶೆ ಮಾಡಿಕೊಳ್ಳುವ ಸಮಯ ಇದು. ಹಿಂದುತ್ವದ ಅಮಲನ್ನು ಹಂಚಿ, ತಮ್ಮ ಮಕ್ಕಳ ಶಿಕ್ಷಣವನ್ನು, ಅವರ ಭವಿಷ್ಯವನ್ನು ಯಾಕೆ ಸರ್ವ ನಾಶ ಮಾಡಿದಿರಿ ಎಂದು ಹಿಡಿಶಾಪ ಹಾಕಿ ಕೇಳುತ್ತಿರುವ ನೂರಾರು ಪೋಷಕರು ಉತ್ತರ ಕನ್ನಡ ಜಿಲ್ಲೆಯಲ್ಲೇ ಇದ್ದಾರೆ. ಅವರ ಪ್ರಶ್ನೆಗಳಿಗೆ ಉತ್ತರಿಸುವ ನೈತಿಕ ಶಕ್ತಿ ಅನಂತಕುಮಾರ್ ಹೆಗಡೆಯ ಬಳಿ ಇದೆಯೆ?







