ಹಿಂದಕ್ಕೆ ಚಲಿಸುತ್ತಿರುವ ಶಿಕ್ಷಣ ವ್ಯವಸ್ಥೆ

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಮೇಲೆ ಕೋವಿಡ್ ಉಂಟು ಮಾಡಿದ ನಾಶ, ನಷ್ಟ ಕಲ್ಪನೆಗೂ ನಿಲುಕದ್ದು. ಅದರ ದುಷ್ಪರಿಣಾಮಗಳು ಜನರ ದೈಹಿಕ ಆರೋಗ್ಯದ ಮೇಲೆ ಮಾತ್ರವಲ್ಲ, ಈ ದೇಶದ ಬೇರೆ ಬೇರೆ ಕ್ಷೇತ್ರಗಳ ಆರೋಗ್ಯವನ್ನು ಬಾಧಿಸಿತು. ಅದಾಗಲೇ ಪೂರ್ವಸಿದ್ಧತೆಯಿಲ್ಲದ ನೋಟು ನಿಷೇಧದಿಂದಾಗಿ ತತ್ತರಿಸಿ ಕೂತಿದ್ದ ಭಾರತದ ಪಾಲಿಗೆ ಕೋವಿಡ್ ಬರಸಿಡಿಲಿನಂತೆ ಎರಗಿತು. ನಮ್ಮ ನಡುವಿನಿಂದ ವೈರಸ್ ಅಳಿದಿರಬಹುದು. ಆದರೆ ಕೊರೋನಾ ಬಾಧಿತ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಲಯಗಳು ಇನ್ನೂ ಚೇತರಿಸಿಕೊಂಡಿಲ್ಲ. ಅದರ ಪರಿಣಾಮಗಳು ಆಗಾಗ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಲೇ ಇವೆ. ದೇಶದಲ್ಲಿ ಅನಿರೀಕ್ಷಿತವಾಗಿ ಕುಸಿದು ಬಿದ್ದು ಸಾಯುವ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಹಿಂದೆ ಕೋವಿಡ್ ಲಸಿಕೆಗಳ ದುಷ್ಪರಿಣಾಮಗಳಿವೆ ಎಂದು ತಜ್ಞರು ಅಭಿಪ್ರಾಯ ಪಡುತ್ತಿದ್ದಾರೆ. ಕೋವಿಡ್ ಬಂದವರಿಗೆ ನೀಡಲಾಗಿದ್ದ ಚಿಕಿತ್ಸೆಗಳೇ ಇಂದು ಅವರನ್ನು ಬೇರೆ ಬೇರೆ ರೂಪಗಳಲ್ಲಿ ಕಾಡುತ್ತಿವೆ. ಇವುಗಳ ನಡುವೆ ಕೋವಿಡ್ ಲಸಿಕೆಗಳು ಬೀರುತ್ತಿರುವ ದುಷ್ಪರಿಣಾಮಗಳು ಬೇರೆಯೇ ಇವೆ. ಈಗಾಗಲೇ ಈ ಲಸಿಕೆಗಳ ವಿರುದ್ಧ ಹಲವರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಕೇಂದ್ರ ಸರಕಾರ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ನಿರ್ಲಕ್ಷಿಸಿದ್ದು ಕೋವಿಡ್ ಉಲ್ಬಣಿಸಲು ಮುಖ್ಯ ಕಾರಣವಾಯಿತು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಆ ಸಂದರ್ಭವನ್ನು ಕಾರ್ಪೊರೇಟ್ ಆಸ್ಪತ್ರೆಗಳು ಸ್ವಾರ್ಥಕ್ಕೆ ಬಳಸಿಕೊಂಡವು. ಜನಸಾಮಾನ್ಯರನ್ನು ಅಕ್ಷರಶಃ ಲೂಟಿ ಮಾಡಿದವು ಎಂಬ ಆರೋಪಗಳಿವೆ. ಇದೇ ಸಂದರ್ಭದಲ್ಲಿ ಕ್ಷಯ, ಎಚ್‌ಐವಿ ಮೊದಲಾದ ಸಾಂಕ್ರಾಮಿಕ ರೋಗಗಳಿಗೆ ನೀಡಲ್ಪಡುವ ಚಿಕಿತ್ಸೆ ನಿರ್ಲಕ್ಷ್ಯಕ್ಕೊಳಗಾದ ಪರಿಣಾಮವಾಗಿ ದೇಶದಲ್ಲಿ ಕ್ಷಯರೋಗ ಉಲ್ಬಣವಾಯಿತು. ಇತರ ರೋಗಗಳಿಗೆ ಒದಗಿಸಲಾಗಿರುವ ಹಣದ ದೊಡ್ಡ ಭಾಗವನ್ನು ಕೊರೋನಕ್ಕಾಗಿ ಹೊಂದಾಣಿಕೆ ಮಾಡಲಾಯಿತು. ಇಂದಿಗೂ ಸರಕಾರ ಕ್ಷಯ ರೋಗಗಳಿಗೆ ನೀಡಬೇಕಾಗಿರುವ ನೆರವಿನ ಹಣವನ್ನು ಬಾಕಿ ಉಳಿಸಿಕೊಂಡಿದೆ. ಕೊರೋನೋತ್ತರ ದಿನಗಳಲ್ಲಿ ಕ್ಷಯರೋಗಿಗಳ ಪೌಷ್ಟಿಕ ಆಹಾರಗಳಿಗೆ ಸಹಾಯ ಒದಗಿಸಲಾಗದೆ ಆರೋಗ್ಯ ಇಲಾಖೆ ದಾನಿಗಳ ಮೊರೆ ಹೋಗುತ್ತಿದೆ. ಸರಕಾರಿ ಆಸ್ಪತ್ರೆಗಳ ಸ್ಥಿತಿ ದಿನದಿಂದ ದಿನಕ್ಕೆ ಕೆಡುತ್ತಿದೆ. ಅವುಗಳನ್ನು ಹಂತಹಂತವಾಗಿ ಖಾಸಗಿ ಸಂಸ್ಥೆಗಳು ಕೈವಶ ಮಾಡಿಕೊಳ್ಳುತ್ತಿವೆ.
ಕೊರೋನದಿಂದ ಆರೋಗ್ಯ ಕ್ಷೇತ್ರದ ಬಳಿಕ ಅತಿ ಗಂಭೀರ ಸ್ಥಿತಿಯನ್ನು ಎದುರಿಸುತ್ತಿರುವುದು ನಮ್ಮ ಶಿಕ್ಷಣ ವ್ಯವಸ್ಥೆ. ಕಳೆದ ಮಂಗಳವಾರ ಶೈಕ್ಷಣಿಕ ಸ್ಥಿತಿಗತಿಯ ವಾರ್ಷಿಕ ವರದಿ (ಎಎಸ್‌ಇಆರ್) ಬಿಡುಗಡೆಯಾಗಿದ್ದು, ಕೋವಿಡ್ ಆನಂತರ ಸರಕಾರಿ ಶಾಲೆಗಳಲ್ಲಿ ದಾಖಲಾತಿ ತೀವ್ರವಾಗಿ ಕುಸಿತವಾಗಿದೆ ಎನ್ನುವ ಅಂಶವನ್ನು ಇದು ಬಹಿರಂಗಪಡಿಸಿದೆ. ಬಾಲಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಕ್ಕಳನ್ನು ಶಾಲೆಗೆ ಸೇರ್ಪಡೆಗೊಳಿಸಲು ಭಾರತದಲ್ಲಿ ಹಲವು ಸರಕಾರಗಳು ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದವು. ‘ಮರಳಿ ಶಾಲೆಗೆ’ ಆಂದೋಲನಕ್ಕಾಗಿ ಕೋಟ್ಯಂತರ ರೂಪಾಯಿಯನ್ನು ಬೇರೆ ಬೇರೆ ಸರಕಾರಗಳು ವ್ಯಯ ಮಾಡಿವೆ. ಬಿಸಿಯೂಟದಂತಹ ಯೋಜನೆಗಳನ್ನು ಕೂಡ ಇದಕ್ಕಾಗಿಯೇ ರೂಪಿಸಲಾಯಿತು. ಈ ಯೋಜನೆ ಶಾಲೆಗಳಲ್ಲಿ ಮಕ್ಕಳ ಸೇರ್ಪಡೆಯ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಿತು. ಆದರೆ ಕೋರೋನದ ಬಳಿಕ, ಇದೀಗ ಸರಕಾರಿ ಶಾಲೆಗಳಲ್ಲಿ 6-14ರ ಒಳಗಿನ ಮಕ್ಕಳ ದಾಖಲಾತಿ ಪ್ರಮಾಣ 2018ರ ಸ್ಥಿತಿಗೆ ಬಂದು ತಲುಪಿದೆ ಎನ್ನುವ ಅಂಶವನ್ನು ವರದಿ ತೆರೆದಿಟ್ಟಿದೆ. ಕೊರೋನ ಕಾಲದ ಬಳಿಕ ದೇಶದ ಶಿಕ್ಷಣದ ಗುಣಮಟ್ಟ ತೀವ್ರ ಇಳಿಕೆಯಾಗಿದೆ ಎನ್ನುವ ಅಂಶದ ಬಗ್ಗೆ ತಜ್ಞರು ಗಮನ ಸೆಳೆಯುತ್ತಲೇ ಬಂದಿದ್ದಾರೆ. ಖಾಸಗೀಕರಣ ಪಾರಮ್ಯವನ್ನು ಸಾಧಿಸಿದ ದಿನದಿಂದಲೇ ಶಿಕ್ಷಣ ವ್ಯವಸ್ಥೆ ಉಳ್ಳವರಿಗೆ ಮತ್ತು ಇಲ್ಲವರಿಗೆ ಎಂದು ಎರಡಾಗಿ ಒಡೆದಿದೆ. ಸರಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ನಡುವಿನ ಅಂತರ, ಈ ದೇಶದ ಸಾಮಾಜಿಕ ಅಂತರದ ಪ್ರತಿಫಲವೆಂದು ನಾವು ವ್ಯಾಖ್ಯಾನಿಸುತ್ತಿದ್ದೇವೆ. ಶಿಕ್ಷಣ ಎಲ್ಲರ ಮೂಲಭೂತ ಹಕ್ಕು ಎನ್ನುವ ಕಾರಣಕ್ಕಾಗಿ ಸರಕಾರಿ ಶಾಲೆಗಳನ್ನು ಸರಕಾರ ತೆರೆದಿದೆಯಾದರೂ, ಗುಣಮಟ್ಟದ ಶಿಕ್ಷಣ ಸರಕಾರಿ ಶಾಲೆಗಳಲ್ಲಿ ಮರೀಚಿಕೆಯಾಗಿದೆ. ಇಂಗ್ಲಿಷ್ ಮಾಧ್ಯಮದ ಬಗ್ಗೆ ಇರುವ ಭ್ರಮೆ, ಸರಕಾರಿ ಶಾಲೆಯನ್ನು ಸಾಮಾಜಿಕವಾಗಿ ಅಸ್ಪಶ್ಯವಾಗಿಸಿತ್ತು. ಬಡವರು ಮತ್ತು ದುರ್ಬಲ ಸಮುದಾಯದ ಮಕ್ಕಳು ಅನಿವಾರ್ಯವಾಗಿ ಸರಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳುವ ಸ್ಥಿತಿ ದೇಶದಲ್ಲಿ ಈಗಲೂ ಇದೆ. ಕೊರೋನ ಕಾಲದಲ್ಲಂತೂ, ಶಿಕ್ಷಣದೊಳಗೆ ಸ್ಮಾರ್ಟ್‌ಫೋನ್ ಇದ್ದವರು ಮತ್ತು ಇಲ್ಲದವರ ನಡುವೆ ಗೆರೆಯೊಂದು ಬಿತ್ತು.
ಸ್ಮಾರ್ಟ್ ಫೋನ್ ಇಲ್ಲದವರು, ಸ್ಮಾರ್ಟ್‌ಫೋನ್ ಇದ್ದರೂ ನೆಟ್‌ವರ್ಕ್ ಸಿಗದೇ ತೊಂದರೆಗೊಳಗಾದವರು ಲಾಕ್‌ಡೌನ್ ಅವಧಿಯಲ್ಲಿ ಶಿಕ್ಷಣದಿಂದ ಬದಿಗೆ ತಳ್ಳಲ್ಪಟ್ಟರು. ಒಂದು ಸ್ಮಾರ್ಟ್ ಫೋನ್ ಬಳಸಿ ಒಂದು ಕುಟುಂಬದ ಎರಡು ಅಥವಾ ಮೂರು ವಿದ್ಯಾರ್ಥಿಗಳು ಏಕಕಾಲದಲ್ಲಿ ಶಿಕ್ಷಣ ಪಡೆಯುವುದು ಕಷ್ಟವಿತ್ತು. ಇಂತಹ ಸಂದರ್ಭದಲ್ಲಿ ಗಂಡು ಮಕ್ಕಳು ಶಿಕ್ಷಣಕ್ಕೆ ಹೆಚ್ಚು ಅರ್ಹರು ಎಂದು ಗುರುತಿಸಲ್ಪಟ್ಟು, ಹೆಣ್ಣು ಮಕ್ಕಳು ಸ್ಮಾರ್ಟ್‌ಫೋನ್ ವಂಚಿತ ಅಥವಾ ಶಿಕ್ಷಣ ವಂಚಿತರಾದರು. ಇದೇ ಸಂದರ್ಭದಲ್ಲಿ ಲಾಕ್‌ಡೌನ್‌ನಿಂದಾಗಿ ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದ ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಪೋಷಕರು ವಿದ್ಯಾರ್ಥಿಗಳನ್ನು ದುಡಿಮೆಗೆ ಹಚ್ಚಿದರು. ಪರಿಣಾಮವಾಗಿ ಕೊರೋನೋತ್ತರ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಭಾರೀ ಇಳಿಕೆಯಾಯಿತು. ಶಾಲೆ ತೊರೆದ ವಿದ್ಯಾರ್ಥಿಗಳನ್ನು ಮರಳಿ ಶಾಲೆಗೆ ಸೇರ್ಪಡೆಗೊಳಿಸುವಲ್ಲಿ ಸರಕಾರ ಯಾವುದೇ ಗಂಭೀರ ಕ್ರಮವನ್ನು ತೆಗೆದುಕೊಳ್ಳಲಿಲ್ಲ. ಬದಲಿಗೆ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ ಎಂಬ ನೆಪ ತೆಗೆದುಕೊಂಡು ಅವುಗಳನ್ನು ಒಂದೊಂದಾಗಿ ಮುಚ್ಚತೊಡಗಿತು. ಇದೇ ಸಂದರ್ಭದಲ್ಲಿ ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ನಾಯಕರು ನಡೆಸುತ್ತಿರುವ ಹಸ್ತಕ್ಷೇಪ ಕೂಡ ಭಾರತದ ಶಿಕ್ಷಣ ವ್ಯವಸ್ಥೆಯನ್ನು ಇನ್ನಷ್ಟು ಹದಗೆಡಿಸಿದೆ. ಮೇಲ್‌ಜಾತಿ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಗಳನ್ನು ಅವಲಂಬಿಸುವುದು ಹೆಚ್ಚುತ್ತಿದ್ದಂತೆಯೇ ತಳಸ್ತರದ ಕೆಳಜಾತಿಯ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಿಂದ ನಾಪತ್ತೆಯಾಗುತ್ತಿರುವುದು ಮತ್ತು ಸರಕಾರಿ ಶಾಲೆಗಳೇ ಒಂದೊಂದಾಗಿ ನಾಪತ್ತೆಯಾಗುತ್ತಿರುವುದು ನಿಜಕ್ಕೂ ಆತಂಕಕಾರಿ ಸಂಗತಿಯಾಗಿದೆ. ಕೊರೋನ ಕಾಲದಲ್ಲಿ ನಾಪತ್ತೆಯಾಗಿರುವ ವಿದ್ಯಾರ್ಥಿಗಳನ್ನು ಹುಡುಕುವ ಕೆಲಸ ಸರಕಾರ ಆರಂಭಿಸಬೇಕಾಗಿದೆ. ಅವರನ್ನು ಮರಳಿ ಶಾಲೆಗೆ ಸೇರಿಸಲು ಹೊಸದಾಗಿ ಯೋಜನೆಗಳನ್ನು ರೂಪಿಸಬೇಕು. ಇದೇ ಸಂದರ್ಭದಲ್ಲಿ ದೊಡ್ಡಸಂಖ್ಯೆಯಲ್ಲಿ ಶಾಲೆ ತೊರೆದ ವಿದ್ಯಾರ್ಥಿನಿಯರ ಯೋಗಕ್ಷೇಮಕ್ಕೂ ಕ್ರಮ ರೂಪಿಸಬೇಕಾಗಿದೆ. ಈಗಾಗಲೇ ಭಾರತ ಆರ್ಥಿಕ ಕ್ಷೇತ್ರದಲ್ಲಿ ಹತ್ತು ವರ್ಷ ಹಿಂದಕ್ಕೆ ಚಲಿಸಿದೆ ಎನ್ನುವ ಆರೋಪಗಳಿವೆ. ಇದೀಗ ಶಿಕ್ಷಣ ಕ್ಷೇತ್ರದಲ್ಲೂ ಭಾರತ ಹಿಂದಕ್ಕೆ ಚಲಿಸತೊಡಗಿದೆ. ಹಿಂದುತ್ವವೆಂದರೆ, ಭಾರತವನ್ನು ಹಿಂದಕ್ಕೆ ಒಯ್ಯುವುದೇ ಆಗಿದ್ದರೆ, ಆ ವಿಷಯದಲ್ಲಿ ಮೋದಿಯವರು ಬಹಳಷ್ಟು ಸಾಧನೆ ಮಾಡಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಎಲ್ಲರಿಗೂ ಶಿಕ್ಷಣದ ಹಕ್ಕು ಇದ್ದಿರಲಿಲ್ಲ. ಮುಚ್ಚಲ್ಪಡುತ್ತಿರುವ ಸರಕಾರಿ ಶಾಲೆಗಳು, ಆ ‘ಹಿಂದುತ್ವ’ದ ಸುವರ್ಣ ಯುಗದ ಕಡೆಗೆ ಭಾರತ ಸಾಗುತ್ತಿರುವ ಸೂಚನೆಗಳಾಗಿವೆಯೇ ಎಂದು ಜನರು ಆತಂಕ ಪಡುವ ಸ್ಥಿತಿ ನಿರ್ಮಾಣವಾಗಿದೆ.