ಚುನಾವಣಾ ಆಯೋಗದ ಬುಟ್ಟಿಯೊಳಗಿಂದ ಹೊರಬಂದ ಎನ್ಆರ್ಸಿ ಹಾವು

ಚುನಾವಣಾ ಆಯೋಗ | PC : PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಬಿಹಾರ ವಿಧಾನಸಭಾ ಚುನಾವಣೆಯ ಸೋಲುಗೆಲುವಿನ ಹಾರ ಎಲ್ಲಿ ತನಗೆ ಉರುಳಾಗಿ ಬಿಡುತ್ತದೆಯೋ ಎನ್ನುವ ಆತಂಕ, ಒತ್ತಡ ಪ್ರಧಾನಿ ಮೋದಿಯವರನ್ನು ತೀವ್ರವಾಗಿ ಕಾಡುತ್ತಿರುವಂತಿದೆ. ಜೆಡಿಯು ಜೊತೆಗೆ ಕೈ ಜೋಡಿಸಿಯೂ ಬಿಜೆಪಿ ಗೆಲುವಿನ ಕುರಿತಂತೆ ಆತ್ಮವಿಶ್ವಾಸವನ್ನು ಹೊಂದಿಲ್ಲ. ಈ ಕಾರಣಕ್ಕಾಗಿಯೇ, ಪಹಲ್ಗಾಮ್ ದಾಳಿಯ ಬಳಿಕ ನಡೆದ ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯನ್ನು ಅವರು ಬಿಹಾರ ಚುನಾವಣೆಯಲ್ಲಿ ಬಳಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ ಎನ್ನುವ ಆರೋಪ ಪ್ರಧಾನಿ ಮೋದಿಯ ಮೇಲಿದೆ. ಪಹಲ್ಗಾಮ್ ದಾಳಿ ನಡೆದಾಗ ಅವರು ಕಾಶ್ಮೀರಕ್ಕೆ ತೆರಳದೇ ಬಿಹಾರಕ್ಕೆ ತೆರಳಿ ಭಾಷಣ ಮಾಡಿರುವುದು ತೀವ್ರ ಟೀಕೆಗೆ ಗುರಿಯಾಯಿತು. ‘ಆಪರೇಷನ್ ಸಿಂಧೂರ’ ಕಾರ್ಯಾಚರಣೆಯ ಬಳಿಕ ಮನೆಮನೆಗೆ ಸಿಂಧೂರ ಹಂಚುವ ಮೂಲಕ ಸೇನೆಯ ತ್ಯಾಗ ಬಲಿದಾನವನ್ನು ಅವರು ನಗದೀಕರಿಸುವ ಪ್ರಯತ್ನ ಮಾಡಿದರು. ಇದು ಕೂಡ ನಿರೀಕ್ಷಿತ ಪರಿಣಾಮಗಳನ್ನು ಬೀರದೇ ಇದ್ದಾಗ ಆತುರಾತುರವಾಗಿ ಅವರು ‘ಜಾತಿ ಗಣತಿ’ಯ ಬಗ್ಗೆ ಒಲವು ವ್ಯಕ್ತಪಡಿಸಿದರು. ಜನಗಣತಿಯ ಸಂದರ್ಭದಲ್ಲಿ ಜಾತಿಗಣತಿಯನ್ನು ಕೂಡ ನಡೆಸಲಾಗುವುದು ಎಂದು ಘೋಷಿಸಿದರು. ಆದರೆ ಇದೀಗ ಹೊರ ಬಿದ್ದ ಜನಗಣತಿ ಅಧಿಸೂಚನೆಯಲ್ಲಿ ಗೊಂದಲವಿದ್ದು, ಜಾತಿಗಣತಿಯ ಬಗ್ಗೆ ಉಲ್ಲೇಖಗಳಿಲ್ಲ ಎನ್ನುವ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತಿವೆ. ಇವೆಲ್ಲದರ ನಡುವೆ ಇದೀಗ ಪ್ರಧಾನಿ ಮೋದಿಯವರು ಎನ್ಆರ್ಸಿ ಎನ್ನುವ ಹಾವನ್ನು ಚುನಾವಣಾ ಆಯೋಗದ ಬುಟ್ಟಿಯಲ್ಲಿಟ್ಟು ಆಡಿಸುವುದಕ್ಕೆ ಹೊರಟಿದ್ದಾರೆ.
ಬಿಹಾರದಲ್ಲಿ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಇದೆೆ ಎನ್ನುವಷ್ಟರಲ್ಲಿ, ಚುನಾವಣಾ ಆಯೋಗವು ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಗೆ ಇಳಿದಿದೆ. ‘ಮತ ಚಲಾಯಿಸುವವರು ಭಾರತೀಯ ಪೌರರು ಹೌದೇ?’ ಎನ್ನುವುದನ್ನು ಚುನಾವಣಾ ಆಯೋಗ ಪರಿಶೀಲಿಸಲು ಮುಂದಾಗಿದೆ. ಸುಮಾರು ಎಂಟು ಕೋಟಿ ಮತದಾರರು ತಾವು ಭಾರತದ ಪೌರರು ಎನ್ನುವುದನ್ನು ಚುನಾವಣಾ ಆಯೋಗಕ್ಕೆ ಸಾಬೀತು ಪಡಿಸಿದ ಬಳಿಕ ಅವರು ಮತದಾನಕ್ಕೆ ಅರ್ಹತೆಯನ್ನು ಪಡೆಯುತ್ತಾರೆ. 2003ರ ಪರಿಷ್ಕೃತ ಪಟ್ಟಿಯಲ್ಲಿರುವ 4.96 ಕೋಟಿ ಮಂದಿಯ ಹೆಸರುಗಳನ್ನು ಹೊರತು ಪಡಿಸಿ, ಇತರರು ತಮ್ಮ ಹುಟ್ಟಿದ ವರ್ಷಗಳ ಆಧಾರದಲ್ಲಿ ಸೂಕ್ತ ದಾಖಲೆಗಳನ್ನು ಚುನಾವಣಾ ಆಯೋಗಕ್ಕೆ ನೀಡಬೇಕಾಗುತ್ತದೆ. ಆಧಾರ್ ಕಾರ್ಡ್, ವೋಟರ್ ಐಡಿಗಳು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹ ದಾಖಲೆಯಲ್ಲ ಎನ್ನುವುದನ್ನು ಚುನಾವಣಾ ಆಯೋಗ ಈಗಾಗಲೇ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗ ನೀಡಿರುವ ಮಾಹಿತಿಯ ಪ್ರಕಾರ, ಬಿಹಾರದ ಶೇಕಡ 37ರಷ್ಟು ಮತದಾರರು ತಮ್ಮ ಪುರಾವೆಯನ್ನು ಸಲ್ಲಿಸಬೇಕಾಗುತ್ತದೆ. 1987 ಜುಲೈ 1ರ ಮುನ್ನ ಜನಿಸಿದ ಮತದಾರರು ತಮ್ಮ ಜನನ ದಿನಾಂಕ ಹಾಗೂ ಹುಟ್ಟಿದ ಸ್ಥಳದ ಪುರಾವೆಯನ್ನು ತೋರಿಸಬೇಕು. 1987 ಜುಲೈ 1 ಹಾಗೂ 2004 ಡಿಸೆಂಬರ್ 2ರ ನಡುವೆ ಜನಿಸಿದ ಮತದಾರರು ತಮ್ಮ ಹೆತ್ತವರ ಜನನ ದಿನಾಂಕ ಹಾಗೂ ಹುಟ್ಟಿದ ಸ್ಥಳವನ್ನು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬೇಕು. ಬಿಹಾರದಲ್ಲಿ ಇದು ಕೇವಲ 25 ದಿನಗಳ ಒಳಗೆ ನಡೆಯಬೇಕಾಗಿದೆ. ಅನಕ್ಷರತೆ, ಬಡತನ ಇತ್ಯಾದಿಗಳಿಗಾಗಿ ಕುಖ್ಯಾತವಾಗಿರುವ ಬಿಹಾರದಲ್ಲಿ ಈ ದಾಖಲೆಗಳನ್ನು ಒದಗಿಸಲು ಮತದಾರರು ಎಷ್ಟರಮಟ್ಟಿಗೆ ಯಶಸ್ವಿಯಾಗಬಹುದು ಎನ್ನುವುದು ಅನುಮಾನ ಪಡುವ ವಿಷಯವಾಗಿದೆ. ಆದರೆ ಚುನಾವಣಾ ಆಯೋಗ ಈ ಬಗ್ಗೆ ಯಾವುದೇ ಆತಂಕಗಳನ್ನು ಹೊಂದಿಲ್ಲ. ಒಂದು ವೇಳೆ ಈ ದಾಖಲೆಗಳನ್ನು ಒದಗಿಸಲು ವಿಫಲರಾದರೆ, ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದೊಡ್ಡ ಸಂಖ್ಯೆಯ ಮತದಾರರು ಮತದಾನದಿಂದ ವಂಚಿತರಾಗುತ್ತಾರೆ ಮಾತ್ರವಲ್ಲ, ಅವರು ದಾಖಲೆಗಳನ್ನು ಸಾಬೀತು ಮಾಡುವವರೆಗೆ ಈ ದೇಶದ ಪೌರತ್ವದಿಂದಲೂ ಚುನಾವಣಾ ಆಯೋಗದ ದೃಷ್ಟಿಯಿಂದ ವಂಚಿತರಾಗುತ್ತಾರೆ.
ಮಹಾರಾಷ್ಟ್ರದ ಚುನಾವಣೆಯಲ್ಲಿ ಮತದಾರ ಪಟ್ಟಿಯಲ್ಲಿ ಆಗಿರುವ ಏರುಪೇರಿಗೆ ಈವರೆಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿಲ್ಲ. ಅಷ್ಟೇ ಅಲ್ಲ, ಮಹಾರಾಷ್ಟ್ರದ ಮತಚಲಾವಣೆಯ ಸಂದರ್ಭದ ದಾಖಲೆಗಳನ್ನು ನೀಡುವುದಕ್ಕೂ ಅದು ಹಿಂದೇಟು ಹಾಕುತ್ತಿದೆ. ಇದೇ ಹೊತ್ತಿಗೆ ಬಿಹಾರದಲ್ಲಿ, ಪೌರತ್ವದ ಹೆಸರಿನಲ್ಲಿ, ಲಕ್ಷಾಂತರ ಜನರ ಮತಗಳ ಹಕ್ಕನ್ನೇ ಕಿತ್ತುಕೊಳ್ಳಲು ಮುಂದಾಗಿದೆ. ಈ ಅಲ್ಪಾವಧಿಯಲ್ಲಿ ಬೇರೆ ಬೇರೆ ಕಾರಣಗಳಿಂದ ತಮ್ಮ ದಾಖಲೆಗಳನ್ನು ನೀಡಲು ಮತದಾರರು ವಿಫಲರಾದರೆ, ಅವರು ಮತಚಲಾಯಿಸುವಂತಿಲ್ಲ ಮಾತ್ರವಲ್ಲ, ಆಯೋಗವು ಅವರನ್ನು ಪರೋಕ್ಷವಾಗಿ ದೇಶದ ಪೌರತ್ವದಿಂದಲೇ ಹೊರಗಿಟ್ಟಂತಾಗುತ್ತದೆ. ಶೇ. 30 ಕ್ಕೂ ಅಧಿಕ ಮಂದಿ ಪೌರರನ್ನು ಹೊರಗಿಟ್ಟು ಬಿಹಾರದಲ್ಲಿ ಚುನಾವಣೆ ನಡೆಸಲು ಹೊರಟಿರುವ ಚುನಾವಣಾ ಆಯೋಗದ ನಡೆಯ ಬಗ್ಗೆ ಈಗಾಗಲೇ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ.
ಕಳವಳಕಾರಿ ವಿಷಯವೆಂದರೆ, ಇದು ಕೇವಲ ಬಿಹಾರಕ್ಕಷ್ಟೇ ಸೀಮಿತವಾದ ಪರಿಷ್ಕರಣೆಯಲ್ಲ. ಚುನಾವಣಾ ಆಯೋಗವು ಈ ವರ್ಷ ಬಿಹಾರದಿಂದ ಮೊದಲ್ಗೊಂಡು ಆರು ರಾಜ್ಯಗಳಲ್ಲಿ ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯನ್ನು ನಡೆಸಲಿದೆ ಮತ್ತು ಇದರ ಆಧಾರದಲ್ಲಿ ಯಾರು ಪೌರರು, ಯಾರು ಅಕ್ರಮ ವಲಸಿಗರು ಎನ್ನುವುದನ್ನು ಚುನಾವಣಾ ಆಯೋಗವೇ ನಿರ್ಧರಿಸಿ, ಅವರು ಮತದಾನ ಮಾಡಬೇಕೇ ಬೇಡವೇ ಎನ್ನುವುದನ್ನು ತೀರ್ಮಾನಿಸಲಿದೆ. ಈ ಹಿಂದೆ ಸಿಎಎ ಹೆಸರಿನಲ್ಲಿ ಎನ್ಆರ್ಸಿಯನ್ನು ಸರಕಾರ ಹೇಗೆ ಮುಂದಿಟ್ಟಿತು ಮತ್ತು ಅದರ ವಿರುದ್ಧ ದೇಶ ಹೇಗೆ ಒಂದಾಗಿ ಪ್ರತಿಭಟಿಸಿತು ಎನ್ನುವುದನ್ನು ನೋಡಿದ್ದೇವೆ. ಎನ್ಆರ್ಸಿ ವಿರುದ್ಧ ಭಾರೀ ಆಂದೋಲನ ಆರಂಭವಾಗುತ್ತಿದ್ದಂತೆಯೇ ಅಂತಹದೊಂದು ಯೋಜನೆಯೇ ನಮ್ಮ ಬಳಿ ಇಲ್ಲ ಎಂದು ಪ್ರಧಾನಿ ಮೋದಿಯವರು ತಿಳಿಸಿದರು. ಆದರೆ ಅದಾಗಲೇ ಅಮಿತ್ ಶಾ ‘ಕ್ರೊನೋಲಜಿ’ಯನ್ನು ವಿವರಿಸಿಯಾಗಿತ್ತು. ಎನ್ಆರ್ಸಿ ಸಾಧ್ಯವಿಲ್ಲ ಎಂದಾಗ, ಪೌರತ್ವ ನೋಂದಣಿಯಲ್ಲಿ ಅದನ್ನು ತುರುಕಿಸುವ ಪ್ರಯತ್ನ ನಡೆಯಿತು. ಎನ್ಪಿಆರ್ ದಾಖಲೀಕರಣದ ಬಳಿಕ ಆ ದಾಖಲೆಗಳು ಸ್ಥಳೀಯ ಸಂಸ್ಥೆಗೆ ತೃಪ್ತಿ ನೀಡದೇ ಇದ್ದರೆ ‘ಪೌರತ್ವವನ್ನು ಸಾಬೀತು ಪಡಿಸಿ’ ಎಂದು ಒಬ್ಬ ವ್ಯಕ್ತಿಗೆ ನೋಟಿಸ್ ನೀಡಬಹುದು. ಅಲ್ಲೂ ಯಶಸ್ವಿಯಾಗದ ಹಿನ್ನೆಲೆಯಲ್ಲಿ ಇದೀಗ ಈ ದೇಶದ ಜನರ ಪೌರತ್ವವನ್ನು ಗುರುತಿಸುವ ಕೆಲಸವನ್ನು ಪರೋಕ್ಷವಾಗಿ ಚುನಾವಣಾ ಆಯೋಗ ಹೊತ್ತುಕೊಂಡಿದೆ.
ಅಂದರೆ ಮುಂದಿನ ದಿನಗಳಲ್ಲಿ ನಮ್ಮ ಮತದಾನ ಗುರುತು ಪತ್ರ, ಆಧಾರ್ ಕಾರ್ಡ್ ಚುನಾವಣೆಯಲ್ಲಿ ಭಾಗವಹಿಸಲು ಸಾಕಾಗುವುದಿಲ್ಲ. ಮೊದಲು ಪೌರತ್ವ ಸಾಬೀತು ಪಡಿಸಿ ಬಳಿಕ ಮತದಾರರ ಪಟ್ಟಿಯಲ್ಲಿ ನಮ್ಮ ಹೆಸರನ್ನು ದಾಖಲಿಸಬೇಕಾಗಿದೆ. ಒಂದು ವೇಳೆ ಸೂಕ್ತ ದಾಖಲೆಗಳನ್ನು ಒದಗಿಸಲು ವಿಫಲರಾದರೆ ನಮ್ಮ ಹೆಸರು ಮತದಾರರ ಪಟ್ಟಿಯಿಂದ ಹೊರಬೀಳುತ್ತದೆ. ಇದು ಹಂತ ಹಂತವಾಗಿ ಬೇರೆ ಬೇರೆ ವಲಯಗಳಿಂದ ನಮ್ಮ ಹೆಸರನ್ನು ಹೊರಗಿಡುವುದಕ್ಕೆ ನೆಪಗಳನ್ನು ಒದಗಿಸಬಹುದು. ಅಂತಿಮವಾಗಿ ಮತದಾನ ಗುರುತು ಪತ್ರ ಇಲ್ಲದವರನ್ನು ಪೌರತ್ವ ಸಾಬೀತು ಪಡಿಸಲು ಒತ್ತಾಯಿಸಿ, ಅದರಲ್ಲಿ ವಿಫಲರಾದರೆ ಅವರನ್ನು ಕೇಂದ್ರ ಸರಕಾರದಿಂದ ಬಂಧನಕೇಂದ್ರಕ್ಕೆ ರವಾನಿಸುವ ಕೆಲಸ ನಡೆದರೂ ಅಚ್ಚರಿಯಿಲ್ಲ. ಚುನಾವಣೆಯಲ್ಲಿ ನಡೆಯುತ್ತಿರುವ ಅಕ್ರಮಗಳು, ಮತದಾರರ ಪಟ್ಟಿಯಲ್ಲಿರುವ ಗೊಂದಲಗಳು, ಇವಿಎಂ ಕುರಿತಂತೆ ಎದ್ದಿರುವ ಅನುಮಾನಗಳು ಇವೆಲ್ಲವುಗಳನ್ನು ಪರಿಹರಿಸುವ ಹೊಣೆಗಾರಿಕೆಯಿಂದ ನುಣುಚಿಕೊಳ್ಳುತ್ತ ಬಂದಿರುವ ಆಯೋಗ, ಇದೀಗ ಈ ದೇಶದ ಜನರ ಪೌರತ್ವದ ತನಿಖೆ ನಡೆಸುವ ಹೊಸ ಹೊಣೆಗಾರಿಕೆಯನ್ನು ಹೊತ್ತುಕೊಳ್ಳಲು ಮುಂದಾಗಿದೆ. ಅದೂ ಅವಸರವಸರವಾಗಿ. ಈ ಮೂಲಕ ಆಯೋಗ ತನ್ನ ಲಕ್ಷ್ಮಣ ರೇಖೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ದೇಶ ಚುನಾವಣಾ ಆಯೋಗದ ಈ ಅಧಿಕ ಪ್ರಸಂಗದ ವಿರುದ್ಧ ಒಂದಾಗಿ ಮಾತನಾಡಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣವಾಗಿದೆ.