ಪ್ರತಿಪಕ್ಷಗಳಿಗೆ ಚುನಾವಣಾ ಆಯೋಗದ ಬೆದರಿಕೆ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಚುನಾವಣಾ ಆಯೋಗ ಎಂಬ ಸ್ವಾಯತ್ತ ಸಂಸ್ಥೆಯ ನಡೆ ಸಂಶಯಾಸ್ಪದವಾಗಿದೆ. ಅಷ್ಟೇ ಅಲ್ಲ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಮತಗಳ್ಳತನದ ಆರೋಪ ಮಾಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಬೆದರಿಕೆ ಹಾಕುವ ಅತಿರೇಕದ ಕ್ರಮಕ್ಕೆ ಆಯೋಗ ಮುಂದಾಗಿದೆ. ಮತದಾರರ ಪಟ್ಟಿಯ ಅಕ್ರಮಗಳ ಬಗ್ಗೆ ರಾಹುಲ್ ಗಾಂಧಿ ಆರೋಪ ಮಾಡಿದರೆ ಅದಕ್ಕೆ ತಕ್ಕ ಸಮಜಾಯಿಷಿ ನೀಡುವುದು ಆಯೋಗದ ಕರ್ತವ್ಯ. ಅದನ್ನು ಬಿಟ್ಟು ಆರೋಪಕ್ಕೆ ಸಂಬಂಧಿಸಿದಂತೆ ಏಳು ದಿನಗಳಲ್ಲಿ ಲಿಖಿತ ಪ್ರಮಾಣ ಪತ್ರವನ್ನು ಸಲ್ಲಿಸಬೇಕು ಇಲ್ಲದಿದ್ದರೆ ನಿರಾಧಾರ ಆರೋಪ ಮಾಡಿರುವುದಕ್ಕಾಗಿ ರಾಹುಲ್ ಗಾಂಧಿ ಕ್ಷಮೆಯನ್ನು ಯಾಚಿಸಬೇಕು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬೆದರಿಕೆ ಹಾಕಿದ್ದಾರೆ. ಇದರಿಂದ ಮುಖ್ಯ ಚುನಾವಣಾ ಆಯುಕ್ತರು ತಾವೇನೆಂಬುದನ್ನು ತೋರಿಸಿಕೊಟ್ಟಿದ್ದಾರೆ.
ಚುನಾವಣಾ ಆಯುಕ್ತರ ನೇಮಕದಲ್ಲಿ ಸುಪ್ರೀಂ ಕೋರ್ಟ್ ಪಾತ್ರವನ್ನು ತೆಗೆದು ಹಾಕಿ, ಪ್ರತಿಪಕ್ಷಗಳನ್ನು ಹೆಸರಿಗೆ ಮಾತ್ರ ಇಟ್ಟುಕೊಂಡು ಆಯೋಗವನ್ನು ತನ್ನ ವಶಕ್ಕೆ ತೆಗೆದುಕೊಂಡ ಬಿಜೆಪಿ ಸರಕಾರ ಕೈಗೊಂಬೆ ಆಯುಕ್ತರ ಮೂಲಕ ಪ್ರತಿಪಕ್ಷ ನಾಯಕರಿಗೆ ಬೆದರಿಕೆಯನ್ನು ಹಾಕಿಸುತ್ತಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಎದುರಾಗಿರುವ ಬಹುದೊಡ್ಡ ಗಂಡಾಂತರಕ್ಕೆ ಪ್ರತ್ಯಕ್ಷ ಉದಾಹರಣೆಯಾಗಿದೆ.
ಕಳೆದ ನಲವತ್ತು ವರ್ಷಗಳ ಕಾಲಾವಧಿಯಲ್ಲಿ ಚುನಾವಣಾ ಆಯೋಗ ಇಷ್ಟು ಕೀಳುಮಟ್ಟಕ್ಕೆ ಎಂದೂ ಇಳಿದಿರಲಿಲ್ಲ. ರಾಹುಲ್ ಗಾಂಧಿಯವರಿಂದ ಕ್ಷಮೆ ಮತ್ತು ಪ್ರಮಾಣ ಪತ್ರವನ್ನು ಕೇಳುತ್ತಿರುವ ಚುನಾವಣಾ ಆಯೋಗ ಇಂಥದೇ ಆರೋಪವನ್ನು ಮಾಡಿರುವ ಅನುರಾಗ್ ಠಾಕೂರ್ ಸೇರಿದಂತೆ ಬಿಜೆಪಿ ನಾಯಕರನ್ನು ಯಾಕೆ ಕೇಳಿಲ್ಲ? ರಾಹುಲ್ ಗಾಂಧಿಯವರು ಬೆಂಗಳೂರಿನ ಸುದ್ದಿ ಗೋಷ್ಠಿಯಲ್ಲಿ ಮಾಡಿದ ಗುರುತರವಾದ ಯಾವ ಆರೋಪಕ್ಕೂ ಉತ್ತರ ನೀಡದ ಚುನಾವಣಾ ಆಯುಕ್ತರು ಹಾರಿಕೆಯ, ಜಾರಿಕೆಯ ಹೇಳಿಕೆಯನ್ನು ನೀಡಿದ್ದಾರೆ.
ರಾಹುಲ್ ಗಾಂಧಿಯವರ ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯ ಚುನಾವಣಾ ಆಯುಕ್ತರು ಮಾತಾಡುತ್ತಿರುವುದು ಪತ್ರಿಕಾಗೋಷ್ಠಿಯಲ್ಲೋ ಅಥವಾ ಬಿಜೆಪಿಯ ಬಹಿರಂಗ ಸಭೆಯಲ್ಲೋ ಎಂಬ ಸಂದೇಹ ಸಹಜವಾಗಿ ಬರುತ್ತದೆ. ರಾಹುಲ್ ಗಾಂಧಿಯವರು ಮತ್ತು ಇತರ ಪ್ರತಿಪಕ್ಷ ನಾಯಕರು ಮಾಡಿದ, ಮಾಡುತ್ತಿರುವ ಆರೋಪಗಳ ಬಗ್ಗೆ ಯಾವುದೇ ನಿರ್ದಿಷ್ಟ ಉತ್ತರವನ್ನು ನೀಡದೆ ಬೆದರಿಕೆಯ ಭಾಷೆಯಲ್ಲಿ ಮಾತಾಡಿರುವುದು ಸಹಜವಾಗಿ ಅವರ ಬಗ್ಗೆ ಸಂದೇಹಕ್ಕೆ ಕಾರಣವಾಗುತ್ತದೆ. ಇದು ತಾನೇ ನೇಮಕ ಮಾಡಿರುವ ಕೈಗೊಂಬೆ ಆಯುಕ್ತರ ಮೂಲಕ ಇಡೀ ಚುನಾವಣಾ ಪ್ರಕ್ರಿಯೆಯನ್ನು ತನ್ನ ಕೈಗೆ ತೆಗೆದುಕೊಂಡು ತನಗೆ ಬೇಕಾದಂತಹ ಫಲಿತಾಂಶವನ್ನು ಪಡೆಯುವ ಹುನ್ನಾರವಲ್ಲದೆ ಬೇರೇನೂ ಅಲ್ಲ ಎಂದರೆ ತಪ್ಪಿಲ್ಲ. ಸರಕಾರದ ಆಡಳಿತಾಂಗದಲ್ಲಿ ಆರೆಸ್ಸೆಸ್‌ನ ಸ್ವಯಂ ಸೇವಕರನ್ನು ಬಹುದೊಡ್ಡ ಪ್ರಮಾಣದಲ್ಲಿ ತುಂಬಿ ಬೂತ್ ಕಮಿಟಿಗಳ ಮೂಲಕ ಮತದಾರರ ಪಟ್ಟಿಯನ್ನು ಈಗಾಗಲೇ ತಿರುಚಲಾಗಿರುವ ಆರೋಪ ಕೇಳಿ ಬಂದಿದೆ. ಚುನಾವಣಾ ವ್ಯವಸ್ಥೆಯನ್ನು ಇಡಿಯಾಗಿ ಭ್ರಷ್ಟಗೊಳಿಸಲಾಗಿದೆ. ಇದಾವುದಕ್ಕೂ ಪತ್ರಿಕಾಗೋಷ್ಠಿಯ ಭಾಷಣದಲ್ಲಿ ಉತ್ತರವಿರಲಿಲ್ಲ.
ಚುನಾವಣಾ ಆಯೋಗ ಈ ರೀತಿ ವರ್ತಿಸುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕೂಡ ಮತದಾನದ ಪ್ರಮಾಣ ಎಷ್ಟಾಯಿತು ಎಂದು ವಿವರಗಳನ್ನು ಪ್ರಕಟಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮತ್ತು ಇತರ ಪ್ರತಿಪಕ್ಷ ನಾಯಕರು ಪ್ರಶ್ನಿಸಿದಾಗಲೂ ಕೂಡ ಈ ಮನವಿಗೆ ಸ್ಪಂದಿಸಿ ವಿವರ ನೀಡಬೇಕಾದ ಚುನಾವಣಾ ಆಯೋಗ, ಖರ್ಗೆಯವರು ಏನೋ ಅಪರಾಧ ಮಾಡಿದ್ದಾರೆ ಎಂಬಂತೆ ಅವರ ಹೇಳಿಕೆಯ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿ ‘ಅನುಮಾನ ಮತ್ತು ಅರಾಜಕತೆಯನ್ನು ಉಂಟು ಮಾಡುವ ಯತ್ನ’ ಎಂದು ಟೀಕಿಸಿತ್ತು. ಚುನಾವಣಾ ಸಂದರ್ಭದಲ್ಲಿ ಅತ್ಯಂತ ಪ್ರಚೋದನಕಾರಿ ಭಾಷಣಗಳನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಮಂತ್ರಿ ಅಮಿತ್ ಶಾ ಅವರ ಬಗ್ಗೆ ದೂರು ಬಂದರೂ ಕೂಡ ಚುನಾವಣಾ ಆಯುಕ್ತರು ಜಾಣ ಮೌನವನ್ನು ತಾಳಿದ್ದರು.
ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಇಡೀ ಚುನಾವಣಾ ಆಯೋಗವನ್ನೇ ನುಂಗಿ ನೀರು ಕುಡಿಯುವುದಕ್ಕಾಗಿ ಆಯುಕ್ತರ ನೇಮಕದ ಅಧಿಕಾರವನ್ನು ತನ್ನ ಕೈಗೆ ತೆಗೆದುಕೊಂಡಂತೆ ಕಾಣುತ್ತಿದೆ. ಈ ಹಿಂದೆ ಪ್ರಧಾನಿ ನೇತೃತ್ವದ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗುತ್ತಿತ್ತು. ಇದರಲ್ಲಿ ಪ್ರಧಾನಿ ಮತ್ತು ಲೋಕಸಭೆಯ ಪ್ರತಿಪಕ್ಷ ನಾಯಕ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಇರುತ್ತಿದ್ದರು. ಕಾರ್ಯಾಂಗ ಮತ್ತು ಶಾಸಕಾಂಗ ದಾರಿ ತಪ್ಪಿದಾಗ ಮಾರ್ಗದರ್ಶಿಯಾಗಿ ಕೆಲಸ ಮಾಡುವ ನ್ಯಾಯಾಂಗದ ಅತ್ಯುನ್ನತ ವ್ಯಕ್ತಿಯೊಬ್ಬರು ಸದರಿ ಸಮಿತಿಯಲ್ಲಿ ಇರುವುದರಿಂದ ಮುಖ್ಯ ಚುನಾವಣಾ ಆಯುಕ್ತರ ನೇಮಕದ ಪ್ರಕ್ರಿಯೆ ಪಾರದರ್ಶಕವಾಗಿರುತ್ತಿತ್ತು. ಆದರೆ ಮೋದಿ ಸರಕಾರ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನೇ ಹೊರಗಿಟ್ಟು ಅವರ ಬದಲಿಗೆ ಪ್ರಧಾನಿ ನೇಮಕ ಮಾಡುವ ಸಂಪುಟ ದರ್ಜೆಯ ಸಚಿವರೊಬ್ಬರನ್ನು ಆಯ್ಕೆ ಸಮಿತಿಯಲ್ಲಿ ಸೇರ್ಪಡೆ ಮಾಡಿತು. ಹೀಗಾಗಿ ಸರಕಾರ ಬಯಸಿದವರೇ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರಾಗುವಂತಾಯಿತು. ಹೆಸರಿಗೆ ಪ್ರತಿಪಕ್ಷ ನಾಯಕರು ಸಮಿತಿಯಲ್ಲಿ ಇದ್ದರೂ ಮೂವರಲ್ಲಿ ಇಬ್ಬರು ಸರಕಾರದ ಭಾಗವಾಗಿದ್ದರಿಂದ ಅವರು ಇಷ್ಟ ಪಟ್ಟವರೇ ಚುನಾವಣಾ ಆಯುಕ್ತರಾಗುತ್ತಿದ್ದರು. ಹೀಗಾಗಿ ಆಯೋಗದ ನಿಷ್ಪಕ್ಷಪಾತದ ಬಗ್ಗೆ ಸಹಜವಾಗಿ ಸಂದೇಹ ಬರುತ್ತದೆ.
ಮತಗಳ್ಳತನದ ಬಗ್ಗೆ ಆರೋಪ ಮಾಡಿರುವ ರಾಹುಲ್ ಗಾಂಧಿಯವರನ್ನು ಬೆದರಿಸಲು ಸಹಿ ಮಾಡಿರುವ ಪ್ರಮಾಣ ಪತ್ರ ಸಲ್ಲಿಸಬೇಕು ಇಲ್ಲವೇ ಸಾರ್ವಜನಿಕ ಕ್ಷಮೆಯನ್ನು ಯಾಚಿಸಬೇಕು ಎಂಬ ಚುನಾವಣಾ ಆಯೋಗದ ಎಚ್ಚರಿಕೆ ನಿಯಮಾವಳಿಗೆ ವ್ಯತಿರಿಕ್ತವಾಗಿದೆ ಎಂದು ಕಾನೂನು ತಜ್ಞರ ಅಭಿಪ್ರಾಯವಾಗಿದೆ. ಚುನಾವಣೆಯ ಸಂದರ್ಭದಲ್ಲಿ ಮತದಾರರ ಪಟ್ಟಿ ಪ್ರಕಟವಾದ 30 ದಿನಗಳೊಳಗೆ ಆರೋಪ ಮಾಡಿದರೆ ಮಾತ್ರ ಪ್ರಮಾಣ ಪತ್ರವನ್ನು ಕೊಡಬೇಕಾಗುತ್ತದೆ. ಹಾಗಾಗಿ ರಾಹುಲ್ ಗಾಂಧಿಯವರು ಮಾಡಿರುವ ಆರೋಪದ ಬಗ್ಗೆ ಹಾಲಿ ನ್ಯಾಯಮೂರ್ತಿಗಳ ನೇತೃತ್ವದ ಸಮಿತಿಗೆ ಇದನ್ನು ವಿಚಾರಣೆಗೆ ಒಪ್ಪಿಸುವುದು ಅಗತ್ಯವಾಗಿದೆ.
ಒಂದೆಡೆ ಚುನಾವಣಾ ಪ್ರಕ್ರಿಯೆ ಬಗ್ಗೆ ವಿಶೇಷವಾಗಿ ಮತಗಳ್ಳತನದ ಬಗ್ಗೆ ದೂರುಗಳಿದ್ದರೆ, ಇನ್ನೊಂದೆಡೆ ಕಳೆದ ಹನ್ನೊಂದು ವರ್ಷಗಳಲ್ಲಿ ಜನಾದೇಶವನ್ನೇ ಉಲ್ಟಾಪಲ್ಟಾ ಮಾಡಿ ಆಪರೇಷನ್ ಕಮಲದ ಮೂಲಕ ಎದುರಾಳಿ ಪಕ್ಷದ ಶಾಸಕರನ್ನೇ ಖರೀದಿಸಿ ಇಲ್ಲವೇ ಸಿಬಿಐ, ಐಟಿ, ಈ.ಡಿ. ಮೊದಲಾದ ತನಿಖಾ ಸಂಸ್ಥೆಗಳ ಮೂಲಕ ಬೆದರಿಕೆ ಹಾಕಿ ಪಕ್ಷಗಳನ್ನೇ ಒಡೆದು ಚುನಾಯಿತ ಸರಕಾರಗಳನ್ನೇ ಬುಡಮೇಲು ಮಾಡಿರುವ ಸಾಕಷ್ಟು ಉದಾಹರಣೆಗಳಿವೆ.
ಮತಗಳ್ಳತನದ ಬಗ್ಗೆ ಸ್ಪಷ್ಟೀಕರಣ ಕೇಳಿದರೆ ಬೆದರಿಕೆಯ ಭಾಷೆಯಲ್ಲಿ ಮಾತ ನಾಡುವ ಚುನಾವಣಾ ಆಯುಕ್ತರನ್ನು ದಂಡನೆಗೆ ಗುರಿಪಡಿಸುವುದು ಅಗತ್ಯವಾಗಿದೆ. ಇಲ್ಲವಾದರೆ ಈ ದೇಶದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಉಳಿಯುವುದಿಲ್ಲ.
ಈ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಳಿವು, ಉಳಿವಿನ ಸಂಕಟವನ್ನು ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ನಡೆ ಸಂಶಯಾಸ್ಪದ ವಾಗಿದೆ. ಆಳುವ ಪಕ್ಷದ ಚೇಲಾಗಳಂತೆ ವರ್ತಿಸುವ ಚುನಾವಣಾ ಆಯುಕ್ತರನ್ನು ಉಚ್ಚಾಟನೆ ಮಾಡಲು ಜನರು ಬೀದಿಗಿಳಿದು ಹೋರಾಟವನ್ನು ಮಾಡುವುದು ಬಿಟ್ಟರೆ ಬೇರೆ ಯಾವ ದಾರಿಯೂ ಗೋಚರಿಸುತ್ತಿಲ್ಲ. ಜನಸಾಮಾನ್ಯರ ಪ್ರತಿರೋಧ ಮಾತ್ರ ಭಾರತದಲ್ಲಿ ಜನತಂತ್ರವನ್ನು ಉಳಿಸುವ ಅನಿವಾರ್ಯ ಮಾರ್ಗವಾಗಿದೆ.







