ಭಾರತದ ವೈಮಾನಿಕ ಕ್ಷೇತ್ರದಲ್ಲಿ ತುರ್ತುಪರಿಸ್ಥಿತಿ!

ಇಂಡಿಗೋ | Photo Credit : PTI
ಕಳೆದ ಜೂನ್ ತಿಂಗಳಲ್ಲಿ ಏರ್ಇಂಡಿಯಾ ವಿಮಾನ ಪತನ ವಿಶ್ವಾದ್ಯಂತ ಸುದ್ದಿಯಾಯಿತು. ಈ ಭಾರೀ ದುರಂತ ಸಂಭವಿಸಿದ ಬೆನ್ನಿಗೇ ಕೇಂದ್ರ ಸರಕಾರ ತನ್ನನ್ನು ತಾನು ರಕ್ಷಿಸಿಕೊಳ್ಳುವ ಪ್ರಯತ್ನ ನಡೆಸಿತು. ‘‘ಇಂತಹ ಅಪಘಾತಗಳನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’’ ಎಂಬ ಹೇಳಿಕೆಯನ್ನು ಗೃಹ ಸಚಿವರು ನೀಡಿದರು. ಏರ್ ಇಂಡಿಯಾದ ಬೇಜವ್ದಾರಿಯ ಬಗ್ಗೆ ತನಿಖೆ ನಡೆಸಬೇಕಾದ ಸರಕಾರವೇ ಅದಕ್ಕೆ ಕ್ಲೀನ್ ಚಿಟ್ ನೀಡಿತು. ದೋಷಪೂರಿತ ಇಂಜಿನ್ಗಳು ಭಾರತದ ವಿಮಾನ ಉದ್ಯಮಕ್ಕೆ ಮಾಡುತ್ತಿರುವ ನಷ್ಟವೂ ಈ ಸಂದರ್ಭದಲ್ಲಿ ಮಾಧ್ಯಮಗಳಲ್ಲಿ ತೀವ್ರ ಚರ್ಚೆಗೊಳಗಾಗಿದ್ದವು. ಆದರೆ ಈ ದುರಂತಕ್ಕೆ ಸಂಬಂಧಿಸಿ ಸರಕಾರದ ಯಾರೊಬ್ಬರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಲಿಲ್ಲ. ಇದೀಗ ಭಾರತ ವಿಮಾನ ಉದ್ಯಮ ಮತ್ತೆ ಸುದ್ದಿಯಲ್ಲಿದೆ. ಕಳೆದೆರಡು ದಿನಗಳಿಂದ ವಿಮಾನ ಯಾನ ಕ್ಷೇತ್ರದಲ್ಲಿ ನಡೆಯುತ್ತಿರುವ ಅಧ್ವಾನಗಳು ಯಾವುದೇ ಭೀಕರ ಅವಘಡಕ್ಕಿಂತ ಕಡಿಮೆಯಿಲ್ಲ. ದೇಶದ ವಾಯುಯಾನ ಮಾರುಕಟ್ಟೆಯಲ್ಲಿ ಶೇ. 60ಕ್ಕೂ ಅಧಿಕ ಪಾಲನ್ನು ಹೊಂದಿರುವ ಇಂಡಿಗೊ ಅಕ್ಷರಶಃ ರೆಕ್ಕೆ ಹರಿದು ನೆಲದಲ್ಲಿ ಒದ್ದಾಡುತ್ತಿದೆ. ಸಾವಿರಾರು ಪ್ರಯಾಣಿಕರು ತಮ್ಮ ಗುರಿ ತರುಪಲಾರದೆ ವಿಮಾನ ಯಾನ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ. ದೇಶದ ಔದ್ಯಮಿಕ ವಲಯವೇ ಹಾಹಾಕಾರದಲ್ಲಿರುವ ಹೊತ್ತಿಗೆ, ಇತ್ತ ನಮ್ಮ ಪ್ರಧಾನಿಯವರು ರಶ್ಯ ಅಧ್ಯಕ್ಷ ಪುಟಿನ್ ಜೊತೆಗೆ ಚಹಾಕೂಟ ನಡೆಸುತ್ತಿದ್ದಾರೆ. ಪುಟಿನ್ಗೆ ‘ಭಗವದ್ಗೀತೆ’ ಓದುವ ಸಲಹೆ ನೀಡುತ್ತಿದ್ದಾರೆ. ಈ ಸಂಕಟ ಕಾಲದಲ್ಲಿ ದೇಶದ ಜನರ ಗೊಂದಲವನ್ನು ನಿವಾರಿಸುವ ತನ್ನ ಹೊಣೆಗಾರಿಕೆಯಿಂದ ಕೇಂದ್ರ ಸರಕಾರ ಸಂಪೂರ್ಣ ನುಣುಚಿಕೊಂಡಿದೆ.
ಭಾರತದ ವಾಯುಯಾನ ಕ್ಷೇತ್ರದಲ್ಲಿ ಇಂಡಿಗೊ ಅತ್ಯಧಿಕ ಪಾಲನ್ನು ಹೊಂದಿದ್ದರೆ ಬಳಿಕ ಏರ್ಇಂಡಿಯಾ ಹೊಂದಿದೆ. ಒಂದು ರೀತಿಯಲ್ಲಿ ಭಾರತೀಯ ವಿಮಾನ ಯಾನ ಕ್ಷೇತ್ರದಲ್ಲಿ ಈ ಸಂಸ್ಥೆಗಳು ಏಕಸ್ವಾಮ್ಯತೆಯನ್ನು ಸಾಧಿಸಿವೆ. ಇಂಡಿಗೊ ಪ್ರತಿದಿನ 2,200ಕ್ಕೂ ಅಧಿಕ ದೇಶೀಯ ಮತ್ತು ಅಂತರ್ರಾಷ್ಟ್ರೀಯ ವಿಮಾನಗಳನ್ನು ನಿರ್ವಹಿಸುತ್ತದೆ. ಕಡಿಮೆ ವೆಚ್ಚದಲ್ಲಿ ಸೇವೆಗಳನ್ನು ನೀಡುತ್ತದೆ ಎನ್ನುವ ಹೆಗ್ಗಳಿಕೆಯೂ ಅದಕ್ಕಿದೆ. ಆದರೆ ಏಕಾಏಕಿ ಸಿಬ್ಬಂದಿ ಸಮಸ್ಯೆಯನ್ನು ಸೃಷ್ಟಿಸಿಕೊಂಡು ಇಂಡಿಗೊ ಕೈ ಚೆಲ್ಲಿ ಕೂತಿದೆ. ಈ ವಿಮಾನಗಳನ್ನೇ ನಂಬಿ ಕೂತ ಸಾವಿರಾರು ಜನರು ಅತಂತ್ರರಾಗಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಇಂಡಿಗೊ 1,000ಕ್ಕೂ ಅಧಿಕ ವಿಮಾನಗಳ ಕಾರ್ಯಾಚರಣೆಯನ್ನು ರದ್ದುಪಡಿಸಿದೆ. ಇದಕ್ಕೆ ಸಿಬ್ಬಂದಿಯ ಕೊರತೆ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಮುಂದೊಡ್ಡಿದೆ. ಇದು ಬಿಕ್ಕಟ್ಟು ಕೇವಲ ಒಂದೆರಡು ದಿನಗಳಿಗೆ ಸೀಮಿತವಾದುದಲ್ಲ. ನಾಳೆಯೂ ಇಷ್ಟೇ ವಿಮಾನಗಳು ರದ್ದಾಗಲಿವೆ ಎಂದು ಸಂಸ್ಥೆ ಹೇಳಿಕೆ ನೀಡಿದ್ದು, ಡಿಸೆಂಬರ್ 15ರವರೆಗೂ ಪರಿಸ್ಥಿತಿ ಹೀಗೆಯೇ ಮುಂದುವರಿಯಬಹುದು ಎಂದಿದೆ. ಇದು ನಿಸ್ಸಂಶಯವಾಗಿ ಭಾರತದ ವೈಮಾನಿಕ ಕ್ಷೇತ್ರದ ತುರ್ತು ಪರಿಸ್ಥಿತಿಯ ದಿನಗಳಾಗಿವೆ. ಈ ತುರ್ತುಪರಿಸ್ಥಿತಿಯು ಭಾರತದ ಎಲ್ಲಾ ಕ್ಷೇತ್ರಗಳ ಮೇಲೆ ಅತ್ಯಂತ ಹೀನಾಯ ಪರಿಣಾಮಗಳನ್ನು ಬೀರಿದೆ. ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುವ ಉದ್ಯಮಿಗಳಿಗೆ ಅತ್ಯಂತ ಕೆಟ್ಟ ಸಂದೇಶವನ್ನು ಈ ಮೂಲಕ ವೈಮಾನಿಕ ಉದ್ಯಮವು ರವಾನಿಸಿದೆ. ಮೋದಿ ಪ್ರಧಾನಿಯಾದರೆ ಭಾರತದ ರೈಲು ನಿಲ್ದಾಣಗಳು ವಿಮಾನ ನಿಲ್ದಾಣಗಳಾಗಲಿವೆ ಎನ್ನುವ ಭರವಸೆ ತಿರುವು ಮುರುವಾಗಿದೆ. ಬದಲಿಗೆ ವಿಮಾನ ನಿಲ್ದಾಣಗಳೇ ರೈಲು ನಿಲ್ದಾಣಗಳಿಗಿಂತ ಕಳಪೆ ಮಟ್ಟಕ್ತೆ ತಲುಪಿದೆ. ಇದು ವಿಶ್ವ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಭಾರೀ ಧಕ್ಕೆಯನ್ನು ತಂದಿದೆ.
ಇದಕ್ಕೆ ಹೊಣೆ ಯಾರು? ಇಂಡಿಗೊ ಇದರ ಹೊಣೆಯನ್ನು ವಿಮಾನ ಯಾನ ಮಹಾನಿರ್ದೇಶನಾಲಯ(ಡಿಜಿಸಿಎ) ತಲೆಗೆ ಕಟ್ಟಲು ನೋಡುತ್ತಿದೆ. ಡಿಜಿಸಿಎಯು ಇತ್ತೀಚೆಗೆ ಜಾರಿಗೆ ತಂದಿರುವ ನಿಯಮಗಳ ಕಾರಣದಿಂದ ಸಿಬ್ಬಂದಿ ಕೊರತೆ ಎದುರಾಗಿರುವುದೇ ಇಂತಹದೊಂದು ಬಿಕ್ಕಟ್ಟು ನಿರ್ಮಾಣವಾಗಲು ಕಾರಣವಾಗಿದೆ ಎಂದು ಇಂಡಿಗೊ ಹೇಳಿಕೊಳ್ಳುತ್ತಿದೆ. ಜಾರಿಗೆ ತಂದಿರುವ ರೋಸ್ಟರಿಂಗ್ ನಿಯಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಇಂಡಿಗೊ ವಿಫಲವಾಗಿರುವುದೇ ಈ ಎಲ್ಲ ಅನಾಹುತಗಳಿಗೆ ಕಾರಣ ಎನ್ನುವ ಇನ್ನೊಂದು ಆರೋಪವೂ ಇದೆ. ಇಂತಹದೊಂದು ‘ತುರ್ತುಪರಿಸ್ಥಿತಿ’ಯನ್ನು ಇಂಡಿಗೊ ಸಂಸ್ಥೆಯೇ ನಿರ್ಮಾಣ ಮಾಡಿ ಅದು ಡಿಜಿಸಿಎಯನ್ನು ‘ಬ್ಲ್ಯಾಕ್ಮೇಲ್’ ಮಾಡುತ್ತಿದೆಯೆ? ಎಂದೂ ಕೆಲವರು ಅನುಮಾನಿಸುತ್ತಿದ್ದಾರೆ. ಭಾರತದ ವಿಮಾನ ಕಂಪೆನಿಗಳು ಪೈಲಟ್ಗಳ ಮೇಲೆ ಹೆಚ್ಚಿನ ಒತ್ತಡಗಳನ್ನು ಹಾಕುತ್ತಿವೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಪೈಲಟ್ಗಳ ಆರೋಗ್ಯ ಮತ್ತು ವಿಮಾನದ ಸುರಕ್ಷತೆಯ ದೃಷ್ಟಿಯಿದ ಡಿಜಿಸಿಎ ಹೊಸ ನಿಯಮಗಳನ್ನು ಜಾರಿಗೊಳಿಸಿತ್ತು. ನಿಯಮಗಳ ಪ್ರಕಾರ ಪೈಲಟ್ಗಳ ಕರ್ತವ್ಯದ ಅವಧಿಯನ್ನು ಇಳಿಸಲಾಗಿದ್ದು, ವಿಶ್ರಾಂತಿಯ ಸಮಯವನ್ನು ಹೆಚ್ಚಿಸಲಾಗಿತ್ತು. ನಿಯಮ ಪ್ರಕಾರ ಯಾವುದೇ ವಿಮಾನ ಸಂಸ್ಥೆಯು ಸಿಬ್ಬಂದಿಗೆ ವಿಧಿಸಿದ ಮಿತಿಗಳಿಗಿಂತ ಹೆಚ್ಚಿನ ಅವಧಿ ಕೆಲಸ ಮಾಡಿಸಬಾರದು. ಈ ನಿಯಮ ಜಾರಿಗೆ ತರುವುದಕ್ಕೆ ಸಾಕಷ್ಟು ಕಾಲಾವಧಿಯನ್ನು ಡಿಜಿಸಿಎ ನೀಡಿತ್ತು. ಹೊಸ ನಿಯಮದ ಪರಿಣಾಮವನ್ನು ಅತಿ ತೀವ್ರವಾಗಿ ಅನುಭವಿಸಿರುವುದು ಇಂಡಿಗೊ. ಯಾಕೆಂದರೆ ಈ ಕ್ಷೇತ್ರದಲ್ಲಿ ಶೇ. 67ರಷ್ಟು ಪಾಲನ್ನು ಇಂಡಿಗೊ ಹೊಂದಿದೆ. ಸಿಬ್ಬಂದಿಯ ಸಂಖ್ಯೆಯನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸುವುದು ಅದಕ್ಕೆ ಅನಿವಾರ್ಯವಾಗಿತ್ತು. ಆದರೆ ಡಿಜಿಸಿಎ ಆದೇಶವನ್ನು ಪಾಲಿಸಲು ಇಷ್ಟವಿಲ್ಲದ ಇಂಡಿಗೊ ಅದರ ವಿರುದ್ಧ ಪರೋಕ್ಷ ಮುಷ್ಕರಕ್ಕಿಳಿದ ಪರಿಣಾಮವಾಗಿಯೇ ಇಂತಹದೊಂದು ಬಿಕ್ಕಟ್ಟು ಎದುರಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ‘ನೀವು ನಿಯಮವನ್ನು ಕಠಿಣವಾಗಿಸಿದರೆ ನಾವು ವಿಮಾನವನ್ನೇ ಹಾರಿಸುವುದಿಲ್ಲ’ ಎನ್ನುವ ಎಚ್ಚರಿಕೆಯನ್ನು ನೀಡಿ, ವಿಮಾನ ನಿರ್ದೇಶನಾಲಯವು ತನ್ನ ನಿಯಮದಿಂದ ಹಿಂದೆ ಸರಿಯುವಂತೆ ಮಾಡುವಲ್ಲಿ ಅದು ಭಾಗಶಃ ಯಶಸ್ವಿಯಾಗಿದೆ. ಈಗಿನ ಬಿಕ್ಕಟ್ಟು ಯಾವ ಕಾರಣಕ್ಕೂ ಆಕಸ್ಮಿಕ ಅಲ್ಲ, ಕಂಪೆನಿಯೇ ಉದ್ದೇಶಪೂರ್ವಕ ಸೃಷ್ಟಿಸಿದ ಒಂದು ಮಹಾ ಮುಷ್ಕರ. ಭಾರತ ಸರಕಾರವನ್ನೇ ಸಂಸ್ಥೆ ಬ್ಲ್ಯಾಕ್ಮೇಲ್ ಮಾಡಿ ತನ್ನ ಉದ್ದೇಶ ಈಡೇರಿಸಿ ಕೊಳ್ಳಲು ಮುಂದಾಗಿದೆ ಎನ್ನುವ ವಿಶ್ಲೇಷಣೆ ಉದ್ಯಮವಲಯಗಳಲ್ಲಿ ಕೇಳಿ ಬರುತ್ತಿವೆ.
ಭಾರತದ ಉದ್ಯಮ ಕ್ಷೇತ್ರದಲ್ಲಿ ಈ ‘ಮುಷ್ಕರ’ ತೀವ್ರ ಪರಿಣಾಮವನ್ನು ಬೀರಿದೆ. ತುರ್ತು ಕಾರಣಗಳಿಗಾಗಿ ಪ್ರಯಾಣ ಹೊರಟ ಜನಸಾಮಾನ್ಯರನ್ನು ಕಂಗೆಡಿಸಿದ್ದು ಪಕ್ಕಕ್ಕಿರಲಿ. ವೈಮಾನಿಕ ಕ್ಷೇತ್ರಗಳು ಆರ್ಥಿಕ ಸಂಬಂಧಗಳ ಸೇತುವೆಗಳಾಗಿವೆ. ಭಾರತ ವಿಮಾನಯಾನದ ಈ ದಯನೀಯ ಸ್ಥಿತಿಯು ಬಂಡವಾಳ ಹೂಡಿಕೆದಾರರನ್ನು ಹಿಂದಕ್ಕೆ ಹೆಜ್ಜೆ ಇಡುವಂತೆ ಮಾಡಿದೆ. ವಿಮಾನಯಾನ ಕ್ಷೇತ್ರದಲ್ಲಿ ಭಾರೀ ಸುಧಾರಣೆಗಳನ್ನು ಮಾಡಿದ್ದೇವೆ ಎಂದು ಹೇಳುತ್ತಾ ಬಂದಿರುವ ಪ್ರಧಾನಿ ಮೋದಿಯವರ ಮಾತುಗಳ ಅಸಲಿಯತ್ತು ಬಯಲಾಗಿದೆ. ವಿಮಾನಯಾನವೂ ಸೇರಿದಂತೆ ಭಾರತದ ಉದ್ಯಮಗಳು ಬೆರಳೆಣಿಕೆಯ ಕಾರ್ಪೊರೇಟ್ ಸಂಸ್ಥೆಗಳ ಏಕಸ್ವಾಮ್ಯಕ್ಕೆ ಬಲಿಯಾದರೆ ಭಾರತದ ಸ್ಥಿತಿ ಏನಾಗಬಹುದು ಎನ್ನುವುದಕ್ಕೆ ಈ ವೈಮಾನಿಕ ಕ್ಷೇತ್ರದಲ್ಲಿ ಎದುರಾದ ತುರ್ತುಪರಿಸ್ಥಿತಿ ಒಂದು ಉದಾಹರಣೆಯಾಗಿದೆ.







