ದೇಶದ ರೈತರನ್ನು ಸಮಸ್ಯೆಯಾಗಿ ಕಾಡುತ್ತಿರುವ ನಕಲಿ ಗೋರಕ್ಷಕರು

ಸಾಂದರ್ಭಿಕ ಚಿತ್ರ (PTI)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಗೋ ಹತ್ಯೆ, ಗೋಮಾಂಸ ಸೇವನೆಯ ಬಗ್ಗೆ ಬಿಜೆಪಿಯೊಳಗಿರುವ ಗೊಂದಲ, ದ್ವಂದ್ವಗಳು ಇಂದು ನಿನ್ನೆಯದಲ್ಲ. ರಾಜ್ಯದಿಂದ ರಾಜ್ಯಕ್ಕೆ ಗೋಮಾಂಸಾಹಾರದ ಬಗ್ಗೆ ಅದರ ನಿಲುವುಗಳು ಬದಲಾಗುತ್ತಾ ಹೋಗುತ್ತವೆೆ. ಕೇರಳ, ಗೋವಾ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ನಾಯಕರು ಗೋಮಾಂಸವನ್ನು ಬಹಿರಂಗವಾಗಿ ಬೆಂಬಲಿಸುತ್ತಾರೆ. ದೇಶದ ಒಳಗೆ ಗೋ ಹತ್ಯೆಯ ಬಗ್ಗೆ ಅತ್ಯಂತ ಕಠಿಣವಾಗಿ ಮಾತನಾಡುವ, ಕಾನೂನುಗಳನ್ನು ಕೈಗೆತ್ತಿಕೊಳ್ಳುವ ಸಂಘಪರಿವಾರ ಗೂಂಡಾಗಳು ವಿದೇಶಗಳಿಗೆ ರಫ್ತಾಗುವ ಗೋಮಾಂಸದ ಬಗ್ಗೆ ಜಾಣ ಕುರುಡರೂ, ಕಿವುಡರೂ ಆಗಿದ್ದಾರೆ. ಒಂದು ವೇಳೆ ವಿದೇಶಕ್ಕೆ ರಫ್ತಾಗುವ ಗೋಮಾಂಸವನ್ನು ತಡೆಯಲು ಮುಂದಾದರೆ ಈ ನಕಲಿ ಗೋರಕ್ಷಕರ ವಿರುದ್ಧ ಕೇಂದ್ರ ಸರಕಾರವೇ ಖುದ್ದಾಗಿ ರಂಗಕ್ಕಿಳಿದು ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ. ಸದ್ಯಕ್ಕೆ ಸಂಘಪರಿವಾರ ಮತ್ತು ಬಿಜೆಪಿಯ ಗೋಹತ್ಯೆ ರಾಜಕೀಯದಿಂದ, ನೇರ ದುಷ್ಪರಿಣಾಮಗಳನ್ನು ಅನುಭವಿಸುತ್ತಿರುವುದು ದೇಶದೊಳಗಿರುವ ರೈತರು ಮತ್ತು ಇಲ್ಲಿನ ಸಣ್ಣ ವ್ಯಾಪಾರಿಗಳಾಗಿರುವುದರಿಂದ ಸರಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ರಾಜಕೀಯವಾಗಿ ಲಾಭದಾಯಕವಾಗುವ ರೀತಿಯಲ್ಲಿ ಗೋಮಾಂಸದ ವಿರುದ್ಧ ಸ್ಥಳಕ್ಕೆ ತಕ್ಕಂತೆ ಮಾತನಾಡುತ್ತಾ ಬಂದಿದೆ. ದೇಶದೊಳಗೆ ಗೋವುಗಳ ಮಾರಾಟ, ಸಾಗಾಟ ಇತ್ಯಾದಿಗಳಿಗೆ ಹತ್ತು ಹಲವು ತೊಡಕುಗಳು, ಆತಂಕಗಳು ಇರುವುದನ್ನು ಪರೋಕ್ಷವಾಗಿ ಈ ಬೃಹತ್ ಉದ್ಯಮಿಗಳು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಇವರ ಮಾಂಸ ಸಂಸ್ಕರಣಾ ಘಟಕಗಳಿಗೆ ಅಗ್ಗದ ಬೆಲೆಯಲ್ಲಿ ಜಾನುವಾರುಗಳು ಪೂರೈಕೆಯಾಗುತ್ತವೆ. ಇದೇ ಸಂದರ್ಭದಲ್ಲಿ ಜಾನುವಾರುಗಳನ್ನು ಸಾಕಿದ ರೈತರಿಗೆ ಅನುಕೂಲವಾಗುವ ಬದಲು ನಷ್ಟವೇ ಹೆಚ್ಚು. ಗೋವುಗಳ ಜೊತೆಗೆ ಯಾವ ನಂಟೂ ಇಲ್ಲದ ನಕಲಿ ಗೋರಕ್ಷಕರೂ ರೈತರ ಅನುಪಯುಕ್ತ ಗೋವುಗಳಿಂದ ಲಾಭ ಮಾಡಿಕೊಳ್ಳುತ್ತಿದ್ದಾರೆ. ಒಂದೆಡೆ ಸರಕಾರ ಅನುಪಯುಕ್ತ ಗೋವುಗಳನ್ನು ಸಾಕುವ ಗೋಶಾಲೆಗಳಿಗೆ ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ಅನುದಾನ ನೀಡುತ್ತಿದೆ. ಇದೇ ಸಂದರ್ಭದಲ್ಲಿ ಗೋಶಾಲೆಗಳಲ್ಲಿ ಭಾರೀ ಅಕ್ರಮಗಳು ನಡೆಯುತ್ತಿದ್ದು, ಇಲ್ಲಿಂದಲೇ ಮಾಂಸ ಸಂಸ್ಕರಣಾ ಘಟಕಗಳಿಗೆ ಗೋವುಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತದೆ ಎಂಬ ಆರೋಪಗಳನ್ನು ಹಲವು ಬಿಜೆಪಿ ನಾಯಕರೇ ಮಾಡಿದ್ದಾರೆ. ಇಸ್ಕಾನ್ ಸಂಸ್ಥೆಯು ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗಳಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಈ ಹಿಂದೆ ಬಿಜೆಪಿ ನಾಯಕಿ ಮೇನಕಾ ಗಾಂಧಿ ಆರೋಪ ಮಾಡಿದ್ದರು. ಅವರ ವಿರುದ್ಧ ಇಸ್ಕಾನ್ ಮಾನನಷ್ಟ ಮೊಕದ್ದಮೆಯನ್ನು ಕೂಡ ಹೂಡಿತ್ತು.
ಇದೀಗ ಮಹಾರಾಷ್ಟ್ರದಲ್ಲಿ ಇನ್ನೋರ್ವ ಬಿಜೆಪಿಯ ಹಿರಿಯ ನಾಯಕ, ಮಾಜಿ ಸಚಿವ ಸದಾಶಿವ ಖೋತ್ ನಕಲಿ ಗೋರಕ್ಷಕರಿಂದ ರೈತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಧ್ವನಿಯೆತ್ತಿದ್ದಾರೆ. ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆಯ ಹೆಸರಿನಲ್ಲಿ ರೈತರಿಗೆ ನೀಡುತ್ತಿರುವ ಕಿರುಕುಳಗಳ ಬಗ್ಗೆ ಈ ಹಿಂದೆ ಹಲವು ಬಾರಿ ಧ್ವನಿಯೆತ್ತಿದ್ದ ಸದಾಶಿವ ಖೋತ್ ಅವರು, ‘ಈ ಕಾನೂನು ಕೃಷಿ ಆರ್ಥಿಕತೆಗೆ ಅತಿ ದೊಡ್ಡ ಬೆದರಿಕೆಯಾಗಿದೆ. ಇದಕ್ಕೆ ತಿದ್ದು ಪಡಿಗಳ ಅಗತ್ಯವಿದೆ’ ಎಂದು ವಾದಿಸುತ್ತಾ ಬಂದವರು. 2016ರಲ್ಲಿ ಬಿಜೆಪಿ ಬೆಂಬಲದೊಂದಿಗೆ ಮೊದಲ ಬಾರಿ ಶಾಸಕರಾಗಿದ್ದ ಇವರು, ಫಡ್ನವೀಸ್ ಅವರ ಮೊದಲ ಅಧಿಕಾರಾವಧಿಯಲ್ಲಿ ಕೃಷಿ ಸಚಿವರೂ ಆಗಿದ್ದುದರಿಂದ ನಕಲಿ ಗೋರಕ್ಷಕರ ಬಗ್ಗೆ ಇವರ ಆಕ್ರೋಶಕ್ಕೆ ಮಹತ್ವ ಬಂದಿದೆ. ರಾಜ್ಯದ ಸಾಂಗ್ಲಿ ಜಿಲ್ಲೆಗೆ ಸೇರಿದ ಖೋತ್ ಕಳೆದ 30 ವರ್ಷಗಳಿಂದಲೂ ಕೃಷಿ ಸಮಸ್ಯೆಗಳ ಬಗ್ಗೆ ಮಾತನಾಡುತ್ತಾ ಬಂದಿದ್ದಾರೆ. ಇದೀಗ ಅವರು ‘‘ಮಹಾರಾಷ್ಟ್ರದಲ್ಲಿ ನಕಲಿ ಗೋರಕ್ಷಕರ ಲಾಬಿಯು ರೈತರಿಗೆ ಕಿರುಕುಳ ನೀಡುತ್ತಿದೆ’’ ಎಂದು ಸ್ಪಷ್ಟ ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವುದು ಬಿಜೆಪಿಗೆ ಮುಜುಗರ ಉಂಟಾಗಿದೆ. ಖೋತ್ ಅವರ ಪ್ರಕಾರ, ‘ಜಾನುವಾರುಗಳಿಗೆ ಮೇವು ಒದಗಿಸಲು ದಿನಕ್ಕೆ 300 ರೂ. ವೆಚ್ಚವಾಗುತ್ತದೆ. ಅವು ಹಾಲು ನೀಡಲು ಆರಂಭಿಸಿದ ಬಳಿಕ ಪ್ರತಿ ದಿನ 15 ಲೀ. ಹಾಲು ಉತ್ಪಾದನೆಯನ್ನು ಪರಿಗಣಿಸಿದರೆ ಪ್ರತಿ ಲೀ.ಗೆ 35 ರೂ. ದರದಲ್ಲಿ ಅವುಗಳಿಂದ ಪ್ರತಿದಿನ 450 ರೂ. ಆದಾಯ ಲಭಿಸುತ್ತದೆ. ಅದು ಹಾಲು ನೀಡುವುದನ್ನು ನಿಲ್ಲಿಸಿದ ಬಳಿಕ ಅದಕ್ಕಾಗಿ ಮಾಡುವ ವೆಚ್ಚವು ನಿಷ್ಕ್ರಿಯ ಹೂಡಿಕೆಯಾಗುತ್ತದೆ ಮತ್ತು ಯಾವುದೇ ಪ್ರತಿಫಲವನ್ನು ನೀಡುವುದಿಲ್ಲ. ಹೀಗಾಗಿ ಅವುಗಳನ್ನು ಮಾರುವುದು ಬಿಟ್ಟು ರೈತರಿಗೆ ಅನ್ಯ ಮಾರ್ಗವಿಲ್ಲ’ ಎಂದು ಖೋತ್ ಅಭಿಪ್ರಾಯ ಪಡುತ್ತಾರೆ. ‘‘ರೈತರು ಜಾನುವಾರನ್ನು ಸ್ಥಿರ ಠೇವಣಿಯಾಗಿ ಪರಿಗಣಿಸುತ್ತಾರೆ. ಅವು ಪ್ರೌಢ ವಯಸ್ಸಿಗೆ ಬಂದ ಬಳಿಕ ಮಾರಾಟ ಮಾಡಿ ತನ್ನ ಹೂಡಿಕೆಯ ಮೇಲೆ ಲಾಭ ಗಳಿಸುತ್ತಾರೆ ಅಥವಾ ಇತರ ಗೋವುಗಳ ಸಾಕಣೆಯ ವೆಚ್ಚಕ್ಕೆ ಅದನ್ನು ಬಳಸಿಕೊಳ್ಳುತ್ತಾರೆ. ಆದರೆ ನಕಲಿ ಗೋರಕ್ಷಕರಿಂದಾಗಿ ಇಂತಹ ಮಾರಾಟಕ್ಕೆ ಈಗ ಹೊಡೆತ ಬಿದ್ದಿದೆ’’ ಎನ್ನುವುದು ಬಿಜೆಪಿಯ ಈ ನಾಯಕನ ಆಕ್ರೋಶವಾಗಿದೆ.
ಸದ್ಯಕ್ಕೆ ಜಾನುವಾರು ರಕ್ಷಣಾ ಕಾಯ್ದೆಯಿಂದಾಗಿ ಲಾಭ ಮಾಡಿಕೊಳ್ಳುತ್ತಿರುವುದು ಗೋವುಗಳ ಸಾಕಣೆಯಲ್ಲಿ ಯಾವ ಪಾತ್ರವನ್ನು ನಿರ್ವಹಿಸದ ನಕಲಿ ಗೋರಕ್ಷಕರು. ಇವರು ರೈತರ ಗೋವುಗಳನ್ನು ಮಾರಾಟ ಮಾಡಲು ಮಧ್ಯವರ್ತಿಯಾಗುತ್ತಿದ್ದಾರೆ. ಮಾರಾಟ ಮಾಡುವ ರೈತರು ಇವರ ಮೂಲಕವೇ ವ್ಯಾಪಾರಿಗಳಿಗೆ, ಕಸಾಯಿಗಳಿಗೆ ಮಾರಬೇಕಾದ ಅನಿವಾರ್ಯ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ತಮ್ಮ ಗೋವುಗಳನ್ನು ಮಾರಾಟ ಮಾಡಲು ರೈತರು ಸ್ವಯಂ ಮುಂದಾದರೆ ಅವರ ಮೇಲೆ ದಾಳಿ ನಡೆಸುತ್ತಾರೆ. ವ್ಯಾಪಾರಿಗಳೂ ರೈತರಿಂದ ಗೋವುಗಳನ್ನು ನೇರವಾಗಿ ಕೊಂಡುಕೊಳ್ಳಲು ಈ ಕಾರಣದಿಂದ ಅಂಜುತ್ತಾರೆ. ಕಸಾಯಿ ಖಾನೆಗಳಂತೂ ಈ ನಕಲಿ ಗೋರಕ್ಷಕರಿಗೆ ಹಫ್ತ್ತಾ ನೀಡುವುದು ಅನಿವಾರ್ಯವಾಗಿ ಬಿಟ್ಟಿದೆ. ಒಟ್ಟಿನಲ್ಲಿ ಗೋರಕ್ಷಕರ ವೇಷದಲ್ಲೇ ಇವರು ರೈತರು ಮತ್ತು ಕಸಾಯಿಗಳ ನಡುವಿನ ಮಧ್ಯವರ್ತಿಗಳಾಗಿ ದುಡ್ಡು ಮಾಡುತ್ತಿದ್ದಾರೆ. ಇನ್ನೊಂದೆಡೆ ಅನುಪಯುಕ್ತ ಗೋವುಗಳನ್ನು ಸಾಕುತ್ತೇವೆ ಎಂದು ಗಲ್ಲಿಗಲ್ಲಿಗಳಲ್ಲಿ ಗೋಶಾಲೆಗಳನ್ನು ನಿರ್ಮಿಸಿ ಸರಕಾರ ನೀಡುವ ಅನುದಾನಗಳನ್ನು ದೋಚಲಾಗುತ್ತಿದೆ. ಈ ಗೋಶಾಲೆಗಳಲ್ಲಿರುವ ಅನುಪಯುಕ್ತ ಗೋವುಗಳ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಗೋಶಾಲೆಗಳು ಶುಲ್ಕ ವಸೂಲಿ ಮಾಡುವ ಕಾರಣದಿಂದ ರೈತರು ತಾವು ಸಾಕಿದ ಅನುಪಯುಕ್ತ ದನಗಳನ್ನು ಅನಿವಾರ್ಯವಾಗಿ ರಸ್ತೆಗಳಲ್ಲಿ ಬಿಡುತ್ತಿದ್ದಾರೆ. ಹಾಗೆಯೇ ಬೃಹತ್ ಮಾಂಸ ಸಂಸ್ಕರಣಾ ಘಟಕಗಳಿಗೆ ರೈತರ ಗೋವುಗಳು ಅತ್ಯಂತ ಕಡಿಮೆ ದರದಲ್ಲಿ ಪೂರೈಕೆ ಮಾಡುವ ಅಡ್ಡೆಯಾಗಿಯೂ ಗೋಶಾಲೆಗಳು ಪರಿವರ್ತನೆಯಾಗುತ್ತಿದೆ. ಗೋಶಾಲೆಗಳನ್ನುವುದು ಅಕ್ರಮಗಳ ಗೂಡಾಗಿವೆ. ವಿದೇಶಗಳಲ್ಲಿ ಭಾರತದಿಂದ ರಫ್ತಾದ ಗೋಮಾಂಸಗಳು ಅತ್ಯುತ್ಕೃಷ್ಟ ಆಹಾರವಾಗಿ ದುಬಾರಿ ದರದಲ್ಲಿ ಮಾರಾಟವಾಗುತ್ತವೆೆ. ವಿದೇಶಗಳಿಗೆ ಅತಿ ಹೆಚ್ಚು ಮಾಂಸವನ್ನು ಪೂರೈಕೆ ಮಾಡುವ ಭಾರತದಲ್ಲಿ ಜನರು ಅಪೌಷ್ಟಿಕತೆಯಿಂದ ನರಳುವ ಸ್ಥಿತಿಯಿದೆ.
ಮಹಾರಾಷ್ಟ್ರದಲ್ಲಿ ಜಾನುವಾರು ವ್ಯಾಪಾರಿಗಳು ಮತ್ತು ಸಾಂಪ್ರದಾಯಿಕ ಕಸಾಯಿಗಳು ಒಂದು ತಿಂಗಳಿಗೂ ಅಧಿಕ ಸಮಯದಿಂದ ನಕಲಿ ಗೋರಕ್ಷಕರ ವಿರುದ್ಧ ಮುಷ್ಕರ ನಡೆಸುತ್ತಿದ್ದಾರೆ. ಇದು ರೈತರ ಮೇಲೆ ತೀವ್ರ ದುಷ್ಪರಿಣಾಮ ಬೀರಿದೆ. ರೈತರು ತಮ್ಮ ಗೋವುಗಳನ್ನು ಮಾರಾಟ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಇದೀಗ ಅವರ ಮುಷ್ಕರಕ್ಕೆ ರೈತರು ಕೂಡ ಜೊತೆಯಾಗಿದ್ದಾರೆ. ತಮ್ಮ ಗೋವುಗಳನ್ನು ಯಾರಿಗೆ ಮಾರಾಟ ಮಾಡಬೇಕು ಎನ್ನುವ ಹಕ್ಕನ್ನು ತಮಗೇ ಮರಳಿಸಬೇಕು ಎಂದು ರೈತರೇ ಆಗ್ರಹಿಸ ತೊಡಗಿದ್ದಾರೆ. ಬಿಜೆಪಿಯ ಮಾಜಿ ಸಚಿವ ಸದಾಶಿವ ಖೋತ್ ಅವರಿಗೆ ಜೊತೆಯಾಗಿದ್ದಾರೆ. ಸರಕಾರ ಜಾನುವಾರು ರಕ್ಷಣಾ ಕಾಯ್ದೆಯನ್ನು ದೇಶಾದ್ಯಂತ ಸರಳಗೊಳಿಸಿ ರೈತರನ್ನು ಮತ್ತು ವ್ಯಾಪಾರಿಗಳನ್ನು ನಕಲಿ ಗೋರಕ್ಷಕರಿಂದ ರಕ್ಷಿಸಿ ಹೈನೋದ್ಯಮ ಸಹಿತ ದೇಸೀ ಆರ್ಥಿಕ ಚಟುವಟಿಕೆಗಳನ್ನು ಸುಗಮವಾಗಿಸಬೇಕು. ಇದು ಈ ದೇಶದ ಜನರ ಆಹಾರದ ಹಕ್ಕಿನ ಪ್ರಶ್ನೆಯೂ ಆಗಿದೆ. ಇದೇ ಸಂದರ್ಭದಲ್ಲಿ ಪರವಾನಿಗೆಯಿಲ್ಲದೆ ಅಕ್ರಮವಾಗಿ ಗೋಸಾಗಣೆ ಮಾಡುವವರು ಮತ್ತು ಗೋಕಳ್ಳರ ವಿರುದ್ಧವೂ ಸರಕಾರ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಕಾನೂನು ರೂಪಿಸಬೇಕು. ಎಲ್ಲ ಗೋಶಾಲೆಗಳನ್ನು ಮುಚ್ಚಿ, ಅದಕ್ಕೆ ನೀಡುವ ಅನುದಾನಗಳನ್ನು ಗೋವುಗಳನ್ನು ಸಾಕುವ ಅಸಲಿ ರೈತರಿಗೆ ಸಬ್ಸಿಡಿಯಾಗಿ ನೀಡಬೇಕು. ಈ ನಿಟ್ಟಿನಲ್ಲಿ ಸರಕಾರ ತನ್ನದೇ ಪಕ್ಷದ ನಾಯಕರ ಮಾತುಗಳಿಗೆ ಕಿವಿಯಾಗಬೇಕಾಗಿದೆ. ಗೋಮಾಂಸದ ಬಳಕೆಯ ಬಗ್ಗೆ ಕೇಂದ್ರ ಸರಕಾರ ತನ್ನ ದ್ವಂದ್ವವನ್ನು ಬದಿಗಿಟ್ಟು ನಕಲಿ ಗೋರಕ್ಷಕರಿಂದ ರೈತರನ್ನು, ವ್ಯಾಪಾರಿಗಳನ್ನು ರಕ್ಷಿಸಲು ಮುಂದಾಗಬೇಕು.







