ಪ್ರಾಣ ಘಾತುಕ ರಸ್ತೆ ಅಪಘಾತಗಳು

ಸಾಂದರ್ಭಿಕ ಚಿತ್ರ PC: freepik
ನಮ್ಮ ಕರ್ನಾಟಕ ಮಾತ್ರವಲ್ಲ, ದೇಶದ ಅನೇಕ ಕಡೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಿವೆ. ಸರಕಾರ ಎಷ್ಟೇ ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ ರಸ್ತೆ ಅಪಘಾತಗಳಲ್ಲಿ ಸಾಯುತ್ತಿರುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ. ರಸ್ತೆ ಅಪಘಾತ ಸಾವುಗಳು ಹೆಚ್ಚುತ್ತಿರುವ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಮಂತ್ರಿ ನಿತಿನ್ ಗಡ್ಕರಿ ಅವರು ಆಗಾಗ ಕಳವಳವನ್ನು ವ್ಯಕ್ತಪಡಿಸುತ್ತಲೇ ಇದ್ದಾರೆ. ವಾಸ್ತವ ಸಂಗತಿಯೆಂದರೆ ಕೊರೋನ ವೈರಾಣುನಿಂದ ಸಾವಿಗೀಡಾದವರಿಗಿಂತ ರಸ್ತೆ ಅಪಘಾತಗಳಲ್ಲಿ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಜಾಗತಿಕ ವಾಹನ ಚಾಲನಾ ಶಿಕ್ಷಣ ಕಂಪೆನಿಯೊಂದು ನಡೆಸಿದ ಸಮೀಕ್ಷೆಯ ವರದಿಯ ಪ್ರಕಾರ ಜಗತ್ತಿನಲ್ಲಿ ಅಪಾಯಕಾರಿ ರಸ್ತೆಗಳನ್ನು ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ.
ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಒಳನಾಡಿನ ರಸ್ತೆಗಳು ಈಗ ಸಾಕಷ್ಟು ಸುಧಾರಿಸಿವೆ. ಈಗ ಎಲ್ಲೆಡೆ ಸುಸಜ್ಜಿತ ಚತುಷ್ಪಥ ರಸ್ತೆಗಳಿವೆ. ಆದರೆ ಅಪಘಾತಗಳು ಹೆಚ್ಚಾಗುತ್ತಲೇ ಇವೆ. ಇದರಿಂದ ಬೆಳಕಿಗೆ ಬಂದ ಇನ್ನೊಂದು ಸಂಗತಿಯೆಂದರೆ ಅಪಘಾತಗಳಿಗೆ ರಸ್ತೆಗಳು ಮಾತ್ರವಲ್ಲ, ಬಹುತೇಕ ವಾಹನ ಚಾಲಕರು ರಸ್ತೆ ನಿಯಮಗಳನ್ನು ಉಲ್ಲಂಘಿಸುತ್ತಿರುವುದು ಕೂಡ ಕಾರಣವಾಗಿದೆ. ಇದರ ಪರಿಣಾಮವಾಗಿ ಅಪಘಾತಗಳು ಹೆಚ್ಚಾಗುತ್ತಲೇ ಇವೆ.ರಸ್ತೆ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಹಾಕಿ ಎಚ್ಚರಿಕೆ ನೀಡಿದರೂ ಹೆಚ್ಚಿನ ಪ್ರಯೋಜನವಾಗಿಲ್ಲ. ಇದರಿಂದಾಗಿ ಸರಕಾರ ಇನ್ನೊಂದು ಕ್ರಮವನ್ನು ಕೈಗೊಳ್ಳಲು ಮುಂದಾಗಿದೆ. ದೇಶದಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರನ್ನು ನಿಯಂತ್ರಿಸಲು ಅಂಕ ಆಧಾರಿತ ದಂಡ ಪದ್ಧತಿಯನ್ನು ಜಾರಿಗೆ ತರಲು ಕ್ರಮ ಕೈಗೊಂಡಿದೆ. ಪ್ರತೀ ಸಲ ಸಂಚಾರ ನಿಯಮಗಳನ್ನು ಉಲ್ಲಂಘಿಸಿದಾಗ ಚಾಲನಾ ಪರವಾನಿಗೆಯಿಂದ ನಿರ್ದಿಷ್ಟ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಒಬ್ಬ ಚಾಲಕನು ಗರಿಷ್ಠ ಮಿತಿಯನ್ನು ಮೀರಿದರೆ ತಕ್ಷಣ ಅವನ ವಾಹನ ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ.
ಮದ್ಯ ಸೇವಿಸಿ ವಾಹನ ಚಲಾಯಿಸುವುದು ಹಾಗೂ ಅತಿ ವೇಗವಾಗಿ ವಾಹನ ಚಾಲನೆ ಮಾಡುವುದು ಮುಂತಾದ ಅಪರಾಧಗಳಿಗಾಗಿ ಹೆಚ್ಚಿನ ಅಂಕಗಳನ್ನು ಕಡಿತಗೊಳಿಸಲಾಗುತ್ತದೆ. ಈ ಹೊಸ ಕ್ರಮಗಳಿಂದ ವಾಹನ ಅಪಘಾತಗಳ ಸಂಖ್ಯೆ ಕಡಿಮೆಯಾಗುವುದೇ ಎಂಬುದನ್ನು ಕಾದುನೋಡಬೇಕಾಗಿದೆ. ರಸ್ತೆ ಅಪಘಾತಗಳಿಗೆ ಒಂದೆರಡು ಕಾರಣಗಳಲ್ಲ, ಹಲವಾರು ಕಾರಣಗಳಿವೆ. ವೇಗದ ವಾಹನ ಚಾಲನೆ, ಅಜಾಗರೂಕತೆಯ ಚಾಲನೆ, ಸಿಗ್ನಲ್ ಜಂಪ್ ಮಾಡುವುದು, ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡುವುದು ಇತ್ಯಾದಿ ಲೋಪಗಳು ಹೆಚ್ಚಾಗುತ್ತಿರುವುದು ಕೂಡಾ ಅಪಘಾತಗಳಿಗೆ ಕಾರಣವಾಗಿವೆ. ಹೀಗಾಗಿ ಹೊಸದಾಗಿ ಜಾರಿಗೆ ತರಲಿರುವ ಕಠಿಣವಾದ ಸಂಚಾರ ನಿಯಮದ ಪರಿಣಾಮವಾಗಿ ಅಪಘಾತಗಳ ಸಂಖ್ಯೆ ಕಡಿಮೆಯಾಗಬಹುದೆಂದು ನಿರೀಕ್ಷಿಸಲಾಗಿದೆ.
ರಾಜ್ಯದಲ್ಲೂ ಇತ್ತೀಚೆಗೆ ರಸ್ತೆ ಅಪಘಾತಗಳು ಹೆಚ್ಚಾಗುತ್ತಲೇ ಇವೆ. ಇದಕ್ಕೆ ಇನ್ನೊಂದು ಕಾರಣವೆಂದರೆ ರಸ್ತೆಗಳಲ್ಲಿ ಆಗಾಗ ಒಳಚರಂಡಿ ಇತ್ಯಾದಿ ಕಾಮಗಾರಿಗಳಿಗೆ ಹೊಂಡತೆಗೆದು ಸಮರ್ಪಕವಾಗಿ ಅದನ್ನು ಮುಚ್ಚದಿರುವುದು. ಇಂತಹ ರಸ್ತೆಗಳಲ್ಲಿ ದ್ವಿಚಕ್ರ ವಾಹನ ಸವಾರರು ಸಮತೋಲನ ಕಳೆದುಕೊಳ್ಳುವುದರಿಂದಾಗಿ ಅಪಘಾತಗಳಾಗುತ್ತ್ತವೆೆ. ಇದರ ಜೊತೆಗೆ ಅವೈಜ್ಞಾನಿಕ ರಸ್ತೆ ವಿನ್ಯಾಸಗಳು ಹಾಗೂ ಸರಿಯಾದ ಫಲಕಗಳಿಲ್ಲದಿರುವುದು ವಾಹನ ಚಾಲಕರನ್ನು ಗೊಂದಲಕ್ಕೀಡು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸರಕಾರದ ಕಠಿಣ ನಿಯಮಾವಳಿಗಳು ಒಂದಿಷ್ಟು ಪ್ರಯೋಜನಕಾರಿಯಾಗಿವೆ. ನಿಯಮ ಉಲ್ಲಂಘಿಸುವ ವಾಹನ ಚಾಲಕರು ದಂಡಕ್ಕೆ ಹೆದರುವುದಿಲ್ಲ, ಆದರೆ ಡಿ.ಎಲ್.(ವಾಹನ ಚಾಲನಾ ಪರವಾನಿಗೆ ಪತ್ರ) ಕಳೆದುಕೊಳ್ಳಬಹುದು ಎಂಬ ಭಯದಿಂದ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸಲು ಇನ್ನಾದರೂ ಮುಂದಾಗಬಹುದು.
ಈಗ ನಗರ ಪ್ರದೇಶಗಳಲ್ಲಿ ಅಳವಡಿಸಲಾಗುವ ಕೃತಕ ಬುದ್ಧಿಮತ್ತೆ (ಎಐ) ಆಧರಿತ ಕ್ಯಾಮರಾ ತಾನಾಗಿಯೇ ವಾಹನದ ನಂಬರ್ ಪ್ಲೇಟ್ಗಳನ್ನು ಗುರುತಿಸಿ ತಪ್ಪಿತಸ್ಥ ವಾಹನ ಚಾಲಕರ ಲೈಸನ್ಸ್ಗೆ ಅಂಕಗಳನ್ನು ಸೇರಿಸುತ್ತದೆ. ಆದ್ದರಿಂದ ಇನ್ನು ಮುಂದೆ ರಸ್ತೆಯಲ್ಲಿ ಪೊಲೀಸರು ಇರಲಿ, ಇಲ್ಲದಿರಲಿ ರಸ್ತೆ ನಿಯಮಗಳನ್ನು ಪಾಲಿಸುವುದು ಕಡ್ಡಾಯ ಮಾತ್ರವಲ್ಲ, ಅನಿವಾರ್ಯವಾಗುತ್ತದೆ. ಸರಕಾರ ಇಂತಹ ರಸ್ತೆ ನಿಯಮಾವಳಿಗಳನ್ನು ರೂಪಿಸಿದರೆ ಸಾಲದು, ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಾಗಿದೆ.
ಹೆಚ್ಚುತ್ತಿರುವ ರಸ್ತೆ ಅಪಘಾತಗಳಿಗೆ ವಾಹನ ಚಾಲಕರು ಮಾತ್ರ ಕಾರಣವೆಂದರೆ ತಪ್ಪಾಗುತ್ತದೆ. ನಮ್ಮ ಮಹಾನಗರಗಳು ಹಾಗೆಯೇ ಸಣ್ಣಪುಟ್ಟ ಪಟ್ಟಣಗಳಲ್ಲಿ ಕಳಪೆಯಾದ ರಸ್ತೆ ನಿರ್ವಹಣೆ, ಕಿತ್ತು ಹೋದ ಡಾಂಬರು, ಅವೈಜ್ಞಾನಿಕ ಜಾಮರ್ಗಳು, ಅಸುರಕ್ಷಿತ ತಿರುವುಗಳು, ದಾರಿ ತುಂಬಾ ಜೀವ ತೆಗೆಯುವ ಗುಂಡಿಗಳು, ಪಾದಚಾರಿ ಮಾರ್ಗದ ಒತ್ತುವರಿ, ಏಕಾಏಕಿ ರಸ್ತೆಗೆ ನುಗ್ಗುವ ಪಾದಚಾರಿಗಳು ಹೀಗೆ ನಾನಾ ಕಾರಣಗಳಿವೆ. ಇದರ ಜೊತೆಗೆ ಬೇಕಾಬಿಟ್ಟಿ ವಾಹನ ಚಾಲನೆ, ಎಲ್ಲ ಸೇರಿ ಅಪಘಾತಗಳು ಸಂಭವಿಸುತ್ತಿವೆ.
ರಸ್ತೆ ಅಪಘಾತಗಳಿಗೆ ಇದಲ್ಲದೆ ಇನ್ನೂ ಒಂದು ಮುಖ್ಯ ಕಾರಣವಿದೆ. ಜನರ ಅಗತ್ಯಕ್ಕಿಂತ ಹೆಚ್ಚು ವಾಹನಗಳು ರಸ್ತೆಗಿಳಿಯುತ್ತಿರುವುದು ಕೂಡ ರಸ್ತೆ ಅಪಘಾತಗಳಿಗೆ ಕಾರಣವಾಗಿದೆ. ನಗರಗಳಲ್ಲಿ ಮೂವರು ಸದಸ್ಯರನ್ನು ಹೊಂದಿರುವ ಕುಟುಂಬಗಳಲ್ಲಿ ಮೂರ್ನಾಲ್ಕು ಕಾರುಗಳು, ಮೂರ್ನಾಲ್ಕು ದ್ವಿಚಕ್ರ ವಾಹನಗಳಿರುತ್ತವೆ. ಇದರಿಂದಾಗಿ ರಸ್ತೆಗಳಲ್ಲಿ ವಾಹನ ದಟ್ಟಣೆ ಹೆಚ್ಚಾಗಿ ರಸ್ತೆ ಅಪಘಾತಗಳು ಸಂಭವಿಸುತ್ತವೆ. ಆದ್ದರಿಂದ ಸರಕಾರವು ವಾಹನಗಳ ವಹಿವಾಟಿನ ಮೇಲೆ ಇನ್ನಾದರೂ ನಿಗಾ ಇಡುವುದು ತುರ್ತು ಅಗತ್ಯವಾಗಿದೆ. ಆಟೊಮೊಬೈಲ್ ಉದ್ದಿಮೆಯನ್ನು ಕಾಪಾಡಲು ಜನಸಾಮಾನ್ಯರ ಅಮೂಲ್ಯ ಜೀವವನ್ನು ಬಲಿಕೊಡುವುದು ಸರಿಯಲ್ಲ. ಸಾರ್ವಜನಿಕರು ಕೂಡ ಅಪಘಾತಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಬೇಕಾಗಿದೆ.







