ಶಿಕ್ಷಣದ ಮಹಲಿಗೆ ಬಿದ್ದ ಬೆಂಕಿ!

Photo Credit: PTI
ನೀಟ್ ಅಕ್ರಮದಿಂದಾಗಿ ದೇಶದ ವೈದ್ಯಕೀಯ ಶಿಕ್ಷಣ ಆಕಾಂಕ್ಷಿ ವಿದ್ಯಾರ್ಥಿಗಳ ಬದುಕಿಗೆ ಬೆಂಕಿ ಬಿದ್ದಿರುವ ಹೊತ್ತಿಗೇ, ಉತ್ತರ ಪ್ರದೇಶದ ಲಕ್ನೋದ ಕೋಚಿಂಗ್ ಸೆಂಟರ್ ಕಟ್ಟಡವೊಂದಕ್ಕೆ ಬೆಂಕಿ ಬಿದ್ದಿದ್ದು ವಿದ್ಯಾರ್ಥಿಗಳು ಸಹಿತ 15 ಮಂದಿ ಮೃತಪಟ್ಟಿದ್ದಾರೆ. ಅಗ್ನಿ ದುರಂತಕ್ಕೆ ಸಂಬಂಧಿಸಿ ಲಕ್ನೋಪೊಲೀಸರು ತನಿಖೆ ಆರಂಭಿಸಿದ್ದು, ಕಟ್ಟಡದ ಮಾಲಕರನ್ನು ಬಂಧಿಸಿದ್ದಾರೆ. ದುರಂತಕ್ಕೆ ಸಂಬಂಧಿಸಿ ಉತ್ತರ ಪ್ರದೇಶ ಸರಕಾರವು ಜಂಟಿ ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿದೆ. ಬೆಂಕಿ ಹತ್ತಿಕೊಳ್ಳಲು ಕಾರಣವೇನು ಮತ್ತು ಕಟ್ಟಡದಲ್ಲಿ ಅಗ್ನಿಶಾಮಕ ನಿಯಮಗಳನ್ನು ಗಾಳಿಗೆ ತೂರಲಾಗಿದೆಯೇ ಎಂಬ ಬಗ್ಗೆ ಸಂಪೂರ್ಣ ವರದಿಯನ್ನು ಈ ಸಮಿತಿ ಸರಕಾರಕ್ಕೆ ಸಲ್ಲಿಸಲಿದೆಯಂತೆ. ಪ್ರಾಥಮಿಕ ತನಿಖೆಯಲ್ಲಿ ನಿಮಯಗಳ ಉಲ್ಲಂಘನೆಯೇ ದುರಂತಕ್ಕೆ ಕಾರಣ ಎನ್ನುವುದು ಕಂಡು ಬಂದಿದೆ. ವಸತಿ ಕಟ್ಟಡವಾಗಿ ಅನುಮೋದನೆ ಗೊಂಡ ಸಂಕೀರ್ಣದಲ್ಲಿ ವಾಣಿಜ್ಯ ಮಳಿಗೆಗಳು ಮತ್ತು ಶಿಕ್ಷಣ ಸಂಸ್ಥೆಗಳು ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದವು ಎನ್ನುವ ಪ್ರಶ್ನೆಗಳಿಗೆ ಪೊಲೀಸರು ಉತ್ತರ ಕಂಡುಕೊಳ್ಳುತ್ತಿದ್ದಾರೆ. ಸರಣಿ ಸುರಕ್ಷತಾ ವೈಫಲ್ಯಗಳೇ ಸಾವು ನೋವುಗಳು ಹೆಚ್ಚಾಗುವುದಕ್ಕೆ ಮುಖ್ಯಕಾರಣವಾಗಿದ್ದವು. ಕಟ್ಟಡದಲ್ಲಿ ಯಾವುದೇ ತುರ್ತು ನಿರ್ಗಮನ ದ್ವಾರಗಳಿರಲಿಲ್ಲ. ಮೇಲ್ಛಾವಣಿಗೆ ಹೋಗುವ ದಾರಿಯೂ ಮುಚ್ಚಲ್ಪಟ್ಟಿತ್ತು. ಕಚೇರಿಯ ಪ್ರವೇಶ ದ್ವಾರ ಥಂಬ್ ಇಂಪ್ರೆಶನ್ ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸುತ್ತಿತ್ತು. ಬೆಂಕಿ ಕಾಣಿಸಿಕೊಂಡಂತೆಯೇ ಇಲೆಕ್ಟ್ರಾನಿಕ್ ವ್ಯವಸ್ಥೆ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿತ್ತು. ಆವರಣದಲ್ಲಿ ಅನಧಿಕೃತ ನಿರ್ಮಾಣ ನಡೆದಿರುವ ಆರೋಪಗಳೂ ಇವೆ. ಇಂತಹ ಅಸುರಕ್ಷಿತ ಪ್ರದೇಶದಲ್ಲಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಸೆಂಟರ್ ತೆರೆಯಲು ಅನುಮತಿ ನೀಡಿದವರು ಯಾರು? ಈ ದುರಂತದಲ್ಲಿ ಅವರ ಪಾಲನ್ನು ಗುರುತಿಸಿ ಅವರಿಗೆ ಶಿಕ್ಷೆ ನೀಡುವುದಕ್ಕೆ ಜಂಟಿ ಸಮಿತಿಗೆ ಸಾಧ್ಯವಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ದುರಂತ ನಡೆದ ಬೆನ್ನಿಗೇ ಕಾನ್ಪುರದಲ್ಲಿ ಕಟ್ಟಡ ಮತ್ತು ಸುರಕ್ಷಾ ನಿಯಮಗಳನ್ನು ಉಲ್ಲಂಘಿಸಿದ 22 ಕೋಚಿಂಗ್ ಸೆಂಟರ್ಗಳಿಗೆ ಅಧಿಕಾರಿಗಳು ಬೀಗ ಮುದ್ರೆ ಹಾಕಿದ್ದಾರೆ. ಅಕ್ರಮ ಕೋಚಿಂಗ್ ಸೆಂಟರ್ಗಳನ್ನು ಗುರುತಿಸುವುದಕ್ಕಾಗಿಯೇ ವಿಶೇಷ ತಪಾಸಣಾ ಅಭಿಯಾನವನ್ನು ಆರಂಭಿಸಿದ್ದು, ಫಿಸಿಕ್ಸ್ವಾಲಾ, ವರ್ಕ್ ಸ್ಪೇಸ್, ಮಹೇಂದ್ರರಾಜ್, ಸಂಜೀವ್ ರಾಥೋಡ್ ಕೆಮಿಸ್ಟ್ರಿ ಸೇರಿದಂತೆ 22 ಕೋಚಿಂಗ್ ಸೆಂಟರ್ಗಳನ್ನು ಅಧಿಕಾರಿಗಳು ಮುಚ್ಚಿಸಿದ್ದಾರೆ. ಈ ತಪಾಸಣಾ ಅಭಿಯಾನ ಮುಂದುವರಿದಿದ್ದು ಉತ್ತರ ಪ್ರದೇಶದಲ್ಲಿ ಇನ್ನಷ್ಟು ಅಕ್ರಮ ಕೋಚಿಂಗ್ ಸೆಂಟರ್ಗಳು ಮುಚ್ಚುವ ಸಾಧ್ಯತೆಗಳಿವೆ. ತಕ್ಷಣದ ಸಾರ್ವಜನಿಕ ಆಕ್ರೋಶದಿಂದ ಪಾರಾಗುವುದಕ್ಕಾಗಿ ಜನರ ಕಣ್ಣಿಗೆ ಮಣ್ಣೆರಚಲು ನಡೆಸುತ್ತಿರುವ ಅಭಿಯಾನ ಇದಾಗಿದ್ದರೆ ಮುಚ್ಚಿದಷ್ಟೇ ವೇಗದಲ್ಲಿ ಸೆಂಟರ್ಗಳು ತೆರೆದುಕೊಳ್ಳುತ್ತವೆ. ಸರಕಾರ ನಿಜಕ್ಕೂ ಶಿಕ್ಷಣ ಮತ್ತು ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ಈ ಅಭಿಯಾನವನ್ನು ಆರಂಭಿಸಿದೆಯೇ ಎನ್ನುವುದು ಮುಖ್ಯವಾಗುತ್ತದೆ. ಮುಖ್ಯವಾಗಿ ಲಕ್ನೋ ಅಗ್ನಿ ದುರಂತಕ್ಕೀಡಾದ ಕಟ್ಟಡದ ಮಾಲಕ ಹಿಂದೆ ವೈದ್ಯಕೀಯ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯೊಂದಿಗೆ ಸಂಬಂಧವನ್ನು ಹೊಂದಿದ್ದ ಎನ್ನುವ ಅಂಶವೂ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಈ ವಾಣಿಜ್ಯ ಕಟ್ಟಡದ ಸಹಮಾಲಕ ಸುರೇಂದ್ರ ಶುಕ್ಲಾ ಹಿಂದೆ ಉತ್ತರ ಪ್ರದೇಶದ ಕಂಬೈನ್ಡ್ ಪ್ರಿ-ಮೆಡಿಕಲ್ ಟೆಸ್ಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೊಳಪಟ್ಟಿದ್ದ. ಶುಕ್ಲಾ ತನ್ನ ಪುತ್ರಿಯ ವೈದ್ಯಕೀಯ ಪ್ರವೇಶ ಪರೀಕ್ಷೆಗಾಗಿ ಪ್ರಶ್ನೆ ಪತ್ರಿಕೆ ಸೋರಿಕೆಗೆ ಪಿತೂರಿ ನಡೆಸಿದ್ದ ಎನ್ನುವ ಆರೋಪ ಆತನ ಮೇಲಿತ್ತು.
2026ರ ನೀಟ್ ಪರೀಕ್ಷೆ ಸೋರಿಕೆ ಮತ್ತು ರದ್ದತಿಯ ಬಳಿಕ ಒಂದೇ ತಿಂಗಳಲ್ಲಿ ಸುಮಾರು 15 ಮಂದಿ ನೀಟ್ ಆಕಾಂಕ್ಷಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವು ಬರೇ ಆತ್ಮಹತ್ಯೆಗಳಲ್ಲ, ನಮ್ಮ ಶಿಕ್ಷಣ ವ್ಯವಸ್ಥೆಯ ಮಹಲಿಗೆ ಬಿದ್ದ ಬೆಂಕಿಯಲ್ಲಿ ಉರಿದು ಹೋದ ವಿದ್ಯಾರ್ಥಿಗಳಿವರು. ಶಿಕ್ಷಣದ ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳೆನ್ನುವ ಉರುಳುಗಳನ್ನಿಟ್ಟು ವಿದ್ಯಾರ್ಥಿಗಳನ್ನು ಬಲಿಹಾಕುವ ದಂಧೆಯ ಭಾಗವಾಗಿ ಇಂದು ಕೋಚಿಂಗ್ ಸೆಂಟರ್ಗಳು ವಿಸ್ತರಿಸಿಕೊಂಡಿವೆ. ಶಾಲೆ, ಕಾಲೇಜುಗಳಿಗಿಂತಲೂ ಅತ್ಯಧಿಕ ಮಹತ್ವವನ್ನು ಈ ಸೆಂಟರ್ಗಳು ಪಡೆದುಕೊಳ್ಳುತ್ತಿದ್ದು, ಕೋಟ್ಯಂತರ ಹಣವನ್ನು ವಿದ್ಯಾರ್ಥಿಗಳ ಪೋಷಕರಿಂದ ದೋಚುತ್ತಿವೆ. ತಮ್ಮ ಮಕ್ಕಳು ಹೇಗಾದರೂ ಸರಿ, ಉನ್ನತ ಶಿಕ್ಷಣದಲ್ಲಿ ಸುಲಭದಲ್ಲಿ ಸ್ಥಾನವನ್ನು ಗಿಟ್ಟಿಸಬೇಕು ಎಂದು ದುಡ್ಡು ಸುರಿಯುವ ಪೋಷಕರು, ಬಳಿಕ ವಿದ್ಯಾರ್ಥಿಗಳ ಮೇಲೆ ಹಾಕುವ ಒತ್ತಡಗಳ ಕಾರಣಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಇಂದು ಪೋಷಕರ ದುರಾಸೆಗ ಅಡಿಗಲ್ಲಿನ ಮೇಲೆ ಕಟ್ಟಿ ನಿಲ್ಲಿಸಲ್ಪಟ್ಟ ಈ ಸೆಂಟರ್ಗಳ ಪೂರ್ವಾಪರಗಳನ್ನು ಯಾರೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅದು ಅಕ್ರಮವೋ, ಅಲ್ಲಿ ವಿದ್ಯಾರ್ಥಿಗಳು ಕ್ಷೇಮವಾಗಿ ಓದುವ, ಕಲಿಯುವ ವಾತಾರಣವಿದೆಯೋ ಎನ್ನುವುದು ಯಾರಿಗೂ ಬೇಕಾಗಿಲ್ಲ. ಒಟ್ಟಿನಲ್ಲಿ ಅವರು ನೀಟ್ನಂತಹ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗೆದ್ದರಷ್ಟೇ ಸಾಕು.
ಭಾರತದಲ್ಲಿ ಕೋಚಿಂಗ್ ಸೆಂಟರ್ಗಳಿಗೆ ಯಾವುದೇ ಲಂಗು ಲಗಾಮುಗಳಿಲ್ಲದ ಕಾರಣಕ್ಕೇ, ಇಂದು ಈ ದೇಶದಲ್ಲಿರುವ ಒಟ್ಟು ಕೋಚಿಂಗ್ ಸೆಂಟರ್ಗಳ ಖಚಿತ ಸಂಖ್ಯೆ ಸರಕಾರದ ಬಳಿಯಲ್ಲೂ ಇಲ್ಲ. ಇತ್ತೀಚಿನ ವರದಿಯೊಂದರ ಪ್ರಕಾರ, ಭಾರತದ ಖಾಸಗಿ ಕೋಚಿಂಗ್ ಉದ್ಯಮದ ಮೌಲ್ಯ ಸುಮಾರು 58,000 ಕೋಟಿ ರೂ. ಗೂ ಅಧಿಕ. ಇದು ಮುಂದಿನ ದಿನಗಳಲ್ಲಿ ಒಂದು ಲಕ್ಷ ಕೋಟಿ ರೂ. ದಾಟುವ ನಿರೀಕ್ಷೆಯಿದೆ. ದೇಶಾದ್ಯಂತ ಏಳು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ವಿವಿಧ ರೀತಿಯ ಕೋಚಿಂಗ್ಗಳನ್ನು ಈ ಸಂಸ್ಥೆಗಳಲ್ಲಿ ಪಡೆಯುತ್ತಿದ್ದಾರೆ. ಕೋಚಿಂಗ್ ಉದ್ಯಮವು ಇಲ್ಲಿ ಯಾವುದೇ ನಿಯಮ, ಕಾನೂನುಗಳ ಹಂಗಿಲ್ಲದೆ ಅಸಂಘಟಿತ ವಲಯವಾಗಿ ವಿಸ್ತರಿಸಿಕೊಂಡಿದೆ. ಇತ್ತೀಚೆಗೆ ಬಿಹಾರದ ಪಾಟ್ನಾದಲ್ಲಿ ಜಿಲ್ಲಾಡಳಿತ ನಡೆಸಿದ ದಿಢೀರ್ ಸಮೀಕ್ಷೆಯಲ್ಲಿ ಕೇವಲ ಶೇ. 49 ಕೋಚಿಂಗ್ ಸೆಂಟರ್ಗಳು ಮಾತ್ರ ಅಧಿಕೃತವಾಗಿ ನೋಂದಾಯಿತವಾಗಿದ್ದವು. ಉಳಿದ ಶೇ. 51ರಷ್ಟು ಸಂಸ್ಥೆಗಳು ಯಾವುದೇ ಪರವಾನಗೆ ಇಲ್ಲದೆ ಅನಧಿಕೃತವಾಗಿ ನಡೆಯುತ್ತಿದ್ದವು. ರಾಜಸ್ಥಾನದ ಕೋಟಾ ಎನ್ನುವುದು ಕೋಚಿಂಗ್ ಸೆಂಟರ್ನ ಕೋಟೆ ಎಂದೇ ಗುರುತಿಸಲ್ಪಡುತ್ತಿದೆ. ಇಂದು ಈ ಕೋಚಿಂಗ್ ಮಾಫಿಯಾ ಎಷ್ಟರಮಟ್ಟಿಗೆ ಬೆಳೆದು ಬಿಟ್ಟಿದೆಯೆಂದರೆ, ಈ ಸಂಸ್ಥೆಗಳ ನಡುವಿನ ಸ್ಪರ್ಧೆಗಳು ಹಿಂಸಾಚಾರದವರೆಗೂ ತಲುಪಿವೆ. ಈ ಸ್ಪರ್ಧೆಗೆ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆಯ ಹಿಂದೆಯೂ ಕೋಚಿಂಗ್ ಮಾಫಿಯಾ ಪ್ರಬಲವಾಗಿ ಕೆಲಸ ಮಾಡುತ್ತಿವೆ. ಇದು ಸರಕಾರಕ್ಕೂ ಗೊತ್ತಿಲ್ಲದ ವಿಷಯವೇನೂ ಅಲ್ಲ. ದೇಶಾದ್ಯಂತ ಇರುವ ಕೋಚಿಂಗ್ ಸೆಂಟರ್ಗಳಿಗೆ ಕಡಿವಾಣ ಬಿದ್ದಾಗ ಖಂಡಿತವಾಗಿಯೂ ಪ್ರಶ್ನೆ ಪತ್ರಿಕೆ ಸೋರಿಕೆಗೂ ಒಂದು ಪರಿಹಾರ ದೊರಕೀತೇನೋ. ಲಕ್ನೋದಲ್ಲಿ ಕೋಚಿಂಗ್ ಸೆಂಟರ್ಗೆ ಬಿದ್ದ ಬೆಂಕಿ ದೇಶದ ಶಿಕ್ಷಣದ ಮಹಲಿಗೆ ಬಿದ್ದ ಬೆಂಕಿಯ ಒಂದು ಸಣ್ಣ ಕಿಡಿಯಷ್ಟೇ. ಆ ಒಂದು ಸಣ್ಣ ಕಿಡಿಯನ್ನು ಆರಿಸಿ ಈ ಬೆಂಕಿಯನ್ನು ನಂದಿಸಿದ್ದೇನೆ ಎಂದು ಸರಕಾರ ಘೋಷಿಸಿಕೊಂಡರೆ ಅದಕ್ಕಿಂತ ಮೂರ್ಖತನ ಇನ್ನೊಂದಿಲ್ಲ.






