ಫುಟ್ಬಾಲ್ ವಿಶ್ವಕಪ್: ಕ್ರೀಡೆಯನ್ನೂ ಮೀರಿದ್ದು

Photo Credit : PTI
ಸಮಸ್ತ ಮಾನವ ಕೋಟಿಯ ಗಮನವನ್ನು ಏಕಕಾಲಕ್ಕೆ ಸೆಳೆಯುವ ಚುಂಬಕ ಶಕ್ತಿ ಫುಟ್ಬಾಲ್ ವಿಶ್ವಕಪ್. ಪ್ರಧಾನ ಹಂತದ 104 ಪಂದ್ಯಗಳ ಈ ಸಲದ ಆವೃತ್ತಿಯಲ್ಲಿ 48 ತಂಡಗಳ ಕೆಲವು ಪಂದ್ಯಗಳ ಏಳುಬೀಳುಗಳನ್ನಾದರೂ ಗಮನಿಸದಿರುವ ದೇಶವೇ ಇರಲಿಕ್ಕಿಲ್ಲ. ಜತೆಗೇ ಇಸ್ರೇಲ್ನ ಬಾಂಬು ಮಳೆಗೆ ಸಿಲುಕಿ ನಜ್ಜುಗುಜ್ಜಾಗಿರುವ ಗಾಝಾ ಜನರ ಸ್ಪೇನ್ ಅಭಿಮಾನದ ಅಭಿವ್ಯಕ್ತಿಯನ್ನು ಕೂಡಾ. ತಿಂಗಳ ಹಿಂದಿನಿಂದಲೂ ಗಾಝಾ ಮಕ್ಕಳು ಸ್ಪೇನ್ ಬಾವುಟ ಹಿಡಿದು ಹಾಡುತ್ತಿದ್ದರು, ಓಡಾಡುತ್ತಿದ್ದರು. ಗಾಝಾ ಜನರ ಪಾಲಿನ ಬಾಂಬು ರಕ್ಕಸ ನೆತನ್ಯಾಹು ಇದೇ ವೇಳೆ ಬಿಳಿ ಮತ್ತು ತಿಳಿ ನೀಲಿ ಬಣ್ಣದ ಉದ್ದದ ಪಟ್ಟಿಗಳ ವಿನ್ಯಾಸದ ಜರ್ಸಿಯನ್ನು ಎತ್ತಿ ಹಿಡಿದು ‘ಅರ್ಜೆಂಟೀನಕ್ಕೆ ಈ ಸಲ ಟ್ರೋಫಿ’ ಎನ್ನುತ್ತಲೇ ಇದ್ದರು. ಟ್ರಂಪ್ ಕೂಡಾ ಅಮೆರಿಕ ಪ್ರಿ-ಕ್ವಾರ್ಟರ್ನಲ್ಲಿ ಗೆಲ್ಲಲೇ ಬೇಕೆಂದು ಪಣ ತೊಟ್ಟಿದ್ದರು. ಅಮೆರಿಕ ನಿರ್ಗಮನದ ನಂತರ ಟ್ರಂಪ್ ಒಲವು ಮೆಸ್ಸಿ ಮೇಲಿದ್ದಂತಿತ್ತು. ಹೀಗಾಗಿ ಫೊಲಾರಿನ್ಗೆ ನೀಡಲಾಗಿದ್ದ ರೆಡ್ ಕಾರ್ಡ್ ವಾಪಸ್ ಪಡೆಯಬೇಕೆಂದು ಫಿಫಾ ಅಧ್ಯಕ್ಷ ಜಿಯಾನಿಗೇ ಆದೇಶಿದ್ದರು. ಜಿಯಾನಿ ಲಜ್ಜೆಗೇಡಿಯಂತೆ ತಲೆಬಾಗಿದರು. ಆದರೂ ಅಮೆರಿಕ ಸೋತಿತು. ಈಜಿಪ್ಟ್ ಎದುರು ಮೆಸ್ಸಿ ತಂಡ ವಿವಾದಾತ್ಮಕ ಗೆಲುವು ಜಗತ್ತಿನಾದ್ಯಂತ ಬಹು ಚರ್ಚಿತ ವಿಷಯವಾಯಿತು. ಈಜಿಪ್ಟ್ ಸೋತರೂ ತವರಿನಲ್ಲಿ ವೀರೋಚಿತ ಸ್ವಾಗತ ಪಡೆಯಿತು. ಗಾಝಾದಲ್ಲಿ ನರಮೇಧ ನಡೆಯುತ್ತಿದ್ದಾಗ ಅದರ ವಿರುದ್ಧ ಧ್ವನಿ ಎತ್ತಿದ್ದು ಸ್ಪೇನ್. ಇರಾನನ್ನು ಇನ್ನೊಂದು ಗಾಝಾ ಮಾಡಲು ಇಸ್ರೇಲ್ ಅಮೆರಿಕ ಟೊಂಕ ಕಟ್ಟಿ ನಿಂತಾಗ ಅದರ ವಿರುದ್ಧ ದೊಡ್ಡ ಧ್ವನಿ ಎತ್ತಿದ್ದು ಸ್ಪೇನ್. ಹಿಂದೆ ಒಂದು ಸಂಭ್ರಮಾಚರಣೆಯಲ್ಲಿ ಸ್ಪೇನ್ ಆಟಗಾರ ಯಮಾಲ್ ಫೆಲೆಸ್ತೀನ್ ಧ್ವಜ ಹಿಡಿದು ಗಾಝಾ ಜನರ ಭಾವನೆಗೆ ಸ್ಪಂದಿಸಿದ್ದ. ಸ್ಪೇನ್ ದೇಶದಲ್ಲಿ ಶೇ. 55ಕ್ಕೂ ಹೆಚ್ಚು ಮಂದಿ ಕೆಥೊಲಿಕರಿದ್ದಾರೆ. ಸ್ಪೇನ್ನ ವಿವಿಧ ಭೂಪ್ರದೇಶಗಳನ್ನು ಸುಮಾರು ಏಳು ಶತಮಾನಗಳಿಗೂ ಹೆಚ್ಚು ಕಾಲ ಮುಸಲ್ಮಾನರೇ ಆಳಿದ್ದರೂ ಅಲ್ಲಿ ಮುಸಲ್ಮಾನರ ಸಂಖ್ಯೆ ಕೇವಲ ಶೇ. ನಾಲ್ಕರಷ್ಟೂ ಇಲ್ಲ. ಆಫ್ರಿಕಾ ಮೂಲದ ಲಕ್ಷ ಲಕ್ಷ ಮಂದಿ ಸ್ಪೇನ್ ನೆಲದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಯಮಾಲ್ ತಂದೆ ಕೂಡಾ ಮೊರಾಕ್ಕೊದಿಂದ ವಲಸೆ ಬಂದವರು. ಸ್ಪೇನ್ ಆಡಳಿತಗಾರರು ಜಾತ್ಯತೀತ ಬದ್ಧತೆ ಇರುವವರು. ಆ ಬದ್ಧತೆ ಪ್ರತೀ ಆಟಗಾರರಲ್ಲೂ ಇದ್ದಂತಿದೆ. ಒಂದೂವರೆ ದಶಕದ ಹಿಂದೆ ದಕ್ಷಿಣ ಆಫ್ರಿಕಾ ವಿಶ್ವಕಪ್ ಕೂಟವನ್ನು ಅತ್ಯುತ್ತಮ ವಾಗಿ ಸಂಘಟಿಸಿತ್ತು. ತಮ್ಮ ದೇಶ ಆತಿಥ್ಯ ವಹಿಸಲೇ ಬೇಕಾದ ಅಗತ್ಯವನ್ನು ನೆಲ್ಸನ್ ಮಂಡೇಲಾ ಜಗತ್ತಿಗೆ ಮನವರಿಕೆ ಮಾಡಿದ್ದರು. ಫುಟ್ಬಾಲ್ ಮಾನವತೆಯ ಚಾವಣಿ ಎಂದೇ ಪರಿಗಣಿಸಿದ್ದ ಮಂಡೇಲಾ ಮನುಷ್ಯಮಾತ್ರರೆಲ್ಲರನ್ನೂ ಆ ವಿಶ್ವಕಪ್ ಅಡಿಯಲ್ಲಿ ಒಂದು ಗೂಡಿಸುವ ಕನಸು ಕಂಡಿದ್ದವರು. ಇದೀಗ ಸ್ಪೇನ್ ನಡೆ ಕೂಡಾ ಅದೇ ಜಾಡಿನಲ್ಲಿದೆ. ಹೀಗಾಗಿ, ಇಡೀ ಮುಸ್ಲಿಮ್ ಜಗತ್ತು ಅಷ್ಟೇ ಅಲ್ಲ, ಜೀವಪರ ಇರುವ ಎಲ್ಲಾ ದೇಶಗಳೂ ಸ್ಪೇನನ್ನು ತಮ್ಮ ಒಡಹುಟ್ಟಿನಂತೆ ಅಪ್ಪಿಕೊಂಡಿವೆ. ಸ್ಪೇನ್ ಗೆಲುವನ್ನು ತನ್ನ ಗೆಲುವೆಂದು ಅರಬ್ ಮಂದಿ ಬೀಗಿದ್ದಾರೆ. ಇಲ್ಲಿ ದೇಶ, ಜನಾಂಗ, ಧರ್ಮ, ಭಾಷೆಗಳನ್ನೂ ಮೀರಿದ ಮನುಷ್ಯ ಪ್ರೀತಿ ಗೆದ್ದಿದೆ. ಶತಮಾನದ ಅಂಚಿಗೆ ಕಾಲಿಡಲಿರುವ ವಿಶ್ವಕಪ್ನಲ್ಲಿ ಇಂತಹದ್ದೊಂದು ಧ್ರುವೀಕರಣ ಅಪರೂಪದ ಬೆಳವಣಿಗೆ. ಮತ, ವರ್ಣಗಳನ್ನೂ ಮೀರಿ ನಿಂತ ಮಾನವತೆಯ ಮೇರು.
ವಿಶ್ವಕಪ್ ಕೂಟಕ್ಕೆ ಅಡ್ಡಿ ಅಡಚಣೆ ಹೊಸದೇನೂ ಅಲ್ಲ. ವಿವಾದಾತೀತವೂ ಅಲ್ಲ. ಈ ಸಲವೂ ಟ್ರಂಪ್ ‘ಉಪಟಳ’ದ ಹೇಳಿಕೆಗಳು ಫಿಫಾದ ಧೈರ್ಯ ಕುಂದಿಸುತ್ತಲೇ ಇತ್ತು. ಜತೆಗೆ ಇರಾನ್, ಅಮೆರಿಕ ಯುದ್ಧ ಬೇಗುದಿ. ಇದ್ದಕ್ಕಿದ್ದಂತೆ ಬದಲಾದ ಅಮೆರಿಕ ವೀಸಾ ನೀತಿ, ಟಿಕೆಟ್ ಖರೀದಿಸಿದವರನ್ನೂ ಅಧೀರರನ್ನಾಗಿಸಿತ್ತು. ಕೆಲವು ತಂಡಗಳ ಸಹಾಯಕ ಸಿಬ್ಬಂದಿಯನ್ನು ವಿಮಾನ ನಿಲ್ದಾಣಗಳಿಂದಲೇ ವಾಪಸ್ ಕಳಿಸಲಾಗಿತ್ತು. ಟಿಕೆಟ್ ಬೆಲೆಯಂತೂ ಅತಿ ತುಟ್ಟಿಯಾಗಿತ್ತು. ಜತೆಗೆ ಭೌಗೋಳಿಕ ರಾಜಕಾರಣದ ಪ್ರತಿಕೂಲತೆಯು ಹಿಂದಿನಂತೆ ಈ ಸಲವೂ ಮುಂದುವರಿಯಿತು. ಆರು ದಶಕಗಳ ಹಿಂದೆ ವಿಶ್ವಕಪ್ ಎಂಟರ ಘಟ್ಟದಲ್ಲಿ ಅರ್ಜೆಂಟೀನ-ಇಂಗ್ಲೆಂಡ್ ನಡುವಣ ಪಂದ್ಯ ಮಹಾ ಸಂಘರ್ಷದ ರೂಪು ಪಡೆದಿತ್ತು. ಅದರ ಮರುಕೂಟದಿಂದಲೇ ಕೆಂಪು, ಹಳದಿ ಕಾರ್ಡುಗಳು ಜಾರಿಗೆ ಬಂದವು. ಎರಡೂ ದೇಶಗಳ ವೈರತ್ವವು ಆ ನಂತರ ಭುಗಿಲಾಗುತ್ತಲೇ ಸಾಗಿ, ಫಾಕ್ಲೆಂಡ್ ಯುದ್ಧದವರೆಗೆ ತಲುಪಿತು. ಆ ಯುದ್ಧದ ನಂತರದ ನಾಲ್ಕನೇ ವರ್ಷದಲ್ಲಿ ನಡೆದ ವಿಶ್ವಕಪ್ನಲ್ಲಿ ಮರಡೋನಾ ‘ಹ್ಯಾಂಡ್ ಆಫ್ ಗಾಡ್’ ಪ್ರಕರಣ ಕಿಡಿ ಹಚ್ಚಿತ್ತು. ಗೆದ್ದ ಅರ್ಜೆಂಟೀನ ಸೇಡು ತೀರಿಸಿಕೊಂಡೆ ಎಂದಿತ್ತು. 27 ವರ್ಷಗಳ ಹಿಂದೆ ವಿಶ್ವಕಪ್ನಲ್ಲಿ ಅಮೆರಿಕ-ಇರಾನ್ ಪರಸ್ಪರ ಎದುರಾದವು. ಅದಕ್ಕೂ ಎರಡು ದಶಕಗಳ ಹಿಂದೆ ಇರಾನ್ನಲ್ಲಿ ಕ್ರಾಂತಿಯಾಗಿತ್ತು. ಆಗಿನಿಂದಲೂ ಎರಡೂ ದೇಶಗಳು ಹಾವು ಮುಂಗುಸಿಗಳಂತೆ. ಆದರೆ ಆ ಕೂಟದಲ್ಲಿ ಎರಡೂ ತಂಡಗಳು ಒಗ್ಗೂಡಿ ನಿಂತ ಅಚ್ಚರಿ ಪ್ರಸಂಗ ನಡೆದಿತ್ತು. ಅಂದು ಇಡೀ ಜಗತ್ತು ಈ ತಂಡಗಳ ಕ್ರೀಡಾ ಸ್ಫೂರ್ತಿಯನ್ನು ಮೆಚ್ಚಿಕೊಂಡಿತ್ತು. ಆದರೆ ಈ ಸಲ ಹಾಗಾಗಲಿಲ್ಲ. ಸುಮಾರು ಐದೂವರೆ ದಶಕಗಳ ಹಿಂದೆ ವಿಶ್ವಕಪ್ ನಲ್ಲಿ ಹೊಂಡುರಾಸ್ ಮತ್ತು ಎಲ್ ಸಾಲ್ವಡಾರ್ ನಡುವಣ ಪಂದ್ಯ ಯುದ್ಧದ ಕಳೆ ಪಡೆದಿತ್ತು. ಆ ದೇಶಗಳ ನಡುವಣ ಗಡಿವಿವಾದದ ಬೆಂಕಿ ಪಂದ್ಯದಲ್ಲೂ ಹೊತ್ತಿಕೊಂಡಿತ್ತು. ಆ ಪಂದ್ಯದ ನಂತರವೂ ಆ ದೇಶಗಳ ನಡುವೆ ವಿಭಿನ್ನ ರಾಜಕೀಯ ಆಗು ಹೋಗುಗಳು ಭುಗಿಲೆದ್ದು ಯುದ್ಧವೂ ನಡೆದು ನೂರಾರು ಮಂದಿ ಹತರಾದರು. ಇಟಲಿಯಲ್ಲಿ ನಡೆದಿದ್ದ ಎರಡನೇ ವಿಶ್ವಕಪ್ ಸಂದರ್ಭದಲ್ಲಿ ಫ್ಯಾಸಿಸ್ಟ್ ಮುಸ್ಸೋಲಿನಿಯು ರೆಫ್ರಿಗಳಿಗೆ ಕೊಟ್ಟ ಕಾಟದ ಕಥೆಗಳಂತೂ ಒಂದೆರಡಲ್ಲ. ಆದರೆ ಈ ಸಲ ಅಂತಹ ಯಾವುದೇ ಅತಿರೇಕಗಳು ದೊಡ್ಡ ಮಟ್ಟದಲ್ಲಿ ನಡೆಯಲಿಲ್ಲ. ಮೊರಾಕ್ಕೊ, ಈಜಿಪ್ಟ್ ಸೋತಾಗ ಯೂರೋಪ್ನ ಕೆಲವು ಕಡೆ ದಿಗ್ಗನೆ ಎದ್ದ ಗಲಭೆ ಒಂದೇ ದಿನಕ್ಕೆ ತಣ್ಣಗಾದವು. ಟ್ರಂಪ್ ಕಿರಿಕಿರಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಿದಂತಿಲ್ಲ. ಉಕ್ರೇನ್ ಮೇಲೆ ರಶ್ಯ ಆಕ್ರಮಣವನ್ನು ಖಂಡಿಸಿದ್ದ ಫಿಫಾದವರು ರಶ್ಯಕ್ಕೆ ಪ್ರವೇಶವನ್ನೇ ನೀಡಲಿಲ್ಲ. ಪ್ರತೀ ವಿಶ್ವಕಪ್ ಮೇಲೆಯೂ ಆಯಾ ಸಂದರ್ಭದ ಭೌಗೋಳಿಕ ರಾಜಕಾರಣದ ಪ್ರತಿಫಲನ ಇದ್ದೇ ಇರುವುದು ಸಹಜ. ಈ ಕೂಟ ಕೂಡಾ ಅದರಿಂದ ಹೊರತಲ್ಲ.
ನಾರ್ವೆಯ ಎರ್ಲಿಂಗ್ ಹಾಲ್ಯಾಂಡ್ನ ವೇಗದ ಆಟದ ಚಮತ್ಕಾರ, ವಿಶ್ವಕಪ್ ನಲ್ಲಿ ಕೊನೆಯ ಬಾರಿಗೆ ಆಡಿದ ರೊನಾಲ್ಡೊ, 39ರ ಹರೆಯದ ಮೆಸ್ಸಿಯ ವಿಶಿಷ್ಟ ಕಾಲ್ಚಳಕ, ಸ್ಪೇನ್ ತಂಡದ ಅನನ್ಯ ರಕ್ಷಣಾ ತಂತ್ರ ಹಾಗೂ ಅತ್ಯುತ್ತಮ ಆಟ, ಅದೇ ತಂಡದ ಯಮಾಲ್ನ ಕೌಶಲ್ಯ, ಕೊಡಗು ಜಿಲ್ಲೆ ಯಲ್ಲಿರುವಷ್ಟೇ ಜನಸಂಖ್ಯೆ ಹೊಂದಿರುವ ಕೇಪ್ ವರ್ಡ್ ದೇಶದ ಅಪ್ರತಿಮ ಆಟ ಮತ್ತು ಅದೇ ತಂಡದ ಗೋಲ್ ಕೀಪರ್ ವೊಝಿನಾ, ಟ್ರಂಪ್ ಅತಿರೇಕಗಳು ಇತ್ಯಾದಿ ನೂರಾರು ಅಂಶಗಳು ಈ ವಿಶ್ವಕಪ್ನ ಜತೆಗೇ ನಮ್ಮೆಲ್ಲರ ನೆನಪಿನಾಳದಲ್ಲಿ ಸದಾ ಜೀವಂತ.
ಫುಟ್ಬಾಲ್ ವಿಶ್ವಕಪ್ ಬರೀ ಕ್ರೀಡೆಯಲ್ಲ. ಕ್ರೀಡೆಯನ್ನೂ ಮೀರಿ ನಿಂತ ಭಾವಲೋಕ. ಗಾಂಧೀಜಿ ದಕ್ಷಿಣ ಆಫ್ರಿಕಾದಲ್ಲಿರುವಾಗ ವಿಶ್ವಕಪ್ ಪರಿಕಲ್ಪನೆ ಇರಲಿಲ್ಲ. ಆದರೆ ಅಲ್ಲಿ ಫುಟ್ಬಾಲ್ ಜನಮಾನಸದಲ್ಲಿ ಬೆರೆತು ಹೋಗಿತ್ತು. ಬಿಳಿಯರ ಅಟ್ಟಹಾಸದ ಎದುರು ಗಾಂಧೀಜಿ ನಾಲ್ಕು ಫುಟ್ಬಾಲ್ ತಂಡಗಳನ್ನು ಕಟ್ಟಿದ್ದು ಇತಿಹಾಸ. ಹಿಂದೆ ಕರಿಯರ ಸ್ವಾಭಿಮಾನದ ಸಂಕೇತದಂತೆ, ಬಿಳಿಯರ ಅಟ್ಟಹಾಸದಂತೆ, ಹಣದ ಪ್ರವಾಹದಂತೆ, ಪೌರುಷ ಪ್ರದರ್ಶನದಂತೆ ಒಮ್ಮೊಮ್ಮೆ ಕಂಡು ಬರುವ ವಿಶ್ವಕಪ್ನಲ್ಲಿ ಗೆಲುವಿನ ಅಬ್ಬರ, ಸೋಲಿನ ಹತಾಶೆಗಳೆಲ್ಲದರ ಮನುಷ್ಯ ಸಹಜ ಅತಿರೇಕ ಕೂಡಾ. ಈ ಸಲದ ಫೈನಲ್ನ ಟೊರೆಸ್ನ ಏಕೈಕ ಗೋಲು ಜಗತ್ತಿನಾದ್ಯಂತ ಕೋಟ್ಯಂತರ ಜನರಲ್ಲಿ ಸಂಚಲನ ಮೂಡಿಸಿತು. ಅರ್ಜೆಂಟೀನಾದಲ್ಲಿ ಸಾವಿರಾರು ಜನ ಹತಾಶೆಯಿಂದ ಕಲ್ಲುತೂರಾಟ ನಡೆಸುತ್ತಾ ಬಿಕ್ಕಿಬಿಕ್ಕಿ ಅತ್ತರೆ, ಸ್ಪೇನ್, ಗಾಝಾದಲ್ಲಿ ಸಾವಿರ ಸಾವಿರ ಜನ ಕುಣಿದು ಕುಪ್ಪಳಿಸುತ್ತಿದ್ದರು. ಟ್ರಂಪ್, ನೆತನ್ಯಾಹು ಮ್ಲಾನ ವದನರಾದರು. ಹೌದು, ವಿಶ್ವಕಪ್ ಫುಟ್ಬಾಲ್ ಬರೇ ಕ್ರೀಡೆಯಲ್ಲ, ಅದನ್ನೂ ಮೀರಿದ್ದು.






