ಅರಣ್ಯ ಭೂಮಿ ಗುತ್ತಿಗೆ ನೀಡುವುದು ಬೇಡ

ಸಾಂದರ್ಭಿಕ ಚಿತ್ರ PC: freepik
ಸರಿಯಾದ ಸಮಯಕ್ಕೆ ಮಳೆಯಾಗದೇ ಇದ್ದಾಗ, ವಾತಾವರಣದಲ್ಲಿ ಉಷ್ಣತೆ ವಿಪರೀತವಾದಾಗ ಒಟ್ಟಾರೆ ಪರಿಸರದಲ್ಲಿ ಏರುಪೇರಾದಾಗ, ಇದಕ್ಕೆಲ್ಲ ಅರಣ್ಯ ನಾಶವೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತವೆ. ಸರಕಾರಕ್ಕೂ ಒಮ್ಮೆಲೇ ಅರಣ್ಯದ ಉಳಿವಿನ ಬಗ್ಗೆ ಕಾಳಜಿ ಉಂಟಾಗುತ್ತದೆ. ಆದರೆ ನಂತರದ ದಿನಗಳಲ್ಲಿ ಇದು ನೆನಪಿಗೆ ಬರುವುದಿಲ್ಲ. ಸರಕಾರ ಯಾವುದೇ ಪಕ್ಷದ್ದಾಗಿರಲಿ ಮುಂದಿನ ಪೀಳಿಗೆಗಾಗಿ ಕಾಡನ್ನು ಕಾಪಾಡುವುದು ಅದರ ಜವಾಬ್ದಾರಿಯಾಗಿದೆ. ಈ ಹೊಣೆಗಾರಿಕೆಯನ್ನು ನಿಭಾಯಿಸುವಲ್ಲಿ ಸರಕಾರ ಯಶಸ್ವಿಯಾಗಿಲ್ಲ ಎಂಬುದು ಬರೀ ಆರೋಪವಲ್ಲ ವಾಸ್ತವ ಸಂಗತಿ. ಪ್ರಾಣಿ ಪಕ್ಷಿಗಳಿರುವ ಅತ್ಯಂತ ಸೂಕ್ಷ್ಮವಾದ ಅರಣ್ಯ ಪ್ರದೇಶಗಳಲ್ಲೂ ರೆಸಾರ್ಟ್, ಹೋಮ್ ಸ್ಟೇ ಹಾಗೂ ಸಫಾರಿಗೆ ಅವಕಾಶ ನೀಡಿದ ಪರಿಣಾಮವಾಗಿ ಕಾಡಿನಲ್ಲಿರುವ ಪ್ರಾಣಿಗಳು ಬೇರೆ ದಾರಿ ಕಾಣದೆ ನಗರ ಹಾಗೂ ಜನವಸತಿ ಪ್ರದೇಶಗಳಿಗೆ ಬರುತ್ತವೆ. ಆಗ ‘ಆನೆಯ ಹಾವಳಿ’, ‘ಚಿರತೆಯ ಹಾವಳಿ’ ಎಂದು ನಮ್ಮ ಮಾಧ್ಯಮಗಳಲ್ಲಿ ಸುದ್ದಿ ಬರುತ್ತವೆ. ಆದರೆ ಮನುಷ್ಯರ ಅಂದರೆ ಕಾಡಿನ ಸಂಪತ್ತನ್ನು ದೋಚುವ ಹಣವಂತರ ದಾಹದಿಂದಾಗಿ ಅರಣ್ಯ ಪ್ರದೇಶದ ವ್ಯಾಪ್ತಿ ವರ್ಷದಿಂದ ವರ್ಷಕ್ಕೆ ಕುಗ್ಗುತ್ತಲೇ ಸಾಗಿದೆ. ‘ಹಸಿರೇ ಉಸಿರು’ ಎಂಬುದು ಕೇವಲ ಘೋಷಣೆಯಾಗಿ ಉಳಿದಿದೆ.
ಸರಕಾರ ಯಾವುದೇ ಆಗಿರಲಿ ಒಮ್ಮೊಮ್ಮೆ ಸ್ಥಾಪಿತ ಹಿತಾಸಕ್ತಿಗಳಿಗೆ ಮಣಿದು ಸರಕಾರಿ ಭೂಮಿಯನ್ನು ಯಾರ್ಯಾರಿಗೋ ಪರಭಾರೆ ಮಾಡಲು ಹಿಂಜರಿಯುವುದಿಲ್ಲ. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮಠ, ಪೀಠಗಳಿಗೆ ಕೋಟ್ಯಂತರ ರೂಪಾಯಿ ಅನುದಾನವನ್ನು ನೀಡಿದ್ದಲ್ಲದೆ ಅವರ ಗುಡಿ-ಗುಂಡಾರಗಳಿಗಾಗಿ ಸರಕಾರಿ ಭೂಮಿಯನ್ನು ಮಂಜೂರು ಮಾಡಲಾಯಿತು. ಈಗ ಬೆಂಗಳೂರು ಹೊರ ವಲಯದಲ್ಲಿ ಇರುವ ಮಾಚೋಹಳ್ಳಿಯ 78 ಏಕರೆ ಅರಣ್ಯ ಭೂಮಿಯನ್ನು ಜಾತಿ ಸಂಘಟನೆಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿರುವ ಸಂಗತಿ ಬಯಲಿಗೆ ಬಂದಿದೆ.
ಅರಣ್ಯ ಭೂಮಿಯ ಬಳಕೆ, ಹಂಚಿಕೆಯ ವಿಷಯದಲ್ಲಿ ಹಲವಾರು ಪ್ರಕರಣಗಳ ಕುರಿತ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಅತ್ಯಂತ ಸ್ಪಷ್ಟವಾದ ನಿರ್ದೇಶನಗಳನ್ನು ನೀಡಿದೆ. ಅರಣ್ಯ ಭೂಮಿಯನ್ನು ಪರಭಾರೆ ಮಾಡಬಾರದು ಎಂದು ತಿಳಿಸಿದೆ. ಆದರೆ ರಾಜ್ಯ ಸರಕಾರ 2017ರಲ್ಲಿ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ವಿವಿಧ ಜಾತಿ ಸಂಘಟನೆಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡಿದೆ. ಈ ಭೂಮಿಯನ್ನು ವಾಪಸ್ ಪಡೆಯಲು ಈಗಿನ ಸರಕಾರ ಹಿಂಜರಿಯುತ್ತಿದೆ.
ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಮಾಚೋಹಳ್ಳಿ ಅರಣ್ಯ ಭೂಮಿಗೆ ಅತ್ಯಂತ ದುಬಾರಿ ಬೆಲೆ ಇದೆ. ಅಲ್ಲಿಂದ ಐದಾರು ಮೈಲಿ ಅಂತರದಲ್ಲಿ ಇರುವ ಕೃಷಿ ಭೂಮಿ ಎಕರೆಗೆ 5 ಕೋಟಿಯಿಂದ 15 ಕೋಟಿ ರೂ.ವರೆಗೆ ಮಾರಾಟವಾಗುತ್ತಿದೆ. ಅದರಲ್ಲೂ ಮಾಗಡಿ ರಸ್ತೆಗೆ ಹೊಂದಿಕೊಂಡಿರುವ ಅರಣ್ಯ ಭೂಮಿಯ ಸುತ್ತಮುತ್ತಲೂ ವಸತಿ ನಿವೇಶನಗಳಿಗೆ ಭಾರೀ ಬೇಡಿಕೆಯಿದೆ. ನೈಸ್ ರಸ್ತೆಯ ವೃತ್ತದಿಂದ ಒಂದು ಕಿ.ಮೀ. ಅಂತರದಲ್ಲಿರುವ ಈ ಭೂಮಿಯ ಕಿಮ್ಮತ್ತು 2,500 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜು ಮಾಡಲಾಗಿದೆ. ಅಂತಲೇ ಎಲ್ಲರ ಕಣ್ಣು ಇದರ ಮೇಲೆ ಬಿದ್ದಿರುವುದು ಸಹಜ. ಈ ಪ್ರದೇಶದ ಇಡೀ ಭೂಮಿಯನ್ನು ನುಂಗಲು ರಿಯಲ್ ಎಸ್ಟೇಟ್ ಮಾಫಿಯಾ ಹೊಂಚು ಹಾಕಿದೆ.
ಸರಕಾರವು ಜಾತಿ ಆಧಾರಿತ ಸಂಘ, ಸಂಸ್ಥೆಗಳಿಗೆ ಹಾಗೂ ಕೆಲವು ಮಠ, ಪೀಠಗಳಿಗೆ ತಲಾ ಎರಡೂವರೆ ಎಕರೆ ಹಾಗೂ ಅದಕ್ಕಿಂತಲೂ ಹೆಚ್ಚು ಭೂಮಿಯನ್ನು ಬೇಕಾಬಿಟ್ಟಿಯಾಗಿ ಹಂಚಿಕೆ ಮಾಡಿರುವುದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ. ಹೀಗಾಗಿ ಹಂಚಿಕೆ ಮಾಡಲಾಗಿರುವ ಭೂಮಿಯನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಳ್ಳಲು ಯಾವ ಸಂಸ್ಥೆಗೂ ಈವರೆಗೆ ಸಾಧ್ಯವಾಗಿಲ್ಲ. ಈ ಭೂಮಿ ಈಗಲೂ ಅರಣ್ಯ ಇಲಾಖೆಯ ಅಧೀನಕ್ಕೊಳಪಟ್ಟಿದೆ ಎಂಬುದು ಸಮಾಧಾನಕರ ಸಂಗತಿಯಾಗಿದೆ.
ಅರಣ್ಯ ಇಲಾಖೆ ‘ಹಸಿರೇ ಉಸಿರು’ ಎಂಬ ಭಿತ್ತಿಪತ್ರಗಳನ್ನು ಹಚ್ಚಿದ ಕೂಡಲೇ ಕಾಡು ಸುರಕ್ಷಿತವಾಗಿ ಉಳಿಯುವುದಿಲ್ಲ. ಅಭಿವೃದ್ಧಿಯ ಹೆಸರಿನಲ್ಲಿ ಅರಣ್ಯ ಭೂಮಿಯನ್ನು ಪರಭಾರೆ ಮಾಡುತ್ತಾ ಹೋದರೆ ಮನುಷ್ಯ ಮಾತ್ರವಲ್ಲ ಸಕಲ ಜೀವಿಗಳ ಉಸಿರೇ ನಿಂತು ಹೋಗುವ ಗಂಡಾಂತರಕಾರಿ ಪರಿಸ್ಥಿತಿ ನಿರ್ಮಾಣವಾದರೆ ಅಚ್ಚರಿ ಪಡಬೇಕಾಗಿಲ್ಲ. ಆಡಳಿತದ ಜವಾಬ್ದಾರಿ ಸ್ಥಾನದಲ್ಲಿ ಇರುವವರು ತಮ್ಮ ಕರ್ತವ್ಯಕ್ಕೆ ಚ್ಯುತಿ ಬರುವಂತೆ ನಡೆದುಕೊಳ್ಳಬಾರದು.ಅರಣ್ಯಕ್ಕೆ ಸಂಬಂಧಿಸಿದ ಸ್ಥಿತಿಗತಿಯನ್ನು ಕುರಿತ ಅಧ್ಯಯನ ವರದಿಯ ಪ್ರಕಾರ, ಬೆಂಗಳೂರಿನ ಸುತ್ತಮುತ್ತಲಿನ ಅರಣ್ಯ ಪ್ರದೇಶದ ವ್ಯಾಪ್ತಿ ಕುಗ್ಗುತ್ತಲೇ ಸಾಗಿದೆ.ಸಾಕಷ್ಟು ಅರಣ್ಯ ಪ್ರದೇಶ ಒತ್ತುವರಿಯಾಗಿ ಹಾಳಾಗಿ ಹೋಗಿದೆ. ಈಗ ಉಳಿದಿರುವಷ್ಟಾದರೂ ಅರಣ್ಯ ಪ್ರದೇಶವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದು ಸರಕಾರದ ಕರ್ತವ್ಯವಾಗಿದೆ.
ಈಗ ಹಸಿರನ್ನು ಕಾಪಾಡುವುದು ಸರಕಾರದ ಮೊದಲ ಆದ್ಯತೆಯಾಗಬೇಕಾಗಿದೆ.ಒಂದು ಕಡೆ ಅರಣ್ಯ ಭೂಮಿಯನ್ನು ಪರಭಾರೆ ಮಾಡುವುದು ಅನಿಯಂತ್ರಿತವಾಗಿ ನಡೆದಿದ್ದರೆ ಇನ್ನೊಂದು ಕಡೆ ಮರಗಳ ನಾಶ ಲಂಗುಲಗಾಮಿಲ್ಲದೇ ನಡೆದಿದೆ. ಬೆಂಗಳೂರು ಮಹಾನಗರ ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ರಸ್ತೆ ಅಗಲೀಕರಣದ ನೆಪದಲ್ಲಿ ಹಲವಾರು ವರ್ಷಗಳ ಕಾಲ ನೆರಳು ನೀಡುತ್ತ ಬಂದ ಮರಗಳನ್ನು ಕತ್ತರಿಸಿ ಹಾಕಲಾಗುತ್ತಿದೆ. ಈಗಂತೂ ಅರಣ್ಯವನ್ನು ಉಳಿಸಿ, ಬೆಳೆಸಲು ಇರುವ ಅರಣ್ಯ ಇಲಾಖೆ ಈಗ ಮರಗಳನ್ನು ಕಡಿಯಲು ಪರವಾನಿಗೆ ನೀಡುವ ಇಲಾಖೆಯಾಗಿದೆ. ಬೆಂಗಳೂರಿನಲ್ಲಿ ಮೆಟ್ರೊ ಹೆಸರಿನಲ್ಲಿ ನೂರಾರು ಮರಗಳನ್ನು ಕಡಿದು ಹಾಕಲಾಯಿತು. 50-60 ವರ್ಷಗಳಷ್ಟು ಹಳೆಯ ಮರಗಳನ್ನು ಕಾಪಾಡಿದರೆ ನಮಗೆ ಮಾತ್ರವಲ್ಲ ಮುಂದಿನ ಪೀಳಿಗೆಗೂ ಉಸಿರಾಡಲು ಉಚಿತವಾಗಿ ಆಮ್ಲಜನಕ ಒದಗಿಸಿದಂತಾಗುತ್ತದೆ.
ನಮ್ಮ ದೇಶದಲ್ಲಿ ಶತಮಾನಗಳಿಂದ ಜೀವ ಜಗತ್ತಿಗೆ ಉಸಿರು ನೀಡುತ್ತ ಬಂದ ಪಶ್ಚಿಮ ಘಟ್ಟಗಳು ಈಗ ಅಳಿವಿನ ಅಂಚಿನಲ್ಲಿವೆ. ಪ್ರವಾಸೋದ್ಯಮ ಮತ್ತು ಕೈಗಾರಿಕೆಗಳ ಹೆಸರಿನಲ್ಲಿ ಬಹುತೇಕ ಬೆಟ್ಟ ಸಾಲುಗಳು ಹಾಳಾಗುತ್ತಿವೆ. ಈ ಪ್ರದೇಶದಲ್ಲಿ ಭೂ ಕುಸಿತದ ಘಟನೆಗಳು ವರದಿಯಾಗುತ್ತಲೇ ಇವೆ. ಆನೆ, ಹುಲಿ, ಚಿರತೆ ಮೊದಲಾದ ಪ್ರಾಣಿಗಳ ತಾಣಗಳೂ ಈಗ ಬಂಡವಾಳಶಾಹಿಯ ಆಕ್ರಮಣಕ್ಕೆ ಒಳಗಾಗುತ್ತಿವೆ. ಹೀಗಾಗಿ ಹುಲಿ, ಚಿರತೆಗಳು ಸಣ್ಣಪುಟ್ಟ ಹಳ್ಳಿಗಳು ಮಾತ್ರವಲ್ಲ ನಗರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತಿವೆ. ಬರಲಿರುವ ದಿನಗಳಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸೂಚನೆಗಳು ಕಂಡು ಬರುತ್ತಿವೆ.
ಈಗ ಛತ್ತೀಸಗಡ, ಬಸ್ತಾರ್ ಮತ್ತು ಒಡಿಶಾದ ನಿತ್ಯ ಹರಿದ್ವರ್ಣದ ಅಮೂಲ್ಯ ಪ್ರದೇಶಗಳು ಕೇಂದ್ರ ಸರಕಾರದ ಕೃಪೆಯಿಂದ ಅದಾನಿ ಮತ್ತು ಅಂಬಾನಿಗಳ ಪಾಲಾಗುತ್ತಿವೆ. ಮುಂದಿನ ನೂರಾರು ವರ್ಷಗಳ ಕಾಲ ಸಕಲ ಜೀವಿಗಳಿಗೆ ಉಸಿರು ನೀಡಬೇಕಾದ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಬೇಷರತ್ ಒಪ್ಪಿಗೆ ನೀಡಲಾಗುತ್ತಿದೆ. ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ.
ಇಂಥ ಸೂಕ್ಷ್ಮ ಸಂದರ್ಭದಲ್ಲಿ ಜನರು ಎಚ್ಚೆತ್ತು ಪ್ರತಿರೋಧ ಒಡ್ಡದಿದ್ದರೆ ಬದುಕು ಅಸಹನೀಯವಾಗಲಿದೆ. ನಮ್ಮ ಅರಣ್ಯ, ನಮ್ಮ ನದಿಗಳು, ಕೆರೆಗಳು, ಮಾತ್ರವಲ್ಲ ಉಸಿರಾಡುವ ಗಾಳಿಯನ್ನು ಕಾಪಾಡಿಕೊಳ್ಳಲು ಸಂಕಲ್ಪ ಮಾಡಬೇಕಾಗಿದೆ. ಇದಕ್ಕಾಗಿ ಪರಿಸರದ ಬಗ್ಗೆ ಕಾಳಜಿ ಇರುವ ಸಂಘ, ಸಂಸ್ಥೆಗಳು, ಮಾಧ್ಯಮಗಳು ಜನ ಜಾಗೃತಿ ಮೂಡಿಸಬೇಕು.ಬೆಂಗಳೂರು ಸುತ್ತಮುತ್ತಲಿನ ಹಸಿರು ಪ್ರದೇಶವನ್ನು ಯಾವ ಕಾರಣಕ್ಕೂ ಪರಭಾರೆ ಮಾಡಬಾರದು.







