ತಿಮ್ಮಕ್ಕನ ನೆರಳಲ್ಲಿ ಭವಿಷ್ಯದ ಮಕ್ಕಳು!

ಸಾಲುಮರದ ತಿಮ್ಮಕ್ಕ | PC : X
ಪರಿಸರ ಎನ್ನುವುದು ಅಂತರ್ರಾಷ್ಟ್ರೀಯ ಮಟ್ಟದ ರಾಜಕೀಯ ವಿಷಯವಾಗಿ ಬದಲಾಗಿದೆ. ಇಂದು ಪರಿಸರ ಸಮತೋಲನಕ್ಕಾಗಿಯೇ ಅಂತರ್ರಾಷ್ಟ್ರೀಯ ಸಂಸ್ಥೆಗಳು, ಸರಕಾರೇತರ ಸಂಸ್ಥೆಗಳು ದುಡಿಯುತ್ತಿವೆ. ಹಾಗೆಯೇ ಪರಿಸರದ ವಿಷಯವೆನ್ನುವುದು ಬೌದ್ಧಿಕ ಮೇಲಾಟಗಳಾಗಿ ಬದಲಾಗಿವೆ. ತಾಪಮಾನ ಏರಿಕೆಯ ಬಗ್ಗೆ ವಿದ್ಯಾವಂತರು ಮಾತನಾಡುತ್ತಿದ್ದಾರೆ. ವಿಶ್ವವಿದ್ಯಾನಿಲಯಗಳು, ಪ್ರೊಫೆಸರ್ಗಳು ಗಂಟೆಗಟ್ಟಳೆ ಇದರ ಬಗ್ಗೆ ಭಾಷಣ ಮಾಡಬಲ್ಲವರಾಗಿದ್ದಾರೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಶ್ರೀಮಂತ ದೇಶಗಳು ಪರಿಸರದ ಕುರಿತಂತೆ ಬುದ್ಧಿವಾದಗಳನ್ನು ಹೇಳುತ್ತಿವೆ. ಈ ಎಲ್ಲ ರಾಜಕೀಯ ಗದ್ದಲಗಳ ನಡುವೆ, ಮನುಷ್ಯರಾಗಿ ಪರಿಸರದ ಕುರಿತಂತೆ ನಾವು ಹೊಂದಿರಬೇಕಾದ ಹೊಣೆಗಾರಿಕೆಗಳನ್ನು ತಿಳಿಸಿಕೊಟ್ಟು ಸಾಲುಮರದ ತಿಮ್ಮಕ್ಕ ನಮ್ಮ ನಡುವಿನಿಂದ ಅಗಲಿದ್ದಾರೆ. ಗ್ರಾಮೀಣ ಜನರಿಗೆ ಪರಿಸರದ ಬಗ್ಗೆ ಯಾವುದೇ ವಿಶ್ವವಿದ್ಯಾನಿಲಯಗಳ ಪಾಠದ ಅಗತ್ಯವಿಲ್ಲ. ಅವರ ಪಾಲಿಗೆ ಮರ ಗಿಡಗಳು ಲಾಭ ನಷ್ಟಗಳ ಲೆಕ್ಕಾಚಾರವಲ್ಲ. ಮರವೆಂದರೆ ಅವರ ಪಾಲಿಗೆ ತಮ್ಮ ಕುಟುಂಬದ ಭಾಗವೇ ಆಗಿದೆ. ಸಾಲುಮರದ ತಿಮ್ಮಕ್ಕ ಪರಿಸರ ಹೋರಾಟಗಾರರಾಗಿ ಮರಗಳನ್ನು ನೆಟ್ಟಿರಲಿಲ್ಲ. ವಿಶ್ವದಲ್ಲಿ ಹೆಚ್ಚುತ್ತಿರುವ ತಾಪಮಾನದ ಬಗ್ಗೆ ಅವರಿಗೆ ಅರಿವೂ ಇರಲಿಲ್ಲ. ಇಷ್ಟಾದರೂ ಅವರು ಸುಮಾರು ಎಂಟು ಸಾವಿರ ಗಿಡಮರಗಳನ್ನು ಬೆಳೆಸಿದರು. ಆ ಗಿಡಗಳನ್ನು ಅವರು ಮಕ್ಕಳಂತೆ ನೀರುಣಿಸಿ ಸಾಕಿದ್ದರು. ಎಲ್ಲ ಅಕ್ಷರಸ್ಥರಿಗೆ ಪರಿಸರದ ವಿಷಯದಲ್ಲಿ ತಾಯಿಯಾಗಿ ಬದುಕಿ ಬಾಳಿದರು. ಪರಿಸರದ ಬಗ್ಗೆ ಗಂಟೆಗಟ್ಟಳೆ ಭಾಷಣ ಮಾಡುತ್ತಲೇ ಪರಿಸರ ನಾಶಕ್ಕೆ ಪರೋಕ್ಷ ಕೊಡುಗೆಗಳನ್ನು ನೀಡುವ ವಿದ್ಯಾವಂತರ ನಡುವೆ ಈ ಅನಕ್ಷರಸ್ಥ ತಾಯಿ ನಿಜವಾದ ಪರಿಸರ ರಕ್ಷಣೆ ಎಂದರೆ ಏನು ಎನ್ನುವುದನ್ನು ಜಗತ್ತಿಗೆ ಕಲಿಸಿ ಹೋದರು.
ನಮ್ಮ ನಡುವೆ ಮಕ್ಕಳಿಲ್ಲದ ತಾಯಂದಿರು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುವುದಿದೆ. ಸಂಬಂಧಿಕರ ಮಕ್ಕಳನ್ನೂ ಸಾಕಿ ಬೆಳೆಸುವುದನ್ನು ನೋಡಬಹುದು. ಕೆಲವರು ಮಕ್ಕಳಿಲ್ಲ ಎಂದು ಪ್ರಾಣಿ ಪಕ್ಷಿಗಳನ್ನು ಸಾಕುತ್ತಾ ಆ ಕೊರತೆಯನ್ನು ಮರೆಯಲು ಯತ್ನಿಸುತ್ತಾರೆ. ಆದರೆ ಸಾಲು ಮರದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕೊರತೆಯನ್ನು ಮರಗಳನ್ನು ನೆಡುವ ಮೂಲಕ ತುಂಬಿಕೊಂಡರು. ಸಾಧಾರಣವಾಗಿ ಮರಗಳನ್ನು ನೆಟ್ಟು ಅವುಗಳನ್ನು ಸಾಕುವುದು ಮಕ್ಕಳನ್ನು ಸಾಕಿ ಬೆಳೆಸುವುದಕ್ಕಿಂತಲೂ ದುಬಾರಿ. ಮರಗಳನ್ನು ನೆಟ್ಟು ಬೆಳೆಸುವುದಕ್ಕೆ ಸಾಕಷ್ಟು ಜಮೀನುಗಳನ್ನು ಹೊಂದಿರಬೇಕು. ಆ ಮರಗಳಿಂದ ಭವಿಷ್ಯದಲ್ಲಿ ಬೇರೆ ಬೇರೆ ರೀತಿಯ ಲಾಭಗಳನ್ನು ಪಡೆಯಬಹುದು ಎಂಬ ಲೆಕ್ಕಾಚಾರದಲ್ಲೇ ಜನರು ನೆಡುತ್ತಾರೆ. ಆದರೆ ತೀರ ಬಡ ಕೂಲಿ ಕಾರ್ಮಿಕ ವರ್ಗಕ್ಕೆ ಸೇರಿದ್ದ ತಿಮ್ಮಕ್ಕ ಸ್ವಂತ ಜಮೀನನ್ನು ಹೊಂದಿರಲಿಲ್ಲ. ಸಾರ್ವಜನಿಕರು ಓಡಾಡುವ ರಸ್ತೆಯ ಇಕ್ಕೆಲಗಳಲ್ಲಿ ಅವರು ಮರಗಳನ್ನು ನೆಟ್ಟರು. ಕಿಲೋಮೀಟರ್ ಉದ್ದಕ್ಕೂ ಓಡಾಡಿ ಅವುಗಳಿಗೆ ನೀರುಣಿಸಿದರು. ಬೆಳೆದ ಮರಗಳಿಂದ ಬರುವ ಹಣ್ಣುಗಳು ತನಗೆ ಸಿಕ್ಕುವುದಿಲ್ಲ ಎನ್ನುವುದು ಗೊತ್ತಿದ್ದೂ ಅವರು ಈ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದರು. 350ಕ್ಕೂ ಅಧಿಕ ಆಲದ ಮರಗಳನ್ನು ಅವರು ಬೆಳೆಸಿದರು. ಆ ಮರಗಳನ್ನು ಆಶ್ರಯಿಸಿದ ಇತರ ಜೀವವೈವಿಧ್ಯಗಳ ಬಗ್ಗೆ ಬೃಹತ್ ಗ್ರಂಥವನ್ನೇ ಬರೆಯಬಹುದು. ಸುಮಾರು 8,000 ವೈವಿಧ್ಯಮಯ ಮರಗಿಡಗಳನ್ನು ಅವರು ಬೆಳೆಸಿದ್ದಷ್ಟೇ ಅಲ್ಲ, ಬೇರೆ ಬೇರೆ ನೆಪಗಳನ್ನು ಮುಂದಿಟ್ಟು ಆ ಮರಗಳನ್ನು ಕಡಿಯಲು ಸಂಚುಗಳು ನಡೆದಾಗ ಅವುಗಳ ವಿರುದ್ಧವೂ ಅವರು ಹೋರಾಟ ಮಾಡುತ್ತಾ ಬಂದರು. ಯಾವುದೇ ಘೋಷಣೆಗಳಿಲ್ಲದೆ, ಸಂಘಟನೆಗಳ ಹೆಸರುಗಳಿಲ್ಲದೆ ಅವರು ಸುದೀರ್ಘವಾಗಿ ನಡೆಸಿಕೊಂಡು ಬಂದ ಪರಿಸರ ರಕ್ಷಣೆ ವಿಸ್ಮಯ ಹುಟ್ಟಿಸುವಂತಹದು. ಮರಗಳ ವಿಷಯದಲ್ಲಿ ಅವರು ಪ್ರದರ್ಶಿಸಿದ ನಿಸ್ವಾರ್ಥ ಮನೋಭಾವವನ್ನು ಅವರು ಪ್ರಕೃತಿಯಿಂದಲೇ ದಕ್ಕಿಸಿಕೊಂಡಿದ್ದಾರೆ.
ಮಕ್ಕಳಿಲ್ಲ ಎಂದು ಮರಗಳನ್ನು ನೆಟ್ಟ ತಿಮ್ಮಕ್ಕಳನ್ನು ಮರಗಳು ಕೈ ಬಿಡಲಿಲ್ಲ ಎನ್ನುವುದು ಇನ್ನೊಂದು ವಿಶೇಷ. ಮಕ್ಕಳನ್ನು ಸಾಕಿ ಬೆಳೆಸಿದರೆ ಅವರು ಕೈ ಹಿಡಿಯುತ್ತಾರೆ ಎನ್ನುವುದರ ಬಗ್ಗೆ ಯಾವುದೇ ಖಚಿತತೆಯಿಲ್ಲ. ಸಾಕಿದ ಮಕ್ಕಳು ತಾಯಿಯನ್ನು ವೃದ್ಧಾಶ್ರಮದಲ್ಲೋ, ನಡುಬೀದಿಯಲ್ಲೋ ಬಿಡುವುದನ್ನು ನಾವು ದಿನ ನಿತ್ಯ ಪತ್ರಿಕೆಗಳಲ್ಲಿ ಓದುತ್ತೇವೆ. ಆದರೆ ಮರಗಳು ತಿಮ್ಮಕ್ಕಳಿಗೆ ನಾಡಿನ ತುಂಬ ಮಕ್ಕಳನ್ನು ಕೊಟ್ಟಿತು. ಮರಗಳ ದೆಸೆಯಿಂದಾಗಿ ತಿಮ್ಮಕ್ಕಳನ್ನು ದೇಶ ವಿದೇಶಗಳ ಜನರು ಪ್ರೀತಿಸತೊಡಗಿದರು. ಈ ಮರಗಳು ಅವರ ಖ್ಯಾತಿಯನ್ನು ಅಂತರ್ರಾಷ್ಟ್ರೀಯ ಮಟ್ಟಕ್ಕೆ ಏರಿಸಿತು. ಅದು ಅವರ ಸಾಮಾಜಿಕ, ಆರ್ಥಿಕ ಮಟ್ಟವನ್ನೂ ಮೇಲಕ್ಕೆತ್ತಿತ್ತು. ದೇಶದ ಅತ್ಯುನ್ನತ ಪದ್ಮಶ್ರೀ ಪ್ರಶಸ್ತಿ ತಂದುಕೊಟ್ಟಿತು. ಅಂತರ್ರಾಷ್ಟ್ರೀಯ ಪ್ರಶಸ್ತಿಗಳೂ ಅರಸಿಕೊಂಡು ಬಂದವು. ನಮ್ಮ ನಡುವಿನಿಂದ ತಿಮ್ಮಕ್ಕ ಇಲ್ಲವಾಗಿದ್ದರೂ ಅವರು ನೆಟ್ಟ ಸಾವಿರಾರು ಮರಗಳು ತಿಮ್ಮಕ್ಕಳನ್ನು ದೇಶ ವಿದೇಶಗಳಿಗೆ ನೆನಪಿಸುತ್ತವೇ ಇರುತ್ತವೆ. ಆ ಮರಗಳಲ್ಲಿ ಆಶ್ರಯ ಪಡೆದ ಹಕ್ಕಿಗಳು ತಿಮ್ಮಕ್ಕಳ ಹೆಸರಿನಲ್ಲಿ ಹಾಡುಗಳನ್ನು ಹಾಡುತ್ತಲೇ ಇರುತ್ತವೆ. ಮಕ್ಕಳನ್ನು ನಂಬಿದವರು ಕೆಟ್ಟರು, ಆದರೆ ಮರಗಳನ್ನು ನಂಬಿದ ತಿಮ್ಮಕ್ಕ ಉಳಿದರು ಎನ್ನುವ ಗಾದೆಯೊಂದು ಈ ಮೂಲಕ ಸೃಷ್ಟಿಯಾದಂತಾಗಿದೆ. ತಿಮ್ಮಕ್ಕ ಮರಗಳನ್ನು ಎಷ್ಟು ಆಸ್ಥೆಯಿಂದ ಬೆಳೆಸಿದರೋ ಅಷ್ಟೇ ಆಸ್ಥೆಯಿಂದ ಅದೇ ಮರಗಳು ತಿಮ್ಮಕ್ಕಳ ಹೆಸರನ್ನು ಬೆಳೆಸುತಿವೆೆ.
ಪರಿಸರ ರಕ್ಷಣೆ, ಸಮಾಜ ಸೇವೆಗಳನ್ನು ಮಾಡಲು ನಾವು ವಿದ್ಯಾವಂತರೋ ಹಣವಂತರೋ ಆಗಿರಬೇಕಾಗಿಲ್ಲ ಎನ್ನುವುದನ್ನು ತಿಳಿಸಿ ಹೋಗಿದ್ದಾರೆ ತಿಮ್ಮಕ್ಕ. ಮಂಗಳೂರು ನಗರದಲ್ಲಿ ಬುಟ್ಟಿಯಲ್ಲಿ ಕಿತ್ತಳೆ ಮಾರುತ್ತಾ ಶಾಲೆ ಕಟ್ಟಿದ ಹರೇಕಳ ಹಾಜಬ್ಬರನ್ನು ನಾವು ಈ ನಿಟ್ಟಿನಲ್ಲಿ ಸ್ಮರಿಸಬಹುದಾಗಿದೆ. ಬೃಹತ್ ಕಾಲೇಜುಗಳನ್ನು ತೆರೆದು ಶಿಕ್ಷಣೋದ್ಯಮಿಗಳಾಗಿ ಮಿಂಚುತ್ತಿರುವವರನ್ನು ಅಣಕಿಸುವಂತೆ ನಮ್ಮ ನಡುವೆ ಹರೇಕಳ ಹಾಜಬ್ಬ ಓಡಾಡುತ್ತಿದ್ದಾರೆ. ತಿಮ್ಮಕ್ಕ ಮತ್ತು ಹಾಜಬ್ಬ ಇಬ್ಬರೂ ಗ್ರಾಮೀಣ ಪ್ರದೇಶದಿಂದ ಬಂದವರು. ಹಾಗೆಯೇ ಬಡವರ್ಗದಿಂದ ಬಂದ ಅನಕ್ಷರಸ್ಥರು. ಆದರೂ ನಗರದ ಜನರಿಗೆ, ಶ್ರೀಮಂತ ವರ್ಗಕ್ಕೆ, ವಿದ್ಯಾವಂತರಿಗೆ ಶಿಕ್ಷಣ, ಪರಿಸರಕ್ಕೆ ಸಂಬಂಧಿಸಿ ಮಾದರಿಗಳಾಗಿದ್ದಾರೆ. ನಿಸ್ವಾರ್ಥವಾಗಿ ನಾವು ಸಮಾಜವನ್ನು, ಪರಿಸರವನ್ನು ಪ್ರೀತಿಸಿದಾಗ ಮಾತ್ರ ನಾವು ಇವರಂತಾಗಲು ಸಾಧ್ಯ. ನಮ್ಮ ಮಕ್ಕಳನ್ನು, ನಮ್ಮ ಕುಟುಂಬವನ್ನು ಪ್ರೀತಿಸಿದಂತೆ ಪ್ರಾಮಾಣಿಕವಾಗಿ ನಮ್ಮ ಪರಿಸರವನ್ನು, ನಮ್ಮ ಸಮಾಜವನ್ನು, ಸುತ್ತಲಿನ ಮರಗಿಡಗಳನ್ನು ಪ್ರೀತಿಸಲು ಸಾಧ್ಯವಾದಾಗ ಮಾತ್ರ ನಾವು ಇನ್ನೊಬ್ಬ ತಿಮ್ಮಕ್ಕ, ಇನ್ನೊಬ್ಬ ಹಾಜಬ್ಬ ಆಗಲು ಸಾಧ್ಯ. ಜಗತ್ತಿನ ಎಲ್ಲ ಪರಿಸರ ಹೋರಾಟಗಾರರಿಗೂ ತಿಮ್ಮಕ್ಕ ಬದುಕು ಮಾದರಿಯಾಗಬೇಕಾಗಿದೆ. ತಿಮ್ಮಕ್ಕ ಎನ್ನುವ ವೃಕ್ಷ ತಾಯಿಯ ನೆರಳು ಈ ಜಗತ್ತನ್ನು ಮುಂದೆಯೂ ಪೊರೆಯಲಿದೆ. ಆ ವೃಕ್ಷ ತಾಯಿಯ ನೆರಳಲ್ಲಿ ನಮ್ಮ ಮಕ್ಕಳು ಬೆಳೆದು ಭವಿಷ್ಯದ ಭರವಸೆಗಳಾಗಲಿದ್ದಾರೆ.







