ಕಾರ್ಮಿಕರಿಂದ ದೂರವಾಗುತ್ತಿರುವ ಜಿರಾಮ್ಜಿ ಯೋಜನೆ

ಸಾಂದರ್ಭಿಕ ಚಿತ್ರ x.com/Vijaykulange
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ(ಮನರೇಗಾ) ಯ ರೆಕ್ಕೆ ಪುಕ್ಕಗಳನ್ನು ಕಿತ್ತು, ‘ವಿಬಿ-ಜಿರಾಮ್ಜಿ’ ಹೆಸರಿನಲ್ಲಿ ಹೊಸ ಕಾಯ್ದೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಗಾಂಧಿಯ ಮೇಲೆ ರಾಮನನ್ನು ಹೇರಿ, ಆ ಮೂಲಕ ಈ ಯೋಜನೆಯ ಫಲಾನುಭವಿಗಳನ್ನು ಕಾಯ್ದೆಯಿಂದ ಹೊರಗಿಡಲು ಇನ್ನಷ್ಟು ಪ್ರಯತ್ನಗಳನ್ನು ಸರಕಾರ ಮಾಡಿದೆ. ನರೇಗಾ ಯೋಜನೆಗೆ ಸಂಬಂಧಿಸಿ ಈಗಾಗಲೇ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿರುವ ಕೇಂದ್ರ, ಈ ಯೋಜನೆಯ ಇನ್ನಷ್ಟು ಹೊರೆಯನ್ನು ರಾಜ್ಯಗಳ ಮೇಲೆ ಹೊರಿಸಿದೆ. ಕೆಲಸದ ಅವಧಿಯನ್ನು ಇಳಿಸಿರುವುದು ಮಾತ್ರವಲ್ಲ, ಕೆಲಸವನ್ನು ನಿರ್ಧರಿಸುವ ಹಕ್ಕನ್ನು ಸ್ಥಳೀಯ ಸಂಸ್ಥೆಗಳಿಂದ ಕಿತ್ತುಕೊಂಡಿದೆ. ಈಗಾಗಲೇ ಮನರೇಗಾ ಯೋಜನೆಯಿಂದ ಬೇರೆ ಬೇರೆ ಕಿರುಕುಳಗಳ ಮೂಲಕ ಕಾರ್ಮಿಕರನ್ನು ಹೊರ ಹಾಕಲು ಕೇಂದ್ರ ಸರಕಾರ ಯಶಸ್ವಿಯಾಗಿದೆ. ಭವಿಷ್ಯದಲ್ಲಿ ಈ ಯೋಜನೆಯಿಂದ ಹೊರ ಹೋಗುವ ಕಾರ್ಮಿಕರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎನ್ನುವುದರಲ್ಲಿ ಯಾವ ಸಂಶಯವೂ ಇಲ್ಲ.
ನರೇಗಾ ಅಡಿಯಲ್ಲಿ 2021ರಿಂದ 2026ರವರೆಗೆ ಜಾಬ್ಕಾರ್ಡ್ ಮತ್ತು ಕಾರ್ಮಿಕರನ್ನು ರದ್ದುಗೊಳಿಸಿರುವ ಅಂಕಿಅಂಶವನ್ನು ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಲೋಕಸಭೆಯಲ್ಲಿ ಬಹಿರಂಗಪಡಿಸಿದ್ದಾರೆ. ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಒಟ್ಟಾರೆ 5.20 ಕೋಟಿಯಷ್ಟು ಜಾಬ್ ಕಾರ್ಡ್ ಮತ್ತು ಪಟ್ಟಿಯಿಂದ 13.21 ಕೋಟಿ ಸಂಖ್ಯೆಯ ನರೇಗಾ ಕಾರ್ಮಿಕರನ್ನು ಡಿಲೀಟ್ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ. ಕರ್ನಾಟಕ ರಾಜ್ಯದಲ್ಲೇ ಸುಮಾರು 66.38 ಲಕ್ಷ ನರೇಗಾ ಕಾರ್ಮಿಕರನ್ನು ಡಿಲೀಟ್ ಮಾಡಲಾಗಿದೆ. ಈ ಹಿಂದೊಮ್ಮೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಗೆ ಮಾಹಿತಿಯನ್ನು ನೀಡುತ್ತಾ, ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಗೆ ಆಸಕ್ತಿ ಕಡಿಮೆಯಾಗಿದೆ ಎಂದು ಹೇಳಿಕೆ ನೀಡಿದ್ದರು. ಈ ಯೋಜನೆಗೆ ಬೇಕಾಗಿರುವ ಅನುದಾನವನ್ನು ನೀಡಲು ವಿಫಲವಾಗಿರುವ ಕೇಂದ್ರ ಸರಕಾರ, ತನ್ನನ್ನು ತಾನು ಸಮರ್ಥಿಸಿಕೊಳ್ಳಲು, ಜನರಿಗೆ ನರೇಗಾ ಯೋಜನೆಯ ಮೇಲೆ ಆಸಕ್ತಿಯಿಲ್ಲ ಎಂದು ಸಬೂಬು ಹೇಳತೊಡಗಿತ್ತು. ಇದೇ ಸಂದರ್ಭದಲ್ಲಿ, ಸರಕಾರಿ ಡೇಟಾಗಳನ್ನು ಪರಿಶೀಲಿಸಿದರೆ, ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದು ಕಂಡು ಬರುತ್ತಿತ್ತು. ಕೇಂದ್ರ ಸರಕಾರ ನರೇಗಾ ಯೋಜನೆಯ ವಿರುದ್ಧ ಸಂಚು ರೂಪಿಸಿರುವುದು ಇಂದು ನಿನ್ನೆಯಲ್ಲ. ಸುಮಾರು ಐದು ವರ್ಷಗಳಿಂದಲೇ ಅದು ನರೇಗಾ ಯೋಜನೆಯನ್ನು ಹೇಗೆಲ್ಲ ನಾಶ ಮಾಡಬಹುದು, ಹೇಗೆ ಹಂತಹಂತವಾಗಿ ಕಾರ್ಮಿಕರನ್ನು ಯೋಜನೆಯಿಂದ ಹೊರಗೆ ಹಾಕಬಹುದು ಎಂಬ ಕಾರ್ಯ ಯೋಜನೆಯನ್ನು ರೂಪಿಸುತ್ತಾ ಬಂದಿತ್ತು. ಅಂತಿಮವಾಗಿ ಜಿ ರಾಮ್ ಜಿ ಕಾಯ್ದೆಯ ಮೂಲಕ, ನರೇಗಾ ಯೋಜನೆಯ ಮೂಲ ಸ್ವರೂಪವನ್ನು ಬದಲಾಯಿಸಿ ಅದನ್ನು ಪೂರ್ಣ ಪ್ರಮಾಣದಲ್ಲಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿತು. ಆದರೆ ಶೇ. 40ರಷ್ಟು ಆರ್ಥಿಕ ಹೊರೆಯನ್ನು ರಾಜ್ಯ ಸರಕಾರದ ಮೇಲೆ ಹೇರಿತು.
ಕಳೆದ ಐದು ವರ್ಷಗಳಲ್ಲಿ ಮಧ್ಯ ಪ್ರದೇಶದಲ್ಲಿ 27.10 ಲಕ್ಷ ಜಾಬ್ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ. ಹಾಗೆಯೇ 1.06 ಕೋಟಿ ನರೇಗಾ ಕಾರ್ಮಿಕರನ್ನು ಪಟ್ಟಿಯಿಂದ ಅಳಿಸಿ ಹಾಕಿದೆ. ಗುಜರಾತ್ನಲ್ಲಿ 8.10 ಲಕ್ಷ ಜಾಬ್ ಕಾರ್ಡ್ ಮತ್ತು 25.57 ಲಕ್ಷ ನರೇಗಾ ಕಾರ್ಮಿಕರನ್ನು ಪಟ್ಟಿಯಿಂದ ಹೊರ ಹಾಕಲಾಗಿದೆ. ಮಹಾರಾಷ್ಟ್ರ, ಆಂಧ್ರ, ಅಸ್ಸಾಂ ಹೀಗೆ ದಲಿತರು, ಶೋಷಿತ ಸಮುದಾಯ ಹೆಚ್ಚಿರುವ, ಅಪೌಷ್ಟಿಕತೆಯ ಸಮಸ್ಯೆ ತಾಂಡವವಾಡುತ್ತಿರುವ ರಾಜ್ಯಗಳಲ್ಲೂ ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರನ್ನು ಹೊರಗಿಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಅಪೌಷ್ಟಿಕತೆಯ ನಿವಾರಣೆಗೆ ನರೇಗಾ ಯೋಜನೆಯ ಕೊಡುಗೆಯನ್ನು ಸ್ವತಃ ವಿಶ್ವಸಂಸ್ಥೆಯೇ ಶ್ಲಾಘಿಸಿತ್ತು. 2020-21ರಲ್ಲಿ ದೇಶವನ್ನು ಕೊರೋನ ಸಾಂಕ್ರಾಮಿಕ ರೋಗ ಕಾಡಿದಾಗ ದೇಶಾದ್ಯಂತ ಘೋಷಣೆಯಾದ ಲಾಕ್ಡೌನ್ ದೊಡ್ಡ ಪ್ರಮಾಣದಲ್ಲಿ ನಿರುದ್ಯೋಗ ಸಮಸ್ಯೆಯನ್ನು ಸೃಷ್ಟಿಸಿತ್ತು. ನಗರದ ವಲಸೆ ಕಾರ್ಮಿಕರು ಮತ್ತೆ ತಮ್ಮ ಹಳ್ಳಿಗಳಿಗೆ, ಗ್ರಾಮೀಣ ಪ್ರದೇಶಗಳಿಗೆ ಮರಳುವ ಸ್ಥಿತಿ ನಿರ್ಮಾಣ ಮಾಡಿತ್ತು. ಇಂತಹ ಸಂದರ್ಭದಲ್ಲಿ ಈ ವಲಸೆ ಕಾರ್ಮಿಕರನ್ನು ರಕ್ಷಿಸಿದ್ದು, ಅವರನ್ನು ಹಸಿವಿನಿಂದ ಕಾಪಾಡಿದ್ದು ಇದೇ ನರೇಗಾ ಯೋಜನೆಯಾಗಿತ್ತು. ಕೊರೋನ ಕಾಲದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಮಿಕರಿಗೆ ಈ ಯೋಜನೆ ಆಶ್ರಯವನ್ನು ನೀಡಿತ್ತು. ಅಪೌಷ್ಟಿಕತೆಯಿಂದ ಗ್ರಾಮೀಣ ಪ್ರದೇಶವನ್ನು ರಕ್ಷಿಸಿತ್ತು.
ಕೊರೋನೋತ್ತರ ದಿನಗಳಲ್ಲಿ ನರೇಗಾ ಯೋಜನೆಗೆ ಇನ್ನಷ್ಟು ಹೆಚ್ಚು ಕಾರ್ಮಿಕರು ಸೇರ್ಪಡೆಯಾಗಬೇಕಾಗಿತ್ತು. ಯಾಕೆಂದರೆ, ಕೊರೋನ, ಲಾಕ್ಡೌನ್ ಬಳಿಕ ಆರ್ಥಿಕತೆಯ ಮೇಲೆ ಭಾರೀ ಹೊಡೆತಗಳು ಬಿದ್ದಿವೆ. ನಗರ ಪ್ರದೇಶದಲ್ಲಿ ಉದ್ಯೋಗಗಳು ಇಳಿಕೆಯಾಗಿವೆ. ಸಣ್ಣ ಉದ್ಯಮಗಳು ಮುಚ್ಚಲ್ಪಟ್ಟಿವೆ. ಕೃಷಿ ಉದ್ಯಮದಲ್ಲೂ ಬೀಳುಗಳು ಸೃಷ್ಟಿಯಾಗಿವೆ. ಈ ಕಾರಣದಿಂದ ನರೇಗಾ ಯೋಜನೆಯ ಬಗ್ಗೆ ಕಾರ್ಮಿಕರು ಹೆಚ್ಚು ಆಸಕ್ತಿಯನ್ನು ವಹಿಸಬೇಕಾಗಿತ್ತು. ಆದರೆ ಕೇಂದ್ರ ಸರಕಾರದ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಕಾರ್ಮಿಕರ ಸಂಖ್ಯೆ ಇಳಿಕೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಈ ಯೋಜನೆಯಿಂದ ಕಾರ್ಮಿಕರು ದೂರ ಸರಿಯುವುದಕ್ಕೆ ಕೆಲವು ಸಕಾರಣಗಳೂ ಇವೆ. ದುಡಿದ ಕಾರ್ಮಿಕರಿಗೆ ಭಾರೀ ಪ್ರಮಾಣದಲ್ಲಿ ಸರಕಾರ ಹಣವನ್ನು ಬಾಕಿ ಉಳಿಸಿಕೊಂಡಿದೆ. ಅಂದಂದಿನ ಕೂಲಿಯನ್ನು ಅಂದಂದೇ ಪಡೆದು ಹೊಟ್ಟೆ ಹೊರೆಯುವ ಕಾರ್ಮಿಕರು ದುಡಿದ ಕೂಲಿ ಹಣ ಸಿಗದೆ ಕಂಗಾಲಾಗಿ, ಸರಕಾರದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಿದ್ದಾರೆ. ಆದುದರಿಂದ ಗ್ರಾಮೀಣ ಪ್ರದೇಶದಲ್ಲಿ ಈ ಯೋಜನೆಯಿಂದ ಕಾರ್ಮಿಕರು ದೂರ ಸರಿಯುತ್ತಿದ್ದಾರೆ ಎನ್ನುವ ಆರೋಪಗಳಿವೆ. ಹಾಗೆಯೇ ವೇತನ ಅಸಮತೋಲನವೂ ಕಾರ್ಮಿಕರ ಮೇಲೆ ಪರಿಣಾಮವನ್ನುಂಟು ಮಾಡಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ವೇತನ. ಕಾರ್ಮಿಕರ ಶ್ರಮಕ್ಕೆ ಪೂರಕವಾದ ವೇತನ ನೀಡಲು ಸರಕಾರ ಹಿಂದೇಟು ಹಾಕುತ್ತಿದೆ ಎನ್ನುವ ಆರೋಪಗಳಿವೆ.
ಮುಂದಿನ ದಿನಗಳಲ್ಲಿ ಈ ಯೋಜನೆ ಇನ್ನಷ್ಟು ಹಿನ್ನಡೆ ಅನುಭವಿಸುವ ಸಾಧ್ಯತೆಗಳಿವೆ. ಯಾಕೆಂದರೆ, ಅರ್ಧ ಹೊರೆಯನ್ನು ಕೇಂದ್ರ ಸರಕಾರ ರಾಜ್ಯದ ಮೇಲೆ ಹಾಕಿದೆ. ಈ ಆರ್ಥಿಕ ಹೊರೆಯನ್ನು ತುಂಬಲು ರಾಜ್ಯ ಸರಕಾರದ ಬಳಿ ಆರ್ಥಿಕ ಮೂಲಗಳಿಲ್ಲ. ಕೇಂದ್ರ ಸರಕಾರ ಅನುದಾನ ಒದಗಿಸುತ್ತಿದ್ದ ಸಂದರ್ಭದಲ್ಲೇ ಕಾರ್ಮಿಕರು ವೇತನ ಪಾವತಿಯ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದೀಗ ಕೆಲಸದ ಅವಧಿಗೆ ಕತ್ತರಿ ಹಾಕಲಾಗಿದೆ ಮಾತ್ರವಲ್ಲ, ವೇತನ ಪಾವತಿಗೆ ಹಣ ಹೊಂದಾಣಿಕೆ ಇನ್ನಷ್ಟು ಕಷ್ಟವಾಗಬಹುದು. ಕೆಲಸದಲ್ಲಿ ಕೇಂದ್ರದ ಹಸ್ತಕ್ಷೇಪ, ಸ್ಥಳೀಯ ಸಂಸ್ಥೆಗಳ ಅಧಿಕಾರಕ್ಕೆ ಕತ್ತರಿ ಇವೆಲ್ಲವೂ ಜಿ ರಾಮ್ ಜಿ ಯೋಜನೆಯನ್ನು ಕಾರ್ಮಿಕರಿಂದ ದೂರ ಮಾಡಲಿದೆ ಮತ್ತು ಕೇಂದ್ರ ಉದ್ದೇಶವೂ ಇದೇ ಆಗಿದೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ನರೇಗಾ ಯೋಜನೆಯ ವಿರುದ್ಧ ಕೇಂದ್ರ ಸರಕಾರ ನಡೆಸಿದ ಸಂಚು ಗ್ರಾಮೀಣ ಪ್ರದೇಶದಲ್ಲಿ ನಿರುದ್ಯೋಗ ಹೆಚ್ಚಳಕ್ಕೆ ನೇರ ಕಾರಣವಾಗಲಿದೆ.






