Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಗಾಡ್ಗೀಳ್ ವರದಿ: ಅರಣ್ಯ ರೋದನ!

ಗಾಡ್ಗೀಳ್ ವರದಿ: ಅರಣ್ಯ ರೋದನ!

ವಾರ್ತಾಭಾರತಿವಾರ್ತಾಭಾರತಿ10 Jan 2026 8:40 AM IST
share
ಗಾಡ್ಗೀಳ್ ವರದಿ: ಅರಣ್ಯ ರೋದನ!

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

ಅರಾವಳಿ ಪರ್ವತ ಶ್ರೇಣಿಯ ಮೇಲೆ ಗಣಿಗಾರಿಕೆ ನಡೆಸುವುದಕ್ಕೆ ಕೇಂದ್ರ ಸರಕಾರ ಯೋಜನೆ ರೂಪಿಸುತ್ತಿರುವ ಹೊತ್ತಿನಲ್ಲೇ, ಹಿರಿಯ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನಮ್ಮ ನಡುವಿನಿಂದ ವಿದಾಯ ಹೇಳಿದ್ದಾರೆ. ಗಾಡ್ಗೀಳ್ ಎಂದಾಗ ನೆನಪಾಗುವುದು ಪಶ್ಚಿಮಘಟ್ಟಗಳು. ಬದುಕಿನುದ್ದಕ್ಕೂ ಈ ಪಶ್ಚಿಮಘಟ್ಟದ ಜೀವ ವೈವಿಧ್ಯಗಳಿಗಾಗಿ ಮಿಡಿದ ಗಾಡ್ಗೀಳ್, ಪಶ್ಚಿಮ ಘಟ್ಟಕ್ಕೆ ಸಂಬಂಧಿಸಿದ ವರದಿಗಳಿಗಾಗಿ ಪರ-ವಿರೋಧ ಎರಡನ್ನೂ ಕಟ್ಟಿಕೊಂಡರು. ಗುಜರಾತ್, ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳು ನಾಡಿನಲ್ಲಿ ಹಬ್ಬಿರುವ 1, 64, 280 ಚದರ ಕಿ. ಮೀ. ಪಶ್ಚಿಮಘಟ್ಟಗಳಲ್ಲಿ ಓಡಾಡಿ ಅಲ್ಲಿನ ಮರಗಿಡಗಳು ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಸಮುದಾಯಗಳ ಜನರ ಒಳಗಿನ ಮಾತುಗಳಿಗೆ ಕಿವಿಯಾದವರು. ಕರ್ನಾಟಕವು ಪಶ್ಚಿಮಘಟ್ಟದ ದೊಡ್ಡ ಪಾಲನ್ನು ಹೊಂದಿರುವುದರಿಂದ, ಗಾಡ್ಗೀಳ್ ಅವರನ್ನು ರಾಜ್ಯದ ಜನತೆ ಈಗಲೂ ಸ್ಮರಿಸುತ್ತಿದ್ದಾರೆ. ಗಾಡ್ಗೀಳ್ ವರದಿಯನ್ನು ಜಾರಿ ಮಾಡಬೇಕು ಎಂದು ಪರಿಸರ ವಾದಿಗಳ ದೊಡ್ಡ ಗುಂಪು ಹೋರಾಟ ಮಾಡುತ್ತಿರುವ ನಡುವೆ, ಗಾಡ್ಗೀಳ್ ವರದಿ ಯಾವ ಕಾರಣಕ್ಕೂ ಜಾರಿಯಾಗಬಾರದು ಎಂದು ಕೆಲವು ಹಿತಾಸಕ್ತಿಗಳು ಹಟಕ್ಕೆ ಬಿದ್ದವು. ಗಾಡ್ಗೀಳ್ ವರದಿ ರಾಜಕಾರಣಿಗಳಿಗೆ ನುಂಗಲಾರದ ತುತ್ತಾದಾಗ, ಕಸ್ತೂರಿ ರಂಗನ್ ನೇತೃತ್ವದಲ್ಲಿ ಇನ್ನೊಂದು ಸಮಿತಿಯನ್ನು ರಚಿಸಿ ಗಾಡ್ಗೀಳ್ ವರದಿಯನ್ನು ಸಮಾಧಿ ಮಾಡಲಾಯಿತು. ಪಶ್ಚಿಮಘಟ್ಟಗಳಿಗೆ ಸಂಬಂಧಿಸಿದ ಈ ಎರಡೂ ವರದಿಗಳು ಇಂದು ಅನುಷ್ಠಾನಗೊಳ್ಳದೆ ಧೂಳು ತಿನ್ನುತ್ತಿವೆ.

ಮೌನಕಣಿವೆ ಹೋರಾಟ, ಅಪ್ಪಿಕೋ ಚಳವಳಿ, ಪಶ್ಚಿಮ ಘಟ್ಟ ಉಳಿಸಿ ಈ ಎಲ್ಲ ಸುದೀರ್ಘ ಹೋರಾಟಗಳ ಪರಿಣಾಮವಾಗಿ 2010ರಲ್ಲಿ ಗಾಡ್ಗೀಳ್ ನೇತೃತ್ವದಲ್ಲಿ ಸಮಿತಿ ರಚನೆಯಾಯಿತು. ಸಮಿತಿಯ ಬಹುತೇಕ ಮಂದಿ ಪಶ್ಚಿಮಘಟ್ಟ ಪರಿಸರದ ಭಾಗದ ಜನರೇ ಆಗಿದ್ದರು. 2011ರ ಆಗಸ್ಟ್‌ನಲ್ಲಿ ಎರಡು ಸಂಪುಟಗಳ ವರದಿಯನ್ನು ಗಾಡ್ಗೀಳ್ ಸಮಿತಿ ಕೇಂದ್ರ ಸರಕಾರಕ್ಕೆ ಸಲ್ಲಿಸಿತು. ಸುಮಾರು ಒಂದು ವರ್ಷಗಳ ಕಾಲ ಈ ವರದಿಯನ್ನು ಕೇಂದ್ರ ತನ್ನ ಬಳಿ ಇಟ್ಟುಕೊಂಡಿತು. ವರದಿ ಸಲ್ಲಿಕೆಯಾಗಿರುವುದನ್ನು ಅಧಿಕೃತವಾಗಿ ಬಹಿರಂಗಪಡಿಸುವುದಕ್ಕೆ ಸರಕಾರಕ್ಕೆ ಒಂದು ವರ್ಷ ಬೇಕಾಯಿತು. ಪಶ್ಚಿಮಘಟ್ಟದ ಶೇ. 78ಕ್ಕೂ ಹೆಚ್ಚಿನ ಪ್ರದೇಶಗಳಿಗೆ ಅಂದರೆ ಸುಮಾರು 1,29,037 ಚ. ಕಿ. ಮೀ. ಪ್ರದೇಶಕ್ಕೆ ರಕ್ಷಣೆಯನ್ನು ನೀಡಬೇಕು ಎಂದು ಗಾಡ್ಗೀಳ್ ವರದಿಯಲ್ಲಿ ಆಗ್ರಹಿಸಿದ್ದರು. ನಾಡಿನಲ್ಲಿ ಹೆಚ್ಚುತ್ತಿರುವ ಪ್ರಕೃತಿ ವಿಕೋಪ, ಕಾಡುನಾಶ ಚರ್ಚೆಗೆ ಬಂದಾಗಲೆಲ್ಲ ಗಾಡ್ಗೀಳ್ ವರದಿಯೂ ಮುನ್ನೆಲೆಗೆ ಬರುತ್ತಿತ್ತು. ಗಾಡ್ಗೀಳ್ ವರದಿಯೇನಾದರೂ ಜಾರಿಗೆ ಬಂದದ್ದೇ ಆದರೆ ಸರಕಾರದ ಆಪ್ತ ಭೂಮಾಲಕರು, ಕಾರ್ಪೊರೇಟ್ ದೊರೆಗಳ ‘ಅಭಿವೃದ್ಧಿ ಕಾರ್ಯಾಚರಣೆ’ಗೆ ಧಕ್ಕೆಯಾಗುವ ಸಾಧ್ಯತೆಗಳಿದ್ದವು. ಮೋದಿ ಸರಕಾರ ಅಧಿಕಾರಕ್ಕೆ ಬಂದ ಬಳಿಕವಂತೂ ಗಾಡ್ಗೀಳ್ ವರದಿ ಅನುಷ್ಠಾನ ದೂರದ ಮಾತಾಯಿತು. ಗಾಡ್ಗೀಳ್ ವರದಿ ಜಾರಿಗೊಂಡಿದ್ದರೆ ಕೇರಳದಲ್ಲಿ ಸಂಭವಿಸಿದಂತಹ ಹಲವು ವಿಕೋಪಗಳನ್ನು ತಡೆಯುವ ಸಾಧ್ಯತೆಗಳಿತ್ತು ಎಂದು ಪರಿಸರ ತಜ್ಞರು ಅಭಿಪ್ರಾಯ ಪಡುತ್ತಾರೆ. ಪರಿಸರವಾದಿಗಳ ಬಾಯಿ ಮುಚ್ಚಿಸಲು ಮತ್ತು ಗಾಡ್ಲೀಳ್ ವರದಿಯನ್ನು ತೆಳುಗೊಳಿಸುವುದಕ್ಕಾಗಿಯೇ ಕಸ್ತೂರಿ ರಂಗನ್ ವರದಿಯನ್ನು ಸರಕಾರ ತರಿಸಿಕೊಂಡಿತು. ಕಸ್ತೂರಿ ರಂಗನ್ ವರದಿಯು ಸಂರಕ್ಷಿತ ಪ್ರದೇಶದ ವ್ಯಾಪ್ತಿಯನ್ನು ಕಿರಿದುಗೊಳಿಸಿತು. ಮುಖ್ಯವಾಗಿ ಕಸ್ತೂರಿ ರಂಗನ್ ವರದಿಯು ಪರಿಸರವಾದಿಗಳು ಮತ್ತು ಸರಕಾರದ ನಡುವೆ ಒಂದು ಸೇತುವೆಯನ್ನು ಅಥವಾ ಮಧ್ಯಸ್ಥಿಕೆಯನ್ನು ವಹಿಸಿತ್ತು.

ಇದರ ಪ್ರಕಾರ 59,949 ಚ.ಕಿ. ಮೀ. ಪ್ರದೇಶದಲ್ಲಿ ಗಣಿಗಾರಿಕೆ, ಕ್ವಾರಿ, ಮರಳುಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಉಷ್ಣ ವಿದ್ಯುತ್, ಜಲವಿದ್ಯುತ್, ಪವನವಿದ್ಯುತ್ ಯೋಜನೆಗಳು ಸಂಪೂರ್ಣ ನಿಷೇಧಿತ. ವರದಿ ಜಾರಿಯಾದ ಬಳಿಕ ಮುಂದಿನ ಐದು ವರ್ಷದೊಳಗೆ ಈಗಿರುವ ಎಲ್ಲ ರೀತಿಯ ಗಣಿಗಾರಿಕೆ ಸ್ಥಗಿತವಾಗಬೇಕು. 20,000 ಚ. ಮೀ.ಗಿಂತ ಹೆಚ್ಚು ವಿಸ್ತೀರ್ಣದ ಯಾವುದೇ ನಿರ್ಮಾಣ ಕೈಗೆತ್ತಿಕೊಳ್ಳುವಂತಿಲ್ಲ. ಗಾಡ್ಗೀಳ್ ವರದಿ ಪರಿಸರ ನಿಷ್ಠವಾಗಿತ್ತು ಮಾತ್ರವಲ್ಲ, ಅದು ಸ್ಥಳೀಯ ಆದಿವಾಸಿಗಳ ಹಿತಾಸಕ್ತಿಗೆ ಪೂರಕವಾಗಿತ್ತು. ಕಾಡುಗಳ ರಕ್ಷಣೆಯ ಹೊಣೆಯನ್ನು ಆದಿವಾಸಿಗಳು ನಿಭಾಯಿಸಬಲ್ಲರು ಎನ್ನುವ ಆಶಯ ಅದರಲ್ಲಿತ್ತು. ಆದರೆ ಕಸ್ತೂರಿರಂಗನ್ ವರದಿ ಬಹಳಷ್ಟು ವಿನಾಯಿತಿಗಳನ್ನು ನೀಡಿತು. ಇಷ್ಟಾದರೂ ಕರ್ನಾಟಕ ಸರಕಾರವೂ ಸೇರಿದಂತೆ ಬಹುತೇಕ ರಾಜ್ಯಗಳು ಕಸ್ತೂರಿ ರಂಗನ್ ವರದಿಯನ್ನೂ ವಿರೋಧಿಸಿದ್ದವು. ಪಶ್ಚಿಮಘಟ್ಟ ಎಂದರೆ ಕೇವಲ ಅರಣ್ಯ ಪ್ರದೇಶ ಮತ್ತು ಪ್ರಾಣಿ ವೈವಿಧ್ಯಗಳಿಗೆ ಸಂಬಂಧಿಸಿದ್ದಾದರೆ ಇಷ್ಟು ಸಮಸ್ಯೆಯಿರುತ್ತಿರಲಿಲ್ಲವೇನೋ. ಗಾಡ್ಗೀಳ್ ವರದಿಯು ಈ ಪ್ರದೇಶಗಳನ್ನು ನೈಸರ್ಗಿ ಕ ವಲಯ ಮತ್ತು ಸಾಂಸ್ಕೃತಿಕ ವಲಯವಾಗಿ ವಿಂಗಡಿಸಿದೆ. ನೈಸರ್ಗಿಕ ವಲಯದಲ್ಲಿ ಅರಣ್ಯ ಇಲಾಖೆ ಅಧೀನಕ್ಕೊಳಪಟ್ಟಿರುವ ಭೂಭಾಗವಿದೆ. ಇಲ್ಲಿ ಆದಿವಾಸಿಗಳನ್ನು ಬಿಟ್ಟರೆ ಬೇರೆ ಜನವಸತಿ ಇಲ್ಲ. ಇವರನ್ನು ಒಕ್ಕಲೆಬ್ಬಿಸುವುದು ಸರಕಾರಕ್ಕೇನೂ ಕಷ್ಟವಿಲ್ಲ. ಸಾಂಸ್ಕೃತಿಕ ವಲಯವೆಂದರೆ ಇಲ್ಲಿ ಖಾಸಗಿ ಭೂ ಒಡೆತನವಿದೆ. ಒಟ್ಟಾರೆ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಐದು ಕೋಟಿಯಷ್ಟು ಜನವಸತಿ ಇದೆ ಎಂದು ಕಸ್ತೂರಿ ರಂಗನ್ ವರದಿ ಹೇಳುತ್ತಿದೆ. ಖಾಸಗಿ ಭೂಮಾಲಕರು ರಾಜಕೀಯ ಶಕ್ತಿಗಳ ಜೊತೆಗೆ ಕೈ ಜೋಡಿಸಿರುವುದು ಕಸ್ತೂರಿ ರಂಗನ್ ವರದಿಗೆ ಸಮಸ್ಯೆಯಾಯಿತು. ಅಷ್ಟೇ ಅಲ್ಲ, ಖಾಸಗಿ ವಲಯಗಳು ಈ ಪ್ರದೇಶದ ಮೇಲೆ ಗಣಿಗಾರಿಕೆಗಾಗಿ ಕಣ್ಣಿಟ್ಟಿವೆ. ಸರಕಾರಗಳು ಈ ಖಾಸಗಿ ವಲಯದ ಜೊತೆಗೆ ಶಾಮೀಲಾಗಿವೆ. ಈ ಭಾಗದ ಸ್ಥಳೀಯ ಭೂಮಾಲಕರು ಇದು ತಮಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ ಎಂದು ಬಲವಾಗಿ ನಂಬಿದ್ದಾರೆ. ಹಾಗೆ ನಂಬಿದವರಿಗೆ ಈ ಎರಡೂ ವರದಿಗಳೂ ಅನುಷ್ಠಾನಗೊಳ್ಳುವುದು ಬೇಕಾಗಿಲ್ಲ. ಇದು ಅಭಿವೃದ್ಧಿಗೆ ಮಾರಕವಾಗಲಿದೆ, ಯಾವುದೇ ಅತ್ಯಗತ್ಯವಾದ ಮೂಲಭೂತ ಅಭಿವೃದ್ಧಿ ಕಾಮಗಾರಿಗಳಿಗೆ ಈ ವರದಿಗಳು ತೊಡಕಾಗಲಿವೆ ಎಂದು ನಂಬಿದ್ದಾರೆ.

ವಿಪರ್ಯಾಸವೆಂದರೆ, ಪಶ್ಚಿಮಘಟ್ಟ ಉಳಿಸುವ ಬಗ್ಗೆ ಚರ್ಚೆ ನಡೆಯುತ್ತಿರುವ ಮಧ್ಯೆಯೇ ದೇಶಾದ್ಯಂತ ಅರಣ್ಯ ಪ್ರದೇಶಗಳಲ್ಲಿ ಎಗ್ಗಿಲ್ಲದೆ ಗಣಿಗಾರಿಕೆಗಳಿಗೆ ಸರಕಾರ ಅನುಮತಿಯನ್ನು ನೀಡುತ್ತಾ ಬಂದಿದೆ. ಇವೆಲ್ಲದರ ನಡುವೆ, ರಾಜಸ್ಥಾನ, ಹರ್ಯಾಣ, ದಿಲ್ಲಿ ಮತ್ತು ಗುಜರಾತ್ ರಾಜ್ಯಗಳಲ್ಲಿ ಹರಡಿಕೊಂಡಿರುವ ಅರಾವಳಿಯಲ್ಲಿ ಗಣಿಗಾರಿಕೆ ನಡೆಸುವುದಕ್ಕಾಗಿ ನಿಯಮವನ್ನೇ ಬದಲಿಸಲು ಮುಂದಾಯಿತು. ಸುಪ್ರೀಂಕೋರ್ಟನ್ನು ಕೂಡ ಸರಕಾರ ತನ್ನ ದುರುದ್ದೇಶಕ್ಕೆ ಬಳಸಿಕೊಂಡಿತು. ಆದರೆ ಪರಿಸರವಾದಿಗಳು ಇದರ ಬಗ್ಗೆ ದೊಡ್ಡ ಧ್ವನಿಯಲ್ಲಿ ಮಾತನಾಡುತ್ತಿದ್ದಂತೆಯೇ ಸರಕಾರ ಬಾಲ ಮಡಚಿಕೊಂಡಿತು. ಸುಪ್ರೀಂಕೋರ್ಟ್ ಕೂಡ ತನ್ನ ತೀರ್ಪನ್ನು ತಿದ್ದಿಕೊಳ್ಳುವ ಸ್ಥಿತಿ ನಿರ್ಮಾಣವಾಯಿತು. ಅರಾವಳಿಯಲ್ಲಿ ಗಣಿಗಾರಿಕೆಗಳು ಆರಂಭವಾದರೆ, ಅದು ನಗರಗಳ ವಾಯುಮಾಲಿನ್ಯವನ್ನು ಇನ್ನಷ್ಟು ಭೀಕರವಾಗಿಸಲಿದೆ. ಆದರೆ ಈ ಭಾಗದಲ್ಲಿರುವ ಖನಿಜ ಸಂಪತ್ತಿನ ಮೇಲೆ ಕಣ್ಣು ಹಾಕಿರುವ ಸರಕಾರ ಮತ್ತು ಅದರ ಬೆನ್ನಿಗಿರುವ ಕಾರ್ಪೊರೇಟ್ ಶಕ್ತಿಗಳು ಅರಾವಳಿಯನ್ನು ಅದರಷ್ಟಕ್ಕೇ ಬಿಡುತ್ತಾರೆ ಎನ್ನುವಂತಿಲ್ಲ. ಇದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರಿದಿದೆ. ನಾವು ಉಸಿರಾಡುತ್ತಿರುವ ಗಾಳಿ, ಕುಡಿಯುವ ನೀರು ವಿಷವಾಗುತ್ತಿರುವ ಹೊತ್ತಿಗೆ ಗಾಡ್ಗೀಳ್ ನಮ್ಮ ನಡುವಿನಿಂದ ಅಗಲಿದ್ದಾರೆ. ಪರಿಸರ ಪರವಾದ ಧ್ವನಿ ನಿಜಕ್ಕೂ ಅರಣ್ಯ ರೋದನವಾಗಿ ಬದಲಾಗಿದೆ.

Tags

Gadgil Report
share
ವಾರ್ತಾಭಾರತಿ
ವಾರ್ತಾಭಾರತಿ
Next Story
X