ಜಿಡಿಪಿಯ ಹೆಚ್ಚಳ : ತೋಟ ಶೃಂಗಾರದ ಮೂಲಕ ವೈಫಲ್ಯಗಳಿಗೆ ತೆರೆ?

ಸಾಂದರ್ಭಿಕ ಚಿತ್ರ | Photo : freepik
ಭಾರತದ ಆರ್ಥಿಕತೆಗೆ ಸಂಬಂಧಿಸಿದಂತೆ ಹಣಕಾಸು ವರ್ಷ 2026-27ರ ಎರಡು ಪ್ರಮುಖ ಸುದ್ದಿಗಳು ದೇಶದ ಉಳಿದ ರಂಗಗಳಂತೆ ಆರ್ಥಿಕ ಚಿಂತನೆಯಲ್ಲಿನ ಧ್ರುವೀಕರಣವನ್ನು ಮುನ್ನೆಲೆಗೆ ತಂದಿವೆ. ಈ ಧ್ರುವೀಕರಣವು ಜನರ ಗಮನವನ್ನು ತಿರುಗಿಸಿ ವಸ್ತುಸ್ಥಿತಿಯನ್ನು ಮುಚ್ಚಿಹಾಕುತ್ತದೆ. ಸಮಸ್ಯೆಗಳು ಇದ್ದಂತೆಯೇ ಮುಂದುವರಿಯುತ್ತವೆ.
ಮೊದಲ ಸುದ್ದಿ: ಎಪ್ರಿಲ್ 2026ರಲ್ಲಿ ಅಂತರ್ರಾಷ್ಟ್ರೀಯ ನಾಣ್ಯ ನಿಧಿ (IMF-International Monetary Fund) ಪ್ರಕಟಿಸಿದ ವರದಿಯ ಪ್ರಕಾರ ವಿಶ್ವದ ಅತಿ ದೊಡ್ಡ ಆರ್ಥಿಕತೆಗಳ ರ್ಯಾಂಕಿಂಗ್ನಲ್ಲಿ ಭಾರತವು 4ರಿಂದ 6ಕ್ಕೆ ಇಳಿದಿದೆ. ಅಮೆರಿಕ ಮತ್ತು ಚೀನಾ ಎಲ್ಲಕ್ಕಿಂತ ಮೇಲಿವೆ; ಜರ್ಮನಿ, ಜಪಾನ್ ಮತ್ತು ಇಂಗ್ಲೆಂಡ್ ಅನುಕ್ರಮವಾಗಿ ಮೂರು, ನಾಲ್ಕು ಮತ್ತು ಐದನೇ ಸ್ಥಾನದಲ್ಲಿವೆ.
ಸೆಪ್ಟಂಬರ್ 2022ರಲ್ಲಿ ಭಾರತವು ಇಂಗ್ಲೆಂಡನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೆ ಏರಿದಾಗ ಶತಮಾನಕ್ಕೂ ಹೆಚ್ಚು ಕಾಲ ನಮ್ಮನ್ನು ಆಳಿದ ದೇಶವನ್ನು ನಾವು ಈಗ ಸೋಲಿಸಿದ್ದೇವೆ ಎಂದು ಬೀಗಿದೆವು. ಮೇ 2025ರಲ್ಲಿ ಜಪಾನನ್ನು ಹಿಂದೆ ಹಾಕಿದಾಗ ವಿಶ್ವದಲ್ಲಿ 4ನೇ ದೊಡ್ಡ ಆರ್ಥಿಕತೆ ಎಂದು ಸಂತಸಪಟ್ಟೆವು. ನೀತಿ ಆಯೋಗದ ಮುಖ್ಯಸ್ಥ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು 2029ಕ್ಕೆ ಭಾರತವು 3ನೇ ಸ್ಥಾನಕ್ಕೆ ಏರಲಿದೆ ಎಂದು ಹೇಳಿದ್ದರು. ಈ ಎಲ್ಲ ಲೆಕ್ಕಾಚಾರಗಳನ್ನು ಐಎಂಎಫ್ನ ಎಪ್ರಿಲ್ ವರದಿಯು ಹುಸಿಗೊಳಿಸಿದೆ.
ಎರಡನೆಯ ಸುದ್ದಿ: ಈ ವರ್ಷದ ಜೂನ್ ತ್ರೈಮಾಸಿಕದಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ- (ಜಿಡಿಪಿ)ವು ಶೇ. 7.8 ಹೆಚ್ಚಳವನ್ನು ದಾಖಲಿಸಿದೆ. ಇದು ಹೋದ ವರ್ಷದ ಜೂನ್ ತ್ರೈಮಾಸಿಕದಲ್ಲಿ ದಾಖಲಿಸಿದ ಶೇ. 6.9ಕ್ಕಿಂತ ಹೆಚ್ಚು. ವಿದೇಶ ಪ್ರವಾಸದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡಿ ‘‘ಸರ್ವಜನರ ಭಗೀರಥ ಪ್ರಯತ್ನದಿಂದಾಗಿ ಮಾದರಿಯಾಗಬಲ್ಲ ಈ ಯಶಸ್ಸನ್ನು ಸಾಧಿಸಿದ್ದೇವೆ, ಮಾತ್ರವಲ್ಲ ಯಾವಾಗಲೂ ಅನಿಷ್ಟವನ್ನೇ ಕಾಣುವವರು ನಿರಾಶರಾಗಬೇಕಾಗಿದೆ’’ ಎಂದೂ ಉಲ್ಲೇಖಿಸಿದರು.
ಈ ಎರಡು ಸುದ್ದಿಗಳು ಭಾರತದ ಇಂದಿನ ಅರ್ಥವ್ಯವಸ್ಥೆಯ ವಾಸ್ತವದ ಕುರಿತು ಆಗಬೇಕಾದ ವಸ್ತು ನಿಷ್ಠ ಚರ್ಚೆಯನ್ನು ಕಂಬಿ ತಪ್ಪಿಸುತ್ತವೆ. ಪ್ರಚಾರಕ್ಕೇ ಆದ್ಯತೆ ನೀಡುವ ಕೇಂದ್ರ ಸರಕಾರದ ನೀತಿಗೂ ಇದು ಪೂರಕವಾಗಿದೆ.
ಅಂತರ್ರಾಷ್ಟ್ರೀಯ ಮಟ್ಟದಲ್ಲಿ ದೇಶಗಳ ಆರ್ಥಿಕತೆಯ ಗಾತ್ರವನ್ನು ಅಮೆರಿಕದ ಡಾಲರ್ಗಳಲ್ಲಿ ಸೂಚಿಸಲಾಗುತ್ತದೆ. ಸ್ವಾಭಾವಿಕವಾಗಿ ಭಾರತದ ರೂಪಾಯಿಯು ಡಾಲರಿನ ವಿರುದ್ಧ ಅಪಮೌಲ್ಯವಾದಾಗ ದೇಶೀಯ ಉತ್ಪನ್ನದ ಡಾಲರ್ ಮೌಲ್ಯ ಕುಗ್ಗುತ್ತದೆ. ರಶ್ಯ-ಉಕ್ರೆನ್ ಯುದ್ಧ ಮತ್ತು ಮಧ್ಯಪ್ರಾಚ್ಯ ಬಿಕ್ಕಟ್ಟು ಭಾರತದ ರೂಪಾಯಿಯ ಮೌಲ್ಯದ ನಿರಂತರ ಕುಸಿತಕ್ಕೆ ಕಾರಣವಾಗಿವೆ. ಆಂತರಿಕ ಅರ್ಥವ್ಯವಸ್ಥೆಯ ನೈಜ ಆಗುಹೋಗುಗಳನ್ನು ಡಾಲರ್ ರೂಪದಲ್ಲಿ ಚಿತ್ರಿಸಲಾಗುವ ಗಾತ್ರ ಬಿಂಬಿಸುವುದಿಲ್ಲ. ಹೀಗಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಭಾರತದ ರ್ಯಾಂಕು ಏರಿಳಿತಗೊಂಡಾಗ ಹೆಮ್ಮೆಪಡುವ ಅಥವಾ ವಿಷಾದಿಸುವ ಅಗತ್ಯವಿಲ್ಲ.
ಈಗ ಸರಕಾರವು ಪ್ರಕಟಿಸಿರುವ ಮಾಹಿತಿಯ ಕುರಿತಂತೆ ಪರ-ವಿರೋಧ ಅಭಿಪ್ರಾಯಗಳು ಮುನ್ನೆಲೆಗೆ ಬಂದಿವೆ. ಕೇಂದ್ರ ಸರಕಾರದ ಆರ್ಥಿಕ ಸಲಹಾಗಾರ, ಸಂಜೀವ ಸನ್ಯಾಲರು ಸರಕಾರದ ಅಂಕಿಅಂಶಗಳನ್ನು ತಾರ್ಕಿಕವಾಗಿಯೇ ಸಮರ್ಥಿಸಿದ್ದಾರೆ. ಆದರೆ ಹಿಂದೆ ಇದೇ ಸರಕಾರದ ಆರ್ಥಿಕ ಸಲಹಾಗಾರರಾಗಿದ್ದ ಅರವಿಂದ ಸುಬ್ರಹ್ಮಣ್ಯಂ ಮತ್ತು ಹಣಕಾಸು ವಿಭಾಗದ ಕಾರ್ಯದರ್ಶಿಯಾಗಿದ್ದ ಸುಭಾಷ್ಚಂದ್ರ ಗರ್ಗ್, ರಿಸರ್ವ್ ಬ್ಯಾಂಕ್ನ ಗವರ್ನರ್ರಾಗಿದ್ದ ರಘುರಾಮ ರಾಜನ್ ಮುಂತಾದವರು ಸರಕಾರವು ಬಿಡುಗಡೆಮಾಡಿದ ಮಾಹಿತಿಯು ಪ್ರಶ್ನಾರ್ಹವೆಂದಿದ್ದಾರೆ.
ಭಿನ್ನವಾದ ಈ ಎರಡು ದೃಷ್ಟಿಕೋನಗಳ ಹಿಂದೆ ಜಿಡಿಪಿಯ ಹೆಚ್ಚಳವನ್ನು ಅಳೆಯುವ ಮಾನದಂಡ ಅಡಕವಾಗಿದೆ. ಸರಳವಾಗಿ ಹೇಳುವುದಾದರೆ ಆರ್ಥಿಕತೆಗೆ ಸಂಬಂಧಿಸಿದ ವಿವಿಧ ಸೂಚ್ಯಂಕಗಳನ್ನು ಸಾಮಾನ್ಯವಾಗಿ ಆಯಾಯ ದಶಕದ ಮೊದಲನೆಯ ವರ್ಷವನ್ನು ಆಧಾರವಾಗಿಟ್ಟು (ಆಧಾರ ವರ್ಷ) ಮುಂದಿನ ವರ್ಷಗಳ ಸಾಧನೆಯನ್ನು ತುಲನೆಮಾಡಿ ಜಿಡಿಪಿ ಎಷ್ಟು ವೃದ್ಧಿಯಾಗಿದೆ ಎಂದು ಹೇಳಲಾಗುತ್ತದೆ. ಈ ಕ್ರಮವು ಅನೇಕ ವರ್ಷಗಳಿಂದ ವಾಡಿಕೆಯಲ್ಲಿದೆ. ಇದರ ಪ್ರಕಾರ ಹೋದ ವರ್ಷ ಜೂನ್ ತಿಂಗಳಲ್ಲಿ ದೇಶದ ಜಿಡಿಪಿಯು ರೂ.86 ಲಕ್ಷ ಕೋಟಿಗಳಷ್ಟಿತ್ತು.
ಆದರೆ ಈ ಬಾರಿ ಸರಕಾರವು ಆಧಾರವರ್ಷವನ್ನು 2022-23ಕ್ಕೆ ಬದಲಾಯಿಸಿ ಆ ವರ್ಷದ ಜಿಡಿಪಿಗೆ ಈ ಜೂನ್ ತಿಂಗಳ ಮಟ್ಟವನ್ನು ಹೋಲಿಸಿ ಜಿಡಿಪಿಯು ಶೇ. 7.8 ವೃದ್ಧಿಸಿದೆ ಎಂದು ಹೇಳಿದೆ. ಬದಲಾಯಿಸಿದ ಆಧಾರವರ್ಷದ ಮಾನಕವನ್ನಿಟ್ಟು 2025ರ ಜಿಡಿಪಿಯ ಲೆಕ್ಕ ಹಾಕಿದರೆ ಅದು ರೂ.80 ಲಕ್ಷ ಕೋಟಿಗೆ ಇಳಿಯುತ್ತದೆ ಮತ್ತು ಈ ಜೂನ್ ತ್ರೈಮಾಸಿಕದ ಜಿಡಿಪಿಯು ರೂ.88.27ಲಕ್ಷ ಕೋಟಿ ಆಗುತ್ತದೆ, ಅಂದರೆ ಸರಕಾರದ ಪ್ರಕಾರ ಜಿಡಿಪಿಯು ಶೇ. 7.8 ವೃದ್ಧಿಸಿದೆ.
ತಜ್ಞರು ಈ ಪದ್ಧತಿ ತಪ್ಪು ಎನ್ನುತ್ತಾರೆ: ಅವರ ಪ್ರಕಾರ ಜೂನ್ 2025ರ ತ್ರೈಮಾಸಿಕದ ಜಿಡಿಪಿ ರೂ. 86 ಲಕ್ಷ ಕೋಟಿಯನ್ನು ಆಧಾರವಾಗಿಟ್ಟು ತುಲನೆ ಮಾಡಿದಾಗ ಈ ಜೂನ್ನಲ್ಲಿ ಜಿಡಿಪಿ ಕೇವಲ ಶೇ. 2.6ರಷ್ಟು ಏರಿದೆ.
ಇಲ್ಲಿ ಜಿಡಿಪಿಯ ಏರಿಕೆಯ ತುಲನೆಯ ಕ್ರಮ, ಪ್ರಮಾಣ, ಭಾರತದ ಆರ್ಥಿಕತೆಯ ಗಾತ್ರ ಮತ್ತು ವಿಶ್ವದಲ್ಲಿ ಅದರ ರ್ಯಾಂಕಿಂಗ್ ಎಲ್ಲಕ್ಕಿಂತ ಮಿಗಿಲಾಗಿ ಕೆಲವು ಮೂಲಭೂತ ಪ್ರಶ್ನೆಗಳು ಏಳುತ್ತವೆ. ಸರಕಾರದ ಅಂಕಿಅಂಶಗಳು ನಿರುದ್ಯೋಗಿಗಳ ಪ್ರಮಾಣ ಎಷ್ಟಿದೆ, ಎಷ್ಟು ಹೊಸ ಉದ್ಯೋಗಗಳು ಹುಟ್ಟಿವೆ, ಬೆಲೆಗಳು ಎಷ್ಟು ಹೆಚ್ಚಿವೆ, ಕೌಟುಂಬಿಕ ಉಳಿತಾಯದ ಪ್ರಮಾಣದಲ್ಲಿ ಏನು ಬದಲಾವಣೆ ಆಗಿದೆ ಮತ್ತು ದೈನಂದಿನ ವೆಚ್ಚ ಎಷ್ಟು ಏರಿದೆ, ಬಂಡವಾಳ ಹೂಡಿಕೆಯಲ್ಲಿ ಎಷ್ಟು ವೃದ್ಧಿಯಾಗಿದೆ ಮುಂತಾದ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ. ದೇಶದೊಳಗಿನ ಭೌಗೋಳಿಕ ಅಸಮಾನತೆ, ಹೆಚ್ಚುತ್ತಿರುವ ಬಡವ ಮತ್ತು ಶ್ರೀಮಂತರ ನಡುವಿನ ಅಂತರ, ಮಧ್ಯಮವರ್ಗ ಮತ್ತು ತಳವರ್ಗದ ಪ್ರಜೆಗಳ ಆದಾಯ ಮತ್ತು ಸಂಪತ್ತುಗಳ ನಿರಂತರ ಕುಸಿತ ಆಗುತ್ತಿರುವುದು ಭಾರತದ ಆರ್ಥಿಕತೆಯ ಅಸ್ಥಿರತೆಯನ್ನು ಬಿಂಬಿಸುತ್ತವೆ. ಈ ದೃಷ್ಟಿಯಿಂದ ನೋಡಿದರೆ ಭಾರತದ ಆರ್ಥಿಕತೆ ಇನ್ನೂ ಸುಭದ್ರವಾಗಬೇಕಷ್ಟೆ.
ದೇಶದ ಜಿಡಿಪಿಯ ಹೆಚ್ಚಳವು ಅರ್ಥವ್ಯವಸ್ಥೆಯ ಕಟು ವಾಸ್ತವವನ್ನು ಗ್ರಹಿಸುವುದಿಲ್ಲ. ಬದಲಾಗಿ ಅಸಮರ್ಪಕ ಆರ್ಥಿಕ ನಿರ್ವಹಣೆಯನ್ನು ತೋಟಶೃಂಗಾರದ ಮೂಲಕ ಮುಚ್ಚಿಹಾಕುತ್ತದೆ.






