ಕನಿಷ್ಠ ಸೌಕರ್ಯಗಳಿಲ್ಲದ ಸರಕಾರಿ ಶಾಲೆಗಳು

ಸಾಂದರ್ಭಿಕ ಚಿತ್ರ
ಜನಸಾಮಾನ್ಯರ ಮಕ್ಕಳು ಓದುವ ಸರಕಾರಿ ಶಾಲೆಗಳ ಬಗ್ಗೆ ಸರಕಾರ ಯಾಕೆ ನಿರ್ಲಕ್ಷ್ಯ ಧೋರಣೆ ತಾಳಿದೆಯೋ ಅರ್ಥವಾಗುತ್ತಿಲ್ಲ. ನಮ್ಮ ಮಂತ್ರಿಗಳು, ಶಾಸಕರು ಸೇರಿದಂತೆ ಅಧಿಕಾರದಲ್ಲಿರುವ ರಾಜಕಾರಣಿಗಳು ಭಾಷಣಗಳಲ್ಲಿ ಸರಕಾರಿ ಕನ್ನಡ ಶಾಲೆಗಳ ಬಗ್ಗೆ ಸಾಕಷ್ಟು ಮಾತಾಡುತ್ತಾರೆ. ಆದರೆ ಆಚರಣೆಯಲ್ಲಿ ಮಾತ್ರ ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ಸರಕಾರಿ ಕನ್ನಡ ಶಾಲೆಗಳು ಮುಚ್ಚಿ ಹೋಗುತ್ತಿರುವುದಕ್ಕೆ ಈ ನಿರ್ಲಕ್ಷ್ಯ ನೀತಿಯೇ ಕಾರಣ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಅಧಿಕಾರದಲ್ಲಿರುವ ಬಹುತೇಕ ರಾಜಕಾರಣಿಗಳಿಗೆ ತಮ್ಮ ಒಡೆತನದ ಸ್ವಂತದ ಶಾಲೆ, ಕಾಲೇಜುಗಳಿವೆ. ಹೀಗಾಗಿ ಸರಕಾರಿ ಶಾಲೆಗಳ ಬಗ್ಗೆ ಅವರಿಗೆ ಆಸಕ್ತಿ ಕಡಿಮೆ ಎಂಬ ಟೀಕೆಗಳು ಆಗಾಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತವೆ.
ರಾಜ್ಯದ ಸರಕಾರಿ ಕನ್ನಡ ಶಾಲೆಗಳು ತೀವ್ರವಾದ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ರಾಜ್ಯದಲ್ಲಿರುವ ಒಟ್ಟು 46,112 ಸರಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪೈಕಿ 22,078 ಶಾಲೆಗಳ ಕಟ್ಟಡಗಳು ಯಾವಾಗ ಬೀಳುತ್ತವೆಯೋ ಎಂದು ಹೇಳಲಾಗದಷ್ಟು ಶಿಥಿಲಾವಸ್ಥೆಯಲ್ಲಿವೆ. ಈ ಶಾಲೆಗಳಲ್ಲಿ ವ್ಯಾಸಂಗ ಮಾಡುವ ಲಕ್ಷಾಂತರ ವಿದ್ಯಾರ್ಥಿಗಳ ಸುರಕ್ಷತೆ ಅಪಾಯದಲ್ಲಿ ಇದೆ. ಈ ಶಾಲೆಗಳ ಪೈಕಿ 36,338ಕ್ಕೂ ಹೆಚ್ಚು ತರಗತಿ ಕೊಠಡಿಗಳನ್ನು ವಿಳಂಬ ಮಾಡದೆ ತಕ್ಷಣ ದುರಸ್ತಿ ಹಾಗೂ ಮರು ನಿರ್ಮಾಣ ಮಾಡಬೇಕಾಗಿದೆ. ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಅಂದರೆ 1,572 ಕೊಠಡಿಗಳು ತೀವ್ರ ಅಪಾಯದ ಸ್ಥಿತಿಯಲ್ಲಿವೆ. ಅದೇ ರೀತಿ ಬೆಳಗಾವಿ, ರಾಯಚೂರು, ಬಿಜಾಪುರ, ಮೈಸೂರು ಮೊದಲಾದ ಜಿಲ್ಲೆಗಳ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ರಾಜ್ಯದ ಸುಮಾರು 18,196(ಶೇಕಡ 40 ರಷ್ಟು) ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಬಹುತೇಕ ಶಾಲೆಗಳಲ್ಲಿ ಶೌಚಾಲಯಗಳಿಲ್ಲ, ಇದ್ದರೂ ನಿರ್ವಹಣೆಯ ಕೊರತೆಯಿಂದ ಹಾಳಾಗಿ ಹೋಗಿವೆ. ಇದರಿಂದ ಮಕ್ಕಳ ಸರ್ವಾಂಗೀಣ ವಿಕಾಸಕ್ಕೆ ತೊಡಕಾಗಿದೆ.
ಶಿಕ್ಷಣ ಕ್ಷೇತ್ರಕ್ಕೆ ಸರಕಾರ ಹಣ ಖರ್ಚು ಮಾಡುವುದಿಲ್ಲವೆಂದಲ್ಲ. ರಾಜ್ಯದ ಮುಂಗಡ ಪತ್ರದಲ್ಲಿ ಒಟ್ಟು ವೆಚ್ಚದ ಸುಮಾರು ಶೇ.10ರಷ್ಟು ಅಂದರೆ 44,000 ಕೋಟಿ ರೂ.ಗೂ ಹೆಚ್ಚು ಅನುದಾನವನ್ನು ಮೀಸಲಿಡಲಾಗುತ್ತದೆ.ಮುಂಗಡಪತ್ರದಲ್ಲಿ ಇಷ್ಟು ಭಾರೀ ಪ್ರಮಾಣದ ಸಾರ್ವಜನಿಕರ ಬೊಕ್ಕಸದ ಹಣವನ್ನು ನೀಡಿದರೂ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮೂಲ ಸೌಕರ್ಯಗಳನ್ನು ಸುಧಾರಣೆ ಮಾಡಲು ಯಾಕೆ ಸಾಧ್ಯವಾಗಿಲ್ಲ? ಮುಂಗಡ ಪತ್ರದಲ್ಲಿ ಒದಗಿಸಲಾದ ಹಣ ಎಲ್ಲಿಗೆ ಹೋಗುತ್ತದೆ? ಇದಕ್ಕೆ ಮುಖ್ಯ ಕಾರಣ ಆಡಳಿತಾತ್ಮಕ ವೈಫಲ್ಯವಲ್ಲದೆ ಬೇರೇನೂ ಅಲ್ಲ. ಸರಕಾರಿ ಕನ್ನಡ ಶಾಲೆಗಳಿಗೆ ಸುರಕ್ಷಿತ ಕಟ್ಟಡ, ಕುಡಿಯುವ ನೀರಿನ ಪೂರೈಕೆ, ಶೌಚಾಲಯ ಹಾಗೂ ಆಟದ ಮೈದಾನಗಳಂಥ ಕನಿಷ್ಠ ಅಗತ್ಯಗಳನ್ನು ಒದಗಿಸಲು ಆಗುವುದಿಲ್ಲ ಅಂದರೆ ಹೇಗೆ? ಇದು ಶಿಕ್ಷಣ ಹಕ್ಕು ಕಾಯ್ದೆಗೆ ಅಪಚಾರ ಮಾಡಿದಂತಲ್ಲವೇ?
ಅಸುರಕ್ಷಿತ ಶಾಲೆಗಳಲ್ಲಿ ನಮ್ಮ ಮಕ್ಕಳು ಭಯಭೀತರಾಗಿ ಅಕ್ಷರ ಕಲಿಯಬೇಕಾಗಿರುವುದು ಆತಂಕಕಾರಿ ಸಂಗತಿಯಾಗಿದೆ. ಹಲವಾರು ಶಾಲೆಗಳಲ್ಲಿ ಆಟದ ಮೈದಾನಗಳಿಲ್ಲದೆ ನಗರ ಹಾಗೂ ಗ್ರಾಮೀಣ ಪ್ರದೇಶಗಳ ಬಡ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುತ್ತಿದ್ದಾರೆ. ಹಾಗಾಗಿ ಸರಕಾರಿ ಶಾಲೆಗಳಲ್ಲಿ ಆಟದ ಮೈದಾನಗಳನ್ನು ಒದಗಿಸುವುದು ತುರ್ತು ಅಗತ್ಯವಾಗಿದೆ.
ಒಂದೆಡೆ ಅಸುರಕ್ಷಿತ ಕೊಠಡಿಗಳಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿದ್ದರೆ, ಇನ್ನೊಂದೆಡೆ ಅಕ್ಷರ ಕಲಿಯಬೇಕಾದ ಶಿಕ್ಷಕರ ಕೊರತೆಯನ್ನು ನಿವಾರಿಸಲು ಈವರೆಗೆ ಸಾಧ್ಯವಾಗಿಲ್ಲ. ಈಗ ತರಗತಿಗೊಬ್ಬ ಶಿಕ್ಷಕನೂ ಇಲ್ಲ. ಹೆಚ್ಚಿನ ಶಾಲೆಗಳು ಅತಿಥಿ ಶಿಕ್ಷಕರನ್ನು ಅವಲಂಬಿಸಿ ನಡೆಯುತ್ತಿವೆ. ಇದರ ಪರಿಣಾಮವಾಗಿ ಸರಕಾರಿ ಕನ್ನಡ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯ ಪ್ರಮಾಣವು ತೀವ್ರವಾಗಿ ಕುಸಿಯುತ್ತಿದೆ. ಹಾಗಾಗಿ ಸರಕಾರ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುರ್ತಾಗಿ ಭರ್ತಿ ಮಾಡಿಕೊಳ್ಳಬೇಕಾಗಿದೆ. ಇದರ ಜೊತೆಗೆ ಕೆಪಿಎಸ್ ಶಾಲೆಗಳ ಆರಂಭದ ನೆಪದಲ್ಲಿ ಯಾವುದೇ ಕಾರಣಕ್ಕೂ ಗ್ರಾಮೀಣ ಪ್ರದೇಶಗಳಲ್ಲಿ ಇರುವ ಸರಕಾರಿ ಶಾಲೆಗಳನ್ನು ಮುಚ್ಚಬಾರದು.
ಸರಕಾರಿ ಕನ್ನಡ ಶಾಲೆಗಳು ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿ ನಡೆಸಬೇಕಾಗಿದೆ. ಅದಕ್ಕಾಗಿ ಈ ಶಾಲೆಗಳಿಗೆ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಕ್ರಮವನ್ನು ಕೈಗೊಳ್ಳಬೇಕು. ಇಲ್ಲದಿದ್ದರೆ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಹಿಂಜರಿಯುವುದಿಲ್ಲ. ಸರಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಕಂಡು ಹಿಡಿಯಬೇಕಾಗಿದೆ. ಕುಸಿಯುವ ಸ್ಥಿತಿಯಲ್ಲಿ ಇರುವ ಶಾಲಾ ಕಟ್ಟಡಗಳನ್ನು ಹಾಗೂ ಕೊಠಡಿಗಳನ್ನು ಪುನರ್ನಿರ್ಮಾಣ ಮಾಡಬೇಕು. ಯಾವುದೇ ಅನಾಹುತ ಸಂಭವಿಸುವ ಮುನ್ನ ಶಿಕ್ಷಣ ಇಲಾಖೆ ಎಚ್ಚೆತ್ತು ರಾಜ್ಯದ ಪ್ರತಿಯೊಂದು ಸರಕಾರಿ ಕನ್ನಡ ಶಾಲೆಯನ್ನು ಸುರಕ್ಷಿತ ಹಾಗೂ ಗುಣಮಟ್ಟದ ಕಲಿಕಾ ಕೇಂದ್ರವನ್ನಾಗಿ ಮಾಡಲು ಸಂಕಲ್ಪ ಮಾಡಬೇಕಾಗಿದೆ.
ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಅಧಿಕಾರದಲ್ಲಿರುವವರು ಆಸಕ್ತಿ ತೋರಿಸುವುದು ಅಗತ್ಯವಾಗಿದೆ. ವೇದಿಕೆಗಳಲ್ಲಿ ನಿಂತು ಸರಕಾರಿ ಕನ್ನಡ ಶಾಲೆಗಳ ಬಗ್ಗೆ ತುಟಿ ಸೇವೆ ಸಲ್ಲಿಸಿದರೆ ಸಾಲದು. ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುತ್ತಿರುವಾಗ ಖಾಸಗಿ ಶಾಲೆಗಳಿಗೆ ಪರವಾನಿಗೆ ನೀಡುತ್ತಿರುವುದನ್ನು ಕೈ ಬಿಡಬೇಕು. ಅಧಿಕಾರದಲ್ಲಿರುವ ಎಷ್ಟು ಜನ ಮಂತ್ರಿಗಳು ಹಾಗೂ ಶಾಸಕರ ಮಕ್ಕಳು ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಅಷ್ಟೇ ಅಲ್ಲ ಎಷ್ಟು ಜನ ರಾಜಕಾರಣಿಗಳು ಮತ್ತು ಅಧಿಕಾರಿಗಳು ತಮ್ಮದೇ ಆದ ಶಾಲೆ, ಕಾಲೇಜುಗಳನ್ನು ಹೊಂದಿದ್ದಾರೆ ಎಂಬುದನ್ನು ಬಹಿರಂಗ ಪಡಿಸಲಿ. ತಮ್ಮದೇ ಆದ ಸ್ವಂತದ ಶಾಲೆಗಳನ್ನು ಹೊಂದಿದವರಿಗೆ ಸರಕಾರಿ ಶಾಲೆಗಳ ಅಭಿವೃದ್ಧಿಗಿಂತ ತಮ್ಮ ಶಾಲೆಗಳ ಹಿತಾಸಕ್ತಿ ಮುಖ್ಯವಾಗಿರುತ್ತದೆ. ಹಾಗಾಗಿ ಸರಕಾರ ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸರಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ.






