ಸರಕಾರಿ ಶಾಲೆ : ಕನ್ನಡ ಭಾಷೆ ಉಳಿಸಲು ಇರುವ ಏಕೈಕ ದಾರಿ

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯದ ಒಟ್ಟು 4,134 ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ 1ನೇ ತರಗತಿಯಿಂದ ಪ್ರಸ್ತುತ ನಡೆಯುತ್ತಿರುವ ಕನ್ನಡ ಮಾಧ್ಯಮದ ಜೊತೆಗೆ ಹೊಸದಾಗಿ ಆಂಗ್ಲ ಮಾಧ್ಯಮ ಅಂದರೆ ದ್ವಿಭಾಷಾ ಮಾಧ್ಯಮ ತರಗತಿಗಳನ್ನು ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿದೆ. 2025-26ನೇ ಸಾಲಿನಿಂದಲೇ ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ದ್ವಿಭಾಷಾ ಮಾಧ್ಯಮ ತರಗತಿಗಳನ್ನು ಆರಂಭಿಸಬೇಕು. ಶಾಲೆಗಳನ್ನು ಆಯ್ಕೆ ಮಾಡಲು ಮಾನದಂಡಗಳನ್ನು ಅನುಸರಿಸಲಾಗಿದ್ದು, ಪ್ರತಿ ತಾಲೂಕು ವಲಯದಲ್ಲಿ ಅತಿ ಹೆಚ್ಚು ವಿದ್ಯಾರ್ಥಿಗಳ ದಾಖಲಾತಿಯನ್ನು ಹೊಂದಿರುವ ಶಾಲೆಗಳ ಪೈಕಿ ಮೊದಲ 15 ಶಾಲೆಗಳನ್ನು ಪರಿಗಣಿಸಿದೆ. ಒಂದು ವೇಳೆ ಯಾವುದಾದರೂ ತಾಲೂಕಿನಲ್ಲಿ, ವಲಯದಲ್ಲಿ ಇಂತಹ 15 ಶಾಲೆಗಳು ಲಭ್ಯವಿಲ್ಲದಿದ್ದಲ್ಲಿ ತಾಲೂಕಿನ ಎಲ್ಲಾ ಶಾಲೆಗಳನ್ನು ಪರಿಗಣಿಸಬೇಕು ಎಂದು ಆದೇಶದಲ್ಲಿ ತಿಳಿಸಿದೆ. ಸರಕಾರದ ಈ ಆದೇಶ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡರೆ ಸರಕಾರಿ ಶಾಲೆಗಳನ್ನು ಮಾತ್ರವಲ್ಲ, ಅದರ ಜೊತೆಗೇ ಕನ್ನಡ ಮಾಧ್ಯಮಗಳನ್ನು ಉಳಿಸಿ ಬೆಳೆಸಲು ಸಾಧ್ಯವಾಗಲಿದೆ. ಈ ಆದೇಶ ಹೊರ ಬಿದ್ದ ಬೆನ್ನಿಗೇ ಎಂದಿನಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತನ್ನ ತಕರಾರನ್ನು ತೆಗೆದಿದ್ದಾರೆ. ಸರಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಪತ್ರ ಬರೆದಿರುವ ಅವರು, ಸಂವಹನಕ್ಕಾಗಿ ತಾಯ್ತುಡಿಯನ್ನು ಹೊರತಾದ ಯಾವುದೇ ಭಾಷೆಗಳನ್ನು ಕಲಿಯುವುದು ತಪ್ಪಲ್ಲ. ಆದರೆ ಅಂತಹ ಪ್ರಯತ್ನಗಳು ನಮ್ಮ ಮಾತೃ ಭಾಷೆಯನ್ನೇ ಮೂಲೆಗುಂಪಾಗಿಸುವ ಕಾರ್ಯಕ್ಕೆ ಮುಂದಾದರೆ ಪ್ರಾಧಿಕಾರ ಅದಕ್ಕೆ ಸಾಕ್ಷಿಯಾಗಬಯಸುವುದಿಲ್ಲ ಎಂದಿದ್ದಾರೆ.
"2013-18ರಲ್ಲಿ ಸರಕಾರವು ಮಕ್ಕಳ ಹಕ್ಕು ಕಾಯ್ದೆಯ ಪ್ರಕರಣ 29 (ಎಫ್)ಗೆ ತಿದ್ದುಪಡಿ ಮಾಡುವ ಮಸೂದೆಯನ್ನು ಸದನಗಳಲ್ಲಿ ಮಂಡಿಸಿ ರಾಷ್ಟ್ರಪತಿಯವರ ಅಂಗೀಕಾರಕ್ಕೆ ಕಳುಹಿಸಿದ್ದು, ಅದರಂತೆ ಕನಿಷ್ಠ 8ನೇ ತರಗತಿಯವರೆಗೆ ಶಿಕ್ಷಣ ಮಾಧ್ಯಮ ಮಾತೃಭಾಷೆಯಲ್ಲಿರಬೇಕಾಗುತ್ತದೆ" ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸರಕಾರಿ ಶಾಲೆಗಳಿರುವುದು ಸಂವಿಧಾನ ಎತ್ತಿ ಹಿಡಿದಿರುವ ಶಿಕ್ಷಣದ ಹಕ್ಕಿನ ಆಶಯಗಳನ್ನು ಈಡೇರಿಸಲು. ಆರ್ಥಿಕ ಕಾರಣಗಳಿಂದ ಯಾರೂ ಶಿಕ್ಷಣ ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ ಸರಕಾರ ಸರಕಾರಿ ಶಾಲೆಗಳ ಮೂಲಕ ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯುತ್ತಾ ಬಂದಿದೆ. ನಿರುದ್ಯೋಗ, ಬಡತನ ಇತ್ಯಾದಿಗಳು ಇನ್ನೂ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಸರಕಾರಿ ಶಾಲೆಗಳು ಮುಚ್ಚುವುದು ಎಂದರೆ, ಹಿಂದುಳಿದ, ಶೋಷಿತ ವರ್ಗದ ಜನರು, ಶಿಕ್ಷಣದಿಂದ ಶಾಶ್ವತವಾಗಿ ವಂಚನೆಗೊಳಗಾದಂತೆ. ಆಯಾ ರಾಜ್ಯಗಳ ಭಾಷೆಗಳನ್ನು ಉಳಿಸಿ ಬೆಳೆಸುವುದು ಸರಕಾರಿ ಶಾಲೆಗಳ ಎರಡನೇ ಆದ್ಯತೆಯಾಗಿದೆ. ಬಡವರು ಶಿಕ್ಷಣದಿಂದಲೇ ವಂಚಿತರಾಗುತ್ತಿರುವಾಗ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ 'ಪ್ರಾದೇಶಿಕ ಭಾಷೆ'ಯ ಅಳಿವು ಉಳಿವಿನ ಬಗ್ಗೆ ಕಳವಳ ವ್ಯಕ್ತಪಡಿಸುವುದು ಅಪ್ರಾಮಾಣಿಕತೆಯಾಗಿದೆ. ಇಂದು ಕನ್ನಡ ಮಾಧ್ಯಮಗಳು ಉಳಿದಿರುವುದು, ಬೆಳೆಯುತ್ತಿರುವುದು ಸರಕಾರಿ ಶಾಲೆಗಳಿಂದ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸರಕಾರಿ ಶಾಲೆಗಳು ಹಂತಹಂತವಾಗಿ ಮುಚ್ಚಲ್ಪಡುತ್ತಿರುವ ಇಂದಿನ ದಿನಗಳಲ್ಲಿ ಮೊದಲ ಆದ್ಯತೆ ಶಿಕ್ಷಣಕ್ಕೆ ನೀಡಬೇಕು. ಆ ಬಳಿಕ ಯಾವ ಮಾಧ್ಯಮದಲ್ಲಿ ಶಿಕ್ಷಣ ಎನ್ನುವುದು ಚರ್ಚೆಗೆ ಬರಬೇಕು. ಈ ದೇಶದ ಹಿಂದುಳಿದವರ್ಗ, ಅಲ್ಪಸಂಖ್ಯಾತ, ದಲಿತ ವರ್ಗದ ಜನರೇ ಹೆಚ್ಚಾಗಿ ಈ ಸರಕಾರಿ ಶಾಲೆಗಳನ್ನು ಅವಲಂಬಿಸಿದ್ದಾರೆ. ಒಂದು ಸರಕಾರಿ ಶಾಲೆ ಮುಚ್ಚಿತು ಎಂದಾದರೆ, ಅಲ್ಲಿರುವ ಮಧ್ಯಮವರ್ಗದ ವಿದ್ಯಾರ್ಥಿಗಳು ಹತ್ತಿರದ ಖಾಸಗಿ ಶಾಲೆಗಳನ್ನು ಸೇರಿಕೊಳ್ಳುತ್ತಾರೆ. ತೀರಾ ತಳಸ್ತರದ ಕುಟುಂಬದಿಂದ ಬಂದ ವಿದ್ಯಾರ್ಥಿಗಳು ಸೇರಲು ಶಾಲೆಯೇ ಇಲ್ಲದೆ ಶಿಕ್ಷಣ ವಂಚಿತರಾಗುತ್ತಾರೆ. ಇಂತಹ ವಿದ್ಯಾರ್ಥಿಗಳಿಗಾಗಿ ಸರಕಾರಿ ಶಾಲೆಗಳನ್ನು ಉಳಿಸುವುದು ಅತ್ಯಗತ್ಯವಾಗಿದೆ.
ವಿದ್ಯಾರ್ಥಿಗಳ ಕೊರತೆಯೇ ಸರಕಾರಿ ಶಾಲೆಗಳು ಹಂತಹಂತವಾಗಿ ಮುಚ್ಚಲ್ಪಡಲು ಮುಖ್ಯ ಕಾರಣ ಎಂದು ಅಧ್ಯಯನ ಹೇಳುತ್ತಿದೆ. ವಿದ್ಯಾರ್ಥಿಗಳ ಕೊರತೆಗೆ ಸರಕಾರಿ ಶಾಲೆಗಳ ಶಿಕ್ಷಣದ ಗುಣಮಟ್ಟ ಕಾರಣ ಎನ್ನಲಾಗುತ್ತಿದೆ. ಖಾಸಗಿ ಶಾಲೆಗಳ ಜೊತೆಗೆ ಪೈಪೋಟಿ ನೀಡಲು ಸರಕಾರಿ ಶಾಲೆಗಳು ವಿಫಲವಾಗುತ್ತಿವೆ. ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಕರ ಕೊರತೆ ಇವೆಲ್ಲದರ ಜೊತೆಗೆ ಇಂಗ್ಲಿಷ್ ಕಲಿಕೆ ಇಂದು ಅನಿವಾರ್ಯ ಎನ್ನುವುದನ್ನು ಈ ತಲೆಮಾರು ಒಪ್ಪಿಕೊಂಡಿರುವುದು ಮುಖ್ಯ ಕಾರಣ. 'ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು, ಇಲ್ಲವಾದರೆ ಅವರಿಗೆ ಭವಿಷ್ಯವಿಲ್ಲ' ಎಂದು ಬಲವಾಗಿ ನಂಬಿರುವ ಪೋಷಕರು ಸರಕಾರಿ ಶಾಲೆಗಳು ಮುಚ್ಚುವುದಕ್ಕೆ ನೇರ ಕಾರಣವಾಗುತ್ತಿದ್ದಾರೆ. ಸಾಲ ಸೋಲ ಮಾಡಿಯಾದರೂ ಮಧ್ಯಮ ವರ್ಗದ ಜನರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿರುವುದು ಇದೇ ಕಾರಣಕ್ಕೆ. ಹಾಗೆಂದು ಈ ವರ್ಗವನ್ನು ಇದಕ್ಕಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವಂತೆಯೂ ಇಲ್ಲ. ಇಂಗ್ಲಿಷ್ ಇಲ್ಲದೆ ಬದುಕೇ ಇಲ್ಲ ಎನ್ನುವ ಸ್ಥಿತಿ ಇಂದು ನಿರ್ಮಾಣವಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಅವಕಾಶಗಳನ್ನು ತನ್ನದಾಗಿಸಿಕೊಳ್ಳಬೇಕಾದರೆ ಇಂಗ್ಲಿಷ್ ಅತ್ಯಗತ್ಯ. ಇಂತಹ ಸಂದರ್ಭದಲ್ಲಿ, ಸರಕಾರಿ ಶಾಲೆಗಳೆಡೆ ಎಲ್ಲ ವರ್ಗಗಳ ವಿದ್ಯಾರ್ಥಿಗಳನ್ನು ಆಕರ್ಷಿಸಬೇಕಾದರೆ ಇಂಗ್ಲಿಷ್ ಮಾಧ್ಯಮವನ್ನು ಸರಕಾರಿ ಶಾಲೆಗಳಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯ. ಈ ಮೂಲಕ ತಳಸ್ತರದ ವಿದ್ಯಾರ್ಥಿಗಳಿಗೂ ಇಂಗ್ಲಿಷ್ ಕಲಿಕೆಯ ಸೌಲಭ್ಯ ದೊರಕಿದಂತಾಗುತ್ತದೆ.
ಸರಕಾರಿ ಶಾಲೆಗಳು ಉಳಿಯುತ್ತವೆ ಮಾತ್ರವಲ್ಲ, ಈ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ಜೊತೆ ಜೊತೆಗೆ ಕನ್ನಡವನ್ನೂ ಕಲಿಸಲು ಸಾಧ್ಯವಾಗುತ್ತದೆ. ಈಗ ಇರುವ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಸಂಪೂರ್ಣ ನಿರ್ಲಕ್ಷ್ಯಕ್ಕೀಡಾಗಿರುವಾಗ, ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್-ಕನ್ನಡ ಜೊತೆ ಜೊತೆಯಾಗಿ ಹೆಜ್ಜೆಯಿಡುವುದೊಂದೇ ಕನ್ನಡ ಉಳಿಸುವುದಕ್ಕೆ ಇರುವ ಏಕೈಕ ದಾರಿ.
'ಮಾತೃ ಭಾಷೆಯಲ್ಲಿ ಶಿಕ್ಷಣ' ಎನ್ನುವ ಬೋರ್ಡ್ ಹಿಡಿದು ಕೊಂಡು ಸರಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ವಿರೋಧಿಸುವ ವಿಫಲ ಪ್ರಯತ್ನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿದೆ. ಕರ್ನಾಟಕದ ರಾಜ್ಯ ಭಾಷೆ ಕನ್ನಡವಾಗಿದ್ದರೂ ಇಲ್ಲಿರುವ ಶೇ. 50ಕ್ಕಿಂತಲೂ ಅಧಿಕ ವಿದ್ಯಾರ್ಥಿಗಳ ಮಾತೃಭಾಷೆ ಕನ್ನಡವಲ್ಲ. ಅವರು ಕನ್ನಡವನ್ನು ಶಾಲೆಗೆ ತೆರಳಿದ ಆನಂತರ ಕಲಿಯುತ್ತಿದ್ದಾರೆ. ತುಳು, ಕೊಂಕಣಿ, ಬ್ಯಾರಿ, ಕೊಡವ, ಹವ್ಯಕ, ಮರಾಠಿ, ಉರ್ದು ಹೀಗೆ ಬೇರೆ ಬೇರೆ ಮನೆ ಭಾಷೆಗಳ, ಮಾತೃಭಾಷೆಗಳ ವಿದ್ಯಾರ್ಥಿಗಳು ಸರಕಾರಿ ಶಾಲೆಗಳಲ್ಲಿ ಕನ್ನಡವನ್ನು ಅನಿವಾರ್ಯವಾಗಿ ಮಾಧ್ಯಮವಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕಳೆದ ವರ್ಷದ ಒಂದು ಅಧ್ಯಯನದ ಪ್ರಕಾರ, 10ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳನ್ನು ಹೊಂದಿರುವ ಸರಕಾರಿ ಶಾಲೆಗಳು 4,265ರಷ್ಟು ಇದ್ದವು. ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ 5,412. ಇವೆಲ್ಲವೂ ಎಣ್ಣೆ ಮುಗಿದ ದೀಪದಂತೆ ಉರಿಯುತ್ತಿವೆ. ಯಾವತ್ತು ಬೇಕಾದರೂ ನಂದಬಹುದು. ಈಗಾಗಲೇ ರಾಜ್ಯದಲ್ಲಿ ಐದು ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳು ಮುಚ್ಚಿವೆ. ಒಂದು ವೇಳೆ ಆಗಲೇ ದ್ವಿಭಾಷಾ ಮಾಧ್ಯಮ ಪ್ರಯೋಗವನ್ನು ಮಾಡಿದ್ದಿದ್ದರೆ ಒಂದಿಷ್ಟು ಸರಕಾರಿ ಶಾಲೆಗಳಾದರೂ ಉಳಿಯುತ್ತಿದ್ದವೇನೋ. ಮುಚ್ಚಿದ ಶಾಲೆಯನ್ನು ತೆರೆಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಬಳಿ ಯಾವುದೇ ಕಾರ್ಯಕ್ರಮಗಳಿಲ್ಲ. ಮುಚ್ಚಲ್ಪಡುವ ಸರಕಾರಿ ಶಾಲೆಗಳನ್ನು ಉಳಿಸುವುದರ ಬಗ್ಗೆಯೂ ಅದರ ಬಳಿ ವಿಶೇಷ ಕಾರ್ಯತಂತ್ರಗಳಿಲ್ಲ. ಆದರೆ ಯಾವಾಗ ಸರಕಾರಿ ಶಾಲೆಗಳನ್ನು ಇಂಗ್ಲಿಷ್-ಕನ್ನಡ ದ್ವಿಭಾಷಾ ಮಾಧ್ಯಮವಾಗಿ ಪರಿವರ್ತಿಸಲು ಸರಕಾರ ಹೊರಡುತ್ತದೆಯೋ ಆಗ ಪ್ರಾಧಿಕಾರದ ಕನ್ನಡ ಪ್ರೀತಿ ಏಕಾಏಕಿ ಜಾಗೃತಿಗೊಳ್ಳುತ್ತದೆ. ಸರಕಾರಿ ಶಾಲೆಗಳು ನಾಶವಾದರೂ ಚಿಂತೆಯಿಲ್ಲ, ಕನ್ನಡ ಮಾಧ್ಯಮಗಳು ಉಳಿಯಬೇಕು ಎನ್ನುವ ಪ್ರಾಧಿಕಾರದ ಯೋಚನೆಯೇ ತರ್ಕಹೀನವಾದುದು. ಸದ್ಯಕ್ಕೆ ಸರಕಾರಿ ಶಾಲೆ ಮತ್ತು ಕನ್ನಡ ಮಾಧ್ಯಮ ಎರಡನ್ನೂ ಉಳಿಸುವುದಕ್ಕೆ ಇರುವ ಏಕೈಕ ದಾರಿ ದ್ವಿಭಾಷಾ ಮಾಧ್ಯಮವಾಗಿದೆ. ದ್ವಿಭಾಷಾ ಮಾಧ್ಯಮ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಅತ್ಯುತ್ತಮ ಇಂಗ್ಲಿಷ್ ಮತ್ತು ಕನ್ನಡ ಅಧ್ಯಾಪಕರನ್ನು ಮತ್ತು ಮೂಲಭೂತ ಸೌಕರ್ಯಗಳನ್ನು ಶಾಲೆಗಳಿಗೆ ಒದಗಿಸುವುದರ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸರಕಾರಕ್ಕೆ ಒತ್ತಡಗಳನ್ನು ಹೇರಬೇಕು. ದ್ವಿಭಾಷಾ ಮಾಧ್ಯಮ ಸರಕಾರಿ ಶಾಲೆಗಳಲ್ಲಿ ಕನ್ನಡವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ದಾಟಿಸಲು ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎನ್ನುವುದರ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯಕ್ರಮ ರೂಪಿಸಲು ಮುಂದಾಗಲಿ. ಶಾಲೆಗಳಲ್ಲಿ ಕನ್ನಡವನ್ನು ಉಳಿಸುವುದಕ್ಕಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇನ್ನಾದರೂ ತನ್ನ ಕಾರ್ಯತಂತ್ರವನ್ನು ಬದಲಿಸಬೇಕಾಗಿದೆ.