ಬಾಲ್ಯವಿವಾಹ ತಡೆಗೆ ಸರಕಾರದ ಕ್ರಮ ಸ್ವಾಗತಾರ್ಹ

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ವಿವಾಹ ತಡೆಗೆ ಸರಕಾರ ಎಷ್ಟೆಲ್ಲ ಕಾಯ್ದೆಗಳನ್ನು ಮಾಡಿದ್ದರೂ ಇಂಥ ಬಾಲ್ಯ ವಿವಾಹಗಳು ನಡೆಯುತ್ತಲೇ ಇವೆ. ಆದ್ದರಿಂದ ಕರ್ನಾಟಕ ಸರಕಾರ ಈ ಕಾನೂನನ್ನು ಇನ್ನಷ್ಟು ಬಿಗಿಗೊಳಿಸಲು ತೀರ್ಮಾನಿಸಿದೆ. ಸಾಮಾಜಿಕ ಅನಿಷ್ಟಗಳಲ್ಲಿ ಒಂದಾದ ಬಾಲ್ಯ ವಿವಾಹವನ್ನು ಸಂಪೂರ್ಣವಾಗಿ ಮೂಲೋತ್ಪಾಟನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ ಸೂಚನೆಯಂತೆ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ 'ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಮಸೂದೆ-2025 ಕರಡು ಪ್ರಸ್ತಾವವನ್ನು ಸಿದ್ದಪಡಿಸಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯೊಂದಿಗೆ ಚರ್ಚೆ ನಡೆಸಿ ಅನುಮೋದನೆ ಪಡೆದ ನಂತರ ಈ ವಿಧೇಯಕ ಅಂತಿಮ ಸ್ವರೂಪ ಪಡೆಯಲಿದೆ.
ಉದ್ದೇಶಿತ ಕಾನೂನು ತಿದ್ದುಪಡಿ ಪ್ರಕಾರ ಬಾಲ್ಯ ವಿವಾಹವನ್ನು ಮಾಡಲು ಯತ್ನಿಸುವ, ಸಿದ್ಧತೆ ನಡೆಸುವ ಹಾಗೂ ಚಿಕ್ಕ ವಯಸ್ಸಿನ ಬಾಲಕ-ಬಾಲಕಿಯರ ನಡುವೆ ಮದುವೆ ಮಾಡಿಸುವ ಉದ್ದೇಶದಿಂದ ನಿಶ್ಚಿತಾರ್ಥ ಮಾಡುವವರ ವಿರುದ್ದವೂ ಕ್ರಮ ಕೈಗೊಳ್ಳಲು ಅವಕಾಶವಿದೆ. ಚಿಕ್ಕ ವಯಸ್ಸಿನ ಹುಡುಗ, ಹುಡುಗಿಯರಿಗೆ ವಿವಾಹ ಮಾಡಲು ಯತ್ನಿಸಿದರೆ ಅಥವಾ ಅವರಿಗೆ ನಿಶ್ಚಿತಾರ್ಥ ಮಾಡಿದರೆ ಅಂಥವರಿಗೆ 2 ವರ್ಷಗಳ ಜೈಲು ಶಿಕ್ಷೆ ಅಥವಾ ರೂ. 1 ಲಕ್ಷದ ವರೆಗೆ ವಿಸ್ತರಿಸಬಹುದಾದ ದಂಡ ವಿಧಿಸಲು ಇದರಲ್ಲಿ ಅವಕಾಶವಿದೆ. ಇದಕ್ಕೆ ಕಾರಣರಾಗುವ ಪೋಷಕರು ಮತ್ತು ಸಂಸ್ಥೆಯವರಿಗೆ 2 ವರ್ಷ ಸೆರೆಮನೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ಈಗಾಗಲೇ ಜಾರಿಯಲ್ಲಿರುವ 'ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 ರಲ್ಲಿ ಇದೆ. ಆದರೆ ತಿದ್ದುಪಡಿ ವಿಧೇಯಕದಲ್ಲಿ ಇವೆರಡನ್ನೂ ವಿಧಿಸುವ ಪ್ರಸ್ತಾವವಿದೆ. ಈ ತಿದ್ದುಪಡಿ ಅನ್ವಯ ಬಾಲ್ಯ ವಿವಾಹಕ್ಕೆ ಸಿದ್ದತೆ ಮಾಡಿದವರು, ಅನುಕೂಲ ಕಲ್ಪಿಸಿದವರು ಹಾಗೂ ವಿವಾಹದ ನೆರವೇರಿಸುವ ಪುರೋಹಿತರು, ಪೂಜಾರಿಗಳು ಸದರಿ ಕಾಯ್ದೆಯ ವ್ಯಾಪ್ತಿಗೆ ಬರಲಿದ್ದಾರೆ.
ಇತ್ತೀಚೆಗೆ ನಡೆದ ಜಿಲ್ಲಾಧಿಕಾರಿಗಳ, ಜಿಲ್ಲಾ ಪಂಚಾಯತ್ಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾಲ್ಯ ವಿವಾಹಗಳನ್ನು ಸಂಪೂರ್ಣವಾಗಿ ಮೂಲೋತ್ಪಾಟನೆ ಮಾಡುವ ಕುರಿತು ಸಮಾಲೋಚಿಸಿದ್ದರು. ಹೆಚ್ಚುತ್ತಿರುವ ಬಾಲ್ಯ ವಿವಾಹಗಳ ಅಂಕಿ-ಅಂಶಗಳನ್ನು ಗಮನಿಸಿ ಕೆಂಡಾಮಂಡಲರಾಗಿದ್ದರು. ಬಾಲ್ಯ ವಿವಾಹಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದರೂ 2024-2025ರಲ್ಲಿ 700 ಬಾಲ್ಯ ವಿವಾಹಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಸಾಮಾಜಿಕ ಅನಿಷ್ಟವಾಗಿರುವ ಬಾಲ್ಯ ವಿವಾಹಗಳನ್ನು ತಡೆಯುವ ಕುರಿತು ಕ್ರಮ ಕೈಗೊಳ್ಳುವುದು ಮಾತ್ರವಲ್ಲ, ಜನರಲ್ಲಿ ಅರಿವು ಮೂಡಿಸಲು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಶ್ರಮಿಸಲು ಮುಖ್ಯಮಂತ್ರಿಗಳು ಸೂಚನೆಯನ್ನು ನೀಡಿದ್ದರು. ಅಗತ್ಯವೆನಿಸಿದರೆ ಕಾನೂನಿಗೆ ತಿದ್ದುಪಡಿ ತರುವ ಇಂಗಿತವನ್ನು ಅವರು ವ್ಯಕ್ತಪಡಿದ್ದರು. ಇದೇ ಸಭೆಯಲ್ಲಿ ಸಿದ್ದರಾಮಯ್ಯನವರು ಹಾಗೂ ಕಾನೂನು ಸಚಿವ ಎಚ್.ಕೆ. ಪಾಟೀಲರು ನೀಡಿದ ಮೌಖಿಕ ಸೂಚನೆಯ ಪ್ರಕಾರ ಬಾಲ್ಯ ವಿವಾಹ ತಡೆ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವ ತಯಾರಾಗಿದೆ.
ರಾಜ್ಯದಲ್ಲಿ 2024 ಹಾಗೂ 2025ನೇ ವರ್ಷದಲ್ಲಿ ಪೊಕ್ಸಿ ಪ್ರಕರಣ ದಾಖಲಾಗಿದ್ದರಲ್ಲಿ 685 ಅಪ್ರಾಪ್ತ ವಯಸ್ಸಿನ ಗರ್ಭಿಣಿಯರಿದ್ದಾರೆ. ಮೊದಲ ಸ್ಥಾನದಲ್ಲಿ ರುವ ಶಿವಮೊಗ್ಗ 79, ಬೆಳಗಾವಿ 78, ಚಿತ್ರದುರ್ಗ 74, ಬಾಗಲಕೋಟ 63 ಹಾಗೂ ಮೈಸೂರು ಜಿಲ್ಲೆಯಲ್ಲಿ 60, ಅಪ್ರಾಪ್ತ ವಯಸ್ಕ ಗೃಹಿಣಿಯರ ಪ್ರಕರಣಗಳಿವೆ. ನಿರಂತರ ಜಾಗೃತಿ ಹಾಗೂ ಕಾರ್ಯಾಚರಣೆ ಮೂಲಕ 2,349 ಬಾಲ್ಯ ವಿವಾಹಗಳನ್ನು ತಡೆಯಲಾಗಿದ್ದರೂ ಕಾನೂನಿನ ಕಣ್ಣು ತಪ್ಪಿಸಿ 700 ಬಾಲ್ಯ ವಿವಾಹಗಳು ನಡೆದಿವೆ. ಇದು ನಿಜಕ್ಕೂ ಕಳವಳಕಾರಿ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಬಾಲ್ಯ ವಿವಾಹವನ್ನು ತಡೆಯಲು ಸರಕಾರ ಕಾನೂನು ಬಿಗಿಗೊಳಿಸಿರುವುದು ಸ್ವಾಗತಾರ್ಹ ಕ್ರಮವಾಗಿದೆ. ಇದರ ಜೊತೆಗೆ ಸಮಾಜದಲ್ಲಿ ಇಂಥ ಅನಿಷ್ಟ ಪದ್ಧತಿಗಳ ವಿರುದ್ಧ ಅರಿವು ಮೂಡಿಸುವ ಕಾರ್ಯಗಳೂ ನಿರಂತರವಾಗಿ ನಡೆಯಬೇಕಾಗಿದೆ. ಸರಕಾರ ಕಾನೂನು ರಚಿಸುವ ಜೊತೆಗೆ ಅದರ ಕಟ್ಟುನಿಟ್ಟಾದ ಜಾರಿಗೂ ಕ್ರಮ ಕೈಗೊಳ್ಳಬೇಕು. ಸರಕಾರೇತರ ಸಂಘ ಸಂಸ್ಥೆಗಳು, ಜನಪರ ಸಂಘಟನೆಗಳು, ಪ್ರಗತಿಪರ ಮಠ ಮತ್ತು ಧಾರ್ಮಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಕಾರ್ಯೋನ್ಮುಖವಾಗಬೇಕು. ಆಗ ಬಾಲ್ಯ ವಿವಾಹವನ್ನು ತಡೆಯಲು ಸಾಧ್ಯವಾಗುತ್ತದೆ.
ಬಾಲ್ಯ ವಿವಾಹ ಎಂಬ ಕೆಟ್ಟ ಪದ್ಧತಿ ಸಮಾಜದಲ್ಲಿ ಎಷ್ಟು ಬೇರು ಬಿಟ್ಟಿದೆಯೆಂದರೆ ಕೆಲ ತಿಂಗಳ ಹಿಂದೆ ಚಳ್ಳಕೆರೆ ತಾಲೂಕಿನ ಹಳ್ಳಿಯೊಂದರಲ್ಲಿ ಎಂಟನೇ ತರಗತಿಯ ಬಾಲಕಿಯನ್ನು ಆಕೆಯ ಸೋದರ ಮಾವ ಬಲವಂತವಾಗಿ ತಾಳಿ ಕಟ್ಟಿ ಮದುವೆಯಾಗಲು ಪ್ರಯತ್ನಿಸಿದ. ಆತನ ಯತ್ನಕ್ಕೆ ಬಾಲಕಿಯ ತಾಯಿ ಹಾಗೂ ಅಜ್ಜಿ ಕೂಡ ಬೆಂಬಲವಾಗಿ ನಿಂತಿದ್ದರು. ಇದನ್ನು ಪ್ರತಿಭಟಿಸಿದ ಹುಡುಗಿಯ ಮೇಲೆ ಹಲ್ಲೆಯೂ ನಡೆಯಿತು. ಇದರ ವೀಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿರುವುದನ್ನು ಗಮನಿಸಿದ ಪೊಲೀಸರು ಈ ಬಾಲಕಿಯನ್ನು ರಕ್ಷಿಸಿದರು ಹಾಗೂ ಬಾಲಕಿಯ ಮೇಲೆ ಹಲ್ಲೆ ನಡೆಸಿದ ಕಾರಣಕ್ಕಾಗಿ ಆಕೆಯ ತಾಯಿ, ಸೋದರ ಮಾವ, ಅಜ್ಜಿ ಹಾಗೂ ಇನ್ನೂ ಕೆಲವರ ಮೇಲೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡರು. ಇದರಲ್ಲಿ ಬಾಲ್ಯ ವಿವಾಹವೆಂಬ ಕಂಟಕದಿಂದ ಪಾರಾದ ಬಾಲಕಿಯ ದಿಟ್ಟತನ ಶ್ಲಾಘನೀಯವಾಗಿದೆ. ಇದರ ಜೊತೆಗೆ ಇಂತಹದೇ ಪ್ರಕರಣ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ನಡೆದಿದೆ. ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಪೋಷಕರ ಒತ್ತಡದಿಂದ ಬಾಲ್ಯ ವಿವಾಹಕ್ಕೆ ಕೊರಳನ್ನೊಡ್ಡಿದರೂ ಮಕ್ಕಳ ಸಹಾಯವಾಣಿಯ ನೆರವು ಪಡೆದು ಸವದತ್ತಿಯ ಬಾಲಕಿಯರ ಸರಕಾರಿ ಬಾಲ ಮಂದಿರದಲ್ಲಿ ಆಶ್ರಯ ಪಡೆದ ಸಂಗತಿ ಕಳೆದ ವರ್ಷ ವರದಿಯಾಗಿತ್ತು. ಇಂತಹ ಬಾಲಕಿಯರ ಈ ದಿಟ್ಟತನವನ್ನು ಶ್ಲಾಘಿಸುವುದು ಮಾತ್ರವಲ್ಲ ಬೆಂಬಲವಾಗಿ ನಿಲ್ಲಬೇಕಾಗಿದೆ.
ಹದಿನೆಂಟು ವರ್ಷ ವಯಸ್ಸಿನೊಳಗಿನ ಮಕ್ಕಳನ್ನು ಬಲವಂತವಾಗಿ ಯಾವುದೇ ರೂಪದ ವಿವಾಹಕ್ಕೆ ಒಳಪಡಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಜಗತ್ತಿನಲ್ಲಿ ಪ್ರತೀ ಐವರು ಹುಡುಗಿಯರಲ್ಲಿ ಒಬ್ಬ ಬಾಲಕಿಯ ಮದುವೆ 18 ವರ್ಷ ತುಂಬುವ ಮೊದಲೇ ನಡೆಯುತ್ತಿದೆ. ಬಾಲ್ಯದಲ್ಲೇ ಮದುವೆಯಾದ 64 ಕೋಟಿ ಬಾಲಕಿಯರು ವಿಶ್ವದ ವಿವಿಧ ಭಾಗಗಳಲ್ಲಿ ಇದ್ದಾರೆ. ಪ್ರತೀ ಮೂರು ನಿಮಿಷಕ್ಕೊಮ್ಮೆ ಜಗತ್ತಿನ ಯಾವುದೋ ಮೂಲೆಯಲ್ಲಿ ಬಾಲಕಿಯೊಬ್ಬಳು ಬಾಲ್ಯ ವಿವಾಹದ ಯಾತನೆಗೆ ಸಿಲುಕಿಕೊಳ್ಳುತ್ತಿದ್ದಾಳೆ. ಬಾಲ್ಯ ವಿವಾಹ ಪ್ರಕರಣಗಳು ಹೆಚ್ಚಾಗಿರುವ ದೇಶದ ಮುಂಚೂಣಿ ರಾಜ್ಯಗಳಲ್ಲಿ ಕರ್ನಾಟಕವೂ ಒಂದಾಗಿದೆ. ಹಾಗಾಗಿಯೇ ಬಾಲ್ಯ ವಿವಾಹ ಪದ್ಧತಿಯನ್ನು ಸಮಾಜದಿಂದ ತೊಲಗಿಸುವುದು ಅಗತ್ಯವಾಗಿದೆ.
ಬಾಲ್ಯ ವಿವಾಹಗಳನ್ನು ತಡೆಯಲು ಸರಕಾರ ಏನೆಲ್ಲಾ ಪ್ರಯತ್ನಗಳನ್ನು ಮಾಡಿದರೂ ದೇಶದ ವಿವಿಧ ಕಡೆ ಬಾಲ್ಯ ವಿವಾಹಗಳು ನಡೆಯುತ್ತಿವೆ. ಹೆಣ್ಣು ಮಕ್ಕಳ ಶೈಕ್ಷಣಿಕ ಹಕ್ಕನ್ನು ನಿರಾಕರಿಸಿ ಅವರನ್ನು ಬಾಲ್ಯವಿವಾಹದ ಕೂಪಕ್ಕೆ ತಳ್ಳುವ ಪೋಷಕರ ವರ್ತನೆ ಖಂಡನೀಯವಾಗಿದೆ. ಬಾಲ್ಯ ವಿವಾಹ ಎಂಬ ಅನಿಷ್ಟವನ್ನು ತೊಲಗಿಸಲು ಸರಕಾರ ಮತ್ತು ಸಮಾಜ ಜೊತೆಯಾಗಿ ನಿಲ್ಲಬೇಕಾಗಿದೆ.







