ಹೆಚ್ಚುತ್ತಿರುವ ಜನಾಂಗೀಯ ದ್ವೇಷ

ಡೆಹ್ರಾಡೂನ್ನಲ್ಲಿ ಹತ್ಯೆಗೊಳಗಾದ ತ್ರಿಪುರಾ ಮೂಲದ ಎಂಬಿಎ ವಿದ್ಯಾರ್ಥಿ ಏಂಜೆಲ್ ಚಕ್ಮಾ PC: x.com/anshikaasaxena
ಇತ್ತೀಚೆಗೆ ಉತ್ತರಾಖಂಡದ ಡೆಹ್ರಾಡೂನ್ನಲ್ಲಿ ತ್ರಿಪುರಾ ಮೂಲದ ಎಂಬಿಎ ವಿದ್ಯಾರ್ಥಿಯನ್ನು ಐವರು ಯುವಕರು ಇರಿದು ಕೊಂದಿದ್ದರು. ಜನಾಂಗೀಯ ದ್ವೇಷವೇ ಈ ಹತ್ಯೆಗೆ ಕಾರಣವೆನ್ನಲಾಗಿದೆ. ಆರಂಭದಲ್ಲಿ ವಿದ್ಯಾರ್ಥಿಯನ್ನು ‘ಚೀನೀ ಪ್ರಜೆ’ ಎಂದು ಐವರು ನಿಂದಿಸಿದ್ದು ಇದು ಸಂಘರ್ಷಕ್ಕೆ ಕಾರಣವಾಯಿತು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಏಂಜೆಲ್ ಚಕ್ಮಾಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ವಿದ್ಯಾರ್ಥಿಯ ಸೋದರ ಮೈಕಲ್ ಮೇಲೆಯೂ ಗಂಭೀರ ಹಲ್ಲೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿದ್ದ ಏಂಜೆಲ್ ಚಕ್ಮಾ ಶುಕ್ರವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಒಂದೆಡೆ ಚೀನಾ, ಪಾಕಿಸ್ತಾನದಿಂದ ಆಕ್ರಮಿಸಲ್ಪಟ್ಟ ತನ್ನ ಭೂಮಿಯ ಮೇಲೆ ಭಾರತ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಅಷ್ಟೇ ಅಲ್ಲ ಬಾಂಗ್ಲಾ, ಪಾಕಿಸ್ತಾನದಲ್ಲಿರುವ ಅಲ್ಪಸಂಖ್ಯಾತರಿಗಾಗಿ ಮರುಗುತ್ತಿದೆ. ಇದೇ ಸಂದರ್ಭದಲ್ಲಿ ಭಾರತದಲ್ಲಿ ತನ್ನದೇ ಜನರ ಮೇಲೆ ನಡೆಯುತ್ತಿರುವ ಜನಾಂಗೀಯ ಹಲ್ಲೆ, ದೌರ್ಜನ್ಯಗಳನ್ನು ತಡೆಯಲು ವಿಫಲವಾಗುತ್ತಿದೆ. ನೆರೆಯ ಬಾಂಗ್ಲಾದಲ್ಲಿ ಹಿಂದೂ ಧರ್ಮೀಯನೊಬ್ಬನನ್ನು ದಂಗೆಯಲ್ಲಿ ಕೊಂದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಭಾರತವು ತನ್ನದೇ ದೇಶದಲ್ಲಿ ಪ್ರಾದೇಶಿಕ, ಧಾರ್ಮಿಕ, ಜಾತಿಯ ಭಿನ್ನತೆಯ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳನ್ನು ತಡೆಯುವಲ್ಲಿ ವಿಫಲವಾಗುತ್ತಿದೆ. ಕೆಲವೊಮ್ಮೆ ಈ ಹತ್ಯೆಗಳನ್ನು ಮೌನವಾಗಿ ಬೆಂಬಲಿಸುತ್ತಿದೆ.
ಕಳೆದ ಒಂದು ದಶಕದಿಂದ ಈಶಾನ್ಯ ಭಾರತ ಅನುಭವಿಸುತ್ತಿರುವ ಪರಕೀಯತೆಯ ಬಗ್ಗೆ ಭಾರತ ದಿವ್ಯ ನಿರ್ಲಕ್ಷ್ಯವನ್ನು ವಹಿಸಿದೆ. ಈಶಾನ್ಯ ಭಾರತೀಯರು ಭಾರತದೊಳಗಿದ್ದೂ ಪರಕೀಯರಂತೆ ಬಾಳುತ್ತಿದ್ದಾರೆ. ‘ನಾವು ನೇಪಾಳಿಗರಲ್ಲ, ‘ನಾವು ಚೀನಿಯರಲ್ಲ’ ‘ನಾವು ಭಾರತೀಯರು’ ಎನ್ನುವುದನ್ನು ಭಾರತೀಯರಿಗೆ ಪದೇ ಪದೇ ನೆನಪಿಸುವುದು ಅವರಿಗೆ ಅನಿವಾರ್ಯವಾಗಿ ಬಿಟ್ಟಿದೆ. ‘ಏಳು ಸಹೋದರಿಯರು’ ಒಬ್ಬ ‘ಸಹೋದರನನ್ನು’ ಕಟ್ಟಿಕೊಂಡ ಈಶಾನ್ಯ ಭಾರತ, ಸುದ್ದಿಯಲ್ಲಿರುವುದು ಹಿಂಸೆ ಮತ್ತು ಬಡತನಕ್ಕಾಗಿ. ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ತ್ರಿಪುರಾ ಹೀಗೆ ಏಳು ಸಹೋದರಿಯರ ಜೊತೆಗೆ ಸಿಕ್ಕಿಂ ಏಕೈಕ ಸೋದರ. ನೂರಾರು ಬುಡಕಟ್ಟು ಸಮುದಾಯಗಳನ್ನು ಹೊಂದಿರುವ ಈ ಬೆಟ್ಟ ಗುಡ್ಡಗಳ ಪ್ರದೇಶ ಜನಾಂಗೀಯ ಸಂಘರ್ಷಗಳಿಗಾಗಿ ಸದಾ ಸುದ್ದಿಯಲ್ಲಿರುತ್ತವೆ. ಇವುಗಳ ನಡುವೆಯೇ ಈ ಪ್ರದೇಶದ ಜನತೆ ಯಾರಿಗೂ ಸಲ್ಲದವರಂತೆ ಬದುಕುತ್ತಿದ್ದಾರೆ. ಅರುಣಾಚಲ ಪ್ರದೇಶದ ಮೇಲೆ ಚೀನಾ ಹಕ್ಕು ಸ್ಥಾಪಿಸಲು ಪ್ರಯತ್ನಿಸುತ್ತಿದೆ. ಭಾರತ ಇದನ್ನು ಪ್ರತಿರೋಧಿಸುತ್ತಲೇ ಬಂದಿದೆ. ಆದರೆ ಅರುಣಾಚಲ ಪ್ರದೇಶದಲ್ಲಿ ಬದುಕುತ್ತಿರುವ ಜನರ ಬಗ್ಗೆ ಉಭಯ ದೇಶಗಳಿಗೂ ವಿಶೇಷ ಕಾಳಜಿಯಿಲ್ಲ. ಈ ಭಾಗದ ಜನರನ್ನು ಭಾರತದ ಹೃದಯ ಭಾಗ ಸ್ವೀಕರಿಸುವುದಕ್ಕೆ ಹಿಂದೇಟು ಹಾಕುತ್ತದೆ. ಚೀನೀ ಪ್ರಜೆಗಳು ಎಂದು ಅವರನ್ನು ಅನುಮಾನಿಸುತ್ತದೆ. ಅತ್ತ, ಚೀನಾದ ಸೈನಿಕರಿಗೂ ಈ ಜನರು ಬೇಕಾಗಿಲ್ಲ. ಆಗಾಗ ಇಲ್ಲಿನ ಜನರು ಸೈನಿಕರ ದಾಳಿಗೀಡಾಗುತ್ತಾರೆ. ಇದರ ವಿರುದ್ಧ ಭಾರತ ತನ್ನ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತಲೇ ಇದೆ. ಇದೇ ಸಂದರ್ಭದಲ್ಲಿ ಈಶಾನ್ಯ ಭಾರತೀಯರ ಮೇಲೆ ಭಾರತದೊಳಗಿರುವ ಜನರು ಎಸಗುತ್ತಿರುವ ದೌರ್ಜನ್ಯಗಳ ಬಗ್ಗೆ ಕಣ್ಣಿದ್ದೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ವರ್ತಿಸುತ್ತಿದೆ.
ಅಸ್ಸಾಮಿನಲ್ಲಿ ಅಲ್ಪಸಂಖ್ಯಾತರೊಂದಿಗೆ ಅಲ್ಲಿನ ಸರಕಾರ ಹೇಗೆ ವರ್ತಿಸುತ್ತಿದೆ ಎನ್ನುವುದನ್ನು ನೋಡುತ್ತಿದ್ದೇವೆ. ಪರಕೀಯರು, ಒಳನುಸುಳುಕೋರರು ಎಂದು ಅಲ್ಲಿನ ವಲಸೆ ಕಾರ್ಮಿಕರ ಮೇಲೆ ನಿರಂತರ ದೌರ್ಜನ್ಯಗಳನ್ನು ಎಸಗಲಾಗುತ್ತಿದೆ. ಮುಸ್ಲಿಮರ ಮೇಲೆ ಬಹಿರಂಗವಾಗಿಯೇ ಅಲ್ಲಿನ ಸರಕಾರ ದ್ವೇಷ ಕಾರುತ್ತಿದೆ. ಮಣಿಪುರದಲ್ಲಿ ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಹತ್ಯಾಕಾಂಡಗಳಿಗೆ ವಿಶ್ವ ಕಳವಳ ಪಡಿಸುತ್ತಾ ಬಂದಿದೆ. ಮೈತೈ ಮತ್ತು ಕುಕಿ ಜನರ ನಡುವೆ ಸರಕಾರವೇ ವಿಭಜನೆಯನ್ನು ತಂದಿಕ್ಕಿ ಅವರನ್ನು ಬಡಿದಾಡಿಸಿತು. ನೂರಾರು ಮನೆಗಳು, ಚರ್ಚುಗಳು ಧ್ವಂಸವಾದವು. ಮಹಿಳೆಯರ ಮೇಲೆ ನಿರಂತರ ದೌರ್ಜನ್ಯಗಳು ನಡೆದವು. ಈಗಲೂ ಮಣಿಪುರ ಶಾಂತವಾಗಿಲ್ಲ. ಈ ಭಾಗದ ಜನರನ್ನು ಭಾರತೀಯರು ಸದಾ ಅನುಮಾನದ ಕಣ್ಣಿನಿಂದಲೇ ನೋಡುತ್ತಾರೆ. ತ್ರಿಪುರಾ ಮೂಲದ ವಿದ್ಯಾರ್ಥಿಯ ಮೇಲೆ ಉತ್ತರಾಖಂಡದಲ್ಲಿ ನಡೆದ ದಾಳಿಗೂ ಈ ಸಂಶಯವೇ ಕಾರಣ. ಭಾರತದೊಳಗಿರುವ ನಮ್ಮವರನ್ನೇ ಪರಕೀಯರನ್ನಾಗಿಸಿ ಅವರ ಮೇಲೆ ದಾಳಿಗಳನ್ನು ಸಂಘಟಿಸುತ್ತಿರುವ ನಮಗೆ, ನೆರೆಯ ಬಾಂಗ್ಲಾ, ಪಾಕಿಸ್ತಾನದಲ್ಲಿ ನಡೆಯುವ ಜನಾಂಗೀಯ ದ್ವೇಷದ ಬಗ್ಗೆ ಮಾತನಾಡಲು ನೈತಿಕತೆಯಿದೆಯೆ? ಈಶಾನ್ಯ ಭಾರತದಿಂದ ಬಂದ ಎಲ್ಲ ಕಾರ್ಮಿಕರೂ ಈ ಭಾಗದ ಜನರಿಗೆ ‘ಬಾಂಗ್ಲಾ ನುಸುಳುಕೋರರು’. ಈ ಭಾಗದ ಕಾರ್ಮಿಕರನ್ನು ತಮ್ಮ ತೋಟ, ಎಸ್ಟೇಟ್ಗಳಲ್ಲಿ ದುಡಿಸಿ ಬಳಿಕ ಅವರನ್ನು ಬಾಂಗ್ಲಾ ನುಸುಳುಕೋರರು ಎಂದು ಹೊರಗಟ್ಟುವುದು ಸಾಮಾನ್ಯವಾಗಿ ಬಿಟ್ಟಿದೆ. ಇತ್ತೀಚಿನ ದಿನಗಳಲ್ಲಿ ಜನಾಂಗೀಯ ಹತ್ಯೆಗಳು ಹೆಚ್ಚುತ್ತಿವೆ. ಅತ್ಯಂತ ಸುಶಿಕ್ಷಿತರ ನಾಡು ಎಂದು ಗುರುತಿಸಲ್ಪಟ್ಟ ಕೇರಳದಲ್ಲಿ ಛತ್ತೀಸ್ಗಡ ಮೂಲದ ಕಾರ್ಮಿಕನನ್ನು ಬಾಂಗ್ಲಾ ನುಸುಳುಕೋರನೆಂದು ಆರೋಪಿಸಿ ಅತ್ಯಂತ ಬರ್ಬರವಾಗಿ ಕೊಂದು ಹಾಕಲಾಯಿತು. ಕೊಂದವರೆಲ್ಲರೂ ಸಂಘಪರಿವಾರ ಕಾರ್ಯಕರ್ತರಾಗಿರುವುದು ಆಕಸ್ಮಿಕವಲ್ಲ.
ಪಶ್ಚಿಮಬಂಗಾಳದ ಮುರ್ಷಿದಾಬಾದ್ನ ಜ್ಯುವೆಲ್ ರಾಣಾ ಎಂಬ 19 ವರ್ಷದ ವಲಸೆ ಕಾರ್ಮಿಕನನ್ನು ಒಡಿಶಾದ ಸಂಬಲ್ಪುರದಲ್ಲಿ ಗುಂಪೊಂದು ಭೀಕರವಾಗಿ ಥಳಿಸಿ ಕೊಂದು ಹಾಕಿತು. ‘ಬಾಂಗ್ಲಾ ನುಸುಳುಕೋರ’ ಎಂದು ಆರೋಪಿಸಿ ಗುಂಪು ಈ ಕೃತ್ಯ ಎಸಗಿದೆ. ಆದರೆ ಆತ ಪಶ್ಚಿಮಬಂಗಾಳದ ನಿವಾಸಿಯಾಗಿದ್ದ. ಆತನ ಸಹವರ್ತಿಗಳು ಕೂಡ ಈ ಸಂದರ್ಭದಲ್ಲಿ ಹಲ್ಲೆಗೀಡಾಗಿದ್ದರು. ಪಶ್ಚಿಮ ಬಂಗಾಳ, ಈಶಾನ್ಯ ಭಾರತದ ಕೂಲಿ ಕಾರ್ಮಿಕರನ್ನು ಇಂದು ಭಾರತದೊಳಗೇ ಅತ್ಯಂತ ಅಮಾನುಷವಾಗಿ ನಡೆಸಿಕೊಳ್ಳಲಾಗುತ್ತಿದೆ. ತಮ್ಮದೇ ದೇಶದಲ್ಲಿ ತಮಗೆ ರಕ್ಷಣೆ ಇಲ್ಲ ಎನ್ನುವ ಸ್ಥಿತಿಯಿದೆ. ಇಂದು ಕೂಲಿ ಅರಸಿಕೊಂಡು ಕಾರ್ಮಿಕರು ಇತರ ರಾಜ್ಯಗಳಿಗೆ ಹೋಗುವಂತಹ ವಾತಾವರಣವೇ ಇಲ್ಲ. ಅವರನ್ನು ಶೋಷಣೆ ಮಾಡುವುದು ಕೂಡ ಸುಲಭ. ಸಂಘಪರಿವಾರ ದ್ವೇಷದ ಬೀಜಗಳನ್ನು ಬಿತ್ತಿ ಎಲ್ಲರನ್ನೂ ಅನುಮಾನದ ಕಣ್ಣಿನಿಂದ ನೋಡುವಂತೆ ಮಾಡಿದೆ. ಈ ಜನಾಂಗೀಯ ದ್ವೇಷದ ನೇತೃತ್ವವನ್ನು ಸರಕಾರವೇ ಹೊತ್ತುಕೊಂಡಿದೆ. ಇತ್ತೀಚೆಗೆ ಗರ್ಭಿಣಿ ಯೊಬ್ಬರನ್ನು ಬಾಂಗ್ಲಾ ನಿವಾಸಿ ಎಂದು ಸರಕಾರವೇ ಗಡಿಪಾರು ಮಾಡಿತ್ತು. ಬಳಿಕ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿ, ಆಕೆಯನ್ನು ಕರೆಸಿಕೊಂಡಿತು. ಚುನಾವಣಾ ಆಯೋಗ ನಡೆಸುತ್ತಿರುವ ನೂತನ ಮತದಾರರ ಪಟ್ಟಿ ಪರಿಷ್ಕರಣೆಯು ಈ ದೇಶದಲ್ಲಿ ‘ಲಕ್ಷಾಂತರ ಕೃತಕ ನುಸುಳುಕೋರರನ್ನು’ ಸೃಷ್ಟಿಸುವ ದುರುದ್ದೇಶವನ್ನು ಹೊಂದಿದೆ. ಮತದಾರರ ಪಟ್ಟಿಯಿಂದ ಹೊರ ಬಿದ್ದ ಲಕ್ಷಾಂತರ ಜನರ ಪೌರತ್ವ ಪ್ರಶ್ನೆಗೀಡಾಗುತ್ತದೆ. ಅಂತಿಮವಾಗಿ ಇವರೆಲ್ಲರನ್ನೂ ವಿದೇಶಿಗರು, ನುಸುಳುಕೋರರು ಎಂದು ವಿಭಜಿಸುವ ಪ್ರಯತ್ನ ನಡೆಯಲಿದೆ. ಭಾರತದ ಭವಿಷ್ಯವನ್ನು ಇದು ಇನ್ನಷ್ಟು ಅಪಾಯಕ್ಕೆ ತಳ್ಳಲಿದೆ. ಭಾರತದೊಳಗಿನ ಜನರಲ್ಲಿ ಪರಕೀಯತೆಯನ್ನು ಬಿತ್ತುವ ಪ್ರಯತ್ನವನ್ನು ಯಾರೇ ಮಾಡಿದರೂ ಅವರ ಮೇಲೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲವಾದರೆ, ಭಾರತದ ಪ್ರತಿ ಊರು ಒಂದೊಂದು ಮಣಿಪುರವಾಗಿ ಪರಿವರ್ತನೆಗೊಳ್ಳಲಿದೆ.







