ಎಚ್-1ಬಿ ವೀಸಾ ಶುಲ್ಕ ಏರಿಕೆ: ಬೇಡಿ ಪಡೆದ ಭಿಕ್ಷೆ

PC: PTI
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಪ್ರಧಾನಿ ಮೋದಿಯವರು ರವಿವಾರ ಸಂಜೆ 5 ಗಂಟೆಗೆ ಅನಿರೀಕ್ಷಿತವಾಗಿ ಟಿ.ವಿ.ಯಲ್ಲಿ ಕಾಣಿಸಿಕೊಂಡು ಭಾಷಣ ಮಾಡಲಿದ್ದಾರೆ ಎನ್ನುವುದು ಗೊತ್ತಾಗುತ್ತಿದ್ದಂತೆಯೇ ದೇಶ ಬೆಚ್ಚಿ ಬಿದ್ದಿತ್ತು. ಈ ಹಿಂದೆ, ನೋಟು ನಿಷೇಧ, ಲಾಕ್ಡೌನ್ಗಳನ್ನು ಘೋಷಿಸಲು ಪ್ರಧಾನಿಯವರು ಹೀಗೆಯೇ ಅನಿರೀಕ್ಷಿತವಾಗಿ ಟಿ.ವಿ.ಯಲ್ಲಿ ಕಾಣಿಸಿಕೊಂಡಿದ್ದರು. ಬಿಹಾರದಲ್ಲಿ ಚುನಾವಣೆ ನಡೆಯಲಿರುವುದರಿಂದ ಈ ಬಾರಿ ತೀರಾ ಆಘಾತಕಾರಿ ಘೋಷಣೆಗಳನ್ನು ಮಾಡಲಾರರು ಎನ್ನುವ ಸಣ್ಣ ವಿಶ್ವಾಸ ಜನರಲ್ಲಿತ್ತು. ಮೋದಿಯವರ ಬದಲಿಗೆ ಅವರ ಆಪ್ತ ಮಿತ್ರ ‘ಡೊಲಾಂಡ್’ ಟ್ರಂಪ್ ಅವರು ಸುಂಕ ಏರಿಕೆ, ವೀಸಾ ಶುಲ್ಕ ಏರಿಕೆ ಮೊದಲಾದ ರೂಪದಲ್ಲಿ ಭಾರತೀಯರ ಮೇಲೆ ಕ್ಷಿಪಣಿಗಳನ್ನು ಎಸೆದಿರುವಾಗ, ಅದಕ್ಕಿಂತ ಆಘಾತಕಾರಿಯಾದ ಉಡುಗೊರೆಗಳನ್ನು ನೀಡಲು ಪ್ರಧಾನಿಯ ಬಳಿ ಇರುವುದಾದರೂ ಏನು? ಬಹುಶಃ ಕಳೆದ ಎಂಟು ವರ್ಷಗಳ ಕಾಲ ಜಿಎಸ್ಟಿ ಹೆಸರಿನಲ್ಲಿ ದೇಶದ ಜನರನ್ನು ಸುಲಿಗೆ ಮಾಡಿದ ಪಾಪವನ್ನು ತೊಳೆದುಕೊಳ್ಳಲು ಮುಂದಾಗಿರಬಹುದೆ? ಅದಕ್ಕಾಗಿ ದೇಶದ ಜನರ ಮುಂದೆ ಕ್ಷಮೆಯಾಚನೆ ಮಾಡಬಹುದೆ? ಎನ್ನುವ ಸಣ್ಣದೊಂದು ನಿರೀಕ್ಷೆ ಜನರಲ್ಲಿತ್ತು. ಅಥವಾ ಎಚ್-1 ಬಿ ವೀಸಾ ಶುಲ್ಕವನ್ನು ಅಮೆರಿಕ ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿರುವುದರಿಂದ, ಅನಿವಾಸಿ ಭಾರತೀಯರಿಗೆ ಪುನರ್ವಸತಿ ಕಲ್ಪಿಸಲು ಭಾರೀ ಯೋಜನೆಗಳೊಂದಿಗೆ ಬರುತ್ತಿರಬಹುದು ಎಂದು ಕೆಲವರು ಮನಸ್ಸಿನಲ್ಲೇ ಮಂಡಿಗೆ ತಿಂದಿದ್ದರು. ಆದರೆ ಟಿವಿಯಲ್ಲಿ ಕಾಣಿಸಿಕೊಂಡ ಪ್ರಧಾನಿ, ಜಿಎಸ್ಟಿ ಸುಧಾರಣೆಯನ್ನೇ ದೇಶದ ಆರ್ಥಿಕತೆಯಲ್ಲಾಗಿರುವ ಕ್ರಾಂತಿಯೆಂಬಂತೆ ಮಾತನಾಡಿ ತಮ್ಮ ಮಾತುಗಳನ್ನು ಮುಗಿಸಿದ್ದಾರೆ. ಕನಿಷ್ಠ ಕುಸಿದು ಕೂತಿರುವ ದೇಶದ ತಲೆಯ ಮೇಲೆ ಇನ್ನೊಂದು ಚಪ್ಪಡಿ ಕಲ್ಲು ಎಳೆದು ಹಾಕಲಿಲ್ಲವಲ್ಲ ಎಂದು ಜನರು ಸರಾಗ ನಿಟ್ಟುಸಿರಿಟ್ಟು ಟಿ.ವಿ. ಬಂದ್ ಮಾಡಿದ್ದಾರೆ.
ಈಗಾಗಲೇ ತಂದಿರುವ ಜಿಎಸ್ಟಿ ಸುಧಾರಣೆಯನ್ನು ಅವರು ‘ಬಚತ್ ಉತ್ಸವ್’ ಎಂದು ಬಣ್ಣಿಸಿದ್ದಾರೆ. ಹಾಗೆಯೇ ಸ್ವದೇಶಿ ಉತ್ಪನ್ನಗಳನ್ನು ಉತ್ತೇಜಿಸಲು ದೇಶದ ಜನತೆಗೆ ಕರೆ ನೀಡಿದ್ದಾರೆ. ಇದೀಗ ಒಂದು ಪ್ರಶ್ನೆ ದೇಶದ ಜನರನ್ನು ಹುಳದಂತೆ ಕೊರೆಯುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಈ ಅವೈಜ್ಞಾನಿಕ ಜಿಎಸ್ಟಿ ತೆರಿಗೆಯನ್ನು ದೇಶದ ಮೇಲೆ ಹೇರಿದವರು ಸ್ವತಃ ಪ್ರಧಾನಿ ಮೋದಿಯವರೇ ಅಲ್ಲವೆ? ಈ ತೆರಿಗೆಯ ವಿರುದ್ಧ ವಿರೋಧ ಪಕ್ಷಗಳ ನಾಯಕರು, ಆರ್ಥಿಕ ತಜ್ಞರು ಆಕ್ರೋಶ ವ್ಯಕ್ತಪಡಿಸುತ್ತಾ ಬಂದಿದ್ದರೂ ಅದರ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ಈ ಎಂಟು ವರ್ಷಗಳ ಕಾಲ ದೇಶದ ಜನರ ಉಳಿತಾಯವನ್ನು ‘ಕಿತ್ತುಕೊಂಡದ್ದು ಯಾಕೆ?’ ಹಾಗೆಯೇ ಸ್ವದೇಶಿ ಉತ್ಪನ್ನಗಳಿಗೆ ಆದ್ಯತೆ ನೀಡಬಾರದು ಎನ್ನುವ ಕಾರಣಕ್ಕಾಗಿ ಜಿಎಸ್ಟಿ ತೆರಿಗೆಯನ್ನು ಈವರೆಗೆ ಹೇರಲಾಗಿತ್ತೆ? ಅಮೆರಿಕ ಭಾರೀ ಸುಂಕವನ್ನು ಹೇರಿದ ಬಳಿಕ ಹಾಗೂ ಎಚ್-1ಬಿ ವೀಸಾ ಶುಲ್ಕವನ್ನು ಒಂದು ಲಕ್ಷ ಡಾಲರ್ಗೆ ಏರಿಕೆ ಮಾಡಿದ ಬಳಿಕ ಪ್ರಧಾನಿ ಮೋದಿಯವರು ಏಕಾಏಕಿ ‘ಸ್ವದೇಶಿ ಉತ್ಪನ್ನ’ಗಳ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತಿದ್ದಾರೆ. ಇಂತಹದೊಂದು ದಯನೀಯ ಸ್ಥಿತಿಗೆ ದೇಶವನ್ನು ತಳ್ಳಿದವರು ಸ್ವತಃ ಪ್ರಧಾನಿ ಮೋದಿಯವರೇ ಆಗಿದ್ದಾರೆ. ತನ್ನ ‘ತಪ್ಪನ್ನು ತಿದ್ದಿಕೊಂಡಿದ್ದೇನೆ’ ಎಂದು ಘೋಷಿಸಬೇಕಾಗಿದ್ದ ಮೋದಿಯವರು, ತಪ್ಪನ್ನು ತಿದ್ದಿಕೊಂಡಿರುವುದನ್ನೇ ಜನರಿಗೆ ನೀಡಿರುವ ಉಡುಗೊರೆಯೆಂದು ಬಿಂಬಿಸಲು ಹೊರಟಿದ್ದಾರೆ.
ಎಚ್1 ಬಿ ವೀಸಾ ಶುಲ್ಕವನ್ನು ಟ್ರಂಪ್ ಒಂದು ಲಕ್ಷ ಡಾಲರ್ಗೆ ಏರಿಕೆ ಮಾಡಿದಾಗ ಅದು ಮೋದಿಯ ವರ್ಚಸ್ಸಿನ ಮೇಲೆ ಇನ್ನಷ್ಟು ಗೀರುಗಳನ್ನು ಎಳೆದಿತ್ತು. ಈ ಹಿಂದೆ ಅಮೆರಿಕ ಅನಿವಾಸಿಗಳ ಮುಂದೆ ಭಾಷಣ ಮಾಡುತ್ತಾ ‘ಅಹ್ಮದಾಬಾದ್, ಬೆಂಗಳೂರಿನಲ್ಲಿ ಅಮೆರಿಕದ ಹೊಸ ಕಾನ್ಸುಲೇಟ್ ತೆರೆಯಲಿದ್ದೇವೆ’ ಎಂದು ಘೋಷಿಸಿದಾಗ ಅನಿವಾಸಿ ಭಾರತೀಯರು ‘ಮೋದಿ ಮೋದಿ’ ಎಂದು ಚೀರಾಡಿದ್ದರು. ಹಾಗೆಯೇ ಎಚ್1 ಬಿ ವೀಸಾ ನವೀಕರಣಕ್ಕೆ ಅಮೆರಿಕದಿಂದ ಹೊರಗೆ ಹೋಗಬೇಕಾಗಿಲ್ಲ, ಅದಕ್ಕೂ ಕ್ರಮ ತೆಗೆದುಕೊಂಡಿದ್ದೇವೆ ಎಂದು ಭಾಷಣದಲ್ಲಿ ಹೇಳಿದಾಗ ಅಮೆರಿಕದ ಅನಿವಾಸಿ ಭಾರತೀಯರು ಎದ್ದು ನಿಂತು ಹಲವು ನಿಮಿಷ ಚಪ್ಪಾಳೆ ತಟ್ಟಿದ್ದರು. ಅಮೆರಿಕದ ನೆಲದಲ್ಲಿ ನಿಂತು ‘ಅಬ್ ಕಿ ಬಾರ್ ಟ್ರಂಪ್ ಸರಕಾರ್’ ಎಂದು ಮೋದಿ ಘೋಷಣೆ ಕೂಗಿದಾಗ ಇದೇ ಅನಿವಾಸಿಗಳು ಚಪ್ಪಾಳೆ ತಟ್ಟಿ ಸ್ವಾಗತಿಸಿದ್ದರು. ಕಳೆದ ಒಂದು ದಶಕದಿಂದ ಭಾರತ ಆರ್ಥಿಕವಾಗಿ ಜರ್ಜರಿತವಾಗಿದ್ದರೂ ಕೋಮುವಾದಿ ಅಜೆಂಡಾಗಳಿಗೆ ಹಣ ಸುರಿಯುತ್ತಾ ಬಂದವರೂ ಈ ಅನಿವಾಸಿಗಳೇ ಆಗಿದ್ದಾರೆ. ಇದೀಗ ಎಚ್-1ಬಿ ವೀಸಾ ಶುಲ್ಕ ದುಪ್ಪಟ್ಟು ಆಗಿರುವುದನ್ನು ಹೇಗೆ ಸ್ವಾಗತಿಸಬೇಕು, ಯಾರನ್ನು ಇದಕ್ಕಾಗಿ ದೂರಬೇಕು ಎನ್ನುವುದನ್ನು ತಿಳಿಯದೆ ಅಮೆರಿಕದ ಈ ಅನಿವಾಸಿ ‘ತೆಂಗಿನ ಕಾಯಿ’ಗಳು ಕಕ್ಕಾಬಿಕ್ಕಿಯಾಗಿವೆ. ಒಂದು ರೀತಿಯಲ್ಲಿ ಅವರೇ ಬೇಡಿ ಪಡೆದ ಭಿಕ್ಷೆ ಇದು. ತಕ್ಷಣ ತನ್ನ ಅನಿವಾಸಿ ಗೆಳೆಯರ ನೆರವಿಗೆ ಧಾವಿಸಬೇಕಾಗಿದ್ದ ಪ್ರಧಾನಿ ಮೋದಿಯವರು ‘ಇತರ ದೇಶಗಳ ಮೇಲಿನ ಅವಲಂಬನೆಯೇ ಭಾರತದ ಅತಿ ದೊಡ್ಡ ಶತ್ರು’ ಎಂದು ಪ್ರತಿಕ್ರಿಯಿಸಿ, ಅನಿವಾಸಿ ಭಾರತೀಯರನ್ನೇ ಮೋದಿಯವರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದ್ದಾರೆ.
ಕಳೆದ ಹತ್ತು ವರ್ಷಗಳಲ್ಲಿ ಭಾರತ ಸ್ವಾವಲಂಬನೆಯಲ್ಲಿ ಯಾಕೆ ಹಿಂದುಳಿಯಿತು? ಎನ್ನುವ ಪ್ರಶ್ನೆಗಳಿಗೆ ಸ್ವತಃ ಮೋದಿಯವರೇ ಉತ್ತರಿಸಬೇಕು. ನೋಟು ನಿಷೇಧ, ಅವೈಜ್ಞಾನಿಕವಾಗಿ ಜಿಎಸ್ಟಿ ತೆರಿಗೆ ಹೇರಿಕೆ, ಲಾಕ್ಡೌನ್ ಇವೆಲ್ಲವೂ ಈ ದೇಶದ ಸಣ್ಣ ಪುಟ್ಟ ಉದ್ದಿಮೆಗಳನ್ನು ಹೇಗೆ ಹಂತಹಂತವಾಗಿ ಸರ್ವನಾಶ ಮಾಡಿತು ಎನ್ನುವುದನ್ನು ನೋಡುತ್ತಾ ಬಂದಿದ್ದೇವೆ. ಜರ್ಜರಿತ ಆರ್ಥಿಕ ವ್ಯವಸ್ಥೆಯ ಜೊತೆಗೆ, ಕಳೆದ ಒಂದು ದಶಕಗಳಲ್ಲಿ ಹೆಚ್ಚಿದ ದೊಂಬಿ, ಗಲಭೆಗಳು ಹಲವು ಉದ್ಯಮಿಗಳನ್ನು ದೇಶ ತೊರೆಯುವಂತೆ ಮಾಡಿತು. ಬೃಹತ್ ಬಂಡವಾಳವನ್ನು ಭಾರತದಲ್ಲಿ ಹೂಡಿಕೆ ಮಾಡಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಯಿತು.
2024ರಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಭಾರತೀಯ ಪೌರತ್ವವನ್ನು ತೊರೆದಿದ್ದಾರೆ ಎಂದು ಸ್ವತಃ ಕೇಂದ್ರ ಸರಕಾರವೇ ಹೇಳಿಕೊಂಡಿದೆ. ಸಚಿವಾಲಯದಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 2020ರಲ್ಲಿ 85,256 ಮಂದಿ, 2021ರಲ್ಲಿ 1,63,370 ಮಂದಿ, 2022ರಲ್ಲಿ 2,25,620 ಮಂದಿ, 2023ರಲ್ಲಿ 2,16,219 ಮಂದಿ ಭಾರತೀಯ ಪೌರತ್ವವನ್ನು ತೊರೆದಿದ್ದಾರೆ. ಇವರಲ್ಲಿ ಬಹುತೇಕ ಜನರು ಶ್ರೀಮಂತ ಮತ್ತು ಮೇಲ್ಜಾತಿಗೆ ಸೇರಿದವರು ಎನ್ನುವುದನ್ನು ಗಮನಿಸಬೇಕು. ಪ್ರಧಾನಿ ಮೋದಿಯ ಆರ್ಥಿಕನೀತಿಗಳಿಂದ ಕೊಬ್ಬಿದವರೇ ದೇಶಬಿಡುತ್ತಿದ್ದಾರೆ. ದೇಶದಲ್ಲಿ ಎಲ್ಲವೂ ಚೆನ್ನಾಗಿದೆಯೆಂದಾದರೆ ಅವರೇಕೆ ದೇಶ ಬಿಡುತ್ತಿದ್ದರು? ಇವರನ್ನು ದೇಶದಲ್ಲಿ ಉಳಿಸಿಕೊಳ್ಳುವುದಕ್ಕೆ ಸರಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಯಾಕೆ ಪ್ರಧಾನಿ ಮೋದಿಯವರು ತಮ್ಮ ಭಾಷಣದಲ್ಲಿ ವಿವರಣೆ ನೀಡಿಲ್ಲ? ಈ ಹಿಂದೆ ರಶ್ಯವು ಉಕ್ರೇನ್ ಮೇಲೆ ದಾಳಿ ಮಾಡಿದಾಗ ಉಕ್ರೇನ್ ಎನ್ನುವ ಪುಟ್ಟ ದೇಶದಲ್ಲಿ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳಿದ ಭಾರತದ ನೂರಾರು ವಿದ್ಯಾರ್ಥಿಗಳು ಬೀದಿ ಪಾಲಾದರು. ಆಗ ಪ್ರಧಾನಿ ಮೋದಿಯವರು ‘ಉನ್ನತ ವೈದ್ಯಕೀಯ ವಿದ್ಯಾಭ್ಯಾಸಕ್ಕೆ ಭಾರತ ಬಿಟ್ಟು ಆ ಸಣ್ಣ ದೇಶಕ್ಕೆ ಅಷ್ಟು ದೂರ ಯಾಕೆ ಹೋಗಬೇಕು?’ ಎಂದು ಕೇಳಿದ್ದರು. ಅಂತಹ ಸ್ಥಿತಿಯನ್ನು ಈ ದೇಶದ ವಿದ್ಯಾರ್ಥಿಗಳಿಗೆ ತಂದಿಟ್ಟವರು ಯಾರು ಎನ್ನುವ ಆತ್ಮವಿಮರ್ಶೆಯನ್ನು ಅವರು ಮಾಡಿರಲಿಲ್ಲ.
ಐಟಿ ಪದವೀಧರರ ವಿದೇಶಿ ಸೇವೆಗಳಿಂದ ಭಾರತಕ್ಕೆ ಪ್ರತೀ ವರ್ಷ ನೂರು ಶತ ಕೋಟಿ ಡಾಲರ್ ಆದಾಯ ಬರುತ್ತಿತ್ತು ಎನ್ನಲಾಗುತ್ತಿದೆ. ಎಚ್-1 ಬಿ ವೀಸಾದ ಶೇ. 71ರಷ್ಟು ಭಾರತೀಯರ ಬಳಿಯಿದೆ. ದಿಕ್ಕು ದೆಸೆಯಿಲ್ಲದ ವಿದೇಶಾಂಗ ನೀತಿ ಮತ್ತು ದೂರದೃಷ್ಟಿಯಿಲ್ಲದ ಆರ್ಥಿಕ ನೀತಿಯಿಂದಾಗಿ ಇಂದು ಭಾರತವೂ ಅಮೆರಿಕದಂತಹ ದೇಶದ ಸುಲಭ ತುತ್ತಾಗಿ ಬಿಟ್ಟಿದೆ. ಅಮೆರಿಕ ಈ ಮೂಲಕ ತನ್ನ ಮುಂದೆ ಭಾರತವನ್ನು ಮಂಡಿಯೂರಿಸಲು ಒತ್ತಡ ಹೇರುತ್ತಿದೆ. ಇವೆಲ್ಲದರ ಹೊಣೆಗಾರಿಕೆಯನ್ನು ಹೊತ್ತು ದೇಶದ ಕ್ಷಮೆಯಾಚಿಸಬೇಕಾಗಿದ್ದ ಪ್ರಧಾನಿ ಮೋದಿಯವರು, ಟಿವಿಯ ಮುಂದೆ ಬಂದು ತಮ್ಮ ಎಂದಿನ ಉಪಯೋಗಕ್ಕೆ ಭಾರದ ಭಾಷಣದಿಂದ ಆಗಿರುವ ನಷ್ಟವನ್ನು ತುಂಬಿಸಲು ಮುಂದಾಗಿರುವುದು ಕಳವಳಕಾರಿ ವಿಷಯವಾಗಿದೆ. ಇದೊಂದು ರೀತಿ, ಭಾರತದ ಜನರ ಗಾಯಗಳಿಗೆ ತಮ್ಮ ಭಾಷಣದ ಮೂಲಕ ಪ್ರಧಾನಿ ಮೋದಿಯವರು ಉಪ್ಪು ಸವರಿದಂತಾಗಿದೆ.







