ದ್ವೇಷ ಭಾಷಣಗಳು ಮತ್ತು ಕಾನೂನಿನ ಇತಿಮಿತಿಗಳು

ಸಾಂದರ್ಭಿಕ ಚಿತ್ರ (AI)
ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ಕಳೆದ ನಾಲ್ಕು ದಶಕಗಳಿಂದ ಅದರಲ್ಲೂ ಅಯೋಧ್ಯೆಯ ಬಾಬರಿ ಮಸೀದಿಯನ್ನು ಸಮಾಜವಿರೋಧಿ ಕೋಮುವಾದಿ ಶಕ್ತಿಗಳು ನೆಲಸಮಗೊಳಿಸಿದ ನಂತರ ಒಂದು ಸಮುದಾಯದ ವಿರುದ್ಧ ಇನ್ನೊಂದು ಸಮುದಾಯವನ್ನು ಎತ್ತಿ ಕಟ್ಟುವ, ಹಿಂಸೆಗೆ ಪ್ರಚೋದಿಸುವ ಭಾಷಣಗಳಿಗೆ ಕಡಿವಾಣ ಇಲ್ಲದಂತಾಗಿದೆ. ಈ ಸಂಬಂಧದಲ್ಲಿ ಸರಕಾರಕ್ಕೆ, ಪೊಲೀಸರಿಗೆ ಕೊಡುವ ದೂರುಗಳಿಂದ ಪ್ರಯೋಜನ ಇಲ್ಲದಂತಾಗಿದೆ. ಹೀಗಾಗಿ ಕೋಮುವಾದಿ ಸಂಘಟನೆಗಳಿಗೆ ಸೇರಿದ ಜನಾಂಗ ದ್ವೇಷಿಗಳು ಬಾಯಿಗೆ ಬಂದಂತೆ ಮಾತಾಡುತ್ತಲೇ ಇದ್ದಾರೆ.ಇಂತಹ ಪ್ರಚೋದನಕಾರಿ ಮಾತುಗಳಿಂದ ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗಳಿಗೆ ಧಕ್ಕೆಯಾಗುತ್ತಲೇ ಇದೆ.
ದ್ವೇಷ ಭಾಷಣಗಳ ತಡೆಗೆ ಸರಕಾರ ಹಲವಾರು ಕಾನೂನುಗಳನ್ನು ಮಾಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಕೂಡ ಬಿಗಿಯಾದ ಕಾನೂನುಗಳನ್ನು ಮಾಡಿದೆ. ಈ ಕಾನೂನಿನ ಪ್ರಕಾರ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲೈಂಗಿಕ, ಭಾಷೆ, ಜನ್ಮಸ್ಥಳ ಇತ್ಯಾದಿಗಳ ವಿರುದ್ಧ ದ್ವೇಷ ಬಿತ್ತುವುದು ಅಪರಾಧವಾಗಿದೆ. ಇಂತಹ ಅಪರಾಧ ಎಸಗುವವರಿಗೆ ಒಂದು ವರ್ಷದಿಂದ ಏಳು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ಐವತ್ತು ಸಾವಿರ ರೂ. ದಂಡ ವಿಧಿಸಲು ಅವಕಾಶವಿದೆ. ಆದರೂ ದ್ವೇಷವನ್ನು ಕಾರಿಕೊಳ್ಳುವ ಪ್ರಚೋದನಕಾರಿ ಭಾಷಣಗಳು ಯಾಕೆ ನಿಂತಿಲ್ಲ ಎಂಬ ಪ್ರಶ್ನೆಗೆ ಉತ್ತರ ಬೇಕಾಗಿದೆ.
ಕರ್ನಾಟಕ ಸರಕಾರ ಏನೇ ಕಾನೂನು ರಚಿಸಿದರೂ ಕಲ್ಲಡ್ಕ ಪ್ರಭಾಕರ ಭಟ್, ಬಸನಗೌಡ ಪಾಟೀಲ್ ಯತ್ನಾಳ್, ಜಗದೀಶ್ ಕಾರಂತರಂತಹವರು ನಂಜು ಕಾರುವ ಮಾತುಗಳನ್ನು ಬಹಿರಂಗವಾಗಿ ಆಡುತ್ತಲೇ ಇದ್ದಾರೆ. ಏನು ಮಾತಾಡಿದರೂ ನಡೆಯುತ್ತದೆ ಎಂದು ತಮ್ಮ ಮಾತುಗಳನ್ನು ಮುಂದುವರಿಸಿದ್ದಾರೆ. ಇವರ ಮಾತುಗಳಿಗೆ ಕಡಿವಾಣ ಹಾಕುವವರು ಯಾರು? ಈ ಪ್ರಶ್ನೆಗೆ ಉತ್ತರಬೇಕಾಗಿದೆ. ಇತ್ತೀಚೆಗೆ ಈ ದ್ವೇಷ ಭಾಷಣಗಳ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದು ಗಮನಾರ್ಹವಾಗಿದೆ. ಕೇಂದ್ರ ಹಾಗೂ ರಾಜ್ಯ ಸರಕಾರಗಳು ದ್ವೇಷ ಭಾಷಣ ನಿಯಂತ್ರಣಕ್ಕೆ ಏನೇ ಕಾನೂನು ಮಾಡಿದರೂ ಆ ಕಾನೂನುಗಳು ಜಾರಿಯಾಗದಿದ್ದರೆ ದ್ವೇಷ ಭಾಷಣ ತಡೆಯಲು ಹೇಗೆ ಸಾಧ್ಯ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿರುವುದು ಸರಿಯಾಗಿದೆ.
ದ್ವೇಷ ಭಾಷಣ ನಿರ್ಬಂಧಿಸಲು ಸರಕಾರ ಕಾನೂನುಗಳನ್ನು ಮಾಡುತ್ತದೆ. ಆದರೆ ಅಂತಹ ಕಾನೂನುಗಳನ್ನು ಜಾರಿ ಮಾಡಬೇಕಾದ ಆಡಳಿತ ಯಂತ್ರ ನಿಷ್ಕ್ರಿಯವಾದರೆ ಯಾರು ಹೊಣೆ? ಈ ಬಗ್ಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ ಮಾತ್ರವಲ್ಲ ತನಿಖೆ ಪಾರದರ್ಶಕವಾಗಿರಬೇಕೆಂದು ಹೇಳಿದೆ.
ಯಾವ ಸರಕಾರ ಮತ್ತು ಕಾನೂನು ತಮಗೆ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಖಚಿತವಾದಾಗ ವಿಷ ಕಾರುವ ದ್ವೇಷಿಗಳು ತಮ್ಮ ಪ್ರಚೋದನಕಾರಿ ಮಾತುಗಳನ್ನು ಮುಂದುವರಿಸುತ್ತಾರೆ. ಯಾರೋ ಸಾಮಾನ್ಯ ವ್ಯಕ್ತಿಗಳು ಇಂತಹ ಪ್ರಚೋದನಕಾರಿ ಮಾತುಗಳನ್ನು ಆಡಿದರೆ ಅಷ್ಟು ಪರಿಣಾಮ ಬೀರಲಿಕ್ಕಿಲ್ಲ. ಆದರೆ ಸಾರ್ವಜನಿಕ ರಂಗದ ವ್ಯಕ್ತಿಗಳು, ಜನಪ್ರತಿನಿಧಿಗಳು, ಸರಕಾರದ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಇಂಥ ಬೆಂಕಿಯುಗುಳುವ ಭಾಷಣಗಳನ್ನು ಮಾಡಿದರೆ ಅದನ್ನು ನಿಯಂತ್ರಿಸುವುದು ಹೇಗೆ?
ದ್ವೇಷ ಭಾಷಣಗಳ ಬಗ್ಗೆ ದೂರುಗಳು ಬಂದಾಗ ಪೊಲೀಸರು ತಕ್ಷಣ ದೂರು ಸ್ವೀಕರಿಸಿ ಮೊದಲ ಮಾಹಿತಿ ವರದಿಯನ್ನು (ಎಫ್ಐಆರ್) ದಾಖಲಿಸಿಕೊಳ್ಳಬೇಕು. ಆದರೆ ದ್ವೇಷ ಭಾಷಣ ಮಾಡಿದವರು ರಾಜಕೀಯವಾಗಿ ಹಾಗೂ ಧಾರ್ಮಿಕವಾಗಿ ಪ್ರಭಾವಿ ವ್ಯಕ್ತಿಗಳಾಗಿದ್ದರೆ ಅಂತಹವರ ಪ್ರಚೋದನಕಾರಿ ಭಾಷಣದ ಬಗ್ಗೆ ದೂರುಗಳು ಬಂದರೆ ಅನೇಕ ಬಾರಿ ಪೊಲೀಸರು ದೂರು ದಾಖಲಿಸಿಕೊಳ್ಳುವುದಿಲ್ಲ. ಹರಿದ್ವಾರ, ಛತ್ತೀಸ್ಗಡಗಳಲ್ಲಿ ಕೆಲವು ತಿಂಗಳ ಹಿಂದೆ ಧರ್ಮ ಸಂಸತ್ ನಡೆದಾಗ ಸ್ವಯಂ ಘೋಷಿತ ಧರ್ಮ ಗುರುಗಳು ಹಿಂದೂ ಧರ್ಮವನ್ನು ರಕ್ಷಿಸಲು ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಹಿಂದೂ ಯುವಕರು ಶಸ್ತ್ರಗಳನ್ನು ಕೈಗೆ ತೆಗೆದುಕೊಳ್ಳಬೇಕೆಂದು ಬಹಿರಂಗವಾಗಿ ಕರೆ ನೀಡಿದರು. ಅವರ ವಿರುದ್ಧ ಸರಕಾರ ಯಾವ ಕ್ರಮಗಳನ್ನೂ ಕೈಗೊಳ್ಳಲಿಲ್ಲ. ಈ ಬಗ್ಗೆ ವ್ಯಾಪಕವಾಗಿ ಟೀಕೆಗಳು ಬಂದ ನಂತರ ಕಾಟಾಚಾರಕ್ಕೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಯಿತು. ಆದರೆ ನಂತರ ಅದು ಏನಾಯಿತು ಎಂಬುದು ಯಾರಿಗೂ ಗೊತ್ತಿಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಗೂ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಪ್ರಧಾನಿ ನರೇಂದ್ರ ಮೋದಿಯವರ ಬಾಯಿಯಿಂದಲೇ ಪ್ರಚೋದನಕಾರಿ ಮಾತುಗಳು ಬಂದವು. ಇತ್ತೀಚಿನ ಪಶ್ಚಿಮ ಬಂಗಾಳ ವಿಧಾನ ಸಭಾ ಚುನಾವಣೆಯಲ್ಲಿ ಕೂಡ ಪ್ರಧಾನಿ ಮೋದಿಯವರ ಭಾಷಣದ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ನೀಡಿದರೂ ಯಾವುದೇ ಕ್ರಮವನ್ನು ಕೈಗೊಳ್ಳಲಿಲ್ಲ. ಹೀಗಾಗಿ ದ್ವೇಷ ಭಾಷಣ ಮಾಡುವವರನ್ನು ನಿಯಂತ್ರಿಸುವವರೇ ಇಲ್ಲದಂತಾಗಿದೆ. ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿಯವರು ಕ್ರಿಯೆಗೆ, ಪ್ರತಿಕ್ರಿಯೆ ಎಂಬಂತಹ ಮಾತುಗಳನ್ನು ಆಡಿದ್ದರು. ಅವರ ಮಾತಿನ ಬಗ್ಗೆ ಶಾಸನ ಮೌನವಾಯಿತು.
ಬರೀ ಕಾನೂನು ರಚಿಸುವುದರಿಂದ ದ್ವೇಷ ಭಾಷಣಗಳನ್ನು ಮತ್ತು ಕೋಮು ಹಿಂಸೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಯಾವುದೇ ಕಾನೂನನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಇಚ್ಛಾಶಕ್ತಿಯು ಆಡಳಿತ ವ್ಯವಸ್ಥೆಗೆ ಇರಬೇಕಾಗುತ್ತದೆ. ಸಾಮಾಜಿಕ ಜಾಲ ತಾಣದಲ್ಲಿ ಹೆಸರು, ವಿಳಾಸ ಹಾಕಿ ದ್ವೇಷವನ್ನು ಹರಡುವ ವ್ಯಕ್ತಿಯನ್ನು ಹಿಡಿದ ಉದಾಹರಣೆಗಳಿವೆ. ಆದರೆ ಕೋಮುವಾದಿ ಸಂಘಟನೆಗೆ ಸೇರಿದ ವ್ಯಕ್ತಿ ಸಾವಿರಾರು ಜನರು ಸೇರಿದ ಸಾರ್ವಜನಿಕ ಸಭೆಗಳಲ್ಲಿ ಪ್ರಚೋದನಕಾರಿ ಮಾತುಗಳನ್ನು ಆಡಿದರೆ ನಮ್ಮ ವ್ಯವಸ್ಥೆಯ ಜಾಣ ಕುರುಡರಿಗೆ ಇದು ಕಾಣುವುದಿಲ್ಲ. ಅಂಥವರನ್ನು ಬಂಧಿಸಿದರೆ ಸಾಮಾಜಿಕ ಶಾಂತಿ ಕದಡುತ್ತದೆ ಎಂದು ನೆಪ ಹೇಳಲಾಗುತ್ತದೆ. ಅತ್ಯಂತ ಆತಂಕ ಮತ್ತು ವಿಷಾದದ ಸಂಗತಿ ಅಂದರೆ ತಳ ಮಟ್ಟದಲ್ಲಿ ಕೆಲಸ ಮಾಡುವ ಪೊಲೀಸ್ ಸಿಬ್ಬಂದಿಗೆ ಸಂಘ ಪರಿವಾರದ ಜೊತೆಗೆ ಅನೈತಿಕ ಸಂಬಂಧವಿದೆ ಎಂಬ ಆರೋಪದಲ್ಲಿ ಹುರುಳಿಲ್ಲದಿಲ್ಲ. ಕಾರಣ ಪೊಲೀಸ್ ನೇಮಕಾತಿ ಮತ್ತು ತರಬೇತಿ ಸಂದರ್ಭದಲ್ಲಿ ನಮ್ಮ ಸಂವಿಧಾನದ ಬಗ್ಗೆ ಪಾಠ ಮಾಡುವುದು ಅಗತ್ಯವಾಗಿದೆ.
ದಯವೇ ಧರ್ಮದ ಮೂಲ ಎಂದು ಹೇಳಿರುವ ಬಸವಣ್ಣ, ಜಾತಿ ಮತಗಳನ್ನು ಮೀರಿ ಎಲ್ಲರನ್ನೂ ಪ್ರೀತಿಸಬೇಕೆಂದು ಹೇಳಿದ ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳು ನಡೆದಾಡಿದ ನೆಲದಲ್ಲಿ ದ್ವೇಷ ಭಾಷಣದ ಕಾಯಿಲೆ ವ್ಯಾಪಕವಾಗಿ ಹರಡುತ್ತಿದೆ. ಕಾನೂನು ಪಾಲನೆಯ ಹೊಣೆ ಹೊತ್ತವರಿಂದಲೇ ಅದರ ಉಲ್ಲಂಘನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ವ್ಯಕ್ತಪಡಿಸಿದ ಕಳವಳ ಗಮನಾರ್ಹವಾಗಿದೆ. ಎಲ್ಲಕ್ಕಿಂತ ಮೊದಲು ಸರಕಾರದ ಆಡಳಿತ ವ್ಯವಸ್ಥೆಯಲ್ಲಿ, ನ್ಯಾಯಾಂಗದಲ್ಲಿ, ಪೊಲೀಸ್ ವ್ಯವಸ್ಥೆಯಲ್ಲಿ ನುಸುಳಿದ ಜನಾಂಗ ದ್ವೇಷಿ ಕೋಮುವಾದಿಗಳನ್ನು ಹೊರ ದಬ್ಬಬೇಕಾಗಿದೆ. ಇದನ್ನು ಹೀಗೇ ಬಿಟ್ಟರೆ ಒಂದಿಲ್ಲೊಂದು ದಿನ ಪ್ರಜಾಪ್ರಭುತ್ವ ವ್ಯವಸ್ಥೆ ಇದಕ್ಕಾಗಿ ಭಾರೀ ಬೆಲೆ ತೆರಬೇಕಾಗುತ್ತದೆ.






