ಹಿಜಾಬ್ ಆದೇಶ ಹಿಂದಕ್ಕೆ: ತಪ್ಪು ತಿದ್ದಿಕೊಂಡ ಸರಕಾರ

ಸಾಂದರ್ಭಿಕ ಚಿತ್ರ | PC : Gemini AI
ಶಿಕ್ಷಣದ ಹಕ್ಕಿಗೆ ಸಂಬಂಧಿಸಿ ಈ ದೇಶದ ಸಂವಿಧಾನದ ಆಶಯಕ್ಕೆ ವಿರುದ್ಧ ವಾಗಿ ಬಿಜೆಪಿ ಸರಕಾರ ನೀಡಿದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರಕಾರ ಹಿಂಪಡೆದಿದ್ದು, ಶಾಲೆ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಅಥವಾ ತಲೆವಸ್ತ್ರವನ್ನು ಧರಿಸಿ ಹಾಜರಾಗುವುದಕ್ಕೆ ಯಾವ ಅಡ್ಡಿಯೂ ಇಲ್ಲ ಎಂಬ ಹೊಸ ಆದೇಶವನ್ನು ಹೊರಡಿಸಿದೆ. ಹಿಜಾಬ್ ಜೊತೆ ಜೊತೆಗೇ ಜನಿವಾರಕ್ಕೂ ಮಾನ್ಯತೆಯನ್ನು ನೀಡಿದ್ದೇವೆ ಎಂದು ಸರಕಾರ ಹೇಳಿಕೊಂಡಿದೆ. ‘‘ಸಾಂಪ್ರದಾಯಿಕ ಹಾಗೂ ಪದ್ಧತಿ ಆಧಾರಿತವಾದ ಸಂಕೇತಗಳನ್ನು ಧರಿಸುವಂತೆ ಯಾವುದೇ ವಿದ್ಯಾರ್ಥಿಯನ್ನು ಒತ್ತಾಯಿಸುವಂತಿಲ್ಲ. ಅದೇ ರೀತಿ ಸರಕಾರವು ಅನುಮತಿಸಿರುವ ಸೀಮಿತ ಸಾಂಪ್ರದಾಯಿಕ ಹಾಗೂ ಪದ್ಧತಿ ಸಂಕೇತಗಳನ್ನು ಬಲವಂತವಾಗಿ ತೆಗೆಯುವಂತೆಯೂ ಒತ್ತಾಯಿಸುವಂತಿಲ್ಲ. ಆದರೆ ಪರೀಕ್ಷಾ ಸಂದರ್ಭಗಳಲ್ಲಿ ರಾಷ್ಟ್ರ ಮತ್ತು ರಾಜ್ಯ ಮಟ್ಟದ ವಸ್ತ್ರ ಸಂಹಿತೆಯ ನಿಯಮಗಳನ್ನು ಸಂದರ್ಭೋಚಿತವಾಗಿ ಸಂಬಂಧಿಸಿದ ಪ್ರಾಧಿಕಾರಗಳು ಅಳವಡಿಸಿಕೊಳ್ಳಬೇಕು’’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಅಂದರೆ ಈ ಆದೇಶವು ದೈನಂದಿನ ಶಾಲಾ ಕಾಲೇಜುಗಳ ತರಗತಿಗಳನ್ನು ಗುರಿಯಾಗಿಟ್ಟು ಹೊರಡಿಸಲಾಗಿದೆ. ನೀಟ್ ಅಥವಾ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಯ ಸಂದರ್ಭದಲ್ಲಿ ಪರೀಕ್ಷಾ ಪ್ರಾಧಿಕಾರದ ಸೂಚನೆಗಳನ್ನು ಪಾಲಿಸಬೇಕಾಗುತ್ತದೆ. ರಾಜ್ಯ ಎಲ್ಲ ವರ್ಗ, ಜಾತಿ, ಸಮುದಾಯಗಳಿಗೆ ಶಿಕ್ಷಣ ತಲುಪುವಂತೆ ನೋಡಿಕೊಳ್ಳುವುದು ಸರಕಾರದ ಭಾಗವಾಗಿದ್ದು, ಅದರ ಭಾಗವಾಗಿ ಈ ಆದೇಶವನ್ನು ಹೊರಡಿಸಿದೆ. ಆದರೆ, ರಾಜಕಾರಣಿಗಳು, ಈ ಆದೇಶವನ್ನು ಈ ನಾಡಿನ ಮುಸ್ಲಿಮ್ ಮಹಿಳೆಯರಿಗೆ ನೀಡಿದ ಒಂದು ಸೌಲಭ್ಯ ಎಂದು ಬಿಂಬಿಸಲು ಪ್ರಯತ್ನಿಸುತಿರುವುದು ವಿಷಾದನೀಯವಾಗಿದೆ.
ಮಹಿಳೆಯರಿಗೆ ಶಿಕ್ಷಣವನ್ನು ನೀಡಿ ಅವರನ್ನು ಸಬಲರನ್ನಾಗಿ ಮಾಡುವುದಕ್ಕಾಗಿ ಸರಕಾರ ಈಗಾಗಲೇ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಾ ಬಂದಿದೆ. ಅವರನ್ನು ಮನೆಯಿಂದ ಶಾಲೆ, ಕಾಲೇಜುಗಳ ಮೆಟ್ಟಿಲು ಹತ್ತುವಂತೆ ಮಾಡಲು ಕೋಟ್ಯಂತರ ರೂಪಾಯಿಯನ್ನು ವ್ಯಯಿಸಿದೆ. ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರು ಪಡೆಯುವ ಶಿಕ್ಷಣ ಪ್ರಮುಖ ಪಾತ್ರವಹಿಸುತ್ತದೆಯಾದುದರಿಂದ ಶಾಲೆ, ಕಾಲೇಜುಗಳಿಗೆ ಮಹಿಳೆಯರನ್ನು ಹೆಚ್ಚು ಹೆಚ್ಚು ಆಕರ್ಷಿಸಲು ಬೇರೆ ಬೇರೆ ಯೋಜನೆಗಳನ್ನು, ಆಂದೋಲನಗಳನ್ನು ಹಮ್ಮಿಕೊಂಡು ಬಂದಿದೆ. ಆದರೆ 2022ರಲ್ಲಿ ಬಿಜೆಪಿ ಸರಕಾರ ‘ಸಮವಸ್ತ್ರ’ದ ಹೆಸರಿನಲ್ಲಿ ಹಿಜಾಬ್ ಅಥವಾ ತಲೆವಸ್ತ್ರ ಧರಿಸಿದ ವಿದ್ಯಾರ್ಥಿನಿಯರಿಗೆ ತರಗತಿಯೊಳಗೆ ಪ್ರವೇಶಿಸಲು ಅವಕಾಶವಿಲ್ಲ ಎನ್ನುವ ಆದೇಶವನ್ನು ಹೊರಡಿಸಿತು. ಆ ಆದೇಶಕ್ಕೆ ಶಾಲಾ ಸಮವಸ್ತ್ರದ ಕುರಿತಾಗಲಿ, ಶಿಕ್ಷಣದ ಕುರಿತಾಗಲಿ ಯಾವುದೇ ಕಾಳಜಿಯಿರಲಿಲ್ಲ. ಶಾಲಾ ಕಾಲೇಜುಗಳನ್ನು ಧರ್ಮದ ಹೆಸರಿನಲ್ಲಿ ವಿಭಜಿಸುವುದು ಮತ್ತು ಒಂದು ನಿರ್ದಿಷ್ಟ ಧರ್ಮದ ಮಹಿಳೆಯರನ್ನು ಶಿಕ್ಷಣದಿಂದ ಹೊರಗಿಡುವುದು ಅವರ ಗುರಿಯಾಗಿತ್ತು. ಅದಾಗಲೇ ಕೊರೋನ, ಲಾಕ್ಡೌನ್ ಕಾರಣದಿಂದ ಸಾವಿರಾರು ವಿದ್ಯಾರ್ಥಿನಿಯರು ಶಾಲೆಯನ್ನು ಅರ್ಧದಲ್ಲೇ ತೊರೆದಿದ್ದರು. ಅವರನ್ನು ಮರಳಿ ಶಾಲೆಗೆ ಸೇರಿಸುವ ಜವಾಬ್ದಾರಿಯಿಂದ ನುಣುಚಿಕೊಂಡ ಅಂದಿನ ಸರಕಾರ ಕಷ್ಟ ನಷ್ಟಗಳನ್ನು ಎದುರಿಸಿ ಶಾಲೆಗೆ ಬರುತ್ತಿರುವ ವಿದ್ಯಾರ್ಥಿನಿಯರನ್ನು ಸಮವಸ್ತ್ರದ ಹೆಸರಿನಲ್ಲಿ ಹೊರ ಹಾಕಲು ಮುಂದಾಯಿತು. ವಿದ್ಯಾರ್ಥಿನಿಯರನ್ನು ಶಾಲೆಗೆ ಸೇರಿಸಲು ರೂಪಿಸಿದ ನೂರಾರು ಯೋಜನೆಗಳ ಉದ್ದೇಶವನ್ನೇ ಈ ಮೂಲಕ ರಾಜ್ಯ ಸರಕಾರ ಮಣ್ಣು ಪಾಲು ಮಾಡಿತು. ಶಿಕ್ಷಣಕ್ಕೆ ಪೂರಕವಾಗಿ ಸಮವಸ್ತ್ರವಿದೆಯೇ ಹೊರತು, ಸಮವಸ್ತ್ರಕ್ಕಾಗಿ ಶಿಕ್ಷಣವಲ್ಲ. ಆದರೆ ಅಂದಿನ ಸರಕಾರ, ಸಮವಸ್ತ್ರ ಶಿಕ್ಷಣಕ್ಕಿಂತ ಮುಖ್ಯ ಎನ್ನುವ ವಿತಂಡ ಆದೇಶವನ್ನು ಹೊರಡಿಸಿತು. ಭಾರತದ ಸೇನೆಯಲ್ಲೂ ಸಮವಸ್ತ್ರವಿದೆ. ಆದರೆ ಅಲ್ಲಿ ಸಿಖ್ ಸೈನಿಕರಿಗೆ ತಲೆವಸ್ತ್ರ ಅಥವಾ ಪೇಟಾ ಧರಿಸಲು ಅವಕಾಶವಿದೆ. ಶಾಲೆ, ಕಾಲೇಜಿನಲ್ಲಿ ಸಮವಸ್ತ್ರ ಸೇನೆಗಿಂತಲೂ ಮುಖ್ಯವೇ ಎಂದು ಜನರು ಕೇಳುವಂತಾಯಿತು. ಇದೀಗ ರಾಜ್ಯ ಸರಕಾರ ಹೊಸದಾಗಿ ಹೊರಡಿಸಿರುವ ಆದೇಶ ಯಾವುದೋ ಒಂದು ನಿರ್ದಿಷ್ಟ ಸಮುದಾಯಕ್ಕೆ ನೀಡಿದ ಕೊಡುಗೆ ಖಂಡಿತ ಅಲ್ಲ. ತನ್ನದೇ ತಪ್ಪನ್ನು ಸರಕಾರ ತಿದ್ದಿಕೊಂಡಿದೆ. ಆದರೆ ಹಿಂದಿನ ಸರಕಾರದ ತಪ್ಪನ್ನು ತಿದ್ದಿ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯಲು ಸಿದ್ದರಾಮಯ್ಯ ನೇತೃತ್ವದ ಸರಕಾರ ಇಷ್ಟು ಸಮಯ ಯಾಕೆ ತೆಗೆದುಕೊಂಡಿತು ಎಂದು ಜನರು ಕೇಳುತ್ತಿದ್ದಾರೆ.
ಭಾರತದಲ್ಲಿ ಅರ್ಧದಲ್ಲೇ ಶಾಲೆ, ಕಾಲೇಜುಗಳನ್ನು ತೊರೆಯುವ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ಸಂಸತ್ತಿಗೆ ನೀಡಿದ ಅಂಕಿಅಂಶಗಳ ಪ್ರಕಾರ, 2019ರಿಂದ 2026ರವರೆಗೆ ದೇಶಾದ್ಯಂತ 65 ಲಕ್ಷ ವಿದ್ಯಾರ್ಥಿಗಳು ಶಾಲೆಯನ್ನು ಅರ್ಧದಲ್ಲೇ ತೊರೆದಿದ್ದಾರೆ. ಇವರಲ್ಲಿ 30 ಲಕ್ಷದಷ್ಟು ಹದಿ ಹರೆಯದ ಒಳಗಿರುವ ಹೆಣ್ಣು ಮಕ್ಕಳು ಸೇರಿದ್ದಾರೆ. ಪ್ರಾಥಮಿಕ ಹಂತದಲ್ಲಿ ಶೇ. 1.9ರಷ್ಟು ವಿದ್ಯಾರ್ಥಿನಿಯರು ಶಾಲೆಯನ್ನು ಅರ್ಧದಲ್ಲೇ ತೊರೆದರೆ, ಹಿರಿಯ ಪ್ರಾಥಮಿಕ ಹಂತದಲ್ಲಿ 5.2ರಷ್ಟು ವಿದ್ಯಾರ್ಥಿನಿಯರು ಶಾಲೆ ತೊರೆಯುತ್ತಿದ್ದಾರೆ. ಪ್ರೌಢಶಾಲೆಯಲ್ಲಿ ಶೇ. 14.1ರಷ್ಟು. ಉತ್ತರ ಪ್ರದೇಶದಲ್ಲಿ ಒಂದೇ ಶೈಕ್ಷಣಿಕ ವರ್ಷದಲ್ಲಿ ದಾಖಲಾದ ಸುಮಾರು ಒಂದು ಲಕ್ಷ ಡ್ರಾಪೌಟ್ ವಿದ್ಯಾರ್ಥಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹೆಣ್ಣು ಮಕ್ಕಳೇ ಆಗಿದ್ದಾರೆ. ಅರ್ಧದಲ್ಲೇ ಶಾಲೆ ತೊರೆಯುವ ವಿದ್ಯಾರ್ಥಿಗಳ ಸಂಖ್ಯೆ ಕರ್ನಾಟಕದಲ್ಲೂ ದೊಡ್ಡದಿದೆ. ಹಿರಿಯ ಪ್ರಾಥಮಿಕ ಹಂತದಲ್ಲಿ ಅಂದರೆ ಆರನೇ ತರಗತಿಯಿಂದ ಎಂಟನೇ ತರಗತಿಯವರೆಗಿನ ಹಂತದಲ್ಲಿ ಹೆಣ್ಣು ಮಕ್ಕಳ ಡ್ರಾಪೌಟ್ ದರ ಶೇ. 2.1ರಷ್ಟಿದೆ. ಪ್ರೌಢ ಶಾಲಾ ಹಂತದಲ್ಲಿ ಇದು ತೀವ್ರವಾಗಿ ಹೆಚ್ಚಿದ್ದು ಶೇ. 18.3ರಷ್ಟಿದೆ. ಬಿಜೆಪಿಯ ಅವಧಿಯಲ್ಲಿ ಇದು ಶೇ. 22. 09ರಷ್ಟಿತ್ತು. ರಾಜ್ಯದಲ್ಲಿ ಪ್ರಾಥಮಿಕ ಶಾಲೆಗೆ ದಾಖಲಾಗುವ ಪ್ರತಿ 100 ಹೆಣ್ಣು ಮಕ್ಕಳಲ್ಲಿ ಪ್ರೌಢ ಶಾಲಾ ಶಿಕ್ಷಣವನ್ನು ಯಾವುದೇ ಅಡೆತಡೆಯಿಲ್ಲದೆ ಯಶಸ್ವಿಯಾಗಿ ಪೂರ್ಣಗೊಳಿಸುತ್ತಿರುವವರು ಕೇವಲ 76.5 ಹೆಣ್ಣು ಮಕ್ಕಳು ಮಾತ್ರ. ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಡ್ರಾಪ್ಔಟ್ ದರ ಶೇ. 31.9ರಷ್ಟಿದ್ದು, ಇಡೀ ದೇಶದಲ್ಲೇ ಕರ್ನಾಟಕ ಡ್ರಾಪೌಟ್ನಲ್ಲಿ 5 ನೇ ಸ್ಥಾನದಲ್ಲಿದೆ. ಪರಿಶಿಷ್ಟ ವರ್ಗದ ಹಂತದಲ್ಲಿ ಇದು ಶೇ. 24.1ರಷ್ಟಿದೆ. ಬಿಜೆಪಿ ಸರಕಾರ ತರಗತಿಯಲ್ಲಿ ಹಿಜಾಬ್ ನಿಷೇಧ ಜಾರಿಗೊಳಿಸಿದಾಗ ಆ ಆದೇಶದ ಕಾರಣಕ್ಕೇ ಸುಮಾರು 145 ಮುಸ್ಲಿಮ್ ವಿದ್ಯಾರ್ಥಿನಿಯರು ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು. ಹಿಜಾಬ್ ಆದೇಶದಿಂದ ಸರಕಾರಿ ಶಾಲೆ, ಕಾಲೇಜುಗಳಿಗೆ ಹೋಗುತ್ತಿದ್ದ ವಿದ್ಯಾರ್ಥಿನಿಯರ ಮೇಲೆಯೇ ಹೆಚ್ಚು ಪರಿಣಾಮವಾಗಿತ್ತು. ಅವರು ಅನಿವಾರ್ಯವಾಗಿ ಸರಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳಿಗೆ ಸೇರ್ಪಡೆಯಾಗುವ ಸ್ಥಿತಿ ನಿರ್ಮಾಣವಾಯಿತು. ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಆಕರ್ಷಿಸಲು ಕ್ರಮ ತೆಗೆದುಕೊಳ್ಳಬೇಕಾದ ಸರಕಾರವೇ ಹೇಗೆ ವಿದ್ಯಾರ್ಥಿಗಳನ್ನು ಸರಕಾರಿ ಶಾಲೆ ಪ್ರವೇಶಿಸದಂತೆ ತಡೆಯಿತು ಎನ್ನುವುದಕ್ಕೆ ಇದು ಉದಾಹರಣೆಯಾಗಿದೆ.
ಹಿಜಾಬ್ಗೆ ಅನುಮತಿ ನೀಡುವ ಮೂಲಕ ಸರಕಾರ ತನ್ನ ತಪ್ಪನ್ನು ತಿದ್ದಿಕೊಂಡಿದೆಯೇ ಹೊರತು, ಇದು ಯಾವುದೇ ಸಮುದಾಯಕ್ಕೆ ಮಾಡಿದ ಉಪಕಾರವೂ ಅಲ್ಲ, ಉಡುಗೊರೆಯೂ ಅಲ್ಲ. ಸಂವಿಧಾನದ ಆಶಯಕ್ಕೆ ಧಕ್ಕೆ ತಂದ ಆದೇಶವನ್ನು ಹಿಂಪಡೆಯಲು ಸಿದ್ದರಾಮಯ್ಯ ನೇತೃತ್ವದ ಸರಕಾರಕ್ಕೆ ಮೂರು ವರ್ಷ ಬೇಕಾಯಿತು ಎನ್ನುವುದೇ ನಾಚಿಕೆಗೇಡಿನ ಸಂಗತಿಯಾಗಿದೆ. ಅದರ ಜೊತೆಜೊತೆಗೇ ಈ ನಾಡಿನ ಮುಸ್ಲಿಮರಿಗೆ ಮಾಡಿದ ಮಹದುಪಕಾರವೆಂದು ಇದನ್ನು ಬಿಂಬಿಸಿಕೊಳ್ಳುತ್ತಿರುವುದು ಇನ್ನೊಂದು ನಾಚಿಕೆಗೇಡಿನ ವಿಷಯವಾಗಿದೆ.






