Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಸಂಪಾದಕೀಯ
  4. ಕೋಗಿಲಿನ ನಿರ್ವಸಿತ ಕೋಗಿಲೆಗಳು!

ಕೋಗಿಲಿನ ನಿರ್ವಸಿತ ಕೋಗಿಲೆಗಳು!

ವಾರ್ತಾಭಾರತಿವಾರ್ತಾಭಾರತಿ1 Jan 2026 6:46 AM IST
share
ಕೋಗಿಲಿನ ನಿರ್ವಸಿತ ಕೋಗಿಲೆಗಳು!

ಕೋಗಿಲೆಗಳಿಗೆ ಮನೆಗಳಿಲ್ಲ ಎನ್ನುವುದಕ್ಕಿಂತ ಅವುಗಳಿಗೆ ಮನೆಗಳನ್ನು ಹೊಂದುವ ಹಕ್ಕಿಲ್ಲ ಎಂದು ನಮಗೆ ನಾವು ನಿಯಮಗಳನ್ನು ಮಾಡಿಟ್ಟಿದ್ದೇವೆ. ಅದರ ಪರಿಣಾಮವಾಗಿ ಕೋಗಿಲೆಗಳು ಅನಿವಾರ್ಯವಾಗಿ ಕಾಗೆಗಳ ಗೂಡನ್ನೇ ತನ್ನ ಮನೆಗಳೆಂದು ತಿಳಿದು ಮೊಟ್ಟೆ ಇಡುತ್ತವೆ. ಕಾಗೆಯ ಗೂಡಿನಲ್ಲಿ ಅನ್ಯರಂತೆ ಬದುಕುತ್ತಾ ಒಂದು ದಿನ ಅಲ್ಲಿಂದ ಹೊರದಬ್ಬಲ್ಪಡುತ್ತವೆ.ಬೆಂಗಳೂರು ಸಮೀಪದ ಕೋಗಿಲು ಬಳಿ ಒತ್ತುವರಿ ಮಾಡಿದ ಸ್ಥಳದಲ್ಲಿ ಹಲವು ವರ್ಷಗಳಿಂದ ಪುಟ್ಟ ಗುಡಿಸಲುಗಳನ್ನು ಕಟ್ಟಿಕೊಂಡು ಬದುಕು ನಡೆಸುತ್ತಿದ್ದ ನೂರಾರು ಕುಟುಂಬಗಳ ಸ್ಥಿತಿ ಇದಕ್ಕಿಂತ ಭಿನ್ನವೇನೂ ಇಲ್ಲ. ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಡಾವಣೆಯಲ್ಲಿ ೪೦೦ಕ್ಕೂ ಅಧಿಕ ಕುಟುಂಬಗಳ ಬದುಕುವ ಕನಸುಗಳನ್ನು ಬುಲ್ಡೋಜರ್‌ಗಳು ನೆಲಸಮಗೊಳಿಸಿವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸೇರಿದ ತ್ಯಾಜ್ಯ ವಿಲೇವಾರಿಗೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಿಸಿಕೊಂಡು ಇವರು ವಾಸ ಮಾಡುತ್ತಿದ್ದರು ಎನ್ನುವುದು ಸರಕಾರದ ಆರೋಪ. ಇದೀಗ ಸರಕಾರದ ಬುಲ್ಡೋಜರ್‌ಗಳು ತ್ಯಾಜ್ಯಗಳನ್ನು ಎತ್ತಿ ಹಾಕುವಂತೆ ನೂರಾರು ಮನೆಗಳನ್ನು ಎತ್ತಿ ಎಸೆದಿವೆ. ರಾಜ್ಯ ಸರಕಾರದ ಈ ಕೃತ್ಯವನ್ನು ಹಲವರು ಹಲವು ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ಒಂದು ಗುಂಪು ಸರಕಾರದ ಕ್ರಮವನ್ನು ಸಮರ್ಥಿಸುತ್ತಿದ್ದರೆ, ಇನ್ನೊಂದು ಗುಂಪು ಟೀಕಿಸುತ್ತಿದೆ. ಒಂದು ಗುಂಪು ಪ್ರತಿಭಟಿಸುತ್ತಿದ್ದರೆ ಮತ್ತೊಂದು ಗುಂಪು ಸ್ವಾಗತಿಸುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ನೆರೆಯ ಕೇರಳ ಸರಕಾರ ರಾಜ್ಯ ಸರಕಾರವನ್ನು ಖಂಡಿಸಿ ಹೇಳಿಕೆಯನ್ನು ನೀಡಿದೆ. ಸರಕಾರದ ಬುಲ್ಡೋಜರ್ ಕೃತ್ಯವನ್ನು ಉತ್ತರ ಪ್ರದೇಶದ ‘ಬುಲ್ಡೋಜರ್ ನ್ಯಾಯ’ಕ್ಕೆ ಹೋಲಿಸಿದೆ. ಇವುಗಳ ನಡುವೆಯೂ ಸಿದ್ದರಾಮಯ್ಯ ಸಮನ್ವಯ ರೀತಿಯ ಹೇಳಿಕೆಯೊಂದನ್ನು ನೀಡುವ ಪ್ರಯತ್ನ ಮಾಡಿದ್ದಾರೆ. ‘‘ಕೋಗಿಲು ಬಳಿ ಸರಕಾರಿ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಶೆಡ್‌ಗಳನ್ನು ನೋಟಿಸ್ ನೀಡಿ ನೆಲಸಮಗೊಳಿಸಲಾಗಿದೆ. ಆದರೆ ಮಾನವೀಯ ನೆಲೆಯಲ್ಲಿ ಈ ಪ್ರಕರಣಕ್ಕೆ ಮಾತ್ರ ಸೀಮಿತವಾಗಿ ಮನೆಗಳನ್ನು ಕಟ್ಟಿಕೊಡಲು ಸರಕಾರ ಮುಂದಾಗುತ್ತಿದೆ. ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಅನಧಿಕೃತ ನಿರ್ಮಾಣ ಆಗದಂತೆ ತಡೆಯಬೇಕು ಎನ್ನುವುದು ನಮ್ಮ ಉದ್ದೇಶ’’ ಎಂದಿದ್ದಾರೆ. ಅರ್ಹರಿಗೆ ಮನೆಗಳನ್ನು ನೀಡುವ ಭರವಸೆಯನ್ನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದ್ದಾರೆ.

ಕೋಗಿಲು ನಿರ್ವಸಿತರ ಕುರಿತಂತೆ ನೆರೆಯ ಕೇರಳದ ಮುಖ್ಯಮಂತ್ರಿಯ ಆಕ್ರೋಶ, ಕಳವಳ ರಾಜಕೀಯ ಪ್ರೇರಿತವಾದುದು ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರ ಮಾತು ಸಂತ್ರಸ್ತರ ಹಣೆಗೆ ಅನಗತ್ಯವಾಗಿ ಪ್ರಾದೇಶಿಕ ಭೇದಗಳನ್ನು, ಧರ್ಮದ ಮುದ್ರೆಗಳನ್ನು ಒತ್ತಿ ಬಿಟ್ಟಿತು. ಮನೆ ಕಳೆದುಕೊಂಡು ಬೀದಿಗೆ ಬಿದ್ದವರೆಲ್ಲರೂ ಕಾರ್ಮಿಕರು, ಶೋಷಿತರೇ ಹೊರತು ಒಂದು ನಿರ್ದಿಷ್ಟ ಸಮುದಾಯಕ್ಕೆ ಸೇರಿದವರಲ್ಲ. ಅಲ್ಲಿ ಬಹುಸಂಖ್ಯಾತರು ಮುಸ್ಲಿಮರಿದ್ದರೂ ದಲಿತರು, ಇನ್ನಿತರ ಶೋಷಿತ ಜಾತಿಗಳಿಗೆ ಸೇರಿದ ಕಾರ್ಮಿಕರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಆದರೆ ಕೇರಳದ ಮುಖ್ಯಮಂತ್ರಿಯ ಹೇಳಿಕೆಯು, ಮುಸ್ಲಿಮರ ವಿರುದ್ಧ ರಾಜ್ಯ ಸರಕಾರ ನಡೆಸಿದ ದೌರ್ಜನ್ಯ ಎಂದು ಅರ್ಥಕೊಡುತ್ತಿತ್ತು. ಕೇರಳದಲ್ಲಿ ಮುಸ್ಲಿಮ್ ಮತದಾರರು ತಮ್ಮಿಂದ ನಿಧಾನಕ್ಕೆ ದೂರ ಸರಿಯುತ್ತಿರುವುದು ಇತ್ತೀಚಿನ ಸ್ಥಳೀಯ ಚುನಾವಣೆಯಲ್ಲಿ ಮನವರಿಕೆಯಾಗಿರುವುದರಿಂದ, ಪಿಣರಾಯಿ ಅವರಿಗೆ ಕರ್ನಾಟಕದ ಅಲ್ಪಸಂಖ್ಯಾತರ ಬಗ್ಗೆ ಏಕಾಏಕಿ ಕಾಳಜಿ ಸೃಷ್ಟಿಯಾಗಿದೆ. ಆದರೆ ಪಿಣರಾಯಿ ಹೇಳಿಕೆಯಿಂದಾಗಿ ಪ್ರಕರಣ ರಾಷ್ಟ್ರಮಟ್ಟದಲ್ಲಿ ಚರ್ಚೆಗೊಳಗಾಯಿತು. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಘಟನೆಗೆ ಪ್ರತ್ರಿಕ್ರಿಯಿಸುವುದು ಅನಿವಾರ್ಯವಾಯಿತು. ಯಾವಾಗ ರಾಜ್ಯ ಸರಕಾರ ಅರ್ಹರಿಗೆ ಮನೆ ಕಟ್ಟಿಸಿಕೊಡುವ ಭರವಸೆ ನೀಡಿತೋ ಅಲ್ಲಿಂದ, ಬಿಜೆಪಿಗೆ ನಿರ್ವಸಿತರಲ್ಲಿ ‘ಬಾಂಗ್ಲಾ ನಿವಾಸಿಗಳು’ ‘ನುಸುಳುಕೋರರು’ ‘ಪಾಕಿಸ್ತಾನಿಗಳು’ ಕಾಣಿಸಿಕೊಳ್ಳತೊಡಗಿದರು. ಕೆಲವು ಭಾಷಾಭಿಮಾನಿಗಳು ‘‘ಕರ್ನಾಟಕದ ನೆಲದಲ್ಲಿ ಕನ್ನಡಿಗರಿಗೇ ಸೂರಿಲ್ಲ, ಈ ವಲಸೆ ಕಾರ್ಮಿಕರಿಗೆ ಸರಕಾರ ಖರ್ಚಿನಲ್ಲಿ ಮನೆನೀಡುವುದು ಎಷ್ಟು ಸರಿ?’’ ಎಂದು ಕೇಳುತ್ತಿದ್ದಾರೆ.

ಮುಖ್ಯವಾಗಿ ಈ ಸರಕಾರಿ ಭೂಮಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡವರು ಏಕಾಏಕಿ ಆಕಾಶದಿಂದ ಉದುರಿ ಬಿದ್ದವರಲ್ಲ. ಬೇರೆ ಬೇರೆ ರಾಜ್ಯಗಳಿಂದ ಬಂದ ವಲಸೆ ಕಾರ್ಮಿಕರು ಇವರು. ಬಹಳಷ್ಟು ಕಾರ್ಮಿಕರನ್ನು ಸ್ಥಳೀಯರು ಬೇರೆ ಬೇರೆ ಕಾಮಗಾರಿ ಕೆಲಸಗಳಿಗಾಗಿ ಕರೆಸಿಕೊಂಡಿದ್ದಾರೆ. ಬೆಂಗಳೂರು ನಗರ ತನ್ನ ಹತ್ತು ಹಲವು ತಳಸ್ತರದ ಕೆಲಸಗಳಿಗೆ ಇವರನ್ನು ಬಳಸಿಕೊಂಡಿದೆ. ತಾವು ತ್ಯಾಜ್ಯ ವಿಲೇವಾರಿ ಜಾಗದಲ್ಲಿ ಶೆಡ್ಡು ಕಟ್ಟಿ ಬದುಕುತ್ತಿದ್ದರೂ, ತಮಗೆ ಆಶ್ರಯ ನೀಡಿದ ಬೆಂಗಳೂರು ನಗರದ ತ್ಯಾಜ್ಯಗಳನ್ನು ತಮ್ಮ ಕೈಯಿಂದ ಬಾಚಿದ್ದಾರೆ. ಕಾಮಗಾರಿಗಳಲ್ಲಿ ತಮ್ಮ ಬೆವರು, ರಕ್ತವನ್ನು ಸುರಿಸಿದ್ದಾರೆ. ರಸ್ತೆ ಗುಡಿಸಿದ್ದಾರೆ. ಬೆಂಗಳೂರು ನಗರವನ್ನು ಕ್ಷೇಮವಾಗಿಡಲು ತಮ್ಮ ಮಿತಿಯಲ್ಲಿ ಈ ಕಾರ್ಮಿಕರು ದುಡಿಯುತ್ತಿದ್ದಾರೆ. ಏಕಾಏಕಿ ಅವರ ಮನೆಗಳಿಗೆ ಬುಲ್ಡೋಜರ್‌ಗಳನ್ನು ಹರಿಸುವಾಗ ಈ ಕುರಿತ ಸಣ್ಣ ಕೃತಜ್ಞತೆ ಸರಕಾರಕ್ಕೂ ಇರಬೇಕಾಗುತ್ತದೆ. ಮರದಿಂದ ಮರಕ್ಕೆ ಹಾರುತ್ತಾ ಕೋಗಿಲೆ ಹಾಡುವಾಗ ‘ಆಹಾ’ ಎಂದು ಆಸ್ವಾದಿಸುವ ನಾವು, ಅದು ವಾಸಿಸುವುದಕ್ಕೆ ಗೂಡೊಂದನ್ನು ಬಯಸಿದಾಗ ಅದನ್ನು ನಿಂದಿಸಿ ಅವಮಾನಿಸುವುದು ಎಷ್ಟು ಸರಿ? ಈ ವಲಸೆ ಕಾರ್ಮಿಕರೂ ಕೂಡ ಒಂದು ರೀತಿಯಲ್ಲಿ ನಿರ್ವಸಿತ ಕೋಗಿಲೆಗಳೇ ಆಗಿದ್ದಾರೆ. ಇನ್ನೂ ಒಂದು ಮುಖ್ಯ ಅಂಶವಿದೆ. ಈ ವಲಸೆ ಕಾರ್ಮಿಕರು ನೇರವಾಗಿ ಬಂದು ಕೋಗಿಲಿನಲ್ಲಿ ಶೆಡ್ಡು ಕಟ್ಟಿಕೊಂಡಿಲ್ಲ. ಅವರಿಂದ ಸುಮಾರು ೨ ಲಕ್ಷ ರೂಪಾಯಿಯನ್ನು ವಸೂಲಿ ಮಾಡಿ ಗುಡಿಸಲುಗಳನ್ನು ಕಟ್ಟಿಕೊಳ್ಳಲು ಕೆಲವು ಪುಢಾರಿಗಳು ಮತ್ತು ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದರು. ಅಷ್ಟೇ ಅಲ್ಲ, ಮಾಸಿಕವಾಗಿ ಅವರಿಂದ ನೆಲಬಾಡಿಗೆಗಳನ್ನೂ ವಸೂಲಿ ಮಾಡುತ್ತಿದ್ದರು. ಹಕ್ಕು ಪತ್ರಗಳನ್ನು ಶೀಘ್ರದಲ್ಲೇ ಕೊಡುತ್ತೇವೆ ಎಂದು ಆಶ್ವಾಸನೆಗಳನ್ನೂ ನೀಡುತ್ತಾ ಬಂದಿದ್ದರು. ಬುಲ್ಡೋಜರ್‌ಗಳು ನಿಜಕ್ಕೂ ಸರಕಾರಕ್ಕೆ ಅನಿವಾರ್ಯವಾಗಿದ್ದರೆ ಆ ವಲಸೆ ಕಾರ್ಮಿಕರನ್ನು ಅಲ್ಲಿಗೆ ಕರೆತಂದವರನ್ನು, ಅವರಿಂದ ಅನಧಿಕೃತವಾಗಿ ದುಡ್ಡು ಪಡೆದು ಶೆಡ್ ಕಟ್ಟಲು ಅವಕಾಶ ನೀಡಿದವರನ್ನು, ಅವರಿಂದ ನೆಲಬಾಡಿಗೆ ಪಡೆಯುತ್ತಿದ್ದ ಸ್ಥಳೀಯ ಮಾಫಿಯಾಗಳ ಮೇಲೆ ಅವುಗಳನ್ನು ಬಳಸಬೇಕಾಗುತ್ತದೆ. ಈ ಹಿಂದೆ ಗೋವಾದಲ್ಲಿ ಬೈನಾ ಬೀಚಿನಲ್ಲಿ ಬಡ ಕನ್ನಡಿಗರು ಕಟ್ಟಿಕೊಂಡಿದ್ದ ಗುಡಿಸಲುಗಳನ್ನು ಅಲ್ಲಿನ ಸರಕಾರ ಧ್ವಂಸ ಮಾಡಿದಾಗ ಕನ್ನಡಿಗರಾದ ನಾವೆಲ್ಲರೂ ಒಂದಾಗಿ ಅದನ್ನು ಖಂಡಿಸಿದ್ದೇವೆ. ಗೋವಾದಲ್ಲಿ ಕನ್ನಡಿಗ ಕಾರ್ಮಿಕರ ಮೇಲೆ ನಡೆಯುತ್ತಿದ್ದ ದೌರ್ಜನ್ಯಗಳ ವಿರುದ್ಧ ಧ್ವನಿಯೆತ್ತಿದ್ದೇವೆ. ಹೀಗಿರುವಾಗ, ನಾವು ಬೇರೆ ಭಾಷಿಗರು ಎಂದು ವಲಸೆ ಕಾರ್ಮಿಕರ ಮೇಲೆ ನಮ್ಮದೇ ನಾಡಿನಲ್ಲಿ ದೌರ್ಜನ್ಯವೆಸಗಿದರೆ ಅದು ಸರಿಯೆ? ಈ ವಲಸೆ ಕಾರ್ಮಿಕರ ಕುಟುಂಬಗಳಲ್ಲಿರುವ ೩೦೦ಕ್ಕೂ ಅಧಿಕ ಮಕ್ಕಳು ಶಾಲೆ, ಕಾಲೇಜುಗಳಿಗೆ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕೊರೆಯುವ ಚಳಿಗೆ ಬೀದಿಗೆ ಬಿದ್ದಿರುವ ಈ ಮಕ್ಕಳ ಭವಿಷ್ಯ ಏನಾಗಬಹುದು? ಇವರು ಎಲ್ಲಿಗೆ ಹೋಗಬೇಕು? ಈ ಮಕ್ಕಳನ್ನು ನಗರದಲ್ಲಿರುವ ಕ್ರಿಮಿನಲ್‌ಗಳು ದುಷ್ಕೃತ್ಯಗಳಿಗೆ ಬಳಕೆ ಮಾಡುವ ಸಾಧ್ಯತೆಗಳೇ ಹೆಚ್ಚು. ಹೀಗೆ ಅರಳಬೇಕಾದ ಹೂಗಳನ್ನು ಬಾಡಿಸಿ, ಅವರನ್ನು ದುಷ್ಕರ್ಮಿಗಳ ಕೈಗೆ ಒಪ್ಪಿಸಿದ ಪಾಪದಲ್ಲಿ ಸ್ವತಃ ಸರಕಾರವೇ ಭಾಗಿಯಾದಂತಾಗುವುದಿಲ್ಲವೆ?

ಬೆಂಗಳೂರಿನಲಿ ಸರಕಾರಿ ಭೂಮಿಯಲ್ಲಿ ಅದೆಷ್ಟು ಬೃಹತ್ ಕಟ್ಟಡಗಳನ್ನು ಅತಿಕ್ರಮವಾಗಿ ಕಟ್ಟಲಾಗಿಲ್ಲ? ಅವೆಲ್ಲವನ್ನೂ ಸರಕಾರ ಏಕಾಏಕಿ ಬುಲ್ಡೋಜರ್‌ಗಳಿಂದ ಧ್ವಂಸ ಮಾಡಿದರೆ ಅದನ್ನು ನಗರ ಒಪ್ಪುತ್ತದೆಯೆ? ಅದಕ್ಕೆ ರಾಜಕಾರಣಿಗಳು ಸಿದ್ಧರಿದ್ದಾರೆಯೆ? ಕೋಗಿಲೆಗಳಿಗೆ ಗೂಡಿನ ಅಗತ್ಯವಿರುವಂತೆ, ವಲಸೆ ಕಾರ್ಮಿಕರಿಗೂ ಮನೆಗಳನ್ನು ಕಟ್ಟಿಕೊಳ್ಳುವ ಹಕ್ಕುಗಳಿವೆ. ತಮ್ಮ ಊರಿನ ಬೇರುಗಳನ್ನು ಕತ್ತರಿಸಿಕೊಂಡು ಬೆಂಗಳೂರಿನಂತಹ ಶಹರಗಳಿಗೆ ಬದುಕು ಅರಸಿಕೊಂಡು ಬರುವ ಇಂತಹ ಕಾರ್ಮಿಕರು ನಾವು ಬಳಸಿ ಎಸೆಯುವ ವಸ್ತುಗಳಲ್ಲ. ಇವರು ನಗರದ ತ್ಯಾಜ್ಯವೂ ಅಲ್ಲ. ಇವರು ಭಾರತೀಯರೇ ಆಗಿದ್ದರೆ, ಅದಕ್ಕೆ ಸಂಬಂಧಿಸಿ ಇವರಲ್ಲಿ ಕನಿಷ್ಠ ದಾಖಲೆಗಳು ಇದೆಯೆಂದಾದರೆ, ಸರಕಾರ ಇವರಿಗೆ ಪರ್ಯಾಯ ಮನೆಗಳ ವ್ಯವಸ್ಥೆ ಮಾಡಿಕೊಡಬೇಕು. ಈ ವಲಸೆ ಕಾರ್ಮಿಕರು ಯಾವ ಭಾಷೆಯನ್ನೇ ಆಡಲಿ, ನಿಧಾನಕ್ಕೆ ಇವರು ಕನ್ನಡದ ಹಾಲಿನಲ್ಲಿ ಸಕ್ಕರೆಯಂತೆ ಕರಗಿ ಬಿಡಲಿ. ಅದಕ್ಕೆ ಬೇಕಾದ ಕನ್ನಡ ಕಲಿಸುವ ಕೆಲಸದ ನೇತೃತ್ವವನ್ನೂ ಸರಕಾರವೇ ವಹಿಸಿಕೊಳ್ಳಲಿ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X